ಸ್ವಾಮಿ ಲಕ್ಷ್ಮಣ ಪ್ರಸಾದ್
ಇಂದು ಯಾವ ಮಹಾನ್ ವ್ಯಕ್ತಿತ್ವವನ್ನು ವರ್ತಮಾನ ಭಾರತದ ಮುಂದೆ ಇಡಬಹುದು? ನನ್ನ ಅಭಿಪ್ರಾಯದಂತೆ ಸೂಕ್ತವಾದುದು ಹಝ್ರತ್ ಮುಹಮ್ಮದ್‍ರದ್ದಾಗಿದೆ(ಸ). ಇಂದಿನ ಭಾರತದಲ್ಲಿ ಮತ್ತು ಅಜ್ಞಾನ ಕಾಲದ ಅರೇಬಿಯಾದಲ್ಲಿ ಎಷ್ಟು ನಾಗರಿಕತೆಗಳಿದ್ದವೆಂಬುದನ್ನು ಭಾರತೀಯ ಸಮಾಜದ ಜೀವನ ಶೈಲಿಯಿಂದ ಅಂದಾಜಿಸಬಹುದು. ಅಂದರೆ ಪ್ರಚಲಿತ ಭಾರತದಲ್ಲಿ ನೈತಿಕತೆ ಮತ್ತು ಶಿಷ್ಟಾಚಾರದ ಮೌಲ್ಯಗಳನ್ನು ಯಾವ ಸ್ವಾರ್ಥ ಮತ್ತು ಹಣದ ವ್ಯಾಮೋಹದ ಬಲಿಪೀಠಕ್ಕೆ ಬಲಿ ನೀಡಲಾಗುತ್ತಿದೆಯೋ ಇವೆಲ್ಲವೂ ಅಲ್ಲಿ ನೆಲೆಸಿದ್ದವು. ಬಹಿರಂಗವಾಗಿ ಶರಾಬು ಕುಡಿಯುವುದು ಆಧುನಿಕ ನಾಗರಿಕತೆಯಲ್ಲಿ ಒಂದು ಮನೋರಂಜನೆಯ ಅವಿಭಾಜ್ಯ ವಿಷಯವಾಗಿದೆಯಲ್ಲವೆ? ಅಶ್ಲೀಲತೆ, ನಗ್ನತೆ ಜನರ ನಡುವೆ ಸಾಮಾನ್ಯವಾಗಿದೆಯಲ್ಲವೇ?
ಅಂದು ರಕ್ತಪಿಪಾಸು ಎಂಬ ಸಂಕೋಲೆಯಿಂದ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ರಕ್ತಕ್ಕೆ ಹಸಿದಿದ್ದ. ಇಂದು ತೋರಿಕೆಯ ಪ್ರೇಮದ ಮತ್ತು ಸುಂದರ ಶಬ್ದಗಳ ಸಿಹಿಯಾದ ಬಲೆಯಲ್ಲಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಚೂರಿ ಹಾಕಲು ಪ್ರಯತ್ನಿಸುತ್ತಿದ್ದಾನೆ. ಅಂದು ದುಷ್ಕರ್ಮ ಮತ್ತು ಪಾಪಗಳ ಹೆಸರಿಂದ ಮುಖಕ್ಕೆ ಮಸಿ ಬಳಿಯಲಾಗುತ್ತಿತ್ತು. ಇಂದು ಸಜ್ಜನಿಕೆ, ಧಾರ್ಮಿಕತೆಯ ಹೆಸರಿನಿಂದ ಮರ್ಯಾದೆಯ ಲೂಟಿ ನಡೆಯುತ್ತಿದೆ. ಅಂದು ವಿಗ್ರಹಾರಾಧನೆ ಪರಾಕಾಷ್ಠೆಗೆ ತಲುಪಿತ್ತು. ಇಂದು ವಿಗ್ರಹಾರಾಧನೆಯೊಂದಿಗೆ ಆತ್ಮಾರಾಧಾನೆಯದ್ದೂ ಹೆಚ್ಚಳವಾಗುತ್ತಿದೆ. ಅಂದು ವಿಗ್ರಹದ ಹೆಸರಲ್ಲಿ ಅರ್ಚಕರು ಸಂಪಾದನೆ ನಡೆಸುತ್ತಿದ್ದರೆ ಇಂದು ದೇವನು, ಧರ್ಮ, ಸಂಘಟನೆ, ಕೂಟಗಳ ಹೆಸರಲ್ಲಿ ಚಾಲಾಕಿ ವ್ಯಕ್ತಿಗಳು ಔದ್ಯೋಗಿಕ ವ್ಯಾಪಾರ ನಡೆಸುತ್ತಿದ್ದಾರೆ.
ಇಂದಿನಿಂದ 1400 ವರ್ಷ ಹಿಂದೆ ಅರೇಬಿಯದ ಆಕಾಶದಲ್ಲಿ ಅಂಧಕಾರವು ಹರಡಿಕೊಂಡಿತ್ತು. ಆದರೆ ಯಸ್ರಿಬ್‍ನ ಚಂದ್ರ ಅದರ ಕ್ಷಿತಿಜದಲ್ಲಿ ಹಝ್ರತ್ ಮುಹಮ್ಮದ್(ಸ) ಉದಯಿಸಿತು. ಅದು ತನ್ನ ಕಿರಣಗಳಿಂದ ಸಂಪೂರ್ಣ ಅರೇಬಿಯ ಕ್ಷೇತ್ರವನ್ನು ಪ್ರಕಾಶಿತಗೊಳಿಸಿತು.
ನಂಬಿಕೆ, ವಿಶ್ವಾಸ, ಪೂಜೆ, ಅರ್ಚನೆ, ನೈತಿಕತೆ, ಸಾಮಾಜಿಕತೆ ಸಂಪೂರ್ಣವಾಗಿ ಮೇಳೈಸಿದ್ದ ಹಝ್ರತ್ ಮುಹಮ್ಮದ್‍ರ(ಸ) ಆಗಮನಕ್ಕಿಂತ ಮುಂಚೆ ಜಗತ್ತಿನಲ್ಲಿ ಎಲ್ಲಿಯೂ ನಿಜವಾಗಿ ಯಾವುದೇ ಆಶಾಕಿರಣ ಗೋಚರಿಸಿರಲಿಲ್ಲ.
ಮಾನವರ ಪುನರ್ಜೀವನವಾಯಿತು:
ವಿಶ್ವವ್ಯಾಪಿ ಪಥಭ್ರಷ್ಟತೆ ಮತ್ತು ಭಯಾನಕ ಅಂಧಕಾರದಲ್ಲಿ ಎಲ್ಲಿಯೂ ನಾಗರಿಕತೆ ಮತ್ತು ಸಂಸ್ಕ್ರತಿಯ ಕಿರಣಗಳು ಗೋಚರಿಸುತ್ತಿರಲಿಲ್ಲ. ಅಂದು ಸಜ್ಜನಿಕೆ ನಾಮಾವಶೇಷವಾಗಿದ್ದವು. ಅಂದು ಪ್ರಾಕೃತಿಕ ಚೆಲುವು ಮತ್ತು ಆತ್ಮದ ಸೌಂದರ್ಯವು ಸತ್ಯನಿಷೇಧಿ ಹಾಗೂ ಮಿಥ್ಯ ಸಂಪ್ರದಾಯಗಳ ನಡುವೆ ಮರೆಯಾಗಿತ್ತು. ಅಂದು ಸತ್ಯನಿಷೇಧಿ ಮತ್ತು ದುಷ್ಕರ್ಮಿ ಹಾಗೂ ಅಕ್ರಮ ರಿವಾಜಿನ ರಕ್ತ ಪಿಪಾಸು ದೇವತೆ ಇಡೀ ಜಗತ್ತಿನಲ್ಲಿ ವಿಷದ ಸರ್ಪದಂತೆ ಠಳಾಯಿಸಿತ್ತು. ಮಾನವರು ದೇವನ ಮಹಾತ್ಮೆ ಮತ್ತು ಮಹತ್ವವನ್ನು ಮರೆತಿದ್ದರು. ಈ ವಿಷಕಾರಿ ದೇವತೆಯ ದಾಸರಾಗಿ ತಮ್ಮ ಕೊರಳಿಗೆ ದುಷ್ಕರ್ಮ ಮತ್ತು ವಿಗ್ರಹಾರಾಧನೆ ಎಂಬ ಶಾಪಗ್ರಸ್ತ ಸಂಕಲೆ ಧರಿಸಿದ್ದರು. ಒಂದು ಸಲ ಮಾನವೀಯತೆ ಸತ್ತು ಮತ್ತೆ ಜೀವಂತಗೊಂಡಿತು.
ಏಶಿಯಾ ಮಹಾದ್ವೀಪದ ನೈಋತ್ಯ ಭಾಗದಲ್ಲಿ ದೊಡ್ಡದಾಗಿರುವ ಒಂದು ಕೊಲ್ಲಿಯಿದೆ. ಅದು ಅರೇಬಿಯಾದ ಹೆಸರಿಂದ ಪ್ರಸಿದ್ಧವಾಗಿದೆ. ಈ ಅಜ್ಞಾನ ಮತ್ತು ಪಥಭ್ರಷ್ಟತೆಯ ಕೇಂದ್ರದ ಪರ್ವತದ ತಪ್ಪಲಲ್ಲಿ ಪ್ರಕಾಶವೊಂದು ಹೊಳೆಯಿತು. ಅದು ಜಗತ್ತಿನ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಬದಲಿಸಿತು. ಜಗದ ಮೂಲೆಮೂಲೆಯನ್ನೂ ಸನ್ಮಾರ್ಗದ ಪ್ರಕಾಶದಿಂದ ಬೆಳಗಿಸಿತು.
ಇಂದಿನಿಂದ 1400 ವರ್ಷಗಳ ಹಿಂದೆ ಆ ದೇಶದ ಮಕ್ಕಾ ಪಟ್ಟಣದ ಗಲ್ಲಿಯಿಂದ ಎದ್ದ ಒಂದು ಧ್ವನಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿತು. ಆ ಧ್ವನಿ ಮಾರ್ಗದರ್ಶನದ ಮೂಲವಾಗಿತ್ತು. ಅದು ಮುರಿದ ಮನಸ್ಸುಗಳನ್ನು ಬೆಸೆಯಿತು. ಆ ಮರುಭೂಮಿಯಲ್ಲಿ ಅಂಧಕಾರ, ಅಂಧಾನುಕರಣೆಯಲ್ಲಿ ಮುಳುಗಿದ್ದ ಜನರ ಮನ ಮಸ್ತಿಷ್ಕವನ್ನು ಸುವಾಸನೆ ಭರಿತಗೊಳಿಸಿತು.
ಪ್ರಥಮ ಸಂದೇಶ (ವಹ್ಯ್)
ಹಝ್ರತ್ ಮುಹಮ್ಮದ್‍ರಿಗೆ(ಸ) ನಲ್ವತ್ತು ವರ್ಷ ಪ್ರಾಯವಾದಾಗ ಆರಾಧನೆ, ಸಾಧನೆಗಳಿಂದ ದೇವ ಪ್ರಭೆಯ (ದಿವ್ಯಜ್ಞಾನದ) ಗ್ರಹಣಕ್ಕಾಗಿ ಸಿದ್ಧರಾದರು. ಅಂಥ ಒಂದು ಶುಭ ಕ್ಷಣದಲ್ಲಿ ಒಂದು ಕಿರಣ ಹಿರಾ ಗುಹೆಯ ಕತ್ತಲಿನಲ್ಲಿ ಪ್ರಕಾಶಿಸಿತು. ಅದರಿಂದಾಗಿ ಆ ಚಿಕ್ಕ ಗುಹೆ ಬೆಳಗಿತು. ಪ್ರವಾದಿಯವರು(ಸ) ಕಣ್ಣು ಈ ಪ್ರಕಾಶಕ್ಕೆ ತೆರೆದಾಗ ಎದುರು ತೇಜಸ್ವಿಯಾದ ದೇವಚರ ಕಾಣಿಸಿಕೊಂಡರು. ದೇವನು ತನ್ನ ಉದ್ದೇಶಕ್ಕಾಗಿ ಮುಹಮ್ಮದ್‍ರನ್ನು(ಸ) ನಿಯುಕ್ತಿಗೊಳಿಸಿದ್ದಾನೆ ಮತ್ತು ನೀವು ಅಂತಿಮ ಪ್ರವಾದಿಯಾಗಿದ್ದೀರಿ, ತಾನು ದೇವಚರ ಜಿಬ್ರೀಲ್ ಆಗಿದ್ದು ದೇವ ಸಂದೇಶದೊಂದಿಗೆ ಹಾಜರಾಗಿದ್ದೇನೆ. ಓದಿರಿ ಪ್ರಭುವಿನ ನಾಮದಿಂದ. ಅವನು ಮಾನವನನ್ನು ರಕ್ತ ಪಿಂಡದಿಂದ ಸೃಷ್ಟಿಸಿದನು. ಓದಿರಿ, ನಿಮ್ಮ ಪ್ರಭು ಕರುಣಾನಿಧಿಯಾಗಿದ್ದಾನೆ. ಅವನು ಮಾನವನಿಗೆ ಲೇಖನಿಯ ಮೂಲಕ ವಿದ್ಯೆ ಕಲಿಸಿದನು. ಅವನು ಮಾನವನಿಗೆ ತಿಳಿಯದಿರುವ ವಿಷಯಗಳನ್ನು ಕಲಿಸಿದನು.
ಹಝ್ರತ್ ಮುಹಮ್ಮದ್‍ರು(ಸ) ಯಾವುದೇ ಶಾಲೆಯಲ್ಲಿ ಶಿಕ್ಷಣ ಪಡೆದವರಲ್ಲ ಮತ್ತು ಯಾವನೇ ಶಿರ್ಕ್‍ನಿಂದ ಯಾವುದನ್ನೂ ಕಲಿತವರಲ್ಲ. ಅವರಿಗೆ ಓದಲು, ಬರೆಯಲು ತಿಳಿದಿರಲಿಲ್ಲ. ಜಿಬ್ರೀಲ್‍ರೊಂದಿಗೆ(ಅ) ನಾನು ವಿದ್ಯೆ ಕಲಿತವನಲ್ಲ ಎಂದು ಅವರು(ಸ) ಸ್ಪಷ್ಟವಾಗಿ ಹೇಳಿದ್ದರು. ಜಿಬ್ರೀಲ್‍ರು(ಅ) ಅವರನ್ನು ಬಲವಾಗಿ ಆಲಂಗಿಸಿ ಈಗ ಓದಿರಿ ಎಂದಿದ್ದರು. ಆಗಲೂ ಅವರು(ಸ) ಮೊದಲಿನಂತೆ ಉತ್ತರಿಸಿದ್ದರು. ಮತ್ತೊಮ್ಮೆ ಜಿಬ್ರೀಲ್ ಆಲಿಂಗಿಸಿ ಹೇಳಿದರು, ಓದಿರಿ. ಆಗಲೂ ಅವರಿಂದ ಅದೇ ಉತ್ತರವಾಗಿತ್ತು. ಆ ಮೇಲೂ ಮತ್ತೊಮ್ಮೆ ಜಿಬ್ರೀಲ್‍ರು(ಅ) ಬಲವಾಗಿ ತಬ್ಬಿಕೊಂಡರು. ಆಗ ಜ್ಞಾನ ಪ್ರಾಪ್ತವಾಗಿ ಜಿಬ್ರೀಲ್‍ರ ಜೊತೆ ಸೇರಿ ಓದಿದರು.
ಆಗ ಹಝ್ರತ್ ಮುಹಮ್ಮದ್‍ರ(ಸ) ಹೃದಯ ದೇವ ಪ್ರಭೆಯನ್ನು ಸ್ವೀಕರಿಸಲು ಸಿದ್ಧವಾಗಿತ್ತು. ಆದಾಗ್ಯೂ ಅವರು(ಸ) ಮಾನವರೇ ಆಗಿದ್ದರು. ಅವರ ಹೃದಯ ಅಲ್ಲಾಹನ ಪ್ರತಾಪದಿಂದ ತುಂಬಿಕೊಂಡಿತ್ತು. ಅವರ ದೇಹವು ಕಂಪಿಸತೊಡಗಿತ್ತು. ನಡುಗುತ್ತಲೇ ಮನೆಗೆ ತಲುಪಿದರು. ಪತ್ನಿ ಖದೀಜರಲ್ಲಿ(ರ) ತನಗೆ ಕಂಬಳಿ ಹೊದಿಸಲು ಹೇಳಿದರು. ಕಂಪಿಸುತ್ತಿರುವ ಅವರನ್ನು ನೋಡಿ ಪತ್ನಿ ಗಾಬರಿಗೊಂಡರು. ಕೂಡಲೇ ಕಂಬಳಿ ಹೊದಿಸಿ ಕಾರಣವನ್ನು ವಿಚಾರಿಸಿದರು. ಆಗ ಅವರು ತನ್ನ ಮೇಲೆ ನಡೆದು ಹೋದ ಪೂರ್ಣ ಘಟನೆಯನ್ನು ಪತ್ನಿಗೆ ತಿಳಿಸಿದರು ಮತ್ತು ದೇವಪ್ರಭೆಯ ಭಯಭೀತಿಯಿಂದ ಅವರು ತನ್ನ ಜೀವ ಅಪಾಯದಲ್ಲಿದೆ ಎಂದು ಕೂಡಾ ಹೇಳಿದರು.
ಖದೀಜಾರ ತೃಪ್ತಿ ಸಾಂತ್ವನ
ಖದೀಜಾರು ಪ್ರವಾದಿ ಮುಹಮ್ಮದ್‍ರ(ಸ) ಪ್ರತಿಯೊಂದು ಮಾತುಗಳನ್ನು ಗಮನವಿಟ್ಟು ಆಲಿಸಿದರು. ಅನಂತರ ಹೇಳಿದರು, ‘ನೀವು ಹೆದರದಿರಿ. ನಿಮ್ಮ ದೇವನು ನಿಮ್ಮೊಂದಿಗಿರುವನು. ಅವನೇನು ಮಾಡಲಿರುವನೋ ಒಳ್ಳೆಯದನ್ನೇ ಮಾಡುವನು. ಯಾಕೆಂದರೆ ನೀವು ಅತಿಥಿಗಳನ್ನು ಸತ್ಕರಿಸುತ್ತೀರಿ. ಚಾರಿತ್ರ್ಯವಂತರಾಗಿರುವಿರಿ. ಅಮಾನತ್ತನ್ನು ಪಾಲಿಸುತ್ತೀರಿ. ಕಷ್ಟದಲ್ಲಿರುವವರಿಗೆ ನೆರವಾಗುತ್ತೀರಿ. ಅನಾಥರನ್ನು ಸಂರಕ್ಷಿಸುತ್ತೀರಿ. ಯಾತ್ರಿಕರಿಗೆ ಸಹಕರಿಸುತ್ತೀರಿ ಮತ್ತು ಜನರೊಂದಿಗೆ ಉತ್ತಮವಾಗಿ ವರ್ತಿಸುತ್ತೀರಿ.”
ಖದೀಜಾರ(ರ) ದೊಡ್ಡಪ್ಪನ ಪುತ್ರ ವರಕಾ ಬಿನ್ ನೌಫಲ್‍ರು ಹಿಬ್ರೂ ಭಾಷೆಯ ವಿದ್ವಾಂಸರಾಗಿದ್ದರು ಮತ್ತು ಅವರಿಗೆ ತೌರಾತ್ ಮತ್ತು ಇಂಜೀಲ್‍ನ ಜ್ಞಾನವಿತ್ತು. ಆದ್ದರಿಂದ ಖದೀಜಾರು(ರ) ಮುಹಮ್ಮದ್‍ರನ್ನು(ಸ) ವರಕಾರ ಬಳಿಗೆ ಕರೆದೊಯ್ದರು ಮತ್ತು ಸಂಪೂರ್ಣ ಘಟನಾವಳಿಗಳನ್ನು ವಿವರಿಸಿ ಅದರ ಆಶಯಗಳೇನೆಂದು ವಿಚಾರಿಸಿದರು. ವರಕಾ ಬಿನ್ ನೌಫಲ್‍ರ ಕಣ್ಣು ಎಲ್ಲ ವಿಷಯಗಳನ್ನು ತಿಳಿದು ತೆರೆಯಿತು. ಆಶ್ಚರ್ಯ ಮತ್ತು ಸಂತೋಷಾತಿರೇಕದಿಂದ ಮಾತು ಹೊರಬಂದವು.
“ಅಲ್ಲಾಹ್ ಪವಿತ್ರನು. ಪವಿತ್ರನು ಸರ್ವಗುಣ ಸಂಪನ್ನನಾದ ಒಡೆಯನಾಣೆ! ಅವನ ಹಿಡಿತದಲ್ಲಿ ನನ್ನ ಪ್ರಾಣವಿದೆ. ಓ ಖದೀಜಾ! ನೀನು ವಿವರಿಸಿದ ಮಾತುಗಳು ಸರಿಯಾದುದಾದರೆ ಮುಹಮ್ಮದ್‍ರ(ಸ) ಬಳಿ ಬಂದ ದೇವಚರ ಜಿಬ್ರೀಲ್ ಆಗಿದ್ದಾರೆ. ಅವರು ಮೂಸಾರ(ಅ) ಬಳಿಗೂ ಹಾಜರಾಗಿದ್ದರು ಮತ್ತು ಮುಹಮ್ಮದ್‍ರು(ಸ) ಈ ಸಮುದಾಯದ ಪ್ರವಾದಿಯಾಗಿದ್ದಾರೆ. ಈ ಮಾತು ಹೇಳಿಯಾದ ಮೇಲೆ ವರಕಾರ ನಾಲಗೆಯಿಂದ ಕೆಲವು ಮಾತುಗಳು ಹೊರಬಿದ್ದಿತ್ತು.
“ಓ ಖದೀಜಾ! ನೀನು ನನ್ನಲ್ಲಿ ಯಾವ ಮಾತು ಹೇಳುತ್ತಿರುವಿಯೋ ಅದು ಸತ್ಯವೆಂದಾದರೆ ಕೇಳು, ಅಹ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ. ಜಿಬ್ರೀಲ್ ಮತ್ತು ಮಿಕಾಯಿಲ್ ಇಬ್ಬರು ದೇವನ ಸಂದೇಶ ಹೊತ್ತುಕೊಂಡು ಅವರ(ಸ) ಮುಂದೆ ಪ್ರತ್ಯಕ್ಷಗೊಳ್ಳುವರು. ಯಾರು ಧರ್ಮದ ಗೌರವವನ್ನು ಗಳಿಸುವರೋ ಅವರು ಯಶಸ್ವಿಯಾಗುವರು. ತುಂಬು ನತದೃಷ್ಟ ಪಥಭ್ರಷ್ಟರು ಅವರ(ಸ) ಮೂಲಕ ಸಜ್ಜನರಾಗುವರು. ಜನರಲ್ಲಿ ಎರಡು ಪಂಗಡಗಳಾಗಲಿವೆ. ಕೆಲವರು ದೇವನ ಸ್ವರ್ಗ ಗಳಿಸುತ್ತಾರೆ ಮತ್ತು ಕೆಲವರು ನರಕದ ಸಂಕಟಗಳಲ್ಲಿ ಸಿಲುಕಿಕೊಳ್ಳುವರು.
ಖದೀಜಾರನ್ನು ಸಂತುಷ್ಟ ಪಡಿಸಿ ವರಕಾ ಬಿನ್ ನೌಫಲ್ ಮುಹಮ್ಮದ್‍ರತ್ತ(ಸ) ತಿರುಗಿ ಅವರನ್ನು ಅಭಿಸಂಬೋಧಿಸಿ ಹೇಳಿದರು,
‘ಇದು ಅದೇ ಮೂಸಾರ(ಅ) ಎದುರು ಹಾಜರಾದ ದೇವಚರರಾಗಿದ್ದಾರೆ. ಖಂಡಿತವಾಗಿ ನಾನು ಜೀವಿಸಿದ್ದರೆ ನಿಮ್ಮ ಸಮುದಾಯ ನಿಮ್ಮನ್ನು ನಿಮ್ಮ ಊರಿಂದ ಹೊರಹಾಕುವಾಗ ನಿಮಗೆ ಸಹಾಯ ನೀಡುತ್ತಿದ್ದೆ.’
ಕ್ರೈಸ್ತ ವಿದ್ವಾಂಸ ವರಕಾರ ಮಾತಿನ ಕೊನೆಯ ಭಾಗವನ್ನು ಅವರು(ಸ) ಬಹಳ ಆಶ್ಚರ್ಯದಿಂದ ಕೇಳಿಸಿಕೊಂಡು ವಿಚಾರಿಸಿದರು. ನನ್ನನ್ನು ನನ್ನ ಸಮುದಾಯ ಹೊರಹಾಕುವುದೇ? ವರಕಾ ಹೇಳಿದರು, ‘ಹೌದು, ಖಂಡಿತವಾಗಿ ನಿಮ್ಮ ಜನಾಂಗ ಹೊರದಬ್ಬಲಿದೆ. ನಿಮಗಿಂತ ಮುಂಚೆ ಇಂತಹ ಶಿಕ್ಷಣ (ಸತ್ಯಧರ್ಮ) ಯಾರೆಲ್ಲ ಈ ಜಗತ್ತಿನ ಮುಂದಿರಿಸಿರುವರೋ ಹಾಗೆಯೇ ನೀವು ಮಾಡುವವರಿದ್ದೀರಿ. ಅವರ ಜೊತೆಗೂ ಜನತೆ ಆ ರೀತಿ ನಡೆದುಕೊಂಡಿದೆ. ಒಂದು ವೇಳೆ ಆ ದಿವಸಗಳ ತನಕ ನನಗೆ ಬದುಕುವ ಅದೃಷ್ಟವಿದ್ದರೆ ನಿಮಗೆ ವಲಸೆ ಅನಿವಾರ್ಯಗೊಂಡರೆ ನಾನು ನೆರವು ನೀಡುವೆನು.
ತೌರಾತ್ ಮತ್ತು ಇಂಜೀಲ್‍ನ ವಿದ್ವಾಂಸ ನೌಫಲ್‍ರ ನಾಲಗೆಯಿಂದ ಪ್ರವಾದಿಯಾಗಿರುವ ಸಾಕ್ಷ್ಯವು ಕೇಳಿಸಿಕೊಂಡ ಮುಹಮ್ಮದ್‍ರು(ಸ) ತನ್ನ ಮನೆಗೆ ಹಿಂದಿರುಗಿದರು. ಎಲ್ಲರಿಗಿಂತ ಮುಂಚೆ ಖದೀಜಾರ ಸೌಭಾಗ್ಯವಂತ ಹೃದಯದಲ್ಲಿ ಇಸ್ಲಾಮಿನ ಅಮರ ಪ್ರಕಾಶ ಬಿಂಬವು ಮೂಡಿತು. ಅವರಿಗೆ ಅದಕ್ಕಿಂತ 15 ವರ್ಷ ಮುಂಚೆ ಪ್ರವಾದಿಯ(ಸ) ಜೊತೆ ವಿವಾಹವಾಗಿತ್ತು.
ಇಡೀ ಜಗತ್ತಿನಿಂದ ವ್ಯಕ್ತಿಯು ತನ್ನ ವಿಚಾರವನ್ನು ಅಡಗಿಸಲು ಸಾಧ್ಯವಿದೆ. ಆದರೆ ಪತ್ನಿಗೆ ವಂಚಿಸುವುದು ಅಸಾಧ್ಯ. ಪತ್ನಿಗಿಂತ ಹೆಚ್ಚು ಪತಿಯ ರಹಸ್ಯವನ್ನರಿಯುವರು ಇನ್ನಾರಿರುತ್ತಾರೆ? ಖದೀಜಾರು(ರ) ಮುಹಮ್ಮದ್‍ರ(ಸ) ಜೀವನದ ಎಲ್ಲ ಮಜಲುಗಳನ್ನು ಅರಿತಿದ್ದರು. ಆದ್ದರಿಂದ ಪತಿಯು(ಸ) ಇಸ್ಲಾಮಿನ ಕರೆ ನೀಡಿದಾಗ ನಿಸ್ಸಂಕೋಚವಾಗಿ ಸಂತೋಷದಿಂದ ಸ್ವೀಕರಿಸಿ ವಿಶ್ವಾಸಿಯಾದರು ಮತ್ತು ಹೇಳಿದರು, ಒಂದು ದೀರ್ಘ ಅವಧಿಯಿಂದ ಸತ್ಯವನ್ನು ಹುಡುಕಾಡುತ್ತಿದ್ದವರು ನಿರೀಕ್ಷಿಸುತ್ತಿದ್ದ ಆ ಪ್ರವಾದಿಯೇ ನೀವಾಗಿದ್ದೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಅವರು(ಸ) ಪತ್ನಿಗೆ ವಝೂ (ಅಂಗಶುದ್ಧಿ) ಮಾಡಲು ಕಲಿಸಿ ಎರಡು ರಕಅತ್ ನಮಾಝ್ ಮಾಡಿಸಿದರು. ಅಂದು ಮುಸ್ಲಿಮರಿಗೆ ಎರಡು ರಕಅತ್ ನಮಾಝ್ ಮಾತ್ರ ಕಡ್ಡಾಯವಿತ್ತು. ಬಳಿಕ ಅವರು(ಸ) ಮಿಅïರಾಜ್‍ನ (ಗಗನಾರೋಹಣ) ಮೇಲೆ 5 ಹೊತ್ತಿನ ನಮಾಝ್ ಕಡ್ಡಾಯವಾಯಿತು.
ಪ್ರವಾದಿಯವರು(ಸ) ಸತ್ಯದೆಡೆಗೆ ಆಹ್ವಾನಿಸಿದಾಗ ತಕ್ಷಣ ವಿಶ್ವಾಸ ಸ್ವೀಕರಿಸಿರುವುದು ಮತ್ತು ಹಳೆಯ ನಿರೀಕ್ಷೆ ಪೂರ್ತಿಗೊಂಡಾಗ ಸಂತೋಷಗೊಂಡುದು ಪ್ರವಾದಿತ್ವಕ್ಕಿಂತ ಮುಂಚಿನ ಮುಹಮ್ಮದ್‍ರ(ಸ) ಇಡೀ ಜೀವನ ಯಾವುದೇ ದ್ವಂದ್ವ ರಹಿತವಾಗಿತ್ತು ಎಂಬ ಸ್ಪಷ್ಟವಾದ ಪುರಾವೆಯಾಗಿದೆ.
ಜಗತ್ತು ಅವರಲ್ಲಿದ್ದ(ಸ) ಕರುಣಾಮಯಿ, ವಿಶ್ವಸ್ಥ, ಸಚ್ಚರಿತ ಮುಂತಾದ ಗುಣಗಳನ್ನು ನೋಡಿ ‘ಅವಿೂನ್’, ‘ಸಾದಿಕ್’ ಎಂದು ಕರೆಯುತ್ತಿತ್ತು. ಖದೀಜಾರು(ರ) ಅವರೊಂದಿಗೆ(ಸ) ಪ್ರವಾದಿತ್ವಕ್ಕಿಂತ ಮುಂಚೆ ಕಳೆದಿರುವ 15 ವರ್ಷಗಳ ಜೀವನದಲ್ಲೆಂದೂ ಜನರೊಂದಿಗೆ ವಚನಭಂಗ ಮಾಡಿರುವುದನ್ನೂ ನೋಡಿರಲಿಲ್ಲ. ಒಬ್ಬ ಉತ್ತಮ ವ್ಯಕ್ತಿಯ ಚಿಹ್ನೆಗಳೆಂದರೆ ಯಾವ ವ್ಯಕ್ತಿ ಆತನಿಗೆ ನಿಕಟನಿರುವನೋ ಅವನ ಸದ್ಗುಣದ ಪ್ರಭಾವವು ಅವನನ್ನು ತನ್ನೆಡೆಗೆ ಸೆಳೆಯುತ್ತದೆ. ಯಾಕೆಂದರೆ ಆ ವ್ಯಕ್ತಿ ದೂರದಲ್ಲಿರುವವರಿಗಿಂತ ಹೆಚ್ಚು ಹತ್ತಿರದಲ್ಲಿರುವವರಿಗೆ ಹೆಚ್ಚು ಪರಿಚಿತವಾಗುವ ಅವಕಾಶ ದೊರೆತಿರುತ್ತದೆ.
ಕೃಪೆ: ಕಾಂತಿ ಮಾಸಿಕ