Home / ಲೋಕ ನಾಯಕ

ಲೋಕ ನಾಯಕ

ನಾವು ಪ್ರವಾದಿ ಮುಹಮ್ಮದರನ್ನು(ಸ) ಲೋಕ ನಾಯಕನೆಂದು ಪ್ರಶಂಸಿಸುತ್ತೇವೆ, ವಾಸ್ತವದಲ್ಲಿ ಇದೊಂದು ದೊಡ್ಡ ವಿಶೇಷಣವಾಗಿದೆ. ಈ ರೀತಿ ವಿಶ್ಲೇಷಿಸಲ್ಪಡುವ ವ್ಯಕ್ತಿಯು ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ ವ್ಯಕ್ತಿಯಾಗಿರಬೇಕು, ಪ್ರಸ್ತುತ ವಿಶೇಷಣ ಅತಿಶಯೋಕ್ತಿಯಾಗದಿರಬೇಕಾದರೆ ವಾಸ್ತವಿಕವಾಗಿರಬೇಕಾಗಿದೆ.

ಲೋಕ ನಾಯಕನೆಂದು ವಿಶ್ಲೇಷಿಸಲ್ಪಡುವ ವ್ಯಕ್ತಿಯಲ್ಲಿರಬೇಕಾದ ಪ್ರಥಮ ಗುಣ ಅವರ ಕಾರ್ಯಚಟುವಟಿಕೆಗಳು ಯಾವುದೇ ವಿಶೇಷ ಸಮುದಾಯ, ವಂಶ, ವರ್ಗಗಳಿಗಾಗಿರಬಾರದು ಎಂದಾಗಿದೆ. ಬದಲಾಗಿ ಅವರು ಜಗತ್ತಿನ ಸಂಪೂರ್ಣ ಮಾನವ ಕುಲಕ್ಕಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿರಬೇಕು. ಯಾವುದೇ ಒಂದು ದೇಶ ಅಥವಾ ಜನರ ನಾಯಕನಿಗೆ ಯಾವುದಾದರೊಂದು ವಿಶೇಷಣವನ್ನು ನಾವು ನೀಡಬಹುದಾಗಿದೆ, ಆದರೆ ಆತ ನಿಮ್ಮ ದೇಶದವನೋ ಸಮುದಾಯದವನೋ ಅಲ್ಲವಾದರೆ ಆತ ನಿಮ್ಮ ನಾಯಕನಾಗಿರುವುದಿಲ್ಲ. ಚೈನಾದ್ದೋ, ಸ್ಫೈನ್‍ನದ್ದೋ ಕಲ್ಯಾಣಕ್ಕಾಗಿ ಕೆಲಸ ಮಾಡುವ ಓರ್ವರೊಂದಿಗೆ ಭಾರತೀಯನಾದವನಿಗೆ ಯಾವ ಆಸಕ್ತಿಯಿರಲು ಸಾಧ್ಯ? ಆತನನ್ನು ನಾನೇಕೆ ನನ್ನ ನಾಯಕನನ್ನಾಗಿಸಬೇಕು? ಆತ ತನ್ನ ಸಮುದಾಯವು ಇತರೆಲ್ಲ ಸಮುದಾಯಗಳಿಗಿಂತ ಉತ್ತಮವೆಂದು ವಾದಿಸಿ ಉಳಿದೆಲ್ಲ ಸಮುದಾಯಗಳನ್ನು ತೃಣೀಕರಿಸುವುದಾದರೆ? ಆತನನ್ನು ನನಗೆ ದ್ವೇಷಿಸಬೇಕಾಗುವುದು. ಸಕಲ ಮಾನವರನ್ನು, ಸಕಲ ರಾಷ್ಟ್ರಗಳನ್ನು ಏಕ ರೀತಿಯಲ್ಲಿ ಕಂಡು ಎಲ್ಲರಿಗೂ ಸಮಾನವಾಗಿ ಒಳಿತನ್ನು ಬಯಸುವವನಾದರೆ ಅಂಥವನು ಸಕಲ ದೇಶಗಳ ಎಲ್ಲ ಜನರಿಗೂ ಸ್ವೀಕಾರಾರ್ಹ ವ್ಯಕ್ತಿಯೆನಿಸುತ್ತಾನೆ.

ಲೋಕ ನಾಯಕನಿಗಿರಬೇಕಾದ ದ್ವಿತೀಯ ಗುಣ, ಲೋಕದ ಸಕಲ ಜನರಿಗಾಗಿ ಅವರ ಸಿದ್ಧಾಂತವಿರಬೇಕು ಎಂದಾಗಿದೆ. ಮಾನವರ ಎಲ್ಲ ಸಮಸ್ಯೆಗಳಿಗೆ ಅವರ ಮಾರ್ಗದರ್ಶನದಲ್ಲಿ ಪರಿಹಾರವಿರಬೇಕು. ನಾಯಕ ಎಂಬ ವಾಕ್ಯದ ಅರ್ಥವೇ ಮಾರ್ಗದರ್ಶಕ ಎಂದಾಗಿದೆ. ಒಳಿತಿಗೂ, ಪ್ರಗತಿಗೂ, ಕ್ಷೇಮಕ್ಕೂ ದಾರಿ ತೋರಿಸಿ ಕೊಡಲಿಕ್ಕಾಗಿ ನಾಯಕನ ಅವಶ್ಯಕತೆ ತಲೆದೋರುತ್ತದೆ. ಹೀಗೆ ಲೋಕದ ಸಕಲ ಜನರ ಒಳಿತು ಪ್ರಯೋಜನಗಳೆಡೆಗೆ ದಾರಿ ತೋರಿಸುವ ವ್ಯಕ್ತಿಯು ಲೋಕ ನಾಯಕನಾಗುತ್ತಾನೆ.

ಲೋಕ ನಾಯಕನಲ್ಲಿರಬೇಕಾದ ಮೂರನೇ ಗುಣ, ಆತನ ನೇತೃತ್ವವೂ, ಮಾರ್ಗದರ್ಶನವೂ ಒಂದು ನಿಶ್ಚಿತ ಕಾಲದವರೆಗೆ ಮಾತ್ರ ಸೀಮಿತವಾಗಿರಬಾರದು ಎಂದಾಗಿದೆ. ಬದಲಾಗಿ ಎಲ್ಲ ಕಾಲಕ್ಕೂ ಎಲ್ಲ ಪರಿಸ್ಥಿತಿಗೂ ಅದು ಪ್ರಯೋಜನಕಾರಿಯಾಗಿರಬೇಕು. ಯಾವುದೇ ಕಾಲದಲ್ಲಿಯೂ ಅದು ಸರಿಯೂ ಸುಬದ್ಧವೂ ಆಗಿರಬೇಕು. ಎಂದೆಂದಿಗೂ ಸ್ವೀಕಾರಾರ್ಹವಾಗಿರಬೇಕು. ಒಂದು ಕಾಲದಲ್ಲಿ ಪ್ರಯೋಜನಕಾರಿಯೂ ಇನ್ನೊಂದು ಕಾಲದಲ್ಲಿ ಪ್ರಯೋಜನವಲ್ಲದ ಮಾರ್ಗದರ್ಶನ ನೀಡುವ ಓರ್ವನು ಲೋಕ ನಾಯಕನಾಗಲು ಯೋಗ್ಯನಲ್ಲ. ಅವನ ನೇತೃತ್ವವೂ ಮಾರ್ಗದರ್ಶನವೂ ಲೋಕಾಂತ್ಯದವರೆಗೂ ಉಪಕಾರಿಯಾಗಿರುತ್ತದೆ ಎಂದಾದರೆ ಅವನನ್ನು ಲೋಕ ನಾಯಕ ಎಂದು ಕರೆಯಬಹುದು.

ಲೋಕ ನಾಯಕನಿಗಿರಬೇಕಾದ ನಾಲ್ಕನೇ ಗುಣ, ಆ ವ್ಯಕ್ತಿ ತತ್ವ ಸಿದ್ಧಾಂತಗಳನ್ನು ಮಾತ್ರ ನೀಡಿ ತನ್ನ ದೌತ್ಯವನ್ನು ಪೂರ್ತಿಗೊಳಿಸಿದ ಓರ್ವನಾಗಿರಬಾರದು ಎಂದಾಗಿದೆ. ಬದಲಾಗಿ ಆ ವ್ಯಕ್ತಿ ಸಕ್ರಿಯವಾಗಿ ಮಾಡಿ ತೋರಿಸಿ ಆ ತತ್ವಗಳ ಪ್ರಾಯೋಗಿಕತೆಯನ್ನು ಸಾಬೀತುಗೊಳಿಸಬೇಕಾಗುತ್ತದೆ. ಆ ತತ್ವಗಳ ಆಧಾರದಲ್ಲಿ ಒಂದು ಸಮುದಾಯವನ್ನು ಅವನು ಸಿದ್ಧಪಡಿಸಬೇಕಾಗಿದೆ. ಸಿದ್ಧಾಂತಗಳನ್ನು ಮಾತ್ರ ಸಮರ್ಪಿಸುವ ಓರ್ವನು ಹೆಚ್ಚೆಂದರೆ ಓರ್ವ ಚಿಂತಕನಾಗಲು ಮಾತ್ರ ಸಾಧ್ಯ. ನಾಯಕನೆನಿಸಿಕೊಳ್ಳಬೇಕಾದರೆ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿ ತೋರಿಸಬೇಕಾಗುತ್ತದೆ.

ಇಂದು ಲೋಕ ನಾಯಕನೆಂದು ಪ್ರಶಂಸಿಸಲ್ಪಡುವ ಪ್ರವಾದಿ ಮುಹಮ್ಮದರಲ್ಲಿ(ಸ) ಈ ಗುಣಗಳು ಎಷ್ಟಿವೆ ಎಂದು ಇನ್ನು ಪರಿಶೀಲಿಸೋಣ.

ಪ್ರಥಮವಾಗಿ ಆ ಕುರಿತು ಒಂದನೆಯ ಶರ್ತವನ್ನು ಎತ್ತಿಕೊಳ್ಳೋಣ. ಪ್ರವಾದಿವರ್ಯರ(ಸ) ಜೀವನದ ಕುರಿತು ಅಧ್ಯಯನ ನಡೆಸುವುದಾದರೆ ಅವರ ಜೀವನವು ರಾಷ್ಟ್ರೀಯವಾದಿ ಅಥವಾ ದೇಶ ಪ್ರೇಮಿಯದ್ದಲ್ಲವೆಂದು ಸುಲಭವಾಗಿ ತಿಳಿಯಬಹುದು.ಬದಲಾಗಿ ಓರ್ವ ಮಾನವ ಪ್ರೇಮಿಯ ಜೀವನ ಅವರದ್ದಾಗಿತ್ತು. ಜೀವನದ ಬಗ್ಗೆ ಅವರಲ್ಲಿ ಸಾರ್ವತ್ರಿಕವಾದ ಒಂದು ದೃಷ್ಟಿಕೋನವಿತ್ತು. ಅವರಿಗೆ ಎಲ್ಲ ಮಾನವರು ಸಮಾನರಾಗಿದ್ದರು. ಯಾವುದಾದರೂ ವಿಶೇಷ ವರ್ಗದೊಂದಿಗೋ,ವಿಭಾಗದೊಂದಿಗೋ, ಸಮುದಾಯದೊಂದಿಗೋ, ರಾಷ್ಟ್ರ ಮತ್ತು ಜನಾಂಗದೊಂದಿಗೋ ವಿಶೇಷ ಆಸಕ್ತಿ ಪ್ರತಿಬದ್ಧತೆಗಳೇನೂ ಇರಲಿಲ್ಲ. ಶ್ರೀಮಂತ-ಬಡವ, ಉನ್ನತ-ಕೆಳವರ್ಗ, ಕರಿಯ-ಬಿಳಿಯ, ಅರಬ-ಅರಬೇತರ, ಪಾಶ್ಚಾತ್ಯ-ಪೌರಾತ್ಯರು, ಆರ್ಯರು-ದ್ರಾವಿಡರು, ಹೀಗೆ ಎಲ್ಲರನ್ನು ಮಾನವ ವಂಶದ ಅಂಗಗಳೇ ಎಂದು ಅವರು ಪರಿಗಣಿಸಿದರು. ಯಾವುದಾದರೊಂದು ವಿಭಾಗದೊಂದಿಗೆ ಅವರಿಗೆ ಇತರರಿಗಿಂತ ಹೆಚ್ಚಿನ ಆಸಕ್ತಿ ಮತ್ತು ಸಂಬಂಧಗಳಿವೆ ಎಂದು ಸಂಶಯಪಡುವ ಮಾತು ವರ್ತನೆಗಳು ಜೀವನಾಂತ್ಯದವರೆಗೂ ಅವರಿಂದುಂಟಾಗಿಲ್ಲ. ಈ ಕಾರಣದಿಂದಾಗಿರಬೇಕು ಅವರು ಜೀವಿಸಿದ್ದ ಕಾಲದಲ್ಲಿಯೇ ಅರಬರಂತೆ ಇತಿಯೋಪಿಯನರೂ, ಪರ್ಶಿಯನರೂ, ರೋಮನರೂ, ಈಜಿಪ್ಟ್ ನವರೂ, ಇಸ್ರಾಯೀಲ್ಯರೂ ಎಲ್ಲರೂ ಅವರ ಸಂಗಡಿಗರು ಮತ್ತು ಅನುಯಾಯಿಗಳಾಗಿರುವುದು. ನಂತರದ ಕಾಲದಲ್ಲಿ ಭೂಮಿಯ ಎಲ್ಲ ಮೂಲೆಗಳಲ್ಲಿರುವ ಎಲ್ಲ ವಿಭಾಗಕ್ಕೂ ಸೇರಿದ ಜನರು ಅವರ ನೇತೃತ್ವವನ್ನು ಅಂಗೀಕರಿಸಿದರು. ಶತಮಾನಕ್ಕೂ ಮುಂಚೆ ಅತಿ ದೂರದ ಸ್ಥಳವಾದ ಅರೇಬಿಯಾದಲ್ಲಿ ಜನಿಸಿದ ಓರ್ವ ವ್ಯಕ್ತಿಯನ್ನು ಇಂದಿಗೂ ಭಾರತೀಯನಾದ ಓರ್ವನು ಗೌರವಿಸುವುದು, ಪ್ರಶಂಸಿಸುವುದು ಅದ್ಭುತವಲ್ಲವೇ?

ಇನ್ನು ಎರಡನೆಯ ಮತ್ತು ಮೂರನೆಯ ಉಪಾಧಿಗಳ ಕುರಿತು ಚಿಂತಿಸೋಣ, ಪ್ರವಾದಿ ಮುಹಮ್ಮದರು(ಸ) ಒಂದು ಪ್ರತ್ಯೇಕ ದೇಶ, ವರ್ಗ, ಬಾಷೆ, ಪ್ರಾದೇಶಿಕತೆಗಳು ಮತ್ತು ತಾತ್ಕಾಲಿಕ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸಿ ಸಮಯ ವ್ಯಯಿಸಲಿಲ್ಲ. ಮಾನವರ ಮೂಲಭೂತ ಮತ್ತು ಸಕಲ ಸಮಸ್ಯೆಯ (ಅದು ಪರಿಹಾರಗೊಂಡರೆ ಪೂರಕವಾದ ಇತರೆಲ್ಲ ಸಮಸ್ಯೆಗಳು ಸ್ವಯಂ ಪರಿಹಾರಗೊಳ್ಳುವುದು) ಪರಿಹಾರಕ್ಕೆ ತನ್ನ ಶಕ್ತಿ ಪ್ರಭಾವಗಳನ್ನು ಉಪಯೋಗಿಸಿ ಅವರು ಶ್ರಮಿಸಿದರು. ಅಂದರೆ ಮಾನವ ಜೀವನವು ಪ್ರಪಂಚದ ವ್ಯವಸ್ಥೆಗೆ ಅನುಗುಣವಾಗಿರಬೇಕು. ಮನುಷ್ಯನು ಪ್ರಪಂಚದ ಒಂದು ಘಟಕವಾಗಿದ್ದಾನೆ. ಪ್ರಪಂಚದ ಒಟ್ಟು ವ್ಯವಸ್ಥೆಗೆ ವಿಪರೀತವಾಗಿ ಅದರ ಒಂದು ಘಟಕವು ವರ್ತಿಸಿದರೆ ಅದು ಸಕಲ ವಿನಾಶಕ್ಕೂ ಕಾರಣವಾಗುವುದು. ಕಾಲ ಮತ್ತು ಸ್ಥಳಗಳ ಸಂಕುಚಿತತೆಯನ್ನು ಮೀರಿ ನಿಂತಾಗ ಇದು ನಮಗೆ ಮನವರಿಕೆಯಾಗುವುದು. ಭೂಮಿಯ ಆರಂಭದಿಂದ ಅನಂತಕಾಲದವರೆಗೂ ಇರುವ ಜನಸಂಕುಲವನ್ನು ಒಮ್ಮೆ ಊಹಿಸಿರಿ. ಯಾವುದಾದರೊಂದು ಕಾಲಘಟ್ಟದ ಜನ ವಿಭಾಗವು ನಿಮ್ಮ ದೃಷ್ಟಿಯಿಂದ ಮರೆಯಾಗಬಾರದು, ಅನಂತರ ನೀವು ಜಗತ್ತಿನಲ್ಲುಂಟಾಗಿರುವ ಮತ್ತು ಉಂಟಾಗಬಹುದಾದ ಕೆಡುಕುಗಳ ಬೇರುಗಳನ್ನು ಕಂಡು ಹಿಡಿಯಲು ಪ್ರಯತ್ನಿಸಿರಿ. ಅದನ್ನು ಆಳವಾಗಿ ಚಿಂತಿಸಿ ಮತ್ತೆ ಮತ್ತೆ ಚಿಂತಿಸಿ, ಅವುಗಳ ಬಗ್ಗೆ ಆಳವಾಗಿ ಪರಿಶೀಲಿಸಿರಿ. ಅಂತಿಮವಾಗಿ ನೀವು ಮಾನವರ ದೇವ ವಿರೋಧಿ ಚಟುವಟಿಕೆಗಳೇ ಎಲ್ಲ ಕೆಡುಕುಗಳಿಗೆ ಮೂಲ ಕಾರಣ ಎಂದು ನಿರ್ಧರಿಸುತ್ತೀರಿ. ದೇವ ಧಿಕ್ಕಾರಿಯು ಎರಡರಲ್ಲೊಂದು ರೀತಿಯನ್ನು ಮಾತ್ರ ಸ್ವೀಕರಿಸಲು ಸಾಧ್ಯವಿದೆ. ತನ್ನ ಸ್ವೇಚ್ಛೆಯ ಕಾರ್ಯಗಳನ್ನು ಅವನು ಸ್ವಯಂ ಮನವರಿಕೆ ಮಾಡಬಹುದು, ಅದನ್ನು ಇತರ ಯಾರಿಗೂ ಮನವರಿಕೆ ಮಾಡಲಾರ. ಅವನ ಈ ಸ್ಥಿತಿಯೇ ಅವನನ್ನು ಸ್ವೇಚ್ಛಾಪ್ರೇಮಿಯಾಗಿಯೂ ಅಕ್ರಮಿಯಾಗಿಯೂ ಪರಿವರ್ತಿಸುತ್ತದೆ. ಮಾನವನು ದೇವೇತರರಿಗೆ ಆತ್ಮ ಸಮರ್ಪಣೆ ನಡೆಸುವುದು ಜಗತ್ತಿನ ನಾನಾ ರೀತಿಯ ಸಂಘರ್ಷಗಳಿಗೂ ಕ್ಷೋಭೆಗಳಿಗೂ ಕಾರಣವಾಗಿದೆ. ದೇವನನ್ನು ಕಡೆಗಣಿಸಿದಾಗ ಕೆಡುಕುಗಳು ಹೇಗೆ ಉದ್ಭವಿಸುತ್ತದೆ? ಎಂಬ ಪ್ರಶ್ನೆಗೆ ಇದುವೇ ನೈಜ ಉತ್ತರವಾಗಿದೆ. ದೇವ ಧಿಕ್ಕಾರ ನೀತಿ ಯಥಾರ್ಥಕ್ಕೆ ವಿರುದ್ಧ ನಿಲುವಾಗಿರುತ್ತದೆ, ಅದರ ಸಹಜ ಪರಿಣಾಮವು ಕೆಡುಕಾಗಿರುತ್ತದೆ.

ಈ ಪ್ರಪಂಚ ದೇವನ ಒಂದು ಸೃಷ್ಟಿಯಾಗಿದೆ. ಭೂಮಿ, ಸೂರ್ಯ, ಚಂದ್ರ, ನಕ್ಷತ್ರ, ವಾಯು, ಬೆಳಕು ಮುಂತಾದ ಎಲ್ಲವೂ ದೇವನ ಆಸ್ತಿಯಾಗಿದೆ. ಮನುಷ್ಯನು ಈ ಲೋಕದ ಓರ್ವ ಪ್ರಜೆಯಾಗಿದ್ದಾನೆ. ಈ ಲೋಕದ ಅಸ್ತಿತ್ವ ಮತ್ತು ಚಲನೆಯ ವ್ಯವಸ್ಥೆಗೆ ಅದರದ್ದೇ ಒಂದು ಘಟಕವಾದ ಮಾನವನು ವಿರುದ್ಧವಾಗಿ ಕೆಲಸ ಮಾಡುವುದು ವಿನಾಶದ ಪರಿಣಾಮಗಳಿಗೆ ಸಹಜವಾದ ಕಾರಣವಾಗುತ್ತದೆ. ತನ್ನನ್ನು ಪ್ರಶ್ನಿಸುವವರು ಯಾರೂ ಇಲ್ಲ. ಅಂತಹ ಓರ್ವ ಅಧಿಕಾರಿಯೇ ಇಲ್ಲವೆಂಬ ಮಾನವ ವಿಚಾರವೇ ಸತ್ಯವಿರೋಧಿ ಸಂಘರ್ಷವಾಗಿದೆ. ಇದು ಅವನನ್ನು ಸ್ವೇಚ್ಛಾಚಾರಿ ಮತ್ತು ಹೊಣೆಗೇಡಿಯಾಗಿಸುವುದು. ತನ್ನ ಬದುಕಿಗೆ ಅವನು ಸ್ವಯಂ ನಿಯಮಗಳನ್ನು ನಿರ್ಮಿಸಿದಾಗ ಅದರಿಂದ ದುಷ್ಫಲಗಳುಂಟಾಗುವುದು. ಅವನು ದೇವೇತರರ ಅಧಿಕಾರ ಮತ್ತು ಶಕ್ತಿಯನ್ನು ತನ್ನ ಪ್ರಭುವಾಗಿ ಮಾಡಿದರೆ, ಅಂತಹ ಶಕ್ತಿಗಳಿಗೆ ಹೆದರಿದರೆ ಅಥವಾ ಅದರಲ್ಲಿ ಅನುರಕ್ತನಾಗಿ ಆತ್ಮ ಸಮರ್ಪಣೆ ಮಾಡಿದರೆ ಅದು ಕೂಡಾ ವಾಸ್ತವದೊಂದಿಗೆ ನಡೆಸುವ ಸಂಘರ್ಷವಾಗಿದೆ. ಯಾಕೆಂದರೆ ಪ್ರಪಂಚದಲ್ಲಿ ದೇವೇತರರಿಗೆ ಶಕ್ತಿ ಮತ್ತು ಅಧಿಕಾರಗಳು ಇಲ್ಲ ಎಂಬುದು ವಾಸ್ತವ. ಆದುದರಿಂದ ವಾಸ್ತವಕ್ಕೆ ವಿರುದ್ಧವಾಗಿ ಜೀವಿಸುವುದೇ ಕೆಟ್ಟ ಪರಿಣಾಮಕ್ಕೆ ಕಾರಣವಾಗುವುದು. ಉತ್ತಮ ಮತ್ತು ಶುಭ್ರ ಪರಿಣಾಮಗಳನ್ನು ತಂದು ಕೊಡುವ ಚಿಂತನೆ ಮತ್ತು ಜೀವನ ಶೈಲಿಯಿಂದ ಮಾತ್ರ ಮಾನವನು ಆಕಾಶ ಭೂಮಿಯ ಏಕೈಕ ನೈಜ ಆಡಳಿತಾಧಿಕಾರಿಗೆ ಶಿರಬಾಗಲು ಸಾಧ್ಯ. ಅಹಂಕಾರ ಧಿಕ್ಕಾರದ ಮನೋಸ್ಥಿತಿಯನ್ನು ಅವನು ತೊರೆಯಬೇಕು. ಆ ಏಕೈಕ ನೈಜ ಅಧಿಕಾರಿಗೇ ಹೃತ್ಫೂರ್ವಕ ಅನುಸರಣೆ, ವಿಧೇಯತ್ವ, ಶರಣಾಗತಿಗಳನ್ನು ಸಮರ್ಪಿಸಬೇಕು. ತನ್ನ ಜೀವನಕ್ಕೆ ನಿಯಮಗಳನ್ನು ಆ ಅಧಿಕಾರಿಯಿಂದಲೇ ಸ್ವೀಕರಿಸಬೇಕು. ಇವೇ ಪ್ರವಾದಿ ಮುಹಮ್ಮದರು(ಸ) ಮಾನವರ ಉಪಕಾರ ಮತ್ತು ಕಲ್ಯಾಣಕ್ಕಾಗಿ ಸಮರ್ಪಿಸಿದ ಮಾರ್ಗದರ್ಶನವಾಗಿದೆ. ಈ ಮಾರ್ಗದರ್ಶನವು ಪೂರ್ವ ಪಶ್ಚಿಮಗಳ ಗಡಿಯೊಳಗೆ ಮುದುಡಿ ನಿಲ್ಲಲಾರದು. ಯಾಕೆಂದರೆ ಅದು ಭೂಮಿಯಲ್ಲಿ ಎಲ್ಲೆಲ್ಲ ಮಾನವರ ವಾಸ್ತವ್ಯವಿದೆಯೋ ಅಲ್ಲೆಲ್ಲ ನಿಯಂತ್ರಣ ಕಳಕೊಂಡ ಜೀವನದ ಗಾಲಿಗಳನ್ನು ಸರಿಪಡಿಸಲಿಕ್ಕಿರುವ ಏಕೈಕ ಮಾರ್ಗದರ್ಶನವಾಗಿದೆ. ಭವಿಷ್ಯ ಮತ್ತು ಭೂತಕಾಲಕ್ಕೆ ಸೀಮಿತವಾಗದ ಮಾರ್ಗದರ್ಶನಗಳಿವು. ಇದು 1500 ವರ್ಷಕ್ಕೂ ಮೊದಲು ಅಸ್ತಿತ್ವ ಕಂಡು ಯಶಸ್ವಿಯಾಯಿತು. ಇಂದಿಗೂ ಅದು ಸರಿಯೂ ಪ್ರಾಯೋಗಿಕವೂ ಆಗಿದೆ.

ಲೋಕ ನಾಯಕನ ನಾಲ್ಕನೇ ಗುಣವೇನೆಂದರೆ ಲೋಕದ ಮುಂದೆ ಪ್ರವಾದಿ ಮುಹಮ್ಮದರು(ಸ) ಒಂದು ಸಿದ್ಧಾಂತವನ್ನು ಮಾತ್ರ ಸಮರ್ಪಿಸಿದ್ದಲ್ಲ ಎಂದಾಗಿದೆ. ಆ ಸಿದ್ಧಾಂತದ ಪ್ರಕಾರವೇ ಒಂದು ಶಕ್ತಿಶಾಲಿ ಉಜ್ವಲವಾದ ಸಮಾಜವನ್ನು ಅವರೇ ರೂಪಿಸಿದರು. ಕೇವಲ 23 ವರ್ಷಗಳಲ್ಲಿ ಅವರಿಂದ ಅದು ಸಾಧ್ಯವಾಯಿತು. ಲಕ್ಷಾಂತರ ಜನರನ್ನು ದೇವನ ಅಧೀನಗೊಳಿಸಿದರು. ಈ ಜನರನ್ನು ಸ್ವೇಚ್ಛೆ, ಆತ್ಮ ಪೂಜೆ ಮತ್ತು ದೇವೇತರರಿಗೆ ವಿಧೇಯರಾಗುವುದರಿಂದ ವಿಮೋಚಿಸಿದರು. ಆನಂತರ ಅವರನ್ನು ದೇವಾನುಸರಣೆಯ ತಳಹದಿಯಲ್ಲಿ ಒಗ್ಗೂಡಿಸಿ ಹೊಸ ಧಾರ್ಮಿಕ ವ್ಯವಸ್ಥೆ, ಸಂಸ್ಕಾರ, ಪದ್ಧತಿ, ಆರ್ಥಿಕ ವ್ಯವಸ್ಥೆ, ಆಡಳಿತ ವ್ಯವಸ್ಥೆಯನ್ನು ಹುಟ್ಟು ಹಾಕಿದರು. ಅವರು ಮುಂದಿರಿಸಿದ ಸಿದ್ಧಾಂತಗಳ ಆಧಾರದಲ್ಲಿ ರೂಪುಗೊಂಡ ಜೀವನ ರೀತಿ ಹೇಗಿದೆ ಮತ್ತು ಇತರ ಸಿದ್ಧಾಂತಗಳ ಮುಂದೆ ಅದೆಷ್ಟು ಶುದ್ಧ ಸ್ವಚ್ಛ ಉತ್ತಮವೆಂದು ಸ್ವಯಂ ಜೀವನದಲ್ಲಿ ಅಳವಡಿಸಿ ಲೋಕದ ಜನರಿಗೆ ತೋರಿಸಿಕೊಟ್ಟರು.

ಈ ಸಾಧನೆಗಳ ಕಾರಣದಿಂದಾಗಿ ಪ್ರವಾದಿ ಮುಹಮ್ಮದರನ್ನು (ಸ) ಲೋಕ ನಾಯಕ ಎಂದು ಕರೆಯಲಾಗುತ್ತದೆ. ಅವರ ಈ ಕಾರ್ಯಗಳು ಯಾವುದಾದರೊಂದು ಪ್ರತ್ಯೇಕ ದೇಶಕ್ಕಾಗಿರಲಿಲ್ಲ, ಸಕಲ ಮಾನವರಿಗಾಗಿತ್ತು. ಅವರು ಮಾನವ ಕುಲದ ಸಾರ್ವಜನಿಕ ಸಂಪತ್ತು ಆಗಿದ್ದಾರೆ. ಅವರಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಯಾರು ಬೇಕಾದರೂ ಅವರಿಂದ ಪ್ರಯೋಜನ ಪಡೆಯಬಹುದು. ಆದರೆ ಅವರನ್ನು ಜನರು ಯಾಕೆ ಪೂರ್ವಗ್ರಹದಿಂದ ನೋಡುತ್ತಿದ್ದಾರೆಂದು ಮಾತ್ರ ನಾವರಿಯೆವು.

ಪ್ರವಾದಿ ಮುಹಮ್ಮದ್(ಸ) ರ ಕುರಿತು ಇನ್ನೂ ತಿಳಿಯಬೇಕೇ?
ಸಂಪರ್ಕಿಸಿರಿ:
ಇಸ್ಮಿಕಾ, ಪಿ.ಬಿ.ನಂ.229, ಮಂಗಳೂರು-575001, e-mail: [email protected]
ನಿಮ್ಮ ಸಂಪೂರ್ಣ ವಿಳಾಸವನ್ನು S.M.S ಅಥವಾ whatsapp ಮೂಲಕ ಕಳುಹಿಸಬೇಕಾದ ಸಂಖ್ಯೆ : 9060341799

SHARE THIS POST VIA