Home / ಲೇಖನಗಳು / ಬಸ್ ಪ್ರಯಾಣಿಕನ ಮೂತ್ರಶಂಕೆ ಪ್ರವಾದಿಯನ್ನು ನೆನಪಿಸಿತು…

ಬಸ್ ಪ್ರಯಾಣಿಕನ ಮೂತ್ರಶಂಕೆ ಪ್ರವಾದಿಯನ್ನು ನೆನಪಿಸಿತು…

ರಮೇಶ ಎಂ. ಬಾಯಾರು
ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು

ಶಾಂತಿ ಪ್ರಕಾಶನ, ಮಂಗಳೂರು “ಪ್ರವಾದಿ ಮುಹಮ್ಮದ್(ಸ): ಸಮಗ್ರ ವ್ಯಕ್ತಿತ್ವ” ಎಂಬ ಪುಸ್ತಕವನ್ನು ನನಗೆ ಸ್ನೇಹಿತರಾದ ಹೈದರ್ ಕಲ್ಲಂಗಳ ಕಳುಹಿಸಿ ಕೊಟ್ಟಿದ್ದರು. ಆ ಪುಸ್ತಕವನ್ನೋದುತ್ತಿದ್ದಂತೆಯೇ ಘಟನೆಯೊಂದು ನನ್ನ ಗಮನ ಸೆಳೆಯಿತು. ಮನಸ್ಸು ಹಿಂದಿನ ದಿನಕ್ಕೆ ಓಡಿತು.

ನಾನು ನಮ್ಮ ಅಭಿಮಾನದ ‘ಕೆಂಪು ಬಸ್’ನಲ್ಲಿ ಕಬಕದಿಂದ ಜೋಡು ಮಾರ್ಗಕ್ಕೆ ಸಂಚರಿಸುತ್ತಿದ್ದೆ. ಮಿತ್ತೂರು ದಾಟಿದಾಗ ಮಧ್ಯ ವಯಸ್ಸು ದಾಟಿದ ಅಪರಿಚಿತರೊಬ್ಬರು ನಿರ್ವಾಹಕರನ್ನು ಕರೆದು, “ನನಗೆ ಮೂತ್ರಿಸಬೇಕು, ಒಂದು ನಿಮಿಷ ‘ಬಸ್’ ನಿಲ್ಲಿಸಿ” ಎಂದರು. “ನಾನು ಬಸ್ ನಿಲ್ಲಿಸುವುದಿಲ್ಲ, ಚಾಲಕರಿಗೆ ಹೇಳಿ’ ಎಂಬ ಉಡಾಫೆಯ ಮಾತಿನೊಂದಿಗೆ ನಿರ್ವಾಹಕರು ಜಾರಿದರು. ಆ ವಯಸ್ಕನ ಭಾಷಾ ಶೈಲಿ ಅವರು ಉತ್ತರ ಕರ್ನಾಟಕದಿಂದ ಉದರ ಪೋಷಣೆ ನಿಮಿತ್ತ ಕೂಲಿ ಕೆಲಸಕ್ಕಾಗಿ ಈ ಊರಿನಲ್ಲಿ ನೆಲೆಸಿರಬೇಕೆಂದು ಅಂದಾಜಿಸಿದೆ. ಅವರು ಚಾಲಕರತ್ತ ಓಡಿ ಅವರಿಗೆ ಬಸ್ ನಿಲ್ಲಿಸುವ ವಿನಂತಿಯೊಂದಿಗೆ ತನ್ನ ಸಮಸ್ಯೆಯ ಸಂಜ್ಞೆ ನೀಡಿದರು. ಬಸ್ ನಿಂತಿತು. ಮೂತ್ರಿಸಲು ಅವರು ತೆಗೆದುಕೊಂಡ ಸಮಯವೇ ಅವರ ಸಮಸ್ಯೆಯ ಭೀಕರತೆಯನ್ನು ವಿವರಿಸಿತು.

ಇದಕ್ಕೂ ಪ್ರವಾದಿ ಮುಹಮ್ಮದರಿಗೂ ಏನು ಸಂಬಂಧ ಎಂದು ಹುಬ್ಬೇರಿಸುವಿರಾ? ಸ್ವಾರಸ್ಯವಿರುವುದೇ ಅಲ್ಲಿ. ಆ ದಿನ ಗ್ರಾಮೀಣ ವ್ಯಕ್ತಿಯೊಬ್ಬನು ಪ್ರವಾದಿಯವರಿದ್ದ ಮಸೀದಿಗೆ ಬಂದಿದ್ದನು. ಪ್ರಾರ್ಥನಾ ಭವನದಲ್ಲಿ ಕುಳಿತಿದ್ದನು. ಅವನಿಗೇನಾಯಿತೋ ಏನೋ! ಫಕ್ಕನೆ ಎದ್ದು ನಿಂತನು. ನಿಂತಲ್ಲಿಯೇ ತನ್ನ ಮೂತ್ರ ಹರಿಸಲಾರಂಭಿಸಿದನು. ಅಲ್ಲಿದ್ದವರಿಗೆಲ್ಲ ಬಹಳ ಸಿಟ್ಟು ಬಂತು. ಪ್ರವಾದಿಯ ಅನುಯಾಯಿಗಳನೇಕರು ಅವನನ್ನು ತಡೆಯಲು ಹೊರಟರು. ಆಗ ಪ್ರವಾದಿಯವರು, “ಬೇಡ. ಸುಮ್ಮನಿರಿ” ಎಂದರು. ಆ ವ್ಯಕ್ತಿ ಮಾತ್ರ ತನ್ನ ಕೆಲಸ ಮುಗಿಸಿ ನಿರಾಳವಾಗಿ ಮತ್ತೊಂದು ಸ್ಥಳಕ್ಕೆ ಹೋಗಿ ಕುಳಿತೇ ಬಿಟ್ಟನು.

ತಡೆಯಲುದ್ಯುಕ್ತರಾಗಿದ್ದ ಪ್ರವಾದಿಯ ಸಹಚರರೆಲ್ಲರೂ ಮುಹಮ್ಮದರನ್ನು, “ಅವನು ಮೂತ್ರ ಮಾಡುತ್ತಿದ್ದರೂ ಸಭಾಭವನ ಗಲೀಜಾಗುತ್ತಿದ್ದರೂ ನೀವೇಕೆ ಅವನನ್ನು ಗದರಲಿಲ್ಲ? ನಾವು ತಡೆಯಲು ಹೊರಟಾಗ ನೀವು ನಮ್ಮನ್ನೇ ತಡೆದಿರಿ. ಅವನು ಮಾಡಿರುವುದು ಅಕ್ಷಮ್ಯ ಅಪರಾಧವಲ್ಲವೇ? ಅವನಿಗೇನು ಶಿಕ್ಷೆ ಕೊಡುವಿರಿ?” ಎಂದು ರೇಗಿದರು. ಆಗ ಮುಹಮ್ಮದರು ಮೂತ್ರಿಸಿದ ಆ ವ್ಯಕ್ತಿಯನ್ನು ಕರೆದರು. ಉಳಿದವರೆಲ್ಲರೂ ಈಗ ಆ ವ್ಯಕ್ತಿಗೆ ಶಿಕ್ಷೆಯಾಗುತ್ತದೆಂದು ಊಹಿಸಿ ಸಂಭ್ರಮಿಸಿದರು. ಆದರೆ ಪ್ರವಾದಿಯವರು ಆ ವ್ಯಕ್ತಿಗೆ, “ನೀನೇಕೆ ಪ್ರಾರ್ಥನಾಲಯದಲ್ಲಿ ಮೂತ್ರಿಸಿದೆ? ಇದು ದೇವರನ್ನು ಪ್ರಾರ್ಥನೆ ಮಾಡುವ ಸ್ಥಳ. ದೇವರಿರುವ ಸ್ಥಳ. ಇದನ್ನು ಶುಚಿಯಾಗಿರಿಸಬೇಕಾದುದು ನಮ್ಮ ಧರ್ಮ. ನೀನು ತಪ್ಪು ಮಾಡಿರುವೆ. ಇನ್ನು ಮುಂದೆ ಇಂತಹ ಕೃತ್ಯ ಮಾಡಬೇಡ” ಎಂದರು. ಆತ ಆಯಿತೆಂದು ಹೇಳಿ ಮುಖ ತಗ್ಗಿಸಿ ಹೋದನು. ಪ್ರವಾದಿಯವರ ಮನಸ್ಸೆಷ್ಟು ವಿಶಾಲ!

ಪ್ರವಾದಿಯವರು(ಸ) ತನ್ನ ಸಹಚರರ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದರು. “ಯಾರೂ ಉದ್ದೇಶಪೂರ್ವಕ ತಪ್ಪು ಮಾಡುವುದಿಲ್ಲ. ಅನಿವಾರ್ಯತೆ ಮತ್ತು ಆಕಸ್ಮಿಕ ಕಾರಣಗಳಿಂದಾಗಿ ತಪ್ಪು ನಡೆಯುತ್ತದೆ. ಆತನು ಮೂತ್ರ ಮಾಡುತ್ತಿದ್ದಾಗ ನಾನು ಗದರುತ್ತಿದ್ದರೆ ಆವನ ಮೂತ್ರ ನಿಲ್ಲುತ್ತಿರಲಿಲ್ಲ. ಮೂತ್ರಿಸುತ್ತಾ ಆತ ಓಡಬೇಕಿತ್ತು. ಆಗ ಕಟ್ಟಡವೇ ಅಶುಚಿಯಾಗುತ್ತಿತ್ತು. ಅಜ್ಞಾನದಿಂದಲೋ, ಅವಿವೇಕದಿಂದಲೋ ಮಾಡಿದ ವ್ಯಕ್ತಿಯನ್ನು ಹತ್ತಿರ ಕರೆದು ತಪ್ಪನ್ನು ಶಾಂತವಾಗಿ ತಿಳಿಸಿ, ಅರಿವು ಮೂಡಿಸುವುದರಿಂದ ಪರಿವರ್ತನೆಯಾಗುತ್ತದೆ. ಗದರಿದರೆ ಅವನು ಹೆಚ್ಚು ಹೆಚ್ಚು ತಪ್ಪುಗಳನ್ನೇ ಮಾಡುತ್ತಾನೆ. ಅದಕ್ಕಾಗಿ ಆತ ಮೂತ್ರಿಸಿ ಮುಗಿಯುವ ತನಕ ಸುಮ್ಮನಿದ್ದು, ಅವನ ಕೆಲಸ ಮುಗಿದ ಮೇಲೆ ಸಮೀಪಕ್ಕೆ ಕರೆದು ಸಾಂತ್ವನ ಮಾಡಿ ಅವನನ್ನು ತಿದ್ದುವ ಕೆಲಸ ಮಾಡಿದೆ” ಎಂದರು. ವಿಷಯ ಸಣ್ಣದು, ವಿಚಾರ ದೊಡ್ಡದು.

ಬಸ್ ಚಾಲಕ ಓರ್ವ ಪ್ರಯಾಣಿಕನ ಸಮಸ್ಯೆಗೆ ಸ್ಪಂದಿಸಿದ ರೀತಿ ಪ್ರವಾದಿಯವರನ್ನು ನೆನಪಿಸಿತು. ಒಂದು ಉತ್ತಮವಾದ ಸಂದೇಶ
ಮನಃಪಟಲದಲ್ಲಿ ಬಲಿಯಿತು. ಹೌದು. ತಪ್ಪುಗಳು ಸಹಜ. ಶೇಕಡಾ ತೊಂಭತ್ತೊಂಭತ್ತು ತಪ್ಪುಗಳು ಅನಿವಾರ್ಯತೆ ಮತ್ತು ಆಕಸ್ಮಿಕ ಸಂದರ್ಭಗಳ ಫಲರೂಪ. ಪ್ರಪಂಚದಲ್ಲಿ ಶೇಕಡಾ ಒಬ್ಬರು ಮಾತ್ರ ಉದ್ದೇಶ ಪೂರ್ವಕ ತಪ್ಪು ಮಾಡಬಹುದು. ಹಗೆ, ಮುಯ್ಯಿ, ಅನೃತ ಸುಖ, ಮತ್ಸರ ಮುಂತಾದ ದುರ್ಗುಣಾತ್ಮರು ಉದ್ದೇಶಪೂರ್ವಕ ತಪ್ಪು ಮಾಡುತ್ತಾರೆ. ಗೌತಮ ಬುದ್ಧನು ಅಂಗುಲಿಮಾಲನೆಂಬ ದರೋಡೆಕೋರನನ್ನು ತಿಳಿ ಹೇಳಿ ಸರಿ ಪಡಿಸಿದನು. ಗದರಿಸುತ್ತಿದ್ದರೆ ಬುದ್ಧನ ಅಂಗುಲಿಯೂ ದರೋಡೆಗಾರನ ಮಾಲೆಗೆ ಸೇರಲ್ಪಟ್ಟು ಮತ್ತೊಂದು ದುರಂತ ಸಂಭವಿಸುತ್ತಿತ್ತೋ ಏನೋ! ಪ್ರಾಚೇತಸನು ಸಪ್ತ ಋಷಿಗಳ ಸದ್ವಿಚಾರದ ಮಾತುಗಳಿಂದ ವಾಲ್ಮೀಕಿಯಾಗಿ ಜಗತ್ತಿಗೆ ಉತ್ತಮ ಸಂದೇಶ ಸಾರಿದನು. ಪ್ರಾಚೇತಸನಾಗಲೀ, ಅಂಗುಲಿ ಮಾಲನಾಗಲಿ ಬದುಕಿನ ಅನಿವಾರ್ಯತೆಗಾಗಿ ತಪ್ಪು ಮಾಡಿರುವರೆಂಬುದನ್ನು ಅಲ್ಲಗಳೆಯುವಂತಿಲ್ಲ.
ಮನುಷ್ಯನ ಸಮಸ್ಯೆಗಳನ್ನು ಅರ್ಥ ಮಾಡಿದಾಗ ಎಲ್ಲವೂ ತಿಳಿಯಾಗುತ್ತದೆ. ಕಂಡಕ್ಟರ್ ಬಸ್ ನಿಲ್ಲಿಸದೇ ಇರುತ್ತಿದ್ದರೆ ಆಗಬಾರದ ಅನಾಹುತಗಳು ಆಗುತ್ತಿದ್ದುವು. ಪ್ರವಾದಿಗಳು ಆ ವ್ಯಕ್ತಿಯನ್ನು ಮೂತ್ರಿಸದಂತೆ ತಡೆಯುತ್ತಿದ್ದರೂ ಅನಾಹುತ ಖಚಿತ. ತಪ್ಪುಗಳನ್ನು ಒಪ್ಪಿ ಕೊಳ್ಳೋಣ. ಹಾಗೆಯೇ ಆದರೆ ತಪ್ಪುಗಳನ್ನು ತಿದ್ದಲು ಸನ್ಮಾರ್ಗವನ್ನು ಯೋಚಿಸೋಣ. ಒಂದು ತಪ್ಪು ಇನ್ನೊಂದು ತಪ್ಪಿನ ಸೃಷ್ಟಿಗೆ ಕಾರಣವಾಗಬಾರದೆಂಬ ಪ್ರವಾದಿಗಳ ಸಂದೇಶವು ನಿತ್ಯ ಅನುಕರಣೀಯ. ಡೊಂಕಿಗೆ ಡೊಂಕೇ ಏಕೆ ಅಲ್ಲವೇ?

SHARE THIS POST VIA

About editor

Check Also

ಬನ್ನಿ ಮೊದಲು, ಪರಸ್ಪರ ಗೌರವಿಸುವುದನ್ನು ಮುಗುಳ್ನಗುವುದನ್ನು ಕಲಿಯೋಣ..

ಪ್ರಸನ್ನತೆ ಮುಖದ ಸೌಂದರ್ಯವಾಗಿದೆ. ಒಳಿತು ತುಂಬಿ ತುಳುಕುವ ಮನಸ್ಸಿನಿಂದ ಮುಗುಳ್ನಗೆಯು ಹೊರ ಚಿಮ್ಮುವುದು ಮನದ ಒಳಗೆ ತುಂಬಿದ ಬೇಗುದಿಯನ್ನು ಕಿತ್ತೆಸೆದು …

Leave a Reply

Your email address will not be published. Required fields are marked *