✍️ ಅಬೂ ಝೀಶಾನ್
ಹ. ಅಲಿ(ರ) ಕೋಪದ ಬಗ್ಗೆ ಬಹಳ ಸುಂದರವಾದ ಮಾತನ್ನು ಹೇಳುತ್ತಾರೆ, “ಕೋಪದ ಆರಂಭವು ಹುಚ್ಚುತನ ಆಗಿದೆ ಹಾಗೂ ಅಂತ್ಯವು ಪಶ್ಚಾತ್ತಾಪ ಆಗಿದೆ.”
ಒಬ್ಬ ವ್ಯಕ್ತಿ ಯಾವಾಗಲೂ ಕೋಪಗೊಳ್ಳುವ ಸ್ವಭಾವವನ್ನು ಹೊಂದಿದ್ದರೆ ಅದು ಆತನ ಅಭ್ಯಾಸ ಎಂದಾಗುತ್ತದೆ ಮತ್ತು ಆತನ ಕೋಪಕ್ಕೆ ಅಷ್ಟು ಬೆಲೆಯಿರುವುದಿಲ್ಲ. ಆದರೆ ಸದಾ ಹಸನ್ಮುಖಿಯಾಗಿರುವ ವ್ಯಕ್ತಿ ಕೋಪಗೊಂಡಾಗ ಆತನ ಕೋಪ ನಿಜವಾಗಿಯೂ ಯಾವುದೋ ಕಾರಣದಿಂದಾಗಿರುತ್ತದೆ ಹಾಗೂ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.
ಪ್ರವಾದಿ(ಸ)ರಷ್ಟು ಶಾಂತ ಹಾಗೂ ಹಸನ್ಮುಖಿಯಾದ ವ್ಯಕ್ತಿ ಬೇರೆ ಇರಲಿಲ್ಲ. ಹಾಗಾಗಿ ಅವರು(ಸ) ಕೋಪಗೊಳ್ಳುವುದು ಬಹಳ ಅಪ ರೂಪವಾಗಿತ್ತು. ಪ್ರವಾದಿ(ಸ) ಸ್ವಂತದ ಹಾಗೂ ಈ ಲೋಕದ ವಿಷಯದಲ್ಲಿ ಎಂದೂ ಕೋಪಗೊಳ್ಳಲಿಲ್ಲ. ಅವರು ಧರ್ಮದ ವಿಷಯದಲ್ಲಿ ಏನಾದರೂ ಉಲ್ಲಂಘನೆಯಾದರೆ ಮಾತ್ರ ಕೋಪಗೊಳ್ಳುತ್ತಿದ್ದರು. ಅವರು ಅಲ್ಲಾಹನಿಗಾಗಿ ಕೋಪಗೊಳ್ಳುತ್ತಿದ್ದ ಕಾರಣ ತನ್ನ ಕೋಪದ ಸಮಯದಲ್ಲಿ ಅಲ್ಲಾಹನು ಸಂತೃಪ್ತಿಗೊಳ್ಳುವ ಕಾರ್ಯಗಳನ್ನು ಮಾತ್ರ ಮಾಡುತ್ತಿದ್ದರು ಅಥವಾ ಬಾಯಿಯಿಂದ ಹೇಳುತ್ತಿದ್ದರು. ಅವರು(ಸ) ಕೋಪಗೊಂಡಾಗ ಅಸಹ್ಯ ಮಾತುಗಳನ್ನು ಹೇಳುತ್ತಿರಲಿಲ್ಲ, ಇತರರನ್ನು ಕೀಳಾಗಿಸುತ್ತಿರಲಿಲ್ಲ. ಅವರ(ಸ) ಕೋಪದಲ್ಲಿಯೂ ಇತರರಿಗೆ ಪಾಠವಿತ್ತು. ಪ್ರವಾದಿ(ಸ) ಯಾವಾಗಲೂ ಪ್ರಾರ್ಥಿಸುತ್ತಿದ್ದರು, “ಓ ಅಲ್ಲಾಹ್, ನಾನು ಸಂತೋಷದಲ್ಲಿರುವಾಗಲೂ ಕೋಪದಲ್ಲಿರುವಾಗಲೂ ಸತ್ಯದ ಮಾತನ್ನು ಆಡಲು ನನಗೆ ಸಹಾಯ ಮಾಡು.”
ಹ. ಆಯಿಶಾ(ರ) ಹಾಗೂ ಇತರ ಸಹಾಬಿಗಳು ಹೇಳುತ್ತಾರೆ, “ಪ್ರವಾದಿ(ಸ) ಒಮ್ಮೆಯೂ ಸ್ವಂತ ಕಾರ್ಯಗಳಿಗಾಗಿ ಕೋಪಗೊಳ್ಳಲಿಲ್ಲ. ಆದರೆ ಅಲ್ಲಾಹನ ಕಾನೂನುಗಳನ್ನು ಉಲ್ಲಂಘಿಸಿದಾಗ, ಅಲ್ಲಾಹನು ವಿಧಿಸಿದ ಮೇರೆಗಳನ್ನು ಮೀರಿದಾಗ, ಅವರು(ಸ) ಕೋಪಗೊಳ್ಳುತ್ತಿದ್ದರು. ಹಾಗೂ ಅವರು(ಸ) ಕೋಪಗೊಳ್ಳುವುದು ಕಾಣಸಿಗುವುದು ಬಹಳ ವಿರಳವಾಗಿತ್ತು.
ಹ. ಉಸಾಮ ಬಿನ್ ಝೈದ್(ರ) ಪ್ರವಾದಿ(ಸ)ರಿಗೆ ಅತಿ ಇಷ್ಟವಾದ ಯುವಕರಾಗಿದ್ದರು. ಅವರು ಹೇಳುತ್ತಾರೆ, “ಒಂದು ಯುದ್ಧದಲ್ಲಿ ನಾನೊಬ್ಬನನ್ನು ಕೊಲ್ಲುವಾಗ ಆತ ಲಾ ಇಲಾಹ ಇಲ್ಲಲ್ಲಾಹ್” ಎಂದು ಹೇಳಿದ. ತನ್ನ ಜೀವವನ್ನು ರಕ್ಷಿಸಲು ಹೀಗೆ ಹೇಳುತ್ತಾನೆಂದು ನಾನು ಭಾವಿಸಿ ಆತನನ್ನು ಕೊಂದೆ. ಹಿಂತಿರುಗಿ ಬಂದು ಈ ಘಟನೆಯನ್ನು ಪ್ರವಾದಿ(ಸ)ರೊಂದಿಗೆ ಹೇಳಿದಾಗ, ಅವರು ಬಹಳ ಬೇಸರ ಹಾಗೂ ಕೋಪಗೊಂಡರು. ಅವರು(ಸ) ಹೇಳಿದರು, “ಓ ಉಸಾಮಾ, ನೀನು ಅವನ ಹೃದಯವನ್ನು ಪರಿಶೀಲಿಸಿದ್ದೀಯಾ?” ಉಸಾಮಾ(ರ) ಹೇಳುತ್ತಾರೆ, ನಾನು ಭಾವಿಸಿದೆ, ನಾನು ಆ ದಿನವೇ ಮುಸ್ಲಿಮ್ ಆಗಿದ್ದರೆ ಎಷ್ಟು ಚೆನ್ನಾಗಿತ್ತು. ಇದರಿಂದ ನಾನು ಹಿಂದೆ ಮಾಡಿದ ಎಲ್ಲ ಪಾಪಗಳೂ ಕ್ಷಮಿಸಲ್ಪಡುತ್ತಿದ್ದವಲ್ಲವೇ?
ಪ್ರವಾದಿ(ಸ) ಕೋಪಗೊಳ್ಳುತ್ತಿದ್ದಾಗ ಎಂದೂ ನಿಯಂತ್ರಣ ತಪ್ಪುತ್ತಿರಲಿಲ್ಲ. ಹೆಚ್ಚಿನ ಸಮಯಗಳಲ್ಲಿ ಅವರ ಮುಖಭಾವ ಮಾತ್ರ ಬದಲಾಗುತ್ತಿತ್ತು. ಹಾಗಾಗಿ ಸಹಾಬಿಗಳಿಗೆ ಪ್ರವಾದಿ(ಸ) ಕೋಪಗೊಂಡುದು ತಿಳಿಯುತ್ತಿತ್ತು. ಕೋಪ ಅವರ ಮುಖದಲ್ಲಿ ಗೋಚರಿಸುತ್ತಿತ್ತು. ಆದರೆ ಕ್ರಿಯೆಯಲ್ಲಿ ಏನೂ ಗೋಚರಿಸುತ್ತಿರಲಿಲ್ಲ.
ಒಮ್ಮೆ ಪ್ರವಾದಿ(ಸ) ಓರ್ವ ಸಹಾಬಿಯ ಮೇಲೆ ಯಾವುದೋ ಕಾರಣಕ್ಕೆ ಕೋಪಗೊಂಡಾಗ ಆ ಕೋಪವನ್ನು ಆ ಸಹಾಬಿ ಹೀಗೆ ವಿವರಿಸುತ್ತಾರೆ, “ನಾನು ಪ್ರವಾದಿ(ಸ)ರ ನಗುವನ್ನು ನೋಡಿದೆ. ಆದರೆ ಆ ನಗು ಅವರು ಕೋಪಗೊಂಡಾಗ ಬೀರುವ ನಗುವಾಗಿತ್ತು. ಕೋಪಗೊಂಡಾಗಲೂ ಆ ನಗುವನ್ನು ನಿಯಂತ್ರಿಸಿ ನಗುತ್ತಿದ್ದರು. ಆದರೆ ಆ ನಗು ಪ್ರವಾದಿ(ಸ) ಕೋಪಗೊಂಡಾಗ ಬೀರುವ ನಗುವೆಂದು ಸಹಾಬಿಗಳಿಗೆ ತಿಳಿಯುತ್ತಿತ್ತು.”
ಪ್ರವಾದಿ(ಸ) ಅಲ್ಲಾಹನ ಮೇರೆಗಳನ್ನು ಮೀರಿದಾಗ ಹಾಗೂ ಧರ್ಮವನ್ನು ಮಲಿನಗೊಳ್ಳುವ ಪ್ರಯತ್ನ ಮಾಡುವಾಗ ಮಾತ್ರ ಕೋಪಗೊಳ್ಳುತ್ತಿದ್ದರು. ಹಾಗೆಯೇ ಪ್ರವಾದಿ(ಸ) ಜನರು ಇತರರನ್ನು ಕೀಳಾಗಿ ಕಾಣುವುದನ್ನು, ಅವಮಾನಿಸುವುದನ್ನು ಸಹಿಸುತ್ತಿರಲಿಲ್ಲ. ಯಾಕೆಂದರೆ ಪ್ರತಿಯೊಬ್ಬರನ್ನೂ ಅವರು(ಸ) ಗೌರವಿಸುತ್ತಿದ್ದರು.
ಒಮ್ಮೆ ಅಬೂದರ್ ಗಿಫಾರಿ(ರ) ಯಾವುದೋ ಕಾರಣಕ್ಕೆ ಹ. ಬಿಲಾಲ್(ರ) ರನ್ನು ಕಪ್ಪು ತಾಯಿಯ ಮಗನೇ ಎಂದು ಕರೆದರು. ಹ. ಬಿಲಾಲ್(ರ) ಪ್ರವಾದಿ(ಸ)ರೊಂದಿಗೆ ಬಂದು ಈ ಬಗ್ಗೆ ದೂರಿದಾಗ ಪ್ರವಾದಿ(ಸ)ರ ಮುಖವರ್ಣ ಕೋಪದಿಂದ ಬದಲಾಯಿತು. ಪ್ರವಾದಿ(ಸ) ಅಬೂದರ್(ರ)ರೊಂದಿಗೆ ಹೇಳಿದರು, “ಓ ಅಬೂದರ‍್ರ್(ರ) ನೀವು ಹ. ಬಿಲಾಲ್(ರ)ರನ್ನು ಅವರ ತಾಯಿಯ ಮೂಲಕ ಅಪಮಾನಿಸಿದ್ದೀರಾ? ನಿಮ್ಮೊಳಗೆ ಅಜ್ಞಾನದ ಅಂಶ ಇನ್ನೂ ಬಾಕಿ ಇದೆ.”
ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಸಹಾಬಿಗಳು ಹ. ಅಬ್ದುಲ್ಲಾ ಬಿನ್ ಮಸ್‌ಊದ್(ರ) ಸಪೂರವಾದ ಕಾಲುಗಳನ್ನು ನೋಡಿ ನಗೆ ಬೀರಿದರು. ಆಗ ಅವರು ಹೇಳಿದರು, “ನೀವು ಈ ಕಾಲುಗಳನ್ನು ನೋಡಿ ನಗುತ್ತಿದ್ದೀರಾ? ಆದರೆ ಈ ಕಾಲುಗಳು ಕಿಯಾಮತ್ ದಿನ ಉಹುದ್ ಬೆಟ್ಟದಷ್ಟು ದೊಡ್ಡದಾಗಿರುವುದು. ಈ ಕಾಲುಗಳು ಅಲ್ಲಾಹನ ಬಳಿ ಗೌರವಾನ್ವಿತ ಕಾಲುಗಳಾಗಿರುವುದು.”
ಹ. ಆಯಿಶಾ(ರ) ಒಂದು ಘಟನೆಯನ್ನು ವಿವರಿಸುತ್ತಾರೆ, ಪ್ರವಾದಿ(ಸ) ಯಾವಾಗಲೂ ಹ. ಖದೀಜ(ರ)ರ ಬಗ್ಗೆ ಮಾತನಾಡುತ್ತಾ ಅವರನ್ನು ಹೊಗಳುತ್ತಾ ಇರುತ್ತಿದ್ದರು. ಹೀಗೆ ಒಮ್ಮೆ ಪ್ರವಾದಿ(ಸ) ಹ. ಖದೀಜ(ರ)ರ ಬಗ್ಗೆ ಪ್ರಸ್ತಾಪಿಸಿದಾಗ ನಾನು ಹೇಳಿದೆ, “ಆ ಮುದುಕಿಯ ಬದಲಿಗೆ ಅಲ್ಲಾಹನು ನಿಮಗೆ ಉತ್ತಮವಾದುದನ್ನು ದಯಪಾಲಿಸಲಿಲ್ಲವೇ?” ಈ ಮಾತನ್ನು ಕೇಳಿದಾಗ, ಪ್ರವಾದಿಯ(ಸ) ಮುಖದ ಬಣ್ಣ ಕೋಪದಿಂದ ಕೆಂಪಾಯಿತು. ಅವರ ಹಣೆಯ ಮೇಲಿನ ನರಗಳು ಗೋಚರಿಸತೊಡಗಿದವು ಹಾಗೂ ಕೂದಲುಗಳು ಎದ್ದುನಿಂತ ಹಾಗೆ ಗೋಚರಿಸಿತು.
ಅವರು(ಸ) ಹೇಳಿದರು, “ಅಲ್ಲಾಹನಾಣೆ, ಅವರಿಗಿಂತ (ಹ. ಖದೀಜಾ(ರ)) ಉತ್ತಮವಾದುದನ್ನು ಅಲ್ಲಾಹನು ನೀಡಲಿಲ್ಲ. ಯಾರೂ ನನ್ನ ಮೇಲೆ ವಿಶ್ವಾಸವಿರಿಸದಾಗ ಆಕೆ ನನ್ನ ಮೇಲೆ ವಿಶ್ವಾಸವಿರಿಸಿದಳು. ಇತರರು ನನ್ನನ್ನು ತಿರಸ್ಕರಿಸಿದಾಗ ಆಕೆ ನನಗಾಗಿ ಖರ್ಚು ಮಾಡಿದಳು. ಅಲ್ಲಾಹನು ಅವಳ ಮೂಲಕ ನನಗೆ ಮಕ್ಕಳನ್ನು ನೀಡಿದನು.
“ನಾನು ಆಗಲೇ ಕ್ಷಮೆ ಯಾಚಿಸಿದೆ. “ಓ ಪ್ರವಾದಿಯವರೇ(ಸ), ನಾನು ಇನ್ನು ಹ. ಖದೀಜ(ರ)ರ ಬಗ್ಗೆ ಏನೂ ಮಾತನಾಡಲಾರೆ ಎಂದೆ.” ಹಾಗೂ ಪ್ರವಾದಿ(ಸ) ನನ್ನನ್ನು ಕ್ಷಮಿಸಿದರು. ಇಲ್ಲಿ ಗಮನಿಸುವ ಅಂಶವೇನೆಂದರೆ ಇದು ಹ. ಆಯಿಶಾ(ರ) ಪ್ರವಾದಿ(ಸ) ಅತಿಯಾಗಿ ಕೋಪಗೊಂಡದ್ದನ್ನು ನೋಡಿದ ಘಟನೆಯಾಗಿತ್ತು. ಆದರೆ ಅಂತಹ ಕೋಪದ ಸಂದರ್ಭದಲ್ಲೂ ಅವರು ಹ. ಆಯಿಶಾ(ರ)ರನ್ನು ಅಪಮಾನಿಸಲಿಲ್ಲ, ಕೀಳಾಗಿಸಲಿಲ್ಲ. ಬದಲಾಗಿ ಹ. ಖದೀಜ(ರ) ಸ್ಥಾನಮಾನವನ್ನು ಉತ್ತರಿಸಿ ಹೇಳಿದರು. ಇದುವೇ ನಮ್ಮ ಪ್ರವಾದಿಯವರ(ಸ) ವಿಶೇಷತೆಯಾಗಿತ್ತು. ಕೋಪಗೊಂಡರೂ ಅವರು ಎಂದೂ ಯಾರನ್ನೂ ಆ ಕೋಪದ ಭರದಲ್ಲಿ ಅವಮಾನಿಸಲಿಲ್ಲ, ಕೆಟ್ಟ ಮಾತು ಹೇಳಲಿಲ್ಲ, ಅವಾಚ್ಯ ಪದಗಳನ್ನು ಉಚ್ಚರಿಸಲಿಲ್ಲ, ಸಂಬಂಧ ಮುರಿಯಲಿಲ್ಲ. ಬದಲಾಗಿ ಆ ಕೋಪದಲ್ಲೂ ಎಲ್ಲರಿಗೆ ಪಾಠವಿತ್ತು.