ಜಮಾಅತೆ ಇಸ್ಲಾಮೀ ಹಿಂದ್‌ನ ‘ನೈತಿಕತೆಯೇ ಸ್ವಾತಂತ್ರ‍್ಯ’ ಎಂಬ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ವಿಶೇಷ ಲೇಖನ
✍️ ಏ.ಕೆ. ಕುಕ್ಕಿಲ
ನೈತಿಕ
ಅನೈತಿಕ
ವರ್ತಮಾನ ಕಾಲದ ಅತ್ಯಂತ ವಿವಾದಾಸ್ಪದ ಪದಗಳಿವು. ವ್ಯಕ್ತಿಯಿಂದ ವ್ಯಕ್ತಿಗೆ ಈ ಎರಡೂ ಪದಗಳ ವ್ಯಾಖ್ಯಾನಗಳು ಇವತ್ತು ಬದಲಾಗುತ್ತಿವೆ. ಮದ್ಯಪಾನವನ್ನು ನೈತಿಕ ಪಟ್ಟಿಯಲ್ಲಿಟ್ಟು ಸಮರ್ಥಿಸುವವರು ಇರುವಂತೆಯೇ ಅನೈತಿಕವೆಂದು ಸಾರಿ ವಿರೋಧಿಸುವವರೂ ಇದ್ದಾರೆ. ಹೆಣ್ಣಿನ ಉಡುಗೆ ತೊಡುಗೆಯ ಬಗ್ಗೆಯೂ ಇಂಥದ್ದೇ ಭಿನ್ನ ನಿಲುವುಗಳಿವೆ. ಅತ್ಯಾಚಾರಕ್ಕೆ ತುಂಡುಡುಗೆಯದ್ದೂ ಕೊಡುಗೆ ಇದೆ ಎಂದು ವಾದಿಸುವವರು ಇರುವಂತೆಯೇ ಎರಡು ವರ್ಷದ ಮಗುವಿನ ಮೇಲೂ ಆಗುತ್ತಿರುವ ಅತ್ಯಾಚಾರಕ್ಕೆ ಯಾವ ಉಡುಗೆ ಕಾರಣ ಎಂದು ಮರು ಪ್ರಶ್ನಿಸುವವರೂ ಇದ್ದಾರೆ. ಸಿನಿಮಾಗಳು ಅನೈತಿಕತೆಯನ್ನು ಪೋಷಿಸುತ್ತಿವೆ ಎಂಬ ವಾದ ಒಂದೆಡೆಯಾದರೆ, ನೈತಿಕ-ಅನೈತಿಕವು ನೋಡುವ ಕಣ್ಣಿನಲ್ಲಿದೆ ಎಂಬ ವಾದ ಇನ್ನೊಂದೆಡೆ. ಡಿಕ್ಷನರಿಯ ಪ್ರಕಾರ ನೈತಿಕ ಅಂದರೆ ಸದಾಚಾರ, ಸುನೀತಿ ಎಂದು ಅರ್ಥ. ಅನೈತಿಕ ಅಂದರೆ ದುರಾಚಾರ, ದುರ್ನೀತಿ ಎಂದು ಅರ್ಥ. ಅಂದರೆ,
ಈ ಎರಡೂ ಪದಗಳು ಅತ್ಯಂತ ವಿಶಾಲಾರ್ಥವನ್ನು ಹೊಂದಿವೆ. ಸದಾಚಾರ ಎಂಬುದಕ್ಕೆ ನಿರ್ದಿಷ್ಟ ಪರಿಧಿಯೇನೂ ಇಲ್ಲ. ಉತ್ತಮವಾದ ಎಲ್ಲ ಆಚಾರಗಳೂ ಸದಾಚಾರಗಳೇ. ಕೆಟ್ಟದಾದ ಎಲ್ಲ ಆಚಾರಗಳೂ ದುರಾಚಾರಗಳೇ. ಮಾವಿನ ಮರದಿಂದ ಬಿದ್ದ ಹಣ್ಣನ್ನು ಮಾಲಿಕರ ಅನುಮತಿ ಇಲ್ಲದೇ ಹೆಕ್ಕಿ ತಿನ್ನುವುದು ದುರಾಚಾರವೇ. ಹಾಗೆಯೇ, ರಸ್ತೆಯಲ್ಲಿ ಬಿದ್ದಿರುವ ಮುಳ್ಳನ್ನೋ ಕಲ್ಲನ್ನೋ ಎತ್ತಿ ಬಿಸಾಕುವುದು ಸದಾಚಾರವೇ. ಆದರೆ, ಅನೈತಿಕತೆ ಎಂಬ ಪದ ಕೇಳಿದ ತಕ್ಷಣ ನಮ್ಮಲ್ಲಿ ಈ ವಿಶಾಲಾರ್ಥದ ಭಾವ ಮೂಡುತ್ತದೆಯೇ ಅಥವಾ ನಿರ್ದಿಷ್ಟ ವಿಷಯದ ಸುತ್ತ ನಿಮ್ಮ ಭಾವ ಗಿರಕಿ ಹೊಡೆಯುತ್ತದೆಯೇ? ಭ್ರಷ್ಟಾಚಾರವೂ ಅನೈತಿಕವೇ. ಸುಳ್ಳು ಹೇಳುವುದೂ ಅನೈತಿಕವೇ. ಮೋಸ ಮಾಡುವುದು, ಪರೀಕ್ಷೆಯಲ್ಲಿ ನಕಲು ಹೊಡೆಯುವುದು, ನಿಂದಿಸುವುದು.. ಎಲ್ಲವೂ ಅನೈತಿಕವೇ. ಆದರೆ, ಸಾಮಾನ್ಯವಾಗಿ ಅನೈತಿಕತೆ ಎಂಬ ಪದವನ್ನು ನಾವು ಇವುಗಳಿಗೆ ಉಪಯೋಗಿಸುವುದೇ ಇಲ್ಲ ಅಥವಾ ಅನೈತಿಕತೆ ಎಂದು ಕೇಳಿದಾಗ ಇವಾವುವೂ ನೆನಪಾಗುವುದೇ ಇಲ್ಲ. ಈ ವರ್ತಮಾನ ಕಾಲದಲ್ಲಿ ಅನೈತಿಕತೆ ಅಂದರೆ, ಹೆಣ್ಣು ಮತ್ತು ಗಂಡು ನೈತಿಕವಲ್ಲದ ರೀತಿಯಲ್ಲಿ ಸೇರಿಕೊಳ್ಳುವುದು. ನೈತಿಕ ಪೊಲೀಸ್‌ಗಿರಿ ಎಂಬ ಪದವನ್ನೇ ಈ ಸಮಾಜ ಆವಿಷ್ಕರಿಸಿ ಬೇಕಾದಾಗಲೆಲ್ಲ ಬಳಸುತ್ತಲೂ ಇವೆ. ಅಷ್ಟಕ್ಕೂ, ಈ ನೈತಿಕ ಪೊಲೀಸ್‌ಗಿರಿ ಎಂಬುದು ಭ್ರಷ್ಟಾಚಾರಕ್ಕೋ ಸುಳ್ಳು ಹೇಳುವುದಕ್ಕೋ ವಂಚನೆ ಮಾಡುವುದಕ್ಕೋ ಬಳಕೆ ಆಗುತ್ತಿಲ್ಲ. ಹೆಣ್ಣು ಮತ್ತು ಗಂಡು ನಡುವಿನ ಸಂಬಂಧವನ್ನು ವಿರೋಧಿಸುವ ನಿರ್ದಿಷ್ಟ ಗುಂಪಿಗೆ ಈ ಪದ ಪ್ರಯೋಗವಾಗುತ್ತಿದೆ. ಅಂದಹಾಗೆ,
ಯಾಕೆ ಹೀಗೆ ಎಂಬ ಪ್ರಶ್ನೆ ಉದ್ಭವಿಸಬಹುದು.
ಇದಕ್ಕೆ ಕಾರಣ, ಪ್ರಚಲಿತ ಸಾಮಾಜಿಕ ಪರಿಸ್ಥಿತಿ. ಈ ದೇಶದಲ್ಲಿ ಪ್ರತಿದಿನ 86ರಷ್ಟು ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ ಅನ್ನುವುದು ಕೇಂದ್ರ ಸರಕಾರವೇ ಬಿಡುಗಡೆಗೊಳಿಸಿರುವ ಅಧಿಕೃತ ಮಾಹಿತಿ. ಇದು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು ಮಾತ್ರ. ಆದರೆ ಪೊಲೀಸ್ ಠಾಣೆಯ ವರೆಗೂ ಹೋಗದೇ ರಾಜಿಯಲ್ಲೇ ಮುಗಿಯುವ ಅಥವಾ ಯಾರಿಗೂ ಹೇಳದೇ ಮುಚ್ಚಿಡಲಾಗುವ ಅತ್ಯಾಚಾರ ಪ್ರಕರಣಗಳು ಈ 86ಕ್ಕಿಂತ ಎಷ್ಟೋ ಪಟ್ಟು ಅಧಿಕ ಇರಬಹುದು ಎಂಬುದಾಗಿ ತಜ್ಞರೇ ಹೇಳುತ್ತಿದ್ದಾರೆ. ಇಂಥ ಅತ್ಯಾಚಾರ ಪ್ರಕರಣಗಳಲ್ಲಿ ಅಲ್ಲೊಂದು-ಇಲ್ಲೊಂದು ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗುತ್ತವೆ. ಅತ್ಯಾಚಾರ ಎಂಬುದು ಪ್ರತಿದಿನದ ಸಂಕಟವಾಗಿರುವುದರಿಂದ ಅದಕ್ಕೆ ಕಾರಣವಾಗುವ ಅಂಶಗಳೂ ಸಹಜವಾಗಿಯೇ ಚರ್ಚೆಗೂ ಒಳಗಾಗುತ್ತವೆ. ಈ ಅತ್ಯಾಚಾರದ ಹೊರತಾಗಿ ಲೈಂಗಿಕ ಕಿರುಕುಳ ಎಂಬ ಒಂದು ಕ್ಷೇತ್ರ ಬೇರೆಯೇ ಇದೆ. ಇವುಗಳಲ್ಲಿ ಹೆಚ್ಚಿನವು ಸುದ್ದಿಯೇ ಆಗುವುದಿಲ್ಲ. ಹೀಗೆ ಪ್ರತಿದಿನ ಇವುಗಳನ್ನು ಕೇಳಿ ಕೇಳಿ ಅಭ್ಯಾಸವಾಗಿರುವ ಜನರು ನಿಧಾನಕ್ಕೆ ಈ ಅನೈತಿಕತೆ ಅನ್ನುವ ಪದವನ್ನು ಸ್ತ್ರೀ ಮತ್ತು ಪುರುಷರ ನೈತಿಕವಲ್ಲದ ಸೇರುವಿಕೆಗೆ ಮಾತ್ರ ಸೀಮಿತಗೊಳಿಸಿದಂತಿದೆ. ‘ಅನೈತಿಕ ಚಟು ವಟಿಕೆ: ನಾಲ್ವರ ಬಂಧನ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗುವ ಸುದ್ದಿಯನ್ನು ಸುದ್ದಿ ಓದದೆಯೇ ಇವತ್ತಿನ ಸಮಾಜ ಅರ್ಥ ಮಾಡಿಕೊಳ್ಳುವಷ್ಟು ಈ ಪದದ ಅರ್ಥ ಸೀಮಿತವಾಗಿ ಬಿಟ್ಟಿದೆ. ಈ ಕಾರಣದಿಂದಲೇ,
ನೈತಿಕವಲ್ಲದ ಇತರ ಚಟುವಟಿಕೆಗಳತ್ತ ಸಾರ್ವಜನಿಕ ಗಮನವೂ ಕಡಿಮೆಯಾಗಿದೆ. ಭ್ರಷ್ಟಾಚಾರದಂಥ ಹತ್ತು-ಹಲವು ಚಟುವಟಿಕೆಗಳು ಗಂಭೀರ ಚರ್ಚಾ ಪರಿಧಿಯಿಂದ ಹೊರಬಿದ್ದು, ಅನಾಹುತಕಾರಿಯಾಗಿ ಮಾರ್ಪಟ್ಟಿದೆ. ಭ್ರಷ್ಟಾಚಾರ ಅಂದಾಕ್ಷಣ, ರಾಜಕಾರಣಿಗಳ ಕಡೆಗೆ ನೋಡಬೇಕಾಗಿಲ್ಲ. ತೀರಾ ತೀರಾ ತಳಮಟ್ಟದಲ್ಲೇ ಇದಕ್ಕೆ ಅಸ್ತಿತ್ವ ಇದೆ. ಇದನ್ನು ಅನೈತಿಕ ವ್ಯವಹಾರವಾಗಿ ಕಾಣದಷ್ಟು ಸಮಾಜ ಸಹಜವಾಗಿ ಸ್ವೀಕರಿಸುತ್ತಲೂ ಇದೆ. ಸುಳ್ಳು ಎಂಬುದಕ್ಕೆ ನೈತಿಕ ಮಾನ್ಯತೆಯೇ ದಕ್ಕಿಬಿಟ್ಟಿದೆ. ಸುಳ್ಳು ಹೇಳುವುದನ್ನು ಅಪರಾಧವಾಗಿ ಕಾಣುವ ಮನೋಭಾವವೇ ಹೊರಟು ಹೋಗುತ್ತಿದೆ. ಅಪಪ್ರಚಾರ, ಅನ್ಯಾಯ, ಅಕ್ರಮ, ಅವಹೇಳನ… ಮುಂತಾದ ಎಲ್ಲ ಬಗೆಯ ಅನೈತಿಕ ನಡವಳಿಕೆಗಳೂ ನೈತಿಕ ಮಾನ್ಯತೆಯನ್ನು ಪಡಕೊಳ್ಳುತ್ತಾ ಬದುಕಿನ ಭಾಗವಾಗುತ್ತಲೂ ಇದೆ. ಆದರೂ,
ಅತ್ಯಾಚಾರ, ಲೈಂಗಿಕ ಕಿರುಕುಳಗಳ ಭರಾಟೆಯಲ್ಲಿ ಇವಾವುವೂ ಚರ್ಚೆಗೇ ಒಳಗಾಗುತ್ತಿಲ್ಲ ಅಥವಾ ಅವುಗಳ ಮುಂದೆ ಇವುಗಳನ್ನು ಚರ್ಚಿಸುವುದು ಸಪ್ಪೆ ಎಂಬ ಭಾವ ಇದಕ್ಕೆ ಕಾರಣವೋ ಗೊತ್ತಿಲ್ಲ. ನಿಜವಾಗಿ, ಒಂದು ಸಮಾಜ ಆರೋಗ್ಯ ಪೂರ್ಣವಾಗಿ ಗುರುತಿಸಿಕೊಳ್ಳುವುದು ಆ ಸಮಾಜದಲ್ಲಿ ನೈತಿಕ ಮೌಲ್ಯಗಳು ಎಷ್ಟು ಪ್ರಮಾಣದಲ್ಲಿ ಅಸ್ತಿತ್ವದಲ್ಲಿವೆ ಎಂಬುದರ ಆಧಾರದಲ್ಲಿ. ಮಹಿಳಾ ಸುರಕ್ಷಿತತೆ ಅದರ ಒಂದು ಭಾಗವೇ ಹೊರತು ಅದುವೇ ಎಲ್ಲವೂ ಅಲ್ಲ.
ಪವಿತ್ರ ಕುರ್‌ಆನ್ ಈ ಕುರಿತಂತೆ ವಿಸ್ತೃತವಾಗಿ ಮತ್ತು ವಿಶಾಲಾರ್ಥದಲ್ಲಿ ಚರ್ಚಿಸಿದೆ. ಆರೋಗ್ಯಪೂರ್ಣ ಸಮಾಜವೊಂದಕ್ಕೆ ಏನೆಲ್ಲ ಅಗತ್ಯ ಎಂಬುದನ್ನು ಅದು ಸ್ಪಷ್ಟವಾಗಿ ಹೇಳಿದೆ;
1. ಉದ್ಧಟತನದಿಂದ ಮಾತಾಡಬೇಡಿ. (3: 159),
2. ಕೋಪವನ್ನು ನಿಯಂತ್ರಿಸಿಕೊಳ್ಳಿ (3: 134),
3. ಇತರರೊಂದಿಗೆ ಉತ್ತಮ ರೀತಿಯಿಂದ ನಡಕೊಳ್ಳಿ (4: 36), 4. ದುರಹಂಕಾರ ಮತ್ತು ಆತ್ಮಸ್ತುತಿ ಮಾಡಿಕೊಳ್ಳಬೇಡಿ (4: 36), 5. ಜಿಪುಣತೆ ಸಲ್ಲದು (4: 37), 6. ಸೊಕ್ಕಿನ ನಡವಳಿಕೆ ಸಲ್ಲದು (7: 13), 7. ಇತರರ ತಪ್ಪುಗಳನ್ನು ಕ್ಷಮಿಸಿ (7: 199), 8. ಜನರೊಂದಿಗೆ ನಯವಾಗಿ ಮಾತನಾಡಿ (20:44), 9. ನಿಮ್ಮ ದನಿಯನ್ನು ತಗ್ಗಿಸಿ ಮಾತನಾಡಿ (31:19), 10. ಇತರರನ್ನು ಅಪಹಾಸ್ಯ ಮಾಡಬೇಡಿ (49:11), 11. ಹೆತ್ತವರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸೇವೆ ಮಾಡಿ (17:23), 12. ಹೆತ್ತವರ ಬಗ್ಗೆ ‘ಛೆ’ ಎಂಬ ಉದ್ಘಾರವ ನ್ನೂ ಹೊರಡಿಸದಿರಿ (17:23), 13. ಸಾಲದ ವ್ಯವಹಾರ ನಡೆಸುವಾಗ ಬರೆದಿಟ್ಟುಕೊಳ್ಳಿ (2:282), 14. ಯಾರನ್ನೂ ಅಂಧವಾಗಿ ಅನುಸರಿಸಬೇಡಿ (2:170), 15. ಬಡ್ಡಿ ತಿನ್ನಬೇಡಿ (2:275), 16. ಭ್ರಷ್ಟಾಚಾರದಲ್ಲಿ ಭಾಗಿಯಾಗಬೇಡಿ (2:188), 17. ವಾಗ್ದಾನವನ್ನು ಉಲ್ಲಂಘಿಸಬೇಡಿ (2:177), 18. ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಿ (2:283), 19. ಸತ್ಯವನ್ನು ಸುಳ್ಳಿನೊಂದಿಗೆ ಬೆರೆಸಬೇಡಿ (2:242), 20. ಅರ್ಹತೆಯ ಮೇಲೆ ನೇಮಕ ಮಾಡಿ, ನ್ಯಾಯದಂತೆಯೇ ತೀರ್ಪು ನೀಡಿ (4:58), 21. ನ್ಯಾಯದ ಪರ ದೃಢವಾಗಿ ನಿಲ್ಲಿರಿ (4:135), 22. ಮೃತ ವ್ಯಕ್ತಿಯ ಸಂಪತ್ತು ಆತನ ಕುಟುಂಬದಲ್ಲಿ ವಿತರಿಸಬೇಕು (4:7), 23. ಅನಾಥರ ಸೊತ್ತನ್ನು ಕಬಳಿಸಬೇಡಿ (4:10), 24. ಒಬ್ಬರ ಸಂಪತ್ತನ್ನು ಇನ್ನೊಬ್ಬರು ಅನುಚಿತ ರೀತಿಯಿಂದ ಕಬಳಿಸಬಾರದು (4:29), 25. ಅನಾಥರನ್ನು ರಕ್ಷಿಸಿ (2:220), 26. ಜನರ ನಡುವಿನ ಸಮಸ್ಯೆಯನ್ನು ಸಂಧಾನದ ಮೂಲಕ ಬಗೆಹರಿಸಿ (4:9), 27. ಸಂದೇಹಗಳಿಂದ ದೂರ ನಿಲ್ಲಿ (49:12), 28. ಇತರರ ಬಗ್ಗೆ ದೂಷಣೆ ಮಾಡಬೇಡಿ (49:12), 29. ಸಂಪತ್ತನ್ನು ಸೇವೆಗಾಗಿ ಖರ್ಚು ಮಾಡಿ (57:7), 30. ಬಡವರಿಗೆ ಉಣಿಸುವುದನ್ನು ಪ್ರೋತ್ಸಾಹಿಸಿ (107:3), 31. ಹಣವನ್ನು ಲೆಕ್ಕಾಚಾರವಿಲ್ಲದೆ ಖರ್ಚು ಮಾಡಬೇಡಿ (17:29), 32. ಅತಿಥಿಯನ್ನು ಗೌರವಿಸಿ (51:27), 33. ನೀವು ಏನನ್ನು ಜನರೊಂದಿಗೆ ಹೇಳುತ್ತೀರೋ ಮೊದಲು ನೀವು ಅದನ್ನು ಪಾಲಿಸಿ (2:44), 34. ಯಾರು ನಿಮ್ಮೊಂದಿಗೆ ಹೋರಾಡುತ್ತಾರೋ ಅವರೊಂದಿಗೆ ಮಾತ್ರ ಹೋರಾಡಿ (2:190), 35. ಎರಡು ವರ್ಷಗಳ ವರೆಗೆ ನಿಮ್ಮ ಮಗುವಿಗೆ ಎದೆಹಾಲು ಉಣಿಸಿ (2:223), 36. ವ್ಯಭಿಚಾರದ ಹತ್ತಿರವೂ ಸುಳಿಯಬೇಡಿ (17:32), 37. ಪುರುಷ ಮತ್ತು ಸ್ತ್ರೀಯ ಕರ್ಮಗಳಿಗೆ ಸಮಾನವಾದ ಪ್ರತಿಫಲವಿದೆ (3:195), 38. ಪರಸ್ಪರ ಹತ್ಯೆ ನಡೆಸದಿರಿ (4:92), 39. ಅಪ್ರಾಮಾಣಿಕರ ಪರವಾಗಿ ವಾದಿಸಬೇಡಿ (4:105), 41. ಒಳಿತಿನ ವಿಷಯದಲ್ಲಿ ಎಲ್ಲರೊಂದಿಗೆ ಸಹಕರಿಸಿ, ಕೆಡುಕಿನ ವಿಷಯದಲ್ಲಿ ಯಾರೊಂದಿಗೂ ಸಹಕರಿಸಬೇಡಿ (5:2), 42. ರಕ್ತಸಂಬಂಧಿಗಳ ಜೊತೆ ವಿವಾಹ ಮಾಡಿಕೊಳ್ಳಬೇಡಿ (4:23), 43. ಬಹುಮತವು ಸತ್ಯವನ್ನು ನಿರ್ಣಯಿಸುವುದಕ್ಕೆ ಮಾನದಂಡವಲ್ಲ (6:116), 44. ಪಾಪ ಮತ್ತು ಕಾನೂನುಬಾಹಿರ ಕೃತ್ಯಗಳ ವಿರುದ್ಧ ಹೋರಾಡಿ (5:63), 45. ಅನುಮತಿ ಇಲ್ಲದೆ ಹೆತ್ತವರ ಕೋಣೆ ಪ್ರವೇಶಿಸಬೇಡಿ (24:58), 46. ಮದ್ಯಪಾನ ಮಾಡಬೇಡಿ, ಜೂಜಾಡಬೇಡಿ (5:90), 47. ಇತರರ ಆರಾಧ್ಯರನ್ನು ನಿಂದಿಸಬೇಡಿ (6:108), 48. ಅಳತೆ-ತೂಕದಲ್ಲಿ ವಂಚಿಸಬೇಡಿ (6:152), 49. ಉಣ್ಣಿರಿ, ಕುಡಿಯಿರಿ, ಆದರೆ ಮಿತಿಮೀರಬೇಡಿ (7:31), 50. ರಕ್ಷಣೆ ಕೋರಿ ಬರುವವರಿಗೆ ರಕ್ಷಣೆ ಒದಗಿಸಿ (9:6), 51. ನಿಮ್ಮ ಪಾಪಕ್ಕೆ ನೀವೇ ಜವಾಬ್ದಾರರು (17:13), 52. ಹಸಿವಿನ ಭೀತಿಯಿಂದ ಮಕ್ಕಳ ಹತ್ಯೆ ಮಾಡಬೇಡಿ (17:31), 53. ಅನಗತ್ಯ ಕೆಲಸಗಳಿಂದ ದೂರ ನಿಲ್ಲಿ (23:3), 54. ಒಳಿತನ್ನು ಆದೇಶಿಸಿ, ಕೆಡುಕಿನಿಂದ ದೂರ ನಿಲ್ಲಿ (31:17), 55. ಮಹಿಳೆಯರು ಸೌಂದರ್ಯ ಪ್ರದರ್ಶನ ಮಾಡದಿರಲಿ. 56. ಕೆಡುಕನ್ನು ಒಳಿತಿನಿಂದ ಎದುರಿಸಿ (41:34), 57. ಯಾರಲ್ಲಿ ಹೆಚ್ಚು ಒಳಿತು ಇದೆಯೋ ಅವರೇ ಅತ್ಯುತ್ತಮರು (49:13), 58. ಇತರ ಧರ್ಮೀಯರೊಂದಿಗೆ ಸೌಜನ್ಯದಿಂದ ನಡಕೊಳ್ಳಿ (60:8). ನಿಜವಾಗಿ,
ವರ್ತಮಾನ ಕಾಲದ ದೊಡ್ಡ ದುರಂತ ಏನೆಂದರೆ, ಮನುಷ್ಯನ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಇಂಥ ಮೌಲ್ಯಗಳೇ ಕಾಣೆಯಾಗಿವೆ. ಸತ್ಯ, ನ್ಯಾಯ, ಪ್ರಾಮಾಣಿಕತೆ, ಸಭ್ಯತೆ, ಸಜ್ಜನಿಕೆಗಳನ್ನೆಲ್ಲ ಕೆಲಸಕ್ಕೆ ಬಾರದ ವಿಷಯಗಳಾಗಿ ಆಧುನಿಕ ಮಾನವ ಪರಿಗಣಿಸುತ್ತಿದ್ದಾನೆ. ಹಣ ಮಾಡಬೇಕು ಮತ್ತು ಬಯಸಿದ್ದನ್ನು ಅನುಭವಿಸುತ್ತಾ ಸುಖವಾಗಿರಬೇಕು ಎಂಬುದೇ ಮೌಲ್ಯವಾಗಿ ಬಿಟ್ಟಿದೆ. ಧರ್ಮಾತೀತವಾಗಿ ಜನರು ಈ ಹೊಸ ‘ಧರ್ಮ’ಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹೊಣೆಗಾರಿಕೆಗಳೇ ಇಲ್ಲದ ಮತ್ತು ತೋಚಿದಂತೆ ಬದುಕಬಹುದಾದ ಈ ‘ಧರ್ಮ’ ಜನಪ್ರಿಯವೂ ಆಗುತ್ತಿದೆ. ಈ ಬಗ್ಗೆ ಗಂಭೀರ ಅವಲೋಕನವೊಂದು ಪ್ರತಿ ಮನೆಮನೆಯಲ್ಲೂ ನಡೆಯಲೇಬೇಕು.
ಈ ಸಮಾಜದಲ್ಲಿ ಹೆಣ್ಣು ಮಾತ್ರ ಅಸುರಕ್ಷಿತವಾಗಿರುವುದಲ್ಲ. ಎಲ್ಲ ಬಗೆಯ ಮೌಲ್ಯಗಳೂ ಅಸುರಕ್ಷಿತವಾಗಿವೆ. ಇಂಥ ಸಮಾಜದಲ್ಲಿ ಹೆಣ್ಣನ್ನು ಸುರಕ್ಷಿತಗೊಳಿಸುವುದರಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ಸೃಷ್ಟಿಯಾಗಲು ಸಾಧ್ಯವಿಲ್ಲ. ಹೆಣ್ಣಿಗೆ ಈ ಸಮಾಜವನ್ನು ಸುರಕ್ಷಿತಗೊಳಿಸುವುದಕ್ಕೆ ಪೂರಕ ಪ್ರಯತ್ನಗಳನ್ನು ನಡೆಸುವುದರ ಜೊತೆಗೇ ಒಟ್ಟು ಸಮಾಜದಲ್ಲಿ ನೈತಿಕ ಮೌಲ್ಯಗಳು ಪಾಲನೆಯಾಗುವಂತೆ ಮಾಡುವುದಕ್ಕಾಗಿ ಎಳವೆಯಿಂದಲೇ ಮಕ್ಕಳಿಗೆ ತರಬೇತಿ ನೀಡತೊಡಗಬೇಕು. ಯಾವ ಕಾರಣಕ್ಕೂ ಭ್ರಷ್ಟಾಚಾರಿ ಆಗಬಾರದು, ಸುಳ್ಳು ಹೇಳಬಾರದು, ವಂಚನೆ ಮಾಡಬಾರದು, ಇತರ ಧರ್ಮಗಳನ್ನು ನಿಂದಿಸಬಾರದು, ಹೆಣ್ಣನ್ನು ಕೀಳಾಗಿ ಕಾಣಬಾರದು, ಮದ್ಯಪಾನ ಮಾಡಬಾರದು, ಸುಳ್ಳಿಗೆ ಸಾಕ್ಷ್ಯ ನಿಲ್ಲಬಾರದು, ಅನೈತಿಕವಾದ ಯಾವುದೇ ಕೃತ್ಯದಲ್ಲೂ ಭಾಗಿಯಾಗಬಾರದು… ಎಂದು ಮುಂತಾಗಿ ಮಕ್ಕಳಲ್ಲಿ ಮೌಲ್ಯ ಪ್ರಜ್ಞೆಯನ್ನು ಪ್ರತಿ ಹೆತ್ತವರೂ ಮೂಡಿಸಬೇಕು. ಅಂದಹಾಗೆ,
ನೈತಿಕತೆ ಮತ್ತು ಅನೈತಿಕತೆಯ ವ್ಯಾಖ್ಯಾನವೇ ಬದಲಾಗಿರುವ ಮತ್ತು ತಡೆರಹಿತ ವ್ಯಕ್ತಿ ಸ್ವಾತಂತ್ರ‍್ಯ ಲಭ್ಯವಾಗಿರುವ ಈ ದಿನಗಳಲ್ಲಿ ಮೌಲ್ಯ ಪ್ರಜ್ಞೆಯೇ ಚಿಂದಿಯಾಗಬಹುದಾದ ಅಪಾಯವೂ ಇದೆ. ಆದ್ದರಿಂದ ಹೆಣ್ಣೂ ಸಹಿತ ಒಟ್ಟು ಮೌಲ್ಯಗಳನ್ನೇ ಸುರಕ್ಷಿತಗೊಳಿಸುವತ್ತ ಗಮನ ಹರಿಸಬೇಕಿದೆ.