✍️ ಆಯಿಫ ಅಬ್ದುಲ್ಲಾಹ್, ರಿಯಾದ್
ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ ಧರ್ಮವು ವಿವಾಹವನ್ನು ಬಲವಾಗಿ ಪ್ರತಿಪಾದಿಸುತ್ತದೆ. ಗಂಡ, ಹೆಂಡತಿ ಕುಟುಂಬ ವ್ಯವಸ್ಥೆಯ ಬುನಾದಿಗಳು. ಆದಿಮಾತಾಪಿತ ಆದಮ್, ಹವ್ವರಿಂದ ಪ್ರಾರಂಭವಾದ ಇಸ್ಲಾಮಿ ಕುಟುಂಬ ವ್ಯವಸ್ಥೆಯು ಇಂದಿಗೂ ಮುಂದುವರಿದಿದೆ. ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಕುಟುಂಬ ವ್ಯವಸ್ಥೆಯು ಕೆಲವೊಂದು ಬದ್ಧತೆಗಳನ್ನು ಪೂರೈಸಬೇಕೆಂದು ಇಸ್ಲಾಂ ಬಯಸುತ್ತದೆ.
ಕುಟುಂಬವೆಂದರೆ ಕೇವಲ ಮಾನವ ಜಾತಿಯ ಸಂತಾನವೃದ್ಧಿಗೆ ಪೂರಕವಾದ ವ್ಯವಸ್ಥೆಯಲ್ಲ. ಆದರೂ ಜನಾಂಗದ ಸಂರಕ್ಷಣೆ ಮತ್ತು ಮುಂದುವರಿಯುವಿಕೆ ಅದರ ಉದ್ದೇಶಗಳಲ್ಲಿ ಒಂದಾಗಿದೆ. ಹಾಗೆ ತಕ್ವ, ನೈತಿಕತೆಯ ಸಂರಕ್ಷಣೆ, ಸಾಮರಸ್ಯ, ನೆಮ್ಮದಿ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿರತೆ, ಪ್ರೀತಿ ಮತ್ತು ದಯೆ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ… ಇವು ಕುಟುಂಬ ವ್ಯವಸ್ಥೆಯ ಕೆಲವೊಂದು ಉದ್ದೇಶಗಳು..
ಪವಿತ್ರ ಕುರ್‌ಆನ್‌ನ ಅನ್ನಿಸಾ ಅಧ್ಯಾಯದ 34ನೇ ಸೂಕ್ತದಲ್ಲಿ ಹೇಳಲಾಗಿದೆ, “ಅರ್-ರಿಜಾಲು ಕವ್ವಾಮೂನಾ ಅಲನ್ ನಿಸಾ”- “ಪುರುಷರು ಮಹಿಳೆಯರ ಮೇಲ್ವಿಚಾರಕರು..” ವಾಸ್ತವದಲ್ಲಿ ಕವ್ವಾಮ್ ಎಂದರೆ ತನ್ನ ಕುಟುಂಬದಲ್ಲಿ ತನ್ನ ಅಧೀನಕ್ಕೊಳಪಟ್ಟ ಮಹಿಳೆಯರನ್ನು ರಕ್ಷಿಸುವವನು ಮತ್ತು ಮೇಲ್ವಿಚಾರಣೆ ನಡೆಸುವವನು. ಕವ್ವಾಮ್ ಎಂದರೆ ಮಹಿಳೆಯ ಮೇಲಿನ ಪುರುಷನ ಆಧಿಪತ್ಯದ ಹೆಸರಲ್ಲ. ಬದಲಾಗಿ ಆಕೆಯ ವಲಿ ಅಥವಾ ರಕ್ಷಕನಾಗಿದ್ದಾನೆ. ಇಹಲೋಕದಲ್ಲೂ ಪರಲೋಕದಲ್ಲೂ ತನ್ನ ಕುಟುಂಬದ ಒಳಿತನ್ನು ಖಚಿತಪಡಿಸುವುದಾಗಿದೆ ವಲಿಯ ಗುರಿ. ಕುಟುಂಬ ವ್ಯವಸ್ಥೆಯಲ್ಲಿ ತಂದೆ, ಗಂಡ, ಮಗ, ತಂದೆಯ ಸಹೋದರರು, ಅಜ್ಜಂದಿರು ಹೆಣ್ಣಿನ ಪಾಲಿನ ಕವ್ವಾಮ್‌ನ ಸ್ಥಾನವನ್ನು ತುಂಬುತ್ತಾರೆ.
ಇಸ್ಲಾಮಿ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಹೆಚ್ಚಿನ ಹೊರೆಗಳಿಂದ ಮುಕ್ತಳು ಅದರಲ್ಲೂ ಆರ್ಥಿಕ ಹೊರೆಯಿಂದಂತೂ ಸಂಪೂರ್ಣ ಮುಕ್ತಳು. ಆಕೆಯ ಲಾಲನೆ ಪಾಲನೆ, ವಿವಾಹ, ವಿದ್ಯಾಭ್ಯಾಸ, ಜೀವನಾಧಾರಗಳೆಲ್ಲವೂ ಕವ್ವಾಮ್‌ನ ಜವಾಬ್ದಾರಿಯಾಗಿದೆ. ಹಾಗಾಗಿ ಇಸ್ಲಾಮೀ ಕುಟುಂಬ ವ್ಯವಸ್ಥೆಯು ಕುಟುಂಬದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಪುರುಷನಿಗೆ ವಹಿಸಿದೆ. ಇದು ನೈತಿಕ ಹೊಣೆಗಾರಿಕೆ ಮಾತ್ರವಲ್ಲ ಕಾನೂನು ಬಾಧ್ಯತೆಯೂ ಹೌದು. ಮಹಿಳೆ ತನ್ನ ಪಾಲಿನ ಗಳಿಕೆಯನ್ನು ತನ್ನ ಇಚ್ಛೆಯಿಂದ ಮಾತ್ರ ಕುಟುಂಬ ನಿರ್ವಹಣೆಗೆ ನೀಡಬಹುದೇ ಹೊರತು ಆಕೆಯ ಮೇಲೆ ಯಾವುದೇ ಬದ್ಧತೆಗಳಿಲ್ಲ. ಆದರೆ ಕುಟುಂಬದ ಯೋಗಕ್ಷೇಮ ಮತ್ತು ಮನೆಯ ಆರೈಕೆ ಜವಾಬ್ದಾರಿಯು ಮನೆಯೊಡತಿಯದ್ದಾಗಿದೆ ಮತ್ತು ಆಕೆ ಸಲಹೆ ಅಭಿಪ್ರಾಯಗಳನ್ನು ನೀಡಲು ಸ್ವತಂತ್ರಳು. ಗಂಡನ ಸಂತೋಷ ಮತ್ತು ಅವರ ಮಕ್ಕಳ ದೈಹಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಮುಸ್ಲಿಂ ಮಹಿಳೆಯ ಪಾತ್ರ ಬಹುಮುಖ್ಯವಾಗಿದೆ.
ಪ್ರವಾದಿ(ಸ) ಅವರ ಕುಟುಂಬ ಜೀವನ ಅನುಕರಣಾ ಯೋಗ್ಯವಾಗಿದೆ. ಪ್ರವಾದಿಯವರು(ಸ) ಉತ್ತಮ ಅನುಕರಣೀಯ ಕೌಟುಂಬಿಕ ವ್ಯಕ್ತಿಯಾಗಿದ್ದರು. ಅವರು ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಪ್ರೀತಿಯ ಪತಿ, ತಂದೆ ಮತ್ತು ಅಜ್ಜನಾಗಿದ್ದರು. ಗಂಡ ಮತ್ತು ಹೆಂಡತಿಯ ನಡುವಿನ ಆರೋಗ್ಯಕರ ಸಂಬಂಧವು ಯಶಸ್ವಿ ದಾಂಪತ್ಯ ಮತ್ತು ಆನಂದದಾಯಕ ಕುಟುಂಬಕ್ಕೆ ಕೀಲಿಕೈಯಾಗಿದೆ.
ದಾಂಪತ್ಯದಲ್ಲಿ ನೆಮ್ಮದಿಯ ನೆಲೆಯನ್ನು ಪಡೆಯಲು, ಪತಿ-ಪತ್ನಿಯರ ನಡುವೆ ಪರಸ್ಪರ ಪ್ರೀತಿ ಮತ್ತು ಗೌರವ ಇರಬೇಕು ಎಂದು ಪ್ರಾವಾದಿ(ಸ) ನಮಗೆ ತೋರಿಸಿ ಕೊಟ್ಟಿದ್ದಾರೆ. ಪ್ರವಾದಿಯವರು(ಸ) ತನ್ನ ಮನೆಯವರ ಕಡೆಗೆ ಆದರ, ಅರ್ಥೈಸುವಿಕೆ, ಗೌರವ, ದಯೆ, ಕ್ಷಮೆ ತೋರುವ ವ್ಯಕ್ತಿಯಾಗಿದ್ದರು.
ಅಲ್ಲಾಹನು ಹೇಳುತ್ತಾನೆ, “ಅವರು ನಿಮಗೆ ಉಡುಪಾಗಿರುವರು ಮತ್ತು ನೀವು ಅವರಿಗೆ ಉಡುಪಾಗಿರುವಿರಿ.” (2: 187)
ಪರಸ್ಪರ ಪ್ರೀತಿಯು ವೈವಾಹಿಕ ಜೀವನವನ್ನು ಸುಂದರಗೊಳಿಸುತ್ತದೆ. ಆದರೆ ಸತಿಪತಿಗಳಿಬ್ಬರು ತಖ್ವಾವನ್ನು ಹೊಂದಿರುವುದು ಪ್ರಮುಖ ಅಂಶವಾಗಿದೆ. ಏಕೆಂದರೆ ಪ್ರೀತಿಯು ಕಾಲಾನಂತರದಲ್ಲಿ ಮಸುಕಾಗಬಹುದು. ಒಂದು ವೇಳೆ ಪ್ರೀತಿಯು ಮಸುಕಾದರೆ, ತಖ್ವಾವು ಗಂಡ ಮತ್ತು ಹೆಂಡತಿಯ ನಡುವಿನ ಪರಸ್ಪರ ಗೌರವದ ಸಂಬಂಧವನ್ನು ಎತ್ತಿ ಹಿಡಿಯುತ್ತದೆ.
ಒಮ್ಮೆ ಮುಸ್ಲಿಂ ಪೀಳಿಗೆಯ ವಿದ್ವಾಂಸರಲ್ಲಿ ಒಬ್ಬರಾದ ಹಸನ್ ಅಲ್-ಬಸ್ರಿ, ತನ್ನ ಮಗಳಿಗೆ ಸಂಗಾತಿಯನ್ನು ಆಯ್ಕೆ ಮಾಡಲು ನೋಡಬೇಕಾದ ಗುಣಲಕ್ಷಣಗಳನ್ನು ವಿಚಾರಿಸುತ್ತಿದ್ದ ತಂದೆಗೆ ಈ ರೀತಿಯಾಗಿ ಸಲಹೆ ನೀಡಿದರು: “ತಖ್ವಾ ಹೊಂದಿರುವ ವ್ಯಕ್ತಿಗೆ ಅವಳನ್ನು ಕೊಡು. ಅವನು ನಿಮ್ಮ ಮಗಳನ್ನು ಪ್ರೀತಿಸಿದರೆ, ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಮತ್ತು ಅವನು ಅವಳನ್ನು ಇಷ್ಟ ಪಡದಿದ್ದರೆ ಅವಳ ಮೇಲೆ ದೌರ್ಜನ್ಯವೆಸಗುವುದಿಲ್ಲ.”
ಒಬ್ಬ ವ್ಯಕ್ತಿಯು ತನ್ನ ಕುಟುಂಬವನ್ನು ದಯೆಯಿಂದ ನಡೆಸಿಕೊಳ್ಳದಿದ್ದರೆ ಅವನು ಅಥವಾ ಅವಳು ಸಂಪೂರ್ಣ ವಿಶ್ವಾಸಿಯಾಗಳಾರರು. ನೈಜ ವಿಶ್ವಾಸವು ಪ್ರವಾದಿ ಮುಹಮ್ಮದ್(ಸ)ರ ಬೋಧನೆಗಳಿಗೆ ಬದ್ಧವಾಗಿದೆ. ಮಹಿಳೆಯು ಹಕ್ಕುಗಳಿಂದ ವಂಚಿತಳಾಗಿದ್ದ, ಮಹಿಳೆಯನ್ನು ಪುರುಷನಿಗಿಂತ ಕೀಳು ಮತ್ತು ಆಕೆಯನ್ನು ಸರಕೆಂದು ಭಾವಿಸುತ್ತಿದ್ದ ಮತ್ತು ಹೆಣ್ಣು ಶಿಶುಗಳನ್ನು ಜೀವಂತ ಹೂಳುವುದು ಸಾಮಾನ್ಯವೆಂಬ ಕಾಲಘಟ್ಟದಲ್ಲಿ ಪ್ರವಾದಿ(ಸ) ಬೆಳೆದಿದ್ದರು.
ಇಸ್ಲಾಂ ಅನ್ನು ಪರಿಚಯಿಸುವಾಗ, ಪ್ರವಾದಿ(ಸ) ಪ್ರತಿಯೊಬ್ಬ ಮಹಿಳೆಯರನ್ನು ಗೌರವಾದರದಿಂದ ಕಾಣಬೇಕು ಎಂದು ಕರೆ ನೀಡಿದರು. ಪ್ರವಾದಿ(ಸ) ಹೇಳಿದ್ದಾರೆ, “ಯಾರಿಗೆ ಹೆಣ್ಣು ಮಕ್ಕಳ (ಬೆಳೆಸುವ) ಜವಾಬ್ದಾರಿಯನ್ನು ವಹಿಸಲಾಗಿದೆಯೋ ಅವರು ಆ ಮಕ್ಕಳನ್ನು ಉತ್ತಮ ರೀತಿ ಹಾಗೂ ದಯೆಯೊಂದಿಗೆ ನಡೆಸಿಕೊಳ್ಳಲಿ. ಅವರು (ಆ ಹೆಣ್ಣು ಮಕ್ಕಳು) ನರಕದ ಬೆಂಕಿಯ ವಿರುದ್ಧ ಅವರಿಗೆ ರಕ್ಷಣೆಯಾಗುವರು.
ದಯೆಯು ಪ್ರೀತಿಯ ಅತ್ಯಂತ ಸುಂದರ ವಿಧವಾಗಿದೆ. ಪ್ರವಾದಿ ಯವರು(ಸ) ಹೇಳಿದ್ದಾರೆ, “ನಿಮ್ಮಲ್ಲಿ ಉತ್ತಮರು ಅವರ ಕುಟುಂಬಗಳಿಗೆ ಉತ್ತಮರು ಮತ್ತು ನಾನು ನನ್ನ ಕುಟುಂಬಕ್ಕೆ ಉತ್ತಮ.”
ಪ್ರವಾದಿ ಮುಹಮ್ಮದ್(ಸ) ತನ್ನ ಪತ್ನಿಯರಿಗೆ ಸಹಾಯಕರಾಗಿ ಮನೆಗೆಲಸವನ್ನು ಮಾಡುತ್ತಿದ್ದರು. ತನ್ನ ಬಟ್ಟೆಗಳನ್ನು ತಾನೇ ತೊಳೆಯುತ್ತಿದ್ದರು. ಅವರ ತಾಳ್ಮೆಯನ್ನು ಪರೀಕ್ಷಿಸಿದಾಗಲೂ, ಅವರು ತಮ್ಮ ಮಾತುಗಳಲ್ಲಿ ಅಥವಾ ಕಾರ್ಯಗಳಲ್ಲಿ ಎಂದಿಗೂ ನಿರ್ದಯಿಯಾಗಲಿಲ್ಲ.
ಸಂಬಂಧದಲ್ಲಿ ಸಂವಹನ ಅತ್ಯಗತ್ಯ. ಮೃದುವಾಗಿ ಮಾತನಾಡುವುದು ಪ್ರವಾದಿ ಮುಹಮ್ಮದ್ ಅವರ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಪ್ರವಾದಿಯವರು(ಸ) ಯಾರೊಂದಿಗೂ ಕಟುವಾದ ಪದಗಳನ್ನು ಬಳಸಲಿಲ್ಲ. ಅವರು ತಮ್ಮ ಪತ್ನಿಯರು ಮತ್ತು ಮಕ್ಕಳನ್ನು ತಿದ್ದುವ ಅಗತ್ಯವಿದ್ದಾಗಲೂ ಅವರ ಬಗ್ಗೆ ಅಪಾರವಾದ ಮೃದುತ್ವವನ್ನು ಹೊಂದಿದ್ದರು. ಪ್ರವಾದಿಯವರು(ಸ) ತಮ್ಮ ಪತ್ನಿಯರನ್ನು ಆದರಿಸಿದ್ದರು ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸಿದ್ದರು. ಪ್ರವಾದಿ ಮುಹಮ್ಮದ್(ಸ) ರವರು ತಮ್ಮ ಮಗಳು ಫಾತಿಮಾರನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಬರುವುದನ್ನು ಕಂಡಾಗಲೆಲ್ಲಾ ಪ್ರವಾದಿ(ಸ) ಎದ್ದು ನಿಂತು, ಅವರನ್ನು ಚುಂಬಿಸುತ್ತಿದ್ದರು ಮತ್ತು ಅವರಿಗೆ ಕುಳಿತುಕೊಳ್ಳಲು ತನ್ನ ಸ್ಥಳವನ್ನು ಬಿಟ್ಟು ಕೊಡುತ್ತಿದ್ದರು.
ಪತ್ನಿ ಮತ್ತು ಮಕ್ಕಳೊಂದಿಗಿನ ಪ್ರವಾದಿ(ಸ) ಅವರ ವ್ಯವಹಾರ ಮತ್ತು ಮೃದುತ್ವವು ನಾವು ನಮ್ಮ ಸ್ವಂತ ಕುಟುಂಬದೊಂದಿಗೆ ವ್ಯವಹರಿಸುವಾಗ ಪ್ರಯೋಗಿಸಬೇಕಾಗುತ್ತದೆ. ತಮ್ಮ ಕುಟುಂಬಗಳಲ್ಲಿ ಪ್ರೀತಿ ಮತ್ತು ನೆಮ್ಮದಿಯ ನೆಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಯಾವುದೇ ವ್ಯಕ್ತಿಗೆ ಪ್ರವಾದಿ ಮುಹಮ್ಮದ್(ಸ)ರ ಬದುಕು ಉತ್ತಮ ದಾರಿದೀಪವಾಗಿದೆ.