ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಯಶಸ್ಸಿಗೆ ದೃಢತೆ ಹಾಗೂ ಉತ್ತಮ ಗುಣಗಳು ಅನಿವಾರ್ಯವಾಗಿದೆ. ಗುಣ ಸ್ವಭಾವಗಳಿಗೆ ಅರಬಿ ಭಾಷೆಯಲ್ಲಿ ಖುಲುಕ್ ಎಂದು ಹೇಳಲಾಗುತ್ತದೆ. ಪ್ರಕೃತಿ, ಸ್ವಭಾವ, ಗುಣ, ಧರ್ಮ, ಸದಾಚಾರ, ಮಾನವೀಯತೆ, ಜೀವನ ರೀತಿ ಎಂಬುದು ಖುಲುಕ್ ಪದದ ಅರ್ಥಗಳಾಗಿವೆ. ಉತ್ತಮ ಗುಣವಿರುವವರಿಗೆ ವಿಶ್ವಾಸದ ಪರಿಪೂರ್ಣತೆಯನ್ನು ಗಳಿಸುವುದಕ್ಕೆ ಸಾಧ್ಯವೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ.
ಅಜ್ಞಾನ ಕಾಲದಲ್ಲಿ ಅರಬರಲ್ಲಿ ಉತ್ಕ್ರಷ್ಟ ಮತ್ತು ನಿಕೃಷ್ಟವಾದ ಎರಡು ಗುಣಗಳೂ ಇದ್ದವು. ಔದಾರ್ಯ, ಧೈರ್ಯ, ಸತ್ಯ ಸಂಧತೆ, ಪ್ರಾಮಾಣಿಕತೆ, ಅಪಾಯಕ್ಕೆ ತುತ್ತಾದವರಿಗೆ ಸಹಾಯ ಮಾಡುವುದು, ಮುಂತಾದವು ಅವರಲ್ಲಿದ್ದ ವಿಶಿಷ್ಟ ಗುಣಗಳಾಗಿದ್ದವು.
ಮಾನವರಲ್ಲಿರುವ ಉತ್ತಮ ಗುಣಗಳ ಪರಿಪೂರ್ಣತೆಗಾಗಿ ನನ್ನನ್ನು ನಿಯೋಜಿಸಲಾಗಿದೆ ಎಂದು ಪ್ರವಾದಿವರ್ಯರು(ಸ)ಹೇಳಿದ್ದಾರೆ. ಪ್ರವಾದಿವರ್ಯರ(ಸ) ಜೀವನವೇ ಸದ್ಗುಣದ ಮುರ್ತರೂಪವಾಗಿದೆಯೆಂದು ಪವಿತ್ರ ಕುರ್ ಆನ್ ಹೇಳಿದೆ. “ನಿಶ್ಚಯವಾಗಿಯು ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.”(ಪವಿತ್ರ ಕುರ್ ಆನ್-68:4)
ಸದ್ಗುಣಗಳ ವಿವಿಧ ಸ್ತರಗಳ ಕುರಿತು ವಿವರವಾದ ಪ್ರತಿಪಾದನೆಗಳನ್ನು ಪವಿತ್ರ ಕುರ್ ಆನ್ ಮತ್ತು ಪ್ರವಾದಿ ವಚನಗಳಲ್ಲಿ ನಮಗೆ ಕಾಣಬಹುದು. ಇಸ್ಲಾಮಿನ ಆರಾಧನೆಗಳು ಮಾನವರಲ್ಲಿ ಉತ್ತಮ ಗುಣಗಳನ್ನು ರೂಢಿಸಲು ಮತ್ತು ಕೆಟ್ಟ ಗುಣಗಳಿಂದ ದೂರವಿರಲು ಪ್ರೇರೇಪಿಸುತ್ತದೆ.
ನಿಂದ್ಯವೂ ಮತ್ತು ಬಹಿಷ್ಕ್ರತವೂ ಆದ ಕೆಡುಕುಗಳನ್ನು ತಡೆಯುವುದೇ ನಮಾಝಿನ ಉದ್ದೇಶವಾಗಿದೆ. “ನಿಶ್ಚಯವಾಗಿಯೂ ನಮಾಝ್ ಅಶ್ಲೀಲ ಹಾಗೂ ದುಷ್ಕ್ರತ್ಯಗಳಿಂದ ತಡೆಯುತ್ತದೆ.”(ಪವಿತ್ರ ಕುರ್ ಆನ್-29:45)
ಝಕಾತ್(ಕಡ್ಡಾಯ ದಾನದ ಮೂಲಕ) ಆತ್ಮ ಸಂಸ್ಕರಣೆಯನ್ನು ಗಳಿಸಬೇಕಾಗಿದೆ. “ಅವರ ಸಂಪತ್ತುಗಳಿಂದ ‘ದಾನ ಧರ್ಮ’ಗಳನ್ನು ಪಡೆದು ಅವರನ್ನು ಶುದ್ಧೀಕರಿಸಿರಿ.”(ಪವಿತ್ರ ಕುರ್ ಆನ್-9:103)
ಹಜ್ಜ್ ನ ಮೂಲಕ ಭಯ ಭಕ್ತಿಯನ್ನು ಸಂಪಾಧಿಸಬೇಕಾಗಿದೆ. “ಹಜ್ಜ್ ಯಾತ್ರೆಗೆ ಹೋಗುವಾಗ ದಾರಿ ವೆಚ್ಚವನ್ನು ಕೊಂಡು ಹೋಗಿರಿ. ಅತ್ಯುತ್ತಮ ದಾರಿ ವೆಚ್ಚವು ಧರ್ಮನಿಷ್ಠೆಯಾಗಿದೆ.”(ಪವಿತ್ರ ಕುರ್ ಆನ್- 2:197)
ಸುಳ್ಳು ಮಾತು ಮತ್ತು ವರ್ತನೆಗಳನ್ನು ತೊರೆಯದಿದ್ದರೆ ಉಪವಾಸದಿಂದ ಏನೂ ಸಾಧಿಸಲಾಗದು ಎಂಬ ಪ್ರವಾದಿ ವಚನವಿದೆ.
ಉತ್ತಮ ಗುಣಗಳ ಮೂಲಕ ದೇವಭಕ್ತಿಯನ್ನು ಹೊಂದುವುದು ಅವುಗಳನ್ನು ಗಳಿಸುವ ಪರಮ ಉದ್ದೇಶವಾಗಿದೆಯೆಂದು ಮೇಲಿನ ವಿವರಣೆಗಳಿಂದ ಸ್ಪಷ್ಟವಾಗುತ್ತದೆ. ಮಾನವರ ವ್ಯಕ್ತಿತ್ವ ಕಳಂಕಿತವೋ ಕಳಂಕರಹಿತವೋ ಎಂದು ಪರೀಕ್ಷಿಸಿ ತಿಳಿಯಲು ಅವರ ಗುಣ ಸ್ವಭಾವಗಳೇ ಅತ್ಯುತ್ತಮ ಮಾನದಂಡವಾಗಿದೆ. ನಮ್ಮೊಳಗೇನಿದೆಯೋ ಅದರಂತೆ ನಮ್ಮ ಸ್ವಭಾವವು ಪ್ರಕಟವಾಗುವುದು. ಈ ಕಾರಣದಿಂದ ಸಾರ್ವಜನಿಕವಾಗಿ ಮಾನವರ ಸ್ವಭಾವಗಳು ಅಳತೆಗೋಲಾಗಿದೆ. ಉತ್ತಮ ಗುಣಗಳನ್ನು ಮನುಷ್ಯತ್ವದ ಪ್ರತಿಫಲನವೆಂದು ಲೆಕ್ಕ ಹಾಕಲಾಗುವುದು.
ಸಕಲ ಸದ್ಗುಣಗಳ ಪ್ರಭಾವ ಕೇಂದ್ರವಾದ ಅಲ್ಲಾಹನೇ ಸತ್ಕರ್ಮಗಳಿಗೆ ಮಾರ್ಗದರ್ಶನವನ್ನು ನೀಡುತ್ತಾನೆ. ದೇವನು ಮತ್ತು ಪ್ರವಾದಿವರ್ಯರು(ಸ) ಸದ್ಗುಣಗಳೆಂದು ಹೇಳಿರುವುದು ಸದ್ಗುಣಗಳೂ, ಕೆಟ್ಟ ಗುಣಗಳೆಂದು ಹೇಳಿರುವುದು ಕೆಟ್ಟ ಗುಣಗಳೂ ಆಗಿವೆ. ಉತ್ತಮ ಗುಣಗಳೆಂದರೆ ಮನುಷ್ಯನ ಬುದ್ಧಿಗೆ ತೋಚುವುದೋ ಅನಿಸುವುದೋ ಅಲ್ಲ. ಇಸ್ಲಾಮೀ ಶಿಷ್ಟಾಚಾರದ ಮೂಲಕ ದೇವನ ಸಂಪ್ರೀತಿಯನ್ನು ಗಳಿಸುವುದು ಉತ್ತಮ ಗುಣಗಳಾಗಿವೆ. ಆ ಮೂಲಕವೇ ದೇವನ ಪರೀಕ್ಷೆಯಲ್ಲಿ ವಿಜಯಿಯಾಗಬೇಕಾಗಿದೆ. ಆ ಮೂಲಕ ಸ್ವರ್ಗವನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ.
ಸತ್ಯ ಸಂಧತೆ, ಹಿತಾಕಾಂಕ್ಷೆ, ಕರುಣೆ, ಕ್ಷಮೆ, ಅರ್ಪಣಾ ಪ್ರಜ್ಞೆ, ಲಜ್ಜಾಗುಣ, ಸೌಮ್ಯ ಸ್ವಭಾವ, ಸಹಿಷ್ಣುತೆ, ಅಲ್ಲಾಹನ ಶಿಕ್ಷೆಯ ಕುರಿತು ಭಯ, ಪುರಸ್ಕಾರದ ಕುರಿತು ನಿರೀಕ್ಷೆ, ಮಿತತ್ವ, ಪಶ್ಚಾತ್ತಾಪದ ಮನಸ್ಥಿತಿ, ಧೈರ್ಯ, ಮಾನಸಿಕ ದಾಢ್ರ್ಯತೆ, ವಾಗ್ದಾನ ಪಾಲನೆ, ಕೃತಜ್ಞತೆಯ ಪ್ರಜ್ಞೆ, ಉದಾರತೆ, ಪ್ರಾಮಾಣಿಕತೆ, ಜ್ಞಾನ, ವಿನಯ, ಆಯೋಜನಾ ಶಕ್ತಿ, ನಗು ಮುಖ ಮುಂತಾದ ಅನೇಕ ಉತ್ತಮ ಗುಣಗಳ ಕುರಿತು ಪವಿತ್ರ ಕುರ್ ಆನ್ ಮತ್ತು ಪ್ರವಾದಿ ವಚನಗಳಲ್ಲಿ ವಿವರಿಸಲಾಗಿದೆ.
ಕೆಲವು ಉದಾಹರಣೆಗಳು, “(ಪ್ರವಾದಿವರ್ಯರೇ ) ನಿಶ್ಚಯವಾಗಿಯು ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.”(ಪವಿತ್ರ ಕುರ್ ಆನ್-68:4).
“ಸಂದೇಶವಾಹಕರೇ, ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ದೂರೀಕರಿಸಿರಿ. ನಿಮ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತ ಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ.”(ಪವಿತ್ರ ಕುರ್ ಆನ್-41:34)
“( ಓ ಪೈಗಂಬರರೇ) ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತ ಮುತ್ತಲಿನಿಂದ ಚದುರಿ ಹೋಗುತ್ತಿದ್ದರು.”(ಪವಿತ್ರ ಕುರ್ ಆನ್ -3:159).
ಪ್ರವಾದಿವರ್ಯರು(ಸ) ಹೇಳಿದರು, ಸದ್ಗುಣವು ಪುಣ್ಯವಾಗಿದೆ. ಮನಸ್ಸಿಗೆ ಕ್ಲೇಶವುಂಟು ಮಾಡುವುದು ಮತ್ತು ಜನರು ನೋಡದಿರಲೆಂದು ಬಯಸುವುದು ಪಾಪವಾಗಿದೆ.(ಪ್ರವಾದಿ ವಚನ)
ಅಂತ್ಯ ದಿನದಲ್ಲಿ ನನಗೆ ಹೆಚ್ಚು ಪ್ರಿಯರು ಮತ್ತು ನನ್ನ ಬಳಿ ಸ್ಥಾನ ಲಭಿಸುವವರು, ನಿಮ್ಮ ಪೈಕಿ ಅತ್ಯುತ್ತಮ ಗುಣದವರಾಗಿದ್ದಾರೆ.(ಪ್ರವಾದಿ ವಚನ)
“ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತನ್ನೇ ಹೇಳಿರಿ-ಅಲ್ಲಾಹನು ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಅಪರಾಧಗಳನ್ನು ಕ್ಷಮಿಸುವನು. ಯಾರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಅನುಸರಣೆ ಮಾಡಿದನೋ ಅವನು ಮಹಾ ಯಶಸ್ಸನ್ನು ಪಡೆದನು.”(ಪವಿತ್ರ ಕುರ್ ಆನ್-33:70-71)
ಮನಸ್ಸನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ಅರ್ಪಿಸಿ ಅದನ್ನು ಸುರಕ್ಷಿತವಾಗಿರಿಸುವವರು ನಾಲಿಗೆಯು ಸತ್ಯವನ್ನಾಡುವಂತೆ ಮಾಡಿ ಆತ್ಮಕ್ಕೆ ಶಾಂತಿಯನ್ನು ಗಳಿಸಿ ಕೊಡುವವರು ಮತ್ತು ತಮ್ಮ ಸ್ವಭಾವವನ್ನು ಸಂಸ್ಕರಿಸುವವರು ನಿಶ್ಚಯವಾಗಿಯೂ ವಿಜಯಿಗಳಾದರು.(ಪ್ರವಾದಿ ವಚನ)
“ಕಾಲದಾಣೆ, ನಿಜವಾಗಿ ಮನುಷ್ಯನು ಮಹಾ ನಷ್ಟದಲ್ಲಿದ್ದಾನೆ- ಸತ್ಯವಿಶ್ವಾಸ ಸ್ವೀಕರಿಸಿದ, ಸತ್ಕರ್ಮ ಮಾಡುತ್ತಿದ್ದ ಮತ್ತು ಪರಸ್ಪರ ಸತ್ಯ ಹಾಗೂ ಸಹನೆಯನ್ನು ಉಪದೇಶಿಸುತ್ತಿದ್ದವರ ಹೊರತು”.(ಪವಿತ್ರ ಕುರ್ ಆನ್-103:3)
“ಪುಣ್ಯ ಹಾಗೂ ದೇವಭಯದ ಕಾರ್ಯಗಳಲ್ಲಿ ಎಲ್ಲರ ಜೊತೆ ಸಹಕರಿಸಿರಿ ಮತ್ತು ಪಾಪ ಹಾಗೂ ಅತಿರೇಕದ ಕಾರ್ಯಗಳಲ್ಲಿ ಯಾರೊಂದಿಗೂ ಸಹಕರಿಸಬೇಡಿರಿ.”(ಪವಿತ್ರ ಕುರ್ ಆನ್-5:2)
ನೀವು ಅಲ್ಲಾಹನ ಮೇಲೆ ಪೂರ್ಣ ಭರವಸೆಯಿರಿಸಿದರೆ ಪಕ್ಷಿಗಳಿಗೆ ಆಹಾರವನ್ನು ನೀಡುವಂತೆ ನಿಮಗೂ ಆಹಾರವನ್ನು ನೀಡುವನು. ಅವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೋಗಿ ಸಂಜೆಯ ವೇಳೆಗೆ ಹೊಟ್ಟೆ ತುಂಬಿಸಿಕೊಂಡು ಬರುತ್ತವೆ.(ಪ್ರವಾದಿ ವಚನ)
“ಓ ಪೈಗಂಬರರೇ, ಕ್ಷಮಾಶೀಲರಾಗಿರಿ. ಸರ್ವವಿದಿತ ಒಳಿತುಗಳನ್ನು ಬೋಧಿಸಿರಿ ಮತ್ತು ತಿಳಿಗೇಡಿಗಳೊಡನೆ ಜಗಳಾಡ ಬೇಡಿರಿ.”(ಪವಿತ್ರ ಕುರ್ ಆನ್-7:199)
ನಿಮ್ಮಲ್ಲಿ ಜನರಿಗೆ ಕೃತಜ್ಞ್ಞನಾಗಿರುವವನೇ ಅಲ್ಲಾಹನಿಗೆ ಅತಿ ಹೆಚ್ಚು ಕೃತಜ್ಞತೆ ತೋರುವವನು(ಪ್ರವಾದಿ ವಚನ).
“ನೀವು ನಿಮಗೆ ಪ್ರಿಯವಾಗಿರುವ ವಸ್ತುಗಳನ್ನು ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವ ತನಕವೂ ಪುಣ್ಯ ಮಟ್ಟವನ್ನು ತಲುಪಲಾರಿರಿ. ನೀವು ಏನೇನು ಖರ್ಚು ಮಾಡುವಿರೋ ಅದರ ಬಗೆಗೆ ಅಲ್ಲಾಹನು ಅಜ್ಞನಲ್ಲ.”(ಪವಿತ್ರ ಕುರ್ ಆನ್-3:92)
ವಿಶ್ವಸ್ಥನಿಗಲ್ಲದೆ ವಿಶ್ವಾಸವಿಲ್ಲ. ಕರಾರನ್ನು ಪಾಲಿಸದವನಿಗೆ ಧರ್ಮವಿಲ್ಲ.(ಪ್ರವಾದಿ ವಚನ)
“ರಹ್ಮಾನನ ನೈಜ ದಾಸರು ಭೂಮಿಯ ಮೇಲೆ ಸೌಮ್ಯ ನಡಿಗೆ ನಡೆಯುತ್ತಾರೆ. ತಿಳಿಗೇಡಿಗಳು ವ್ಯರ್ಥ ತಕರಾರಿಗೆ ಬಂದಾಗ ‘ನಿಮಗೆ ಸಲಾಮ್’ ಎಂದು ಬಿಡುತ್ತಾರೆ.”(ಪವಿತ್ರ ಕುರ್ ಆನ್-25:63)
ಅಲ್ಲಾಹನೊಡನೆ ಪ್ರೀತಿ, ಅವನ ಪ್ರೀತಿ ಕುರಿತು ಆಕಾಂಕ್ಷೆ, ಅವನ ಕ್ರೋಧದ ಕುರಿತು ಆತಂಕಗಳೇ ಸದ್ಗುಣಗಳನ್ನು ಪೋಷಿಸುವುದರ ಸಾಕ್ಷಾತ್ ಪ್ರೇರಕ ಶಕ್ತಿಯಾಗಿದೆ. ಧರ್ಮದ ಬಗ್ಗೆ ಉತ್ತಮ ಗುಣಗಳ ಕುರಿತು ಅನೇಕ ಜನ ಸಮುದಾಯಗಳು ಚಿಂತಿಸಿದರೂ ಮತ್ತು ಈ ಕ್ಷೇತ್ರದಲ್ಲಿ ತಮ್ಮ ಕೊಡುಗೆಗಳನ್ನು ನೀಡಿದರೂ ಈ ರಂಗದಲ್ಲಿ ಇಸ್ಲಾಮಿನ ಉಪದೇಶಗಳು ಹೆಚ್ಚು ಸಮಗ್ರವೂ ಸಂಪೂರ್ಣವೂ ಆಗಿವೆಯೆಂದು ಮೇಲೆ ಉಲ್ಲೇಖಿಸಿದ ಆಧಾರಗಳು ದೃಢೀಕರಿಸುತ್ತವೆ.