Home / ಲೇಖನಗಳು / ರಾಜ್ಯಪಾಲ ಸಈದ್ ಬಿನ್ ಅಮೀರ್‌ರ ವ್ಯಾಪಾರ: ಪತ್ನಿಯ ಉತ್ತರವೇನು?

ರಾಜ್ಯಪಾಲ ಸಈದ್ ಬಿನ್ ಅಮೀರ್‌ರ ವ್ಯಾಪಾರ: ಪತ್ನಿಯ ಉತ್ತರವೇನು?

@ ಶೈಖ್ ಮುಹಮ್ಮದ್ ಕೆ.

ಇಸ್ಲಾಮಿನ ದ್ವಿತೀಯ ಖಲೀಫ ಉಮರುಲ್ ಫಾರೂಕ್‌ರ ಆಡಳಿತ ಕಾಲ. ಸಿರಿಯಾ ದೇಶವು ಅವರ ಕಾಲದಲ್ಲಿಯೇ ಇಸ್ಲಾಮೀ ರಾಷ್ಟ್ರಕ್ಕೆ ಸೇರಿತ್ತು. ಅಂದು ಆ ದೇಶವು ಬಹಳ ಸಂಪನ್ನವಾಗಿತ್ತು. ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಅಲ್ಲಿನ ಜೀವನ ಮಟ್ಟವು ತುಲನಾತ್ಮಕವಾಗಿ ಇತರೆಡೆಗಳಿಗಿಂತ ಉತ್ತಮವಾಗಿತ್ತು.

ಉಮರುಲ್ ಫಾರೂಕ್‌ರು, ಅಲ್ಲಿಗೆ ಸಈದ್ ಬಿನ್ ಆಮಿರ್ ಯೋಗ್ಯ ರಾಜ್ಯಪಾಲರಾಗಬಹುದೆಂದು ಭಾವಿಸಿದರು. ಹಾಗೆಯೇ ಅವರನ್ನು ಕರೆಸಿ ಹೀಗೆಂದರು, “ಕೂಡಲೇ ಹೊರಡಿರಿ. ನಿಮ್ಮನ್ನು ಸಿರಿಯಾದ ರಾಜ್ಯ ಪಾಲರಾಗಿ ನೇಮಿಸಿದ್ದೇವೆ.”
“ಬೇಡ, ನೀವು ನನ್ನನ್ನು ಆ ಪರೀಕ್ಷೆಗೆ ಗುರಿಪಡಿಸಬೇಡಿರಿ” ಸಈದ್ ವಿನಯದಿಂದ ವಿನಂತಿಸಿದರು.
“ಸಾಧ್ಯವಿಲ್ಲ. ಆಡಳಿತ ಭಾರವನ್ನು ನನ್ನ ಮೇಲೆ ಹೊರಿಸಿ ನೀವೆಲ್ಲರೂ ದೂರವುಳಿಯುತ್ತೀರಾ?” ಖಲೀಫರು ತಮ್ಮ ನಿರ್ಧಾರದಲ್ಲಿಯೇ ಅಚಲರಾಗಿ ನಿಂತರು. ಅದಕ್ಕೆ ಸಈದ್ ಮಣಿಯಬೇಕಾಯಿತು. ಹೀಗೆ ಅವರು ಸಿರಿಯಾಕ್ಕೆ ಹೊರಟರು. ಜತೆಯಲ್ಲಿ ನವ ವಧುವೂ ಇದ್ದಳು. ಆಕೆಯು ಅತಿ ಸುಂದರಿಯೂ ಚಿಕ್ಕವಳೂ ಆಗಿದ್ದಳು.

ಉಮರುಲ್ ಫಾರೂಕ್‌ರು ರಾಜ್ಯಪಾಲರಿಗೆ ಸಾಕಷ್ಟು ಸಂಬಳ ನಿರ್ಣಯಿಸಿದರು. ಸಈದ್‌ರ ಪತ್ನಿಯು ಆಡಂಬರದಿಂದ ಜೀವನ ಸಾಗಿಸುತ್ತಿದ್ದ ಮಹಿಳೆಯಾಗಿದ್ದರು. ಆದ್ದರಿಂದ, ಪತಿಯ ಮುಂದೆ ತನ್ನ ಬೇಡಿಕೆಗಳ ಯಾದಿಯನ್ನು ಇರಿಸಿದಳು. ರಾಜ್ಯಪಾಲರ ಪತ್ನಿಯಾಗಿ ಸುಖ ವೈಭೋಗದಿಂದ ಬಾಳುವ ಅವಕಾಶ ದೊರೆಯಿತೆಂದು ಅವರು ಭಾವಿಸಿದ್ದಳು. ಅದರೊಂದಿಗೆ ಸ್ವತಃ ಸಂಪಾದಿಸುವ ವ್ಯಾಮೋಹವೂ ಅವರಲ್ಲಿ ತುಂಬಿತ್ತು. ಆದ್ದರಿಂದ ಸಂಬಳದಲ್ಲಿ ಉಳಿಯುವ ಹಣವನ್ನು ಶೇಖರಿಸಿಡಬೇಕೆಂಬ ಸಲಹೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಎಲ್ಲವನ್ನೂ ಗಮನವಿಟ್ಟು ಆಲಿಸಿದ ಬಳಿಕ ಸಈದ್ ಬಿಮ್ ಆಮಿರ್ ಹೀಗೆಂದರು: “ನಾವು ಅಧಿಕ ಲಾಭ ದೊರೆಯುವಂಥ ಹೊಸ ಮಾರ್ಗವನ್ನು ಅವಲಂಬಿಸೋಣ. ನಮ್ಮ ಆವಶ್ಯಕತೆ ಪೂರೈಸಿ ಉಳಿದ ಹಣವನ್ನು ಅತ್ಯಂತ ಲಾಭದಾಯಕ ವ್ಯಾಪಾರದಲ್ಲಿ ತೊಡಗಿಸೋಣ.”
“ವ್ಯಾಪಾರದಲ್ಲಿ ನಷ್ಟವುಂಟಾದರೆ?” ಪತ್ನಿ ಶಂಕೆ ವ್ಯಕ್ತಪಡಿಸಿದರು.
“ಹಾಗಾಗಲಾರದೆಂದು ನಾನು ಖಚಿತ ಭರವಸೆ ನೀಡುತ್ತೇನೆ” ರಾಜ್ಯ ಪಾಲರು ಒತ್ತಿ ಹೇಳಿದರು. ಇದರಿಂದ ಪತ್ನಿಗೆ ಬಹಳ ಸಂತೋಷವಾಯಿತು. ಅವರು ಸಂಗ್ರಹವಾಗಲಿರುವ ಹಣದ ರಾಶಿಯ ಬಗ್ಗೆ ಸುಂದರ ಕನಸು ಕಂಡರು.

ಸಈದ್ ಬಿನ್ ಆಮಿರ್‌ರು ಅತ್ಯವಶ್ಯಕ ಖರ್ಚು ವೆಚ್ಚ ಕಳೆದು ಉಳಿದ ಹಣವನ್ನು ಬಡ ಬಗ್ಗರಿಗೆ ದಾನ ಮಾಡಿದರು. ಆಗಾಗ್ಗೆ ಪತ್ನಿಯು ವ್ಯಾಪಾರದ ಬಗ್ಗೆ ವಿಚಾರಿಸುತ್ತಿದ್ದರು. ಆಗ ಅವರು ವ್ಯಾಪಾರವು ಬಹಳ ಲಾಭದಾಯಕವಾಗಿ ಮುಂದುವರಿಯುತ್ತಿದೆಯೆಂದು ಹೇಳುತ್ತಿದ್ದರು. ಕೆಲ ಸಮಯದ ಬಳಿಕ ಪತ್ನಿಗೆ ವಿಷಯ ಮನವರಿಕೆಯಾಯಿತು. ಅವರಿಗೆ ಕೋಪ ಮತ್ತು ದುಃಖ ತಡೆಯಲಾಗಲಿಲ್ಲ. ಅವರು ಪತಿಯೊಡನೆ ಹೀಗೆಂದರು: “ನೀವು ನನ್ನ ಅಗತ್ಯಗಳನ್ನು ಪೂರೈಸದೆಯೇ ಇತರರಿಗೆ ಕೊಡುತ್ತಿರುವಿರಲ್ಲಾ?”

“ನಾನು ನಿನ್ನೊಡನೆ ಎಂದೆಂದಿಗೂ ನಷ್ಟವಿಲ್ಲದ ವ್ಯಾಪಾರವನ್ನು ನಡೆಸೋಣವೆಂದು ಮೊದಲೇ ಹೇಳಿದ್ದೆನಷ್ಟೆ. ಖಚಿತವಾಗಿಯೂ ನಾನು ಲಾಭದಾಯಕ ವ್ಯಾಪಾರವನ್ನೇ ನಡೆಸುತ್ತಿದ್ದೇನೆ. ನನ್ನ ಕೆಲವು ಸಹೋದರರು ನಮ್ಮನ್ನು ಬೀಳ್ಕೊಂಡು ದೇವ ಸನ್ನಿಧಿಗೆ ಹೋಗಿದ್ದಾರೆ. ಅವರು ಈಗ ನಾವು ನಡೆಸುತ್ತಿರುವ ವ್ಯಾಪಾರದ ಲಾಭ ಪಡೆಯುತ್ತಿದ್ದಾರೆ. ನಾನೂ ಅವರ ಜತೆ ಸೇರ ಬಯಸುತ್ತೇನೆ. ಅದಕ್ಕೆ ಸಾಗಬೇಕಾಗಿರುವ ದಾರಿ ಇದೊಂದೇ. ನೀನು ಇದರೊಂದಿಗೆ ಸಂತೃಪ್ತಿಯಿಂದ ಹೊಂದಿಕೊಂಡರೆ ಮರಣದ ಬಳಿಕ ನಿನಗೂ ನನ್ನ ಜತೆ ಸೇರಬಹುದು. ಆ ಮೂಲಕ ಲಾಭವನ್ನು ನಾವು ಒಟ್ಟಿಗೆ ಅನುಭವಿಸಬಹುದು” ಎಂದು ಸಈದ್ ಬಿನ್ ಆಮಿರ್ ಪತ್ನಿಯನ್ನು ಸಾಂತ್ವನ ಪಡಿಸಿದರು.

SHARE THIS POST VIA

About editor

Check Also

ಬನ್ನಿ ಮೊದಲು, ಪರಸ್ಪರ ಗೌರವಿಸುವುದನ್ನು ಮುಗುಳ್ನಗುವುದನ್ನು ಕಲಿಯೋಣ..

ಪ್ರಸನ್ನತೆ ಮುಖದ ಸೌಂದರ್ಯವಾಗಿದೆ. ಒಳಿತು ತುಂಬಿ ತುಳುಕುವ ಮನಸ್ಸಿನಿಂದ ಮುಗುಳ್ನಗೆಯು ಹೊರ ಚಿಮ್ಮುವುದು ಮನದ ಒಳಗೆ ತುಂಬಿದ ಬೇಗುದಿಯನ್ನು ಕಿತ್ತೆಸೆದು …

Leave a Reply

Your email address will not be published. Required fields are marked *