Home / ಮಹಾ ನಾಯಕ

ಮಹಾ ನಾಯಕ

‘ದಿ ಹಂಡ್ರೆಡ್ ರೆಂಕಿಂಗ್ ಆಫ್ ದಿ ಮೋಸ್ಟ್ ಇನ್‍ಫ್ಲುಯೆನ್‍ಶಲ್ ಪರ್ಸನ್ಸ್ ಇನ್ ಹಿಸ್ಟರಿ’ (The 100 ranking of the most influential persons in History) ಎಂಬ ಪುಸ್ತಕದಲ್ಲಿ ಗ್ರಂಥಕರ್ತ ಮೈಕಲ್ ಎಚ್. ಹಾರ್ಟ್ (Michal H.Hart) ಈ ರೀತಿ ಬರೆದಿದ್ದಾರೆ.

“……ಈ ಪುಸ್ತಕ ಜಗತ್ತಿನ ಇತಿಹಾಸ ಮತ್ತು ಅದರ ಬೆಳವಣಿಗೆಯ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಿದ ನೂರು ವ್ಯಕ್ತಿಗಳ ಕುರಿತಾಗಿದೆ. ನಾನು ಈ ನೂರು ಜನರಿಗೆ ಅವರ ಪ್ರಾಮುಖ್ಯತೆಯ ಆಧಾರದಲ್ಲಿ ಶ್ರೇಣಿಯನ್ನು ನೀಡಿದ್ದೇನೆ. ಅಂದರೆ ಮಾನವ ಇತಿಹಾಸ ಮತ್ತು ಜನರ ದೈನಂದಿನ ಜೀವನದ ಮೇಲೆ ಅವರು ಬೀರಿರುವ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ… ಹಿಂದೆ ಗತಿಸಿರುವ ತಲೆಮಾರುಗಳ ಮೇಲಿನ ಪ್ರಭಾವವನ್ನು ಸಹ ಸಮಾನವಾಗಿ ಪರಿಗಣಿಸಲಾಗಿದೆ. ಮುಂದಿನ ತಲೆಮಾರುಗಳ ಮೇಲೆ ಮತ್ತು ಭವಿಷ್ಯದ ಆಗು ಹೋಗುಗಳ ಮೇಲೆ ಈ ವ್ಯಕ್ತಿಗಳ ಸಾಧನೆಯ ಪರಿಣಾಮವನ್ನು ಗಣನೆಗೆ ತೆಗೆದು ಕೊಂಡಿದ್ದೇನೆ…..
ಮುಂದುವರಿದು ಗ್ರಂಥಕರ್ತರು ಹೀಗೆ ಬರೆಯುತ್ತಾರೆ,
“……. ಧಾರ್ಮಿಕ ಮತ್ತು ಲೌಕಿಕ ಎರಡೂ ರಂಗಗಳಲ್ಲಿ ಇತಿಹಾಸದಲ್ಲಿ ಸರ್ವಶ್ರೇಷ್ಠ ಸಫಲತೆಯನ್ನು ಪಡೆದಿರುವವರು ಕೇವಲ ಮುಹಮ್ಮದ್ ಮಾತ್ರವಾಗಿದ್ದಾರೆ… ಅರಬ್ ಬುಡಕಟ್ಟುಗಳು ಪ್ರವಾದಿಯವರ ಬೋಧನೆಯಿಂದ ಪ್ರಭಾವಿತರಾಗಿ ಜಗತ್ತು ಈ ಹಿಂದೆ ಎಂದೂ ಕಂಡಿರದ ಅತ್ಯಂತ ವಿಶಾಲ ಸಾಮ್ರಾಜ್ಯವನ್ನು ಭಾರತದ ಸರಹದ್ದಿನಿಂದ ಹಿಡಿದು ಅಟ್ಲಾಂಟಿಕ್ ಸಾಗರದ ವರೆಗೆ ಸ್ಥಾಪಿಸುವಲ್ಲಿ ಯಶಸ್ವಿಯಾಯಿತು…. (ಯೇಸು ಕ್ರಿಸ್ತರಿಗೆ ತದ್ವಿರುದ್ಧವಾಗಿ) ಮುಹಮ್ಮದ್ ಧಾರ್ಮಿಕ ಮತ್ತು ಲೌಕಿಕ ನಾಯಕರಾಗಿದ್ದರು. ವಾಸ್ತವಿಕವಾಗಿ ಅರಬ್ ದಂಡಯಾತ್ರೆಗಳ ಹಿಂದಿರುವ ಅವರ ಪ್ರೇರಣೆಯನ್ನು ಪರಿಗಣಿಸಿದರೆ ಅವರನ್ನು ಸಾರ್ವಕಾಲಿಕ ಪ್ರಭಾವಶಾಲಿ ರಾಜಕೀಯ ನೇತಾರರೆಂದು ಹೇಳಬಹುದು.”

ಇತಿಹಾಸದ ಪುಟಗಳನ್ನು ತಿರುವಿದಾಗ ಶ್ರೇಷ್ಠ ಸುಧಾರಕರು, ಧರ್ಮ ಸಂಸ್ಥಾಪಕರು, ತತ್ವಜ್ಞಾನಿಗಳು, ಪ್ರಖ್ಯಾತ ರಾಜರು ಮತ್ತು ಕ್ರಾಂತಿಕಾರಿಗಳು ಇತಿಹಾಸದ ಪಥವನ್ನು ಬದಲಾಯಿಸಿದ್ದನ್ನು ಕಾಣುತ್ತೇವೆ. ಆದರೆ ಇವರೆಲ್ಲರಲ್ಲೂ ಎದ್ದು ಕಾಣುವ ಸಮಾನ ಅಂಶವೇನೆಂದರೆ, ಮನುಷ್ಯ ಜೀವನದ ಒಂದು ರಂಗವನ್ನು ಮಾತ್ರ ಅವರು ಪ್ರಭಾವಿತಗೊಳಿಸಿದರು. ಉಳಿದ ರಂಗಗಳಲ್ಲಿ ಕೆಡುಕುಗಳು ನುಸುಳಿ ಬರಲು ಲೋಪದೋಷಗಳನ್ನು ಉಳಿಸಿದ್ದರು. ಯಾವುದೇ ಕ್ರಾಂತಿ ಅಥವಾ ಸಿದ್ಧಾಂತ ಮನುಷ್ಯನ ಸಂಪೂರ್ಣ ಸ್ವಭಾವ, ಅಂತರಂಗ ಮತ್ತು ಬಹಿರಂಗ, ವೈಯಕ್ತಿಕ ಹಾಗೂ ಸಾಮೂಹಿಕ ಜೀವನವನ್ನು ಮಾರ್ಪಡಿಸಿರುವ ಉದಾಹರಣೆ ಕಂಡು ಬರುವುದಿಲ್ಲ.

ಆದರೆ ಪ್ರವಾದಿ ಮುಹಮ್ಮದ್(ಸ) ಇದನ್ನು ಸಾಧಿಸಿದರು. ಇತಿಹಾಸದಲ್ಲಿ ಮನುಷ್ಯನ ಅಂತರಾಳ ಮತ್ತು ಬಾಹ್ಯ ಜೀವನ, ಆತನ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿಯ ಪರಿವರ್ತನೆ ಮಹತ್ತರವಾಗಿದೆ. ಇಂತಹ ಉದಾಹರಣೆ ಇತಿಹಾಸದ ಯಾವ ಘಟ್ಟದಲ್ಲೂ ಕಂಡು ಬರುವುದಿಲ್ಲ. ಈ ಪರಿವರ್ತನೆ ಹೇಗಿತ್ತೆಂದರೆ ಮಸೀದಿಯಿಂದ ಮಾರುಕಟ್ಟೆಯ ವರೆಗೆ, ಶಾಲೆಯಿಂದ ನ್ಯಾಯಾಲಯದ ವರೆಗೆ, ಮನೆಯಿಂದ ಸಾರ್ವಜನಿಕ ಕ್ಷೇತ್ರದ ವರೆಗೆ- ಸಂಪೂರ್ಣ ಮನುಷ್ಯ ಜೀವನದ ಚಿತ್ರವೇ ಬದಲಾಯಿತು. ಮಾನವೀಯತೆಗೆ ಹೊಸತೊಂದು ಜೀವನ ನಡೆಸಲು ನಾಂದಿ ಹಾಕಲಾಯಿತು.
ಜಗತ್ತು ಕಂಡಿರುವ ಪ್ರಖ್ಯಾತ ಸುಧಾರಕರಲ್ಲಿ, ಮುಹಮ್ಮದ್‍ರು(ಸ) ಕೇವಲ ತತ್ವಗಳನ್ನು ಪ್ರತಿಪಾದಿಸಿದ್ದು ಮಾತ್ರವಲ್ಲ ಅವುಗಳನ್ನು ಅನುಷ್ಠಾನ ಗೊಳಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕೋಟ್ಯಂತರ ಅನುಯಾಯಿಗಳು ಕೇವಲ ಅವರ ಮಿಲಿಟರಿ ಕಾರ್ಯಾಚರಣೆಯಿಂದ ಪ್ರಭಾವಿತರಾದವರಲ್ಲ. ಪ್ರವಾದಿಯವರ(ಸ) ಸರಳತೆ, ವಿಜಯದ ಸಂದರ್ಭದಲ್ಲೂ ದೇವನ ಮುಂದೆ ಅರ್ಪಿಸುವ ವಿನೀತ ಭಾವ, ನಿಷ್ಕಳಂಕ ಜೀವನ, ತತ್ವ-ಆದರ್ಶಗಳಲ್ಲಿನ ನಿಷ್ಠೆ ಅವರನ್ನು ಇಸ್ಲಾಮಿನೆಡೆಗೆ ಆಕರ್ಷಿಸಿದ್ದವು.

ಪ್ರವಾದಿ ಮುಹಮ್ಮದ್(ಸ) ನಿರಂತರ ಸಚ್ಚಾರಿತ್ರ್ಯವನ್ನು ಪ್ರತಿಪಾದಿಸಿದರು. ಸತ್ಯಕ್ಕೆ ಪ್ರಾಧಾನ್ಯತೆ ನೀಡಲು ಹೋರಾಡಿದರು. ನೈತಿಕ ಬುನಾದಿಗಳ ಮೇಲೆ ಒಂದು ಸಂಪೂರ್ಣ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದರು. ಪ್ರವಾದಿಯವರು ಹುಟ್ಟು ಹಾಕಿದ ಸುಧಾರಣೆ ಸಂಪೂರ್ಣ ಸಾಮಾಜಿಕ ವ್ಯವಸ್ಥೆಯ ಮೇಲೆ ತನ್ನ ಪ್ರಭಾವವನ್ನು ಬೀರಿತ್ತು. ಸಮಾಜದ ಎಲ್ಲಾ ಗೋತ್ರಗಳು ಅದರ ಪ್ರಭಾವವನ್ನು ಸ್ವೀಕರಿಸಿದವು. ಪವಿತ್ರ ಕುರ್‍ಆನ್, ನ್ಯಾಯಾಲಯಗಳಲ್ಲಿ ತೀರ್ಪುಗಳ ಬುನಾದಿಯಾಗಿತ್ತು. ವೈಯಕ್ತಿಕ ಜೀವನದಲ್ಲಿ ಪಾಲಿಸಲಾಗುತ್ತಿದ್ದ ನೈತಿಕ ಮೇರೆಗಳನ್ನು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲೂ ಪಾಲಿಸಲಾಗುತ್ತಿತ್ತು. ಮಸೀದಿಯ ಮಿನಾರಗಳಿಂದ ಮೊಳಗುತ್ತಿದ್ದ ಸತ್ಯವನ್ನು ಸರಕಾರದ ಆಡಳಿತದಲ್ಲಿಯೂ ಅಳವಡಿಸಲಾಗಿತ್ತು.

ಸುಖ ಸಂತೋಷದ ಸಂದರ್ಭದಲ್ಲಿ ಅನುಸರಿಸುತ್ತಿದ್ದ ದೇವ ಭಕ್ತಿಯನ್ನು ರಣರಂಗದಲ್ಲಿಯೂ ಅನುಸರಿಸಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ಸಂಪೂರ್ಣ ಜೀವನ ಒಂದು ದೈವಿಕ ಕಾನೂನಿನ ಅಡಿಯಲ್ಲಿ ಜರುಗುತ್ತಿತ್ತು. ಜೀವನದ ಸಕಲ ರಂಗಗಳಲ್ಲಿ ದೈವಿಕ ಕಾನೂನು ಸಂಹಿತೆಗಳು ಮತ್ತು ನೈತಿಕ ಮೇರೆಗಳಿರುತ್ತಿತ್ತು. ಈ ವ್ಯವಸ್ಥೆಯಲ್ಲಿ ಯಾವುದೇ ದ್ವಂದ್ವವಿರಲಿಲ್ಲ. ಇದರ ವಿವಿಧ ಅಂಗಗಳು ಪರಸ್ಪರ ಘರ್ಷಿಸುತ್ತಿರಲಿಲ್ಲ. ಈ ಕಾರಣದಿಂದಾಗಿಯೇ ಮಾನವಕುಲ ಈ ವ್ಯವಸ್ಥೆಯಲ್ಲಿ ಹಿಂದೆಂದೂ ಇಲ್ಲದ ಉನ್ನತಿಯನ್ನು ಹೊಂದಿತು.

SHARE THIS POST VIA