ಹಲಾಲ್ ಸರ್ಟಿಫಿಕೇಟ್ ಇರುವ ಉತ್ಪನ್ನಗಳಿಗೆ ನಿಷೇಧ ವಿಧಿಸುವ ಉತ್ತರ ಪ್ರದೇಶ ಸರಕಾರದ ನಿರ್ಧಾರವು ಮೂರ್ಖತನದ್ದು ಮತ್ತು ಅತ್ಯಂತ ಹಾಸ್ಯಾಸ್ಪದವಾದುದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಪ್ರೊಫೆಸರ್ ಮೊಹಮ್ಮದ್ ಸಲೀಂ ಇಂಜಿನಿಯರ್ ಹೇಳಿದ್ದಾರೆ.
ಉತ್ತರ ಪ್ರದೇಶ ಸರಕಾರವು ನವೆಂಬರ್ 18ರಂದು ಈ ಆದೇಶವನ್ನು ಹೊರಡಿಸಿದ್ದು ಇದರ ಪ್ರಕಾರ ಹಲಾಲ್ ಸರ್ಟಿಫಿಕೇಟ್ ಇರುವ ಉತ್ಪನ್ನಗಳನ್ನು ತಯಾರಿಸುವ ಅವನ್ನು ಕಾಪಿಡುವ ಮಾರಾಟ ಮಾಡುವ ಮತ್ತು ಖರೀದಿಸುವುದಕ್ಕೆ ನಿಷೇಧ ಹೇರಲಾಗಿದೆ. ಆದರೆ ರಫ್ತು ಮಾಡುವುದಕ್ಕೆ ಈ ನಿಷೇಧ ಅನ್ವಯ ಆಗುವುದಿಲ್ಲ.
ತಾನು ಉತ್ತರಪ್ರದೇಶದ 24 ಕೋಟಿ ನಾಗರಿಕರ ಪ್ರತಿನಿಧಿಯಾಗಿದ್ದೇನೆ ಅನ್ನುವುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮರೆತಿರುವಂತಿದೆ. ಅವರಿದನ್ನು ತಿಳಿದುಕೊಳ್ಳಲಿ. ತನ್ನ ರಾಜ್ಯದಲ್ಲಿ ಯಾರ ಬಗ್ಗೆಯೂ ತಾರತಮ್ಯ ಮಾಡದಂತೆ ಆಡಳಿತ ನಡೆಸಬೇಕಾದದ್ದು ಅವರ ಹೊಣೆಗಾರಿಕೆಯಾಗಿದೆ ಎಂದು ಸಲೀಂ ಇಂಜಿನಿಯರ್ ಹೇಳಿದ್ದಾರೆ.
ಪ್ರತಿ ಧರ್ಮದಲ್ಲಿಯೂ ನಿರ್ದಿಷ್ಟ ವಸ್ತುಗಳಿಗೆ ನಿಷೇಧವಿದೆ ಮತ್ತು ಅದನ್ನು ಪಾಲಿಸುವುದಕ್ಕೆ ಭಾರತದ ಸಂವಿಧಾನ ಅವಕಾಶವನ್ನು ಕೊಟ್ಟಿದೆ ಎಂದವರು ಹೇಳಿದ್ದಾರೆ.
ಉತ್ತರ ಪ್ರದೇಶ ಸರಕಾರದ ನಿರ್ಧಾರವು ಮುಸ್ಲಿಂ ದ್ವೇಷದಿಂದ ಕೂಡಿದೆ. ಒಂದು ವೇಳೆ ಆಹಾರ ಪೊಟ್ಟಣಗಳಲ್ಲಿ ಹಲಾಲ್ ಉತ್ಪನ್ನ ಎಂದು ಬರೆಯುವುದು ತಪ್ಪು ಎಂದಾದರೆ ರೆಸ್ಟೋರೆಂಟ್ ನಲ್ಲಿ ವೆಜಿಟೇರಿಯನ್ ಎಂದು ಬರೆಯುವುದು ತಪ್ಪಾಗುತ್ತದೆ. ಸಿಹಿ ಪದಾರ್ಥಗಳಲ್ಲಿ ಶುಗರ್ ಫ್ರೀ ಎಂದು ಬರೆಯುವುದು ಮತ್ತು ಜಟಕಾ ಕಟ್ ಎಂದು ಬರೆಯುವುದು ಕೂಡ ತಪ್ಪಾಗುತ್ತದೆ ಎಂದವರು ಹೇಳಿದ್ದಾರೆ.