Home / ವೈಯಕ್ತಿಕ ಜೀವನಕ್ಕೆ ಪ್ರಾಮುಖ್ಯತೆ

ವೈಯಕ್ತಿಕ ಜೀವನಕ್ಕೆ ಪ್ರಾಮುಖ್ಯತೆ

‘ಅಲ್ಲಾಹನು ನ್ಯಾಯ ಮತ್ತು ಅನುಕಂಪವನ್ನು ಪರಿಪಾಲಿಸಲು ಆಜ್ಞಾಪಿಸುತ್ತಾನೆ’ ಎಂಬ ಕುರ್‍ಆನ್ ವಾಕ್ಯ ಜನರೊಂದಿಗಿನ ವರ್ತನೆಗೆ ಉತ್ಕ್ರಷ್ಟ ಮಾನದಂಡ ನೀಡುತ್ತದೆ.
“ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಬಗ್ಗೆ ಸೌಜನ್ಯದ ಆಜ್ಞೆ ನೀಡುತ್ತಾನೆ ಮತ್ತು ಅಶ್ಲೀಲ ಕಾರ್ಯ, ದುಷ್ಕ್ರತ್ಯ, ಅಕ್ರಮ, ಅತ್ಯಾಚಾರಗಳನ್ನು ನಿಷೇಧಿಸುತ್ತಾನೆ.” (ಪವಿತ್ರ ಕುರ್‍ಆನ್, 16:9೦)

“ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದ್ದುದೂ, ಅವರಿಗೆ ನೆಲ, ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕ್ರಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ.” (ಪವಿತ್ರ ಕುರ್‍ಆನ್, 17:7೦)

ಮನುಷ್ಯನು ವಿಶ್ವದ ಸೃಷ್ಟಿಗಳಲ್ಲಿ ಅತ್ಯಂತ ಶ್ರೇಷ್ಠನಾಗಿದ್ದಾನೆ. ಮನುಷ್ಯನ ಈ ಸ್ಥಾನಮಾನ ಶಾಶ್ವತ ಸ್ವರೂಪದ್ದಾಗಿದೆ. ಮನುಷ್ಯನ ಸ್ವಾತಂತ್ರ್ಯ ಯಾವನೇ ಆಡಳಿತಗಾರನ ಮೇಲೆ ನೆಲೆ ನಿಂತಿಲ್ಲ. ಮನುಷ್ಯನ ಪ್ರಕೃತಿಯಲ್ಲಿಯೇ ಆತನ ಸ್ವಾತಂತ್ರ್ಯ ಹಾಸುಹೊಕ್ಕಾಗಿದೆ.

ಮನುಷ್ಯನ ಗೌಪ್ಯತೆಯ ರಕ್ಷಣೆಗೆ ಇಸ್ಲಾಮ್ ಆದ್ಯತೆ ನೀಡಿದೆ.
“ಸತ್ಯವಿಶ್ವಾಸಿಗಳೇ, ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಪಡೆಯದೆ ಹಾಗೂ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬೇಡಿ. ಈ ಕ್ರಮವು ನಿಮ್ಮ ಮಟ್ಟಿಗೆ ಉತ್ತಮ. ನೀವು ಇದನ್ನು ಗಮನದಲ್ಲಿರಿಸುವಿರೆಂದು ನಿರೀಕ್ಷಿಸಲಾಗಿದೆ. ಇನ್ನು ಅಲ್ಲಿ ಯಾರೂ ಕಾಣಿಸದಿದ್ದರೆ ನಿಮಗೆ ಅನುಮತಿ ಸಿಗುವ ವರೆಗೂ ಅದರೊಳಗೆ ಪ್ರವೇಶಿಸ ಬೇಡಿರಿ ಮತ್ತು ಮರಳಿ ಹೋಗಿರೆಂದು ನಿಮ್ಮೊಡನೆ ಹೇಳಲಾದರೆ ಮರಳಿ ಬಿಡಿರಿ.”(ಪವಿತ್ರ ಕುರ್‍ಆನ್, 24:27-28)

ವ್ಯಕ್ತಿಯ ವೈಯಕ್ತಿಕ ವಿಷಯದಲ್ಲಿ ವಿನಾ ಕಾರಣ ಹಸ್ತಕ್ಷೇಪ ನಡೆಸುವುದನ್ನುನಿಷೇಧಿಸಲಾಗಿದೆ. ಪರಸ್ಪರ ಬೇಹುಗಾರಿಕೆ ನಡೆಸುವುದನ್ನು ಕುರ್‍ಆನ್ ತೀವ್ರವಾಗಿ ಖಂಡಿಸುತ್ತದೆ.ಇದೇ ರೀತಿ ಅನಾವಶ್ಯಕವಾಗಿ ಇತರರ ಮೇಲೆ ಗುಮಾನಿ ಮಾಡುವುದರಿಂದಲೂ ತಡೆಯಲಾಗಿದೆ.
ಒಬ್ಬ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆತನ ದೋಷಗಳ ಬಗ್ಗೆ ಚರ್ಚಿಸುವುದು, ಪ್ರಚುರ ಪಡಿಸುವುದು ಮೊದಲಾದ ಕಾರ್ಯಗಳನ್ನು ಮಾಡುವುದರಿಂದ ತಡೆಯಲಾಗಿದೆ.

“ಸತ್ಯವಿಶ್ವಾಸಿಗಳೇ, ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿಗಳು ಪಾಪವಾಗಿವೆ. ದೋಷಾನ್ವೇಷಣೆ ಮಾಡದಿರಿ. ನಿಮ್ಮಲ್ಲಿ ಯಾರೂ ಯಾರ ಬಗ್ಗೆಯೂ ಪರದೂಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಇಷ್ಟಪಡುವನೇ?…” (ಪವಿತ್ರ ಕುರ್‍ಆನ್, 49:12)

ಸರಕಾರವೂ ಜನರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಪ್ರವಾದಿ(ಸ) ನುಡಿದಿದ್ದಾರೆ: ‘ಆಡಳಿತಗಾರ ಜನರ ತಪ್ಪುಗಳನ್ನು ಹುಡುಕಲು ಹೊರಟರೆ, ಆತನು ಜನರ ಮೇಲೆ ತಪ್ಪು ಎಸಗಿದಂತೆ.’ (ಮಿಶ್ಕಾತ್)

ಪ್ರವಾದಿ ಮುಹಮ್ಮದ್(ಸ) ವೈಯಕ್ತಿಕ ಸ್ವಾತಂತ್ರ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡಿದ್ದರೆಂದರೆ ತನ್ನ ಮನೆಗೂ ಸಹ ಯಾವುದೇ ಮುನ್ಸೂಚನೆ ಇಲ್ಲದೆ ಪ್ರವೇಶಿಸುವುದರಿಂದ ತಮ್ಮ ಅನುಚರರನ್ನು ತಡೆದಿದ್ದರು. ತಾನು ಮನೆಯೊಳಗೆ ಬರುತ್ತಿರುವ ಸೂಚನೆ ಮನೆ ಮಂದಿಗೆ ನೀಡಬೇಕು.

ಇತರರ ಮನೆಯಲ್ಲಿ ಇಣುಕಿ ನೋಡುವುದನ್ನೂ ಇಸ್ಲಾಮ್ ನಿಷೇಧಿಸಿದೆ. ತನ್ನ ಮನೆಯಲ್ಲಿ ಕದ್ದು ನೋಡುತ್ತಿರುವ ವ್ಯಕ್ತಿಯ ಕಣ್ಣುಗಳನ್ನು ಕುರುಡಾಗಿಸಿದರೆ ಆತನ ಮೇಲೆ ಯಾವ ಕ್ರಮವನ್ನೂ ಜರುಗಿಸಲಾಗುವುದಿಲ್ಲವೆಂದು ಪ್ರವಾದಿ(ಸ) ನುಡಿದಿರುವುದಾಗಿ ಉಲ್ಲೇಖಿತವಿದೆ.

ಒಮ್ಮೆ ದಾರಿಯಲ್ಲಿ ನಡೆಯುತ್ತಿರುವಾಗ ಮನೆಯೊಳಗಿಂದ ಸ್ತ್ರೀ-ಪುರುಷರು ಹಾಡುತ್ತಿರುವ ಶಬ್ದವನ್ನು ಹ.ಉಮರ್(ರ) ಆಲಿಸಿದರು. ಸಂಶಯ ಉಂಟಾಗಿ ಹ.ಉಮರ್ ಮನೆಯಲ್ಲಿ ಇಣುಕಿ ನೋಡಿದರು. ಮನೆಯಲ್ಲಿ ಗಂಡು ಮತ್ತು ಹೆಣ್ಣು ಮದ್ಯ ಸೇವಿಸುತ್ತಿರುವ ದೃಶ್ಯವನ್ನು ಅವರು ಕಂಡರು. ಅವರ ಮೇಲೆ ಕ್ರಮವನ್ನು ಜರುಗಿಸಬೇಕೆಂದು ಹ.ಉಮರ್ ಬಯಸಿದಾಗ, ತಮ್ಮ ಮನೆಯಲ್ಲಿ ಇಣುಕಿ ನೋಡಿ ವೈಯಕ್ತಿಕ ಹಕ್ಕಿನ ಉಲ್ಲಂಘನೆ ಅವರು ಮಾಡಿರುವುದಾಗಿ ಆತ ಹೇಳಿದ. ಹ.ಉಮರ್(ರ) ಅವರನ್ನು ಶಿಕ್ಷಿಸುವ ಇರಾದೆಯನ್ನು ಕೈ ಬಿಟ್ಟು ಇನ್ನು ಮುಂದೆ ಒಳ್ಳೆಯ ನಡತೆಯನ್ನು ಕೈಗೊಳ್ಳುವ ಪ್ರಮಾಣವನ್ನು ಆ ವ್ಯಕ್ತಿಯಿಂದ ಪಡೆದು ಅಲ್ಲಿಂದ ಹೊರಟು ಹೋದರು. ಪ್ರಾಂತ್ಯಗಳ ಗವರ್ನರ್‍ ಗಳನ್ನು ಭೇಟಿಯಾದಾಗಲೆಲ್ಲಾ ಜನರ ಗೌಪ್ಯತೆಯನ್ನು ರಕ್ಷಿಸುವಂತೆ ಹ.ಉಮರ್(ರ) ನಿರ್ದೇಶಿಸುತ್ತಿದ್ದರು.

ಇಸ್ಲಾಮ್ ವ್ಯಕ್ತಿಗೆ ವೈಯಕ್ತಿಕ ಸ್ವಾತಂತ್ರ್ಯವನ್ನು ಅದರ ಸಂಪೂರ್ಣ ಅರ್ಥದಲ್ಲಿ ನೀಡುತ್ತದೆ. ಅಕ್ರಮ ಬಂಧನದಲ್ಲಿಡುವುದು, ಅಪಹರಿಸುವುದು, ಕಾನೂನು ಬಾಹಿರವಾಗಿ ಸೆರೆಯಲ್ಲಿರಿಸುವುದು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿವೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ನೀಡಲಾಗಿತ್ತೆಂದರೆ ಅಪರಿಚಿತರೂ ಸಹ ಇತರರ ಬಂಧನವನ್ನು ಪ್ರಶ್ನಿಸುತ್ತಿದ್ದರು. ಒಮ್ಮೆ ಪ್ರವಾದಿಯ(ಸ) ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬ ಎದ್ದು ನಿಂತು ತನ್ನ ನೆರೆಯವನನ್ನು ಬಂಧನದಲ್ಲಿಟ್ಟ ಕಾರಣ ಕೇಳಿದ. ಆ ಸಂದರ್ಭದಲ್ಲಿ ಪ್ರವಾದಿಯವರು(ಸ) ಭಾಷಣ ಮಾಡುತ್ತಿದ್ದರು. ಅವರು ಆತನ ಪ್ರಶ್ನೆಗೆ ಉತ್ತರಿಸಲಿಲ್ಲ. ಆ ವ್ಯಕ್ತಿ ಪ್ರಶ್ನೆಯನ್ನು ಪುನರಾವರ್ತಿಸಿದನು. ಪ್ರವಾದಿಯವರು(ಸ) ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಮೂರನೆಯ ಬಾರಿ ಪ್ರಶ್ನೆಯನ್ನು ಕೇಳಲಾದಾಗ, ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿ ಯಾವುದೇ ಉತ್ತರವನ್ನು ನೀಡದೇ ಮೌನ ವಹಿಸಿರುವುದನ್ನು ಕಂಡ ಪ್ರವಾದಿಯವರು(ಸ) ಕೂಡಲೇ ಕೈದಿಯನ್ನು ಬಿಡುಗಡೆಗೊಳಿಸಲು ಆದೇಶಿಸಿದರು.

ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟ ಆರೋಪವಿಲ್ಲದೆ ಬಂಧಿಸುವಂತಿಲ್ಲ. ಸೂಕ್ತ ತನಿಖೆ ಇಲ್ಲದೆ ಆರೋಪ ಹೊರಿಸುವಂತಿಲ್ಲ. ನ್ಯಾಯೋಚಿತ ವಿಚಾರಣೆಯಿಲ್ಲದೆ ಯಾರನ್ನೂ ಶಿಕ್ಷಿಸುವಂತಿಲ್ಲ. ವಿಚಾರಣೆಯ ಸಮಯದಲ್ಲಿ ಆರೋಪಿಗೆ ಪ್ರತಿವಾದಿಸಲು ಅನುವು ಮಾಡಿಕೊಡಬೇಕು. ಒಬ್ಬರು ಎಸಗಿದ ಕೃತ್ಯಕ್ಕಾಗಿ ಮತ್ತೊಬ್ಬರನ್ನು ಶಿಕ್ಷಿಸಲಾಗದು.

ಇತರರ ಪತ್ರಗಳನ್ನು ಓದುವುದರಿಂದ ಪ್ರವಾದಿ(ಸ) ತಡೆದಿದ್ದಾರೆ. ಅನ್ಯರ ವೈಯಕ್ತಿಕ ಪತ್ರ, ದಾಖಲೆಗಳ ಮೇಲೆ ದೃಷ್ಟಿ ಹಾಯಿಸುವುದು ಸತ್ಯವಿಶ್ವಾಸಿಯ ನಡತೆಗೆ ತಕ್ಕುದಲ್ಲವೆಂದು ಅವರು ಘೋಷಿಸಿದ್ದಾರೆ.

ಇಸ್ಲಾವಿೂ ಸರಕಾರ ಯಾರದೇ ಸೊತ್ತನ್ನು ಅವರ ಅನುಮತಿ ಇಲ್ಲದೆ ಅಥವಾ ಸೂಕ್ತ ಪರಿಹಾರ ನೀಡದೆ ಸ್ವಾಧೀನ ಮಾಡಿಕೊಳ್ಳುವಂತಿಲ್ಲ. ಮಕ್ಕಾದಿಂದ ಮದೀನಾಕ್ಕೆ ಹಿಜ್ರತ್(ವಲಸೆ) ಮಾಡಿದ ನಂತರ, ಪ್ರವಾದಿ(ಸ) ಅಲ್ಲಿ ಮಸೀದಿಯನ್ನು ನಿರ್ಮಿಸ ಬಯಸಿದರು. ಇದಕ್ಕಾಗಿ ಆಯ್ದ ಜಾಗಕ್ಕೆ ಪ್ರಚಲಿತ ಬೆಲೆಯನ್ನು ಭೂಮಿಯ ಮಾಲಿಕರು ನಿರಾಕರಿಸಿದರೂ ಅವರಿಗೆ ನೀಡಿದರು. ಹುನೈನ್ ಯುದ್ಧದ ಸಂದರ್ಭದಲ್ಲಿ ಸಫ್ವಾನ್  ಬಿನ್ ಉಮೈಯರ ಕೆಲವು ಸಣ್ಣ ಮನೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಪರಿಹಾರ ನೀಡದೇ ಇವುಗಳನ್ನು ಸ್ವಾಧೀನ ಗೊಳಿಸಬೇಕೇ ಎಂದು ಸಹಾಬಿಗಳು ಪ್ರಶ್ನಿಸಿದಾಗ, “ಯುದ್ಧದಲ್ಲಿ ಹಾನಿಗೊಳಗಾಗುವ ಮನೆಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದು ಪ್ರವಾದಿಯವರು(ಸ) ಉತ್ತರಿಸಿದರು.” ಹ. ಉಮರ್‍ ರ(ರ) ಆಡಳಿತ ಕಾಲದಲ್ಲಿ ಕೂಫಾದ ಕೇಂದ್ರೀಯ ಮಸೀದಿಯನ್ನು ನಿರ್ಮಿಸುವಾಗ ಮುಸ್ಲಿಮೇತರರ ಜಾಗದಲ್ಲಿದ್ದ ಹಳೆಯ ಕೋಟೆಗಳ ಸಾಮಗ್ರಿಗಳನ್ನು ಉಪಯೋಗಿಸಲಾಯಿತು. ಮುಸ್ಲಿಮೇತರರು ನೀಡುತ್ತಿದ್ದ ಜಿಝಿಯಾದ ಮೊತ್ತದಲ್ಲಿ ಈ ಸಾಮಗ್ರಿಗಳ ಬೆಲೆಯನ್ನು ಕಡಿತಗೊಳಿಸಲಾಯಿತು.

ಸ್ವತಂತ್ರ ಜನರನ್ನು ಸೆರೆ ಹಿಡಿದು ಗುಲಾಮರನ್ನಾಗಿಸುವ ಅನಾಗರಿಕ ಕಾಲದ ಪದ್ಧತಿಯನ್ನು ಇಸ್ಲಾಮ್ ನಿಷೇಧಿಸಿದೆ. ಪ್ರವಾದಿಯವರು(ಸ) ಹೇಳಿರುವರು: “ನಿರ್ಣಾಯಕ ದಿನದಂದು ಮೂರು ವರ್ಗಗಳ ಜನರ ವಿರುದ್ಧ ನಾನೇ ಫಿರ್ಯಾದುದಾರನಾಗಿರುತ್ತೇನೆ. ಇದರಲ್ಲಿ ಒಂದು ವರ್ಗದ ಜನರು ಇತರರನ್ನು ಗುಲಾಮರನ್ನಾಗಿಸಿ, ಅವರನ್ನು ಮಾರಿದ ಹಣವನ್ನು ಉಪಯೋಗಿಸುವವರಾಗಿರುತ್ತಾರೆ.” ಗುಲಾಮ ಪದ್ಧತಿಯನ್ನು ಇಸ್ಲಾಮ್‍ ತನ್ನದೇ ರೀತಿಯಲ್ಲಿ ಹೋಗಲಾಡಿಸಿತು. ಮಾಡಿದ ಪಾಪಗಳಿಗೆ ಪರಿಹಾರವಾಗಿ ಗುಲಾಮರನ್ನು ವಿಮೋಚನೆಗೊಳಿಸಲು ಮುಸ್ಲಿಮರನ್ನು ಪ್ರೇರೇಪಿಸಿತು. ಸ್ವಇಚ್ಛೆಯಿಂದ ಗುಲಾಮರನ್ನು ವಿಮೋಚನೆಗೊಳಿಸುವ ಕಾರ್ಯ ಶ್ರೇಷ್ಠವಾದ ಪುಣ್ಯದ ಕೆಲಸ ಎಂದು ಸಾರಲಾಯಿತು. ಸ್ವತಂತ್ರಗೊಂಡ ಗುಲಾಮನ ಪ್ರತಿಯೊಂದು ಅಂಗದ ಬದಲಿಗೆ ಬಿಡುಗಡೆಗೊಳಿಸಿದ ವ್ಯಕ್ತಿಯ ಅಂಗವನ್ನು ನರಕಾಗ್ನಿ ಸ್ಪರ್ಶಿಸದು ಎಂದು ಘೋಷಿಸಲಾಯಿತು. ಈ ಕ್ರಮಗಳಿಂದಾಗಿ ಖಲೀಫರುಗಳ ಆಡಳಿತ ಆರಂಭವಾಗುವ ವೇಳೆಗೆ ಅರೇಬಿಯಾದ ಎಲ್ಲ ಹಳೆಯ ಗುಲಾಮರು ಬಿಡುಗಡೆ ಹೊಂದಿದ್ದರು. ಈ ರೀತಿ ಕೇವಲ 3೦-4೦ ವರ್ಷಗಳ ಅಲ್ಪಾವಧಿಯಲ್ಲಿ ಅರೇಬಿಯಾದ ಗುಲಾಮರ ಸಮಸ್ಯೆ ಕೊನೆ ಕಂಡಿತು.

SHARE THIS POST VIA