Home / ಲೇಖನಗಳು / ಬದುಕು ಕಸಿಯುತ್ತಿರುವ ಬಡ್ಡಿ

ಬದುಕು ಕಸಿಯುತ್ತಿರುವ ಬಡ್ಡಿ

✍️ ಮುಷ್ತಾಕ್ ಹೆನ್ನಾಬೈಲ್

ಕಳೆದ ತಿಂಗಳು ನಡೆದ ಎರಡು ಮುಸ್ಲಿಂ ಕುಟುಂಬಗಳ ಸಾಮೂಹಿಕ ಸಾವುಗಳು ಇಡೀ ರಾಜ್ಯವನ್ನೇ ತಲ್ಲಣ ಗೊಳಿಸಿದೆ. ಉಡುಪಿ ಜಿಲ್ಲೆಯ ನೇಜಾರಿನ ಒಂದು ಕುಟುಂಬದ ನಾಲ್ಕು ಸಾವುಗಳು, ತಾವು ಯಾಕೆ ಸಾಯುತ್ತಿದ್ದೇವೆ ಎನ್ನುವುದನ್ನು ಬಲಿಪಶುಗಳು (ಮುಖ ಪುಟದಿಂದ) ಅರಿಯುವ ಮುಂಚೆಯೇ ಕ್ರೂರ ಹಂತಕನ ಪ್ರಹಾರಕ್ಕೆ ಸಿಕ್ಕು ಸತ್ತ ಸಾವಾಗಿತ್ತು..

ತುಮಕೂರಿನಲ್ಲಿ ನಡೆದ ಇನ್ನೊಂದು ಕುಟುಂಬದ ಸಾಮೂಹಿಕ ಸಾವು ಬಡ್ಡಿ ವ್ಯವಹಾರ ಎಂಬ ಕರಾಳ ಬಾಹುಗಳು ಮೆಲ್ಲಮೆಲ್ಲನೆ ಸದ್ದಿಲ್ಲದೆ ಆವರಿಸಿಕೊಂಡು ಒಂದಿಡೀ ಮನೆಯ ದೀಪಗಳನ್ನೇ ಆರಿಸಿದ ಆಘಾತಕಾರಿ ಸಾವುಗಳಾಗಿದ್ದವು. ಬಡ್ಡಿ ಆಧಾರಿತ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಗಳು ವಂಚನೆಯನ್ನು ಸಕ್ರಮಗೊಳಿಸಿಕೊಂಡಿರುವ ಅಕ್ರಮ ಸಂಸ್ಥೆಗಳು. ಬಡ್ಡಿಯ ವ್ಯವಹಾರದಿಂದ ಶ್ರೀಮಂತನು ಶ್ರೀಮಂತನಾಗುತ್ತ, ಬಡವನು ಬಡವನಾಗುತ್ತ ಹೋಗುವುದು ಅದರ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು.

ಹೀಗಿರುವ ಕಾರಣಕ್ಕೆ ಆಧುನಿಕ ಪರಿಕಲ್ಪನೆಯ ಬಡ್ಡಿ ವ್ಯವಸ್ಥೆಯನ್ನು ಇಸ್ಲಾಂ ಕಟ್ಟುನಿಟ್ಟಾಗಿ 1450 ವರ್ಷಗಳ ಹಿಂದೆಯೇ ನಿಷೇಧಿಸಿದೆ. ಇಸ್ಲಾಮಿನ ಪ್ರಕಾರ, ತೂಕ-ಅಳತೆ ಮತ್ತು ಪ್ರಮಾಣಗಳು ಸಮವಾಗಿ ವಿನಿಮಯಗೊಳ್ಳಬೇಕು. ವಿನಿಮಯದ ಮಧ್ಯೆ ಯಾವುದೇ ಶ್ರಮ ಮತ್ತು ವಸ್ತು ಇಲ್ಲದೆ ಹಣದಿಂದ ಅಧಿಕ ಹಣ ಗಳಿಸುವುದು ಕಡ್ಡಾಯವಾಗಿ ನಿಷೇಧ. ತೂಕ ಮತ್ತು ಅಳತೆಯ ವಿನಿಮಯಗಳು ಕೂಡ ಸಮವಾಗಿ ವಿನಿಮಯವಾಗಬೇಕು. ಒಂದು ಕೆಜಿ ಉತ್ತಮ ಅಕ್ಕಿಗೆ ಬದಲಾಗಿ ಒಂದೂವರೆ ಕೆಜಿ ಕಳಪೆ ಗುಣಮಟ್ಟದ ಅಕ್ಕಿಯು ಕೂಡ ವಿನಿಮಯವಾಗುವಂತಿಲ್ಲ. ಕಳಪೆ ಎಂದು ಹೆಚ್ಚಿಗೆ ಪಡೆಯಲಾದ ಈ ಅಕ್ಕಿಯು ಬಡ್ಡಿಯ ವ್ಯಾಪ್ತಿಯಲ್ಲಿ ಬರುತ್ತದೆ.

ಈ ರೀತಿಯ ಬಡ್ಡಿಯ ಮೇಲಿನ ನಿರ್ಬಂಧವು, ಬಡವರು ಶ್ರೀಮಂತರ ಕೈಯಲ್ಲಿ ಆರ್ಥಿಕವಾಗಿ ಸಿಕ್ಕು ನಲುಗಬಾರದು ಎನ್ನುವ ಸದುದ್ದೇಶದಿಂದ ಕೂಡಿದೆ. ಆರ್ಥಿಕ ವ್ಯವಸ್ಥೆಯು ಬಡವ ಮತ್ತು ಶ್ರೀಮಂತನ ನಡುವೆ ಸಮವಾದ ಸಹಭಾಗಿತ್ವ ಮತ್ತು ಶ್ರಮದ ಮೂಲಕ ಸಾಕಾರಗೊಳ್ಳಬೇಕೆನ್ನುವ ಸದಾಶಯ ಇದರಲ್ಲಿ ಅಡಕವಾಗಿದೆ. ಇಸ್ಲಾಮೇತರ ಬಡ್ಡಿಯ ಪರಿಕಲ್ಪನೆ ಮತ್ತು ಇಸ್ಲಾಮಿನ ಬಡ್ಡಿಯ ಪರಿಕಲ್ಪನೆಯ ನಡುವಿನ ಒಂದು ದೊಡ್ಡ ವ್ಯತ್ಯಾಸವೆಂದರೆ, ಇಸ್ಲಾಮೇತರ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಒಂದು ಉದ್ಯಮ. ಆದರೆ ಇಸ್ಲಾಮಿಕ್ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ನೀರಾವರಿ, ಶಿಕ್ಷಣ, ಆರೋಗ್ಯದಂತಹ ಒಂದು ಮೂಲಭೂತ ಸರಕಾರಿ ಸೌಲಭ್ಯ.

ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲ ನೀಡುವವನು ಮತ್ತು ಸಾಲ ಪಡೆಯುವವ ಇಬ್ಬರೂ ಕೂಡ ಹೂಡಿಕೆ ಅಥವಾ ಉದ್ದಿಮೆಯ ಪಾಲುದಾರರು. ಲಾಭ ಮತ್ತು ನಷ್ಟಗಳು ಅನುಕ್ರಮವಾಗಿ ಅದರ ಪ್ರಮಾಣದಷ್ಟೇ ಇಬ್ಬರೂ ಪಡೆಯಬೇಕು. ಲಾಭದ ಪ್ರಮಾಣವನ್ನು ಆರಂಭದಲ್ಲಿ ನಿಗದಿಗೊಳಿಸುವ ಅವಕಾಶವಿಲ್ಲ.

ಒಂದೊಮ್ಮೆ ಹೂಡಿಕೆ ಅಥವಾ ಉದ್ದಿಮೆಯಲ್ಲಿ ನಷ್ಟ ಉಂಟಾದರೆ ಸಾಲ ಪಡೆದವನು ಮತ್ತು ಕೊಟ್ಟವನು ಇಬ್ಬರೂ ಕೂಡ ಅದಕ್ಕೆ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಹೀಗಿರುವುದರಿಂದ ಸಾಲ ಪಡೆದವನು ಹೆಚ್ಚು ನಷ್ಟಕ್ಕೆ ಒಳಗಾಗುವುದಿಲ್ಲ. ತನ್ನ ಪಾಲಿನಷ್ಟೇ ನಷ್ಟವನ್ನು ಅನುಭವಿಸುತ್ತಾನೆ. ಹಾಗಾಗಿ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆ ಪ್ರಜೆಗಳಿಗೆ ಒಂದು ಸೌಲಭ್ಯವಾಗಿದೆ. ವ್ಯವಹಾರದಲ್ಲಿ ಸಾಲ ನೀಡಿದವನ ಪಾಲುದಾರಿಕೆಯೂ ಕೂಡ ಇರುವುದರಿಂದ ಸಾಲ ನೀಡುವವನು ಉದ್ಯಮ ಮತ್ತು ವ್ಯಕ್ತಿಯ ಸಾಮರ್ಥ್ಯ ಹಾಗೂ ಸವಲತ್ತುಗಳನ್ನು ನೋಡಿ, ಕೂಲಂಕಷವಾಗಿ ಪರಿಶೀಲಿಸಿಯೇ ಕೊಡುತ್ತಾನೆ.

ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ಪಡೆಯುವವರು ಆರೋಗ್ಯ ಮತ್ತು ಕುಟುಂಬ ನಿರ್ವಣೆಗಾಗಿ ಪಡೆಯುತ್ತಾರೆ. ಇಸ್ಲಾಮಿನಲ್ಲಿ ವರದಕ್ಷಿಣೆಯು ಕಡ್ಡಾಯವಾಗಿ ನಿಷೇಧವಿರುವುದರಿಂದ ಹೆಣ್ಣು ಮಕ್ಕಳ ಮದುವೆಗೆ ಮಾತಾಪಿತರು ಸಾಲವನ್ನು ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ. ಮುಸ್ಲಿಮರಲ್ಲಿ ಆರೋಗ್ಯ ಮತ್ತು ಕುಟುಂಬ ನಿರ್ವಹಣೆಯ ಸಮಸ್ಯೆ ಇರುವವರು, ಉಳ್ಳವರ ವಾರ್ಷಿಕ ಕಡ್ಡಾಯ ದಾನವಾದ ಝಕಾತ್ ವ್ಯಾಪ್ತಿಯಲ್ಲಿ ಬರುತ್ತಾರೆ. ಝಕಾತ್ ಪಾವತಿದಾರರು ಈ ಎರಡು ವರ್ಗದವರಿಗೆ ಹೆಚ್ಚು ಆಯ್ದುಕೊಂಡು ಪಾವತಿಸಬೇಕಾಗುತ್ತದೆ. ಝಕಾತಿನ ಅಸಮರ್ಪಕ ಹಂಚಿಕೆಯು ಪಾವತಿದಾರನ ಅತೀ ದೊಡ್ಡ ಧಾರ್ಮಿಕ ಲೋಪವಾಗುತ್ತದೆ. ಇದು ಧಾರ್ಮಿಕ ಉದ್ದೇಶವನ್ನು ನಷ್ಟಗೊಳಿಸುತ್ತದೆ. ಹಾಗಾಗಿ ಝಕಾತ್ ಪಾವತಿದಾರರು ಅರ್ಹರಾದವರನ್ನೇ ಹುಡುಕಿ ಕೊಡುತ್ತಾರೆ.

ಇದರ ಹೆಚ್ಚಿನ ಫಲಾನುಭವಿಗಳು ಆರೋಗ್ಯ ಸಮಸ್ಯೆ, ಸಾಲ ಮತ್ತು ಕುಟುಂಬ ನಿರ್ವಹಣೆಯ ಸಮಸ್ಯೆ ಇರುವವರು.. ಹಾಗಾಗಿ ಇಸ್ಲಾಮಿಕ್ ಧಾರ್ಮಿಕ ವ್ಯವಸ್ಥೆ ಇರುವ ಸಮಾಜದಲ್ಲಿ ಸಾಮಾನ್ಯವಾಗಿ ವೈಯಕ್ತಿಕ ಸಾಲಗಳು ಅವಶ್ಯವಿರುವುದಿಲ್ಲ. ಇಸ್ಲಾಮಿಕ್ ಆಡಳಿತವಿರುವ ದೇಶಗಳಲ್ಲಿ “ಬೈತುಲ್ ಮಾಲ್” ಅಂದರೆ ರಾಜ ಭಂಡಾರದಿಂದ ಈ ವರ್ಗಗಳಿಗೆ ಝಕಾತ್ ಪಾವತಿಯನ್ನು ವಾರ್ಷಿಕವಾಗಿ ಮಾಡಲಾಗುತ್ತದೆ.

ಹೆಚ್ಚಿನವರು ಸಾಲವನ್ನು ಶೂಲವಾಗಿಸಿಕೊಳ್ಳುವುದು ಆರೋಗ್ಯ, ಕುಟುಂಬ ನಿರ್ವಹಣೆ, ಹೆಣ್ಣು ಮಕ್ಕಳ ಮದುವೆಯ ಅನಿವಾರ್ಯತೆಗಳಿಂದಾಗಿಯೇ ಆಗಿದೆ. ಇದಕ್ಕಿಂತ ಹೊರತಾದ ವೈಯಕ್ತಿಕ ಸಾಲಗಳೆಲ್ಲವೂ ಐಷಾರಾಮಿ ಜೀವನವನ್ನು ಉದ್ದೇಶಿಸಿಯೇ ಆಗಿರುತ್ತದೆ.

ಬಡ್ಡಿ ಸಹಿತವಾದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಡ್ಡಿ ಒಂದು ಆಮಿಷ. ಅದೆಷ್ಟೋ ಜನರು ಅದೆಷ್ಟೋ ಕಾಲಗಳಿಂದ ಇದಕ್ಕೆ ಬಲಿಯಾಗಿದ್ದಾರೆ. ಹೆಚ್ಚಾಗಿ ಇಂತಹ ಆಮಿಷಕ್ಕೆ ಒಳಗಾಗುವವರು ಬಡ ವರ್ಗದವರೇ ಆಗಿರುತ್ತಾರೆ. ಈ ವರ್ಗದವರಿಗೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ, ಹೆಚ್ಚು ಕಡಿಮೆ ವಂಚಕರಾಗಿರುವ, ಅತಿಬುದ್ದಿವಂತರೆನಿಸಿಕೊಂಡವರು ಸೇರಿ ಹಣೆಯುವ ತಂತ್ರದ ಜ್ಞಾನವಿರುವುದಿಲ್ಲ. ಈ ಬಲಿಪಶುಗಳಿಗೆ ಜ್ಞಾನೋದಯ ಆಗುವ ಮುಂಚೆ ಅವರ ಬದುಕು ಮುಗಿದಿರುತ್ತದೆ. ತುಮಕೂರಿನಲ್ಲಿ ಒಂದೇ ಕುಟುಂಬದ ಐದು ಜನ ಹತಭಾಗ್ಯರಿಗೆ ಇದೇ ಆಗಿದೆ.

ಇಂಥ ಅನಾಹುತ- ಅವಘಡಗಳು ಸಮಾಜದಲ್ಲಿ ಸಂಭವಿಸಬಾರದು ಎನ್ನುವ ಕಾರಣಕ್ಕೆ ಪವಿತ್ರ ಕುರ್‌ಆನಿನಲ್ಲಿ ಬಡ್ಡಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬಡ್ಡಿ ಕೊಡುವವನು, ಪಡೆಯುವವನು, ಮಧ್ಯಸ್ಥಿಕೆ ವಹಿಸುವವನು ಮತ್ತು ಬರೆಯುವನನ್ನು ಶಪಿಸಲಾಗಿದೆ. ಬಡ್ಡಿಯ ವ್ಯವಹಾರ ಮಾಡುವುದು ದೇವ ಮತ್ತು ದೇವಸಂದೇಶಕಾರರ ವಿರುದ್ಧ ಯುದ್ಧ ಸಾರಿದಂತೆ ಎಂದು ಹೇಳಿ ಬಡ್ಡಿಯು ಘೋರ ಪಾಪ ಎಂದು ಸಾರಲಾಗಿದೆ. ಪವಿತ್ರ ಕುರ್‌ಆನಿನ ಅಲ್‌ಬಕರಃ ಮತ್ತು ಆಲಿ ಇಮ್ರಾನ್ ಅಧ್ಯಾಯಗಳಲ್ಲಿ ಬಡ್ಡಿಯ ನಿಷೇಧದ ಆದೇಶ ಸೂಕ್ತಗಳಿವೆ.

ಆದರೆ ಇವೆಲ್ಲದರ ಹೊರತಾಗಿಯೂ ಕೂಡ ಇತರರಿಂದ ಹಣ, ವಸ್ತು ಅಥವ ಯಾವುದೇ ವಸ್ತುವನ್ನು ಪಡೆದು ಹಿಂದಿರುಗಿ ಕೊಡುವಾಗ ಕೊಡುವವನು ಮನಃಪೂರ್ವಕವಾಗಿ ಸಂತೋಷದಿಂದ ಏನಾದರೂ ಹೆಚ್ಚುವರಿಯನ್ನು ಕೊಟ್ಟರೆ ಅದು ಬಡ್ಡಿ ಆಗುವುದಿಲ್ಲ. ಸ್ವತ: ಪ್ರವಾದಿ ಮುಹಮ್ಮದ್(ಸ)ರು ತಾವೇನಾದರೂ ಸಾಲ ಪಡೆದರೆ ಹಿಂದಿರುಗಿ ಕೊಡುವಾಗ ಕೊಡಬೇಕಾದಕ್ಕಿಂತ ತುಸು ಹೆಚ್ಚೇ ಕೊಡುತ್ತಿದ್ದರು. ಹೀಗೆ ಕೊಡುವುದು ಒಂದು ಪ್ರಮುಖ ಪ್ರವಾದಿ ಚರ್ಯೆ.

ತಾನು ಸೃಷ್ಟಿಸಿದ ಮನುಷ್ಯ ಬಡ್ಡಿಯ ಕಾರಣದಿಂದ ದಮನಿತ, ಶೋಷಿತ ಮತ್ತು ಮರ್ದಿತನಾಗಬಾರದು ಎಂಬುದು ಲೋಕಪಾಲಕನ ಉದ್ದೇಶ. ಹಾಗಾಗಿಯೇ, ವ್ಯಾಪಾರವನ್ನು ಸಮ್ಮತಗೊಳಿಸಿ ಬಡ್ಡಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬಡವರು ಮಧ್ಯಮ ವರ್ಗದವರು ಇದನ್ನು ಅರಿತರೆ ಬದುಕು, ಇಲ್ಲದಿದ್ದರೆ ಸಾವು. ಬಡ್ಡಿಯ ವ್ಯವಹಾರದ ಆಮಿಷಕ್ಕೆ ಒಳಗಾಗದೆ ಅರಿತು ಬದುಕಿ, ಬೇರೆಯವರನ್ನು ಬದುಕಿಸಬೇಕಿದೆ.

ಬಡ್ಡಿಯ ವ್ಯವಹಾರವಿಲ್ಲದೆ ಆರ್ಥಿಕ ವ್ಯವಸ್ಥೆ ಅಸಾಧ್ಯ ಎಂದು ಭ್ರಮಿಸುವವರ ಭ್ರಮೆ ಕಳಚಿ ಬೀಳಬೇಕಿದ್ದರೆ ದೊಡ್ಡ ಕಸರತ್ತು ಮಾಡಬೇಕು. ಸದ್ಯಕ್ಕಿರುವ ಬಡ್ಡಿಯ ಕುರಿತಾದ ಬುದ್ದಿಯನ್ನು ಸರಿಮಾಡಲಾಗದು. ಬಡ್ಡಿಯಿಲ್ಲದ ಬ್ಯಾಂಕಿಂಗ್ ವ್ಯವಸ್ಥೆಯು ಆದರ್ಶ ಮತ್ತು ಅಸಾಧಾರಣ ಎಂದು ಅರಿಯಲು ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯ ಸರಳ ಅಧ್ಯಯನ ಸಾಕು..

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಜಾಗತಿಕ ಕಾನೂನುಗಳು

✍️ ಮುಷ್ತಾಕ್ ಹೆನ್ನಾಬೈಲ್ ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದರು(ಸ) ಪ್ರವರ್ಧಮಾನಕ್ಕೆ ಬರುವವರೆಗೆ ಜಗತ್ತಿನ ಯಾವುದೇ ಸಾಮ್ರಾಜ್ಯ, ಸಮಾಜ, ಸಮುದಾಯ, ದೇಶಗಳ ಆಡಳಿತಗಳು …