Home / ಲೇಖನಗಳು / ಇಸ್ಲಾಮ್ ವೈಯಕ್ತಿಕ ಬದುಕಿನಲ್ಲಿ ಇದ್ದರಷ್ಟೇ ಸಾಕೇ?

ಇಸ್ಲಾಮ್ ವೈಯಕ್ತಿಕ ಬದುಕಿನಲ್ಲಿ ಇದ್ದರಷ್ಟೇ ಸಾಕೇ?

✍️ ಯೂಸುಫ್ ಉಮರಿ

ಲಾ ಇಲಾಹ ಇಲ್ಲಲ್ಲಾಹ್ ಎಂಬುದು ಬದುಕಿನ ತಳಹದಿಯಾಗಿದೆ ಎಂಬುದರಲ್ಲಿ ಜಗತ್ತಿನ ಮುಸ್ಲಿಮರಲ್ಲಿ ಯಾರಿಗೂ ಅಭಿಪ್ರಾಯ ಬೇಧವಿಲ್ಲ. ಲಾ ಇಲಾಹ ಇಲ್ಲಲ್ಲಾಹ್ ನಮ್ಮ ಬದುಕಿನ ಪವಿತ್ರ ಕ್ರಾಂತಿಕಾರೀ ಮೌಲ್ಯಯುತ ವಚನವಾಗಿದೆ. ಪ್ರವಾದಿ ಆದಮ್(ಅ)ರಿಂದ ಪ್ರಾರಂಭವಾಗಿ ಪ್ರವಾದಿ ಮುಹಮ್ಮದ್ ರವರ(ಸ) ವರೆಗಿನ ಎಲ್ಲಾ ಪ್ರವಾದಿಗಳಿಗೂ ಅವರ ಅನುಯಾಯಿಗಳಿಗೂ ಅಲ್ಲಾಹನು ನೀಡಿದ ಸಂದೇಶದ ಘೋಷವಾಕ್ಯವೂ ಲಾ ಇಲಾಹ ಇಲ್ಲಲ್ಲಾಹ್ ಆಗಿತ್ತು ಎಂಬುದನ್ನು ಕುರ್‌ಆನ್ ಸ್ಪಷ್ಟಪಡಿಸುತ್ತದೆ.

ನಾವು ನಿಮಗಿಂತ ಮುಂಚೆ ಕಳುಹಿಸಿದ ಪ್ರತಿಯೊಬ್ಬ ಸಂದೇಶವಾಹಕರಿಗೂ, “ನನ್ನ ಹೊರತು ಅನ್ಯ ದೇವರಿಲ್ಲ. ಆದ್ದರಿಂದ ನೀವು ನನ್ನ ದಾಸ್ಯ ಆರಾಧನೆಯನ್ನೇ ಮಾಡಿರಿ” ಎಂದು `ದಿವ್ಯವಾಣಿ’ ಮಾಡಿದ್ದೆವು. (ಅಲ್ ಅಂಬಿಯಾ: 25)

ಇದನ್ನು ಪ್ರವಾದಿವರ್ಯರು(ಸ) ಹೀಗೆ ವಿವರಿಸುತ್ತಾರೆ; ನಾನು ಮತ್ತು ನನಗಿಂತ ಮುಂಚೆ ಬಂದಂತಹ ಎಲ್ಲಾ ಪ್ರವಾದಿಗಳು ಸಂದೇಶ ನೀಡಿದ್ದ ಶ್ರೇಷ್ಠ ವಚನ ಲಾ ಇಲಾಹ ಇಲ್ಲಲ್ಲಾಹ್ ಆಗಿದೆ.

ಇದರಲ್ಲಿ ಬರುವಂತಹ ಅಲ್ ಇಲಾಹ್ ಎಂದರೇನೆಂಬುದರ ಬಗ್ಗೆ ನಾವು ಯೋಚಿಸಬೇಕಾಗಿದೆ. ಇಲಾಹ್, ಇಬಾದತ್ ಎಂಬುದರ ಕುರಿತು ಸಮಗ್ರವಾಗಿ ವಸ್ತುನಿಷ್ಠವಾಗಿ ಅರ್ಥೈಸಿದಾಗ ಈ ಕ್ರಾಂತಿಕಾರಿ ವಚನದ ಮಹತ್ವವನ್ನು ನಾವು ತಿಳಿಯಬಹುದು. ಇಲಾಹ್ ಆದ ಕಾರಣ ಮಾತ್ರ ನಾವು ಅಲ್ಲಾಹನ ಇಬಾದತ್ ಮಾಡುತ್ತೇವೆ. ಈ ವಚನದ ಪ್ರಾರಂಭದಲ್ಲಿಯೇ `ಲಾ ಇಲಾಹ’ ಅಥವಾ ಇಲಾಹ್ ಇಲ್ಲ ಎಂಬ ವಚನ ಬಂದಿದೆ. ಆನಂತರ ಇಲ್ಲಲ್ಲಾಹ್ ಅಂದರೆ ಅಲ್ಲಾಹನನ್ನು ಹೊರತು ಪಡಿಸಿ ಎಂಬ ವಚನ ಅದನ್ನು ಅಂಗೀಕರಿಸಿದೆ.

ಜಗತ್ತಿನಲ್ಲಿ ಯಾವುದನ್ನೆಲ್ಲಾ ಯಾರನ್ನೆಲ್ಲಾ ಇಲಾಹ್ ಎಂದು ಕರೆಯಲಾಗುತ್ತದೆಯೋ ಅವೆಲ್ಲವನ್ನೂ ನಿರಾಕರಿಸುವ ಪ್ರಕ್ರಿಯೆಗೆ ವಿಧೇಯನಾದ ಓರ್ವನಿಗೆ ಮಾತ್ರ ಏಕೈಕನಾದ ಅಲ್ಲಾಹನಿಗೆ ಮಾತ್ರ ಇಲಾಹ್ ಎಂದು ಕರೆಯಲು ಅರ್ಹತೆಯರುವುದು. ಎಂಬುದು ಇದರ ವ್ಯಾಖ್ಯಾನವಾಗಿದೆ.

ನಿಜವಾಗಿ ಅಲ್ ಇಲಾಹ್ ಎಂದರೆ ಅಲ್ಲಾಹನ ಶಕ್ತಿ ಸಾಮರ್ಥ್ಯ ಗುಣವಿಶೇಷತೆ ಹಕ್ಕು, ಅಧಿಕಾರ ಎಲ್ಲದರಲ್ಲಿಯೂ ಆತನಿಗೆ ಸಮಾನರೂ ಇಲ್ಲ ಎಂಬ ವಿಶ್ವಾಸವಾಗಿದೆ. ಅದರಲ್ಲಿ ಇತರರಿಗೆ ಪಾಲುದಾರಿಕೆ ನೀಡಿದರೆ ಅದು ಶಿರ್ಕ್ (ಬಹುದೇವಾರಾಧನೆ) ಆಗುತ್ತದೆ. ಅಲ್ಲಾಹನ ಮೇಲಿನ ವಿಶ್ವಾಸವನ್ನು ನಿರಾಕರಿಸಿದಾಗ ಅದು ಕುಫ್ರ್ (ಸತ್ಯ ನಿಷೇಧ) ಆಗುತ್ತದೆ. ಶಿರ್ಕ್ ಮತ್ತು ಕುಫ್ರ್ ತಿರಸ್ಕರಿಸುತ್ತಾ ಅಲ್ಲಾಹನಿಗೆ ಮಾತ್ರ ಬದುಕನ್ನು ಸಮರ್ಪಿಸಿದಾಗ ಅದು ಆರಾಧನೆ(ಇಬಾದತ್) ಆಗುತ್ತದೆ. ಇಸ್ಲಾಮಿನ ಎಲ್ಲಾ ಕಾರ್ಯಗಳು ಲಾ ಇಲಾಹ ಇಲ್ಲಲ್ಲಾಹ್ ಎಂಬ ಭದ್ರ ಬುನಾದಿಯ ಮೇಲೆ ನಿಂತಿದೆ.

ಆದ್ದರಿಂದ, ಇಸ್ಲಾಮಿನ ಸಾಮಾಜಿಕ ವ್ಯವಸ್ಥೆಯನ್ನು ಕುರ್‌ಆನ್ “ಮಸಲು ಕಲಿಮತುತ್ತಯ್ಯಿಬಕ ಶಜರತಿನ್ ತಯ್ಯಿಬ” ಎಂದು ಉತ್ತಮ ವೃಕ್ಷದೊಂದಿಗೆ ಹೋಲಿಸಿದೆ. ಅದರ ಬುನಾದಿ ಭದ್ರವಾಗಿದೆಯೆಂದು (ಲಾ ಇಲಾಹ ಇಲ್ಲಲ್ಲಾಹ್) ವಿಶ್ಲೇಷಿಸಿದೆ. ವೃಕ್ಷಕ್ಕೆ ಸಂಬಂಧಿಸಿ ಹೇಳುವುದಾದರೆ ಅದರ ಬೀಜದ ಗುಣವು ಅದರ ಎಲ್ಲಾ ಘಟಕಗಳಿಗೆ ಹರಿಯುತ್ತದೆ.

ಹಾಗೆಯೇ ಇಸ್ಲಾಮೀ ವ್ಯವಸ್ಥೆಯ ಎಲ್ಲಾ ಘಟಕಗಳಲ್ಲಿ ಲಾ ಇಲಾಹ ಇಲ್ಲಲ್ಲಾಹ್ ಎಂಬ ವಚನದ ಪ್ರಭಾವವಿರುವುದು. ಆ ಪ್ರಭಾವದಿಂದ ಮುಕ್ತರಾದವರಲ್ಲಿ ಸರಿಯಾದ ಇಸ್ಲಾಮೀ ಜೀವನ ಇರಲಾರದು. ಇದು ತೌಹೀದ್‌ನ ಮರ್ಮವಾಗಿದೆ.

ಅಲ್ಲಾಹನ ಪರಮಾಧಿಕಾರವನ್ನು ಸಮಗ್ರವಾಗಿ ಅಂಗೀಕರಿಸಿರಿ ಎಂಬ ಇಸ್ಲಾಮಿನ ಸಮಗ್ರತೆಯನ್ನು ನವೋತ್ಥಾನ ನಾಯಕರು ಎತ್ತಿಹಿಡಿದಿದ್ದರು. ಇಸ್ಲಾಮ್ ಸಮಗ್ರವಾಗಿದೆ, ಅದು ಪರಿಪೂರ್ಣತೆಯಾಗಿದೆ ಎಂಬುದನ್ನು ಎಲ್ಲ ಮುಸ್ಲಿಮರೂ ಒಪ್ಪುತ್ತಾರೆ. ಆದರೆ, ಸಮಗ್ರತೆಯ ಕುರಿತು ಪರಂಪರಾಗತ ಮುಸ್ಲಿಮ್ ಸಮುದಾಯದ ನಿಲುವು ಇಸ್ಲಾಮ್ ಸಮಗ್ರ ಧರ್ಮವಾಗಿದೆ ಎಂದಾಗಿದೆ. ಆಧ್ಯಾತ್ಮಿಕ ಆರಾಧನಾ ರಂಗಗಳಲ್ಲಿ ಅವರು ಇಸ್ಲಾಮಿನ ಸಮಗ್ರತೆಯನ್ನು ಒಪ್ಪುತ್ತಾರೆ. ಆದರೆ ಆಧ್ಯಾತ್ಮಿಕ ರಂಗದಲ್ಲಿ ಮಾತ್ರ ಅಲ್ಲಾಹನ ಉಲೂಹಿಯ್ಯತ್ ಅಂಗೀಕರಿಸಿದರೆ ಸಾಕೇ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತ.

ವೈಯಕ್ತಿಕ ಬದುಕಿನ ಆರ್ಥಿಕ ರಂಗದಲ್ಲಿ ಅಲ್ಲಾಹನ ಉಲೂಹಿಯ್ಯತ್ ನಾವು ಅಂಗೀಕರಿಸಬೇಡವೇ ಎಂಬ ಪ್ರಶ್ನೆಯಿದೆ. ಪ್ರವಾದಿ ಶುಐಬ್(ಅ) ರೊಂದಿಗೆ ಅವರ ಜನತೆಯು, ನಿನ್ನ ನಮಾಝ್ ನಮ್ಮ ಇಲಾಹ್‌ಗಳನ್ನು ತೊರೆಯಲು, ಆರ್ಥಿಕ ರಂಗದಲ್ಲಿ ನಮ್ಮ ಇಷ್ಟಾನುಸಾರ ವ್ಯವಹರಿಸುವುದನ್ನು ತಡೆಯುತ್ತದೆಯೋ ಎಂದು ಕೇಳಿರುವುದಕ್ಕೆ ಇದೇ ಕಾರಣವಾಗಿದೆ. ನೈತಿಕ ರಂಗದಲ್ಲಿ ಅಲ್ಲಾಹನ ಉಲೂಹಿಯ್ಯತ್ ಅನ್ನು ನಾವು ಅಂಗೀಕರಿಸಬೇಕು. ಪ್ರವಾದಿ ಲೂತ್(ಅ)ರ ಸಂದೇಶ ಪ್ರಚಾರ ರಂಗದಲ್ಲಿ ಮಹತ್ವ ನೀಡಿರುವುದು ಸಲಿಂಗರತಿಯ ವಿರುದ್ಧವಾಗಿತ್ತು ಎಂದು ಕುರ್‌ಆನ್ ನಮಗೆ ಕಲಿಸುತ್ತದೆ. ಪ್ರವಾದಿ ಮುಹಮ್ಮದ್‌ರವರು(ಸ) ಕೂಡಾ ಮದ್ಯಪಾನ ಜೂಜು ಮುಂತಾದ ಅನೈತಿಕತೆಯ ವಿರುದ್ಧ ಪ್ರಬಲವಾಗಿ ಹೋರಾಡಿದ್ದರು. ಧಾರ್ಮಿಕ-ನೈತಿಕ- ಸಾಂಸ್ಕೃತಿಕ- ಆರ್ಥಿಕ ರಂಗಗಳಲ್ಲಿ ವ್ಯಕ್ತಿಗಳು ಎಂಬ ನೆಲೆಯಲ್ಲಿ ಅಲ್ಲಾಹನ ಕಾನೂನುಗಳನ್ನು ಅಂಗೀಕರಿಸಬೇಕೆಂಬುದರಲ್ಲಿ
ಯಾವುದೇ ಭಿನ್ನಾಭಿಪ್ರಾಯವಿಲ್ಲ.

ಸಾಮಾಜಿಕ ವ್ಯವಸ್ಥೆ ಎಂಬ ನೆಲೆಯಲ್ಲಿ ಅಲ್ಲಾಹನ ಉಲೂಹಿಯ್ಯತ್ ಅಂಗೀಕರಿಸಬೇಕೇ? ಎಂಬ ವಿಷಯದಲ್ಲಿ ಮಹತ್ತರವಾದ ವ್ಯತ್ಯಾಸವಿದೆ. ಉದಾಹರಣೆಗೆ,
ಓರ್ವ ಮುಸ್ಲಿಮ್ ಬಡ್ಡಿ ವ್ಯವಹಾರದಿಂದ ದೂರ ನಿಂತರೆ ಸಾಕೇ? ಅಥವಾ ಬಡ್ಡಿರಹಿತವಾದ ಒಂದು ವ್ಯವಸ್ಥೆ ಜಾರಿಗೆ ಬರಲು ಪ್ರಯತ್ನಿಸಬೇಕೇ? ವೈಯಕ್ತಿಕ ಬದುಕಲ್ಲಿ ವ್ಯಭಿಚಾರ, ಸಲಿಂಗ ಕಾಮದಿಂದ ದೂರವಿದ್ದರೆ ಸಾಕೇ? ಅಥವಾ ಧಾರ್ಮಿಕತೆ ನೈತಿಕತೆಯಿರುವ ಸಾಮಾಜಿಕ ವ್ಯವಸ್ಥೆ ಬರಲು ಕಾರ್ಯರಂಗದಲ್ಲಿ ಸಕ್ರಿಯರಾಗಬೇಕೇ? ಎಂಬ ಪ್ರಶ್ನೆ ಇಲ್ಲಿ ಪ್ರಮುಖ ಎನಿಸುತ್ತದೆ. ಈ ರಂಗದಲ್ಲಿ ಅಲ್ಲಾಹನ ಕಾನೂನನ್ನು ಪಾಲಿಸಲು ನಾವು ಬದ್ಧರು ಎಂದು ಕುರ್‌ಆನ್ ನಮ್ಮನ್ನು ಕಲಿಸುತ್ತದೆ. ಅಲ್ಲಾಹನು ನೀಡಿದ ಕಾನೂನು ವ್ಯವಸ್ಥೆ ಪರಿಪೂರ್ಣ ಮತ್ತು ಸಮಗ್ರವಾಗಿದೆ ಎಂದು ಪವಿತ್ರ ಕುರ್‌ಆನ್ ನಮಗೆ ಕಲಿಸಿದೆ.

ಈ ಸಾಮಾಜಿಕ ವ್ಯವಸ್ಥೆಯನ್ನು ಕುರ್ ಆನಿನಲ್ಲಿ “ಹುಕುಮ್” ಎನ್ನಲಾಗುತ್ತದೆ. ಕಾನೂನು ನಿರ್ಮಾಣದ ಪರಮಾಧಿಕಾರ ಅಲ್ಲಾಹನಿಗೆ ಮಾತ್ರ ಇರುವುದು ಎಂಬುದನ್ನು ಬಹಳ ತೀಕ್ಷ್ಣವಾಗಿ ಕುರ್‌ಆನ್ ಘೋಷಿಸಿದೆ.

ನಮ್ಮ ಬದುಕಿನ ಸರಿ, ತಪ್ಪುಗಳನ್ನು ನಿರ್ಣಯಿಸುವ ಅಧಿಕಾರ ಅಲ್ಲಾಹನಿಗೆ ಮಾತ್ರ ಇದೆ. ಇದರ ಆಧಾರದಲ್ಲಿ ಒಂದು ಸಾಮಾಜಿಕ ವ್ಯವಸ್ಥೆಗಾಗಿ ನಾವು ಪರಿಶ್ರಮ ನಡೆಸಬೇಕೇ ಅಥವಾ ವ್ಯಕ್ತಿ ಎಂಬ ನೆಲೆಯಲ್ಲಿ ಬದುಕಲ್ಲಿ ನಾವು ಅಂತಹಾ ಮೌಲ್ಯಗಳನ್ನು ಪಾಲಿಸಿದರೆ ಸಾಕೇ?

ಅಲ್ಲಾಹನ ಕಾನೂನು ವ್ಯವಸ್ಥೆ ನಮ್ಮ ವೈಯಕ್ತಿಕ ಬದುಕಿನಲ್ಲಿ ಮಾತ್ರ ಸಾಕು ಎಂದಾದರೆ ಅದು ಬಹಳ ಸುಲಭವಾಗಿದೆ. ಆಗ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಕೆಡುಕಿಗೆ ಪ್ರತಿಕ್ರಿಯಿಸದೆ ನಮಗೆ ತಟಸ್ಥವಾಗಿರುವ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಲಾಹನ ಕಾನೂನು ಪಾಲಿಸದೆ ನಮಗಿಷ್ಟವಾದ ಯಾವುದೇ ವ್ಯವಸ್ಥೆಗಾಗಿ ಪರಿಶ್ರಮಿಸ ಬಹುದು ಎಂಬುದು ಅದರ ಮರ್ಮ.

ಆದರೆ, ಅಲ್ಲಾಹನ ವಿಧಿ ನಿಷೇಧಗಳನ್ನು ಪಾಲಿಸುತ್ತಾ ಇರುವ ಒಂದು ಸಾಮಾಜಿಕ ವ್ಯವಸ್ಥೆಗೆ ಇಸ್ಲಾಮ್ ಅನುಮತಿ ನೀಡುತ್ತದೆ. ಅಷ್ಟೆ ಅಲ್ಲ, ಸಾಮಾಜಿಕವಾದ ಕೆಡುಕುಗಳಿಗೆ ಅಧಾರ್ಮಿಕತೆಯ ವಿರುದ್ಧ ಹೋರಾಡದೆ ಮೌನವಾಗಿರಲು ಯಾವುದೇ ಸತ್ಯವಿಶ್ವಾಸಿಗೆ ಅವಕಾಶವಿಲ್ಲ. ಲಾ ಇಲಾಹ ಇಲ್ಲಲ್ಲಾಹ್ ಎಂಬ ಪವಿತ್ರ ವಚನದ ತಳಹದಿಯ ಸಾಮಾಜಿಕ ವ್ಯವಸ್ಥೆಗೆ ಬೇಕಾಗಿ ಶ್ರಮಿಸುವುದು ಓರ್ವ ಸತ್ಯವಿಶ್ವಾಸಿಯ ನೈಜ ರಾಜಕೀಯ ಚಟುವಟಿಕೆಯಾಗಿದೆ. ವೈಯಕ್ತಿಕ ಬದುಕಿನಲ್ಲಿ ಮಾತ್ರ ಸುಧಾರಣೆಯಲ್ಲ, ಸಾಮಾಜಿಕ ವ್ಯವಸ್ಥೆಯಲ್ಲಿಯೂ ಸುಧಾರಣೆ ತರುವುದು ಇಸ್ಲಾಮಿನ ಗುರಿ ಎಂಬುದನ್ನು ಪ್ರಮುಖವಾಗಿ ಅರಿತುಕೊಳ್ಳಬೇಕು.

ವಿಶ್ವ ನಾಗರಿಕತೆಯ ಕುರಿತು ಒಂದು ಗ್ರಂಥದಲ್ಲಿ ಯೇಸುವಿನ ಶಿಕ್ಷಣವನ್ನು ಮುಂದಿರಿಸಿ ಒಂದು ಪ್ರಶ್ನೆ ಕೇಳಲಾಗುತ್ತದೆ. ಪ್ರವಾದಿಗಳು ಆಡಳಿತ ವರ್ಗದ ವಿರುದ್ಧ ಹೋರಾಟದಲ್ಲಿದ್ದರು ಎಂದಾದರೆ ಅವರ ಉದ್ದೇಶ ಏನಾಗಿತ್ತು ಎಂಬುದೇ ಆ ಪ್ರಶ್ನೆಯಾಗಿತ್ತು. ಯಾವುದನ್ನು ಆರಾಧಿಸಬಾರದು, ಯಾವುದನ್ನು ಆರಾಧಿಸಬೇಕು ಎಂಬುದು ಅದರ ಬುನಾದಿಯಾಗಿತ್ತೇ? ಅಥವಾ ರೋಮನ್ ಸಾಮ್ರಾಜ್ಯದ ಸಾಮಾಜಿಕ ವ್ಯವಸ್ಥೆ ಹೇಗಿರಬೇಕು ಎಂಬುದು ಅದರ ತಳಹದಿಯಲ್ಲಾಗಿತ್ತೇ? ಪ್ರವಾದಿ ಈಸಾ(ಅ) ರೋಮ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ್ದು ವೈಯಕ್ತಿಕ ಬದುಕಿನ ಜೊತೆಗೆ ಸಾಮಾಜಿಕ ವ್ಯವಸ್ಥೆಯೂ ಸುಧಾರಣೆ ಕಾಣಬೇಕೆಂದು ಆಗಿದೆ.

ಈಸಾ(ಅ) ರಂಗಕ್ಕಿಳಿದಾಗ ಅವರು ತಿರುಗಿಬಿದ್ದರು ಎಂದು ಆ ಗ್ರಂಥ ಹೇಳುತ್ತದೆ. ವ್ಯಾಪಾರ ರಂಗದಲ್ಲಿ ಅಕ್ರಮ ಮಿತಿ ಮೀರಿದಾಗ ಅದರ ವಿರುದ್ಧ ಪ್ರತಿಕ್ರಿಯಿಸಿದ್ದಕ್ಕಾಗಿ ಅವರ ವಿರುದ್ಧ ಆ ಜನತೆ ತಿರುಗಿ ಬಿದ್ದಿತು. ಸಲಿಂಗರತಿ ವ್ಯಾಪಕವಾದ ಪ್ರದೇಶದಲ್ಲಿ ನೈತಿಕತೆಗಾಗಿ ರಂಗಕ್ಕಿಳಿದ ಕಾರಣ ಪ್ರವಾದಿ ಲೂತ್(ಅ)ರ ವಿರುದ್ಧ ಆಡಳಿತ ವರ್ಗವು ತಿರುಗಿ ಬಿದ್ದಿತು. ಎಂಬುದು ನಮಗೆ ತಿಳಿದು ಬರುತ್ತದೆ.

ಪ್ರವಾದಿಗಳ ಸಂದೇಶ ಪ್ರಚಾರದ ಗುರಿ ಮುಸ್ಲಿಮರನ್ನು ಮಾತ್ರ ಮದ್ಯಪಾನದಿಂದ ಮುಕ್ತರನ್ನಾಗಿ ಮಾಡುವುದಲ್ಲ. ಬದಲಾಗಿ ಮದ್ಯ ಮುಕ್ತವಾದ ಒಂದು ಸಾಮಾಜಿಕ ವ್ಯವಸ್ಥೆ ಜಾರಿಗೆ ತರುವುದಾಗಿತ್ತು. ಸಾಮಾಜಿಕ ಬದಲಾವಣೆ ಗುರಿಯೆಂದಾದರೆ ಇಸ್ಲಾಮೀ ಸಾಮಾಜಿಕ ವ್ಯವಸ್ಥೆಗಾಗಿ ಮಾತ್ರವೇ ಮುಸ್ಲಿಮರು ಪರಿಶ್ರಮಿಸಬೇಕು. ಪ್ರವಾದಿ ವರ್ಯರು(ಸ) ಇಂತಹ ಒಂದು ಸಾಮಾಜಿಕ ಬದಲಾವಣೆಯ ಕುರಿತು ತನ್ನ ಸಂದೇಶ ಪ್ರಚಾರ ರಂಗದ ಆರಂಭ ಕಾಲದಲ್ಲಿಯೇ ಹೇಳಿದ್ದರು.

ಹಿಂಸೆ ದೌರ್ಜನ್ಯಕ್ಕೀಡಾಗಿ ಬಂದ ಖಬ್ಬಾಬ್‌ರ ಜೊತೆ ಸನ್‌ಆದಿಂದ ಹದರ್ ಮೌತ್‌ವರೆಗೆ ಯಾವುದೇ ವ್ಯಕ್ತಿ ನಿರ್ಭಯರಾಗಿ ಪ್ರಯಾಣಿಸುವ ದಿನದ ಕುರಿತು ಸುವಾರ್ತೆ ನೀಡಿದ್ದೂ, ಪ್ರವಾದಿ ವರ್ಯ(ಸ)ರ ನ್ನು ಹಿಡಿದು ವಧಿಸಲು ಬಂದ ಸುರಾಕಾರಿಗೆ ಕಿಸ್ರಾದ ಕೈ ಬಳೆಗಳನ್ನು ಧರಿಸುವ ಕುರಿತು ಅರುಹಿದ್ದೂ, ಹಿರ್ಕಲ್‌ನ ಅರಮನೆಯಲ್ಲಿ ಇಸ್ಲಾಮ್ ಧರ್ಮ ಪ್ರವೇಶಿಸುವ ಕುರಿತು ಸುವಾರ್ತೆ ನೀಡಿದ್ದೂ ಇವೆಲ್ಲವೂ ಸಾಮಾಜಿಕ ಬದುಕಿಲ್ಲಿ ಅರಳುವ ಇಸ್ಲಾಮೀ ವ್ಯವಸ್ಥೆಯ ಕುರಿತು ಇರುವ ಕನಸುಗಳಾಗಿತ್ತು.

ಅನು: ಅಬೂ ಸಫ್ವಾನ್

SHARE THIS POST VIA

About editor

Check Also

ಬದುಕು ಕಸಿಯುತ್ತಿರುವ ಬಡ್ಡಿ

✍️ ಮುಷ್ತಾಕ್ ಹೆನ್ನಾಬೈಲ್ ಕಳೆದ ತಿಂಗಳು ನಡೆದ ಎರಡು ಮುಸ್ಲಿಂ ಕುಟುಂಬಗಳ ಸಾಮೂಹಿಕ ಸಾವುಗಳು ಇಡೀ ರಾಜ್ಯವನ್ನೇ ತಲ್ಲಣ ಗೊಳಿಸಿದೆ. …

Leave a Reply

Your email address will not be published. Required fields are marked *