ಇಸ್ಲಾಮ್ ಮತ್ತು ಮುಸ್ಲಿಮರು
ಇಸ್ಲಾಮ್ ಎಂಬ ಪದದ ಅರ್ಥ ಶಾಂತಿ, ಶರಣಾಗತಿ, ಅನುಸರಣೆ ಎಂದಾಗಿದೆ. ಅಂತಿಮ ಪ್ರವಾದಿ ಮುಹಮ್ಮದರಿಗೆ(ಸ) ದೇವನಿಂದ ಅವತೀರ್ಣವಾದ ಶಿಕ್ಷಣಗಳು, ಮಾರ್ಗದರ್ಶನ, ನಿರ್ದೇಶನಗಳನ್ನು ಮಾನವರು ಸಂಪೂರ್ಣವಾಗಿ ಸ್ವೀಕರಿಸಬೇಕು ಎಂದು ಇಸ್ಲಾಮ್ ಉದ್ದೇಶಿಸುತ್ತದೆ. ದೇವನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡು, ದೇವನು ಅವತೀರ್ಣಗೊಳಿಸಿದ ಸಂದೇಶ ಮತ್ತು ಪ್ರವಾದಿ(ಸ) ಸೂಚಿಸಿದಂತೆ ಜೀವಿಸುವವನು ಮುಸ್ಲಿಮ್ ಆಗಿದ್ದಾನೆ. ಇದೇ ತಳಹದಿಯಲ್ಲಿ ಮಾನವ ಸಮಾಜವನ್ನು ರೂಪೀಕರಿಸಲು ಮುಸ್ಲಿಮನು ಶ್ರಮಿಸುತ್ತಾನೆ. ಮುಹಮ್ಮದೀಯ ಧರ್ಮ ಎಂಬುದು ಇಸ್ಲಾಮ್‍ಗೆ ಸೂಕ್ತವಾದ ಹೆಸರಲ್ಲ. ಅಲ್ಲಾಹು ಎಂಬುದು ಜಗದೊಡಯನಿಗೆ ಅರಬಿ ಭಾಷೆಯ ಹೆಸರಾಗಿದೆ. ಇದು ಬಹುವಚನವೋ, ಸ್ತ್ರೀಲಿಂಗವೋ ಇಲ್ಲದ ಒಂದು ಅರಬಿ ಪದವಾಗಿದೆ.
ಸಂದೇಶದ ಪ್ರಾರಂಭ:
ಇಸ್ಲಾಮ್ ಒಂದು ಹೊಸ ಧರ್ಮವಲ್ಲ. ಬದಲಾಗಿ ಅದು ಸಕಲ ಪ್ರವಾದಿಗಳಿಗೂ ದೇವನು ಅವತೀರ್ಣಗೊಳಿಸಿದ ಸಂದೇಶವೇ ಆಗಿದೆ. ಓ ಪೈಗಂಬರರೇ, ಹೇಳಿರಿ-”ನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ. ನಮ್ಮ ಮೇಲೆ ಅವತೀರ್ಣಗೊಳಿಸಲ್ಪಟ್ಟಿರುವ ಶಿಕ್ಷಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅಕೂಬ್ ಮತ್ತು ಯಅಕೂಬರ ಸಂತತಿಗಳ ಮೇಲೆ ಅವತೀರ್ಣಗೊಳಿಸಲ್ಪಟ್ಟ ಶಿಕ್ಷಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಮೂಸಾ, ಈಸಾ ಮತ್ತು ಇತರ ಪ್ರವಾದಿಗಳಿಗೆ ಅವರ ಪ್ರಭುವಿನ ಕಡೆಯಿಂದ ನೀಡಲ್ಪಟ್ಟವುಗಳ ಮೇಲೂ ವಿಶ್ವಾಸವಿಟ್ಟಿದ್ದೇವೆ. ನಾವು ಅವರೊಳಗೆ ಭೇದವೆಣಿಸುವುದಿಲ್ಲ. ಮತ್ತು ನಾವು ಅಲ್ಲಾಹನ ಆಜ್ಞಾಪಾಲಕ(ಮುಸ್ಲಿಮ್)ಆಗಿರುತ್ತೇವೆ“ (ಪವಿತ್ರ ಕುರ್ ಆನ್-3:84). ಪ್ರವಾದಿ ಮುಹಮ್ಮದರಿಗೆ(ಸ) ದೇವನು ಅವತೀರ್ಣಗೊಳಿಸಿದ ಸಂದೇಶವು ಇಸ್ಲಾಮಿನ ಅತ್ಯಂತ ಸಮಗ್ರ, ಸಂಪೂರ್ಣ ಮತ್ತು ಅಂತಿಮವಾದ ರೂಪವಾಗಿದೆ.
ಇಸ್ಲಾಮಿನ 5 ಪಂಚ ಸ್ತಂಭಗಳು:
1. ವಿಶ್ವಾಸದ ಘೋಷಣೆ:
ಅಲ್ಲಾಹನಲ್ಲದೆ ಆರಾಧ್ಯರಿಲ್ಲ ಮತ್ತು ಪ್ರವಾದಿ ಮುಹಮ್ಮದರು(ಸ) ಅಂತಿಮ ದಿನದವರೆಗೂ ಸಕಲ ಜನರಿಗಾಗಿ ಆಗಮಿಸಿದ ಪ್ರವಾದಿಯೆಂಬ ವಿಶ್ವಾಸವನ್ನು ಘೋಷಿಸುವುದು, ಅದೇ ಪ್ರಕಾರ ಪ್ರವಾದಿವರ್ಯರ(ಸ) ಜೀವನದ ಮಾದರಿಯನ್ನು ತನ್ನ ಜೀವನದಲ್ಲಿ ಅನುಸರಿಸುವುದು ಪ್ರತಿಯೊಬ್ಬ ಮಾನವನ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ಪಾಲಿಸಿದವನು ‘ಮುಸ್ಲಿಮ್’ ಆಗಿದ್ದಾನೆ.
2. ನಮಾಝ್:
ಇದು ದಿನದಲ್ಲಿ 5 ಹೊತ್ತು ಸರ್ವಲೋಕಗಳ ಪಾಲಕ ಪ್ರಭುವಿನ ಮುಂದೆ ನಿಶ್ಚಿತ ರೂಪದಲ್ಲಿ ಮಾಡಬೇಕಾದ ಒಂದು ಆರಾಧನೆಯ ಕ್ರಮವಾಗಿದೆ. ದೇವನಿಗೆ ವಿಧೇಯತೆಯನ್ನು ದೃಢಗೊಳಿಸುವುದಕ್ಕೂ ಉನ್ನತವಾದ ನೈತಿಕತೆಯನ್ನು ರೂಢಿಸಿಕೊಳ್ಳುವುದಕ್ಕೂ ವಿಶ್ವಾಸಿಗಳನ್ನು ಇದು ಸಜ್ಜುಗೊಳಿಸುವುದು. ಜೊತೆಗೆ ಹೃದಯವನ್ನು ಶುದ್ಧಿಕರಿಸುವುದಕ್ಕೂ ಕೆಡುಕು ಮತ್ತು ಕೆಟ್ಟ ಕಾರ್ಯಗಳಿಂದ ದೂರ ನಿಲ್ಲುವುದಕ್ಕೂ ಸಹಕಾರಿಯಾಗಿದೆ.
3. ಕಡ್ಡಾಯ ದಾನ(ಝಕಾತ್):
ಶ್ರೀಮಂತರಿಂದ ಒಂದು ನಿಗದಿತ ಮೊತ್ತವನ್ನು ಕಡ್ಡಾಯವಾಗಿ ಬಡತನ ನಿರ್ಮುಲನಕ್ಕೆ ದೇವ ಮಾರ್ಗದಲ್ಲಿ ಖರ್ಚು ಮಾಡಬೇಕೆಂಬುದು ಝಕಾತ್ ನ ಉದ್ದೇಶವಾಗಿದೆ.
4. ಉಪವಾಸ ವ್ರತ:
ರಮಝಾನ್ ತಿಂಗಳಲ್ಲಿ ಮುಸ್ಲಿಮರು ಸಂಪೂರ್ಣವಾಗಿ ಹಗಲಿನ ವೇಳೆ ಆಹಾರ ಪಾನೀಯ ದೇಹೇಚ್ಛೆಗಳನ್ನು ತೊರೆಯಬೇಕಾಗಿದೆ. ಮಾತ್ರವಲ್ಲ ಕೆಟ್ಟ ಯೋಚನೆಗಳನ್ನು, ಕೆಟ್ಟ ಕೆಲಸಗಳನ್ನು ತೊರೆಯಬೇಕಾಗಿದೆ. ಹಾಗಿದ್ದರೆ ಮಾತ್ರ ಉಪವಾಸ ಪೂರ್ತಿಯಾಗುವುದು. ಪ್ರೀತಿ, ಪ್ರಾಮಾಣಿಕತೆ, ಅರ್ಪಣೆ, ತ್ಯಾಗ ಸನ್ನದ್ಧತೆ ಎಂಬ ಗುಣಗಳನ್ನು ಇದರ ಮೂಲಕ ಅವರು ಗಳಿಸುತ್ತಾರೆ. ಜೊತೆಗೆ ಸಾಮೂಹಿಕ ಪ್ರಜ್ಞೆ, ಸಹನೆ, ನಿಸ್ವಾರ್ಥ, ಇಚ್ಛಾ ಶಕ್ತಿ ಮುಂತಾದ ಗುಣಗಳು ಬೆಳೆಯಲು ಇದು ಸಹಾಯಕವಾಗಿದೆ.
5. ಹಜ್ಜ್ ಯಾತ್ರೆ:
ಹಜ್ಜ್, ಆರ್ಥಿಕವಾಗಿಯು ಶಾರೀರಿಕವಾಗಿಯು ಸಾಮರ್ಥ್ಯವಿರುವ ಪ್ರತಿಯೊಬ್ಬ ಮುಸ್ಲಿಮನೂ ತನ್ನ ಜೀವನ ಕಾಲದಲ್ಲಿ ಒಂದು ಬಾರಿ ಮಾಡಬೇಕಾದ ತೀರ್ಥಯಾತ್ರೆಯಾಗಿದೆ.
ಮೇಲೆ ವಿವರಿಸಲಾದ ಪಂಚ ಸ್ತಂಭಗಳಲ್ಲದೆ ದೇವನ ಸಂಪ್ರೀತಿಯನ್ನು ಬಯಸಿ ಮನುಷ್ಯನು ಮಾಡುವ ಪ್ರತಿಯೊಂದು ಸತ್ಕರ್ಮವೂ ದೇವನ ಆರಾಧನೆಯೇ ಆಗಿದೆ. ದೇವನ ಏಕತ್ವದಲ್ಲಿಯು ಪರಮಾಧಿಕಾರದಲ್ಲಿಯು ಇರುವ ವಿಶ್ವಾಸ ಇಸ್ಲಾಮಿನಲ್ಲಿ ಕಡ್ಡಾಯವಾಗಿದೆ. ಪ್ರಪಂಚದ ಅರ್ಥ, ಪ್ರಪಂಚದಲ್ಲಿ ಮಾನವನ ಸ್ಥಾನವೇನೆಂಬ ತಿಳುವಳಿಕೆಯನ್ನು ಈ ವಿಶ್ವಾಸವು ಮೂಡಿಸುವುದು. ಅದು ಮಾನವರ ಮನಸ್ಸಿನಲ್ಲಿರುವ ಅಂಧ ವಿಶ್ವಾಸಗಳನ್ನೂ, ಮೂಢನಂಬಿಕೆಗಳನ್ನೂ ನಿರ್ಮುಲನಗೊಳಿಸುವುದು. ಅದು ಮಾನವನಲ್ಲಿ ಸರ್ವಶಕ್ತನಾದ ಅಲ್ಲಾಹನ ಸರ್ವಸಾನಿಧ್ಯದ ಕುರಿತು ಮತ್ತು ಮನುಷ್ಯರಿಗೆ ದೇವನೊಂದಿಗಿರುವ ಸಂಬಂಧಗಳ ಕುರಿತು ಪ್ರಜ್ಞೆ ಉಂಟು ಮಾಡುವುದು. ವಿಶ್ವಾಸವು ಕರ್ಮಗಳ ಮೂಲಕ ಪ್ರಕಟಗೊಳಿಸಬೇಕಾಗಿದೆ ಮತ್ತು ಪರೀಕ್ಷೆಗಳ ಮೂಲಕ ಯಶಸ್ವಿಯಾಗಬೇಕಾಗಿದೆ. ಬರೇ ವಿಶ್ವಾಸ ಮಾತ್ರ ಸಾಲದು. ಸೃಷ್ಟಿಕರ್ತ ಮತ್ತು ಸರ್ವಲೋಕ ಪರಿಪಾಲಕನಾದ ಪರಾಶಕ್ತಿಯ ಪರಮಾಧಿಕಾರದ ಅಧೀನದಲ್ಲಿ ಎಲ್ಲರನ್ನೂ ಒಂದು ಕುಟುಂಬದಂತೆ ವೀಕ್ಷಿಸಲು ನಮ್ಮನ್ನು ಏಕದೇವ ವಿಶ್ವಾಸವು ಪ್ರೇರೇಪಿಸುತ್ತದೆ. ಆಯ್ಕೆ ಮಾಡಿರುವ ವಿಶೇಷ ಜನರು ಎಂಬ ಸಂಕಲ್ಪವನ್ನು ಇಸ್ಲಾಮ್ ನಿರಾಕರಿಸುತ್ತದೆ. ಬದಲಾಗಿ ಅದು ದೇವ ವಿಶ್ವಾಸವನ್ನು ಸತ್ಕರ್ಮಗಳ ಮೂಲಕ ಸ್ವರ್ಗಕ್ಕೆ ದಾರಿಯನ್ನು ತೋರಿಸುತ್ತದೆ. ಈ ರೀತಿ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ಮನುಷ್ಯನು ದೇವನೊಂದಿಗೆ ನೇರ ಸಂಬಂಧವನ್ನು ಸ್ಥಾಪಿಸಬೇಕೆಂದು ಬಯಸುತ್ತದೆ.
ಮನುಷ್ಯನ ಕ್ರಿಯಾ ಸ್ವಾತಂತ್ರ್ಯ:
ಮನುಷ್ಯನು ದೇವನ ಅತ್ಯುತ್ತಮ ಸೃಷ್ಟಿಯಾಗಿದ್ದಾನೆ. ಅತಿ ಉನ್ನತವಾದ ಸಾಮರ್ಥ್ಯಗಳು ಸಾಧ್ಯತೆಗಳನ್ನು ದೇವನು ಅವನಲ್ಲಿರಿಸಿರುತ್ತಾನೆ. ಸ್ವ ಇಚ್ಛೆ, ಕರ್ಮಗಳಲ್ಲಿ ಮನುಷ್ಯನಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ದೇವನು ಅವನಿಗೆ ಸರಿಯಾದ ಮಾರ್ಗವನ್ನು ತೋರಿಸಿದ್ದಾನೆ. ಪ್ರವಾದಿವರ್ಯರ(ಸ) ಸಂಪೂರ್ಣ ಜೀವನ ಮಾದರಿಯನ್ನೇ ನೀಡಿದೆ. ಇವೆರಡನ್ನೂ ಅನುಸರಿಸಿದ ಮನುಷ್ಯನು ರಕ್ಷಣೆ ಮತ್ತು ವಿಜಯ ಹೊಂದುವನು. ಮಾನವ ಜೀವನದಲ್ಲಿ ಪರಿಶುದ್ಧತೆಯನ್ನು ಇಸ್ಲಾಮ್ ಕಲಿಸುತ್ತದೆ. ವಂಶ, ವರ್ಣ, ಲಿಂಗ ವ್ಯತ್ಯಾಸಗಳ ಹೊರತಾಗಿ ಇಸ್ಲಾಮ್ ಎಲ್ಲರಿಗೂ ಸಮಾನ ಹಕ್ಕುಗಳನ್ನು ಹಂಚುತ್ತದೆ. ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಜೀವನದಲ್ಲಿ ಕಂಡು ಬರುವ ದೈವಿಕ ನಿಯಮಗಳೇ ನಮ್ಮೆಲ್ಲ ವಿಷಯದಲ್ಲಿ ಅಂತಿಮವಾಗಿದೆ. ಅದು ಅತ್ಯಂತ ಶ್ರೇಷ್ಠ-ಕೆಳವರ್ಗದವ, ಆಡಳಿತಗಾರ, ಪ್ರಜೆ ಎಂಬ ಭೇದವಿಲ್ಲದೆ ಎಲ್ಲರಿಗೂ ಅನ್ವಯವಾಗಿದೆ.
ಪವಿತ್ರ ಕುರ್ ಆನ್ ಮತ್ತು ಹದೀಸ್:
ಪವಿತ್ರ ಕುರ್ ಆನ್ ದೇವನಿಂದ ಅವತೀರ್ಣಗೊಂಡ ಅಂತಿಮ ಸಂದೇಶವಾಗಿದೆ. ಇದು ಇಸ್ಲಾಮೀ ಶಿಕ್ಷಣಗಳು ಮತ್ತು ಕಾನೂನುಗಳ ಮೂಲಾಧಾರವಾಗಿದೆ. ಮಾನವೇತಿಹಾಸ, ಆರಾಧನೆ, ಜ್ಞಾನ, ಮಾನವರ ಮತ್ತು ದೇವನ ನಡುವಿನ ಸಂಬಂಧ, ಮಾನವೀಯ ಸಂಬಂಧಗಳು ಎಂಬೀ ರಂಗದಲ್ಲಿ ಉತ್ತಮ ವ್ಯವಸ್ಥೆಯನ್ನು ರೂಪೀಕರಿಸಲು ಅಗತ್ಯವಿರುವ ಸಮಗ್ರ ಶಿಕ್ಷಣಗಳು ಪವಿತ್ರ ಕುರ್ ಆನಿನಲ್ಲಿದೆ. ಪ್ರವಾದಿ ಮುಹಮ್ಮದರು(ಸ) ಅನಕ್ಷರಸ್ಥರಾಗಿದ್ದರು. ಆದರೂ ಅವರಿಗೆ ದಿವ್ಯವಾಣಿಯ(ವಹ್ಯ್ಯಿನ) ಮೂಲಕ ಲಭಿಸಿದ ಪವಿತ್ರ ಕುರ್ ಆನ್ ಕಂಠಪಾಟ ಆಗಿತ್ತು. ಸ್ವಯಂ ಮೇಲ್ನೋಟ ವಹಿಸಿ ಅದನ್ನು ಅನುಯಾಯಿಗಳ ಮೂಲಕ ತಾನು ಜೀವಿಸಿದ್ದ ಕಾಲದಲ್ಲಿಯೇ ಅವರು ಬರೆಸಿದರು. ಪವಿತ್ರ ಕುರ್ ಆನ್ ಅವತೀರ್ಣಗೊಂಡ ಭಾಷೆಯಲ್ಲಿಯೇ ಈಗಲೂ ಸುರಕ್ಷಿತವಾಗಿದೆ. ವಿವಿಧ ಭಾಷೆಗಳಲ್ಲಿ ಅದರ ಅನುವಾದಗಳೂ ಲಭ್ಯವಿದೆ.
ಹದೀಸ್ ಎಂದು ಹೇಳುವ ಪ್ರವಾದಿ ವಚನಗಳು ಮತ್ತು ಪ್ರವಾದಿಯ ಕೆಲಸಗಳ ವರದಿಗಳನ್ನು ಅವರ ಸಂಗಾತಿಗಳು ವಸ್ತುನಿಷ್ಠವಾಗಿ ಸಂಗ್ರಹಿಸಿದ್ದಾರೆ. ಅವು ಪವಿತ್ರ ಕುರ್ ಆನ್ ನಿನ ಆಶಯಗಳ ವಿವರಣೆ ಮತ್ತು ವ್ಯಾಖ್ಯಾನಗಳಾಗಿವೆ.
ಆರಾಧನೆ ಎಂಬ ಆಶಯ:
ಕೇವಲ ಆಚರಣೆಯ ಉದ್ದೇಶಕ್ಕಾಗಿ ಒಂದು ಆಚರಣೆಯನ್ನು ಇಸ್ಲಾಮ್ ಕಲಿಸುವುದಿಲ್ಲ. ಇಸ್ಲಾಮಿನ ಎಲ್ಲ ಆಚರಣೆಗಳು ಉದ್ದೇಶ ಪ್ರಜ್ಞೆಯೊಂದಿಗೆ ರೂಪುಗೊಂಡಿದೆ. ಪ್ರತಿಯೊಂದು ಕರ್ಮದ ಹಿಂದೆ ಒಂದು ಉದ್ದೇಶವಿದೆ. ಈ ರೀತಿ ಉದ್ದೇಶ ಮತ್ತು ಕರ್ಮವೇ ಪ್ರಮುಖವಾಗಿದೆ. ದೇವಾರಾಧನೆ ಎಂದರೆ ದೇವನನ್ನು ಅರಿತು ಪ್ರೀತಿಸುವುದು. ಅವನ ಕಾನೂನುಗಳನ್ನು ಜೀವನದ ಎಲ್ಲಾ ರಂಗಗಳಲ್ಲಿ ಪಾಲಿಸುವುದು. ಒಳಿತನ್ನು ಪ್ರೋತ್ಸಾಹಿಸುವುದು, ಕೆಡುಕನ್ನು ತಡೆಯುವುದು. ನ್ಯಾಯವನ್ನು ಜಾರಿಗೆ ತರುವುದು. ಜನರಿಗೆ ಸಹಾಯ ಮಾಡುವುದು. ದೇವನನ್ನು ಪ್ರೀತಿಸುವುದು ಹೀಗೆ. ಈ ಆಶಯವನ್ನು ಪವಿತ್ರ ಕುರ್ ಆನ್ ಅತ್ಯಂತ ಉದಾತ್ತವಾದ ರೀತಿಯಲ್ಲಿ ವಿವರಿಸಿದೆ.
“ನೀವು ನಿಮ್ಮ ಮುಖಗಳನ್ನು ಪೂರ್ವ ದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿಕೊಳ್ಳುವುದು ಧರ್ಮಶೀಲತೆಯಲ್ಲ. ನಿಜವಾಗಿ ಒಬ್ಬನು ಅಲ್ಲಾಹನನ್ನೂ, ನಿರ್ಣಾಯಕ ದಿನವನ್ನೂ, ದೇವಚರರನ್ನೂ, ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನೂ, ಅವನ ಸಂದೇಶವಾಹಕರನ್ನೂ ಹೃತ್ಪೂರ್ವಕ ಒಪ್ಪಿಕೊಳ್ಳುವುದೂ ಅಲ್ಲಾಹನ ಸಂಪ್ರೀತಿಗಾಗಿ ತನ್ನ ಮನಮೆಚ್ಚುಗೆಯ ಸಂಪತ್ತನ್ನು ಬಂಧುಗಳಿಗೂ, ಅನಾಥರಿಗೂ, ನಿರ್ಗತಿಕರಿಗೂ, ಸಹಾಯಾರ್ಥಿಗಳಿಗೂ, ದಾಸ್ಯ ವಿಮೋಚನೆಗಾಗಿಯೂ ವ್ಯಯಿಸುವುದೂ ನಮಾಝನ್ನು ಸಂಸ್ಥಾಪಿಸುವುದೂ, ಝಕಾತ್(ಕಡ್ಡಾಯದಾನ)ನೀಡುವುದೂ, ವಾಗ್ದಾನ ಮಾಡಿದರೆ ಪೂರೈಸುವುದೂ, ಕಷ್ಟಕಾರ್ಪಣ್ಯಗಳಲ್ಲಿಯು ಸತ್ಯಾಸತ್ಯಗಳ ಸಮರವಾಗುತ್ತಿರುವಾಗಲೂ ಸಹನೆಯಿಂದಿರುವುದೂ ಧರ್ಮಶೀಲತೆಯಾಗಿರುತ್ತದೆ. ಇವರೇ ಸತ್ಯಸಂಧರು ಮತ್ತು ಇವರೇ ಧರ್ಮನಿಷ್ಠರು”(ಪವಿತ್ರ ಕುರ್ ಆನ್-2:177).
ಇಸ್ಲಾಮೀ ಜೀವನ ರೀತಿ:
ಇಸ್ಲಾಮ್ ಮಾನವರ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲರೂ ಪಾಲಿಸಬೇಕಾದ ಸ್ಪಷ್ಟ ಮಾರ್ಗದರ್ಶನಗಳನ್ನು ನೀಡುತ್ತದೆ. ಈ ಮಾರ್ಗದರ್ಶನಗಳು ಸಮಗ್ರವಾಗಿವೆ. ಅದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ಹೀಗೆ ಸಕಲ ರಂಗಗಳನ್ನು ಆವರಿಸಿದೆ. ಭೂಮಿಯಲ್ಲಿ ಮನುಷ್ಯನ ಜೀವನದ ಉದ್ದೇಶವೇನೆಂದೂ ಅವನಿಗೆ ತನ್ನೊಂದಿಗೂ ತನ್ನ ಬಂಧು ಮಿತ್ರರೊಂದಿಗೂ ಸಮಾಜದೊಂದಿಗೂ ಸಹಜೀವಿಗಳೊಂದಿಗೂ ತನ್ನ ಸೃಷ್ಟಿಕರ್ತನೊಂದಿಗೂ ಇರುವ ಕರ್ತವ್ಯಗಳೇನೆಂದೂ ಇಸ್ಲಾಮ್ ಮನುಷ್ಯನನ್ನು ಎಚ್ಚರಿಸುತ್ತದೆ. ಇಸ್ಲಾಮ್ ಉದ್ದೇಶಪೂರ್ಣವಾದ ಮಾನವನ ಜೀವನಕ್ಕೆ ಸಂಬಂಧಿಸಿದ ಮೂಲ ತಳಹದಿಯ ಶಿಕ್ಷಣಗಳನ್ನು ನೀಡುವುದರೊಂದಿಗೆ ಉನ್ನತವಾದ ಆದರ್ಶವನ್ನು ಸಾಕ್ಷಾತ್ಕರಿಸುವುದಕ್ಕಾಗಿ ಮನುಷ್ಯರನ್ನು ಅದು ಸಿದ್ಧಗೊಳಿಸುತ್ತದೆ.
ಇತಿಹಾಸ ವೀಕ್ಷಣೆ:
ಪ್ರವಾದಿ ಮುಹಮ್ಮದರು(ಸ) ಅರೇಬಿಯಾದ ಮಕ್ಕಾದಲ್ಲಿ ಜನಿಸಿದರು. ಅವರು ಒಂದು ಕುಲೀನ ಕುಟುಂಬದ ಸದಸ್ಯರಾಗಿದ್ದರು. ಅವರಿಗೆ 40ನೇ ವಯಸ್ಸಿನಲ್ಲಿ ಮೊದಲ ದಿವ್ಯವಾಣಿಯು ಲಭಿಸಿತು. ಪ್ರವಾದಿವರ್ಯರು(ಸ) ಇಸ್ಲಾಮಿನ ಬೋಧನೆಯನ್ನು ಆರಂಭಿಸಿದೊಡನೆ ಅವರು ಮತ್ತು ಅವರ ಅನುಯಾಯಿಗಳು ಕಠಿಣವಾದ ಹಿಂಸೆ ದೌರ್ಜನ್ಯಗಳನ್ನು ಎದುರಿಸಬೇಕಾಯಿತು. ಆದುದರಿಂದ ಅವರಿಗೆ ಮಕ್ಕಾದಿಂದ ಮದೀನಾಕ್ಕೆ ಹಿಜಿರಾ ಹೋಗುವಂತೆ ದೇವನಿಂದ ಆದೇಶವಾಯಿತು. ಅವರು ತನ್ನ ಪ್ರವಾದಿತ್ವದ ದೌತ್ಯವನ್ನು 23 ವರ್ಷಗಳಲ್ಲಿ ಪೂರ್ತಿ ಮಾಡಿದರು. 63ನೇ ವಯಸ್ಸಿನಲ್ಲಿ ನಿಧನಗೊಂಡರು. ಅವರ ಜೀವನವು ಪವಿತ್ರ ಕುರ್ ಆನಿನ ಶಿಕ್ಷಣಗಳ ಜೀವಂತ ದರ್ಶನವಾಗಿರುವುದರಿಂದ ಅದು ಸಕಲ ಮನುಷ್ಯರಿಗೂ ಮಾದರಿಯೆನಿಸಿದೆ.
ಇಸ್ಲಾಮಿನ ಔಚಿತ್ಯ:
ಇಸ್ಲಾಮ್ ಋಜು ಮತ್ತು ಸ್ಪಷ್ಟವಾದ ರೀತಿಯಲ್ಲಿ ಸತ್ಯವನ್ನು ಪ್ರಕಟಿಸುತ್ತದೆ. ಓರ್ವ ಸತ್ಯಾನ್ವೇಷಕನಿಗೆ ಇಸ್ಲಾಮ್ ಪ್ರಸಕ್ತವಾಗಿದೆ. ಇದು ಜೀವನದ ಸಕಲ ಸಮಸ್ಯೆಗಳಿಗೂ ಇರುವ ಪರಿಹಾರವಾಗಿದೆ. ಇಸ್ಲಾಮ್ ಸರ್ವಶಕ್ತನಾದ ಸೃಷ್ಟಿಕರ್ತನೂ ಕರುಣಾನಿಧಿಯು ಪರಿಪಾಲಕನೂ ಆದ ದೇವನನ್ನು ಎಲ್ಲ ವಿಧದಲ್ಲಿಯು ಪ್ರಶಂಸಿಸುತ್ತಿರುವ ಸಂಪೂರ್ಣವಾದ ಮಾರ್ಗದರ್ಶನವಾಗಿದೆ.
ಇಸ್ಲಾಮ್ ಆಧುನಿಕ ಸಮಸ್ಯೆಗಳ ಪರಿಹಾರ:
ಮಾನವ ಸಹೋದರತೆ:
ಜಾತೀಯತೆ ಮತ್ತು ಜನಾಂಗೀಯತೆಯು ಆಧುನಿಕ ಮನುಷ್ಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಮಾನವನು ಚಂದ್ರನೆಡೆಗೆ ತಲುಪಿದನು, ಆದರೂ ಪರಸ್ಪರ ವಿರೋಧಿಸದಿರಲು ಅಥವಾ ಯುದ್ಧ ಮಾಡದಿರಲು ಅವನಿಂದ ಸಾಧ್ಯವಾಗುವುದಿಲ್ಲ. ಜನಾಂಗೀಯ ಪಕ್ಷಪಾತವನ್ನು ಹೇಗೆ ಪರಿಹರಿಸಬಹುದೆಂದು 1400 ವರ್ಷಗಳ ಮೊದಲೇ ಇಸ್ಲಾಮ್ ತೋರಿಸಿಕೊಟ್ಟಿತು. ಪ್ರತೀ ವರ್ಷವೂ ಹಜ್ಜ್ ವೇಳೆಯಲ್ಲಿ ವಂಶ, ವರ್ಗ, ವರ್ಣ, ದೇಶಗಳ ವ್ಯತ್ಯಾಸವಿಲ್ಲದೆ ಎಲ್ಲ ದೇಶೀಯರೂ ಸಹೋದರತೆಯನ್ನು ಹಂಚುತ್ತಿರುವ ದೃಶ್ಯವನ್ನು ಇಸ್ಲಾಮ್‍ನಲ್ಲಿ ಮಾತ್ರ ಕಾಣಬಹುದು.
ಕುಟುಂಬ:
ಕುಟುಂಬವು ಮನುಷ್ಯ ನಾಗರಿಕತೆಯ ಮೂಲ ಘಟಕವಾಗಿದೆ. ಇಂದು ಅದು ಪಾಶ್ಚಾತ್ಯ ನಾಡುಗಳಲ್ಲಿ ಶಿಥಿಲಗೊಳ್ಳುತ್ತಿದೆ. ಇಸ್ಲಾಮ್‍ನ ಕುಟುಂಬ ವ್ಯವಸ್ಥೆಯಲ್ಲಿ ಪುರುಷರ, ಸ್ತ್ರೀಯರ, ಮಕ್ಕಳ ಹಕ್ಕುಗಳ ಆರೋಗ್ಯಕರವಾದ ಒಂದು ಸಮತೋಲನದ ದೃಶ್ಯವನ್ನು ನಾವು ಕಾಣಬಹುದು. ಸುಸಜ್ಜಿತವಾದ ಇಸ್ಲಾಮೀ ಕುಟುಂಬ ವ್ಯವಸ್ಥೆಯಿಂದ ನಿಸ್ವಾರ್ಥತೆ, ಔದಾರ್ಯ, ಪ್ರೀತಿಯು ಬೆಳೆಸಲ್ಪಡುತ್ತದೆ.
ಏಕ ಜೀವನ ನೋಟ:
ಮನುಷ್ಯರು ಅವರ ದೃಷ್ಟಿಕೋನದಂತೆ ಜೀವಿಸುತ್ತಾರೆ. ಧರ್ಮನಿರಪೇಕ್ಷ ಸಮಾಜಗಳ ದುರಂತವು ಮಾನವ ಜೀವನದ ವಿಭಿನ್ನ ಪಾಶ್ರ್ವಗಳನ್ನು ಸಂತೈಸಲು ಸೋತಿದೆ. ಅವರ ದೃಷ್ಟಿಯಲ್ಲಿ ಧಾರ್ಮಿಕತೆ ಮತ್ತು ಜಾತ್ಯತೀತತೆಯೂ ವಿಜ್ಞಾನ ಮತ್ತು ಆಧ್ಯಾತ್ಮವೂ ಪರಸ್ಪರ ತದ್ವಿರುದ್ಧವಾದುದು. ಆದರೆ ಇಸ್ಲಾಮ್ ಈ ಎಲ್ಲ ವೈರುದ್ಧ್ಯಗಳನ್ನು ಕೊನೆಗೊಳಿಸಿ ಮಾನವ ಜೀವನ ದೃಷ್ಟಿಯನ್ನು ಭದ್ರಗೊಳಿಸಿ ಏಕೀಕರಿಸುತ್ತದೆ.