Home / ಇಸ್ಲಾಮಿನ ನೈತಿಕ ವ್ಯವಸ್ಥೆ

ಇಸ್ಲಾಮಿನ ನೈತಿಕ ವ್ಯವಸ್ಥೆ

ಮನುಷ್ಯನಲ್ಲಿ ನೈತಿಕ ಪ್ರಜ್ಞೆಯು ನೈಸರ್ಗಿಕವಾಗಿಯೇ ಇದೆ. ಈ ಪ್ರಜ್ಞೆಯೇ ಅವನನ್ನು ಕೆಲವು ಗುಣಗಳನ್ನು ಮೆಚ್ಚುವವನಾಗಿ ಮತ್ತೆ ಕೆಲವು ಗುಣಗಳನ್ನು ಮೆಚ್ಚದವನಾಗಿ ಮಾಡುತ್ತದೆ.

ವ್ಯಕ್ತಿಗಳಲ್ಲಿ ಈ ಪ್ರಜ್ಞೆಯು ಬೇರೆ ಬೇರೆ ಮಟ್ಟಗಳಲ್ಲಿ ಇರುತ್ತದಾದರೂ ಒಟ್ಟು ಮನುಷ್ಯ ಕುಲದಲ್ಲಿ ಈ ಪ್ರಜ್ಞೆ ಒಂದು ನಿರ್ದಿಷ್ಟ ಮಟ್ಟದಲ್ಲಿದ್ದು ಅದು ನೈತಿಕತೆಗೆ ಸಂಬಂಧಿಸಿದ ಕೆಲವು ಗುಣಗಳನ್ನು ಉತ್ತಮವೆಂದೂ ಇನ್ನು ಕೆಲವನ್ನು ಕೆಟ್ಟದ್ದೆಂದೂ ನಿರ್ವಿವಾದವಾಗಿ ತೀರ್ಮಾನಿಸಿ ಬಿಟ್ಟಿದೆ.

ಸತ್ಯ, ನ್ಯಾಯ, ವಚನ ಪಾಲನೆ, ಪ್ರಾಮಾಣಿಕತೆ ಇತ್ಯಾದಿಗಳನ್ನು ಎಲ್ಲ ಕಾಲಗಳಲ್ಲಿಯೂ ಮನುಷ್ಯ ಚಾರಿತ್ರ್ಯದ ಪ್ರಶಂಸನೀಯ ಗುಣಗಳೆಂದು ಸಾರಲಾಗಿದೆ. ಅತ್ತ ಸುಳ್ಳು, ಅನ್ಯಾಯ, ವಚನ ಭಂಗ ಮತ್ತು ವಂಚನೆಯನ್ನು ಯಾವುದೇ ಕಾಲದಲ್ಲಿ ಮೆಚ್ಚಲಾಗಿಲ್ಲ.

ಸಹಾನುಭೂತಿ, ದಯೆ, ಔದಾರ್ಯ, ವಿಶಾಲ ಮನೋಭಾವಗಳನ್ನು ಎಲ್ಲ ಕಾಲಗಳಲ್ಲೂ ಗೌರವಿಸಲಾಗಿದೆ. ಸ್ವಾರ್ಥ, ಕಠೋರತೆ, ಜಿಪುಣತೆ ಮತ್ತು ಸಂಕುಕಚಿತ ಮನೋಭಾವವು ಎಂದೂ ಗೌರವಕ್ಕೆ ಪಾತ್ರವಾದುದಿಲ್ಲ.

ಸಹನೆ, ಸಹಿಷ್ಣುತೆ, ಸಂಯಮ, ಸ್ಥೈರ್ಯ, ಶೌರ್ಯ ಮುಂತಾದುವನ್ನು ಸದಾ ಶ್ಲಾಘಿಸಲಾಗಿದೆ. ಅದೇ ವೇಳೆ ಅಸಹನೆ, ಚಾಂಚಲ್ಯ, ಸಿಡುಕು, ಹೇಡಿತನ ಮುಂತಾದವುಗಳನ್ನು ಎಲ್ಲೆಡೆ ಖಂಡಿಸಲಾಗಿದೆ.

ಆತ್ಮ ನಿಯಂತ್ರಣ, ಸ್ವಾಭಿಮಾನ, ಗಾಂಭೀರ್ಯ, ಸ್ನೇಹಶೀಲ ಗುಣಗಳನ್ನು ಯಾವಾಗಲೂ ಸದ್ಗುಣಗಳೆಂದೇ ಹೊಗಳಲಾಗಿದೆ. ಇನ್ನೊಂದೆಡೆ ಸ್ವೇಚ್ಛಾಚಾರ, ಅಸಭ್ಯತೆ, ಚಾರಿತ್ರ್ಯಹೀನತೆ ಇತ್ಯಾದಿಗಳು ಎಂದೂ ಸದ್ಗುಣಗಳೆಂದು ಪುರಸ್ಕರಿಸಲ್ಪಟ್ಟಿಲ್ಲ.

ಕರ್ಮನಿಷ್ಠೆ, ಕರ್ತವ್ಯ ಪ್ರಜ್ಞೆ, ವಿಧೇಯತೆ, ದಕ್ಷತೆ ಮುಂತಾದ ಗುಣಗಳು ಎಲ್ಲ ಕಾಲಗಳಲ್ಲೂ ಗೌರವ ಪಾತ್ರವಾಗಿವೆ. ಹೊಣೆಗೇಡಿತನ, ಬೇಜವಾಬ್ದಾರಿತನ, ಅವಿಧೇಯತೆ ಮತ್ತು ಮೈಗಳ್ಳತನ ಇತ್ಯಾದಿ ಗುಣಗಳನ್ನು ಯಾರೂ ಎಂದೂ ಪುರಸ್ಕರಿಸಿದ್ದಿಲ್ಲ.

ಇದೇ ರೀತಿ ಸಾಮೂಹಿಕ ಜೀವನದ ಒಳಿತು-ಕೆಡುಕುಗಳ ಬಗ್ಗೆಯೂ ಮಾನವ ಕುಲವು ಒಂದೇ ನಿರ್ದಿಷ್ಟ ನಿಲುವನ್ನು ತಳೆದಿದೆ. ಶಾಂತಿ, ಶಿಸ್ತು, ಪರಸ್ಪರ ಸಹಕಾರ, ಪರಸ್ಪರ ಹಿತಚಿಂತನೆ, ಪ್ರೇಮ-ಬಾಂಧವ್ಯ, ಸಾಮಾಜಿಕ ನ್ಯಾಯ, ಸಮಾನತೆ ಇತ್ಯಾದಿ ಮೌಲ್ಯಗಳುಳ್ಳ ಸಮಾಜಗಳನ್ನೇ ಗೌರವಿಸಲಾಗಿದೆ. ವಿಚ್ಛಿದ್ರತೆ, ಬಿಕ್ಕಟ್ಟು, ಅಶಿಸ್ತು, ದುವ್ರ್ಯವಸ್ಥೆ, ಅನೈಕ್ಯ, ದ್ವೇಷ, ಅಕ್ರಮ ಮತ್ತು ಅಸಮಾನತೆಯಿಂದ ತುಂಬಿದ ಸಮಾಜಗಳನ್ನು ಎಂದೂ ಹೊಗಳಲಾಗಿಲ್ಲ.

ಚಾರಿತ್ರ್ಯದ ಒಳಿತು-ಕೆಡುಕುಗಳ ವಿಷಯವೂ ಅಷ್ಟೆ, ಕಳ್ಳತನ, ವ್ಯಭಿಚಾರ, ಕೊಲೆ, ದರೋಡೆ, ವಂಚನೆ ಮತ್ತು ಭ್ರಷ್ಟಾಚಾರ ಎಂದೂ ಸಚ್ಚಾರಿತ್ರ್ಯದ ಲಕ್ಷಣಗಳೆಂದು ಗುರುತಿಸಲ್ಪಟ್ಟದ್ದಿಲ್ಲ. ಬಯ್ಗುಳ, ದೂಷಣೆ, ಚಾಡಿ, ಪರನಿಂದೆ, ಮಾತ್ಸರ್ಯ, ದೋಷಾರೋಪಣೆ, ಜಗಳಕೋರತನ ಇತ್ಯಾದಿ ಗುಣಗಳುಳ್ಳವರನ್ನು ಎಂದೂ ಸಚ್ಚರಿತ ಮನುಷ್ಯರೆಂದು ಪುರಸ್ಕರಿಸಿದ್ದಿಲ್ಲ. ಹಾಗೆಯೇ ಒರಟರು, ಅಹಂಭಾವಿಗಳು, ಡಂಬಾಚಾರಿಗಳು, ಕಪಟಿಗಳು, ಹಠಮಾರಿಗಳು ಮತ್ತು ಲೋಭಿಗಳನ್ನು ಸದ್ಗುಣ ಸಂಪನ್ನರೆಂದು ಯಾರೂ ಎಂದೂ ಪರಿಗಣಿಸಿದ್ದಿಲ್ಲ.

ಇದಕ್ಕೆ ತದ್ವಿರುದ್ಧವಾಗಿ ಹೆತ್ತವರ ಸೇವೆ, ಬಂಧುಗಳಿಗೆ ನೆರವಾಗುವುದು, ಸಹಜೀವಿಗಳಿಗೆ ಸಹಾಯ ಮಾಡುವುದು, ಮಿತ್ರರೊಂದಿಗೆ ಸದ್ವರ್ತನೆ, ದುರ್ಬಲರಿಗೆ ನೆರವಾಗುವುದು, ಅನಾಥರನ್ನು ರಕ್ಷಿಸುವುದು, ರೋಗಿಗಳ ಆರೈಕೆ ಮಾಡುವುದು, ಸಂಕಷ್ಟಕ್ಕೆ ಸಿಲುಕಿದವರನ್ನು ಕೈ ಹಿಡಿದು ಮೇಲೆತ್ತುವುದು ಮುಂತಾದವುಗಳನ್ನೆಲ್ಲಾ ಸತ್ಕಾರ್ಯಗಳೆಂದೇ ಭಾವಿಸಲಾಗುತ್ತದೆ.

ನಿಷ್ಕಳಂಕ ಚಾರಿತ್ರ್ಯ, ಸವಿನುಡಿ, ಮೃದು ಸ್ವಭಾವವುಳ್ಳ ಜನರನ್ನು ಸಮಾಜ ಎಲ್ಲ ಕಾಲಗಳಲ್ಲೂ ಗೌರವಿಸಿದೆ. ಸನ್ಮಾರ್ಗದಲ್ಲಿರುವ ಸಚ್ಚರಿತ ಜನರನ್ನೇ ಎಲ್ಲ ಸಮಾಜಗಳೂ ಉತ್ತಮರೆಂದು ಪುರಸ್ಕರಿಸಿವೆ. ನಂಬಿಗಸ್ಥರಾದ, ಆಚಾರ-ವಿಚಾರ, ನಡೆ-ನುಡಿಗಳಲ್ಲಿ ವೈರುಧ್ಯವಿಲ್ಲದ, ತಮ್ಮ ನ್ಯಾಯ ಸಮ್ಮತ ಹಕ್ಕುಗಳನ್ನು ಪಡೆದು ತೃಪ್ತರಾಗುವ ಇತರರ ಹಕ್ಕುಗಳನ್ನು ಉದಾರವಾಗಿ ಕೊಟ್ಟು ಬಿಡುವ, ಸ್ವತಃ ಶಾಂತಿಯಿಂದಿದ್ದು ಇತರರಿಗೂ ಶಾಂತಿಯನ್ನು ಕೊಡುವ ಮತ್ತು ಜನರಿಗೆ ಎಲ್ಲ ವಿಧದಲ್ಲೂ ಉಪಕಾರಿಗಳಾಗಿದ್ದು, ಯಾವ ರೀತಿಯಲ್ಲೂ ಮಾರಕರಲ್ಲದ ಜನರೇ ಎಲ್ಲ ಕಾಲಗಳಲ್ಲೂ ಸಮ್ಮಾನಕ್ಕೆ ಪಾತ್ರರಾಗಿದ್ದಾರೆ.

ಮಾನವೀಯ ನೈತಿಕ ಮೌಲ್ಯಗಳೆಂಬುದು ಎಲ್ಲ ಕಾಲದ ಮನುಷ್ಯರಿಗೂ ಪರಿಚಿತವೇ ಆಗಿದ್ದ ಜಾಗತಿಕ ವಾಸ್ತವಿಕತೆಗಳು ಎಂಬುದು ಇದರಿಂದ ತಿಳಿಯುತ್ತದೆ. ನಿಜವಾಗಿ ಒಳಿತು-ಕೆಡುಕುಗಳ ಗುಪ್ತ ವಿಚಾರಗಳೇನಲ್ಲ. ಅವುಗಳನ್ನು ಎಲ್ಲಿಂದಲೋ ಹುಡುಕಿ ತರಬೇಕಾಗಿಲ್ಲ. ಅವೆಲ್ಲಾ ಮನುಷ್ಯನಿಗೆ ನಿಕಟ ಪರಿಚಯವುಳ್ಳ ಮೌಲ್ಯಗಳು. ಆ ಮೌಲ್ಯಗಳ ಪ್ರಜ್ಞೆ ಮನುಷ್ಯ ಪ್ರಕೃತಿಯಲ್ಲೇ ರೂಢ ಮೂಲವಾಗಿದೆ. ಆದ್ದರಿಂದ ಪವಿತ್ರ ಕುರ್‍ಆನ್ ಒಳಿತುಗಳನ್ನು `ಮಾಅರೂಫ್'(ಪರಿಚಿತ) ಎಂದೂ ಕೆಡುಕನ್ನು `ಮುನ್‍ಕರ್’ ಎಂದೂ ಗುರುತಿಸಿದೆ. ಅಂದರೆ ಒಳಿತು ಎಂಬುದು ಎಲ್ಲ ಮನುಷ್ಯರೂ ಹಿತವೆಂದು ತಿಳಿದಿರುವ ಮೌಲ್ಯ. ಅದೇ ವೇಳೆ ಕೆಡುಕು ಎಂಬುದು ಎಲ್ಲರೂ ಕೆಟ್ಟದೆಂದೇ ಪರಿಗಣಿಸಿರುವ ಮೌಲ್ಯ. ಇದೇ ಸತ್ಯವನ್ನು ಪವಿತ್ರ ಕುರ್‍ಆನ್, ಇನ್ನೊಂದು ಕಡೆ- ಕೆಡುಕು ಮತ್ತು ಒಳಿತುಗಳ ಜ್ಞಾನವನ್ನು ಮನುಷ್ಯಾತ್ಮದಲ್ಲಿ ದೇವ ವತಿಯಿಂದಲೇ ಇರಿಸಲಾಗಿದೆ- ಎನ್ನುವ ಮೂಲಕ ಸ್ಪಷ್ಟಪಡಿಸಿದೆ.

ಈಗ ಉದ್ಭವಿಸುವ ಪ್ರಶ್ನೆ ಏನೆಂದರೆ, ಚಾರಿತ್ರ್ಯದ ಒಳಿತು-ಕೆಡುಕುಗಳೆಲ್ಲಾ ಮನುಷ್ಯನಿಗೆ ಪರಿಚಿತವೇ ಆಗಿರುವಾಗ ಮತ್ತು ಆದಿಯಿಂದಲೂ ಮನುಷ್ಯನು ಕೆಲವನ್ನು ಒಳಿತೆಂದೂ ಕೆಲವನ್ನು ಕೆಡುಕೆಂದೂ ಸ್ಪಷ್ಟವಾಗಿ ಗುರುತಿಸುತ್ತಾ ಬಂದಿರುವಾಗ, ಇಂದು ಈ ಲೋಕದಲ್ಲಿ ಇರುವ ಈ ವಿಭಿನ್ನ ನೈತಿಕ ಪದ್ಧತಿಗಳಿಗೆ ಏನರ್ಥ? ಅವುಗಳ ನಡುವೆ ಇರುವ ವ್ಯತ್ಯಾಸವೇನು? ಇಸ್ಲಾಮ್ ತನ್ನದೇ ಆದ ಒಂದು ವಿಶಿಷ್ಟ ನೈತಿಕ ವ್ಯವಸ್ಥೆಯನ್ನು ಹೊಂದಿದೆ ಎಂದು ನಾವು ವಾದಿಸುವುದು ಯಾವ ಆಧಾರದಲ್ಲಿ? ನೈತಿಕತೆಯ ವಿಷಯದಲ್ಲಿ ಇತರರು ಕೊಡದಂತಹ ಯಾವ ವಿಶೇಷ ಕೊಡುಗೆಯನ್ನು ಇಸ್ಲಾಮ್ ಮಾನವಕುಲಕ್ಕೆ ಕೊಟ್ಟಿದೆ?

ಈ ಪ್ರಶ್ನೆಗಳಿಗೆ ಸಮಾಧಾನ ಹುಡುಕಲು ನಾವು ಲೋಕದ ಬೇರೆ ಬೇರೆ ನೈತಿಕ ಸಿದ್ಧಾಂತಗಳ ಮೇಲೆ ದೃಷ್ಟಿ ಹರಿಸಿದರೆ ಮೊದಲ ನೋಟದಲ್ಲೇ ಒಂದು ದೊಡ್ಡ ವ್ಯತ್ಯಾಸ ನಮ್ಮ ಗಮನಕ್ಕೆ ಬರುತ್ತದೆ. ಈ ವ್ಯವಸ್ಥೆಗಳೆಲ್ಲ ಬೇರೆ ಬೇರೆ ನೈತಿಕ ಗುಣಗಳನ್ನು ಮನುಷ್ಯ ಜೀವನದ ಒಟ್ಟು ವ್ಯವಸ್ಥೆಯಲ್ಲಿ ಪೂಣಿಸುವಲ್ಲಿ ಮತ್ತು ಅವುಗಳ ಮಿತಿ, ಸ್ಥಾನ ಮತ್ತು ಉಪಯೋಗವನ್ನು ನಿರ್ಧರಿಸುವಲ್ಲಿ ಹಾಗೂ ಅವುಗಳ ನಡುವೆ ಸಮತೋಲನ ಸ್ಥಾಪಿಸುವಲ್ಲಿ ಪರಸ್ಪರ ಭಿನ್ನವಾಗಿವೆ. ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ ಈ ವ್ಯತ್ಯಾಸದ ಕಾರಣವೂ ನಮಗೆ ಸಿಗುತ್ತದೆ. ಅದೇನೆಂದರೆ ಈ ವ್ಯವಸ್ಥೆಗಳು ನೈತಿಕತೆಯ ಮತ್ತು ಒಳಿತು-ಕೆಡುಕುಗಳ ಮಾನದಂಡಗಳನ್ನು ನಿರ್ಧರಿಸಲು ಬಳಸಿರುವ ಜ್ಞಾನ ಮೂಲಗಳು ಭಿನ್ನವಾಗಿವೆ. ಅಲ್ಲದೆ ನೈತಿಕ ನಿಯಮವೊಂದನ್ನು ರೂಪಿಸಿದ ಬಳಿಕ ಅದನ್ನು ಅನುಷ್ಠಾನಕ್ಕೆ ತರುವ ಶಕ್ತಿ ಯಾವುದಾಗಿರಬೇಕು ಮತ್ತು ಈ ನಿಯಮಕ್ಕೆ ಬದ್ಧನಾಗಿರುವಂತೆ ಮನುಷ್ಯನನ್ನು ನಿರ್ಬಂಧಿಸುವ ಪ್ರೇರಕ ಯಾವುದಾಗಿರಬೇಕು ಎಂಬ ವಿಷಯದಲ್ಲೂ ಈ ವ್ಯವಸ್ಥೆಗಳ ನಡುವೆ ಭಿನ್ನತೆ ಇದೆ. ಈ ಭಿನ್ನತೆಗಳ ಮೂಲವನ್ನು ಶೋಧಿಸಲು ಹೊರಟರೆ ಕೊನೆಗೂ ನಮ್ಮ ಮುಂದೆ ಒಂದು ಸತ್ಯವು ವ್ಯಕ್ತವಾಗುತ್ತದೆ, ಅದೇನೆಂದರೆ, ಸೃಷ್ಟಿಯ ಬಗೆಗಿನ ಕಲ್ಪನೆ, ವಿಶ್ವದಲ್ಲಿ ಮನುಷ್ಯನ ಸ್ಥಾನಮಾನ ಮತ್ತು ಅವನ ಜೀವನದ ಉದ್ದೇಶದ ವಿಷಯದಲ್ಲೇ ಈ ಎಲ್ಲ ನೈತಿಕ ವ್ಯವಸ್ಥೆಗಳು ಪರಸ್ಪರ ಭಿನ್ನಾಭಿಪ್ರಾಯ ಹೊಂದಿದೆ. ಆ ಭಿನ್ನತೆಯೇ ಅವುಗಳನ್ನು ಬೇರೆ ಬೇರೆ ದಾರಿಗಳಲ್ಲಿ ಕ್ರಮಿಸುವಂತೆ ಮಾಡಿದೆ. ಅಲ್ಲದೆ ಅದೇ ಭಿನ್ನತೆಯು ಅಡಿಯಿಂದ ಮುಡಿ ತನಕ ಈ ವ್ಯವಸ್ಥೆಗಳ ಪ್ರವೃತ್ತಿ ಮತ್ತು ಸ್ವರೂಪಗಳನ್ನು ಪರಸ್ಪರ ಬೇರೆಯಾಗಿಸಿದೆ.

ದೇವರು ಇದ್ದಾನೋ ಇಲ್ಲವೋ? ಇದ್ದರೆ ಒಬ್ಬನೋ ಹಲವೋ? ಯಾರನ್ನು ದೇವರೆಂದು ಪರಿಗಣಿಸಲಾಗುತ್ತದೋ ಆತನ ಗುಣ ವೈಶಿಷ್ಟ್ಯಗಳೇನು? ನಮ್ಮೊಂದಿಗೆ ಅವನ ಸಂಬಂಧವೇನು? ನಾವು ಅವನ ಮುಂದೆ ಜವಾಬ್ದಾರರು (ಪ್ರಶ್ನಾರ್ಹರು) ಹೌದೋ ಅಲ್ಲವೋ? ಹೌದೆಂದರೆ ಯಾವ ವಿಷಯದಲ್ಲಿ ನಾವು ಪ್ರಶ್ನಾರ್ಹರು? ನಮ್ಮ ಜೀವನದ ಉದ್ದೇಶ ಮತ್ತು ಪರಿಣಾಮಗಳೇನು? ಯಾವುದನ್ನು ಮುಂದಿಟ್ಟುಕೊಂಡು ನಾವು ಜೀವಿಸಬೇಕು. ಇವು ಮನುಷ್ಯ ಜೀವನದ ಪ್ರಧಾನ ಹಾಗೂ ನಿರ್ಣಾಯಕ ಪ್ರಶ್ನೆಗಳು.

ನಾವು ಈ ಪ್ರಶ್ನೆಗಳಿಗೆ ಯಾವ ಬಗೆಯ ಉತ್ತರ ಕಂಡುಕೊಳ್ಳುತ್ತೇವೋ ನಮ್ಮ ಜೀವನ ವ್ಯವಸ್ಥೆಯು ಅದೇ ಬಗೆಯಲ್ಲಿ ರೂಪುಗೊಳ್ಳುತ್ತದೆ. ಹಾಗೆಯೇ ನಮ್ಮ ನೈತಿಕ ಪದ್ಧತಿಗಳೂ ಅದೇ ಸ್ವರೂಪದಲ್ಲಿ ನಿರ್ಮಾಣವಾಗುತ್ತವೆ.

ಈ ಸಂಕ್ಷಿಪ್ತ ಸಮಯದಲ್ಲಿ ಲೋಕದ ವಿಭಿನ್ನ ಜೀವನ ವ್ಯವಸ್ಥೆಗಳ ಅವಲೋಕನ ಮಾಡಿ ಅದನ್ನು ಮುಂದಿಟ್ಟು, ಯಾರ್ಯಾರು ಈ ಪ್ರಶ್ನೆಗಳಿಗೆ ಯಾವ್ಯಾವ ಉತ್ತರಗಳನ್ನು ಕಂಡು ಕೊಂಡಿದ್ದಾರೆ ಎಂಬುದನ್ನೂ ಈ ಉತ್ತರಗಳು ಆ ವ್ಯವಸ್ಥೆಯ ಸ್ವರೂಪ ಮತ್ತು ದಿಕ್ಕನ್ನು ನಿರ್ಧರಿಸುವಲ್ಲಿ ಎಂತಹ ಪರಿಣಾಮಗಳನ್ನು ಬೀರಿದೆ ಎಂಬುದನ್ನೂ ವಿಮರ್ಶಿಸಲು ನನಗೆ ಸಾಧ್ಯವಾಗದು. ನಾನಿಲ್ಲಿ ಕೇವಲ ಈ ಪ್ರಶ್ನೆಗಳಿಗೆ ಇಸ್ಲಾಮ್ ಎಂಥ ಉತ್ತರಗಳನ್ನು ಕಂಡುಕೊಂಡಿದೆ ಮತ್ತು ಅದರ ಆಧಾರದಲ್ಲಿ ಎಂತಹ ವಿಶಿಷ್ಟ ಬಗೆಯ ನೈತಿಕ ಪದ್ಧತಿಯನ್ನು ಕಟ್ಟಿ ನಿಲ್ಲಿಸಿದೆ ಎಂಬುದನ್ನಷ್ಟೇ ತಮ್ಮ ಮುಂದಿಡ ಬಯಸಿದ್ದೇನೆ.

ಪ್ರಸ್ತುತ ಪ್ರಶ್ನೆಗಳಿಗೆ ಇಸ್ಲಾಮ್ ಕೊಡುವ ಉತ್ತರ ಏನೆಂದರೆ, ಈ ವಿಶ್ವದ ಒಡೆಯನೇ ದೇವನು. ಅವನು ಒಬ್ಬನು ಮಾತ್ರ. ಅವನೇ ಎಲ್ಲರ ಸೃಷ್ಟಿಕರ್ತ. ಅವನೇ ಎಲ್ಲರ ಅದ್ವಿತೀಯ ಹಾಗೂ ವಿವಾದ ರಹಿತ ಒಡೆಯ. ಅವನೇ ಪಾಲಕ, ಅವನೇ ಆಳುವವನು. ವಿಶ್ವದ ಸಕಲ ವ್ಯವಸ್ಥೆಗಳೂ ಅವನ ಇಚ್ಛೆಗೆ ಬದ್ಧವಾಗಿವೆ. ಅವನು ಅತ್ಯಂತ ವಿವೇಕಪೂರ್ಣನು. ಅವನೇ ಪರಮಾಧಿಕಾರಿ. ಅವನು ಸರ್ವಶಕ್ತ. ಸುಪ್ತ-ವ್ಯಕ್ತಗಳೆರಡನ್ನೂ ತಿಳಿದವನು. ಎಲ್ಲ ದೋಷ ದೌರ್ಬಲ್ಯಗಳಿಂದಲೂ ಅವನು ಮುಕ್ತನಾಗಿದ್ದಾನೆ. ಅವನ ಪ್ರಭುತ್ವವು, ಯಾವುದೇ ಅವಲಂಬನೆ, ಓರೆ-ಕೋರೆ, ಸುತ್ತು-ಬಳಸು ಇಲ್ಲದೆ ಸ್ವಸಾಮಥ್ರ್ಯದಿಂದ ಸ್ಥಾಪಿತವಾಗಿದೆ. ಅವನೇ ಮನುಷ್ಯನ ಸೃಷ್ಟಿಕರ್ತ.

ತನ್ನ ಸೃಷ್ಟಿಕರ್ತನ ಉಪಾಸನೆ ಮತ್ತು ಅನುಸರಣೆಯೇ ಮನುಷ್ಯನ ಕರ್ತವ್ಯ. ಸಂಪೂರ್ಣ ದೇವಾನುಸರಣೆಯಲ್ಲದೆ ಬೇರೆ ಯಾವ ಮಾರ್ಗವೂ ಮನುಷ್ಯನಿಗೆ ಸೂಕ್ತವಾದುದಲ್ಲ. ದೇವಾನುಸರಣೆಯ ಮಾರ್ಗ ಯಾವುದೆಂಬುದನ್ನು ಸೂಚಿಸುವುದು ಕೂಡಾ ಮನುಷ್ಯನಿಗೆ ಸೇರಿದ ಕೆಲಸವಲ್ಲ. ಅದು ಮನುಷ್ಯನು ಯಾವ ದೇವನ ದಾಸನೋ ಆ ದೇವನಿಗೆ ಸೇರಿದ ಕೆಲಸ. ದೇವನು ಮನುಷ್ಯನಿಗೆ ಆ ಮಾರ್ಗವನ್ನು ತೋರಿಸಲಿಕ್ಕಾಗಿ ಪ್ರವಾದಿಗಳನ್ನು ಕಳಿಸಿದ್ದಾನೆ. ಗ್ರಂಥಗಳನ್ನು ಅವತರಿಸಿದ್ದಾನೆ. ಈ ಜ್ಞಾನ ಮೂಲಗಳನ್ನು ಅಭ್ಯಸಿಸಿ ಈ ಮೂಲಗಳಿಂದಲೇ ತನ್ನ ಜೀವನ ವ್ಯವಸ್ಥೆಯನ್ನು ಆರಿಸಿ ತೆಗೆಯಬೇಕಾದುದು ಮನುಷ್ಯನ ಕರ್ತವ್ಯ.

ಮನುಷ್ಯನು ತನ್ನ ಜೀವನದ ಎಲ್ಲ ಚಟುವಟಿಕೆಗಳಿಗೂ ದೇವನ ಮುಂದೆ ಪ್ರಶ್ನಾರ್ಹನಾಗಿದ್ದಾನೆ. ಈ ವಿಚಾರಣೆ ನಡೆಯುವುದು ಪರಲೋಕದಲ್ಲೇ ಹೊರತು ಇಹಲೋಕದಲ್ಲಿ ಅಲ್ಲ. ಇಹಲೋಕದ ಜೀವನವು ನಿಜವಾಗಿ ಒಂದು ಪರೀಕ್ಷಾ ಅವಧಿಯಾಗಿದೆ. ಇಲ್ಲಿ ಮನುಷ್ಯನ ಎಲ್ಲ ಚಟುವಟಿಕೆಗಳೂ ಪರಲೋಕದಲ್ಲಿ ತನ್ನ ಒಡೆಯನ ದೃಷ್ಟಿಯಲ್ಲಿ ವಿಜಯಿಯಾಗಬೇಕೆಂಬ ಉದ್ದೇಶದಲ್ಲಿ ಕೇಂದ್ರೀಕೃತವಾಗಿರಬೇಕು. ಮನುಷ್ಯನ ಸಂಪೂರ್ಣ ಅಸ್ತಿತ್ವವೇ ಈ ಪರೀಕ್ಷೆಯಲ್ಲಿ ಒಳಗೊಂಡಿದೆ. ಅವನ ಎಲ್ಲಾ ಶಕ್ತಿ-ಸಾಮರ್ಥ್ಯಗಳೂ ಪರೀಕ್ಷಿಸಲ್ಪಡುತ್ತಿವೆ. ಅವನು ಈ ವಿಶ್ವದ ಯಾವುದೇ ವಸ್ತುವಿನ ಜೊತೆ ಹೇಗೆ ವ್ಯವಹರಿಸುತ್ತಾನೆ ಎಂಬುದನ್ನು ಅತಿ ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆ ನಡೆಸುವವನು ಬೇರಾರೂ ಅಲ್ಲ. ಈ ಭೂಮಿಯ ಪ್ರತಿಯೊಂದು ಕಣದ ಬಗ್ಗೆ ಗಾಳಿ, ನೀರು, ಅಲೆಗಳು ಮತ್ತು ಸ್ವತಃ ಮನುಷ್ಯನ ಮನ ಮಸ್ತಿಷ್ಕ, ಕೈ ಕಾಲುಗಳ ಬಗ್ಗೆ ಮತ್ತವನ ಪ್ರತಿಯೊಂದು ಚಲನವಲನದ ಬಗ್ಗೆ ಮಾತ್ರವಲ್ಲ ಅವನ ಆಲೋಚನೆ ಮತ್ತು ಸಂಕಲ್ಪಗಳ ಬಗ್ಗೆ ಕೂಡಾ ಸಂಪೂರ್ಣ ಜ್ಞಾನವಿರುವ ಹಾಗೂ ಅದರ ಕೂಲಂಕುಷ ದಾಖಲೆಗಳನ್ನು ಹೊಂದಿರುವ ಸಾಕ್ಷಾತ್ ದೇವನೇ ಈ ಪರೀಕ್ಷೆ ನಡೆಸುತ್ತಿದ್ದಾನೆ.

ಇದುವೇ ಮನುಷ್ಯ ಜೀವನದ ಮೂಲಭೂತ ಪ್ರಶ್ನೆಗಳಿಗೆ ಇಸ್ಲಾಮ್ ಕೊಡುವ ಉತ್ತರ. ವಿಶ್ವ ಮತ್ತು ಮಾನವನ ಕುರಿತಾದ ಈ ಕಲ್ಪನೆಯೇ ಮನುಷ್ಯನು ಯಾವ ನೈಜ ಹಾಗೂ ಪರಮೋನ್ನತ ಒಳಿತನ್ನು ತನ್ನ ಗುರಿಯಾಗಿರಿಸಬೇಕೋ ಆ ಒಳಿತು ಏನೆಂಬುದನ್ನು ನಿರ್ಧರಿಸುತ್ತದೆ. ದೇವ ಸಂಪ್ರೀತಿ ಅಥವಾ ದೇವನ ಮೆಚ್ಚುಗೆಯೇ ಆ ಪರಮೋನ್ನತ ಒಳಿತು.

ಇಸ್ಲಾಮಿನ ನೈತಿಕ ವ್ಯವಸ್ಥೆಯಲ್ಲಿ ಯಾವುದೇ ಒಂದು ಪ್ರವೃತ್ತಿಯನ್ನು ಅದು ಒಳಿತೋ ಅಥವಾ ಕೆಡುಕೋ ಎಂಬುದನ್ನು ಇದೇ ಒರೆಗಲ್ಲಿಗೆ ಹಚ್ಚಿ ನಿರ್ಧರಿಸಲಾಗುತ್ತದೆ. ಈ ರೀತಿಯ ನಿರ್ಧಾರದಿಂದ ಮನುಷ್ಯ ನೈತಿಕತೆಗೆ, ಸಂಪೂರ್ಣ ನೈತಿಕ ಜೀವನದ ಕೇಂದ್ರವಾಗಿರುವಂತಹ ಗಾಳಿಯ ಇಚ್ಛೆಯಂತೆ ದಿಕ್ಕಿಲ್ಲದೆ ಅಲೆಯುವುದು ತಪ್ಪುತ್ತದೆ. ಈ ನಿರ್ಧಾರವು ಒಂದು ನಿರ್ದಿಷ್ಟ ಉದ್ದೇಶವನ್ನು ಮನುಷ್ಯನ ಮುಂದಿಡುತ್ತದೆ. ಅದರನ್ವಯ, ಜೀವನದ ಎಲ್ಲ ನೈತಿಕ ಗುಣಗಳ ಸೂಕ್ತ ಮಿತಿಗಳು, ಸ್ಥಾನಗಳು ಮತ್ತು ಅವುಗಳ ವ್ಯಾವಹಾರಿಕ ಸ್ವರೂಪವು ನಿರ್ಧರಿಸಲ್ಪಡುತ್ತದೆ. ಈ ರೀತಿ ನಮಗೆ ಎಲ್ಲ ಪರಿವರ್ತಿತ ವಿದ್ಯಮಾನಗಳಲ್ಲೂ ತಮ್ಮ ಸ್ಥಾನದಲ್ಲಿ ನಿಶ್ಚಲವಾಗಿ ಸ್ಥಾಪಿತವಾಗಿ ಉಳಿಯಬಲ್ಲ ಶಾಶ್ವತ ನೈತಿಕ ಮೌಲ್ಯಗಳು ಲಭ್ಯವಾಗುತ್ತವೆ.

ಇಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿಯೇನೆಂದರೆ, ದೇವ ಸಂಪ್ರೀತಿಯೆಂಬ ಪರಮೋಚ್ಛ ಧ್ಯೇಯವು ನೈತಿಕತೆಗೆ ಒಂದು ಉನ್ನತ ಅರ್ಥವನ್ನು ಕೊಡುತ್ತದೆ. ಇದರಿಂದಾಗಿ ನೈತಿಕ ವಿಕಾಸದ ಸಾಧ್ಯತೆಗಳು ನಿಸ್ಸೀಮವಾಗುತ್ತದೆ. ಯಾವುದೇ ಹಂತದಲ್ಲಿ ನೈತಿಕತೆಯು ಸ್ವಾರ್ಥದ ಕಲಬೆರಕೆಯಿಂದ ಕಲುಷಿತವಾಗುವುದು ತಪ್ಪುತ್ತದೆ.

ಇಸ್ಲಾಮ್, ನೈತಿಕತೆಯ ಮಾನದಂಡಗಳನ್ನು ಸೂಚಿಸುವುದರ ಜೊತೆಗೆ ಮನುಷ್ಯ ಮತ್ತು ವಿಶ್ವದ ಕುರಿತು ತಾನು ಮುಂದಿಡುವ ತನ್ನ ಕಲ್ಪನೆಗಳ ಮೂಲಕ, ನೈತಿಕತೆಯ ಸ್ವರೂಪ-ಸೌಂದರ್ಯಗಳನ್ನು ತಿಳಿಯುವ ಒಂದು ಶಾಶ್ವತ ಜ್ಞಾನ ಮೂಲವನ್ನು ಒದಗಿಸುತ್ತದೆ. ಅದು ನಮ್ಮ ನೈತಿಕ ಜ್ಞಾನವನ್ನು ಕೇವಲ ಊಹೆ, ಬುದ್ಧಿ, ಅಭಿಲಾಷೆಗಳು, ಅನುಭವಗಳು ಅಥವಾ ಸೀಮಿತ ಮನುಷ್ಯ ಜ್ಞಾನವನ್ನು ಅವಲಂಬಿಸಿಕೊಂಡಿರಲು ಬಿಟ್ಟಿಲ್ಲ. ಹಾಗೆ ಬಿಟ್ಟಿದ್ದರೆ, ಪ್ರಸ್ತುತ ಮೂಲಗಳ ತೀರ್ಮಾನಗಳು ಬದಲಾದಂತೆಲ್ಲಾ ನಮ್ಮ ನೈತಿಕ ಆದರ್ಶಗಳೂ ಬದಲಾಗುತ್ತಾ ಹೋಗುತ್ತಿದ್ದುವು. ಅವುಗಳಿಗೆ ಯಾವುದೇ ನಿಶ್ಚಿತತೆ ಇರುತ್ತಿರಲಿಲ್ಲ. ಇಸ್ಲಾಮ್ ನಮಗೆ ಒಂದು ನಿಶ್ಚಿತ ಜ್ಞಾನ ಮೂಲ (ದೇವಗ್ರಂಥ ಮತ್ತು ದೇವ ಸಂದೇಶವಾಹಕರ ಜೀವನಾದರ್ಶ) ವನ್ನು ಕೊಡುತ್ತದೆ. ಈ ಮೂಲದಿಂದ ನಮಗೆ ಎಲ್ಲ ಕಾಲ ಮತ್ತು ಅವಸ್ಥೆಗಳಲ್ಲೂ ಅಗತ್ಯವಿರುವ ನೈತಿಕ ಮಾರ್ಗದರ್ಶನ ಸಿಗುತ್ತದೆ.

ಗೃಹ ಜೀವನದ ಸಣ್ಣಪುಟ್ಟ ವಿಚಾರಗಳಿಂದಾರಂಭಿಸಿ ಅಂತರ್ರಾಷ್ಟ್ರೀಯ ರಾಜಕೀಯದ ವರೆಗಿನ ಜೀವನದ ಯಾವುದೇ ರಂಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅದು ನಮಗೆ ಮಾರ್ಗದರ್ಶನವನ್ನೀಯುತ್ತದೆ. ಇಲ್ಲಿ, ಜೀವನದ ವ್ಯವಹಾರಗಳಲ್ಲಿ ನೈತಿಕ ಮೌಲ್ಯಗಳು ಅತ್ಯಂತ ವ್ಯಾಪಕವಾಗಿ ಅನ್ವಯವಾಗುತ್ತವೆ. ಈ ಮೂಲವನ್ನು ಅವಲಂಬಿಸಿದ ಬಳಿಕ ನಾವು ಜೀವನದ ಯಾವುದೇ ಹಂತದಲ್ಲಿ ಜ್ಞಾನ ಮೂಲಗಳನ್ನು ಅರಸಿ ನಡೆಯಬೇಕಾದ ಅಗತ್ಯವೇ ಉಳಿಯುವುದಿಲ್ಲ.

ಇಷ್ಟಲ್ಲದೆ, ಯಾವುದೇ ನೈತಿಕ ನಿಯಮದ ಬೆನ್ನ ಹಿಂದೆ ಇರಲೇಬೇಕಾದ ಅನುಷ್ಠಾನ ಶಕ್ತಿ(Sanction)ಯೂ ವಿಶ್ವ ಮತ್ತು ಮಾನವನ ಕುರಿತಾದ ಇಸ್ಲಾಮಿನ ಪ್ರಸ್ತುತ ಕಲ್ಪನೆಯಲ್ಲಿ ಒಳಗೊಂಡಿದೆ. ದೇವ ಭಯ, ಪರಲೋಕದಲ್ಲಿ ಪ್ರಶ್ನಿಸಲ್ಪಡುವ ಪ್ರಜ್ಞೆ ಮತ್ತು ಶಾಶ್ವತ ಭವಿಷ್ಯವು ನಾಶವಾಗುವ ಭಯ- ಇವೇ ಆ ಅನುಷ್ಠಾನ ಶಕ್ತಿಗಳು. ಒಂದೆಡೆ ಇಸ್ಲಾಮ್ ಧರ್ಮವು. ಸಮೂಹ ಜೀವನದಲ್ಲಿ ವ್ಯಕ್ತಿಗಳು ಮತ್ತು ಗುಂಪುಗಳು ನೈತಿಕ ನಿಯಮಗಳ ಪಾಲನೆಗೆ ನಿರ್ಬಂಧಿತರಾಗುವಂತಹ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತದೆ ಮತ್ತು ನೈತಿಕ ನಿಯಮಗಳನ್ನು ಕಾನೂನು ಮೂಲಕ ಅನುಷ್ಠಾನಕ್ಕೆ ತರುವ ಒಂದು ರಾಜಕೀಯ ಆಡಳಿತ ವ್ಯವಸ್ಥೆಯನ್ನು ರೂಪಿಸುತ್ತದೆ. ಆದರೆ ಇನ್ನೊಂದೆಡೆ ಅದು ಈ ಬಾಹ್ಯ ಒತ್ತಡಗಳನ್ನೇ ಸಂಪೂರ್ಣ ಅವಲಂಬಿಸಿಕೊಂಡಿರುವ ಬದಲು ದೇವ ಮತ್ತು ಪರಲೋಕ ವಿಶ್ವಾಸದಲ್ಲಿ ಅಧಿಷ್ಠಿತವಾದ ಆಂತರಿಕ ಪ್ರೇರಣೆಯನ್ನು ಹೆಚ್ಚು ಅವಲಂಬಿಸಿದೆ.

ಇಸ್ಲಾಮ್ ಮನುಷ್ಯನಿಗೆ ನೈತಿಕ ಆದೇಶಗಳನ್ನು ಕೊಡುವುದಕ್ಕೆ ಮುಂಚೆ, ನಿಜವಾಗಿ ನಿನ್ನ ವ್ಯವಹಾರಗಳೆಲ್ಲವೂ ನಿನ್ನನ್ನು ಸದಾ ನೋಡುತ್ತಿರುವ ದೇವನಿಗೆ ಸಂಬಂಧಿಸಿವೆ ಎಂಬುದನ್ನು ಅವನಿಗೆ ಮನವರಿಕೆ ಮಾಡಿಸುತ್ತದೆ. ನೀನು ಇಡೀ ಜಗತ್ತಿನಿಂದ ಕಣ್ಮರೆಯಾಗಬಹುದು ಆದರೆ ಆತನಿಂದ ಕಣ್ಮರೆಯಾಗಲು ಸಾಧ್ಯವಿಲ್ಲ. ಇಡೀ ಜಗತ್ತನ್ನು ವಂಚಿಸಬಹುದು. ಆದರೆ ಆತನನ್ನು ವಂಚಿಸಲಾರೆ. ಇಡೀ ಜಗತ್ತಿನ ಕಣ್ತಪ್ಪಿಸಿ ಓಡಬಹುದು. ಆದರೆ ಆತನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಲೋಕವು ನಿನ್ನ ಬಾಹ್ಯ ವರ್ತನೆಗಳನ್ನು ನೋಡುತ್ತದೆ. ಆದರೆ ಅವನು ನಿನ್ನ ಅಂತರಂಗವನ್ನು ಮತ್ತು ನಿನ್ನ ಚಿತ್ತದಲ್ಲಿ ಸುಳಿಯುವ ವಿಚಾರಗಳನ್ನು ಬಲ್ಲವನಾಗಿದ್ದಾನೆ.

ಇಹಲೋಕದ ಸಂಕ್ಷಿಪ್ತ ಜೀವನಾವಧಿಯಲ್ಲಿ ನೀನು ಏನೇ ಮಾಡಿದರೂ ಒಂದು ದಿನ ನೀನು ಸಾಯಲಿರುವೆ. ಮರಣಾನಂತರ ವಕಾಲತ್ತಿಗೋ ಲಂಚಕ್ಕೋ ಶಿಫಾರಸ್ಸುಗಳಿಗೋ ಸುಳ್ಳು ಸಾಕ್ಷ್ಯಕ್ಕೋ ಅಥವಾ ವಂಚನೆಗೋ ಕಿಂಚಿತ್ತೂ ಅವಕಾಶವಿಲ್ಲದಂತಹ ಒಂದು ವಿಚಾರಣೆಗೆ ನೀನು ಒಳಗಾಗಬೇಕಾಗುತ್ತದೆ. ಅಲ್ಲಿ ನಿನ್ನ ಶಾಶ್ವತ ಭವಿಷ್ಯದ ಬಗ್ಗೆ ನಿಷ್ಪಕ್ಷ ತೀರ್ಮಾನ ನಡೆಯಲಿದೆ ಎಂಬುದನ್ನು ಮನುಷ್ಯನಿಗೆ ಇಸ್ಲಾಮ್ ಮನವರಿಕೆ ಮಾಡಿಸುತ್ತದೆ.

ಇಸ್ಲಾಮ್ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ಈ ವಿಶ್ವಾಸವನ್ನು ಚಿಗುರಿಸುವ ಮೂಲಕ ಈ ವಿಶ್ವಾಸವೇ ಅವನನ್ನು ನೈತಿಕ ನಿಯಮಗಳನ್ನು ಪಾಲಿಸಲು ಅಂತಃ ಪ್ರೇರಣೆಯಿಂದ ನಿರ್ಬಂಧಿಸುವಂತೆ ಮಾಡುತ್ತದೆ. ಹೊರಗೆ ಪ್ರಸ್ತುತ ನೈತಿಕ ಆದೇಶಗಳನ್ನು ಪಾಲಿಸುವಂತೆ ನಿರ್ಬಂಧಿಸುವ ಪೋಲಿಸರೋ ನ್ಯಾಯಾಲಯವೋ ಬಂದೀಖಾನೆಗಳೋ ಯಾವುದೂ ಇಲ್ಲದೇ ಇದ್ದರು ಅವನ ಒಳಗಣ ಈ ವಿಶ್ವಾಸವೇ ಆ ಪಾತ್ರವನ್ನು ನಿರ್ವಹಿಸುತ್ತದೆ. ಇದುವೇ ಇಸ್ಲಾಮೀ ನೈತಿಕ ನಿಯಮದ ಹಿಂದೆ ಅಡಗಿರುವ ಅನುಷ್ಠಾನ ಶಕ್ತಿ. ಇದರ ಜೊತೆಗೇ ಇದಕ್ಕೆ ಪೂರಕವಾದ ಸಾರ್ವಜನಿಕ ಅಭಿಪ್ರಾಯ ಮತ್ತು ಆಡಳಿತ ಯಂತ್ರವೂ ಇದ್ದರೆ ಇನ್ನಷ್ಟು ಚೆನ್ನ.

ಇನ್ನು ಅದಾವುದೂ ಇಲ್ಲದಿರುವಾಗಲೂ ಕೇವಲ ಈ ವಿಶ್ವಾಸವೊಂದೇ ಒಬ್ಬ ಮುಸ್ಲಿಮ್ ವ್ಯಕ್ತಿಯನ್ನು ಅಥವಾ ಒಂದು ಮುಸ್ಲಿಮ್ ಸಮುದಾಯವನ್ನು ಸರಿ ದಾರಿಯಲ್ಲಿ ನಡೆಸಲು ಪಯಾಪ್ತವಾಗುತ್ತದೆ. ಇಲ್ಲಿ ಆ ವಿಶ್ವಾಸವು ನಿಜವಾಗಿಯೂ ಹೃದಯಗಳಲ್ಲಿ ನೆಲೆಯೂರಿ ಜೀವಂತವಿರಬೇಕಾದುದು ಮಾತ್ರ ಮುಖ್ಯ.

ಮನುಷ್ಯ ಮತ್ತು ವಿಶ್ವದ ಬಗೆಗಿನ ಇಸ್ಲಾಮೀ ಕಲ್ಪನೆಯು ಮನುಷ್ಯನನ್ನು ನೈತಿಕ ನಿಯಮಗಳ ಪಾಲನೆಗೆ ಉತ್ತೇಜಿಸುವಂತಹ ಪ್ರೇರಕ ಶಕ್ತಿಗಳನ್ನು ಒದಗಿಸುತ್ತದೆ. ಮನುಷ್ಯನು ದೇವನನ್ನು ತನ್ನ ಒಡೆಯನೆಂದೂ ಅವನ ಆಜ್ಞಾಪಾಲನೆಯನ್ನು ತನ್ನ ಜೀವನ ಕ್ರಮವೆಂದೂ ಮತ್ತು ಅವನ ಸಂಪ್ರೀತಿಯ ಪ್ರಾಪ್ತಿಯೇ ತನ್ನ ಜೀವನೋದ್ದೇಶವೆಂದೂ ಅಂಗೀಕರಿಸುವುದೇ- ಅವನು ತನ್ನ ದೇವನದ್ದೆಂದು ನಂಬುವ ಆದೇಶಗಳನ್ನು ಪಾಲಿಸುವಂತೆ ಮಾಡಲು ಪಯಾಪ್ತವಾದ ಶಕ್ತಿಶಾಲಿ ಪ್ರೇರಣೆಯಾಗಿದೆ.

ಇದರ ಜೊತೆಗೆ ದೇವಾದೇಶಗಳನ್ನು ಪಾಲಿಸಿದರೆ ಇಹಲೋಕದ ಈ ನಶ್ವರ ಜೀವನದಲ್ಲಿ ಎಷ್ಟೇ ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ ಪರಲೋಕದ ಶಾಶ್ವತ ಜೀವನದಲ್ಲಿ ತನಗೊಂದು ಉಜ್ವಲ ಭವಿಷ್ಯವು ದೊರೆಯುವುದು ಮತ್ತು ದೇವಾದೇಶಗಳನ್ನು ಮುರಿಯುತ್ತಾ ಬಾಳಿದರೆ ಈ ನಾಲ್ಕು ದಿನಗಳ ಲೌಕಿಕ ಜೀವನದಲ್ಲಿ ತಾತ್ಕಾಲಿಕ ಮೋಜು ಸಿಕ್ಕರೂ ಮರಣಾನಂತರದ ಶಾಶ್ವತ ಬದುಕಿನಲ್ಲಿ ತಾನು ಯಾತನೆ ಪಡಬೇಕಾದೀತು ಎಂಬ ಅವನ ಪರಲೋಕ ಜೀವನದ ಮೇಲಿನ ವಿಶ್ವಾಸದ ಇನ್ನೊಂದು ಶಕ್ತಿಯುತ ಪ್ರೇರಕವಾಗಿದೆ.

ಈ ನಿರೀಕ್ಷೆ ಮತ್ತು ಈ ಭಯವು ಒಟ್ಟಾಗಿ ಒಬ್ಬನ ಹೃದಯದಲ್ಲಿ ಮನೆ ಮಾಡಿಕೊಂಡಿದ್ದರೆ ಅದು, ಅತ್ಯಂತ ಹರ್ಷದಾಯಕವಾದ ಒಂದು ಕೆಡುಕು ಆತನ ಮುಂದೆ ಬಂದಾಗಲೂ ಆತನು ಆ ಕೆಡುಕಿಗೆ ಕೈ ಹಚ್ಚದಂತೆ ಆತನನ್ನು ತಡೆಯುಷ್ಟು ಶಕ್ತಿಶಾಲೀ ಪ್ರೇರಕವಾಗಿದೆ.

ಈ ಎಲ್ಲ ವಿವರಣೆಗಳಿಂದ ಒಂದು ವಿಷಯವು ಸ್ಪಷ್ಟವಾಗುತ್ತದೆ. ಅದೇನೆಂದರೆ ಇಸ್ಲಾಮ್ ಧರ್ಮವು ವಿಶ್ವದ ಕುರಿತು ತನ್ನದೇ ಆದ ಒಂದು ಪ್ರತ್ಯೇಕ ಕಲ್ಪನೆಯನ್ನು ಹೊಂದಿದೆ. ಹಾಗೆಯೇ ಅದರ ಬಳಿ ತನ್ನದೇ ಆದ ಒಳಿತು-ಕೆಡುಕುಗಳ ಮಾನದಂಡ, ತನ್ನದೇ ಆದ ಜ್ಞಾನ ಮೂಲ, ಅನುಷ್ಠಾನ ಶಕ್ತಿ ಮತ್ತು ಪ್ರೇರಕ ಶಕ್ತಿಗಳು ಇವೆ. ಅದು ಈ ಎಲ್ಲ ಸಾಧನಗಳನ್ನು ಬಳಸಿ ತನ್ನ ಸ್ವಂತದ ನಿಯಮವನ್ನು ಶಕ್ತ್ಯಾನುಸಾರ ಜೀವನದ ಎಲ್ಲ ರಂಗಗಳಲ್ಲಿ ಸ್ಥಾಪಿಸುತ್ತದೆ. ಆದ್ದರಿಂದಲೇ ಇಸ್ಲಾಮ್ ತನ್ನದೇ ಆದ ಒಂದು ಸಂಪೂರ್ಣ ನೈತಿಕ ವ್ಯವಸ್ಥೆಯನ್ನು ಹೊಂದಿದೆ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

ಹಾಗೆ ನೋಡ ಹೋದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಅನೇಕ ಅದ್ವಿತೀಯ ವೈಶಿಷ್ಟ್ಯಗಳಿವೆ. ಈ ಪೈಕಿ ಮೂರು ವೈಶಿಷ್ಟ್ಯಗಳು ಅತ್ಯಂತ ಗಮನಾರ್ಹವಾಗಿದೆ.

ಮೊದಲನೆಯದಾಗಿ ಇಸ್ಲಾಮ್ ದೇವ ಸಂಪ್ರೀತಿಗೆ ಪ್ರಧಾನ ಸ್ಥಾನ ಕಲ್ಪಿಸುವ ಮೂಲಕ ನೈತಿಕತೆಗೆ ಅತ್ಯುನ್ನತ ಮಾನದಂಡವೊಂದನ್ನು ಗುರುತಿಸುತ್ತದೆ. ಈ ರೀತಿ ನೈತಿಕತೆಯು ಮಿತಿಯಿಲ್ಲದಷ್ಟು ವಿಕಾಸ ಹೊಂದಲು ಅವಕಾಶವೊದಗಿಸುತ್ತದೆ. ಒಂದು ನಿರ್ದಿಷ್ಟ ಜ್ಞಾನ ಮೂಲವೊಂದನ್ನು ಸೂಚಿಸಿ ಬಿಡುವ ಮೂಲಕ ಅದು ನೈತಿಕತೆಗೆ ಸ್ಥಿರತೆ ಮತ್ತು ನಿಶ್ಚಿತತೆಯನ್ನು ಕೊಡುತ್ತದೆ. ಹೀಗೆ ಇಲ್ಲಿ ನೈತಿಕತೆಯ ವಿಕಾಸಕ್ಕೆ ಅವಕಾಶಗಳಿದ್ದರು ಚಾಂಚಲ್ಯಕ್ಕಾಗಲೀ, ಆಗಾಗ ಬಣ್ಣ ಬದಲಾಯಿಸುತ್ತಿರಲಿಕ್ಕಾಗಲೀ ಅವಕಾಶವಿರುವುದಿಲ್ಲ. ದೇವ ಭಯದ ರೂಪದಲ್ಲಿ ಅದು ಒಂದು ಅನುಷ್ಠಾನ ಶಕ್ತಿಯನ್ನೂ ಒದಗಿಸುತ್ತದೆ. ಇದು ಬಾಹ್ಯ ಒತ್ತಡಗಳಿಲ್ಲದೆಯೂ ಮನುಷ್ಯನು ನೈತಿಕತೆಯನ್ನು ಪಾಲಿಸುವಂತೆ ಅವನನ್ನು ನಿರ್ಬಂಧಿಸುತ್ತದೆ. ಜೊತೆಗೆ ದೇವ ಮತ್ತು ಪರಲೋಕದ ನಂಬಿಕೆಗಳ ಮೂಲಕ ಮನುಷ್ಯನೂ ತಾನಾಗಿಯೇ ನೈತಿಕ ನಿಯಮಗಳನ್ನು ಪಾಲಿಸಲು ಉತ್ಸುಕನಾಗುವಂತೆ ಮಾಡು ಪ್ರೇರಕ ಶಕ್ತಿಯನ್ನೂ ಅದು ಒದಗಿಸಿದೆ.

ಎರಡನೆಯದಾಗಿ ಇಸ್ಲಾಮ್ ಕೇವಲ ಆಡಂಬರಕ್ಕಾಗಿ ನೈತಿಕತೆಯ ಯಾವುದಾದರೂ ವಿಲಕ್ಷಣ ರೂಪವನ್ನು ಪರಿಚಯಿಸಿಲ್ಲ. ಹಾಗೆಯೇ ಅದು ಮನುಷ್ಯನಿಗೆ ಚಿರಪರಿಚಿತವಾದ ಒಳಿತು-ಕೆಡುಕುಗಳ ಪೈಕಿ ಕೆಲವನ್ನು ಕೈ ಬಿಡಲು ಪ್ರಯತ್ನಿಸಿಲ್ಲ. ಅದು ನೈತಿಕತೆಯ ಪರಿಚಿತ ಮೌಲ್ಯಗಳನ್ನೇ ಕೈಗೆ ತೆಗೆದುಕೊಂಡಿದೆ. ಆ ಪೈಕಿ ಕೆಲವನ್ನಲ್ಲ, ಎಲ್ಲವನ್ನು ತೆಗೆದುಕೊಂಡಿದೆ. ಅನಂತರ, ಸಂಪೂರ್ಣ ಸಮತೋಲನ ಮತ್ತು ಅನುಪಾತವನ್ನು ಕಾಯ್ದುಕೊಂಡು ಒಂದೊಂದೇ ಮೌಲ್ಯದ ಸ್ಥಾನ, ಮಟ್ಟ ಮತ್ತು ಉಪಯೊಗವನ್ನು ನಿರ್ಧರಿಸಿದೆ. ಮಾತ್ರವಲ್ಲ, ಅದು ಆ ಮೌಲ್ಯಗಳ ಪ್ರಯೋಗವನ್ನು ವೈಯಕ್ತಿಕ ಚಾರಿತ್ರ್ಯ, ಖಾಸಗಿ ಜೀವನ, ನಾಗರಿಕ ಜೀವನ, ರಾಜಕೀಯ, ಆರ್ಥಿಕ ವ್ಯವಹಾರಗಳು, ಪೇಟೆ, ಮಾರುಕಟ್ಟೆ, ವಿದ್ಯಾಲಯ, ನ್ಯಾಯಾಲಯ, ಕಾನೂನು ಪಾಲನಾ ವಿಭಾಗ, ರಣರಂಗ, ಗ್ರಾಮ ಜೀವನ ಹೀಗೆ ಜೀವನದ ಯಾವ ಕ್ಷೇತ್ರವನ್ನೂ ಬಿಡದೆ ಎಲ್ಲವನ್ನೂ ಆವರಿಸಿ ಪ್ರಭಾವ ಬೀರುವಷ್ಟು ವಿಶಾಲಗೊಳಿಸಿದೆ. ಅದು ಎಲ್ಲ ಕ್ಷೇತ್ರ ಮತ್ತು ಸನ್ನಿವೇಶಗಳನ್ನು ನೈತಿಕತೆಯೇ ಆಳುವಂತೆ ಮಾಡಿದೆ. ಜೀವನದ ಯಾವುದೇ ವ್ಯವಹಾರದ ಕಡಿವಾಣವು ಸ್ವಾರ್ಥ, ಸ್ವೇಚ್ಛೆ ಮತ್ತು ಲಂಪಟತನದ ಕೈಯಲ್ಲಿರುವ ಬದಲು ನೈತಿಕತೆಯ ಕೈಯಲ್ಲಿರುವಂತೆ ಮಾಡಲು ಅದು ಪ್ರಯತ್ನಿಸುತ್ತದೆ.

ಮೂರನೆಯದಾಗಿ ಇಸ್ಲಾಮ್ ಮನುಷ್ಯರನ್ನು ಒಳಿತಿನ ಮೇಲೆ ಸ್ಥಾಪಿತವಾಗಿರುವ ಹಾಗು ಕೆಡುಕಿನಿಂದ ಸಂಪೂರ್ಣ ಮುಕ್ತವಾದ ಒಂದು ಜೀವನ ವ್ಯವಸ್ಥೆಗೆ ಒಳಪಡುವಂತೆ ಆಗ್ರಹಿಸುತ್ತದೆ. ಒಳಿತುಗಳನ್ನು ಮನುಷ್ಯ ಆತ್ಮಸಾಕ್ಷಿಯು ನಿರ್ವಿವಾದವಾಗಿ ಒಳಿತೆಂದು ಎಲ್ಲ ಕಾಲಗಳಲ್ಲೂ ನಂಬಿದೆಯೋ ಆ ಒಳಿತುಗಳನ್ನು ಸ್ಥಾಪಿಸಿ ಪೋಷಿಸೋಣ ಮತ್ತು ಯಾವ ಕೆಡುಕುಗಳನ್ನು ಮಾನವ ಕುಲವು ಸದಾ ಕೆಡುಕೆಂದೇ ಪರಿಗಣಿಸುತ್ತಾ ಬಂದಿದೆಯೋ ಅಂತಹ ಕೆಡುಕುಗಳನ್ನು ಅಳಿಸೋಣ ಹಾಗೂ ನಿಗ್ರಹಿಸಿ ಬಿಡೋಣ ಎಂದು ಇಸ್ಲಾಮ್ ಕರೆ ಕೊಡುತ್ತದೆ. ಈ ಕರೆಗೆ ಓಗೊಟ್ಟು ಬಂದವರನ್ನೇ ಅದು ಒಂದು ಸಮುದಾಯವಾಗಿ ಕ್ರೋಢೀಕರಿಸಿದೆ. ಆ ಸಮುದಾಯವು ಮುಸ್ಲಿಮ್ ಎಂದು ಕರೆಯಲ್ಪಡುತ್ತದೆ. ಒಳಿತನ್ನು ಅನುಷ್ಠಾನಿಸಿ ಸ್ಥಾಪಿಸುವುದು, ಕೆಡುಕನ್ನು ನಿಗ್ರಹಿಸಿ ಅಳಿಸುವುದು ಮತ್ತು ಅದಕ್ಕಾಗಿ ಸಂಘಟಿತವಾಗಿ ಶ್ರಮಿಸುವುದೇ ಈ ಸಮುದಾಯವನ್ನು ರೂಪು ಕೊಟ್ಟಿರುವುದರ ಏಕಮಾತ್ರ ಉದ್ದೇಶ.

ಈಗ, ಸ್ವತಃ ಈ ಸಮುದಾಯವೇ ಒಳಿತನ್ನು ನಿಗ್ರಹಿಸುವ ಮತ್ತು ಕೆಡುಕನ್ನು ಪೋಷಿಸುವ ಕಾರ್ಯದಲ್ಲಿ ನಿರತವಾಗಿದ್ದರೆ ಅದಕ್ಕಿಂತ ಖೇದಕರ ವಿಪರ್ಯಾಸ ಬೇರೊಂದಿಲ್ಲ. ಈ ವಿದ್ಯಮಾನವು ಸ್ವಯಂ ಈ ಸಮುದಾಯದ ಪಾಲಿಗೆ ಮಾತ್ರವಲ್ಲ ಈ ಜಗತ್ತಿನ ಪಾಲಿಗೂ ಮಾರಕವಾಗಿದೆ.

SHARE THIS POST VIA