Home / ಇವರನ್ನು ಅರಿಯಿರಿ

ಇವರನ್ನು ಅರಿಯಿರಿ

“ಇವರು ಜಗತ್ತು ಕಂಡಿರುವ ಧರ್ಮಗುರು. ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕ ಅತ್ಯಂತ ವಿಜಯಿಯೆಂದು ಅಂದಾಜಿಸಿದ ವ್ಯಕ್ತಿ!”

ಅವರು ಇಂದು ಬದುಕಿರುತ್ತಿದ್ದರೆ ಆಧುನಿಕ ಕಾಲಘಟ್ಟದಲ್ಲಿ ಮಾನವ ನಾಗರಿಕತೆಯ ವಿನಾಶಕ್ಕೀಡು ಮಾಡುವ ಭೀಕರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುತ್ತಿದ್ದರು ಎಂದು ಬರ್ನಾಡ್ ಶಾ ಬರೆದಿದ್ದಾರೆ.

ಅವರು ಈ ಭೂಮಿಗೆ ಕಾಲಿಟ್ಟವರಲ್ಲಿ ಅತ್ಯಂತ ಗಮನ ಸೆಳೆದ ವ್ಯಕ್ತಿ. ಅವರು ಒಂದು ಆದರ್ಶವನ್ನು ಬೋಧಿಸಿದರು. ಧಾರ್ಮಿಕ ವ್ಯವಸ್ಥೆಯನ್ನೊಳಗೊಂಡ ಒಂದು ರಾಷ್ಟ್ರವನ್ನು ಕಟ್ಟಿದರು. ಅನೇಕ ಸಾಮಾಜಿಕ, ರಾಜಕೀಯ ಸುಧಾರಣೆಗಳಿಗೆ ಚಾಲನೆ ನೀಡಿದರು. ಬದುಕಿನ ವ್ಯವಹಾರಗಳಲ್ಲಿ ಅವರ ಶಿಕ್ಷಣಗಳನ್ನು ಪಾಲಿಸುವ ಶಕ್ತಿಶಾಲಿಯಾದ ಒಂದು ಸಮಾಜವನ್ನು ರೂಪಿಸಿದರು. ಮಾನವನ ಆಚಾರ ವಿಚಾರಗಳಲ್ಲಿ ಶಾಶ್ವತ ಆಮೂಲಾಗ್ರ ಬದಲಾವಣೆ ತಂದರು.

ಮುಹಮ್ಮದ್! ಎಂಬುದು ಅವರ ಹೆಸರಾಗಿದೆ. ಕ್ರಿ.ಶ. 571ರಲ್ಲಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದರು. ನಲ್ವತ್ತನೆ ವಯಸ್ಸಿನಲ್ಲಿ “ದೇವನಿಗೆ ಸಂಪೂರ್ಣ ಶರಣಾಗತಿ” ಎಂಬ ಜೀವನ ಶೈಲಿಯ ಮೂಲಕ ಇಸ್ಲಾಮಿನ ಬೋಧನೆಯನ್ನು ಆರಂಭಿಸಿದರು. 63ನೇ ವರ್ಷದಲ್ಲಿ ಈ ಲೋಕಕ್ಕೆ ವಿದಾಯ ಹೇಳಿದರು. ಈ ಚಿಕ್ಕ ಅವಧಿಯಲ್ಲಿ ಅಂದರೆ ಕೇವಲ 23 ವರ್ಷದಲ್ಲಿ ಅರೇಬಿಯನ್ ಉಪಭೂಖಂಡವನ್ನು ಸಂಪೂರ್ಣವಾಗಿ ಬದಲಿಸಿದರು. ಬಹುದೇವ ವಿಶ್ವಾಸ, ವಿಗ್ರಹ ಪೂಜೆಗಳಿಂದ ಏಕದೇವಾರಾಧನೆಗೆ, ಗೋತ್ರಕಲಹ ಸಂಘರ್ಷಗಳಿಗೆ ಕೊನೆಹಾಡಿ ಮಾನವೀಯ ಐಕ್ಯದೆಡೆಗೆ ತಂದು ನಿಲ್ಲಿಸಿದರು. ಮದ್ಯಪಾನ, ವಿಷಯಾಸಕ್ತಿಯಿಂದ ಸ್ವಾಭಿಮಾನ ಪ್ರಜ್ಞೆಯೆಡೆಗೂ ಭಕ್ತಿಯೆಡೆಗೂ, ನಿಯಮರಾಹಿತ್ಯ ಅರಾಜಕತೆಗಳನ್ನು ಬಿಟ್ಟು ಶಿಸ್ತಿನೆಡೆಗೂ. ಧರ್ಮಹೀನತೆಯಿಂದ ಅತ್ಯುನ್ನತ ಧರ್ಮನಿಷ್ಠೆಯೆಡೆಗೂ ಬದಲಾವಣೆ ನಡೆಯಿತು. ಅದಕ್ಕಿಂತ ಮುಂಚೆ ಮತ್ತು ನಂತರ ಎಂದೂ ಮಾನವ ಇತಿಹಾಸವು ಇಷ್ಟು ಆಮೂಲಾಗ್ರ ಬದಲಾವಣೆಗೊಂಡ ಒಂದು ಜನ ವಿಭಾಗವನ್ನು ಕಂಡಿಲ್ಲ. ಇವೆಲ್ಲವೂ ಬರೇ 23 ವರ್ಷಗಳಲ್ಲಿ ನಡೆಯಿತು ಎಂಬುದನ್ನು ಚಿಂತಿಸಿ ನೋಡಿರಿ.

ಪ್ರಸಿದ್ಧ ಇತಿಹಾಸಕಾರ ಲಾಮಾರ್ಟಿನ್ ಮಾನವರಿಗಿರುವ ಮಹತ್ವದ ಬುನಾದಿಯ ಬಗ್ಗೆ ಮುಂದಿರಿಸಿದ ಕೆಲವು ವಿಷಯಗಳು ಇಲ್ಲಿವೆ.
ಗುರಿಯ ವಿಸ್ತಾರ, ಸಂಪನ್ಮೂಲಗಳ ಮಿತಿ, ಅದ್ಭುತ ಫಲಸಿದ್ಧಿ ಎಂಬುದು ಮಾನವ ಪ್ರತಿಭೆಯ ಮೂರು ಅಳತೆಗೋಲಾಗಿದೆ. ಹಾಗಾದರೆ ಆಧುನಿಕ ಇತಿಹಾಸದ ಯಾವನಾದರೊಬ್ಬ ಮಹಾನ್ ವ್ಯಕ್ತಿಯನ್ನು ಮುಹಮ್ಮದರೊಂದಿಗೆ(ಸ) ಹೋಲಿಸುವ ಧೈರ್ಯ ಯಾರಲ್ಲಿದೆ? ಅತ್ಯಧಿಕ ಪ್ರಸಿದ್ಧರಾದವರೆಲ್ಲ ಆಯುಧಗಳು, ನಿಯಮಗಳು, ಸಾಮ್ರಾಜ್ಯಗಳನ್ನು ಮಾತ್ರ ಕಟ್ಟಿದರು. ಕೆಲವು ವಿಷಯಗಳಿಗೆ ಅವರು ಪಂಚಾಂಗ ಹಾಕಿದ್ದರೂ ಅವೆಲ್ಲವೂ ಭೌತಿಕ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದೆ. ಅವು ಕೆಲವೊಮ್ಮೆ ಅವರ ಕಣ್ಣ ಮುಂದೆಯೇ ನುಚ್ಚುನೂರಾಗಿತ್ತು. ಆದರೆ ಈ ವ್ಯಕ್ತಿ(ಪ್ರವಾದಿ ಮುಹಮ್ಮದರು(ಸ)) ಸೈನ್ಯದಲ್ಲಿ, ನಿಯಮಗಳಲ್ಲಿ, ಸಾಮ್ರಾಜ್ಯಗಳಲ್ಲಿ, ಜನರನ್ನು ಅಧಿಕಾರ ಪೀಠಗಳಲ್ಲಿ ಮಾತ್ರವಲ್ಲ ಅಂದು ಭೂಮಿಯಲ್ಲಿ ವಾಸ್ತವ್ಯವಿದ್ದ ಜನಸಂಖ್ಯೆಯ ಮೂರನೇ ಒಂದು ಭಾಗದ ಜನರಲ್ಲಿ ಅಲ್ಲೋಲ ಕಲ್ಲೋಲವುಂಟು ಮಾಡಿದರು. ಅಷ್ಟೇ ಅಲ್ಲ ತಾರಾಪಟ್ಟದ ವ್ಯಕ್ತಿಗಳಲ್ಲಿ ದೇವಂದಿರಲ್ಲಿ ಧರ್ಮಗಳಲ್ಲಿ ಆಶಯ ವಿಶ್ವಾಸಗಳಲ್ಲಿ ಮತ್ತು ಆತ್ಮಗಳಲ್ಲಿ ಸಂಚಲನೆ ಮೂಡಿಸಿದರು. ವಿಜಯದ ವೇಳೆ ಅವರು ವಹಿಸಿದ ಸಂಯಮ, ಸಾಮ್ರಾಜ್ಯ ವ್ಯಾಮೋಹದ ಹೊರತಾದ ಒಂದು ಆಶಯದ ಮೇಲಿನ ಅವರ ಬಯಕೆ, ಪ್ರಾರ್ಥನೆಗಳು, ದೇವನೊಡನೆ ಆಧ್ಯಾತ್ಮಿಕ ಸಂಭಾಷಣೆಗಳು, ಅವರ ಮರಣವೂ, ಮರಣಾನಂತರ ವಿಜಯಗಳೆಲ್ಲವೂ ಯಾವ ಕಾಪಟ್ಯವನ್ನು ಹೊಂದಿರಲಿಲ್ಲ. ಬದಲಾಗಿ ಅವೆಲ್ಲವೂ ಒಂದು ವಿಶ್ವಾಸವನ್ನು ಪುನರುತ್ಥಾನಗೊಳಿಸುವುದಕ್ಕಾಗಿತ್ತು. ಈ ವಿಶ್ವಾಸಕ್ಕೆ ಎರಡು ಪಾಶ್ರ್ವಗಳಿವೆ. ದೇವನ ಏಕತ್ವ ಮತ್ತು ದೇವನ ಅಭೌತಿಕತೆಯಾಗಿದೆ. ಮೊದಲನೆಯದು ದೇವನೆಂದರೆ ಏನು ಎಂದು ತಿಳಿಸುತ್ತದೆ. ಎರಡನೆಯದು ದೇವನು ಏನೆಲ್ಲ ಆಗಿರುವನೆಂದು ತಿಳಿಸುವುದು. ಮೊದಲನೆಯದು ನಕಲಿ ದೇವಂದಿರನ್ನು ಹೋರಾಟದಿಂದ ನಿರ್ಮೂಲಿಸುವುದು. ಎರಡನೆಯದು ಪ್ರವಚನದಿಂದ ಆಶಯವನ್ನು ಸ್ಥಾಪಿಸುವುದು. ದಾರ್ಶನಿಕ, ಭಾಷಣಗಾರ, ಪ್ರವಾದಿ, ಕಾನೂನು ತಜ್ಞ, ಯೋಧ, ಆಶಯಗಳ ವಿಜಯಿ, ವಿಗ್ರಹ ರಹಿತ ತರ್ಕ, ಭದ್ರವಾದ ವಿಶ್ವಾಸದ ಪುನರ್ ಸ್ಥಾಪಕ, ಇಪ್ಪತ್ತು ಭೌತಿಕ ಸಾಮ್ರಾಜ್ಯಗಳು ಮತ್ತು ಒಂದು ಆಧ್ಯಾತ್ಮಿಕ ಸಾಮ್ರಾಜ್ಯದ ಸಂಸ್ಥಾಪಕ. ಇದುವೇ ಮುಹಮ್ಮದ್! ಮಾನವ ಮಹತ್ವದ ಯಾವುದೇ ಮಾನದಂಡವನ್ನಿಟ್ಟು ಪರಿಶೀಲಿಸಿದರೂ ಇವರಿಗಿಂತ ಮಹಾನ್ ವ್ಯಕ್ತಿ ಯಾರು ಎಂದು ನಾವು ಪ್ರಶ್ನಿಸಬಹುದಾಗಿದೆ?” (Lamartine,Histoire dela Turquie,Paris,1854, Vol.II Page 276-277)

ಜಗತ್ತು ಅನೇಕ ಮಹಾನ್ ವ್ಯಕ್ತಿಗಳನ್ನು ಕಂಡಿದೆ. ಅವರೆಲ್ಲರೂ ಯಾವುದಾದರೊಂದು ಕ್ಷೇತ್ರದಲ್ಲಿ ಮಾತ್ರವೇ ಪ್ರಾಮುಖ್ಯತೆ ಗಳಿಸಿದವರು. ಒಂದೋ ಧಾರ್ಮಿಕ ರಂಗದಲ್ಲಿ ಅಥವಾ ಸೇನಾ ಕ್ಷೇತ್ರದಲ್ಲಿ. ಅಷ್ಟೇ ಅಲ್ಲ ಈ ಮಹಾ ವ್ಯಕ್ತಿಗಳ ಜೀವನ ಸಂದೇಶಗಳು ಕಾಲದ ಗತಿಯಲ್ಲಿ ಮರೆಯಾಗಿ ಹೋಗಿವೆ. ಅವರ ಜನನ ಸ್ಥಳ, ಜನನ ವೇಳೆಯ ಬಗ್ಗೆ ಕೆಲವು ಊಹಾಪೋಹಗಳು ಮಾತ್ರ ಇವೆ. ಅವರ ಜೀವನ ಶೈಲಿಯ ಕುರಿತು ವಿಜಯ ಪರಾಜಯಗಳ ಪ್ರಮಾಣದ ಕುರಿತು ಯಾರಲ್ಲಿಯೂ ಪರಿಪೂರ್ಣವಾದ ನಿಶ್ಚಯವಿಲ್ಲ. ಆದರೆ ಮುಹಮ್ಮದರ(ಸ) ಸ್ಥಿತಿ ಹೀಗಲ್ಲ. ಅವರ ಖಾಸಗಿ ಬದುಕು ಸಾರ್ವಜನಿಕ ವ್ಯವಹಾರಗಳ ಪ್ರತಿಯೊಂದು ಅಂಶಗಳನ್ನು ಸರಿಯಾಗಿ ದಾಖಲಿಸಲಾಗಿದೆ. ಆ ದಾಖಲೆಯ ಅಧಿಕೃತೆಯ ಕುರಿತು ನಿಷ್ಪಕ್ಷಪಾತಿ ವಿಮರ್ಶಕರಿಗಾಗಲಿ ತೆರೆದ ಮನಸ್ಸಿನ ವಿದ್ವಾಂಸರಿಗಾಗಲಿ ಯಾವುದೇ ಸಂಶಯವೂ ಇಲ್ಲ.

ಗಾಂಧಿಜಿಯವರು ಪ್ರವಾದಿ(ಸ) ಕುರಿತು ಹೀಗೆ ಬರೆದರು:”ಕೋಟ್ಯಾಂತರ ಜನರ ಹೃದಯಗಳಲ್ಲಿ ತರ್ಕಾತೀತ ಪ್ರಭಾವ ಬೀರುವ ಆ ಮನುಷ್ಯನ ಜೀವನದ ಅತ್ಯಂತ ಉತ್ತಮ ಭಾಗ ಯಾವುದೆಂದು ತಿಳಿಯಲು ನಾನು ಬಯಸಿದೆ. ಅಂದಿನ ಜೀವನ ವ್ಯವಸ್ಥೆಯಲ್ಲಿ ಇಸ್ಲಾಮಿಗೆ ಸ್ಥಾನವನ್ನು ಖಡ್ಗ ತಂದು ಕೊಟ್ಟಿದ್ದಲ್ಲ ಎಂದು ನನಗೆ ಹೆಚ್ಚೆಚ್ಚು ಮನವರಿಕೆಯಾಗಿದೆ. ಪ್ರವಾದಿಯ ಅಸಂದಿಗ್ಧ ಸರಳತನ, ಸಂಪೂರ್ಣ ನಿಸ್ವಾರ್ಥತೆ, ವಚನ ಪಾಲನೆ, ಗೆಳೆಯರು ಅನುಯಾಯಿಗಳೊಡನೆ ಪ್ರೀತಿ, ನಿರ್ಭೀತಿ, ದೇವನ ಮತ್ತು ತನ್ನ ದೌತ್ಯದ ಮೇಲಿರುವ ಪರಮ ವಿಶ್ವಾಸ ಎಂಬುದೇ ಎಲ್ಲಕ್ಕೂ ಉತ್ತೇಜನವಾಗಿದೆ. ಎದುರುಗಡೆ ಸಿಕ್ಕವರ ಮೇಲೆಲ್ಲ ಪ್ರಭಾವ ಬೀರಿದ್ದು ಎಲ್ಲ ಅಡ್ಡಿಯನ್ನು ನಿವಾರಿಸಿದ್ದು ಖಡ್ಗವಲ್ಲ, ಇದೇ ಆಗಿದೆ. ಪ್ರವಾದಿ ಜೀವನ ಚರಿತ್ರೆಯ ಎರಡನೇ ಅಧ್ಯಾಯವನ್ನು ಓದಿ ಮುಗಿಸಿದಾಗ ನನಗೆ ಒಂದು ಮಹಾ ದಿಗ್ವಿಜಯದ ಕುರಿತು ಓದಲು ಇನ್ನೂ ಹೆಚ್ಚು ಸಿಗಲಿಲ್ಲವಲ್ಲ ಎಂದು ಖೇದವೆನಿಸಿತು. (Young India, Quoted in The Light, Lahore,16th sept.1924)

ಥಾಮಸ್ ಕಾರ್ಲೈಲ್ ಹೀರೋಸ್ ಏಂಡ್ ಹೀರೋ ವರ್ಶಿಪ್ ಎಂಬ ಗ್ರಂಥದಲ್ಲಿ ಒಬ್ಬ ವ್ಯಕ್ತಿ ಒಮ್ಮೆಗೇ ಅಂದರೆ ಎರಡು ದಶಕಗಳಿಗಿಂತ ಕಡಿಮೆ ಅವಧಿಯಲ್ಲಿ ಪರಸ್ಪರ ಕಾದಾಡುತ್ತಿದ್ದ ಗೋತ್ರಗಳನ್ನು ಮತ್ತು ಗ್ರಾಮೀಣ ಅರಬರನ್ನು ಅತ್ಯಂತ ಬಲಾಢ್ಯರು, ಸುಧಾರಿತ ಜನವಿಭಾಗವನ್ನಾಗಿ ಪರಿವರ್ತಿಸಿರುವುದು ಅದ್ಭುತವಾಗಿದೆ. ಆಶಯದ ಹಿನ್ನಲೆಯಿಂದ ನೋಡಿದರೆ ಮುಹಮ್ಮದ್ ಮುಂದಿರಿಸಿದ ಚಿಂತನೆಗಳಿಗೆ (ಇಸ್ಲಾಮಿಗೆ) ಸಮಾನವಾದ ಬೇರೊಂದು ಚಿಂತನೆಯಾಗಲಿ ಮತವಾಗಲಿ ಇಲ್ಲ. ಅತೀ ವೇಗದಿಂದ ಬದಲಾವಣೆ ನಡೆಯುವ ಈ ಲೋಕದಲ್ಲಿ ಬೇರೆಲ್ಲ ಚಿಂತನಾ ಸರಣಿಗಳಲ್ಲಿ ಭಾರೀ ಪರಿವರ್ತನೆಗಳಾಗಿವೆ. ಇಸ್ಲಾಮ್ ಬದಲಾವಣೆ ರಹಿತವಾಗಿ ಕಳೆದ 1400 ವರ್ಷಗಳಿಂದ ಯಥಾರ್ಥ ರೂಪದಲ್ಲಿ ಅಸ್ತಿತ್ವದಲ್ಲಿದೆ. ಅಷ್ಟು ಮಾತ್ರವಲ್ಲ ಸ್ವ ಚಿಂತನೆಗಳನ್ನು ಸಂಪೂರ್ಣ ಪ್ರಯೋಗಿಸಿ ನೋಡಲು ಮತ್ತು ಸ್ವಅಧ್ಯಾಪನವು ತಮ್ಮ ಜೀವಿತ ಕಾಲದಲ್ಲಿ ಬೆಳವಣಿಗೆಗೊಳ್ಳುವುದನ್ನು ಕಾಣಲು ಮುಹಮ್ಮದರಿಗಲ್ಲದೇ ಬೇರೆ ಯಾವುದೇ ಪ್ರಥಮ ಶ್ರೇಣಿಯ ಚಿಂತಕರಿಂದಲೂ ಸಾಧ್ಯವಾಗಿಲ್ಲ. ಅತಿ ಶಕ್ತಿಶಾಲಿಯಾದ ಚಿಂತನೆಯನ್ನು ಅವರು ಪ್ರಚಾರ ಮಾಡಿದರು. ಅವುಗಳಲ್ಲಿ ಪ್ರತಿಯೊಂದನ್ನು ತಾನು ಬದುಕಿದ್ದ ಕಾಲದಲ್ಲಿಯೇ ಯಶಸ್ವಿಯಾಗಿ ಪ್ರಯೋಗಕ್ಕೆ ತಂದರು. ಅವರ ಶಿಕ್ಷಣಗಳೆಂದರೆ ಸಾಕ್ಷಾತ್ಕಾರಕ್ಕಾಗಿ ಪರಿಪಾಟಲುಪಡುವ ಬರಡು ತತ್ವಗಳೋ ಆಶಯಗಳೋ ಆಗಿರಲಿಲ್ಲ. ಅದು ಹತ್ತಾರುಸಾವಿರ ಸುಶಿಕ್ಷಿತರಾದ ಮಾನವರ ಜೀವನ ಸಾರವಾಗಿತ್ತು. ಅವರಲ್ಲಿ ಪ್ರತಿಯೋರ್ವರೂ ಮುಹಮ್ಮದ್ ಎತ್ತಿ ಹಿಡಿದ ಪ್ರತಿಯೊಂದರಲ್ಲೂ ಮೂರ್ತಿವೆತ್ತಂತಹ ಜನರಾಗಿದ್ದರು. ಇಷ್ಟು ವಿಸ್ಮಯದ ಪ್ರತಿಭಾಸವನ್ನು ಬೇರೆ ಯಾವುದಾದರೂ ಕಾಲದಲ್ಲಿ ಲೋಕ ಕಂಡಿದೆಯೇ?

ಮುಹಮ್ಮದ್ ಓರ್ವ ಮನುಷ್ಯ ಮಾತ್ರ ಆಗಿದ್ದರು. ಅವರು ಉದಾತ್ತವಾದ ದೌತ್ಯವಿದ್ದ ಓರ್ವ ಮನುಷ್ಯ. ಸಾಕ್ಷಾತ್ ದೇವನನ್ನು ಮಾತ್ರ ಆರಾಧಿಸುವುದರಲ್ಲಿ ಮಾನವ ಕುಲವನ್ನು ಒಗ್ಗೂಡಿಸುವುದೇ ಆ ದೌತ್ಯವಾಗಿದೆ. ಅವರ ಪ್ರತಿಯೊಂದು ಪ್ರವೃತ್ತಿ ಮತ್ತು ಚಲನವು ಆ ವಿಚಾರವನ್ನೇ ಸಾಧಿಸಿತು. ದೇವನ ಮುಂದೆ ಮಾನವರೆಲ್ಲರೂ ಸಮಾನರೆಂದು ಇಸ್ಲಾಮ್ ಘೋಷಿಸಿತು.

ಈ ಕುರಿತು ಸರೋಜಿನಿ ನಾಯ್ಡು ಹೀಗೆ ಬರೆದರು. “ಜನರ ಆಡಳಿತವನ್ನು ಘೋಷಿಸಿ ಜಾರಿಗೊಳಿಸಿದ ಪ್ರಥಮ ಮತವಿದು. ಯಾಕೆಂದರೆ ಮಸೀದಿಯ ಮಿನಾರಗಳಿಂದ ಪ್ರಾರ್ಥನೆಯ ಕರೆ ಮೊಳಗಿ ಭಕ್ತರು ಸೇರಿದ ಮೇಲೆ ರೈತನೂ ರಾಜನೂ ಒಟ್ಟಿಗೆ ನಿಂತು ಮಂಡಿಯೂರಿ ದೇವನು ಮಾತ್ರ ಮಹಾನನು ಎಂದು ಘೋಷಿಸುವಾಗ, ದಿನಂಪ್ರತಿ ಐದು ಹೊತ್ತು ಇಸ್ಲಾಮಿನ ಪ್ರಜಾಪ್ರಭುತ್ವವು ಮೂರ್ತರೂಪಕ್ಕೆ ಬರುತ್ತಿದೆ. ಮನುಷ್ಯರನ್ನು ಸಹೋದರರನ್ನಾಗಿಸುವ ಇಸ್ಲಾಮಿನ ಈ ಅಭೇದ್ಯವಾದ ಐಕ್ಯ ಭಾವವು ನನ್ನನ್ನು ಪುನಃ ಪುನಃ ಆಶ್ಚರ್ಯಚಕಿತಗೊಳಿಸುತ್ತಿದೆ. (Lecture on the Ideals of Islam, Vide speaches and writings of Sarojini Naidu, Madras, 1918, P.167-169)

ಮಹಾನ್ ವ್ಯಕ್ತಿಗಳಲ್ಲಿ ದೈವಿಕತೆಯನ್ನು ಆರೋಪಿಸುವುದರಲ್ಲಿ ಜಗತ್ತು ಯಾವ ಕಾಲದಲ್ಲಿಯೂ ಹಿಂದೆ ಬಿದ್ದಿಲ್ಲ. ಅಂತಹ ವ್ಯಕ್ತಿಗಳ ಜೀವನದ ದೌತ್ಯಗಳೇ ಐತಿಹ್ಯಗಳಲ್ಲಿ ಮರೆಯಾಗಿ ಹೋಗಿದೆ. ಐತಿಹಾಸಿಕವಾಗಿ ಹೇಳುವುದಾದರೆ ಇವರೆಲ್ಲ ಮುಹಮ್ಮದ್ ಸಾಧಿಸಿರುವ ಹತ್ತರಲ್ಲಿ ಒಂದು ಕೂಡಾ ಸಾಧಿಸಿಲ್ಲ. ಇಷ್ಟು ಅಧಿಕವಾಗಿ ನೈತಿಕ ಮೌಲ್ಯದ ಆಧಾರದಲ್ಲಿ ಏಕದೇವಾರಾಧಕರಾಗಿ ಮಾನವ ಕೋಟಿಯನ್ನು ಒಗ್ಗೂಡಿಸುವುದೆಂಬ ಏಕ ದೌತ್ಯಕ್ಕಾಗಿ ಮುಹಮ್ಮದರು ಪರಿಶ್ರಮ ನಡೆಸಿದರು. ಮುಹಮ್ಮದ್(ಸ) ದೇವ ಪುತ್ರ, ದೇವನವತಾರ ಅಥವಾ ದಿವ್ಯಶಕ್ತಿಯಿರುವ ವ್ಯಕ್ತಿಯೆಂದು ಅವರು(ಸ) ಅಥವಾ ಅವರ ಅನುಯಾಯಿಗಳು ಎಂದೂ ವಾದಿಸಿಲ್ಲ. ಇಂದೂ ಅವರು ದೇವ ಸಂದೇಶವಾಹಕರಾಗಿ ಪರಿಗಣಿಸಲ್ಪಡುತ್ತಿದ್ದಾರೆ. ಇತಿಹಾಸವನ್ನು ಇಡೀ ಹುಡುಕಾಡಿ ಮೈಕಲ್ ಏಚ್ ಹಾರ್ಟ್ ಮಾನವಕುಲದ ಒಳಿತಿಗೆ ಕೊಡುಗೆಗಳನ್ನು ನೀಡಿದ ಮಹಾತ್ಮರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಮುಹಮ್ಮದ್(ಸ) ಪ್ರಥಮ ವ್ಯಕ್ತಿಯಾಗಿ ತಾನು ಯಾಕೆ ಆಯ್ಕೆ ಮಾಡಿದ್ದೆ ಎಂದು ಅವರು ಹೀಗೆ ಸ್ಪಷ್ಟಪಡಿಸಿದ್ದಾರೆ. “ಜಗತ್ತಿನಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳ ಪಟ್ಟಿಯಲ್ಲಿ ಒಂದನೆಯವರಾಗಿ ಮುಹಮ್ಮದ್(ಸ)ರನ್ನು ಆಯ್ಕೆ ಮಾಡಿರುವುದು ಕೆಲವರಿಗೆ ಆಶ್ಚರ್ಯವನ್ನುಂಟು ಮಾಡಿರಬಹುದು. ಕೆಲವರು ಪ್ರಶ್ನಿಸಿಯಾರು ಆದರೆ ಇತಿಹಾಸದಲ್ಲಿ ಧಾರ್ಮಿಕ ಮತ್ತು ಧರ್ಮೇತರ ಸ್ತರಗಳಲ್ಲಿ ಅತ್ಯಂತ ಯಶಸ್ವಿಯಾದ ಏಕೈಕ ವ್ಯಕ್ತಿ ಅವರು ಮಾತ್ರ. (The Hundred: A ranking of the most Influential Persons in history, Newyork,1978, P.33)

ಇಂದಿಗೆ 14 ಶತಮಾನಗಳು ದಾಟಿದ್ದರೂ ಪ್ರವಾದಿ ಮುಹಮ್ಮದರ(ಸ) ಶಿಕ್ಷಣಗಳು ಯಾವುದೇ ಲೋಪ ತಿದ್ದುಪಡಿಗಳಿಲ್ಲದೆ ಯಥಾಸ್ಥಿತಿಯಲ್ಲಿಯೇ ಅಸ್ತಿತ್ವದಲ್ಲಿ ಉಳಿದುಕೊಂಡಿವೆ. ಅವರು ಬದುಕಿದ್ದ ಕಾಲದಂತೆ ಅದು ಮಾನವರೊಳಗಿನ ಅನೇಕ ರೋಗಗಳಿಗೆ ಇಂದೂ ಗುಣೌಷಧಗಳಾಗಿವೆ. ಅವರ(ಸ) ಅನುಯಾಯಿಗಳಿಗೆ ಇದು ನಿರೂಪಿಸುವ ವಿಚಾರವಾದರೆ ನಮ್ಮನ್ನು ಅದು ಸುನಿಶ್ಚಿತವಾಗಿ ತಲುಪುವ ವಿಚಾರಗಳಾಗಿವೆ.

ಸ್ನೇಹಿತರೇ, ಚಿಂತಕರೆಂಬ ನೆಲೆಯಲ್ಲಿ ನೀವು ಯೋಚಿಸಿ ನೋಡಿರಿ, ಅಸಾಮಾನ್ಯವೆಂದೂ, ಕ್ರಾಂತಿಕಾರಿಯೆಂದೂ ಕಂಡು ಬರುವ ಈ ಪ್ರಸ್ತಾವದಲ್ಲಿ ಏನಾದರೂ ಪ್ರಯೋಜನವಿದೆಯೇ ಎಂಬ ಚಿಂತನೆ ನಡೆಸಿರಿ. ಪ್ರಯೋಜನವಿದ್ದರೆ ತಮಗೂ ಈ ಮನುಷ್ಯನಲ್ಲಿ ಹಕ್ಕಿದೆ. ಅವರ ಮಾದರಿಯನ್ನು ಸಂದೇಶವನ್ನು ಅರಿಯುವ ಸವಾಲನ್ನು ಸ್ವಯಂ ವಹಿಸಿಕೊಳ್ಳಿರಿ. ಅದು ತಮ್ಮ ಜೀವನದಲ್ಲಿ ಒಂದು ಹೊಸ ಯುಗದ ಆರಂಭವಾಗಲಿ. ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಈ ಮಹಾನ್ ವ್ಯಕ್ತಿ ಮುಹಮ್ಮದರನ್ನು(ಸ) ಅರಿತುಕೊಳ್ಳಲು ಆಹ್ವಾನ ನೀಡುತ್ತಿದ್ದೇವೆ. ಆಗಲೇ ನಮಗೆ ಅವರಂತಹ ಬೇರೆ ವ್ಯಕ್ತಿ ಭೂಮುಖದಲ್ಲಿರಲಿಲ್ಲ ಎಂದು ಖಚಿತಗೊಳ್ಳುವುದು. ಈ ಮಹಾನ್ ವ್ಯಕ್ತಿಯ ಮಾದರಿಯೂ ಶಿಕ್ಷಣಗಳೂ ನಿಮ್ಮ ಜೀವನವನ್ನು ಹೆಚ್ಚು ಸುಖಕರಗೊಳಿಸಲಿ ಎಂದು ಹಾರೈಸುತ್ತೇವೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿರಿ:
ಇಸ್ಮಿಕ, ಪಿ.ಬಿ.ನಂ.229, ಮಂಗಳೂರು. 575001
e-mail: [email protected]

SHARE THIS POST VIA