Home / ದೇವ ವಿಶ್ವಾಸ

ದೇವ ವಿಶ್ವಾಸ


‘ಲಾ ಇಲಾಹ ಇಲ್ಲಲ್ಲಾಹ್’ ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ ಎಂಬ ಘೋಷಣೆಯು ಇಸ್ಲಾಮಿನ ಮೂಲ ಸಿದ್ಧಾಂತವಾಗಿದೆ. ಮಾನವಕುಲದ ಆರಂಭದಿಂದಲೇ ಎಲ್ಲ ಪ್ರವಾದಿಗಳೂ ಈ ಉನ್ನತ ವಚನವನ್ನು ಬೋಧಿಸಿದ್ದರು. ಎಲ್ಲ ವೇದ ಗ್ರಂಥಗಳೂ ಈ ಅನಶ್ವರ ಸತ್ಯವನ್ನು ಮಾನವರಿಗೆ ಕಲಿಸುತ್ತವೆ. ದಿವ್ಯ ಗ್ರಂಥಗಳಲ್ಲಿ ಅನೇಕ ತಿದ್ದುಪಡಿಗಳಾಗಿದ್ದರೂ ಅವುಗಳಲ್ಲಿ ಈ ಸತ್ಯವನ್ನು ಇಂದಿಗೂ ಸ್ಪಷ್ಟವಾಗಿ ಗುರುತಿಸಬಹುದು.

‘ಅಲ್ಲಾಹ್’ ಎಂಬ ಅರಬಿ ಪದವು ಅಖಿಲ ವಿಶ್ವದ ಸೃಷ್ಟಿಕರ್ತ, ಪರಿಪಾಲಕ ಮತ್ತು ಒಡೆಯನಾದ ಓರ್ವ ಆರಾಧ್ಯನನ್ನು ಸೂಚಿಸುತ್ತದೆ. ‘ಅಲ್ಲಾಹ್’ ಎಂದರೆ ಮುಸ್ಲಿಮರೆಂಬ ಜನ ವಿಭಾಗದ ಕುಲದೇವರೆಂದು ಅನೇಕರು ತಪ್ಪು ತಿಳಿದಿದ್ದಾರೆ. ಮುಸ್ಲಿಮೇತರರು ಮಾತ್ರವಲ್ಲ, ಅನೇಕ ಮುಸ್ಲಿಮರೂ ಅಂತಹ ಭಾವನೆಯನ್ನು ಹೊಂದಿದ್ದಾರೆ. ಆದರೆ ಈ ಅನಂತ ವಿಶ್ವವನ್ನೂ ಅದರಲ್ಲಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿ, ಸಂರಕ್ಷಿಸಿ, ಪೋಷಿಸಿ ಬೆಳೆಸುತ್ತಿರುವ ಸರ್ವಶಕ್ತ ಮತ್ತು ಸರ್ವಜ್ಞನಾದ ಸೃಷ್ಟಿಕರ್ತನೇ ಅಲ್ಲಾಹ್. ಆತನು ಜಾತಿ, ಮತ, ವರ್ಣ, ವರ್ಗ, ಭಾಷೆ, ದೇಶಗಳ ಭೇದವಿಲ್ಲದೆ ಸಕಲ ಮಾನವರ ಮತ್ತು ಅಖಿಲ ಚರಾಚರಗಳ ಸೃಷ್ಟಿಕರ್ತ ಹಾಗೂ ಪರಿಪಾಲಕನಾಗಿದ್ದಾನೆ. ಅವನು ಯಾವುದಾದರೊಂದು ನಿರ್ದಿಷ್ಟ ವಿಭಾಗದ ದೇವನಲ್ಲ. ಎಲ್ಲರ ನೈಜ ದೇವ ಆತನೊಬ್ಬನೇ.

ಪರಮಾಣುವಿನಿಂದ ತಾರಾ ಮಂಡಲಗಳ ವರೆಗಿನ ಯಾವ ವಸ್ತುವೂ ತನ್ನಿಂತಾನೆ ಉಂಟಾಗಲು ಸಾಧ್ಯವಿಲ್ಲ. ಪರಮಾಣು ಮಾತ್ರವಲ್ಲ, ಅದಕ್ಕಿಂತ ಸೂಕ್ಷ್ಮವಾದ ಎಲೆಕ್ಟ್ರೋನ್ ಅಥವಾ ಪ್ರೋಟಾನ್‍ಗಳೂ ಶೂನ್ಯದಿಂದ ಉದ್ಭವಿಸುವುದಿಲ್ಲ. ಈ ವಿಷಯವನ್ನು ಎಲ್ಲರೂ ಸುಲಭದಲ್ಲಿ ಗ್ರಹಿಸಬಹುದಾಗಿದೆ. ಈ ಭೂಮಿಯು ಸ್ವಯಂ ಉಂಟಾಗಿದೆ. ಅದು ಅನಾದಿ ಮತ್ತು ಅನಂತವೆಂಬ ವಿಚಾರವಾದಿಗಳ ಹಾಗೂ ಲೌಕಿಕವಾದಿಗಳ ಅಭಿಪ್ರಾಯವನ್ನು ಇಂದು ವೈಜ್ಞಾನಿಕ ಲೋಕವೇ ತಿರಸ್ಕರಿಸಿದೆ. ಈ ವಿಕಾಸಶೀಲ ಪ್ರಪಂಚಕ್ಕೆ ಒಂದು ಮೂಲವಿಲ್ಲದಿರಲು ಸಾಧ್ಯವಿಲ್ಲ. ಪ್ರಪಂಚಕ್ಕೆ ಒಂದು ಆರಂಭವಿದೆ. ಅದೊಂದು ಮಹಾ ಸ್ಫೋಟದಿಂದ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂತೆಂದು ಆಧುನಿಕ ವಿಜ್ಞಾನಿಗಳೂ ಅಭಿಪ್ರಾಯ ಪಡುತ್ತಾರೆ. ಆದರೆ ಶೂನ್ಯದಿಂದ ತನ್ನಿಂತಾನೆ ಸೃಷ್ಟಿಯಾಗಲು ಯಾವುದಕ್ಕೂ ಸಾಧ್ಯವಿಲ್ಲ.

ಪ್ರಪಂಚದ ಬಗ್ಗೆ ವಿಜ್ಞಾನಗಳ ಹೊಸ ಅಭಿಪ್ರಾಯಗಳೇನಿದ್ದರೂ ಒಂದು ಪರಮಾಣುವಿಗೂ ಸ್ವಯಂ ಹುಟ್ಟಲು ಸಾಧ್ಯವಿಲ್ಲವೆಂಬುದನ್ನು ಎಲ್ಲರೂ ಒಪ್ಪಲೇಬೇಕಾಗಿದೆ. ಪರಮಾಣುವಿನ ಮಟ್ಟಿಗೆ ಅದರ ರಚನೆ, ಚಲನೆ ಇತ್ಯಾದಿ ಸೂಕ್ಷ್ಮ ಅಂಶಗಳು ಆ ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳನ್ನು ಚಕಿತಗೊಳಿಸಿವೆ. ಕೆಲವರು ಅದನ್ನು ಕೇವಲ ‘ಮಾಯೆ’ ಎಂದೂ ಇನ್ನು ಕೆಲವರು ಕೇವಲ ಚಲನೆ ಅಥವಾ ಮಾನಸಿಕ ಕ್ರಿಯೆ (Mind Stuff) ಎಂದೂ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರಪಂಚದ ಸ್ಥಾನದಲ್ಲಿ ಕೇವಲ ಒಂದು ಪರಮಾಣುವಿದ್ದರೂ ಅದರ ಅಸ್ತಿತ್ವ ಮತ್ತು ಉಳಿವಿಗೆ ಓರ್ವ ಸೃಷ್ಟಿಕರ್ತನಿಲ್ಲದೆ ಸಾಧ್ಯವಿಲ್ಲ. ಪರಮಾಣುವಿನ ಕೇಂದ್ರದಲ್ಲಿ ಚಲಿಸುತ್ತಿರುವ ಪ್ರೋಟಾನ್ ಮತ್ತು ಅದರ ಸುತ್ತ ತಿರುಗುತ್ತಿರುವ ಎಲೆಕ್ಟ್ರೋನ್‍ಗಳು ಆ ಸೃಷ್ಟಿಕರ್ತನ ಆಜ್ಞೆಗೆ ಬದ್ಧವಾಗಿಯೇ ವರ್ತಿಸುತ್ತಿವೆ. ‘ಆಗು’ ಎಂಬ ಆತನ ಆಜ್ಞೆಯೇ ಸಕಲ ವಸ್ತುಗಳ ಅಸ್ತಿತ್ವದ ರಹಸ್ಯವಾಗಿದೆ. ವಿವಿಧ ವಸ್ತುಗಳಿಗೆ ಪರಮಾಣುವಿನ ಎಲೆಕ್ಟ್ರೋನ್ ಮತ್ತು ಪ್ರೋಟಾನ್‍ಗಳ ಸಂಖ್ಯಾನುಪಾತದಂತೆ ವಿವಿಧ ಗುಣಗಳನ್ನು ನೀಡಿ ಆತನೇ ಸಕ್ರಿಯಗೊಳಿಸಿರುತ್ತಾನೆ. ಈ ಪ್ರಪಂಚದಲ್ಲಿರುವ ಸಕಲ ಚರಾಚರಗಳೂ ಆ ಸೃಷ್ಟಿಕರ್ತನಿಗೆ ವಿಧೇಯವಾಗಿದೆ. ಇಂದು ಕಾಣುವ ಆಕಾಶ ಲೋಕವೂ ನಕ್ಷತ್ರಗಳೂ ಸೂರ್ಯ, ಚಂದ್ರ, ಭೂಮಿಯೂ, ಜೀವಜಾಲಗಳೂ ಆತನ ದೃಷ್ಟಾಂತಗಳಾಗಿವೆ, ಆತನ ಸೃಷ್ಟಿಗಳಾಗಿವೆ.
“ಆಕಾಶಗಳಲ್ಲೂ ಭೂಮಿಯಲ್ಲೂ ಎಷ್ಟೋ ನಿದರ್ಶನಗಳಿವೆ. ಅವುಗಳನ್ನು ಇವರು ಹಾದುಕೊಂಡು ಹೋಗುತ್ತಿರುತ್ತಾರೆ ಮತ್ತು ಅವುಗಳ ಕಡೆಗೆ ಕಿಂಚಿತ್ ಗಮನ ಹರಿಸುವುದಿಲ್ಲ” ಎಂದು ಪವಿತ್ರ ಕುರ್‍ಆನ್ ಸಾರುತ್ತದೆ.(12:105)

ಭೂಮಿಯನ್ನು ಮಾನವರಿಗೂ ಇತರ ಜೀವಜಾಲಗಳಿಗೂ ವಾಸಯೋಗ್ಯವಾಗಿ ಮಾಡಿರುವುದು ಬುದ್ಧಿಯಿಲ್ಲದ ನಿಸರ್ಗದ ಲೀಲೆಯಲ್ಲ. ಇತರ ಕೋಟ್ಯಾಂತರ ಗ್ರಹನಕ್ಷತ್ರಗಳಲ್ಲಿ ಇಲ್ಲದಂತಹ ವಾಯು, ಜಲ, ಆಹಾರ ಪದಾರ್ಥ ಹಾಗೂ ಇತರ ಅನೇಕ ಸೌಲಭ್ಯಗಳನ್ನು ಸರ್ವಜ್ಞನು, ಸರ್ವಶಕ್ತನು ಮತ್ತು ಪರಮ ದಯಾಮಯನಾದ ಅಲ್ಲಾಹನೇ ಏರ್ಪಡಿಸಿದ್ದಾನೆ. ಇದು ಆತನ ನಿದರ್ಶನಗಳಿಂದ ಆತನನ್ನು ಗ್ರಹಿಸಿ ಆತನಿಗೆ ಕೃತಜ್ಞತೆ ಸಲ್ಲಿಸಿ ಆತನನ್ನೇ ಆರಾಧಿಸಲಿಕ್ಕಾಗಿ ಬುದ್ಧಿ ಮತ್ತು ವಿವೇಕವಿರುವ ಮಾನವ ವರ್ಗಕ್ಕೆ ಆತನೇ ನೀಡಿರುವ ಅನುಗ್ರಹವಾಗಿದೆ. ಮಾನವನು ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞನಾಗಿ ಆತನ ಕೃಪಾಶ್ರಯವನ್ನು ಬಯಸಿ ಆತನನ್ನೇ ಆರಾಧಿಸಬೇಕು. ಅದರ ಬದಲಾಗಿ ಪ್ರಾರ್ಥನೆ ಆರಾಧನೆಗಳನ್ನು ಇತರ ಸ್ವಯಂಕೃತ ದೇವರಿಗೆ ಸಲ್ಲಿಸುವುದು ಘೋರ ಅಕ್ರಮವಾಗಿದೆ.

“ಹೀಗಿರುವಾಗ ಸೃಷ್ಟಿಸುವಾತನೂ ಏನನ್ನೂ ಸೃಷ್ಟಿಸದವರೂ ಸಮಾನರೇ? ನಿವೇನು ವಿವೇಚಿಸುವುದಿಲ್ಲವೇ?”(ಪವಿತ್ರ ಕುರ್‍ಆನ್-16:17)
“ಇವರು ಅಲ್ಲಾಹನನ್ನು ಬಿಟ್ಟು ಇತರ ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಯಾವುದೇ ವಸ್ತುವಿನ ಸೃಷ್ಟಿಕರ್ತರಲ್ಲ. ನಿಜವಾಗಿ ಅವರು ಸ್ವತಃ ಸೃಷ್ಟಿಗಳು.”(ಪವಿತ್ರ ಕುರ್‍ಆನ್-16:20)

ಸೃಷ್ಟಿಕರ್ತ ಮಾತ್ರ ಆರಾಧನೆಗೆ ಅರ್ಹ. ಪ್ರಾರ್ಥನೆ ಮತ್ತು ಆರಾಧನೆಗೆ ಕೇವಲ ಆತನೇ ಉತ್ತರಿಸಬಲ್ಲನು. ಪ್ರಾರ್ಥನೆ ಮತ್ತು ಆರಾಧನೆಗಳು ಕೇವಲ ಮಾನಸಿಕ ವ್ಯಾಯಾಮವಲ್ಲ, ಉತ್ತರ ದೊರೆಯಬೇಕಾದ ಕಾರ್ಯಗಳಾಗಿವೆ. ಪ್ರಾರ್ಥನೆಗೆ ಉತ್ತರ ದೊರೆಯಬೇಕಾದುದು ಸೃಷ್ಟಿಯ ಬೇಡಿಕೆಯಾಗಿದೆ. ಅದನ್ನು ಪೂರೈಸಲು ಸೃಷ್ಟಿಕರ್ತನಿಂದ ಮಾತ್ರ ಸಾಧ್ಯ. ಉಪಕಾರ ಅಥವಾ ಉಪದ್ರವ ಮಾಡಲಾಗದ ಸೃಷ್ಟಿಕರ್ತನಲ್ಲದ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ಕರೆದು ಪ್ರಾರ್ಥಿಸುವುದು, ಅವುಗಳಿಗೆ ಆರಾಧನೆಗಳನ್ನು ಸಲ್ಲಿಸುವುದು ಅತಿ ದೊಡ್ಡ ಅನ್ಯಾಯ ಮತ್ತು ಮೌಢ್ಯವಾಗಿದೆ. ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞರಾಗಿ ಅತ್ಯಂತ ಭಕ್ತಿವಿನಯದಿಂದ ಕೇವಲ ಆತನನ್ನೇ ಆರಾಧಿಸಬೇಕಾದುದು ಬುದ್ಧ್ದಿ ಮತ್ತು ವಿವೇಕವಿರುವ ಮಾನವನ ಕರ್ತವ್ಯವಾಗಿದೆ. ವಸ್ತುತಃ ಆತನಿಗೆ ನಮ್ಮ ಕೃತಜ್ಞತೆ ಅಥವಾ ಆರಾಧನೆಯ ಅಗತ್ಯವಿಲ್ಲ. ಆತ ನಿರಾವಲಂಬಿಯಾಗಿದ್ದಾನೆ. ಆತನ ಅನುಗ್ರಹಗಳಿಗೆ ಕೃತಜ್ಞರಾಗಿ ಆತನ ಕೃಪಾಶ್ರಮಕ್ಕಾಗಿ ನಡೆಸುವ ಆರಾಧನೆ ಮತ್ತು ಪ್ರಾರ್ಥನೆಗಳು ನಮ್ಮ ಹಿತಕ್ಕಾಗಿಯೇ ಇವೆ. “ಜನರೇ ನಿವೇ ಅಲ್ಲಾಹನ ಅವಲಂಬಿತರಾಗಿದ್ದೀರಿ ಮತ್ತು ಅಲ್ಲಾಹ್ ನಿರಪೇಕ್ಷನೂ ಸ್ವಯಂ ಸ್ತುತ್ಯನೂ ಆಗಿರುತ್ತಾನೆ”. (ಪವಿತ್ರ ಕುರ್‍ಆನ್-35:15)

ಏನಿದ್ದರೂ ಒಂದು ವಿಷಯ ಖಚಿತ. ಎಲ್ಲೆಡೆಯ ಮಾನವರಲ್ಲಿಯೂ ದೇವ ವಿಶ್ವಾಸವಿದೆ. ಅದು ಮಾನವ ಸ್ವಭಾವದಲ್ಲಿಯೇ ರೂಢ ಮೂಲವಾಗಿರುವ ಒಂದು ಬಯಕೆಯಾಗಿದೆ. ಪ್ರಾಚೀನ ಮಾನವರಲ್ಲಿಯೂ ಸೃಷ್ಟಿಕರ್ತನಾದ ದೇವನ ಬಗೆಗಿನ ವಿಶ್ವಾಸವಿತ್ತು. ಸೃಷ್ಟಿಕರ್ತನಾದ ದೇವನಲ್ಲಿ ವಿಶ್ವಾಸವಿರಿಸುತ್ತಾ, ನಿಸರ್ಗದ ವಿವಿಧ ಪ್ರಕ್ರಿಯೆಗಳನ್ನು ಇತರ ಕೆಲವು ಶಕ್ತಿಗಳೊಂದಿಗೆ ಜೋಡಿಸಿ ಹೊಸ ಕಲ್ಪನೆಗಳನ್ನು ನಿರ್ಮಿಸಿದರು. ಪ್ರಪಂಚದ ಸೃಷ್ಟಿಕರ್ತನಾದ ದೇವನಿಗೆ ಶಿಫಾರಸುದಾರರಾಗಿ, ಮಧ್ಯವರ್ತಿಗಳಾಗಿ ಅನೇಕ ಸಹಾಯಕ ದೇವಂದಿರನ್ನೂ ಅವರು ನಿಶ್ಚಯಿಸಿದರು. ಏಕದೇವನಲ್ಲಿ ವಿಶ್ವಾಸವಿರಿಸಿ ಕೇವಲ ಆ ದೇವನನ್ನು ಆರಾಧಿಸುತ್ತಿದ್ದ ಆದಿ ಮಾನವ ಸಮೂಹವು ಕಾಲಕ್ರಮೇಣ ಭಿನ್ನವಾಯಿತು. ಅದರೊಂದಿಗೆ ಪೈಶಾಚಿಕ ಪ್ರೇರಣೆಗಳೂ ವ್ಯಾಮೋಹಗಳೂ ದೇಹೇಚ್ಛೆಗಳೂ ನಾನಾ ದೇವ ಕಲ್ಪನೆಗಳ ಹುಟ್ಟಿಗೆ ಪ್ರೇರಕವಾಯಿತು.

ಕೊನೆಯ ದಿವ್ಯ ಗ್ರಂಥವಾಗಿರುವ ಪವಿತ್ರ ಕುರ್‍ಆನ್, ಜನರು ವಿಶ್ವದ ಸೃಷ್ಟಿಕರ್ತನ ಮೇಲೆ ಆರೋಪಿಸಿರುವ ತಪ್ಪು ಕಲ್ಪನೆಗಳನ್ನು ತಿದ್ದಿ ಆತನ ಗುಣ ವೈಶಿಷ್ಟ್ಯಗಳ ಸುಸ್ಪಷ್ಟ ವಿವರಣೆಯನ್ನು ನೀಡಿದೆ. ಮಾನವನು ಆರೋಪಿಸುವ ಎಲ್ಲ ದೌರ್ಬಲ್ಯಗಳಿಂದಲೂ ಆತನನ್ನು ಮುಕ್ತಗೊಳಿಸಿದೆ. ಅಲ್ಲಾಹನ ಗುಣ ವೈಶಿಷ್ಟ್ಯಗಳನ್ನು ಆತನೇ ಪರಿಚಯ ಪಡಿಸಿರುವ ರೀತಿಯಲ್ಲಿಯೇ ಅಂಗೀಕರಿಸದೆ ನಿರ್ವಾಹವಿಲ್ಲ. ಅದರಲ್ಲಿ ಮಾನವನ ಕಲ್ಪನೆಗಳಿಗೆ ಯಾವುದೇ ಸ್ಥಾನವಿಲ್ಲ. ಮಾನವರು ಕೆಲವೊಮ್ಮೆ ದೇವನನ್ನು ಮಾನವನ ಮಟ್ಟಕ್ಕೆ ಇಳಿಸುತ್ತಾರೆ. ಕೆಲವೊಮ್ಮೆ ಮಾನವನನ್ನು ದೇವನ ಮಟ್ಟಕ್ಕೆ ಏರಿಸುತ್ತಾರೆ. ದೇವನು ಶಿಫಾರಸಿನಿಂದ ಪ್ರಭಾವಿತನಾಗುವವ ಅಥವಾ ಜನ ಸಾಮಾನ್ಯರಿಗೆ ನಿಲುಕದವನೆಂಬ ಭಾವನೆಯಿಂದ ಮಧ್ಯವರ್ತಿಗಳನ್ನು ನಿಶ್ಚಯಿಸಿ ಅವರ ಮೂಲಕ ದೇವ ಸಾವಿೂಪ್ಯಕ್ಕೆ ಪ್ರಯತ್ನಿಸುತ್ತಾರೆ. ಹಾಗೆಯೇ ಸೃಷ್ಟಿಗಳಿಗೆ ಸೃಷ್ಟಿಕರ್ತನ ಸಾಮರ್ಥ್ಯಗಳನ್ನು ಆರೋಪಿಸಿ ಅವರನ್ನು ಕರೆದು ಪ್ರಾರ್ಥಿಸುತ್ತಾರೆ. ಕೆಲವರು ದೇವನು ಮಾನವರಂತೆಯೇ ಸಂತಾನವಿರುವವನೆಂದು ಬಗೆದು ಆ ಸಂತಾನಗಳನ್ನು ಸಂತೃಪ್ತಗೊಳಿಸಿದರೆ ಅಲ್ಲಾಹನ ಸಾವಿೂಪ್ಯ ದೊರಕಬಹುದೆಂದು ಭಾವಿಸಿ ಅದಕ್ಕಾಗಿ ಪ್ರಯತ್ನಿಸುತ್ತಾರೆ. ಇಂಥ ಎಲ್ಲ ತಪ್ಪು ತಿಳುವಳಿಕೆಗಳನ್ನೂ ಭಾವನೆಗಳನ್ನೂ ತಿದ್ದಿ, ಅಲ್ಲಾಹನ ಮಹಾನತೆಯನ್ನು ತಿಳಿಸಿ ಅವನ ಗುಣ ವೈಶಿಷ್ಟ್ಯಗಳನ್ನೂ ನಿದರ್ಶನಗಳನ್ನೂ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ವಚನಗಳು ಸ್ಪಷ್ಟಪಡಿಸುತ್ತವೆ. ಅಲ್ಲಾಹನ ವಾಸ್ತವಿಕತೆಯನ್ನು ಅವುಗಳಿಂದ ಚೆನ್ನಾಗಿ ಮನನ ಮಾಡಬಹುದಾಗಿದೆ.

“ಹೇಳಿರಿ, ಅವನು ಅಲ್ಲಾಹನು, ಏಕೈಕನು. ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (ಪವಿತ್ರ ಕುರ್‍ಆನ್ – 112:1-4)

“ಅವನೇ ಅಲ್ಲಾಹ್, ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅಗೋಚರವಾದ ಮತ್ತು ಗೋಚರವಾಗಿರುವ ಎಲ್ಲವನ್ನೂ ಬಲ್ಲವನು. ಅವನೇ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುತ್ತಾನೆ. ಅವನೇ ಅಲ್ಲಾಹ್, ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅವನು ಸಾಮ್ರಾಟನು, ಪರಮ ಪಾವನನು, ಸಾದ್ಯಂತ ಮಂಗಲಮಯನು, ಶಾಂತಿದಾತನು, ಸಂರಕ್ಷಕನು, ಪ್ರಬಲನು, ತನ್ನ ಆಜ್ಞೆಯನ್ನು ಶಕ್ತಿಯಿಂದ ಜಾರಿಗೊಳಿಸಿ ಬಿಡುವವನು, ಸದಾ ಸರ್ವೋನ್ನತನಾಗಿಯೇ ಇರುವವನು, ಜನರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು. ಸೃಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿಗೊಳಿಸುವವನೂ ಅದರಂತೆ ರೂಪ ಕೊಡುವವನೂ ಅಲ್ಲಾಹನೇ. ಅವನಿಗೆ ಅತ್ತ್ಯುತ್ತಮ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತಿದೆ ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆ್ಡರುತ್ತಾನೆ”. (ಪವಿತ್ರ ಕುರ್‍ಆನ್, 59: 22-24)

“ಅವನೇ ಅಲ್ಲಾಹ್, ನಿಮ್ಮ ಪ್ರಭು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಸಕಲ ವಸ್ತುಗಳ ಕರ್ತೃ. ಆದುದರಿಂದ ನೀವು ಅವನ ದಾಸ್ಯ-ಆರಾಧನೆಯನ್ನೇ ಮಾಡಿರಿ. ಅವನು ಸಕಲ ವಸ್ತುಗಳ ಹೊಣೆಗಾರನು.”(ಪವಿತ್ರ ಕುರ್‍ಆನ್ – 6: 102)

SHARE THIS POST VIA