Home / ಪ್ರವಾದಿ (ಸ) ನುಡಿ ಮುತ್ತುಗಳು

ಪ್ರವಾದಿ (ಸ) ನುಡಿ ಮುತ್ತುಗಳು

ಇಸ್ಲಾಮಿನ ಕುರಿತು ತಿಳಿದುಕೊಳ್ಳಲು ಪವಿತ್ರ ಕುರ್‍ಆನಿನ ಬಳಿಕ ಇರುವ ಅತ್ಯಂತ ಮಹತ್ವದ ಇನ್ನೊಂದು ಮೂಲವೆಂದರೆ ಪ್ರವಾದಿ ಮುಹಮ್ಮದ್‍ರ(ಸ) ನಡೆ ನುಡಿಗಳು ಮತ್ತು ಅವರ ಜೀವನ ಚರಿತ್ರೆ. ಪ್ರವಾದಿ ಮುಹಮ್ಮದ್‍ರ(ಸ) ಸಮಕಾಲೀನ ಅನುಯಾಯಿಗಳು ಮುಂದಿನ ಪೀಳಿಗೆಗಳಿಗಾಗಿ ಸುರಕ್ಷಿತವಾಗಿ ದಾಖಲಿಸಿಟ್ಟ ಅವರ ಅಸಂಖ್ಯ ವಚನಗಳ ಪೈಕಿ ಕೇವಲ ಕೆಲವನ್ನು ಇಲ್ಲಿ ಕೊಡಲಾಗಿದೆ. ಇವೆಲ್ಲಾ ಒಂದು ನಿರ್ದಿಷ್ಟ ಕಾಲ, ಪ್ರದೇಶ ಮತ್ತು ಸನ್ನಿವೇಶದಲ್ಲಿ ಹೇಳಿದ ಮಾತುಗಳಾಗಿರಬಹುದು. ಆದರೆ ಇವು ದೇಶಾತೀತ ಹಾಗೂ ಕಾಲಾತೀತವಾದ ಸತ್ಯವನ್ನು ಆಧರಿಸಿರುವ ಮಾತುಗಳಾದ್ದರಿಂದ ಎಂದೂ ಎಲ್ಲೂ ಇವುಗಳ ಉಪಯುಕ್ತತೆಯು ಕಿಂಚಿತ್ತೂ ಕಡಿಮೆಯಾಗುವುದಿಲ್ಲ.

ಪ್ರವಾದಿ ಮುಹಮ್ಮದ್(ಸ) ಹೇಳಿದರು. ಸರ್ವ ಸ್ತುತಿಗಳು ಅಲ್ಲಾಹನಿಗೇ ವಿೂಸಲು. ನಾನು ಅವನನ್ನೇ ಪ್ರಶಂಸಿಸುತ್ತೇನೆ ಮತ್ತು ಅವನಿಂದಲೇ ಸಹಾಯ ಬೇಡುತ್ತೇನೆ. ಯಾರಿಗೆ ಅಲ್ಲಾಹನು ಸನ್ಮಾರ್ಗ ತೋರುವನೋ ಅವನನ್ನು ಬೇರಾರೂ ದಾರಿಗೆಡಿಸುವಂತಿಲ್ಲ. ಯಾರಿಗೆ ಅಲ್ಲಾಹನು ಸನ್ಮಾರ್ಗ ತೋರಲಿಲ್ಲವೋ ಅವನಿಗೆ ಬೇರಾರೂ ದಾರಿ ತೋರಿಸುವಂತಿಲ್ಲ.

ಒಬ್ಬ ದೇವನೇ ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳ, ಎಲ್ಲ ಜೀವಿಗಳ ಮತ್ತು ಅವುಗಳಲ್ಲಿರುವ ಎಲ್ಲ ವಿಶೇಷತೆಗಳ ಸೃಷ್ಟಿಕರ್ತ. ಆದ್ದರಿಂದ ನಿಜವಾದ ಪ್ರಶಂಸೆಯು ಅವನಿಗೇ ಸಲ್ಲಬೇಕು. ಮನುಷ್ಯನು ದೇವನಿಗೆ ಸದಾ ಕೃತಜ್ಞನಾಗಿರಬೇಕು, ಯಾವುದೇ ಉತ್ತಮ ವಸ್ತುವನ್ನು ಕಂಡಾಗ ದೇವನನ್ನು ಪ್ರಶಂಸಿಸಬೇಕು ಮತ್ತು ಪ್ರತಿಯೊಂದು ಕಾರ್ಯವನ್ನು ದೇವನಾಮ ಹಾಗೂ ದೇವಸ್ತುತಿಯೊಂದಿಗೆ ಆರಂಭಿಸಬೇಕು ಎಂದು ಪ್ರವಾದಿ ಮುಹಮ್ಮದ್(ಸ) ಬೋಧಿಸಿರುವರು.

ದೇವನು ಸರ್ವಶಕ್ತನು. ಎಲ್ಲ ಸ್ಥಿತಿಗಳಲ್ಲೂ ಎಲ್ಲ ವಿಧದಲ್ಲೂ ಮನುಷ್ಯನ ಮೊರೆಯನ್ನಾಲಿಸಿ ಅವನಿಗೆ ನೆರವಾಗಲು ದೇವನು ಮಾತ್ರ ಸಮರ್ಥನು. ಆದ್ದರಿಂದ ಅವನಿಂದ ಮಾತ್ರ ಸಹಾಯ ಯಾಚಿಸಬೇಕು. ಮನುಷ್ಯನಿಗೆ ಜೀವ ನೀಡಿದ ದೇವನೇ ಜೀವನ ಮಾರ್ಗವನ್ನು ನೀಡಿರುವನು. ಆ ಸೃಷ್ಟಿಕರ್ತನು ತೋರಿಸಿದ ‘ಜೀವನ ಮಾರ್ಗ’ ಮಾತ್ರವೇ ಮನುಷ್ಯನ ಪಾಲಿಗೆ ಸಮರ್ಪಕವೂ ಹಿತಕರವೂ ಆಗಿದೆ. ದೇವನು ತೋರಿದ ಮಾರ್ಗವನ್ನು ಕಡೆಗಣಿಸಿ ಬೇರಾವ ಮಾರ್ಗದಲ್ಲಿ ನಡೆದರೂ ಮನುಷ್ಯನಿಗೆ ಇಹದಲ್ಲಾಗಲೀ ಪರದಲ್ಲಾಗಲೀ ವಿಜಯ ಸಿಗದು.

ವಿಶ್ವದಲ್ಲಿರುವುದೆಲ್ಲವೂ ದೇವನ ಸೃಷ್ಟಿ. ಯಾವ ಸೃಷ್ಟಿಯೂ ಪೂಜಾರ್ಹವಲ್ಲ. ಸೃಷ್ಟಿಕರ್ತನು ಮಾತ್ರ ಪೂಜಾರ್ಹನು. ಅವನು ತನ್ನ ವ್ಯಕ್ತಿತ್ವ, ಗುಣಗಳು, ಅಧಿಕಾರಗಳು ಮತ್ತು ತನ್ನ ಸಾಮರ್ಥ್ಯಗಳು ಹೀಗೆ ಎಲ್ಲ ವಿಷಯಗಳಲ್ಲೂ ಏಕಮೇವಾದ್ವಿತೀಯನು. ಆದ್ದರಿಂದ ಯಾರೂ ಅವನ ಸಮಾನರಾಗಲೀ ಸಹಭಾಗಿಗಳಾಗಲೀ ಅಲ್ಲ.

ಇಸ್ಲಾಮಿನ ತಳಹದಿಯು 5 ವಸ್ತುಗಳಲ್ಲಿದೆ:
ಅಲ್ಲಾಹನ ಹೊರತು ಬೇರಾರೂ ಆರಾಧ್ಯರಿಲ್ಲ ಹಾಗೂ ಮುಹಮ್ಮದ್(ಸ) ಅಲ್ಲಾಹನ ದಾಸರೂ ಸಂದೇಶವಾಹಕರೂ ಆಗಿರುವರೆಂದು ಸಾಕ್ಷ್ಯ ಹೇಳುವುದು, ನಮಾಝನ್ನು ಸಂಸ್ಥಾಪಿಸುವುದು, ಝಕಾತ್ ನೀಡುವುದು, ಹಜ್ಜ್ ನಿರ್ವಹಿಸುವುದು ಮತ್ತು ರಮಝಾನ್ ತಿಂಗಳ ಉಪವಾಸ ಆಚರಿಸುವುದು.

ಇಲ್ಲಿ ಪ್ರಥಮವಾಗಿ, ಮನುಷ್ಯನು ದೇವನೊಬ್ಬನೇ ಆರಾಧನಾರ್ಹನೆಂಬುದನ್ನು ಮತ್ತು ಮುಹಮ್ಮದ್(ಸ) ಆ ದೇವನ ದಾಸ ಹಾಗೂ ಸಂದೇಶವಾಹಕರೆಂಬುದನ್ನು ಅಂಗೀಕರಿಸಬೇಕೆಂದು ಹೇಳಲಾಗಿದೆ. ಇಲ್ಲಿ ಒಂದು ಅಂಶ ಗಮನಾರ್ಹ. ಅದೇನೆಂದರೆ, ಮುಹಮ್ಮದ್(ಸ) ದೇವನ ಅವತಾರವಾಗಲೀ ದೇವಪುತ್ರರಾಗಲೀ ದೇವ ಸಹಭಾಗಿಯಾಗಲೀ ದೇವ ಸದೃಶರಾಗಲೀ ಅಲ್ಲ. ಅವರೊಬ್ಬ ಮನುಷ್ಯ. ಅವರು ದೇವನ ಒಬ್ಬ ದಾಸ.

ನಮಾಝ್ ಎಂಬುದು ದೇವಾರಾಧನೆ ಮತ್ತು ದಾಸ್ಯದ ಅಭಿವ್ಯಕ್ತಿಯ ಅತ್ಯಂತ ಪರಿಣಾಮಕಾರೀ ವಿಧಾನವಾಗಿದೆ. ನಮಾಝ್‍ನಲ್ಲಿ ಮನುಷ್ಯನು ಶುದ್ಧ ಶರೀರ ಮತ್ತು ನಿರ್ಮಲ ಮನಸ್ಸಿನೊಂದಿಗೆ ನಿಂತು, ಕುಳಿತು, ಬಾಗಿ, ಸಾಷ್ಟಾಂಗವೆರಗಿ ಹೀಗೆ ವಿವಿಧ ಭಂಗಿಗಳಲ್ಲಿ ಭಕ್ತಿ ಮತ್ತು ಶ್ರದ್ಧೆಯೊಂದಿಗೆ ದೇವನನ್ನು ಸ್ಮರಿಸುತ್ತಾನೆ, ಸ್ತುತಿಸುತ್ತಾನೆ, ಪ್ರಾರ್ಥಿಸುತ್ತಾನೆ ಮತ್ತು ಆಜ್ಞಾಪಾಲನೆಯ ಕರಾರು ಮಾಡುತ್ತಾನೆ. ಇತರ ಮಾನವರ ಜೊತೆ ಭುಜಕ್ಕೆ ಭುಜ ಕೊಟ್ಟು ನಿಲ್ಲುವ ಮೂಲಕ ನಮಾಝ್‍ನಲ್ಲಿ ಮಾನವನು ಸಮಾನತೆ ಮತ್ತು ಭ್ರಾತೃತ್ವದ ಪಾಠವನ್ನು ಕಲಿಯುತ್ತಾನೆ. ನಿತ್ಯ ಐದು ಹೊತ್ತು ಸಾಮೂಹಿಕವಾಗಿ ನಿರ್ವಹಿಸಬೇಕಾದ ಈ ನಮಾಝ್ ಮನುಷ್ಯನಲ್ಲಿ ಸಮಯಪಾಲನೆ, ಶಿಸ್ತು ಹಾಗೂ ನಾಯಕನ ಅನುಸರಣೆಯಂತಹ ಗುಣಗಳನ್ನು ಬೆಳೆಸುತ್ತದೆ. ದೇವನ ಮತ್ತು ಮಾನವನ ಮಧ್ಯೆ ಯಾವುದೇ ತೆರೆ ಇಲ್ಲ. ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ ಮತ್ತು ದೇವನು ಸದಾ ತನ್ನ ದಾಸರ ಸಮಕ್ಷಮವೇ ಇರುವನೆಂಬ ಪ್ರಜ್ಞೆಯನ್ನು ಅದು ಬೆಳೆಸುತ್ತದೆ.

ನಿರ್ದಿಷ್ಟ ಮಿತಿಗಿಂತ ಅಧಿಕ ಸಂಪತ್ತುಳ್ಳವನು ಕನಿಷ್ಠ ಅದರ 2.5 ಶೇಕಡಾ ಭಾಗವನ್ನು ಕಡ್ಡಾಯವಾಗಿ ವರ್ಷಕ್ಕೊಮ್ಮೆ ಬಡಬಗ್ಗರಿಗೆ ಹಂಚಬೇಕು. ಇದಕ್ಕೆ ‘ಝಕಾತ್’ ಎನ್ನುತ್ತಾರೆ. ಇದನ್ನು ಪಾವತಿಸದವನು ಈ ಲೋಕದಲ್ಲೂ ಶಿಕ್ಷಾರ್ಹನಾಗಿರುವನು. ಪ್ರವಾದಿವರ್ಯರು(ಸ) ಜನರಿಗೆ ಈ ಕಡ್ಡಾಯ ದಾನವಲ್ಲದೆ ಐಚ್ಛಿಕವಾಗಿಯೂ ಬಡವರು, ನಿರ್ಗತಿಕರು, ಅನಾಥರು, ಪ್ರಯಾಣಿಕರು ಮುಂತಾದವರಿಗಾಗಿ ಗರಿಷ್ಠ ಖರ್ಚು ಮಾಡಬೇಕೆಂದು ಪ್ರೋತ್ಸಾಹ ನೀಡಿದ್ದರು. ಪ್ರತಿಯೊಬ್ಬನೂ ತನ್ನ ಸಹಜೀವಿಗೆ ತನ್ನಿಂದ ಸಾಧ್ಯವಾದಷ್ಟು ನೆರವಾಗಲು ಉತ್ಸುಕನಾಗಿರುವಂತಹ ಆದರ್ಶ ಸಮಾಜವನ್ನು ನಿರ್ಮಿಸುವಲ್ಲಿ ಪ್ರವಾದಿ(ಸ) ಯಶಸ್ವಿಯಾದರು.

ಮಕ್ಕಾ ಪಟ್ಟಣದವರೆಗೆ ಪ್ರಯಾಣಿಸಲು ಆರ್ಥಿಕವಾಗಿಯೂ ಶಾರೀರಿಕವಾಗಿಯೂ ಸಮರ್ಥರಾಗಿರುವವರಿಗೆ ಮಾತ್ರ ಹಜ್ಜ್ ಕಡ್ಡಾಯವಾಗಿದೆ. ಹಜ್ಜ್ ಮಾನವನಿಗೆ ಏಕದೇವತ್ವ ಮತ್ತು ಮಾನವೀಯ ಭ್ರಾತೃತ್ವದ ಪಾಠ ಕಲಿಸುತ್ತದೆ. ಸತ್ಯಕ್ಕಾಗಿ ಎಲ್ಲವನ್ನೂ ಸಹಿಸಲು ಮತ್ತು ಎಲ್ಲವನ್ನೂ ತ್ಯಜಿಸಲು ಸನ್ನದ್ಧರಾಗಬೇಕೆಂಬ ಸ್ಫೂರ್ತಿ ನೀಡುತ್ತದೆ. ಇಸ್ಲಾಮಿನ ವರ್ಣರಂಜಿತ ಇತಿಹಾಸವನ್ನು ನೆನಪಿಸುತ್ತದೆ. ಜೀವನಕ್ಕೆ ಹೊಸ ಕಾಯಕಲ್ಪ ನೀಡುತ್ತದೆ.

ರಮಝಾನ್ ತಿಂಗಳಲ್ಲಿ ಆ ತಿಂಗಳಾದ್ಯಂತ ನಿತ್ಯ ಉಪವಾಸ ಆಚರಿಸಬೇಕಾದುದು ಕಡ್ಡಾಯ. ಉಪವಾಸವೆಂದರೆ ಮನುಷ್ಯನು ನಿತ್ಯ ಪ್ರಭಾತದಿಂದ ಪ್ರದೋಷದ ತನಕ ನಿರಂತರವಾಗಿ ಅನ್ನ, ನೀರು ಹಾಗೂ ಲೈಂಗಿಕ ಅಪೇಕ್ಷೆಗಳನ್ನೆಲ್ಲಾ ತೊರೆದು ಕೇವಲ ದೇವನ ಮೆಚ್ಚುಗೆಗಾಗಿ ತನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೆ. ಇದರಿಂದ ಮನುಷ್ಯನಲ್ಲಿ ದೇವಭಯ, ದೇವನ ಮುಂದೆ ಜವಾಬ್ದಾರಿಕೆಯ ಪ್ರಜ್ಞೆ ಮತ್ತು ಸ್ವೇಚ್ಛೆಯ ಗುಲಾಮನಾಗುವ ಬದಲು ದೇವೇಚ್ಛೆಯನ್ನು ಅನುಸರಿಸಬೇಕೆಂಬ ಅರಿವು ಮೂಡುತ್ತದೆ. ಆತ್ಮ ನಿಯಂತ್ರಣದ ತರಬೇತಿ ಸಿಗುತ್ತದೆ. ಒಬ್ಬ ಉಪವಾಸಿಗನಿಗೆ ಜಗತ್ತಿನ ಇತರ ಮಾನವರ ಹಸಿವು ದಾಹಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದಿಲ್ಲ.

ತನ್ನ ಪಾಲಕ ಪ್ರಭುವನ್ನು (ದೇವನನ್ನು) ಸ್ಮರಿಸುವವನು ಜೀವಂತ ಮನುಷ್ಯನಂತಿರುವನು. ದೇವನನ್ನು ಸ್ಮರಿಸದವನು ಶವದಂತಿರುವನು.

ಅಲ್ಲಾಹನನ್ನು ಸದಾ ಸ್ಮರಿಸುತ್ತಲಿರಿ. ಅವನು ನಿಮ್ಮನ್ನು ಸಂರಕ್ಷಿಸುವನು. ಅವನನ್ನು ಸದಾ ನಿಮ್ಮ ಮನಸ್ಸಿನಲ್ಲಿ ಇರಿಸಿಕೊಳ್ಳಿರಿ, ಅವನನ್ನು ನಿಮ್ಮ ಸಮಕ್ಷಮ ಕಾಣುವಿರಿ.

ಪ್ರಾರ್ಥಿಸುವಾಗ ಅಲ್ಲಾಹನನ್ನು ಮಾತ್ರ ಪ್ರಾರ್ಥಿಸಿರಿ. ಸಹಾಯ ಕೇಳುವುದಿದ್ದರೆ ಅಲ್ಲಾಹನಿಂದ ಮಾತ್ರ ಕೇಳಿರಿ. ತಿಳಿದಿರಲಿ, ಲೋಕದ ಎಲ್ಲ ಮಾನವರು ಸೇರಿ ನಿಮಗೇನಾದರೂ ಹಿತವನ್ನು ಮಾಡಬಯಸಿದರೆ, ಅಲ್ಲಾಹನು ನಿಮ್ಮ ಪಾಲಿಗೆ ವಿಧಿಸಿದ್ದರ ಹೊರತು ಯಾವ ಹಿತವನ್ನೂ ಅವರು ಮಾಡಲಾರರು ಮತ್ತು ಲೋಕದ ಎಲ್ಲ ಮಾನವರು ಸೇರಿ ನಿಮಗೇನಾದರೂ ಹಾನಿ ಮಾಡಲಿಚ್ಛಿಸಿದರೆ, ಅಲ್ಲಾಹನು ನಿಮಗಾಗಿ ವಿಧಿಸಿದ್ದರ ಹೊರತು ಯಾವ ಹಾನಿಯನ್ನೂ ಅವರು ಮಾಡಲಾರರು……

 ಯಾವ ದಾಸನು ನಿಷ್ಕಳಂಕ ಮನಸ್ಸಿನಿಂದ ಅಲ್ಲಾಹನ ಹೊರತು ಬೇರಾರೂ ಆರಾಧ್ಯರಿಲ್ಲವೆಂದು ಮತ್ತು ನಾನು [ಮುಹಮ್ಮದ್(ಸ)] ಅಲ್ಲಾಹನ ಸಂದೇಶ ವಾಹಕನಾಗಿರುವೆನೆಂದು ಸಾಕ್ಷ್ಯನುಡಿದು ಆ ಬಳಿಕ ಸನ್ಮಾರ್ಗದಲ್ಲಿ ನಡೆಯುವನೋ ಅವನು ಸ್ವರ್ಗವನ್ನು ಪ್ರವೇಶಿಸುವನು.
ಸ್ವರ್ಗ ಪ್ರವೇಶಿಸಬೇಕೆಂಬ ಅಪೇಕ್ಷೆಯಂತೂ ಅನೇಕ ಮಂದಿಯಲ್ಲಿರುತ್ತದೆ. ಆದರೆ ಸ್ವರ್ಗವು ಕೇವಲ ಅಪೇಕ್ಷಿಸುವುದರಿಂದ ಸಿಗುವುದಿಲ್ಲ. ಒಬ್ಬ ವ್ಯಕ್ತಿ ಸ್ವರ್ಗಕ್ಕೆ ಅರ್ಹನಾಗಬೇಕಿದ್ದರೆ, ದೇವನ ಏಕತ್ವ ಮತ್ತು ಮುಹಮ್ಮದ್‍ರ(ಸ) ಪ್ರವಾದಿತ್ವವನ್ನು ಮನಸಾರೆ ಅಂಗೀಕರಿಸಬೇಕು. ಮಾತ್ರವಲ್ಲದೆ, ದೇವನು ಪ್ರವಾದಿಯ ಮೂಲಕ ತೋರಿಸಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆದು ತೋರಿಸಬೇಕು. ಆ ಸನ್ಮಾರ್ಗದ ಹೆಸರೇ ‘ಇಸ್ಲಾಮ್’.

 ಈ ಹಿಂದೆ ಪ್ರವಾದಿಗಳನ್ನು ಅವರವರ ಜನಾಂಗದೆಡೆಗೆ ಕಳುಹಿಸಲಾಗುತ್ತಿತ್ತು. ಆದರೆ ನಾನು ಸಕಲ ಮಾನವರತ್ತ ಕಳುಹಿಸಲ್ಪಟ್ಟಿರುವೆನು.
ಮುಹಮ್ಮದ್‍ರಿಗಿಂತ(ಸ) ಮುಂಚೆ ಈ ಜಗತ್ತಿನಲ್ಲಿ ಸಹಸ್ರಾರು ಪ್ರವಾದಿಗಳು ಬಂದಿರುವರು. ಅವರು ತಮ್ಮ ತಮ್ಮ ಕಾಲ ಹಾಗೂ ಜನಾಂಗಗಳಲ್ಲಿ ಜನರಿಗೆ ದೇವ ಸಂದೇಶವನ್ನು ತಲುಪಿಸುವ ಮತ್ತು ಮಾರ್ಗದರ್ಶನ ಮಾಡುವ ಕರ್ತವ್ಯವನ್ನು ನೆರವೇರಿಸಿರುವರು. ಅಂತ್ಯಪ್ರವಾದಿ ಮುಹಮ್ಮದ್‍ರ(ಸ) ವಿಶೇಷತೆಯೇನೆಂದರೆ ಅವರು ಯಾವುದಾದರೂ ನಿರ್ದಿಷ್ಟ ಕಾಲ ಅಥವಾ ಪ್ರದೇಶಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿನ ಎಲ್ಲ ಮಾನವರ ಪಾಲಿಗೆ ಲೋಕಾಂತ್ಯದವರೆಗೆ ಪ್ರವಾದಿ ಮತ್ತು ಮಾರ್ಗದರ್ಶಿ ಆಗಿರುವರು.

 ಯಾರ ವಶದಲ್ಲಿ ನನ್ನ ಜೀವವಿದೆಯೋ ಅವನಾಣೆ! ನಾನು ತಿಳಿದಿರುವುದನ್ನು ನೀವು ತಿಳಿದಿರುತ್ತಿದ್ದರೆ ನೀವು ಹೆಚ್ಚು ಅಳುತ್ತಿದ್ದಿರಿ ಮತ್ತು ಕಡಿಮೆ ನಗುತ್ತಿದ್ದಿರಿ.
ಮುಹಮ್ಮದ್(ಸ) ಪ್ರವಾದಿಯಾಗಿದ್ದುದರಿಂದ ಅವರಿಗೆ ದೇವನು ಜನ ಸಾಮಾನ್ಯರ ತಿಳುವಳಿಕೆಗೆ ನಿಲುಕದ ಅನೇಕ ವಿಷಯಗಳನ್ನು ತಿಳಿಸಿದ್ದನು. ಜನ ಸಾಮಾನ್ಯರಿಗೆ ಸ್ವರ್ಗ, ನರಕ ಮತ್ತಿತರ ವಾಸ್ತವಿಕತೆಗಳ ಬಗ್ಗೆ ಕೇವಲ ‘ತಿಳುವಳಿಕೆ’ ಇರುತ್ತದೆ. ಆದರೆ ಪ್ರವಾದಿವರ್ಯರಿಗೆ(ಸ) ಇವೆಲ್ಲವುಗಳ ಪ್ರತ್ಯಕ್ಷ ದರ್ಶನ ಮಾಡಿಸಲಾಗಿತ್ತು. ಅವರು ಸತ್ಯದ ನೇರ ಅನುಭವಗಳಿಸಿರುತ್ತಿದ್ದರು. ಈ ಪ್ರವಾದಿ ವಚನದ ತಾತ್ಪರ್ಯವೇನೆಂದರೆ ಮನುಷ್ಯನಿಗೆ, ತಾನು ತನ್ನ ತಪ್ಪಾದ ವಿಚಾರಧಾರೆ ಹಾಗೂ ಅಸಮರ್ಪಕ ನಡವಳಿಕೆಗಳಿಂದಾಗಿ ಎಂತಹ ಭವ್ಯ ಸ್ವರ್ಗದಿಂದ ದೂರವಾಗುತ್ತಿರುವೆನು, ಎಂತಹ ಭಯಾನಕ ನರಕಕ್ಕೆ ನಿಕಟವಾಗುತ್ತಿರುವೆನು ಮತ್ತು ಎಂತಹ ಕರುಣಾಮಯಿ ದೇವನಿಗೆ ದ್ರೋಹ ಬಗೆದು ಅವನ ಅನುಗ್ರಹದಿಂದ ವಂಚಿತನಾಗುತ್ತಿರುವೆನು ಎಂಬುದರ ಸರಿಯಾದ ಅರಿವಿಲ್ಲ. ಒಂದು ವೇಳೆ ಅವನಿಗೆ ಈ ಎಲ್ಲ ಪರಮಾರ್ಥಗಳ ಸರಿಯಾದ ಅರಿವು ಇರುತ್ತಿದ್ದರೆ ಅವನು ತನ್ನ ಅವಸ್ಥೆಯ ಬಗ್ಗೆ ಎಷ್ಟು ಕೊರಗುತ್ತಿದ್ದನೆಂದರೆ, ಅವನು ಹೆಚ್ಚು ಅಳುತ್ತಿದ್ದನು, ಬಹಳ ಕಡಿಮೆ ನಗುತ್ತಿದ್ದನು.

 ಇಹಲೋಕವನ್ನು ಪ್ರೀತಿಸುವಾತನು ತನ್ನ ಪರಲೋಕಕ್ಕೆ ಹಾನಿ ಮಾಡಿಕೊಳ್ಳುತ್ತಾನೆ ಮತ್ತು ಪರಲೋಕವನ್ನು ಪ್ರೀತಿಸುವಾತನು ತನ್ನ ಇಹಲೋಕಕ್ಕೆ ಹಾನಿ ಮಾಡಿಕೊಳ್ಳುತ್ತಾನೆ.
ಪರಲೋಕದ ಅನಂತ ಜೀವನಕ್ಕೆ ಹೋಲಿಸಿದರೆ ಈ ಲೋಕದ ಜೀವನ ಅತ್ಯಂತ ಸಂಕ್ಷಿಪ್ತ. ಈ ಲೋಕವು ವಾಸ್ತವದಲ್ಲಿ ಕೇವಲ ಒಂದು ಪರೀಕ್ಷಾ ಗೃಹವಾಗಿದೆ. ಮನುಷ್ಯನ ನೈಜ ನೆಲೆಯು ಪರಲೋಕವೇ ಹೊರತು ಈ ಲೋಕವಲ್ಲ. ಆದ್ದರಿಂದ ವಿವೇಕವಂತನಾದ ಮನುಷ್ಯನು ಪರಲೋಕದ ಶಾಶ್ವತ ವಿಜಯಕ್ಕಾಗಿ ಈ ಲೋಕದ ಕ್ಷಣಿಕ ಬದುಕಿನ ಯಾವುದೇ ಬಗೆಯ ಕಷ್ಟ, ನಷ್ಟ ಮತ್ತು ವಿಪತ್ತುಗಳನ್ನು ಎದುರಿಸಲು ಸಂತೋಷದಿಂದ ಸನ್ನದ್ಧನಾಗುತ್ತಾನೆ. ಆದರೆ ಮೂರ್ಖ ವ್ಯಕ್ತಿಯು, ಕೇವಲ ಈ ಕ್ಷಣಿಕ ಜೀವನವನ್ನೇ ಸರ್ವಸ್ವವೆಂದು ಭಾವಿಸಿ ಇಲ್ಲಿಯ ಸಂತಸಕ್ಕಾಗಿ, ದೇವನು ಮೆಚ್ಚದಂತಹ ಅನೇಕ ಕಾರ್ಯಗಳನ್ನು ಮಾಡುತ್ತಾನೆ. ಇದರ ಪರಿಣಾಮವಾಗಿ ಅವನಿಗೆ ಪರಲೋಕದಲ್ಲಿ ಅಪಮಾನ ಮತ್ತು ಯಾತನೆಯ ಹೊರತು ಬೇರೇನೂ ಪ್ರಾಪ್ತವಾಗುವುದಿಲ್ಲ. ಆದ್ದರಿಂದ ಮನುಷ್ಯನು ತನ್ನ ಇಹಜೀವನದ ಸುಖಕ್ಕಾಗಿ ಪರಲೋಕ ಜೀವನವನ್ನು ನಷ್ಟಕ್ಕೊಳಪಡಿಸುವ ಬದಲು, ಪರಲೋಕದ ವಿಜಯಕ್ಕಾಗಿ ಇಹಜೀವನದಲ್ಲಿ ಕೆಲವು ಕಷ್ಟ ನಷ್ಟಗಳನ್ನು ಸಹಿಸಿಕೊಳ್ಳುವುದೇ ಜಾಣತನವಾಗಿದೆ.

 ದೇವನಾಣೆ! ನೀವು ಹೇಗೆ ನಿದ್ರಿಸುವಿರೋ ಹಾಗೆಯೇ ಒಂದು ದಿನ ಸಾಯಲಿರುವಿರಿ ಮತ್ತು ನೀವಿಲ್ಲಿ ಏನೆಲ್ಲ ಮಾಡುತ್ತಿರುವಿರೋ ಅವೆಲ್ಲವುಗಳ ಬಗ್ಗೆ ವಿಚಾರಣೆ ನಡೆಸಲಾಗುವುದು. ಆ ಬಳಿಕ ಸತ್ಕಾರ್ಯಕ್ಕೆ ಉತ್ತಮ ಪ್ರತಿಫಲವೂ ದುಷ್ಕ್ರತ್ಯಗಳಿಗೆ ಕೆಟ್ಟ ಪ್ರತಿಫಲವೂ ಸಿಗುವುದು. ಅನಂತರ ಒಂದೋ ಶಾಶ್ವತವಾದ ಉದ್ಯಾನ. ಇಲ್ಲವೇ ಶಾಶ್ವತವಾದ ಅಗ್ನಿ. ಅಂದರೆ, ಮನುಷ್ಯನ ಪಾಲಿಗೆ ಮರಣವೆಂಬುದು ನಿದ್ರೆಯಷ್ಟೇ ಸ್ವಾಭಾವಿಕ. ನಿತ್ಯ ಬರುವ ನಿದ್ರೆಯು ಒಂದು ದಿನ ಹಠಾತ್ತನೆ ಬರಲಿರುವ ಮರಣವನ್ನು ನೆನಪಿಸುತ್ತದೆ. ಪ್ರವಾದಿ ಮುಹಮ್ಮದ್‍ರ(ಸ) ಬೋಧನೆಯಂತೆ ಮರಣವು ಮನುಷ್ಯ ಜೀವನದ ಅಂತ್ಯವಲ್ಲ. ಅದು ಕೇವಲ ಈ ಲೋಕದ ಪರೀಕ್ಷಾವಧಿಯ ಅಂತ್ಯವಾಗಿದೆ. ಮರಣದೊಂದಿಗೆ ಜೀವನದ ಇನ್ನೊಂದು ಮಜಲು ಆರಂಭವಾಗುತ್ತದೆ. ಇದು ಕರ್ಮಗಳ ಜೀವನವಾದರೆ, ಅದು ಫಲಿತಾಂಶಗಳ ಜೀವನ. ಮರಣಾನಂತರದ ಆ ಜೀವನದಲ್ಲಿ ಮನುಷ್ಯನು, ತನ್ನ ಇಹಜೀವನದ ಎಲ್ಲ ವಿಚಾರ, ಆಚಾರಗಳ ಪರಿಪೂರ್ಣ ವರದಿಯನ್ನು ಒಪ್ಪಿಸಬೇಕಾಗುವುದು. ಇಲ್ಲಿಯ ತಾತ್ಕಾಲಿಕ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆದು ಸತ್ಕರ್ಮವೆಸಗಿದವನು ಅಲ್ಲಿಯ ಶಾಶ್ವತ ಜೀವನದಲ್ಲಿ ಸ್ವರ್ಗೋದ್ಯಾನಗಳಲ್ಲಿ ಮೆರೆಯುವನು. ಇನ್ನು ಇಲ್ಲಿಯ ಪರೀಕ್ಷಾವಧಿಯಲ್ಲಿ ದೇವಾಜ್ಞೆಗಳ ವಿರುದ್ಧ ನಡೆದವನು ಅಲ್ಲಿ ಶಾಶ್ವತವಾಗಿ ನರಕಾಗ್ನಿಯಲ್ಲಿ ಉರಿಯುವನು.

 ಈ ಲೋಕದಲ್ಲಿ ಕರ್ಮವಿದೆ, ವಿಚಾರಣೆಯಿಲ್ಲ. ಆದರೆ ಪರಲೋಕದಲ್ಲಿ ವಿಚಾರಣೆ ಇರುವುದು, ಕರ್ಮವಿರಲಾರದು.
ಕರ್ಮಗಳನ್ನು ಮಾಡಲು ಮನುಷ್ಯನಿಗೆ ನೀಡಲಾಗಿರುವ ಅವಧಿಯು ಮರಣದೊಂದಿಗೆ ಕೊನೆಗೊಳ್ಳುವುದು. ಆ ಬಳಿಕ ವಿಚಾರಣೆ ಆರಂಭವಾಗುವುದು. ಮನುಷ್ಯನು ಪರಲೋಕಕ್ಕಾಗಿ ಮಾಡಬೇಕಾದ ಕರ್ಮಗಳನ್ನೆಲ್ಲಾ ಇಹಲೋಕದ ಜೀವನಾವಧಿಯಲ್ಲೇ ಮಾಡಬೇಕು. ಈ ಅವಧಿ ಒಮ್ಮೆ ಮುಗಿದು ಬಿಟ್ಟರೆ ಆ ಬಳಿಕ ಎಷ್ಟು ಗೋಗರೆದರೂ ಇದರ ಒಂದು ನಿಮಿಷ ಕೂಡಾ ಮರಳಿ ಸಿಗಲಾರದು. ಆದ್ದರಿಂದ ಈ ಅವಧಿಯ ಒಂದೊಂದು ನಿಮಿಷವನ್ನೂ ಅಮೂಲ್ಯವೆಂದು ಪರಿಗಣಿಸಿ ಸಾಧ್ಯವಿದ್ದಷ್ಟು ಹೆಚ್ಚು ಒಳಿತುಗಳನ್ನು ಸಂಪಾದಿಸುಮದೇ ಜಾಣತನ.

 ಐದು ವಸ್ತುಗಳನ್ನು ಐದು ವಸ್ತುಗಳಿಗಿಂತ ಮುಂಚೆ ಸದುಪಯೋಗ ಪಡಿಸಿಕೊಳ್ಳಿರಿ. ತಾರುಣ್ಯವನ್ನು ವೃದ್ಧಾಪ್ಯಕ್ಕಿಂತ ಮುಂಚೆ, ಆರೋಗ್ಯವನ್ನು ಅನಾರೋಗ್ಯಕ್ಕಿಂತ ಮುಂಚೆ, ಶ್ರೀಮಂತಿಕೆಯನ್ನು ದಾರಿದ್ರ್ಯಕ್ಕಿಂತ ಮುಂಚೆ, ಬಿಡುವನ್ನು ನಿಬಿಡತೆಗಿಂತ ಮುಂಚೆ ಮತ್ತು ಜೀವನವನ್ನು ಮರಣಕ್ಕಿಂತ ಮುಂಚೆ.
ಮನುಷ್ಯನ ಬಳಿ ಜೀವನ, ತಾರುಣ್ಯ, ಶ್ರೀಮಂತಿಕೆ, ಆರೋಗ್ಯ ಮತ್ತಿತರ ಸಾಮರ್ಥ್ಯಗಳು ಹಾಗೂ ಸವಲತ್ತುಗಳು ಲಭ್ಯವಿರುವಾಗಲೇ ಅವನು ಅವುಗಳಿಂದ ಗರಿಷ್ಠ ಪ್ರಯೋಜನ ಪಡೆಯಬೇಕು. ಈ ಸಾಮರ್ಥ್ಯಗಳನ್ನೆಲ್ಲಾ ತನ್ನ ಹಾಗೂ ಈ ಸಾಮರ್ಥ್ಯಗಳ ಒಡೆಯನ ಮೆಚ್ಚುಗೆಗೆ ಕಾರಣವಾಗುವಂತಹ ಸತ್ಕಾರ್ಯ ಮತ್ತು ಸೇವಾ ಕಾರ್ಯಗಳನ್ನು ಮಾಡಲಿಕ್ಕಾಗಿ ಬಳಸಿಕೊಳ್ಳಬೇಕು. ಈ ಪೈಕಿ ಯಾವುದೂ ಶಾಶ್ವತ ಸಂಪತ್ತಲ್ಲ. ಆದ್ದರಿಂದ ಅವುಗಳು ಲಭ್ಯವಿರುವಾಗ ಬಳಸಿಕೊಳ್ಳದೆ, ಕೈತಪ್ಪಿ ಹೋದ ಬಳಿಕ ಪರಿತಪಿಸಿ ಫಲವಿಲ್ಲ.

 ಪುನರುತ್ಥಾನ ದಿನ ಈ ಐದು ಪ್ರಶ್ನೆಗಳು ಕೇಳಲ್ಪಡುವ ತನಕ ದೇವನ ಮುಂದೆ ಯಾವುದೇ ಮನುಷ್ಯನ ಹೆಜ್ಜೆಗಳು ತಮ್ಮ ಸ್ಥಾನದಿಂದ ಕದಲಲಾರವು-
1. ಜೀವನವನ್ನು ಎಂತಹ ಕರ್ಮಗಳಲ್ಲಿ ವ್ಯಯಿಸಿದೆ?
2. ಯೌವನವನ್ನು ಎಂತಹ ಕಾರ್ಯಗಳಲ್ಲಿ ತೊಡಗಿಸಿದೆ?
3. ಸಂಪತ್ತನ್ನು ಯಾವ ಮೂಲಗಳಿಂದ ಸಂಪಾದಿಸಿದೆ? .
4. ಯಾವ ರೀತಿ ಖರ್ಚು ಮಾಡಿದೆ?
5. ಗಳಿಸಿದ ಜ್ಞಾನವನ್ನು ಎಷ್ಟರ ಮಟ್ಟಿಗೆ ಅನುಸರಿಸಿದೆ?”

 ನನ್ನ ಪಾಲಕ ಪ್ರಭು (ದೇವನು) ನನಗೆ ಒಂಭತ್ತು ಆದೇಶಗಳನ್ನು ನೀಡಿರುವನು:
1) ಗುಪ್ತ ಮತ್ತು ವ್ಯಕ್ತವಾದ ಎಲ್ಲ ಸ್ಥಿತಿಗಳಲ್ಲೂ ನಾನು ಅಲ್ಲಾಹನನ್ನು ಭಯಪಡುತ್ತಿರಬೇಕು.
2) ಕೋಪದಲ್ಲಿರಲಿ, ಸಂತೋಷದಲ್ಲಿರಲಿ ಎಲ್ಲ ಸ್ಥಿತಿಗಳಲ್ಲೂ ನ್ಯಾಯವಾದ ಮಾತನ್ನೇ ಆಡಬೇಕು.
3) ದಾರಿದ್ರ್ಯವಿರಲಿ, ಶ್ರೀಮಂತಿಕೆಯಿರಲಿ ನಾನು ಸಂತುಲಿತ ನೀತಿಯನ್ನು ಪಾಲಿಸಬೇಕು.
4) ಯಾರು ನನ್ನಿಂದ ಬೇರ್ಪಡುವರೋ ಅವರೊಂದಿಗೆ ನಾನು ಸೇರಿಕೊಳ್ಳಬೇಕು.
5) ನನಗೆ ನೀಡದೆ ಇದ್ದವರಿಗೆ ನಾನು ನೀಡಬೇಕು.
6) ನನಗೆ ಅನ್ಯಾಯ ಮಾಡುವವರನ್ನು ನಾನು ಕ್ಷಮಿಸಬೇಕು.
7) ನನ್ನ ಮೌನವು ಚಿಂತನೆಯ ಮೌನವಾಗಿರಬೇಕು.
8) ನನ್ನ ಮಾತು ದೇವಸ್ಮರಣೆಯನ್ನೊಳ ಗೊಂಡ ಮಾತಾಗಿರಬೇಕು.
9) ನನ್ನ ನೋಟವು ಪಾಠ ಕಲಿಯುವ ನೋಟವಾಗಿರಬೇಕು.”

 …..ನೀವು ಜನರು ನಮ್ಮೊಂದಿಗೆ ಉತ್ತಮವಾಗಿ ವರ್ತಿಸಿದರೆ ನಾವೂ ಉತ್ತಮವಾಗಿ ವರ್ತಿಸುತ್ತೇವೆ ಮತ್ತು ಜನರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ ನಾವೂ ಅವರೊಂದಿಗೆ ಕೆಟ್ಟದಾಗಿ ವರ್ತಿಸುತ್ತೇವೆ ಎಂದು ಹೇಳಬೇಡಿ. ಜನರು ಉತ್ತಮವಾಗಿ ವರ್ತಿಸಿದರೂ ನೀವು ಅವರ ಜೊತೆ ಉತ್ತಮವಾಗಿಯೇ ವರ್ತಿಸಿರಿ ಮತ್ತು ಅವರು ಕೆಟ್ಟದಾಗಿ ವರ್ತಿಸಿದರೂ ನೀವು ಅವರಿಗೆ ಅನ್ಯಾಯ ಮಾಡಬೇಡಿ. ನಿಮ್ಮಲ್ಲಿ ಅಂತಹ ಸ್ವಭಾವವನ್ನು ರೂಢಿಸಿಕೊಳ್ಳಿರಿ.

 ನೀವು ಲೋಕದ ಬಗ್ಗೆ ನಿರಪೇಕ್ಷರಾದರೆ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು, ಜನರ ಬಳಿ ಏನಿದೆಯೋ ಅದರ ಬಗ್ಗೆ ನೀವು ನಿರಪೇಕ್ಷರಾದರೆ ಜನರೂ ನಿಮ್ಮನ್ನು ಪ್ರೀತಿಸುವರು.

 ಗಂಭೀರವಾಗಿರಲಿ ಅಥವಾ ತಮಾಷೆಗಾಗಿರಲಿ ಯಾವ ಸ್ಥಿತಿಯಲ್ಲೂ ಸುಳ್ಳು ಹೇಳುವುದು ಧರ್ಮಸಮ್ಮತವಲ್ಲ. ನಿಮ್ಮ ಪೈಕಿ ಯಾರಾದರೂ ತನ್ನ ಮಗುವಿಗೆ ಒಂದು ವಚನ ಕೊಟ್ಟಿದ್ದರೆ ಅದನ್ನು ಪೂರ್ತಿಗೊಳಿಸದೆ ಇರುವುದು ಕೂಡಾ ಧರ್ಮ ಸಮ್ಮತವಲ್ಲ.

 ಅಲ್ಲಾಹನು ನಿಮ್ಮ ರೂಪಗಳನ್ನಾಗಲಿ, ಸಂಪತ್ತನ್ನಾಗಲಿ ನೋಡುವುದಿಲ್ಲ. ಅವನು ನಿಮ್ಮ ಮನಸ್ಸು ಮತ್ತು ನಿಮ್ಮ ಕರ್ಮಗಳನ್ನು ನೋಡುತ್ತಾನೆ.

 ನಿಮ್ಮ ಪೈಕಿ ಯಾರು ಸದಾಚಾರದಲ್ಲಿ ಅತ್ಯುತ್ತಮರೋ ಅವರೇ ನಿಮ್ಮಲ್ಲಿ ಅತ್ಯುತ್ತಮರು.

 ಭೂಮಿಯವರ (ಮಾನವರ) ಮೇಲೆ ನೀವು ಕರಣೆ ತೋರಿರಿ. ಆಕಾಶದವನು (ದೇವನು) ನಿಮ್ಮ ಮೇಲೆ ಕರುಣೆ ತೋರುವನು.

 ಜನರ ಮೇಲೆ ಯಾರು ಕರುಣೆ ತೋರುವುದಿಲ್ಲವೋ ಅವರ ಮೇಲೆ ಅಲ್ಲಾಹನು ಕರುಣೆ ತೋರುವುದಿಲ್ಲ.”

 ಒಂದು ಪಕ್ಷಿ ಅಥವಾ ಅದಕ್ಕಿಂತಲೂ ಸಣ್ಣ ಯಾವುದಾದರೂ ಜೀವಿಯನ್ನು ಯಾರಾದರೂ ಅನ್ಯಾಯವಾಗಿ ವಧಿಸಿದರೆ ಅಲ್ಲಾಹನು ಪುನರುತ್ಥಾನ ದಿನ ಅವನೊಡನೆ ಆ ಕುರಿತು ವಿಚಾರಣೆ ಮಾಡುವನು.
ಲೋಕದ ಸೃಷ್ಟಿಕರ್ತನು ಇಲ್ಲಿರುವ ಎಲ್ಲ ವಸ್ತುಗಳನ್ನು ಮನುಷ್ಯನ ಉಪಯೋಗಕ್ಕಾಗಿ ಸೃಷ್ಟಿಸಿರುವನು ಮತ್ತು ಮನುಷ್ಯನ ನಿಯಂತ್ರಣಕ್ಕೆ ಕೊಟ್ಟಿರುವನು. ಆದರೆ ಈ ವಸ್ತುಗಳೊಂದಿಗೆ ಮನಬಂದಂತೆ ವರ್ತಿಸುವ ಅಧಿಕಾರ ಮನುಷ್ಯನಿಗಿಲ್ಲ. ಅವನಿಗೆ ಈ ಪೈಕಿ ಕೇವಲ ತನಗೆ ಧರ್ಮಬದ್ಧವಾಗಿರುವ ವಸ್ತುವನ್ನು, ಧರ್ಮಬದ್ಧವಾದ ಉದ್ದೇಶಕ್ಕಾಗಿ ಮತ್ತು ಧರ್ಮಬದ್ಧವಾದ ವಿಧಾನದಿಂದ ಬಳಸಿಕೊಳ್ಳುವ ಸೀಮಿತ ಅನುಮತಿಯನ್ನು ಮಾತ್ರ ನೀಡಲಾಗಿದೆ. ಮನುಷ್ಯನು ಯಾವುದೇ ವಿಷಯದಲ್ಲಿ ಈ ಸೀಮೆಗಳನ್ನು ಉಲ್ಲಂಘಿಸಿದರೆ ಪರಲೋಕದಲ್ಲಿ ಆ ಕುರಿತು ಶಿಕ್ಷೆ ಅನುಭವಿಸಬೇಕಾಗುವುದು. ಆದ್ದರಿಂದ ಒಂದು ಪ್ರಾಣಿಯಿರಲಿ, ಪಕ್ಷಿಯಿರಲಿ, ಅಷ್ಟೇ ಏಕೆ ಗಿಡ-ಮರಗಳಿಗೆ ಕೂಡಾ ಅನಗತ್ಯವಾಗಿ ಹಾನಿಯುಂಟು ಮಾಡಿದರೆ ಅದು ಪರಲೋಕದಲ್ಲಿ ವಿಚಾರಣಾರ್ಹ ಹಾಗೂ ಶಿಕ್ಷಾರ್ಹವಾದಂತಹ ಅಪರಾಧವಾಗಿದೆ. ಪರಲೋಕದ ವಿಚಾರಣೆಯ ಪ್ರಜ್ಞೆಯಿರುವ ಯಾವ ವ್ಯಕ್ತಿಯೂ ಎಂದೂ ಇಂತಹ ಕೃತ್ಯವನ್ನು ಮಾಡಲಾರನು.

 ಅಸೂಯೆಯಿಂದ ದೂರವಿರಿ. ಏಕೆಂದರೆ ಬೆಂಕಿಯು ಕಟ್ಟಿಗೆಯನ್ನು ನುಂಗುವಂತೆ ಅಸೂಯೆಯು ಸತ್ಕರ್ಮಗಳನ್ನು ನುಂಗಿಬಿಡುತ್ತದೆ.
ಅಸೂಯೆ ಮನುಷ್ಯನ ದೊಡ್ಡ ದೌರ್ಬಲ್ಯಗಳ ಪೈಕಿ ಒಂದು. ಅದು ಎಂತಹ ಪಾಪವೆಂದರೆ, ಇತರರ ಬಗ್ಗೆ ಅಸೂಯೆ ಪಡುವ ವ್ಯಕ್ತಿ ತಾನು ಎಷ್ಟು ಸತ್ಕರ್ಮಗಳನ್ನು ಮಾಡಿದ್ದರೂ ಈ ಪಾಪದ ಕಾರಣ ಅವನ ಸತ್ಕರ್ಮಗಳೆಲ್ಲಾ ವ್ಯರ್ಥವಾಗುತ್ತವೆ. ಅಸೂಯೆಯು ಮಾನವೀಯ ಸಂಬಂಧಗಳಿಗೆ ಘಾತಕವಾಗಿದೆ. ಮನುಷ್ಯರ ನಡುವಣ ಸಂಬಂಧಗಳಿಗೆ ಮಾರಕವಾದ ಇಂತಹ ಪ್ರತಿಯೊಂದು ಗುಣವನ್ನು ಪ್ರವಾದಿವರ್ಯರು(ಸ) ಖಂಡಿಸಿರುವರು.

 ಶ್ರೀಮಂತಿಕೆಯೆಂಬುದು ಸಂಪತ್ತಿನ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ.

 ಕಾರ್ಮಿಕನ ಬೆವರು ಆರುವುದಕ್ಕೆ ಮುಂಚೆ ಅವನಿಗೆ ಅವನ ವೇತನವನ್ನು ಕೊಟ್ಟುಬಿಡಿರಿ.

 ಜನರನ್ನು ಕೆಡವಿ ಹಾಕುವವನು ಶಕ್ತಿಶಾಲಿಯಲ್ಲ. ಕೋಪ ಬಂದಾಗ ತನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವನೇ ನಿಜವಾದ ಶಕ್ತಿಶಾಲಿ.

 ಹಸಿದವನಿಗೆ ಉಣಿಸಿರಿ, ರೋಗಿಯನ್ನು ಸಂದರ್ಶಿಸಿರಿ ಮತ್ತು ಬಂಧಿತನನ್ನು ಬಂಧಮುಕ್ತಗೊಳಿಸಿರಿ.

 ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸಿದವನು ಒಂದೋ ಒಳಿತನ್ನು ಒಳಗೊಂಡ ಮಾತನ್ನಾಡಬೇಕು, ಇಲ್ಲವೇ ಮೌನವಾಗಿರಬೇಕು. ಅವನು ತನ್ನ ನೆರೆಹೊರೆಯವರಿಗೆ ಕಿರುಕುಳ ನೀಡಬಾರದು ಮತ್ತು ತನ್ನ ಅತಿಥಿಯನ್ನು ಗೌರವಿಸಬೇಕು.

 ಕೆಟ್ಟ ಗುಮಾನಿ (ಸಂದೇಹ)ಯಿಂದ ದೂರವಿರಿ. ಏಕೆಂದರೆ ಕೆಟ್ಟ ಗುಮಾನಿಯು ಅತ್ಯಂತ ಕೆಟ್ಟ ಸುಳ್ಳಾಗಿದೆ. ಜನರ ದೋಷಗಳನ್ನು ಹುಡುಕಬೇಡಿ. ಹೊಂಚು ಹಾಕಿಕೊಂಡಿರಬೇಡಿ. ಪರಸ್ಪರರ ಬಗ್ಗೆ ಅಸೂಯೆ ಪಡಬೇಡಿ. ಪರಸ್ಪರ ಹಗೆತನವಿಟ್ಟು ಕೊಳ್ಳಬೇಡಿ. ಅಲ್ಲಾಹನ ದಾಸರೇ! ಪರಸ್ಪರ ಸಹೋದರರಾಗಿರಿ.

 ಮಾನವಕುಲವು ದೇವನ ಕುಟುಂಬವಾಗಿದೆ. ದೇವನಿಗೆ ತನ್ನ ಎಲ್ಲ ಸೃಷ್ಟಿಗಳ ಪೈಕಿ, ತನ್ನ ಇತರ ಸೃಷ್ಟಿಗಳೊಂದಿಗೆ ಸದ್ವರ್ತನೆ ತೋರುವ ವ್ಯಕ್ತಿಯೇ ಅತ್ಯಂತ ಪ್ರಿಯನು.
ಧರ್ಮ, ದೇಶ, ವರ್ಣ, ಭಾಷೆಗಳ ವ್ಯತ್ಯಾಸವಿಲ್ಲದೆ ಜಗತ್ತಿನ ಎಲ್ಲ ಮಾನವರೂ ಒಂದು ಕುಟುಂಬದವರಂತೆ ಪರಸ್ಪರ ಬಂಧುಗಳಾಗಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದಕ್ಕೆ ಪ್ರವಾದಿ ಮುಹಮ್ಮದ್(ಸ) ಬಹಳಷ್ಟು ಶ್ರಮಿಸಿದ್ದರು. ಮಾನವರೆಲ್ಲರೂ ಆದಮ್(ಅ) ಎಂಬ ಏಕ ವ್ಯಕ್ತಿಯ ಸಂತಾನವಾಗಿದ್ದು ಪ್ರತಿಯೊಬ್ಬ ಮನುಷ್ಯನೂ ಇನ್ನೊಬ್ಬನ ಸಹೋದರನಾಗಿರುವನು ಮತ್ತು ಜಾತಿ, ವರ್ಣ ಇತ್ಯಾದಿಗಳ ಅಂತರವಿಲ್ಲದೆ ಪ್ರತಿಯೊಬ್ಬನೂ ಪ್ರೇಮ, ಅನುಕಂಪ ಮತ್ತು ಸದ್ವರ್ತನೆಗೆ ಅರ್ಹನು ಎಂದು ಅವರು ಬೋಧಿಸಿದ್ದರು.

 ಹಿರಿಯರನ್ನು ಗೌರವಿಸದವನು, ಕಿರಿಯರ ಮೇಲೆ ವಾತ್ಸಲ್ಯ ತೋರದವನು, ಒಳಿತಿನ ಪ್ರಚಾರ ಮಾಡದವನು ಮತ್ತು ಕೆಡುಕಿನಿಂದ ಜನರನ್ನು ತಡೆಯದವನು ನಮ್ಮವನಲ್ಲ.
ಮನುಷ್ಯನು ಕೇವಲ ತಾನು ಸತ್ಕಾರ್ಯಗಳನ್ನು ಮಾಡಿ ಕೆಡುಕುಗಳಿಂದ ದೂರವಿದ್ದರೆ ಸಾಲದು. ಕೇವಲ ತನ್ನ ಸುಧಾರಣೆಯಲ್ಲಿ ತೃಪ್ತನಾಗದೆ ಸಮಾಜದ ಇತರೆಲ್ಲ ವ್ಯಕ್ತಿಗಳನ್ನೂ ಒಳಿತಿನ ಮಾರ್ಗಕ್ಕೆ ಹಚ್ಚಲು ಮತ್ತು ಕೆಡುಕುಗಳಿಂದ ತಡೆಯಲು ಶ್ರಮಿಸಬೇಕು ಎಂದು ಪ್ರವಾದಿ(ಸ) ಬೋಧಿಸಿದರು. ಯಾವ ಸಮಾಜದಲ್ಲಿ ಸರಕಾರ ಮಾತ್ರವಲ್ಲದೆ ಜನತೆ ಕೂಡಾ ಪರಸ್ಪರರನ್ನು ಸತ್ಕಾರ್ಯ ಮಾಡುವಂತೆ ಪ್ರೇರೇಪಿಸುವರೋ ಮತ್ತು ಕೆಡುಕುಗಳಿಂದ ತಡೆಯುವರೋ ಅಂತಹ ಸಮಾಜವು ಆದರ್ಶ ಸಮಾಜವಾಗುವುದು ಖಚಿತ. ಇಂತಹ ಮಾದರಿ ಸಮಾಜವೊಂದನ್ನು ಕಟ್ಟಿ ಬೆಳೆಸುವಲ್ಲಿ ಪ್ರವಾದಿ(ಸ) ಯಶಸ್ವಿಯಾದರು.

 ದಾನ ಸ್ವೀಕಾರವು ಸ್ಥಿತಿವಂತನ, ಶಕ್ತಿಶಾಲಿಯ ಮತ್ತು ಆರೋಗ್ಯವಂತನ ಪಾಲಿಗೆ ಧರ್ಮಸಮ್ಮತವಲ್ಲ.
ಪ್ರವಾದಿ ಮುಹಮ್ಮದ್(ಸ) ದಾನ ಧರ್ಮ ನೀಡುವಂತೆ ಜನರನ್ನು ಬಹಳಷ್ಟು ಹುರಿದುಂಬಿಸಿದರು. ಆದರೆ ಅದೇ ವೇಳೆ ಇದರಿಂದಾಗಿ ಸಮಾಜದಲ್ಲಿ ಇತರರ ದಾನಧರ್ಮಗಳನ್ನೇ ನೆಚ್ಚಿಕೊಂಡು ನಿಷ್ಕ್ರಿಯವಾಗಿ ಬಾಳುವ ಮೈಗಳ್ಳರ ವರ್ಗವೊಂದು ಹುಟ್ಟಿಕೊಳ್ಳದಂತೆ ಎಚ್ಚರಿಕೆಯನ್ನೂ ವಹಿಸಿದರು. ಅವರು, ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಬಲ್ಲ ಸ್ಥಿತಿವಂತರಿಗೆ ದಾನ ನೀಡುವುದನ್ನು ವಿರೋಧಿಸಿದರು. ದಾನವು ಅದರ ಸ್ವೀಕಾರಕ್ಕೆ ಅರ್ಹರಾದಂತಹ ಸಮಾಜದ ಬಡ ಹಾಗೂ ದುರ್ಬಲ ವರ್ಗಗಳಿಗೆ ಮಾತ್ರ ಸಲ್ಲಬೇಕೆಂಬ ಉದ್ದೇಶವೂ ಈ ನೀತಿಯ ಹಿಂದೆ ಅಡಗಿತ್ತು.

 ಅಲ್ಲಾಹನು ಪರಿಶುದ್ಧನು, ಅವನು ಪರಿಶುದ್ಧ ವಸ್ತುಗಳನ್ನೇ ಮೆಚ್ಚುತ್ತಾನೆ. ಅವನು ನಿರ್ಮಲನು, ನೈರ್ಮಲ್ಯವನ್ನು ಮೆಚ್ಚುತ್ತಾನೆ. ಅವನು ಕರುಣಾಮಯಿ, ಕರುಣೆಯನ್ನು ಮೆಚ್ಚುತ್ತಾನೆ. ಅವನು ಉದಾರಿ, ಔದಾರ್ಯವನ್ನು ಮೆಚ್ಚುತ್ತಾನೆ.

 ಧರ್ಮವು ಬಹಳ ಸರಳವಾಗಿದೆ.
ಮಾನವಕುಲದ ಸೃಷ್ಟಿಕರ್ತನು ಮಾನವಕುಲಕ್ಕಾಗಿ ಮೆಚ್ಚಿದ ಧರ್ಮವನ್ನು ಮಾನವಕುಲಕ್ಕೆ ಪರಿಚಯಿಸಿದವರು ಪ್ರವಾದಿ ಮುಹಮ್ಮದ್(ಸ). ಅವರು ಈ ಹಿಂದೆ ಜಗತ್ತಿಗೆ ಬಂದ ಪ್ರವಾದಿಗಳು ತಂದಿದ್ದ ಧರ್ಮವನ್ನೇ ಅದರ ಅಂತಿಮ ರೂಪದಲ್ಲಿ ಜಗತ್ತಿನ ಮುಂದಿಟ್ಟರು. ಈ ಧರ್ಮವು ಪ್ರಕೃತಿ ಧರ್ಮವಾಗಿದೆ. ಇದು ಸಂಪೂರ್ಣವಾಗಿ ಮಾನವ ಪ್ರಕೃತಿಗೆ ಅನುಗುಣವಾದ ಧರ್ಮವಾಗಿದೆ. ಇದರ ವಿಶೇಷತೆಯೇನೆಂದರೆ ಇದು ಎಲ್ಲ ಜಟಿಲತೆಗಳಿಂದ ಮುಕ್ತವಾಗಿದೆ. ಇದು ಮಾನವನ ಮೇಲೆ ಯಾವುದೇ ಅಸ್ವಾಭಾವಿಕ ಅಥವಾ ಅನಗತ್ಯ ನಿರ್ಬಂಧವನ್ನು ಹೇರುವುದಿಲ್ಲ. ಮನುಷ್ಯನಿಗೆ ಪಾಲಿಸಲು ಸಾಧ್ಯವಾಗದಂತಹ ಯಾವುದೇ ಅಪ್ರಾಯೋಗಿಕ ಹೊಣೆಯನ್ನು ಹೊರಿಸುವುದಿಲ್ಲ. ಇಸ್ಲಾಮಿನ ಈ ಸರಳತೆಯೇ ಇಸ್ಲಾಮಿನ ಸೌಂದರ್ಯವಾಗಿದೆ.

 ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ತಿನ್ನುವ ಅಥವಾ ಕುಡಿಯುವ ವ್ಯಕ್ತಿಯು ತನ್ನ ಉದರದಲ್ಲಿ ಬೆಂಕಿಯನ್ನು ತುಂಬಿಕೊಳ್ಳುತ್ತಿದ್ದಾನೆ.
ಪ್ರವಾದಿ ಮುಹಮ್ಮದ್‍ರವರು(ಸ) ಅಪವ್ಯಯ ಮತ್ತು ಆಡಂಬರದ ಎಲ್ಲ ಕಾರ್ಯಗಳನ್ನು ವಿರೋಧಿಸಿದ್ದರು. ಮಹಿಳೆಯರು ಸ್ವರ್ಣಾಭರಣಗಳನ್ನು ಧರಿಸುವುದನ್ನು ಅವರು ಅನುಮತಿಸಿದರು. ಆದರೆ ಪುರುಷರಿಗೆ ಇದರ ಅನುಮತಿ ನೀಡಲಿಲ್ಲ.

 ದೊಡ್ಡ ಪ್ರಮಾಣದಲ್ಲಿದ್ದರೆ ಅಮಲುಂಟು ಮಾಡುವಂತಹ ವಸ್ತುವಿನ ಸಣ್ಣ ಪ್ರಮಾಣ ಕೂಡಾ ನಿಷಿದ್ಧವಾಗಿದೆ.

 ಶರಾಬು ಔಷಧಿಯಲ್ಲ, ಅದು ವ್ಯಾಧಿಯಾಗಿದೆ.
ಪ್ರವಾದಿವರ್ಯರು(ಸ) ಶರಾಬು ಸೇವನೆಯನ್ನು ವಿರೋಧಿಸಿ ಅದನ್ನು ನಿಷೇಧಿಸಿದ್ದು ಮಾತ್ರವಲ್ಲದೆ ಈ ವ್ಯಾಧಿಯು ಸಮಾಜದೊಳಗೆ ಪ್ರವೇಶಿಸಲು ಇರುವ ಎಲ್ಲ ದ್ವಾರಗಳನ್ನೂ ಮುಚ್ಚಿಬಿಟ್ಟರು. ಶರಾಬು ಕುಡಿಯುವುದನ್ನು ಮಾತ್ರವಲ್ಲದೆ ಶರಾಬು ತಯಾರಿಸುವುದನ್ನು, ಮಾರುವುದನ್ನು ಮತ್ತು ಶರಾಬಿನ ಗುಣಗಾನ ಹಾಗೂ ಪ್ರಚಾರ ಮಾಡುವುದನ್ನು ಕೂಡಾ ನಿಷೇಧಿಸಿಬಿಟ್ಟರು. ಈ ಎಲ್ಲ ಕೃತ್ಯಗಳಿಗೆ ನಿರ್ದಿಷ್ಟ ಶಿಕ್ಷೆಗಳನ್ನು ಜಾರಿಗೊಳಿಸಿದರು. ಸ್ವಲ್ಪ ಕುಡಿದರೆ ತಪ್ಪಲ್ಲ ಎಂಬ ಮನೋಭಾವವನ್ನು ಕೂಡಾ ಪ್ರವಾದಿ(ಸ) ಖಂಡಿಸಿದರು.

 ಅನ್ಯಾಯದ ವಿಷಯದಲ್ಲಿ ತನ್ನ ಜನಾಂಗದವರ ಬೆಂಬಲಕ್ಕೆ ನಿಲ್ಲುವ ವ್ಯಕ್ತಿಯ ಉದಾಹರಣೆಯು, ಬಾವಿಗೆ ಬೀಳುತ್ತಿರುವ ಒಂದು ಒಂಟೆಯ ಬಾಲ ಹಿಡಿದುಕೊಂಡು ತಾನೂ ಅದರ ಜೊತೆಗೆ ಬಾವಿಗೆ ಬೀಳುವವನಂತಿದೆ.
ಇಬ್ಬರ ಮಧ್ಯೆ ವಿವಾದ ನಡೆಯುತ್ತಿರುವಾಗ ಯಾರು ನ್ಯಾಯದಲ್ಲಿರುವರು ಮತ್ತು ಯಾರು ಅನ್ಯಾಯ ಮಾಡುತ್ತಿರುವರು ಎಂಬುದನ್ನು ನೋಡುವ ಬದಲು ಯಾರು ನಮ್ಮ ಜಾತಿ, ಧರ್ಮ, ಕುಲ ಅಥವಾ ವರ್ಣಕ್ಕೆ ಸೇರಿದವನೆಂದು ಮಾತ್ರ ನೋಡಿ ಕುರುಡಾಗಿ ಆತನ ಬೆಂಬಲಕ್ಕೆ ಧುಮುಕುವ ಪ್ರವೃತ್ತಿಯು ಆಧುನಿಕ ಯುಗದಲ್ಲೂ ವ್ಯಾಪಕವಾಗಿದೆ. ಈ ಕುರುಡು ಹಾಗೂ ಅನಾಗರಿಕ ನೀತಿಯನ್ನು ಪ್ರವಾದಿ(ಸ) ಉಗ್ರವಾಗಿ ಖಂಡಿಸಿರುವರು. ಅವರ ಬೋಧನೆಯಂತೆ, ಮನುಷ್ಯನು ಪ್ರತಿಯೊಂದು ವಿಷಯದಲ್ಲಿ ಕೇವಲ ಸತ್ಯ ಮತ್ತು ನ್ಯಾಯದ ಬೆಂಬಲಿಗನಾಗಿರಬೇಕು. ಅನ್ಯಾಯ ಮಾಡುತ್ತಿರುವವನು ಸ್ವತಃ ತನ್ನದೇ ಜನಾಂಗ ಅಥವಾ ಸಮುದಾಯದವನಾಗಿದ್ದರೂ ಅವನನ್ನು ವಿರೋಧಿಸಲು ಮತ್ತು ಅವನ ಕೈ ಹಿಡಿದು ಅನ್ಯಾಯದಿಂದ ತಡೆಯಲು ಕಿಂಚಿತ್ತೂ ಹಿಂಜರಿಯಬಾರದು. ಹಾಗೆಯೇ ಅನ್ಯಾಯಕ್ಕೊಳಗಾದವರು ಯಾವ ಗುಂಪಿಗೆ ಸೇರಿದವರಾಗಿದ್ದರೂ ಅವರ ನೆರವಿಗೆ ಧಾವಿಸಲು ತಡ ಮಾಡಬಾರದು.

 ಜನತೆಯನ್ನು ಮರ್ದಿಸುವವನೇ ಅತ್ಯಂತ ದುಷ್ಟ ಆಡಳಿತಗಾರ.
ಪ್ರವಾದಿವರ್ಯರ(ಸ) ಶಿಕ್ಷಣದ ಪ್ರಕಾರ ಜನತೆಯ ಜೀವ, ಸೊತ್ತು, ಅವರ ಹಕ್ಕುಗಳು ಮತ್ತು ನ್ಯಾಯಬದ್ಧ ಹಿತಾಸಕ್ತಿಗಳ ಸಂರಕ್ಷಣೆ ಆಡಳಿತಗಾರನ ಕರ್ತವ್ಯ. ಹಾಗೆಯೇ ಜನರ ಮೇಲೆ ತನ್ನ ಇಚ್ಛೆಗಳನ್ನು ಹೇರುವ ಬದಲು ಎಲ್ಲ ಕ್ಷೇತ್ರ ಗಳಲ್ಲಿ ದೇವದತ್ತ ಕಾನೂನು ನಿಯಮಗಳನ್ನು ಜಾರಿಗೊಳಿಸುವುದು ಆಡಳಿತಗಾರನ ಕರ್ತವ್ಯ. ಅವನು ಅಧಿಕಾರವನ್ನು ಒಂದು ಪವಿತ್ರ ಜವಾಬ್ದಾರಿಕೆಯಾಗಿ ಪರಿಗಣಿಸಬೇಕು. ಬಹಳ ಪ್ರಾಮಾಣಿಕವಾಗಿ, ನಿಷ್ಠೆಯೊಂದಿಗೆ ಈ ಜವಾಬ್ದಾರಿಕೆಯನ್ನು ನಿರ್ವಹಿಸಬೇಕು. ತನ್ನನ್ನು ಜನತೆಯ ಒಡೆಯನೆಂದು ಭಾವಿಸುವ ಬದಲು ಸೇವಕನೆಂದು ಭಾವಿಸಬೇಕು. ತನಗೆ ಸಲಹೆಗಳನ್ನು ನೀಡಲು, ತನ್ನ ತಪ್ಪುಗಳನ್ನು ಖಂಡಿಸಲು ತನ್ನನ್ನು ತಿದ್ದಲು ಮತ್ತು ಅಗತ್ಯ ಬಿದ್ದರೆ ತನ್ನ ಸ್ಥಾನದಲ್ಲಿ ತನಗಿಂತ ಯೋಗ್ಯನಾದ ಬೇರೊಬ್ಬ ವ್ಯಕ್ತಿಯನ್ನು ಕೂರಿಸಲು ಜನತೆಗೆ ಸ್ವಾತಂತ್ರ್ಯ ನೀಡಬೇಕು. ಈ ನಿಯಮಗಳಿಗೆ ವಿರುದ್ಧವಾಗಿ ಜನತೆಯನ್ನು ದಮನಿಸುವವರು ಅತ್ಯಂತ ದುಷ್ಟ ಆಡಳಿತಗಾರರೆಂದು ಪ್ರವಾದಿ(ಸ) ಘೋಷಿಸಿರುವರು.

 ನಾನು ನಿಮಗೆ ಮೂರು ಮಹಾ ಹಾಗೂ ಅತ್ಯಂತ ದುಷ್ಟ ಪಾಪಗಳಾವುವೆಂದು ತಿಳಿಸಲೇ?
1) ಅಲ್ಲಾಹನ ಜೊತೆ ಇತರರನ್ನು ಸಹಭಾಗಿಗಳಾಗಿ ಮಾಡುವುದು- (ಬಹುದೇವಾರಾಧನೆ).
2) ಹೆತ್ತವರ ಆಜ್ಞೋಲ್ಲಂಫನೆ ಮಾಡುವುದು.
3) ಸುಳ್ಳು ಹೇಳುವುದು ಮತ್ತು ಸುಳ್ಳು ಸಾಕ್ಷ್ಯ ನುಡಿಯುವುದು.

 ಹೆತ್ತವರ ಆಜ್ಞೋಲ್ಲಂಫನೆ, ಜಿಪುಣತನ, ಲೋಭ ಮತ್ತು ಹೆಣ್ಮಕ್ಕಳ ಜೀವಂತ ದಫನ ಇವುಗಳನ್ನು ಅಲ್ಲಾಹನು ನಿಮ್ಮ ಪಾಲಿಗೆ ನಿಷೇಧಿಸಿರುವನು. ಅನಗತ್ಯ ಮಾತುಕತೆ, ವಿಪರೀತ ಪ್ರಶ್ನೆಗಳು ಮತ್ತು ಸಂಪತ್ತಿನ ಅಪವ್ಯಯವನ್ನು ಅಪ್ರಿಯವೆಂದು ಘೋಷಿಸಿರುವನು.

SHARE THIS POST VIA