Home / ಲೇಖನಗಳು / ಮಕ್ಕಳೊಂದಿಗೆ ಮಗುವಾಗುತ್ತಿದ್ದ ಪ್ರವಾದಿ(ಸ)

ಮಕ್ಕಳೊಂದಿಗೆ ಮಗುವಾಗುತ್ತಿದ್ದ ಪ್ರವಾದಿ(ಸ)

✍️ ಅಬೂ ಝೀಶಾನ್

ಪ್ರವಾದಿ(ಸ) ಹೇಳಿದರು, “ಮಕ್ಕಳೊಂದಿಗೆ ಕರುಣೆ ತೋರದವನು ಹಾಗೂ ಹಿರಿಯರಿಗೆ ಗೌರವ ನೀಡದವನು ನಮ್ಮವನಲ್ಲ.”

ಹ. ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ, “ಮಕ್ಕಳೊಂದಿಗೆ ಪ್ರವಾದಿ(ಸ) ಕರುಣೆ ತೋರುವ ಹಾಗೆ ಬೇರೆ ಯಾರನ್ನೂ ಕಂಡಿಲ್ಲ.”

ಮಕ್ಕಳನ್ನು ಪ್ರವಾದಿ(ಸ) ಹತ್ತಿರ ತಂದಾಗ ಪ್ರವಾದಿ(ಸ) ಆ ಮಗುವಿಗೆ ತನ್ನ ಸಂಪೂರ್ಣ ಗಮನ ನೀಡುತ್ತಿದ್ದರು. ಆ ಮಗುವಿನೊಂದಿಗೆ ಮಾತನಾಡುತ್ತಿದ್ದರು, ಆಟವಾಡುತ್ತಿದ್ದರು. ಇದರಿಂದಾಗಿ ಪ್ರತಿಯೊಂದು ಮಗು ಪ್ರವಾದಿ(ಸ)ರೊಂದಿಗೆ ವಿಶೇಷವಾದ ಸಂಬಂಧವನ್ನು ಬೆಳೆಸುತ್ತಿತ್ತು. ವಿಶೇಷವಾಗಿ ಮಸೀದಿಯಲ್ಲಿ.

ಒಂದು ಮಸೀದಿಯಲ್ಲಿ ಮಕ್ಕಳನ್ನು ಪ್ರೀತಿಸುವ ಇಮಾಮರೊಬ್ಬರಿದ್ದರೆ ಖಂಡಿತವಾಗಿಯೂ ಮಕ್ಕಳು ಮಸೀದಿಗೆ ಹೋಗಲು ಇಷ್ಟ ಪಡುವರು. ಆದರೆ ಆ ಮಸೀದಿ ಇಮಾಮ್ ಸಾಧಾರಣ ಮನುಷ್ಯರಾಗಿರಲಿಲ್ಲ. ಕರುಣಾಮಯಿಯಾದ ಪ್ರವಾದಿ(ಸ) ಆಗಿದ್ದರು. ಹಾಗಾಗಿ ಮಕ್ಕಳು ಪ್ರವಾದಿ(ಸ)ರನ್ನು ಭೇಟಿಯಾಗಲು ಅವಕಾಶ ಸಿಗುವುದಕ್ಕಾಗಿ ಮಸೀದಿಗೆ ಬರಲು ಇಷ್ಟಪಡುತ್ತಿದ್ದರು. ಪ್ರವಾದಿ(ಸ) ನಮ್ಮನ್ನು ಪ್ರೀತಿಸುವ ನಮ್ಮೊಂದಿಗೆ ಆಟವಾಡುವರು ಹಾಗೂ ನಮಗೆ ಏನಾದರು ಕೊಡುವರು ಎಂದು ಆ ಮಕ್ಕಳಿಗೆ ತಿಳಿದಿತ್ತು.

ಹ. ಅನಸ್(ರ) ಹೇಳುತ್ತಾರೆ, ಪ್ರವಾದಿ(ಸ) ಮಕ್ಕಳೊಂದಿಗೆ ಹೇಗೆ ಪ್ರೀತಿಯ ಸಂಬಂಧ ಸ್ಥಾಪಿಸಿದ್ದರೆಂದರೆ ನನ್ನ ಸಣ್ಣ ತಮ್ಮನನ್ನು ಕಂಡಾಗ ಯಾವಾಗಲೂ ಕೇಳುತ್ತಿದ್ದರು, “ಯಾ ಅಬೂ ಉಮೈರ್, ಮಾ ಫಅಲ ನುಫೈರ್.” ನನ್ನ ಸಣ್ಣ ತಮ್ಮನ ಹೆಸರು ಅಬೂ ಉಮೈರ್ ಹಾಗೂ ಅವನ ಹತ್ತಿರ ಒಂದು ಹಕ್ಕಿಯಿತ್ತು. ಅದರ ಹೆಸರು ನುಫೈರ್ ಆಗಿತ್ತು. ಹಾಗಾಗಿ ಪ್ರವಾದಿ(ಸ) ನನ್ನ ತಮ್ಮನೊಂದಿಗೆ ಆ ಹಕ್ಕಿಯ ಬಗ್ಗೆ ಕೇಳುತ್ತಾ, “ಓ ಅಬೂ ಉಮೈರ್, ನಿನ್ನ ಹಕ್ಕಿ ಏನು ಮಾಡುತ್ತಿದೆ” ಎಂದು ಸದಾ ಕೇಳುತ್ತಿದ್ದರು. ಪ್ರವಾದಿ(ಸ) ಮಕ್ಕಳೊಂದಿಗೆ ವಿಶೇಷ ರೀತಿಯ ಸಂಬಂಧವನ್ನು ಸ್ಥಾಪಿಸಿದ್ದರು. ಅವರೊಂದಿಗೆ ನಡೆದಾಡುತ್ತಾ ಅವರ ಆಸಕ್ತಿಗಳನ್ನು ಕೇಳುತ್ತಿದ್ದರು. ಅವರೊಂದಿಗೆ ಬಹಳ ಆಪ್ತವಾಗಿರುತ್ತಿದ್ದರು. ಆ ಮಕ್ಕಳೇ ಮುಂದೆ ದೊಡ್ಡವರಾಗಿ ಸಮುದಾಯದ ಮಹಾ ಪಂಡಿತರಾದರು.

ಮದೀನಾದಲ್ಲಿ ಯಾರಿಗಾದರೂ ಮಗು ಹುಟ್ಟಿದಾಗ ಆ ಮಗುವನ್ನು ಪ್ರವಾದಿಯವರ(ಸ) ಹತ್ತಿರ ತರಲಾಗುತ್ತಿತ್ತು. ಅವರೆಲ್ಲರೂ ತಮ್ಮ ಮಗುವನ್ನು ಪ್ರವಾದಿ(ಸ) ತಹ್‌ನೀಕ್ ಮಾಡಲು ಇಷ್ಟಪಡುತ್ತಿದ್ದರು. ತಹ್‌ನೀಕ್ ಎಂದರೆ ಒಂದು ಖರ್ಜೂರವನ್ನು ಬಾಯಿಂದ ಜಗಿದು ಅದರ ರಸವನ್ನು ಮಗುವಿನ ಬಾಯಿಯ ಮೇಲ್ಭಾಗಕ್ಕೆ ತಾಗಿಸುವುದು. ಹ. ಅನಸ್(ರ) ಹೇಳುತ್ತಾರೆ, ಹ. ತಲ್ಹಾ(ರ)ರಿಗೆ ಮಗು ಹುಟ್ಟಿದಾಗ ಅವರು ಆ ಮಗುವನ್ನು ಪ್ರವಾದಿಯವರ(ಸ) ಹತ್ತಿರ ತಂದರು. ಪ್ರವಾದಿ(ಸ) ಆ ಮಗುವಿಗೆ ತಹ್‌ನೀಕ್ ಮಾಡಿದಾಗ ಆ ಮಗು ಅದನ್ನು ಇಷ್ಟಪಟ್ಟಿತು. ಇದನ್ನು ಕಂಡ ಪ್ರವಾದಿ(ಸ) ಹೇಳಿದರು, “ಅನ್ಸಾರರು ಖರ್ಜೂರವನ್ನು ಇಷ್ಟಪಡುವ ರೀತಿ ಯಿದು.” ನಂತರ ಆ ಮಗುವಿಗೆ ಅಬ್ದುಲ್ಲಾ ಎಂದು ಹೆಸರಿಟ್ಟರು. ಮದೀನಾದಲ್ಲಿ ಹೆಚ್ಚಿನ ಮಕ್ಕಳಿಗೆ ಪ್ರವಾದಿ(ಸ)ರೇ ಹೆಸರಿಟ್ಟಿದ್ದರು.

ಪ್ರವಾದಿ(ಸ) ಮದೀನಾದಲ್ಲಿದ್ದ ಅಬಿಸೀನಿಯಾದ ಮಕ್ಕಳನ್ನು ಕಂಡಾಗ ಆ ಮಕ್ಕಳೊಂದಿಗೆ ಅಬಿಸೀನಿಯಾ ಭಾಷೆಯಲ್ಲಿ ಮಾತಾಡಲು ಪ್ರಯತ್ನಿಸುತ್ತಿದ್ದರು. ಕೆಲವೊಮ್ಮೆ ಅಬಿಸೀನಿಯಾ ಭಾಷೆಯಲ್ಲಿ ಮಾತಾಡುವಾಗ ಆ ಮಕ್ಕಳು ನಗಾಡಲೆಂದು ಬೇಕೆಂತಲೇ ತಪ್ಪು ತಪ್ಪಾಗಿ ಮಾತಾಡುತ್ತಿದ್ದರು.

ಮದೀನಾದ ತೋಟಗಳಲ್ಲಿ ಹಣ್ಣುಗಳಾದಾಗ ಅವರು ಸ್ವಲ್ಪ ಹಣ್ಣುಗಳನ್ನು ಪ್ರವಾದಿ(ಸ)ರಿಗಾಗಿ ಪ್ರೀತಿಯಿಂದ ತರುತ್ತಿದ್ದರು. ಆಗ ಪ್ರವಾದಿ(ಸ) ಪ್ರಥಮವಾಗಿ ಆ ಹಣ್ಣುಗಳನ್ನು ತಂದವರಿಗಾಗಿ ದುಆ ಮಾಡುತ್ತಿದ್ದರು. ನಂತರ ಪ್ರವಾದಿ(ಸ) ತನ್ನ ಕಣ್ಣಿಗೆ ಬೀಳುವ ಸಣ್ಣ ಮಗುವನ್ನು ಕರೆದು ಹಣ್ಣುಗಳನ್ನು ಆ ಮಗುವಿಗೆ ನೀಡುತ್ತಿದ್ದರು. ಇದು ನಮ್ಮ ನೆಚ್ಚಿನ ಪ್ರವಾದಿಯವರ(ಸ) ಅಭ್ಯಾಸವಾಗಿತ್ತು.

ಪ್ರವಾದಿ(ಸ)ರ ಸ್ವಂತ ಮೊಮ್ಮಕ್ಕಳಾದ ಹ. ಹಸನ್ ಹಾಗೂ ಹ. ಹುಸೈನ್(ರ) ರನ್ನು ಅವರನ್ನು ಎತ್ತುತ್ತಿದ್ದರು, ಮುದ್ದಿಸುತ್ತಿದ್ದರು. ಪ್ರವಾದಿ(ಸ) ತನ್ನ ಪುತ್ರಿ ಫಾತಿಮಾ(ರ) ಮನೆಗೆ ಹೋದಾಗ ಬಾಗಿಲಿನಿಂದಲೇ ಸಣ್ಣವನು ಎಲ್ಲಿದ್ದಾನೆ ಎಂದು ಕೇಳುತ್ತಿದ್ದರು. ಅವರು ಹ. ಹಸನ್(ರ)ರನ್ನು ಉದ್ದೇಶಿಸಿ ಹೇಳುತ್ತಿದ್ದರು: ಪ್ರವಾದಿ(ಸ) ಪುಟ್ಟ ಮಕ್ಕಳಾದ ಹ. ಹಸನ್(ರ), ಹ. ಹುಸೈನ್(ರ) ಹಾಗೂ ಹ. ಉಸಾಮ ಬಿನ್ ಝೈದ್(ರ)ರನ್ನು ತನ್ನ ಮೇಲಿನ ಬಟ್ಟೆಯೊಳಗೆ ಅಪ್ಪಿ ಹಿಡಿಯುತ್ತಿದ್ದರು ಹಾಗೂ ಅವರಿಗಾಗಿ ದುಆ ಮಾಡುತ್ತಿದ್ದರು.

ಒಮ್ಮೆ ಒಬ್ಬ ಗ್ರಾಮೀಣ ಅರಬಿ ಪ್ರವಾದಿ(ಸ) ಹ. ಹಸನ್(ರ) ಹಾಗೂ ಹ. ಹುಸೈನ್(ರ)ರನ್ನು ಅಪ್ಪಿ ಹಿಡಿದು ಮುದ್ದಿಸುವುದನ್ನು ನೋಡಿ ಆಶ್ಚರ್ಯಚಕಿತನಾಗಿ ಕೇಳಿದ, “ನನಗೆ ಹತ್ತು ಮಕ್ಕಳಿದ್ದಾರೆ, ಆದರೆ ನಾನು ಅವರನ್ನು ಒಮ್ಮೆಯೂ ಮುದ್ದಿಸಲಿಲ್ಲ.” ಆಗ ಆ ಕರುಣಾಮಯಿ(ಅ) ಉತ್ತರಿಸುತ್ತಾರೆ, “ನಿನ್ನ ಹೃದಯದಲ್ಲಿ ಕರುಣೆ ಇಲ್ಲದಿದ್ದರೆ ನಾನೇನು ಮಾಡಲಿ.” ಯಾರು ಇತರರ ಮೇಲೆ ಕರುಣೆ ತೋರುವುದಿಲ್ಲವೋ ಅಲ್ಲಾಹನು ಅವರ ಮೇಲೆಯೂ ಕರುಣೆ ತೋರಲಾರನು.” ಪ್ರವಾದಿ(ಸ) ಹೇಳಿದರು, “ನಾವು ಮಕ್ಕಳ ಮೇಲೆ ಪ್ರೀತಿ ತೋರುವುದು ಕರುಣೆಯ ಭಾಗವಾಗಿದೆ.”

ಪ್ರವಾದಿ(ಸ) ಅನಾಥ ಮಕ್ಕಳ ಬಗ್ಗೆ ಬಹಳ ಕಾಳಜಿ ತೋರಿಸುತ್ತಿದ್ದರು. ಸ್ವತಃ ಅನಾಥರಾಗಿದ್ದ ಪ್ರವಾದಿ(ಸ) ಮದೀನಾದಲ್ಲಿ ನಡೆದಕೊಂಡು ಹೋಗುವಾಗ ಅನಾಥ ಮಕ್ಕಳು ಕಂಡಾಗ ಅವರೊಂದಿಗೆ ವಿಶೇಷವಾದ ಪ್ರೀತಿಯನ್ನು ತೋರಿಸುತ್ತಿದ್ದರು. ಸಹಾಬಿಗಳಿಗೂ ಅನಾಥ ಮಕ್ಕಳ ಮೇಲೆ ವಿಶೇಷವಾದ ಪ್ರೀತಿ, ಕರುಣೆ ತೋರಲು ಪ್ರೇರೇಪಿಸುತ್ತಿದ್ದರು.

ಪ್ರವಾದಿ(ಸ) ಹೇಳಿದರು, “ಅನಾಥರನ್ನು ಪೋಷಿಸುವ ಮನೆ ಅತಿ ಉತ್ತಮವಾದ ಮನೆ ಹಾಗೂ ಅನಾಥರೊಂದಿಗೆ ಕೆಟ್ಟದಾಗಿ ವ್ಯವಹರಿಸುವ ಮನೆ ಅತಿ ಕೆಟ್ಟ ಮನೆಯಾಗಿದೆ.”

ಪ್ರವಾದಿ(ಸ) ಒಮ್ಮೆ ಅಬೂದರ್ದಾ(ರ)ರೊಂದಿಗೆ ಹೇಳಿದರು, “ನಿನಗೆ ನಿನ್ನ ಹೃದಯ ಆಧ್ಯಾತ್ಮಿಕವಾಗಿ ಮೃದುವಾಗಬೇಕೇ? ನಿನಗೆ ಈ ಜೀವನದಲ್ಲಿ ಬೇಕಾದದ್ದು ಸಿಗಬೇಕೇ? ಹೀಗಾಗಬೇಕಾದರೆ ಅನಾಥರನ್ನು ನಿನ್ನ ಹತ್ತಿರ ತಂದು ಅವರ ಕೂದಲನ್ನು ಪ್ರೀತಿಯಿಂದ ಸವರುತ್ತಾ ನೀನು ತಿನ್ನುವುದರಿಂದ ಅವರಿಗೂ ತಿನ್ನಿಸು. ಇದು ನಿನ್ನ ಹೃದಯವನ್ನು ಮೃದುವಾಗಿಸುತ್ತದೆ ಹಾಗೂ ನಿನ್ನ ಅಗತ್ಯಗಳನ್ನು ಪೂರೈಸುತ್ತದೆ.”

ಪ್ರವಾದಿ(ಸ) ಅನಾಥರನ್ನು ಕಂಡಾಗ ಅವರನ್ನು ತನ್ನ ಮನೆಗೆ ಕರೆತಂದು ಅವರೊಂದಿಗೆ ಪ್ರೀತಿಯಿಂದ ಆಟವಾಡುತ್ತಿದ್ದರು, ಮಾತಾಡುತ್ತಿದ್ದರು, ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು. ಒಟ್ಟಿನಲ್ಲಿ ಸಮುದಾಯದ ಮಕ್ಕಳ ಮೇಲೆ ಅತೀವ ಕಾಳಜಿ ವಹಿಸುತ್ತಿದ್ದರು.

SHARE THIS POST VIA

About editor

Check Also

ಪ್ರವಾದಿಯ(ಸ) ಹಾಸ್ಯ ಮತ್ತು ವರ್ತಮಾನ

✍️ ಅಬೂ ಝೀಶಾನ್ ನೀವು ಪ್ರವಾದಿ(ಸ)ರೊಂದಿಗೆ ಪ್ರಥಮ ಬಾರಿ ಇದ್ದಾಗ ಹಾಗೂ ಅವರು ಏನಾದರೂ ಹಾಸ್ಯ ಮಾಡಿದಾಗ ಇಷ್ಟು ಮಹಾನ್ …

Leave a Reply

Your email address will not be published. Required fields are marked *