Home / ಲೇಖನಗಳು / ಪ್ರವಾದಿ(ಸ): ನಾನು ತಿಳಿದಂತೆ – ಪಿ.ಕೆ. ವಿಜಯ ರಾಘವನ್

ಪ್ರವಾದಿ(ಸ): ನಾನು ತಿಳಿದಂತೆ – ಪಿ.ಕೆ. ವಿಜಯ ರಾಘವನ್

✍️ ಪಿ.ಕೆ. ವಿಜಯ ರಾಘವನ್

ಮುಹಮ್ಮದ್ ಪ್ರವಾದಿ(ಸ) ಯಾರಾಗಿದ್ದರು? ಅವರು ಓರ್ವ ಕನ್ಯೆಗಿಂತಲೂ ಹೆಚ್ಚು ಲಜ್ಜಾವಂತರಾಗಿದ್ದರು ಎಂದು ಕೇಳಿದಾಗ ಆಶ್ಚರ್ಯವಾಯಿತು.

ಅನಾಗರಿಕ ಸಮಾಜವನ್ನು ಸಂಸ್ಕರಿಸಲು ಒಂಟಿಯಾಗಿ ಹೋರಾಟಕ್ಕಿಳಿದ ವ್ಯಕ್ತಿ ಲಜ್ಜಾವಂತನೇ, ಬದ್ರ್ ಉಹುದ್ ಯುದ್ಧಗಳಿಗೆ ನೇತೃತ್ವ ನೀಡಿದ ವ್ಯಕ್ತಿ ಲಜ್ಜಾವಂತನೇ!
ಮಕ್ಕಾ ಮತ್ತು ಮದೀನಾದ ಮೊದಲ ಮತ್ತು ಕೊನೆಯ ಮಾತು ಅವರದಾಗಿ ಆಡಳಿತ ಚುಕ್ಕಾಣಿ ವಹಿಸಿಕೊಂಡ ರಾಜಕೀಯ ಮುತ್ಸದ್ದಿ ಲಜ್ಜಾವಂತನೆ?

ಸಾವಿರಾರು ವರ್ಷಗಳಿಂದ ಯಾವುದೇ ಬದಲಾವಣೆಯಿಲ್ಲದೆ, ವಿಶ್ವದೆಲ್ಲೆಡೆ ಒಂದೇ ರೀತಿಯಲ್ಲಿ ಪ್ರಚಾರಗೊಳ್ಳುತ್ತಿರುವ ಪವಿತ್ರ ಕುರ್‌ಆನ್ ಅನ್ನು ಭೂಮಿಗೆ ತಲುಪಿಸಲು ನಿಯೋಜಿಸಲ್ಪಟ್ಟ ದೇವ ಸಂದೇಶವಾಹಕನಿಗೆ ಇಂಥ ನಾಚಿಗೆಯೇ?

ನನ್ನೊಳಗೆ ಲಜ್ಜೆ ಎಂಬ ಪದಕ್ಕೆ ನಾಚಿಕೆ ಮತ್ತು ಮುಜುಗರ ಎಂಬ ಅರ್ಥ ಮಾತ್ರವೇ ಇತ್ತು. ಪ್ರವಾದಿಗಳ ಜೀವನವು ಅದೇನೋ ಅಭೌತಿಕ ಮಟ್ಟದಲ್ಲಿದೆ ಎಂದು ಭಾವಿಸಿದ್ದೆ. ನಂತರ ಪ್ರವಾದಿವರ್ಯರ(ಸ) ಲಜ್ಜೆಯು ಮಾನವೀಯತೆಯ ಲಜ್ಜೆ ಎಂದು ಅರಿವಾಯಿತು. ಮಾಂತ್ರಿಕ ಶಕ್ತಿ, ಅತೀಂದ್ರಿಯ ಶಕ್ತಿಯೋ ಇಲ್ಲದ, ದೇವನೋ, ದೇವರ ಅವತಾರವೆಂದೋ ಹೇಳಿಕೊಳ್ಳದ, ಕಾರುಣ್ಯದ ಅನಂತ ತೀರದಲ್ಲಿ ಜೀವನದ ಧನ್ಯತೆಯೆಂದು ತನ್ನ ಬದುಕಿನ ಮೂಲಕ ತೋರಿಸಿಕೊಟ್ಟ ಪ್ರವಾದಿವರ್ಯರ(ಸ) ಲಜ್ಜೆಗೆ ವಿನಯ, ಮಿತ್ರತ್ವ, ಸಮಭಾವನೆ, ಅಚಂಚಲತೆಯಂತಹ ಅನಂತ ಅರ್ಥ ವಿಶೇಷತೆಗಳಿವೆ ಎಂದು ಓದಿ ತಿಳಿದುಕೊಂಡೆ.

ಹೌದು, ಪ್ರವಾದಿ ಮುಹಮ್ಮದ್(ಸ) ಮಾನವೀಯತೆಯ ಸಾಕಾರಮೂರ್ತಿಯಾಗಿದ್ದರು. ಕ್ರಿ.ಶ. 569ರಲ್ಲಿ ಪ್ರವಾದಿಯವರ(ಸ) ಜನನವಾಯಿತು. ಅದರ ಬಳಿಕ ಎಷ್ಟೋ ರಬೀವುಲ್ ಅವ್ವಲ್‌ಗಳು ಕಳೆದು ಹೋಯಿತು. ಭೂಮಿಯಲ್ಲಿ ಸರ್ಕಾರಗಳು, ಜೀವನ ಶೈಲಿಗಳು ಬದಲಾಗಿವೆ. ಶತಶತಮಾನಗಳು ಉರುಳಿದರೂ ಪ್ರವಾದಿವರ್ಯರ(ಸ) ಜೀವನವು ನಮ್ಮ ಮುಂದೆ ಉದಾಹರಣೆಯಾಗಿ ನಿಂತಿದೆ. ಏಕೆಂದರೆ ಬೇರೆ ಯಾವುದೂ ನಮ್ಮನ್ನು ಮಾನವೀಯತೆಯ ಆಳಕ್ಕೆ ತಲುಪಲು ಸಾಧ್ಯವಾಗಲಿಲ್ಲ.

ತಾನು ದೇವನೆಂದು ಹೇಳಿ ಓರ್ವ ಅತಿಮಾನವನಾಗಿ ಬದುಕುವ ಅವಕಾಶವಿದ್ದರೂ, ಯುದ್ಧದಲ್ಲಿ ಗಳಿಸಿದ್ದೆಲ್ಲವನ್ನೂ ಸೇರಿಸಿ, ಅಧಿಕಾರದ ಕೋಟೆಗಳಲ್ಲಿ ಐಶಾರಾಮಿ ಜೀವನ ನಡೆಸುವ ಸಾಧ್ಯತೆಯ ಹೊರತಾಗಿಯೂ ಅವರು ಮಾನವರಾಗಿ ಉಳಿದರು. ಅಂತ್ಯ ನಿಮಿಷದಲ್ಲೂ ಕೇವಲ ಒಂದು ಹಿಡಿ ಗೋಧಿಯ ಹೊರತು ಬೇರೇನನ್ನೂ ಉಳಿಸದ ನಿಸ್ವಾರ್ಥ ಜೀವನ. ಖಂಡಿತವಾಗಿಯೂ ಆಧುನಿಕ ಮನುಷ್ಯನಿಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ.

ಹಿರಾ ಗುಹೆಯಲ್ಲಿ ಧ್ಯಾನಮಗ್ನರಾಗಿದ್ದಾಗ ದೇವಚರ ಜಿಬ್ರೀಲ್ ಓದುವಂತೆ ಸೂಚಿಸಿದರು. ಬರವಣಿಗೆ ಅಥವಾ ಶಿಕ್ಷಣ ಸಾಕಷ್ಟು ಜನಪ್ರಿಯವಾಗದ ಕಾಲದಲ್ಲಿ ಪ್ರವಾದಿಯವರು(ಸ) ನಿರಕ್ಷರರಾಗಿದ್ದರು. ಹಿಂಜರಿದ ಪ್ರವಾದಿಯವರನ್ನು(ಸ) ಜಿಬ್ರೀಲ್ ಪುನಃ ಪುನಃ ಓದುವಂತೆ ಪ್ರೋತ್ಸಾಹಿಸಿತು.
“ಓದಿರಿ; ನಿಮ್ಮನ್ನು ಸೃಷ್ಟಿಸಿದ ಪ್ರಭುವಿನ ನಾಮದಿಂದ.”
(ಅಲ್ ಅಲಕ್: 1)
“ಓದಿರಿ; ನಿನ್ನ ಪ್ರಭು ಅತ್ಯಂತ ಉದಾರನು. ಲೇಖನಿಯಿಂದ ಬರೆಯಲು ಕಲಿಸಿದನು.” (ಅಲ್ ಅಲಕ್: 3-4)
ಬರಹ ಮತ್ತು ಓದುವಿಕೆಯ ಮೂಲಕ ಪಡೆಯುವ ಜ್ಞಾನವು ಯಾವುದೇ ಸಂಸ್ಕೃತಿಯ ಬೆಳವಣಿಗೆಗೆ ಅತಿ ಅಗತ್ಯ ಎಂಬುದು ಪ್ರತಿಯೊಬ್ಬ ತಿಳಿದಿರಬೇಕಾದ ಸತ್ಯವಾಗಿದೆ.

ಇಲ್ಲಿಂದ ಕಾಡಿನ ಸಂಸ್ಕೃತಿಯಿಂದ ಇಂದು ಕಾಣುತ್ತಿರುವ ಸ್ವರ್ಗದ ಸೌಭಾಗ್ಯದ ಕಡೆಗೆ ಅರೇಬಿಯಾದ ಪಯಣ. ಈ ಬೆಳವಣಿಗೆಗೆ ಅಡಿಪಾಯ ಹಾಕಿದವರೇ ಪ್ರವಾದಿ(ಸ)ರಾಗಿದ್ದಾರೆ.

ಅಲ್ಲಾಹನು ಪ್ರವಾದಿವರ್ಯರಿಗೆ ಎರಡು ಹೊಣೆಗಾರಿಕೆಯನ್ನು ನಿಶ್ಚಯಿಸಿದ್ದನು. ಒಂದನೇಯದು ದೇವನ ಮಾರ್ಗದೆಡೆಗೆ ಜನರನ್ನು ಆಹ್ವಾನಿಸುವುದು. ಅದರೊಂದಿಗೆ ಅಂಧವಿಶ್ವಾಸದಿಂದ ಮುಳುಗಿದ್ದ ಗೋತ್ರ ಸಂಸ್ಕೃತಿಯಿಂದ ನಿಶ್ಚಯದಾರ್ಢ್ಯವಿರುವ ಒಂದು ಅರೇಬಿಯಾವನ್ನು ಸಿದ್ಧಗೊಳಿಸುವುದು.

ಅದರ ಆರಂಭಿಕ ದಿನಗಳಲ್ಲಿ ಪ್ರವಾದಿವರ್ಯರಿಗೆ (ಸ) ದೈಹಿಕವಾಗಿಯೂ ಆರ್ಥಿಕವಾಗಿಯೂ ಸಹಾಯ ಮಾಡಿದವರು ಹ. ಖದೀಜಾ(ರ)ರಾಗಿದ್ದರು. ಕುರೈಶಿಗಳಿಂದ ಉಂಟಾದ ತೊಂದರೆಗಳಿಂದ ಪಾರಾಗಲು ಖದೀಜಾ ಪ್ರವಾದಿಯವರಿಗೆ(ಸ) ಸಹಾಯ ಮಾಡಿದರು. ಖದೀಜಾರ ಮರಣದ ಬಳಿಕ ಪ್ರವಾದಿವರ್ಯರು(ಸ) ಹಲವಾರು ವಿವಾಹವನ್ನು ಮಾಡಿದರೂ ಖದೀಜಾ(ರ)ರೇ ಪ್ರವಾದಿಯವರ(ಸ) ಪ್ರೀತಿಯ ಪತ್ನಿಯಾಗಿದ್ದರು. ಖದೀಜಾರೊಂದಿಗೆ ಪ್ರೀತಿ, ಅನುರಾಗವು ಪ್ರವಾದಿವರ್ಯರಲ್ಲಿ ಸದಾ ಸುಪ್ತವಾಗಿತ್ತು. ಮನೆಯಲ್ಲಿ ಏನು ವಿಶೇಷ ನಡೆದರೂ ಖದೀಜಾರ ಗೆಳತಿಯರಿಗೆ ಕಳುಹಿಸಿ ಕೊಡಲು ಮರೆಯುತ್ತಿರಲಿಲ್ಲ. ಖದೀಜಾ(ರ)ರ ಸರವನ್ನು ಕಂಡು ಮನಸ್ಸು ಕರಗಿದಾಗ ಪುತ್ರಿ ಝೈನಬರ ಪತಿಯನ್ನು ಸ್ವತಂತ್ರಗೊಳಿಸಿದರು. ಬದ್ರ್ ಯುದ್ಧದಲ್ಲಿ ಸೆರೆಯಾಳಾಗಿ ಸಿಕ್ಕಿದ ಅವರಿಗೆ ಬಿಡುಗಡೆಗಾಗಿ ವಿವಾಹದ ಸಂದರ್ಭದಲ್ಲಿ ದೊರೆತ ಸರವನ್ನು ಝೈನಬ್ ಕಳಿಸಿಕೊಟ್ಟಿದ್ದರು. ಅದನ್ನು ಕಂಡ ಕೂಡಲೇ ಪ್ರವಾದಿವರ್ಯರು(ಸ) ಭಾವಪರವಶರಾದರು.

ಹಿರಾಗುಹೆಯಲ್ಲಿ ದಿವ್ಯದರ್ಶನ ಲಭಿಸಿದ ಬಳಿಕ ಭಯವಿಹ್ವಲರಾಗಿ ಪ್ರವಾದಿವರ್ಯರು(ಸ) ಮನೆಗೆ ಮರಳಿದರು. ಖದೀಜಾ ಅವರಿಗೆ ಹೊದಿಕೆ ಹಾಕಿದರು. ಹೌದು ಲೌಕಿಕ ಜೀವನದ ಹೊದಿಕೆಯಲ್ಲಿ ಪ್ರವಾದಿವರ್ಯರಿಗೆ(ಸ) ಸಂರಕ್ಷಣೆಗೆ ನೀಡಿದವರು ಖದೀಜಾ. ನಂತರ ಓರ್ವ ಸಂಬಂಧಿಕನ ಬಳಿಗೆ ಕರೆದುಕೊಂಡು ಹೋಗಿ ಖದೀಜಾರು ಪ್ರವಾದಿತ್ವದಲ್ಲಿ ವಿಶ್ವಾಸವಿಟ್ಟರು.

ಓರ್ವನ ಭೌತಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಮಹಿಳೆಗಿರುವ ಸ್ಥಾನ ಎಷ್ಟು ಮಹತ್ತರವೆಂದು ಪ್ರವಾದಿ ಮುಹಮ್ಮದ್(ಸ) ರವರ ಜೀವನ ಚರಿತ್ರೆ ನಮ್ಮನ್ನು ನಿರಂತರ ನೆನಪಿಸುತ್ತಿರುತ್ತದೆ ಮತ್ತು ವೈಯಕ್ತಿಕ ಜೀವನದಲ್ಲಿ ವಿವಾಹವು ಭದ್ರವಾದ ತಳಪಾಯವನ್ನೂ ಹಾಕುತ್ತದೆ ಎಂಬುದನ್ನೂ ಅರ್ಥಮಾಡಿಕೊಡುತ್ತದೆ.

ಖದೀಜಾರು ನೀಡಿದ ಲೌಕಿಕ ಜೀವನದ ಹೊದಿಕೆಯಿಂದ ಮುಕ್ತನಾಗಲು ಅಲ್ಲಾಹನು ಪುನಃ ಆದೇಶಿಸಿದನು. “ಹೊದ್ದು ಮಲಗುವವರೇ, ಎದ್ದೇಳಿರಿ ಮತ್ತು ಎಚ್ಚರಿಸಿರಿ ಮತ್ತು ನಿಮ್ಮ ಪ್ರಭುವಿನ ಹಿರಿಮೆಯನ್ನು ಘೋಷಿಸಿರಿ ಮತ್ತು ನಿಮ್ಮ ವಸ್ತ್ರಗಳನ್ನು ಶುಚಿಯಾಗಿಸಿರಿ ಮತ್ತು ಮಾಲಿನ್ಯದಿಂದ ದೂರವಿರಿ. ಹೆಚ್ಚು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿ ಮತ್ತು ನಿಮ್ಮ ಪ್ರಭುವಿಗಾಗಿ ತಾಳ್ಮೆ ವಹಿಸಿರಿ.” (ಮುದ್ದಸ್ಸಿರ್ 1-7) ನಂತರ ಈ ಸಹನೆಯೇ ಪ್ರವಾದಿಯವರ(ಸ) ಆಯುಧವಾಗಿತ್ತು.

ಸಹನೆಯ ಶಕ್ತಿ ಹಾಗೂ ಸೌಂದರ್ಯವನ್ನು ಪ್ರವಾದಿ(ಸ) ಬೊಟ್ಟು ಮಾಡಿದ ಒಂದು ಸಂದರ್ಭವಿದೆ. ಒಮ್ಮೆ ಒಂದು ಉಪವಾಸದ ಸಂದರ್ಭದಲ್ಲಿ ಪ್ರವಾದಿಯವರು(ಸ) ಮತ್ತು ಅಬೂಬಕರ್ ಮದೀನಾದ ಮಸೀದಿಯಲ್ಲಿ ಕುಳಿತಿರುವಾಗ ಓರ್ವ ಬಂದು ಅಬೂಬಕರ್‌ರನ್ನು ಬೈಯ್ಯಲಾರಂಭಿಸಿದ. ಉಪವಾಸಿಗನಾದ ಕಾರಣ ಅಬೂಬಕರ್ ಪ್ರತಿಕ್ರಿಯಿಸಲಿಲ್ಲ. ಮರಳಿ ಹೋದ ಆತ ಪುನಃ ಬಂದು ಬೈಯ್ಯಲಾರಂಭಿಸಿದ. ಆಗಲೂ ಅಬೂಬಕರ್ ಮೌನವಾಗಿದ್ದರು. ಮೂರನೆಯದಾಗಿ ಆತ ಬಂದು ಪುನಃ ಬೈಗುಳ ಆರಂಭಿಸಿದಾಗ ಅಬೂಬಕರ್ ಅದಕ್ಕೆ ಪ್ರತಿಕ್ರಿಯಿಸಿದರು. ಇದರಿಂದ ಪ್ರವಾದಿ(ಸ) ಬೇಸರಗೊಂಡರು. ತಾವು ಸಹನೆ ವಹಿಸಿ, ಮೌನವಾಗಿದ್ದ ಸಂದರ್ಭದಲ್ಲಿ ದೇವಚರರು ನಿಮಗೆ ಸುತ್ತಲೂ ಅನುಗ್ರಹಗಳನ್ನು ಸುರಿಯುತ್ತಿದ್ದರೆಂದು ಹೇಳಿದರು.

ಈಮಾನ್‌ನ ಅರ್ಧಾಂಶವಾದ ಕ್ಷಮೆಯು ಮಾನವೀಯತೆಯ ಬಾವುಟವಾಗಿದೆ. ಕೆಡುಕನ್ನು ಒಳಿತಿನಿಂದ ಎದುರಿಸುವ ಮೂಲಕ ಶತ್ರುವನ್ನು ಮಿತ್ರನಾಗಿಸುವಂತಹ ವ್ಯಕ್ತಿತ್ವ ಪ್ರವಾದಿಗಳದ್ದಾಗಿತ್ತು.
ಆಹಾರ ಉಣಿಸುವುದು ಬಹಳ ಶ್ರೇಷ್ಠ ಕಾರ್ಯವೆಂದು ಪ್ರವಾದಿಗಳು ಕಲಿಸಿದರು. ನೆರೆಮನೆಯವ ಹಸಿವಿನಿಂದಿರುವಾಗ ಹೊಟ್ಟೆ ತುಂಬಾ ಉಣ್ಣುವುದು ನಮ್ಮವನಲ್ಲ ಎಂದು ಹೇಳಿದರು. ಕರುಣೆ ತೋರಿಸದವನಿಗೆ ಕಾರುಣ್ಯ ಲಭಿಸುವುದಿಲ್ಲವೆಂದರು. ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿರಿ. ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು ಎಂದು ನೆನಪಿಸಿದರು. ನೀರು ಬೆಂಕಿಯನ್ನು ನಂದಿಸುವಂತೆ, ದಾನವು ಪಾಪವನ್ನು ಇಲ್ಲವಾಗಿಸುತ್ತದೆಯೆಂದರು. ಒಂದು ಖರ್ಜೂರವನ್ನಾದರೂ ದಾನ ಮಾಡಿ ನರಕ-ಶಿಕ್ಷೆಯಿಂದ ರಕ್ಷಣೆ ಪಡೆಯಬೇಕೆಂದು ಹೇಳಿದರು.

ಮಕ್ಕಳನ್ನು ಬಹಳವಾಗಿ ಪ್ರೀತಿಸಿದರು. ಅವರೊಂದಿಗೆ ಕರುಣೆ ತೋರಿಸಿದರು. ಅಳುವ ಮಗುವಿಗಾಗಿ ನಮಾಝನ್ನು ಚುಟುಕುಗೊಳಿಸಿದರು. ಯುದ್ಧದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರನ್ನು ವಧಿಸಬಾರದೆಂದು ಹೇಳಿದರು.

ಮನುಷ್ಯರೊಂದಿಗೆ ಮಾತ್ರವಲ್ಲ, ಪರಿಸರದೊಂದಿಗೂ ಪ್ರವಾದಿವರ್ಯರು(ಸ) ಗಾಢ ಪ್ರೀತಿ ವ್ಯಕ್ತಪಡಿಸಿದರು. ಹಕ್ಕಿಯ ಮರಿಗಳನ್ನು ಹಿಡಿದ ಶಿಷ್ಯರೊಂದಿಗೆ ಅದನ್ನು ತಾಯಿ ಹಕ್ಕಿಯ ಬಳಿ ಬಿಟ್ಟು ಬರುವಂತೆ ಸೂಚಿಸಿದರು. ಒಮ್ಮೆ ಯಾತ್ರೆಯ ಸಂದರ್ಭದಲ್ಲಿ ಅನುಚರರು ಬೆಂಕಿ ಉರಿಸಿದ್ದು ಇರುವೆಯ ಸಾಲಿನ ಬಳಿಯೆಂದು ತಿಳಿದಾಗ ಕೂಡಲೇ ನಂದಿಸಲು ಹೇಳಿದರು. ಒಂಟೆಯನ್ನು ಹಸಿವಿಗೆ ದೂಡಿದವರನ್ನು ತರಾಟೆಗೆ ತೆಗೆದುಕೊಂಡರು. ಮರಕ್ಕೆ ಕಲ್ಲೆಸೆದ ಹುಡುಗನೊಂದಿಗೆ ಕಲ್ಲು ತಾಗಿದರೆ ಮರಕ್ಕೆ ನೋವಾಗುತ್ತದೆಂದು ನೆನಪಿಸಿದರು. ಅಂತ್ಯ ದಿನದಂದು ಕೂಡಾ ಕೈಯಲ್ಲಿ ಗಿಡವಿದ್ದರೆ ನೆಡಲು ಸೂಚಿಸಿದರು.

ಮಕ್ಕಾದಿಂದ ಮದೀನಾಕ್ಕೆ ವಲಸೆಯ ಸಂದರ್ಭದಲ್ಲಿ ಪ್ರವಾದಿ ಮತ್ತು ಅಬೂಬಕರ್(ರ)ರು ಸೌರ್ ಗುಹೆಯಲ್ಲಿ ಅಭಯ ಪಡೆದರು. ಗುಹೆಯ ಮುಂಭಾಗಕ್ಕೆ ಬಂದ ಕುರೈಶಿಗಳನ್ನು ಕಂಡು ಅಬೂಬಕರ್‌ಗೆ ಭಯವಾಯಿತು. ಆ ಸಂದರ್ಭದಲ್ಲೂ ಪ್ರವಾದಿವರ್ಯರು(ಸ) ಪ್ರಾರ್ಥನೆಯಿಂದ ಶಾಂತರಾಗಿದ್ದರು. ದೇವನು ನಮ್ಮ ಜೊತೆಗಿರಬೇಕಾದಾಗ ಭಯಪಡುವುದೇಕೆಂದು ಅಬೂಬಕರ್‌ರನ್ನು ಸಾಂತ್ವನ ಪಡಿಸಿದರು. ಗುಹೆಯ ದ್ವಾರದಲ್ಲಿ ಹಳೆಯ ಜೇಡರ ಬಲೆಗಳು ಮತ್ತು ಪಾರಿವಾಳದ ಗೂಡನ್ನು ಕಂಡು ಒಳಗೆ ಇಣುಕಿ ನೋಡದೆ ಶತ್ರುಗಳು ಸ್ಥಳ ಬಿಟ್ಟರು.

ಯಾವುದೇ ಸಂಕಷ್ಟಕರವಾದ ಜೀವನದ ನಡುವೆಯೂ ಒಂದು ಸೌರ್ ಗುಹೆ ಇದೆಯೆಂದು ಈ ಸಂದರ್ಭದಲ್ಲಿ ನಮಗೆ ಸಾಂತ್ವನವಿದೆ. ಚಂಚಲರಾಗದೆ ಮುಂದುವರಿಯಲು ಪ್ರೇರೇಪಣೆ ಇದೆ.
ಪ್ರಾರ್ಥನೆ ಮತ್ತು ಆಧ್ಯಾತ್ಮಿಕತೆಯ ಮೂಲಕ ಅಲ್ಲಾಹನಲ್ಲಿ ಅಭಯ ಪಡೆಯುವಾಗಲೂ ಪ್ರವಾದಿವರ್ಯ(ಸ)ರದ್ದು ಸನ್ಯಾಸಿ ಜೀವನವಾಗಿರಲಿಲ್ಲ. ಪ್ರವಾದಿಯವರ(ಸ) ಆಧ್ಯಾತ್ಮಿಕತೆ ಲೌಕಿಕತೆಯೊಂದಿಗೆ ಜೋಡಿಸಲ್ಪಟ್ಟಿತ್ತು. ಪ್ರವಾದಿತ್ವ ಲಭಿಸಿದೊಡನೆ ಅವರು ಪ್ರಥಮವಾಗಿ ಓಡಿ ತಲುಪಿದ್ದು ತನ್ನ ಪತ್ನಿಯ ಬಳಿಗೆ ಆಗಿತ್ತು. ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ ವ್ಯಕ್ತಿ ಖದೀಜಾ ಆಗಿದ್ದರು. ಪ್ರವಾದಿಯಾಗಿರುವಾಗಲೇ ಅವರು ಪತ್ನಿ ಆಯಿಶಾರೊಂದಿಗೆ ಓಟದ ಸ್ಪರ್ಧೆ ನಡೆಸಿದ್ದರು. ಹಬ್ಬದ ದಿನಗಳನ್ನು ಸಂಭ್ರಮಿಸಿದರು. ಬಾಣ ಬಿಡುವುದು ಮತ್ತು ಈಜುವುದು ಅವರ ಇಷ್ಟದ ಮನೋರಂಜನೆಯಾಗಿತ್ತು. ಸಂದರ್ಭ ದೊರೆತಾಗ ಅನುಯಾಯಿಗಳೊಂದಿಗೆ ಕುಳಿತುಕೊಂಡು ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಸಾಮಾನ್ಯ ಜನರೊಂದಿಗೆ ದುಡಿದರು.

ಮದೀನಾಕ್ಕೆ ತಲುಪಿದ ಕೂಡಲೇ ಪ್ರವಾದಿಯವರ(ಸ) ಮೊದಲ ಕೆಲಸ ಮಸೀದಿಯ ನಿರ್ಮಾಣವಾಗಿತ್ತು. ಕೆಲಸಗಾರರೊಂದಿಗೆ ಸೇರಿಕೊಂಡ ಅವರು ಕಲ್ಲು ಮಣ್ಣನ್ನು ಹೊತ್ತರು. ಖರ್ಜೂರದ ಮರಗಳಿಂದ ಮಂಚ, ಎಲೆಗಳಿಂದ ಮೇಲ್ಛಾವಣಿ ಮಾಡಿದ ಆ ಮಸೀದಿಯ ನೆಲವು ಕೇವಲ ಕಲ್ಲು ಮಣ್ಣು ಹೊರಿಸಲಾಗಿತ್ತು. ಅವರ ಸಮೀಪದ ಕೋಣೆಯಲ್ಲಿ ಪ್ರವಾದಿಯವರು(ಸ) ತನ್ನ ಪುಟ್ಟ ಮಕ್ಕಳೊಂದಿಗೆ ವಾಸಿಸಿದರು. ಪ್ರಾರ್ಥನೆ ಮತ್ತು ಲೌಕಿಕತೆ ಒಂದೇ ಕಡೆಯಲ್ಲಿತ್ತು. ಒಂದು ಒಂದಕ್ಕಿಂತ ಹೆಚ್ಚು ಇರಲಿಲ್ಲ. ಕಡಿಮೆಯೂ ಇರಲಿಲ್ಲ. ಖರ್ಜೂರ ಹಾಗೂ ನೀರಿನೊಂದಿಗೆ ಅವರು ಹಲವಾರು ದಿನಗಳನ್ನು ಕಳೆದಿದ್ದರು.

ಹಸಿವಿನ ತೀವ್ರತೆಯನ್ನು ಪ್ರವಾದಿಯವರು(ಸ) ಅನುಭವಿಸಿದ್ದರು. ಮದೀನಾಕ್ಕೆ ಶತ್ರುಗಳ ಪ್ರವೇಶ ತಡೆಯಲು ಕಂದಕ ನಿರ್ಮಿಸುವ ಕೆಲಸಕ್ಕೂ ಪ್ರವಾದಿಯವರು(ಸ) ಜೊತೆಯಾದರು. ಹಸಿವಿನ ತೀವ್ರತೆ ಅರಿಯದಿರಲು ಹೊಟ್ಟೆಗೆ ಕಲ್ಲು ಕಟ್ಟಿ ಅವರು ಕೆಲಸ ಮಾಡಿದ್ದರು.

ಸಮಾಜದಲ್ಲಿ ನಾವು ಬೆಳೆಸಬೇಕಾದ ಅತ್ಯಂತ ದೊಡ್ಡ ಗುಣವೇನೆಂದರೆ ಅದು ಸಮಾನತೆ. ಎಲ್ಲರೂ ಸಮಾನರು. ಎಲ್ಲರಿಗೂ ಸಮಾನ ನ್ಯಾಯ ಎಂಬುದಾಗಿತ್ತು ಪ್ರವಾದಿಚರ್ಯೆ. ಸಮಾಜದ ಕೆಳ ವಿಭಾಗವನ್ನು ಅವರು ಬಹಳ ಕರುಣೆಯಿಂದ ಹಾಗೂ ಸಮಭಾವದೊಂದಿಗೆ ಜೋಡಿಸಿ ಕೊಟ್ಟರು. ಮಕ್ಕಳು, ಸ್ತ್ರೀಯರು, ವೃದ್ಧರು, ದರಿದ್ರರು, ಗುಲಾಮರು ಹೀಗೆ ಯಾರನ್ನೂ ದೂರವಿರಿಸದೆ ಅವರನ್ನು ಕೀಳಾಗಿ ಕಾಣದೆ ಗೌರವಯುತವಾಗಿ ವ್ಯವಹರಿಸಿದರು.

ಓರ್ವರು ತಮ್ಮ ಮಗಳ ಹಿತಾಸಕ್ತಿಗೆ ವಿರುದ್ಧವಾಗಿ ತನ್ನ ಸಹೋದರ ಪುತ್ರನಿಗೆ ಅವಳನ್ನು ವಿವಾಹ ಮಾಡಿಕೊಡಲು ತೀರ್ಮಾನಿಸಿದಾಗ ಆಕೆ ದೂರಿನೊಂದಿಗೆ ಪ್ರವಾದಿಯ ಬಳಿ ಬಂದಳು. ತನಗೆ ಸೂಕ್ತ ವರನನ್ನು ಆಯ್ದುಕೊಳ್ಳುವ ಅವಕಾಶವನ್ನು ಪ್ರವಾದಿಯವರು(ಸ) ಆಕೆಗೆ ನೀಡಿದರು. ಇನ್ನೊಮ್ಮೆ ಕುರೂಪಿಯಾದ ಗಂಡನಿಂದ ವಿವಾಹ ವಿಚ್ಛೇದನ ಪಡೆಯಲು ಓರ್ವ ಸ್ತ್ರೀಗೆ ಅನುಮತಿ ನೀಡಿದರು. ಪತಿ-ಪತ್ನಿಯರು ಸಮಾನ ಸ್ಥಾನವಿರುವ ಸಂಗಾತಿಗಳಾಗಿರುವ ಒಂದು ಕುಟುಂಬ ವ್ಯವಸ್ಥೆಯನ್ನು ಇಸ್ಲಾಮಿನಲ್ಲಿ ಪ್ರವಾದಿಯವರು(ಸ) ಪರಿಚಯಿಸಿದರು. ಪ್ರವಾದಿಯವರು(ಸ) ಪತ್ನಿಯರಿಗೆ ನೀಡಿದ್ದ ಪರಿಗಣನೆ ಹಾಗೂ ಅವರ ಸಲಹೆಗಳನ್ನು ಸ್ವೀಕರಿಸಿದ ಕುರಿತು ಹಲವಾರು ಉದಾಹರಣೆಗಳಿವೆ.

ಪ್ರವಾದಿವರ್ಯರು(ಸ) ತೋರಿಸಿದ ಸಮಾನತೆಯ ಮುಕುಟೋದಾಹರಣೆಯಾಗಿದೆ ಅವರ ಗುಲಾಮರೊಂದಿಗಿನ ವರ್ತನೆ. ಪ್ರವಾದಿಯ ಮೇಲೆ ವಿಶ್ವಾಸವಿರಿಸಿದ ಬಿಲಾಲ್‌ರಿಗೆ ತೀವ್ರ ಸಂಕಷ್ಟ, ಹಿಂಸೆ ಅನುಭವಿಸಬೇಕಾಗಿ ಬಂತು. ಪ್ರವಾದಿಯವರ (ಸ) ಬೋಧನೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡ ಅಬೂಬಕರ್ ಸಿದ್ದೀಕ್‌ರು ಹಣ ನೀಡಿ ಬಿಲಾಲ್‌ರನ್ನು ವಿಮೋಚಿಸಿದರು. ನಂತರ ಮಕ್ಕಾ ವಿಜಯದ ಸಂದರ್ಭದಲ್ಲಿ ಕಅಬಾಕ್ಕೆ ತಲುಪಿದ ಪ್ರವಾದಿಯವರು(ಸ) ಬಾಂಗ್ ಕರೆ ನೀಡುವ ಸೌಭಾಗ್ಯವನ್ನು ಬಿಲಾಲ್‌ರಿಗೆ ನೀಡಿದರು. ಓರ್ವ ಕಪ್ಪು ವರ್ಗದ ವ್ಯಕ್ತಿಯ ಬಲಿಷ್ಠವಾದ ಕಂಠದಿಂದ ಹೊರಹೋದ ದೇವಸ್ತುತಿಯನ್ನು ಇಂದು ವಿಶ್ವವು ಪ್ರತಿ ದಿನ ಐದು ಬಾರಿ ಮೊಳಗಿಸುತ್ತಿದೆ. ಅದನ್ನು ಕೇಳಿ ಮಸೀದಿಗೆ ಬರುವವರಲ್ಲೂ ಹಿರಿಯ ಕಿರಿಯರು ಎಂಬ ಭೇದವಿಲ್ಲ.

ಪ್ರವಾದಿವರ್ಯರ(ಸ) ಅಂಧವಿಶ್ವಾಸ ಹಾಗೂ ಅನಾಚಾರಗಳ ವಿರುದ್ಧದ ನಿಲುವುಗಳು ಅವರನ್ನು ಪರಿಪೂರ್ಣ ಮನುಷ್ಯನನ್ನಾಗಿಸುತ್ತದೆ. ಬೇಕಿದ್ದರೆ ಪ್ರವಾದಿಯವರಿಗೆ ಅಂಧವಿಶ್ವಾಸದ ಬಾಲ ಹಿಡಿದು ದೈವ ಸಂಭೂತನೆಂದು ಹೇಳಿಕೊಳ್ಳಬಹುದಿತ್ತು.

ಮಾರಿಯ ಖಿಬ್ತಿಯ ಎಂಬ ಗುಲಾಮ ಮಹಿಳೆಯಿಂದ ಪ್ರವಾದಿಯವರಿಗೆ ಜನಿಸಿದ ಇಬ್ರಾಹೀಮ್ ಎಂಬ ಮಗು ಬೇಗನೇ ಮರಣ ಹೊಂದಿತು. ಅದು ಪ್ರವಾದಿಯವರನ್ನು ತೀವ್ರ ದುಃಖಿತಗೊಳಿಸಿತು. ಆ ದಿನವೇ ಸೂರ್ಯಗ್ರಹಣ ಉಂಟಾದಾಗ ಅದನ್ನು ಹಲವರು ಇಬ್ರಾಹೀಮ್‌ನ ಮರಣದೊಂದಿಗೆ ಸಂಬಂಧ ಕಲ್ಪಿಸಿದರು. ಅಲ್ಲಾಹನ ದೃಷ್ಟಾಂತವಾದ ಸೂರ್ಯ ಚಂದ್ರರು ಅವನ ನಿಯಮದಂತೆ ಉದಯಿಸುತ್ತಲೂ ಆಸ್ತಮಿಸುತ್ತಲೂ ಇರುವುದೆಂದೂ, ಅದಕ್ಕೆ ಯಾರದೇ ಜನನ ಮರಣಕ್ಕೆ ಸಂಬಂಧವಿಲ್ಲವೆಂದು ಪ್ರವಾದಿಯವರು(ಸ) ಸ್ಪಷ್ಟಪಡಿಸಿದರು, ಪ್ರವಾದಿಯವರು(ಸ) ಇದನ್ನು ಅಮಾನುಷಿಕ ಸ್ಥಿತಿಗೆ ತಲುಪಿಸಬಹುದಿತ್ತು. ಆದರೆ ಮನುಷ್ಯತ್ವದ ಮಣ್ಣಿನಲ್ಲಿ ದೃಢವಾಗಿ ನಿಲ್ಲಬಯಸಿದರು.

ಕೆಲವರ ಮಧ್ಯೆ ಪ್ರವಾದಿವರ್ಯರು(ಸ) ಯುದ್ಧ ಮತ್ತು ವಿವಾಹದ ಹೆಸರಿನಲ್ಲಿ ವಿಮರ್ಶಿಸಲ್ಪಡುತ್ತಾರೆ. ಸಂಘರ್ಷಗಳು ಉಂಟಾಗದೆ ನಮಗೆ ಯಾವುದೇ ಕ್ರಮವನ್ನು ಪುನಃ ಕ್ರಮೀಕರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಕಿರಾತಕರಾಗಿದ್ದ ಪ್ರಾಚೀನ ಅರೇಬಿಯನ್ ಸಂಸ್ಕೃತಿಯನ್ನು ಒಂದು ಹೂ ಬಿರಿಯುವ ರೀತಿಯಲ್ಲಿ ಪ್ರವಾದಿವರ್ಯರು(ಸ) ಪರಿವರ್ತನೆ ಮಾಡಿದ್ದರೆ, ಮಾನವೀಯತೆಯ ರೀತಿಯನ್ನು ಬಿಟ್ಟು ಅವರು ಇನ್ಯಾವುದೋ ಅಭೌತಿಕ ಮಟ್ಟಕ್ಕೆ ತಲುಪುತ್ತಿದ್ದರು. ಬಹದೇವಾರಾಧನೆಯ ವಿರುದ್ಧ, ಸೈನಿಕ, ರಾಜಕೀಯ ಆರ್ಥಿಕತೆಯ ವಿರುದ್ಧ ತೀವ್ರ ಪ್ರಹಾರ ಮಾಡುವುದು ಅವರ ಗುರಿಯಾಗಿತ್ತು. ಆದ್ದರಿಂದ ಆ ಯುದ್ಧಗಳು ಅನಿವಾರ್ಯವಾಗಿವೆ. ಆ ಅನಿವಾರ್ಯತೆಗಳ ನಡುವೆಯೂ ಅವರು ತೋರಿದ ಮಾನವೀಯ ಸ್ನೇಹವು ಪ್ರವಾದಿವರ್ಯರನ್ನು(ಸ) ವಿಶೇಷಗೊಳಿಸುತ್ತದೆ.

ಪ್ರವಾದಿವರ್ಯರು(ಸ) ನಡೆಸಿದ ಯುದ್ಧಗಳಲ್ಲಿ ಪತಾಕೆಯಲ್ಲಿ ಶಾಂತಿಯ ಬಿಳಿ ಬಾವುಟವಿತ್ತು. ಶತ್ರು ಪಕ್ಷದಲ್ಲಿ ಮಕ್ಕಳು ಮೃತರಾದರೆ ಅತ್ತ, ಸ್ತ್ರೀಯರು ಮತ್ತು ಮಕ್ಕಳು, ವೃದ್ಧರು ಹಾಗೂ ವೃಕ್ಷಗಳನ್ನು ಯುದ್ಧದಲ್ಲಿ ಕಡಿಯಬಾರದೆಂದು ಹೇಳಿದ, ಹಲವು ಬಾರಿ ಸಮರಾರ್ಜಿತ ಸೊತ್ತುಗಳನ್ನು ಶತ್ರುಗಳಿಗೇ ಪಾಲು ಮಾಡಿದ, ಮರಣದಂಡನೆಗೆ ಗುರಿಯಾದವರನ್ನೂ ಕ್ಷಮಿಸಿದ ಪ್ರವಾದಿಯವರನ್ನು(ಸ) ಯುದ್ಧದಾಹಿ ಎನ್ನಲು ಹೇಗೆ ಸಾಧ್ಯ?

ಯುದ್ಧದಿಂದ ದೊರೆತ ಸೊತ್ತುಗಳನ್ನು ತನ್ನ ಜೀವನದ ಅಗತ್ಯಗಳಿಗಾಗಿ ಉಪಯೋಗಿಸಲಿಲ್ಲ. ಸೆರೆಯಾಳುಗಳೊಡನೆ, ಅವರು ಅಕ್ಷರಸ್ಥರಾಗಿದ್ದರೆ ನಿರಕ್ಷರಿಗಳಿಗೆ ಕಲಿಸಿಯಾದರೂ ಬಿಡುಗಡೆಯಾಗಲು ಹೇಳಿದರು.

ಪ್ರವಾದಿಯವರು(ಸ) ಮುನ್ನಡೆಸಿದ ಯುದ್ಧಗಳು ರಕ್ತದಾಹದಿಂದಲೋ, ಅಧಿಕಾರಕ್ಕಾಗಿಯೋ ಆಗಿರಲಿಲ್ಲ. ಶತ್ರುವಿನೊಂದಿಗೆ ಕೂಡಾ ಮಾನವೀಯತೆಯ ಪಾಠದ ಕುರಿತು ನಮಗೆ ತಿಳಿಸಲಿಕ್ಕಾಗಿತ್ತು. ಯುದ್ಧದ ವಿಜಯಗಳು ಅವರನ್ನು ಒಮ್ಮೆಯೂ ಅಹಂಕಾರಿಯಾಗಿಸಲಿಲ್ಲ.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …