Home / ಲೇಖನಗಳು / ನೋವುಗಳನ್ನು ನುಂಗಿ ಶಾಂತಿಯ ಬೀಜ ಬಿತ್ತಿದ ಪ್ರವಾದಿ (ಸ)

ನೋವುಗಳನ್ನು ನುಂಗಿ ಶಾಂತಿಯ ಬೀಜ ಬಿತ್ತಿದ ಪ್ರವಾದಿ (ಸ)

ಇಸ್ಮತ್ ಪಜೀರ್

ನೀವಿನ್ನು ಸ್ವತಂತ್ರರು. ನಾವು ನಿಮ್ಮನ್ನು ಕ್ಷಮಿಸಿದ್ದೇವೆ. ನೀವು ನಿಮ್ಮ ಧರ್ಮವನ್ನು ಆಚರಿಸಲು ಸರ್ವ ಸ್ವತಂತ್ರರು. ಮಾನವತೆಯನ್ನು, ಶಾಂತಿಯನ್ನು‌ ಮತ್ತು‌ ಏಕದೇವ ವಿಶ್ವಾಸವನ್ನು ಬೋಧಿಸಿದ ಕಾರಣಕ್ಕಾಗಿ ತನ್ನನ್ನು ಮತ್ತು ತನ್ನ ಅನುಯಾಯಿಗಳನ್ನು ಹದಿಮೂರು ವರ್ಷಗಳ ಕಾಲ ಅಮಾನವೀಯವಾಗಿ ಹಿಂಸಿಸಿದ, ಕ್ರೂರ ದಿಗ್ಬಂಧನಕ್ಕೊಳಪಡಿಸಿದ, ಅಂತಿಮವಾಗಿ ತಾಯ್ನಾಡು ತೊರೆದು ಹೋಗುವಂತಹ ಸನ್ನಿವೇಶ ನಿರ್ಮಿಸಿದ ಒಂದು ಸಮೂಹಕ್ಕೆ ಪ್ರವಾದಿ (ಸ) ರು ನೀಡಿದ ಅಭಯದ ವಾಗ್ದಾನಗಳೇ ಈ ಮೇಲಿನ ವಾಕ್ಯಗಳು.

ಇಂತಹ ಅಭಯ ನೀಡಿದ್ದಾದರೂ ಯಾವಾಗ…ಮುಸ್ಲಿಮ್ ಸೇನೆಯು ಮಕ್ಕಾ ಫತಹ್ ನ ವಿಜಯ ದುಂಧುಬಿ ಬಾರಿಸಿದ ಸಂದರ್ಭದಲ್ಲಿ ಇಸ್ಲಾಮಿನ ವಿರೋಧಿಗಳು ಪ್ರಾಣ ಭಯದಿಂದ ತತ್ತರಿಸಿ ಮಕ್ಕಾ ಬಿಟ್ಟು ಪಲಾಯನಗೈಯಲನುವಾದಾಗ, ಜಾಗತಿಕ ಚರಿತ್ರೆಯಲ್ಲಿ ಎಲ್ಲಿಯೂ ಕ್ಷಮೆಯ ಇದಕ್ಕಿಂತ ಮಿಗಿಲಾದ ನಿದರ್ಶನ ಸಿಗಲಾರದು. ನ ಭೂತೋ…ನ ಭವಿಷ್ಯತಿ……

ಮೌಲಾನಾ ಅಬ್ದುಲ್ ಕಲಾಂ ಆಝಾದರು ಜಗತ್ತಿನ ಅನುಗ್ರಹವಾದ ಪ್ರವಾದಿ (ಸ) ರ ಬಗ್ಗೆ ಒಂದೆಡೆ ಹೀಗೆ ಬರೆದಿದ್ದಾರೆ. “ಹಿಂಸೆಯ ವಿರುದ್ಧ ಸಹನೆ, ಶತ್ರುವನ್ನು ಎದುರಿಸುವಾಗ ಅಪೂರ್ವ ಸ್ಥೈರ್ಯ, ವ್ಯವಹಾರದಲ್ಲಿ ಸತ್ಯ ಸಂಧತೆ, ಅಧಿಕಾರ ಮತ್ತು ಶಕ್ತಿ ಪ್ರಾಪ್ತವಾದಾಗ ಕ್ಷಮಾದಾನ ಇವು ಮಾನವೇತಿಹಾಸದಲ್ಲಿ ಯಾವ ವ್ಯಕ್ತಿಯಲ್ಲೂ ಒಂದುಗೂಡದಂತಹ ಅಮೂಲ್ಯ ಗುಣಗಳಾಗಿವೆ.

ಮಾನವತೆಯನ್ನು ಶಾಂತಿಯನ್ನು ತನ್ನ ಉಸಿರಾಗಿಸಿರುವ ಇಸ್ಲಾಮನ್ನು ಇಂದು ಕೆಲವು ದುಷ್ಟ ಶಕ್ತಿಗಳು ಭಯೋತ್ಪಾದನೆಯೊಂದಿಗೆ ಥಳುಕು ಹಾಕುತ್ತಿವೆ. ಇಸ್ಲಾಮಿನ ಮಾರ್ಗದರ್ಶಕರಾದ ಪ್ರವಾದಿ ಮುಹಮ್ಮದ್ (ಸ)ರು ತಮ್ಮ ಬದುಕಿನುದ್ದಕ್ಕೂ ಭಯೋತ್ಪಾದಕ ಕೃತ್ಯಗಳ ವಿರುದ್ಧ ಹೋರಾಡಿದ್ದರು. ಭಯೋತ್ಪಾದಕತೆಯ ಪೈಶಾಚಿಕ ಶಕ್ತಿಗಳು ಪ್ರವಾದಿಯವರತ್ತ ಕಲ್ಲು, ಕೊಳೆ, ಹೊಲಸು, ಕಲ್ಮಶಗಳನ್ನು ಎಸೆದು ನಿರಂತರ ಅಪಮಾನಕ್ಕೀಡು ಮಾಡಿದ್ದರು. ಅವರ ಅನುಯಾಯಿಗಳನ್ನು ಅಮಾನವೀಯವಾಗಿ ಮರ್ದಿಸಿದರು. ಅರೇಬಿಯಾದ ಮರಳುಗಾಡಿನ ಕೆಂಡದಂತೆ ಸುಡುವ ಮರಳಿನಲ್ಲಿ ಹಸಿವು, ದಾಹ ಶಮನಕ್ಕೂ ಅವಕಾಶ ನೀಡದೇ ಅವರನ್ನು ನಗ್ನರಾಗಿ ಮಲಗಿಸಿ ಕ್ರೂರವಾಗಿ ಹಿಂಸಿಸಿದರು. ಆ ಪರಿಸ್ಥಿತಿಯಲ್ಲೂ ಅವರು ಧೈರ್ಯಗುಂದಲಿಲ್ಲ, ಮಾನವೀಯತೆಗೆದುರಾದ ಒಂದು ಶಬ್ಧವನ್ನೂ ಆಡಲಿಲ್ಲ. ಅದಕ್ಕೆ ಪ್ರತೀಕಾರ ಸಲ್ಲಿಸಲಿಲ್ಲ, ಭಯೋತ್ಪಾದಕ ಕೃತ್ಯಗಳಿಗೆ ಅದೇ ಭಾಷೆಯಲ್ಲಿ ಉತ್ತರಿಸಲಿಲ್ಲ. ಅಂತಹ ಅಸಹನೀಯ ಪರಿಸ್ಥಿತಿಯಲ್ಲೂ ಅವರು ಶಾಂತಿ ಮಂತ್ರ ಬೋಧಿಸಿದರು.

ಪ್ರವಾದಿವರ್ಯರು ದಿನನಿತ್ಯ ನಡೆದಾಡುವ ದಾರಿಯಲ್ಲಿ ನಿಂತು ಅವರ ಮೇಲೆ ಕೊಳೆತು ನಾರುವ ಕಲ್ಮಶಗಳನ್ನು ಎಸೆಯುತ್ತಾ ವಿಘ್ನ ಸಂತೋಷ ಅನುಭವಿಸುತ್ತಿದ್ದ ಮಹಿಳೆಯ‌ ಉಪಟಳಕ್ಕೆ ಆಕೆಯ ಅನಾರೋಗ್ಯದಿಂದ ತೆರೆ ಬಿದ್ದಾಗ ತೀವ್ರ ದುಃಖಿತರಾದ ಪ್ರವಾದಿವರ್ಯರು ಆಕೆಯನ್ನು ಸಂದರ್ಶಿಸಿ ಆಕೆಗೆ ಸಾಂತ್ವನದ ಮಾತುಗಳನ್ನು‌ ಹೇಳಿ ಆಕೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಈ ರೀತಿ ಕ್ಷಮೆಯನ್ನೇ ತನ್ನ ಬದುಕಿನ ಪರಮಮಂತ್ರವಾಗಿಸಿ ಬಾಳಿ ಬದುಕಿದವರು ಲೋಕ ಪ್ರವಾದಿ‌(ಸ).

ತ್ವಾಯಿಫ್ ನಗರದಲ್ಲಿ ಪುಂಡರು , ಹುಚ್ಚರು ಪ್ರವಾದಿವರ್ಯರ ಮೇಲೆ ಕಲ್ಲು ತೂರಿ ತೀವ್ರ ಗಾಯಗೊಳಿಸಿದಾಗಲೂ ಸಹನೆಯಿಂದಲೇ ವರ್ತಿಸಿ ಅಕ್ರಮಿಗಳಿಗಾಗಿ ಪ್ರಾರ್ಥಿಸಿದವರು ಲೋಕ ಪ್ರವಾದಿ (ಸ).

ಅರೇಬಿಯಾದ ಮಹಾ ಪರಾಕ್ರಮಿಗಳು ಇಸ್ಲಾಮಿನತ್ತ ಬಂದು ಇನ್ನು ಈ ಹಿಂಸೆ ಸಹಿಸಲಾರೆವು ಒಂದು ಸಶಸ್ತ್ರ ಸಮರಕ್ಕೆ ಅನುಮತಿ ಕೊಡಿ ಎಂದು ಅನುಮತಿ ಬೇಡಿದಾಗ “ತಾಳಿರಿ, ನಾನು ಶಾಂತಿಯ ಕ್ಷಮೆಯ ಸಂದೇಶ ಹೊತ್ತು ಬಂದಿದ್ದೇನೆಯೇ ಹೊರತು ಯುದ್ಧದ ಸಂದೇಶವನ್ನಲ್ಲ” ಎಂದು ಅನುಯಾಯಿಗಳ ಬಾಯಿ ಮುಚ್ಚಿಸಿದವರು ಲೋಕ ಪ್ರವಾದಿ‌(ಸ).

ಪ್ರವಾದಿವರ್ಯರು ಜಗತ್ತಿಗೆ ಬೋಧಿಸಿದ ಶಾಂತಿಯ ಸಂದೇಶ ಎಷ್ಟು ವಿಶಾಲವಾದುದೆಂದರೆ ಐದು ಹೊತ್ತಿನ ನಮಾಝಿನ ಬಳಿಕವೂ “ಅಲ್ಲಾಹುಮ್ಮ ಅಂತಸ್ಸಲಾಂ” ಎಂದು ಪ್ರಾರಂಭವಾಗುವ‌ ಪ್ರಾರ್ಥನೆಯಲ್ಲಿ “ಅಲ್ಲಾಹನೇ ನೀನೇ ಶಾಂತಿ, ನನಗೆ ನೀನು‌ ಶಾಂತಿಯ ಮತ್ತು ಸಂರಕ್ಷಣೆಯ ಕೊಡುಗೆ ನೀಡು, ನಮ್ಮ ನಾಡನ್ನು ಶಾಂತಿಯ ಭವನವನ್ನಾಗಿಸು” ಎಂದು ಜಾಗತಿಕ ಮುಸ್ಲಿಮರು ಸರ್ವಶಕ್ತನಾದ ಅಲ್ಲಾಹನಲ್ಲಿ ಮೊರೆಯಿಡುತ್ತಾರೆ. ಒಟ್ಟಿನಲ್ಲಿ ಮುಸ್ಲಿಂ ಎಂದರೆ ಶಾಂತಿ ಬಯಸುವವನು, ಶಾಂತಿಯನ್ನು ಪ್ರಚಾರ ಮಾಡುವವನು.‌ ಮುಸ್ಲಿಂ ಇಸ್ಲಾಂ ಇದರ ಮೂಲರೂಪ‌ “ಸಲಾಂ ” ಆಗಿದ್ದು ಅದರ ಅತ್ಯಂತ ವಿಶಾಲಾರ್ಥ ಶಾಂತಿ, ಸಮಾಧಾನ ಎಂದಾಗಿದೆ.‌ ಇದು ಮನುಕುಲಕ್ಕೆ ಶಾಂತಿಧೂತ ಪ್ರವಾದಿವರ್ಯರ ಬೋಧನೆ.

ಅನಿವಾರ್ಯ ಪ್ರತಿರೋಧದ ಸಂದರ್ಭದಲ್ಲಿಯೂ ಪ್ರವಾದಿ ‌(ಸ)ರು ತನ್ನ ಅನುಯಾಯಿಗಳಿಗೆ ನೀಡಿದ ಬೋಧನೆ “ನೀವು ವೃದ್ಧರನ್ನು, ಸ್ತ್ರೀಯರನ್ನು ಮತ್ತು ಮಕ್ಕಳನ್ನು ಹಿಂಸಿಸಬೇಡಿ, ಅವರ ಮೇಲೆ ದೌರ್ಜನ್ಯವೆಸಗಬೇಡಿ, ಅವರನ್ನು ಕೊಲ್ಲಬೇಡಿ, ಅವರ ಮೇಲೆ ದಯೆ ತೋರಿರಿ. ಕೃಷಿ ಮತ್ತು ವೃಕ್ಷಗಳನ್ನು ನಾಶಪಡಿಸಬೇಡಿ, ಅವರ ವಿಶ್ವಾಸವನ್ನು ನಿಂದಿಸಬೇಡಿ, ಅವರ ಆರಾಧನಾಲಯಗಳನ್ನು‌ ಕೆಡವಬೇಡಿ….” ಇದು ಪ್ರವಾದಿ (ಸ)ರ ನ್ಯಾಯದ, ನೈತಿಕತೆಯ ಸಂದೇಶ.

ಯುದ್ಧಭೂಮಿಯಲ್ಲಿಯೂ ಮಾನವೀಯತೆಯನ್ನು ಎತ್ತಿ ಹಿಡಿದ ಪ್ರವಾದಿ (ಸ) ಮೋಸದ ಯುದ್ಧವನ್ನು, ಶಾಂತಿ‌ ಒಪ್ಪಂದವನ್ನು ಮುರಿಯುವ ಪ್ರಯತ್ನಗಳನ್ನು ತೀವ್ರವಾಗಿ ವಿರೋಧಿಸಿದರು.

ಪ್ರವಾದಿವರ್ಯರು ತಾಯ್ನಾಡು ತೊರೆದು ವಲಸೆ ಹೋದ ಬಳಿಕವೂ ಅಶಾಂತಿಯವಾಹಕರು ಅವರ ಮೇಲಿನ ಹಿಂಸಾಸರಣಿಯನ್ನು ಮುಂದುವರಿಸಿದಾಗ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಯುದ್ಧ ಅನಿವಾರ್ಯವಾಯಿತು. ಬದ್ರ್ ಎಂಬ ಪ್ರದೇಶದಲ್ಲಿ ಶಾಂತಿಯ ಸಂದೇಶ ಹೊತ್ತ 313 ಜನರ ಮೇಲೆ 1000 ಮಂದಿ ಶಾಂತಿ ಭಂಜಕರು ಮುಗಿಬಿದ್ದರು. ಕೊನೆಗೂ‌ ಶಾಂತಿಯ ಸಂದೇಶ ಹೊತ್ತ ಮುಸ್ಲಿಂ ಸೇನೆಯ ತೀರಾ ವಿರಳ ಶಸ್ತ್ರಾಸ್ತ್ರ ಹೊಂದಿದ್ದ ಜನ ವಿಜಯ ದುಂಧುಬಿ ಬಾರಿಸಿದರು. ಮೂವತ್ತೇಳು ಮಂದಿ ಯುದ್ಧ ಖೈದಿಗಳನ್ನು ಮದೀನಾಕ್ಕೆ ಕರೆ ತರಲಾಯಿತು. ಅವರನ್ನು ಕಂಬಗಳಿಗೆ ಬಿಗಿದು ಕಟ್ಟಲಾಗಿತ್ತು. ಯುದ್ಧ ಖೈದಿಗಳ ನರಳಿಕೆ ಪ್ರವಾದಿವರ್ಯರನ್ನು ನಿದ್ರಿಸಗೊಡಲಿಲ್ಲ. ಮಧ್ಯ ರಾತ್ರಿಯಲ್ಲಿ ಮನೋವ್ಯಥೆಯಿಂದ ಪ್ರವಾದಿವರ್ಯರು ಶತಪಥ ಹಾಕತೊಡಗಿದರು. ಅವರ ಓರ್ವ ಅನುಯಾಯಿ ವಿಚಾರಿಸಿದರು “ತಾವು ಸ್ವಲ್ಪವೂ ವಿಶ್ರಾಂತಿ ಪಡೆಯಲಿಲ್ಲವಲ್ಲಾ…?”

ಆಗ ಮಾನವತೆಯ ಸಾಕಾರ ಮೂರ್ತಿ ಪ್ರವಾದಿಯವರ ಉತ್ತರ ಹೀಗಿತ್ತು.” ಈ ಖೈದಿಗಳು ಅನುಭವಿಸುತ್ತಿರುವ ಯಾತನೆ ನೋಡಿ ನನಗೆ ಸಹಿಸಲಾಗುತ್ತಿಲ್ಲ. ಅದು ನನ್ನನ್ನು ನಿದ್ರಿಸಬಿಡುತ್ತಿಲ್ಲ”
ಕೊನೆಗೆ ಪ್ರವಾದಿವರ್ಯರ ಆದೇಶದಂತೆ ಖೈದಿಗಳಿಗೆ ಬಿಗಿದು ಕಟ್ಟಿದ್ದ ಹಗ್ಗವನ್ನು ಬಿಚ್ಚಲಾಯಿತು. ಖೈದಿಗಳು ನಿದ್ರಿಸಿದ ಬಳಿಕ ಪ್ರವಾದಿ ಮುಹಮ್ಮದ್ (ಸ) ನಿದ್ರಿಸಿದರು.

ಒಮ್ಮೆ ಓರ್ವ ಹಳ್ಳಿಗ ಪ್ರವಾದಿವರ್ಯರು ಹೆಗಲಿಗೆ ಹಾಕಿಕೊಂಡಿದ್ದ ಹಾಸನ್ನು ಬಲವಾಗಿ ಎಳೆದ. ಆ ಎಳೆತದಿಂದ ಪ್ರವಾದಿವರ್ಯರ ಕೊರಳು ಕೆಂಪೇರಿತು. ಆತ ಹೇಳಿದ “ಮುಹಮ್ಮದ್, ಇದೋ ನನ್ನ ಎರಡು ಒಂಟೆಗಳಿವೆ. ಅವುಗಳ ಮೇಲೆ ಹೊರಿಸಲು ನನಗೆ ಸಾಮಾನುಗಳು ಬೇಕು. ನಿಮ್ಮ ಬಳಿಯಿರುವ ವಸ್ತುಗಳು ನಿಮ್ಮದ್ದೂ ಅಲ್ಲ, ನಿಮ್ಮ ತಂದೆಯದ್ದೂ ಅಲ್ಲ. ಇದಕ್ಕೆ ಪ್ರತ್ಯುತ್ತರವಾಗಿ ” ಸಕಲ ವಸ್ತುಗಳೂ ಅಲ್ಲಾಹನಿಗೆ ಸೇರಿದ್ದು. ನಾನು ಕೇವಲ ಆತನ ಒಬ್ಬ ದಾಸ”ಎಂದರು.

ಆ ಬಳಿಕ ಪ್ರವಾದಿವರ್ಯರು ಆತನಲ್ಲಿ ಪ್ರಶ್ನಿಸಿದರು “ನನ್ನೊಡನೆ ವರ್ತಿಸಿದ ರೀತಿ ನಿಮಗೆ ವಿಷಾದವೆನಿಸುವುದಿಲ್ಲವೇ?” ಇಲ್ಲ, ಸ್ವಲ್ಪವೂ ಇಲ್ಲ. ನೀವು ಕೆಡುಕಿಗೆ ಕೆಡುಕಿನಿಂದ ಉತ್ತರಿಸುವ ಬದಲಾಗಿ ಪ್ರೀತಿಯಿಂದ ಉತ್ತರಿಸುವವರು ಎಂದು ನನಗೆ ಖಾತರಿಯಿದೆ.

ಇದನ್ನು ಕೇಳಿದ ಪ್ರವಾದಿವರ್ಯರು ಮುಗುಳ್ನಕ್ಕರು. ಆತನ ಒಂದು ಒಂಟೆಯ ಮೇಲೆ ಖರ್ಜೂರ ಮತ್ತು ಇನ್ನೊಂದು ಒಂಟೆಯ ಮೇಲೆ ಕೆಲವು ನಾಣ್ಯಗಳನ್ನು ಹೊರಿಸಿ ಕಳುಹಿಸಿದರು. “ಸದಾ ಗಲಾಟೆ, ಜಗಳ ಮಾಡುವವನು ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನೀಚ‌ನು.” ಎಂಬ ಪ್ರವಾದಿವಚನದ ಪ್ರಾಯೋಗಿಕ ರೂಪಕ್ಕೆ ಈ ಮೇಲಿನ ಘಟನೆ ಒಂದು ಉದಾಹರಣೆಯಷ್ಟೆ.

ಒಮ್ಮೆ ಪ್ರವಾದಿವರ್ಯರು ಹೇಳಿದರು. “ನೀವು ನಿಮ್ಮ ಮಾನವ ಸಹೋದರರಿಗೆ ‌ನೆರವಾಗಬೇಕು. ಒಂದು ವೇಳೆ ಆತ ಮರ್ದಕನಾಗಿದ್ದರೂ ನೆರವಾಗಬೇಕು. ಆಗ ಅವರ ಅನುಯಾಯಿಗಳಲ್ಲೋರ್ವರು ” ಓ ಪ್ರವಾದಿವರ್ಯರೇ,
ಮರ್ದಿತನಿಗೆ ನೆರೆವಾಗುವುದೇನೋ ಸರಿ, ಆದರೆ ಮರ್ದಕನಿಗೆ ನೆರವಾಗುವುದೇಕೆ? ಆಗ ಪ್ರವಾದಿವರ್ಯರ ಉತ್ತರ ಹೀಗಿತ್ತು. “ಆತನ ಕೈ ಹಿಡಿಯಬೇಕು, ಆತ ಅಕ್ರಮ ಮುಂದುವರಿಸದಿರಲಿಕ್ಕಾದರೂ ನೆರವಾಗಬೇಕು” ಅಕ್ರಮಿಯ ಅರ್ಥಾತ್ ಭಯೋತ್ಪಾದಕ ಕೃತ್ಯವೆಸಗುವವನ ಕೈ ಹಿಡಿಯುವುದು ಅಷ್ಟು ಸುಲಭವಲ್ಲ. ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ ಅವರು ಹಾಗೆ ಬೋಧಿಸಿದರು.

ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಪ್ರವಾದಿವರ್ಯರು ಅಂಕಿತ ಹಾಕಿದ ಹುದೈಬಿಯಾ ಒಪ್ಪಂದ ಮುಸ್ಲಿಮರ ಪಾಲಿಗೆ ಅತ್ಯಂತ ಕರಾಳವಾಗಿತ್ತು. ವಿರೋಧಿಗಳನ್ನು ಮಣಿಸುವ ತಕ್ಕ ಮಟ್ಟಿನ ಶಕ್ತಿಯಿದ್ದರೂ, ತನ್ನ ಅ‌ನುಯಾಯಿಗಳಿಗೆ ಅಸಮಾಧಾನವಿದ್ದರೂ ತನ್ನ ದೂರದರ್ಶಿತ್ವದ ಮೂಲಕ ಶಾಂತಿ ಸ್ಥಾಪನೆಗೆ ಒತ್ತು ಕೊಟ್ಟು ಪ್ರವಾದಿವರ್ಯರು ಹುದೈಬಿಯಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕೆ ತೀವ್ರ ಮರ್ದಿತನಾದ ಸಂಗಾತಿ ಅಬೂ ಜಂದಲ್ (ರ) ರವರ ನೋವನ್ನು ಮನದೊಳಗಿಟ್ಟು ಶಾಂತಿಯ ಏಕಮಾತ್ರ ಧ್ಯೇಯದೊಂದಿಗೆ ಪ್ರವಾದಿಯವರು ಹುದೈಬಿಯಾ ಒಪ್ಪಂದಕ್ಕೆ ಅಂಕಿತ ಹಾಕಿದ್ದರು. ಜಾಗತಿಕ ಇತಿಹಾಸದಲ್ಲಿ ತಮ್ಮ ಬಳಿ ತಕ್ಕಮಟ್ಟಿನ ಬಲವಿದ್ದಾಗ್ಯೂ ಅಪಮಾನಕರ ಒಪ್ಪಂದಕ್ಕೆ ಸಹಿ ಹಾಕಿದ ಅರ್ಥಾತ್ ಶಾಂತಿಗೆ ಒಪ್ಪಿಕೊಂಡ ನಿದರ್ಶನ ಸಿಗಲಾರದು.

ಒಟ್ಟಿನಲ್ಲಿ ಹೇಳುವುದಾದರೆ ಶಾಂತಿಗಾಗಿ ಬಂದಿರುವ ಇಸ್ಲಾಮನ್ನು ಆಕ್ರಮಣಕಾರೀ ಪೈಶಾಚಿಕತೆಯೆಂದು ಬಿಂಬಿಸುವ ಕುಪ್ರಚಾರವು ಇತಿಹಾಸ ಮತ್ತು ವರ್ತಮಾನದ ಬಹುದೊಡ್ಡ ವಿರೋಧಾಬಾಸವಾಗಿದೆ. ಪ್ರವಾದಿ (ಸ) ಶಾಂತಿಗಾಗಿ, ಮಾನವೀಯತೆಗಾಗಿ ಶ್ರಮಿಸಿದ ಸಾಟಿಯಿಲ್ಲದ ಮಹಾದಾರ್ಶನಿಕರಾಗಿದ್ದಾರೆ.
—————————————-

SHARE THIS POST VIA

About editor

Check Also

ಇಬ್ರಾಹೀಮ್(ಅ)ರ ಜೀವನ ಮತ್ತು ಹಜ್ಜ್ ಕರ್ಮಗಳ ಇತಿಹಾಸ

✍️ಖದೀಜ ನುಸ್ರತ್ ಜೀವಮಾನದಲ್ಲಿ ಮಕ್ಕಾ ನಗರಕ್ಕೆ ತೆರಳಿ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಬೇಕೆಂಬುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಆರೋಗ್ಯ, ಸಂಪತ್ತು, …

Leave a Reply

Your email address will not be published. Required fields are marked *