✍️ ಮುಷ್ತಾಕ್ ಹೆನ್ನಾಬೈಲ್
ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದರು(ಸ) ಪ್ರವರ್ಧಮಾನಕ್ಕೆ ಬರುವವರೆಗೆ ಜಗತ್ತಿನ ಯಾವುದೇ ಸಾಮ್ರಾಜ್ಯ, ಸಮಾಜ, ಸಮುದಾಯ, ದೇಶಗಳ ಆಡಳಿತಗಳು ನಿರ್ದಿಷ್ಟ ಅಥವ ನಿಖರ ಸಿದ್ಧಾಂತ-ಸಂವಿಧಾನಗಳ ಅಡಿಯಲ್ಲಿ ಆಡಳಿತಗಳನ್ನು ನಡೆಸುತ್ತಿರಲಿಲ್ಲ. ರಾಜ, ಮಂತ್ರಿ ಅಥವಾ ನಾಯಕನ ವಿವೇಚನೆಯಂತೆ ಆಡಳಿತ ಮತ್ತು ನ್ಯಾಯ ವ್ಯವಸ್ಥೆ ನಡೆಯುತ್ತಿತ್ತು. ಸ್ವಾಭಾವಿಕವಾದ ಕೆಲವು ನಾಗರಿಕ ಹಕ್ಕುಗಳನ್ನು ಹೊರತುಪಡಿಸಿದರೆ ಉಳಿದಂತೆ ಪ್ರಭುತ್ವದ ಅಡಿಯಲ್ಲಿ ಪ್ರಜೆಗಳು ಅಕ್ಷರಶ: ಗುಲಾಮರು. ಹೀಗಿನ ಹಕ್ಕುಗಳು ಕೂಡ ಆಡಳಿತಗಾರನ ಔದಾರ್ಯವೆಂದು ಪರಿಗಣಿತವಾಗಿತ್ತು. ಭೌತಿಕವಾದ ಎಲ್ಲ ವಸ್ತುಗಳ ಮೇಲೆ ಸೇನೆ- ಸಾಮ್ರಾಜ್ಯಗಳ ಮುಖ್ಯಸ್ಥರೇ ಅಧಿಕಾರವನ್ನು ಚಲಾಯಿಸುತ್ತಿದ್ದರು. ಉಳಿದಂತೆ ದೈಹಿಕ ಹಾಗೂ ಸಮಾಜದ ಬಲಾಢ್ಯರೇ ಆಡಳಿತದ ಪ್ರಭಾವವಿರುವ ಪ್ರದೇಶ ಮತ್ತು ಸಂಪತ್ತುಗಳ ಪಾಲುದಾರಿಕೆಯನ್ನು ಹೊಂದುತ್ತಿದ್ದರು.
ಅರೇಬಿಯಾದಲ್ಲಿ ಪ್ರವಾದಿಯವರು(ಸ) ದೇವವಾಣಿಯನ್ನು ಬಿತ್ತರಿಸತೊಡಗಿದಾಗ, ಅವರ ವಾಣಿಗಳಲ್ಲಿ, ಶತಶತಮಾನಗಳಿಂದ ಅವಕಾಶ- ಅಧಿಕಾರ ಮತ್ತು ಹಕ್ಕುಗಳಿಂದ ವಂಚಿತರಾಗಿದ್ದ ಕರಿಯ ಜನಾಂಗದವರು, ಮಹಿಳೆಯರು, ಅನಾಥರ ಹಕ್ಕುಗಳ ಪ್ರಸ್ತಾಪ ಗಟ್ಟಿಯಾಗಿ ಕೇಳಿಸತೊಡಗಿತು. ಇದು ಬಿಳಿಯ ಅರಬರಿಗೆ ಹಿಡಿಸುತ್ತಿರಲಿಲ್ಲ. ಅವರ ಪ್ರಕಾರ ಕರಿಯರು- ಮಹಿಳೆಯರು ಅನುಕ್ರಮವಾಗಿ ವರ್ಣ ಮತ್ತು ಪುರುಷ ಪ್ರಧಾನ ವ್ಯವಸ್ಥೆಯ ಅಡಿಯಾಳುಗಳು. ಹೀಗಿನ ಮನಸ್ಥಿತಿ ಇರುವುದರಿಂದ ಸಮಾನತೆಯ ಸಿದ್ಧಾಂತ ಅನುಷ್ಠಾನಿಸಲು ಪ್ರವಾದಿಯವರನ್ನು ಅರಬ್ಬರು ದೊಡ್ಡಮಟ್ಟದಲ್ಲಿ ಪೀಡಿಸಿದರು. ಕಾಲಗಳ ನಂತರ ಇಡೀ ಅರಬ್ ಪ್ರವಾದಿಯ(ಸ) ಅನುಯಾಯಿತ್ವವನ್ನು ಸ್ವೀಕರಿಸಿದಾಗ, ನಿರ್ಲಕ್ಷಿತ ವರ್ಗದ ಹಕ್ಕು ಸ್ವಾತಂತ್ರ‍್ಯಗಳೊಂದಿಗೆ ನವರೂಪ ಪಡೆದ ಅರೇಬಿಯಾದ ಗಡಿಗಳು, ಆ ಕಾಲದ ವಿಶ್ವದ ಅತೀ ದೊಡ್ಡ ಸೂಪರ್ ಪವರ್‌ಗಳಾದ ರೋಮನ್ ಮತ್ತು ಪರ್ಶಿಯನ್ ಸಾಮ್ರಾಜ್ಯಗಳೊಂದಿಗೆ ಸಂಘರ್ಷಿಸತೊಡಗಿದವು..
ಗುಲಾಮರಂತೆ ಇದ್ದ ವರ್ಗಗಳಿಗೆ ಅರೇಬಿಯಾದಲ್ಲಿ ನೀಡಲ್ಪಟ್ಟ ಹಕ್ಕು ಸ್ವಾತಂತ್ರ‍್ಯಗಳು, ಅದೆಷ್ಟೋ ಶತಮಾನಗಳಿಂದ ನಾಗರಿಕರನ್ನು ಹಕ್ಕು ಸ್ವಾತಂತ್ರ‍್ಯಗಳಿಂದ ವಂಚಿಸಿ ಏಕಪಕ್ಷೀಯವಾಗಿ ಜಗತ್ತನ್ನು ಆಳುತ್ತಿದ್ದ ಈ ಎರಡು ದೊಡ್ಡ ಸಾಮ್ರಾಜ್ಯಗಳಿಗೆ ಕಿರಿಕಿರಿ ಉಂಟು ಮಾಡತೊಡಗಿದವು. ರೋಮನ್ ಮತ್ತು ಪರ್ಶಿಯನ್ ಸಾಮ್ರಾಜ್ಯಗಳ ಮನಸ್ಥಿತಿಯ ಪ್ರಕಾರ ಕರಿಯರು ಮತ್ತು ಮಹಿಳೆಯರಿಗೆ ಹಕ್ಕು ಸ್ವಾತಂತ್ರ‍್ಯಗಳನ್ನು ನೀಡುವುದು ವಿಲಕ್ಷಣ ಸಿದ್ಧಾಂತವಾಗಿತ್ತು.
ಹೀಗಿದ್ದರೂ ಪ್ರವಾದಿಯವರು(ಸ) ಅರೇಬಿಯಾದೊಳಗಿನ ಮತ್ತು ಹೊರಗಿನ ಪ್ರತಿರೋಧಗಳನ್ನು ಮೆಟ್ಟಿನಿಂತು ದಮನಿತ-ಶೋಷಿತ ವರ್ಗಗಳಿಗೆ ಹಕ್ಕು ಸ್ವಾತಂತ್ರ‍್ಯಗಳನ್ನು ನೀಡುವುದರ ಮೂಲಕ ಸಮಾನತೆಯ ಸವಿಯನ್ನು ಉಣ್ಣಿಸಿದರು..
ಈ ಕಾರಣದಿಂದಾಗಿ ಅರೇಬಿಯಾ ನೆಲದ ಕರಿಯರು- ಮಹಿಳೆಯರು ನಾಗರಿಕ ಹಕ್ಕುಗಳನ್ನು ತಾರತಮ್ಯವಿಲ್ಲದೆ ಪಡೆದ ಜಗತ್ತಿನ ಮೊಟ್ಟಮೊದಲ ವರ್ಗಗಳಾಗಿ ಕಂಗೊಳಿಸಿದರು. ಕರಿಯರು ಪ್ರಾರ್ಥನೆಯ ನೇತೃತ್ವದ ಹಕ್ಕು, ಆಡಳಿತದ ಹಕ್ಕು ಪ್ರಧಾನವಾಗಿ ಪಡೆದರೆ, ಮಹಿಳೆಯರು ಆಸ್ತಿಯ ಹಕ್ಕು, ವಿಧವಾ ವಿವಾಹದ ಹಕ್ಕು, ವಧುಧನದ ಹಕ್ಕು, ವಿಚ್ಛೇದನೆಯ ಹಕ್ಕು ಸೇರಿದಂತೆ ಹತ್ತು ಹಲವು ಹಕ್ಕುಗಳನ್ನು ಪಡೆದರು. ಬಡವರು ಝಕಾತ್ ಎಂಬ ಕಡ್ಡಾಯ ದಾನ ವ್ಯವಸ್ಥೆಯಿಂದ ರಾಜ ಭಂಡಾರಕ್ಕೆ ಬರುತ್ತಿದ್ದ ಆದಾಯವನ್ನು ತಮ್ಮ ಹಕ್ಕುಗಳ ಅಡಿಯಲ್ಲಿ ಪಡೆದರು. ಹೀಗೆ ಈ ಮೇಲಿನ ವರ್ಗಗಳು, ಅರೇಬಿಯಾದಲ್ಲಿ 1,400 ವರ್ಷಗಳ ಹಿಂದೆಯೇ ಪಡೆದ ಈ ಹಕ್ಕುಗಳು, ಮುಂದಿನ ದಿನಗಳಲ್ಲಿ ಜಗತ್ತಿನ ಎಲ್ಲಾ ಆಡಳಿತ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರತೊಡಗಿದ್ದು ಮಾತ್ರವಲ್ಲ, ಜಗತ್ತಿನಾದ್ಯಂತದ ಅನುಷ್ಠಾನಗಳಿಗೆ ಪ್ರೇರೇಪಿಸಿದವು. ಎಲ್ಲ ಆಡಳಿತಗಳು ಭಾಷೆ-ಬಣ್ಣಗಳ ಸೀಮೆಗಳಿಲ್ಲದ ವ್ಯಕ್ತಿ ಸ್ವಾತಂತ್ರ‍್ಯ ಮತ್ತು ನಾಗರಿಕ ಹಕ್ಕುಗಳ ಅನುಷ್ಠಾನದ ಒತ್ತಡಕ್ಕೆ ಸಿಲುಕಿದವು. ಇದು ಮನುಕುಲ ಇತಿಹಾಸದ ಮಹಾನ್ ಪಲ್ಲಟವಾಗಿತ್ತು..
ಅರೇಬಿಯಾದಲ್ಲಿ ಪವಿತ್ರ ಕುರ್‌ಆನ್ ಸೂಕ್ತಗಳು ಮತ್ತು ಪ್ರವಾದಿ ವಾಣಿಗಳಾದ ಹದೀಸ್‌ಗಳ ಮೂಲಕ ರೂಪಿತವಾದ ಸಂವಿಧಾನ ಮತ್ತು ಕಾನೂನುಗಳು ಲೋಕದ ನಕ್ಷೆಯನ್ನೇ ಬದಲಿಸಿದವು. ಕಾಲಕ್ರಮೇಣ ಹಂತಹಂತವಾಗಿ ಜಗತ್ತಿನಾದ್ಯಂತ ಸಾಮಾಜಿಕ ರಾಜಕೀಯ ಧಾರ್ಮಿಕ ಹಕ್ಕುಗಳಿಗೆ ಒತ್ತಾಯಿಸಿ ಕ್ರಾಂತಿಗಳು ಆರಂಭ ಗೊಂಡವು. ಕಳೆದ ಹೆಚ್ಚು ಕಡಿಮೆ 1400 ವರ್ಷ ಜಾಗತಿಕ ಇತಿಹಾಸದ ಅತೀ ಸಣ್ಣ ಕಾಲಘಟ್ಟ. ಈ ಸಣ್ಣ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಶೋಷಣೆಯ ವಿರುದ್ಧದ ಹೋರಾಟಗಳು ಮತ್ತು ವ್ಯಕ್ತಿತ್ವಗಳು ಇತಿಹಾಸದಲ್ಲಿ ಅದಕ್ಕಿಂತ ಮುಂಚೆ ಸಣ್ಣ ಪ್ರಮಾಣದಲ್ಲಿಯೂ ಹುಟ್ಟಿರಲಿಲ್ಲ ಎನ್ನುವ ಅಂಶ ಇಲ್ಲಿ ಗಮನಾರ್ಹ.
ಅರೇಬಿಯಾದಲ್ಲಿ ನಾಗರಿಕರಿಗೆ ನೀಡಲ್ಪಟ್ಟ ಹಕ್ಕುಗಳು ಮತ್ತು ಮಾಡಲ್ಪಟ್ಟ ಕಾನೂನುಗಳು ಜಗತ್ತಿನಲ್ಲಿ ಲಿಖಿತ ಮತ್ತು ಅಲಿಖಿತ ರೂಪದಲ್ಲಿ ಪ್ರಕಟಗೊಳ್ಳ ತೊಡಗಿದವು. ಕಾಲ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಮಾಡಿಕೊಂಡ ಕೆಲವು ಮಾರ್ಪಾಡುಗಳನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ದೇಶಗಳ ಸಂವಿಧಾನ ಮತ್ತು ಕಾನೂನುಗಳಿಗೆ ಇಸ್ಲಾಮಿಕ್ ಶರೀಯಾ ಕಾನೂನುಗಳೇ ಮೂಲ ಆಧಾರವಾಗಿದೆ. ಅರೇಬಿಯಾದಲ್ಲಿ 1,400 ವರ್ಷಗಳ ಹಿಂದೆ ನೀಡಲ್ಪಟ್ಟ ಹಕ್ಕುಗಳು ಮತ್ತು ರೂಪಿಸಲ್ಪಟ್ಟ ಕಾನೂನುಗಳು, ಇಂದಿನ ಆಧುನಿಕವೆಂದು ಕರೆಸಿಕೊಳ್ಳುವ ಯುರೋಪ್ ರಾಷ್ಟ್ರಗಳು, ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಅನುಷ್ಠಾನಗೊಂಡಿದ್ದು ಹೆಚ್ಚು ಕಡಿಮೆ ಇತ್ತೀಚೆಗೆ ಅಂದರೆ, 100-150 ವರ್ಷಗಳ ಹಿಂದೆಯಷ್ಟೇ ಆಗಿದೆ.
ಜಗತ್ತಿನಾದ್ಯಂತದ ನ್ಯಾಯಾಂಗ ವ್ಯವಸ್ಥೆ ಕೂಡ ಪ್ರವಾದಿ ಮುಹಮ್ಮದರು(ಸ) ರೂಪಿಸಿದ ಸ್ವರೂಪ ಮತ್ತು ಸಿದ್ಧಾಂತಗಳ ಪಡಿಯಚ್ಚು ಎಂದು ತಿಳಿಯಲು ಸಣ್ಣ ಅಧ್ಯಯನವೇ ಸಾಕು. ನ್ಯಾಯ ಬಯಸುವವರ ಪರವಾಗಿ ವಾದಿಸುವ ವಕೀಲ ವೃತ್ತಿ ಮತ್ತು ಆ ವೃತ್ತಿ ವರ್ಗವೂ ಕೂಡ ಪ್ರವಾದಿಯವರ(ಸ) ಕಾಲದಲ್ಲೇ ಮೊದಲು ಆರಂಭಗೊಂಡಿದ್ದು. ವಕೀಲ ಎಂಬ ಪದವೂ ಅರಬಿ ಮೂಲದ ಪದ. ಇಂದು ಜಗತ್ತಿನಲ್ಲಿ ಪರಿಚಿತಗೊಂಡಿರುವ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳು ಭಾಗಶ: ಪ್ರವಾದಿ ಮುಹಮ್ಮದರಿಂದ(ಸ) ಅನುಷ್ಠಾನಗೊಂಡಿದ್ದಾಗಿದೆ. ಮೂಲ ಅರಸುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಜಾಗತಿಕವಾದ ನಾಗರಿಕ ಹಕ್ಕುಗಳು ಮತ್ತು ಪ್ರಜಾಪರ ಕಾನೂನುಗಳ ಮೂಲ ಪ್ರವಾದಿ ಮುಹಮ್ಮದರಿಂದ(ಸ) ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.