Home / ಪ್ರವಾದಿಗಳು

ಪ್ರವಾದಿಗಳು

ಇಸ್ಲಾಮಿನ ಮೂಲಭೂತ ವಿಶ್ವಾಸಗಳಲ್ಲಿ ಪ್ರವಾದಿಗಳ ಮೇಲಿನ ವಿಶ್ವಾಸವು ಅತಿ ಪ್ರಧಾನವಾಗಿದೆ. ಪ್ರವಾದಿಗಳು ಎಂದರೆ, ಗ್ರಂಥವನ್ನು ಪಡೆಯಲು ಆ ಗ್ರಂಥದಂತೆ ಮಾನವರಿಗೆ ಮಾರ್ಗದರ್ಶನ ಮಾಡಲು ಮಾನವರಿಂದಲೇ ದೇವನು ಆಯ್ಕೆ ಮಾಡಿದ ಸಂದೇಶವಾಹಕರುಗಳಾಗಿರುತ್ತಾರೆ. ಅವರು ಅತ್ಯಂತ ಪರಿಶುದ್ಧರು, ಸುಸಂಸ್ಕ್ರತರು, ಸದ್ಗುಣಿಗಳು ಮತ್ತು ಪಕ್ವಮತಿಗಳಾದ ಮಾನವರಾಗಿರುತ್ತಾರೆ.  ಸತ್ಯಸಂಧರಲ್ಲದ ಕೆಟ್ಟ ಸ್ವಭಾವದವರನ್ನು ಮತ್ತು ಬುದ್ಧಿಮಾಂದ್ಯರನ್ನು ಪ್ರವಾದಿಗಳಾಗಿ ಆಯ್ಕೆ ಮಾಡಲಾಗುವುದಿಲ್ಲ.  ಇತರರಿಗೆ ಮಾದರಿಯಾಗಲು ಯೋಗ್ಯರಾದವರು ಮಾತ್ರ ಪ್ರವಾದಿಗಳಾಗುತ್ತಾರೆ.  ಗ್ರಂಥ ಮತ್ತು ಇತರ ದಿವ್ಯಜ್ಞಾನಗಳ ಅನುಸಾರ ಜನರಿಗೆ ನೇತೃತ್ವವನ್ನು ನೀಡುವುದು ಪ್ರವಾದಿಗಳ ಹೊಣೆಗಾರಿಕೆಗಳಾಗಿವೆ. ಪ್ರವಾದಿಗಳು ದೇವನಿಂದ ಆಯ್ಕೆಗೊಂಡಿರುವ ಪುಣ್ಯಾತ್ಮರುಗಳಾಗಿದ್ದರೂ, ದಿವ್ಯ ಶಕ್ತಿಯಿರುವವರೋ ದೇವನ ಅಧಿಕಾರದಲ್ಲಿ ಸಹಭಾಗಿಗಳಾಗಿರುವವರೋ ಅಲ್ಲ. ಅವರನ್ನು ಆರಾಧಿಸುವುದು ಅವರ ಉಪದೇಶಗಳಿಗೆ ವಿರುದ್ಧವಾದ ಮಹಾಪರಾಧವಾಗಿದೆ. ದಿವ್ಯ ಸಂದೇಶವು ಲಭಿಸುತ್ತದೆ ಎಂಬುದೊಂದು ಬಿಟ್ಟರೆ ಇತರೆಲ್ಲ ಕಾರ್ಯಗಳಲ್ಲಿ ಅವರು ಸಾಮಾನ್ಯ ಮನುಷ್ಯರೇ ಆಗಿದ್ದಾರೆ.

ಕೆಲವೊಮ್ಮೆ ಪ್ರವಾದಿಯ ಪ್ರವಾದಿತ್ವವನ್ನು ಜನರಿಗೆ ಸ್ಪಷ್ಟಪಡಿಸುವ ದೃಷ್ಟಾಂತಗಳು ಎಂಬ ನೆಲೆಯಲ್ಲಿ ಕೆಲವು ಪವಾಡಗಳು ಪ್ರವಾದಿಗಳ ಮೂಲಕ ಗೋಚರಿಸಬಹುದು. ಪ್ರವಾದಿ ಮೂಸಾರ ಕೋಲು ಅದಕ್ಕೆ ಒಂದು ಉದಾಹರಣೆಯಾಗಿದೆ. ದೇವನ ಆದೇಶದಂತೆ ಕೋಲನ್ನು ನೆಲದಲ್ಲಿ ಹಾಕಿದರೆ ಅದು ಹಾವಾಗಿ ಬಿಡುತ್ತಿತ್ತು. ಆದರೆ ಇಂತಹ ಸಿದ್ಧಿಗಳು ಪ್ರವಾದಿಗಳ ಸ್ವ ನಿಯಂತ್ರಣದಲ್ಲಿರಲಿಲ್ಲ. ದೇವನು ಆದೇಶಿಸಿದಾಗ ಮಾತ್ರ ಅವರಿಗೆ ಅದ್ಭುತಗಳನ್ನು ತೋರಿಸಲು ಸಾಧ್ಯವಾಗುತ್ತಿತ್ತು. ಪ್ರವಾದಿಗಳು ಮಾನವರಲ್ಲೇ ಹೆಚ್ಚು ಉನ್ನತರು ಮತ್ತು ಮಹತ್ವವಿರುವವರಾಗಿದ್ದರು. ಆ ಯಾವ ಶ್ರೇಷ್ಠತೆಗಳು ಅವರನ್ನು ದೇವನ ದಾಸ ಎಂಬ ಅವಸ್ಥೆಯಿಂದ ದೇವನಾಗಿ ಅಥವಾ ದೇವ ಪುತ್ರರೋ, ಸಹಭಾಗಿಗಳೋ ಆಗಿ ಎತ್ತರಿಸುವುದಿಲ್ಲ.

ಪೂರ್ವ ಕಾಲದಲ್ಲಿ ಎಲ್ಲ ಸಮುದಾಯಗಳಲ್ಲಿ ಪ್ರವಾದಿಗಳು ಆಗಮಿಸಿದ್ದಾರೆಂದು ಪವಿತ್ರ ಕುರ್ ಆನ್ ಪದೇ ಪದೇ ಹೇಳುತ್ತಿದೆ. ಅವರಲ್ಲಿ 25 ಪ್ರವಾದಿಗಳ ಹೆಸರನ್ನು ಅದು ಪ್ರಸ್ತಾಪಿಸಿದೆ. ಅವರೆಲ್ಲರನ್ನೂ ಪ್ರವಾದಿಗಳೆಂದು ಅಂಗೀಕರಿಸುವುದು ಮುಸ್ಲಿಮನಿಗೆ ಕಡ್ಡಾಯವಾಗಿದೆ. ಒಂದೂಕಾಲು ಲಕ್ಷ ಪ್ರವಾದಿಗಳು ಹಲವಾರು ಕಾಲಗಳಲ್ಲಿ ಮತ್ತು ಸ್ಥಳಗಳಲ್ಲಿ ಆಗಮಿಸಿದ್ದಾರೆಂದು ಇತಿಹಾಸವಿದೆ. ಮಾನವರಿಗೆ ಮಾರ್ಗದರ್ಶನ ನೀಡಲು ದಿವ್ಯಜ್ಞಾನ ದೊರಕಿದವರೆಲ್ಲರೂ ಪ್ರವಾದಿಗಳಾಗಿರುತ್ತಾರೆ. ಒಂದೇ ಮೂಲಭೂತ ತತ್ವ ಮತ್ತು ಧರ್ಮಗಳನ್ನು ಮಾತ್ರ ಪ್ರವಾದಿಗಳು ಬೋಧಿಸಿರುತ್ತಾರೆ.

ಒಂದೇ ಸಮಾಜದಲ್ಲಿ ಹಲವು ಕಾಲಗಳಲ್ಲಿ ಹಲವು ಪ್ರವಾದಿಗಳು ಆಗಮಿಸಿರುವುದು ಇತಿಹಾಸದಲ್ಲಿದೆ. ಪೂರ್ವ ಪ್ರವಾದಿಯ ಪರಂಪರೆ ಮತ್ತು ಗ್ರಂಥವನ್ನು ನೆಲೆ ನಿಲ್ಲಿಸುವುದಕ್ಕಾಗಿ ಅಧಿಕ ಪ್ರವಾದಿಗಳು ಬಂದರು. ಪೂರ್ವ ಪ್ರವಾದಿಗಳ ಪರಂಪರೆ ಮತ್ತು ಗ್ರಂಥವು ತೀರಾ ಮರೆಯಲ್ಪಟ್ಟ ಪರಿಸ್ಥಿತಿಗಳಲ್ಲಿ ಆಗಮಿಸುತ್ತಿದ್ದ ಪ್ರವಾದಿಗಳಿಗೆ ಹೊಸ ಗ್ರಂಥ ಮತ್ತು ಕಾನೂನು ವ್ಯವಸ್ಥೆಯು ಅವತೀರ್ಣವಾಗುತ್ತಿತ್ತು. ಇಂತಹ ಪ್ರವಾದಿಗಳನ್ನು ಸಾಂಕೇತಿಕವಾಗಿ ರಸೂಲ್ ಅಂದರೆ ಸಂದೇಶವಾಹಕರೆಂದು ಕರೆಯಲಾಗುತ್ತದೆ.

ಗ್ರಂಥವನ್ನು ಸ್ವೀಕರಿಸಿ ಅದನ್ನು ಜನರಿಗೆ ಹಸ್ತಾಂತರಗೊಳಿಸುವುದು ಮಾತ್ರ ಪ್ರವಾದಿಯ ಹೊಣೆಗಾರಿಕೆಯಲ್ಲ. ಅವರು ಗ್ರಂಥದ ವ್ಯಾಖ್ಯಾನಕಾರರು ಕೂಡಾ ಆಗಿರುತ್ತಾರೆ. ಗ್ರಂಥ ಸೂಚನೆಗಳು ಮತ್ತು ರೂಪಕಗಳ ಮೂಲಕ ಅವತೀರ್ಣವಾದ ಸತ್ಯಗಳನ್ನು ಜನರಿಗೆ ವಿವರಿಸಿಕೊಡುವುದು ಮತ್ತು ಗ್ರಂಥದ ತತ್ವಗಳನ್ನು ನಿಯಮಗಳನ್ನು ನಿತ್ಯ ಜೀವನದಲ್ಲಿ ಸಾಕ್ಷಾತ್ಕಾರಗೊಳಿಸಿ ತೋರಿಸಿಕೊಡಬೇಕಾದವರು ಪ್ರವಾದಿಗಳಾಗಿರುತ್ತಾರೆ. ಈ ರೀತಿ ಗ್ರಂಥದ ಅರ್ಥವನ್ನು ಪ್ರಕಟಿಸುವುದರಲ್ಲಿ ಅವರಿಂದ ತಪ್ಪು ಸಂಭವಿಸುವುದಿಲ್ಲ. ಅಥವಾ ಯಾವುದಾದರೂ ಪ್ರಮಾದವಾದರೆ ದೇವನು ಮಧ್ಯೆ ಪ್ರವೇಶಿಸಿ ತಿದ್ದಿ ಕೊಡುತ್ತಾನೆ. ಈ ಅರ್ಥದಲ್ಲಿ ಪ್ರವಾದಿಗಳು ಪ್ರಮಾದವಿಲ್ಲದ ಮಾನವರಾಗಿರುತ್ತಾರೆ. ಆದ್ದರಿಂದಲೇ ಗ್ರಂಥಕ್ಕೆ ಪ್ರವಾದಿಗಳು ಸ್ವಜೀವನದ ಮೂಲಕ ಮಾಡಿ ತೋರಿಸುವ ವ್ಯಾಖ್ಯಾನ, ಕಾನೂನು ವ್ಯವಸ್ಥೆ, ಗ್ರಂಥದ ನಂತರದ ಅಧಿಕೃತ ಆಧಾರ ಪ್ರಮಾಣವಾಗಿದೆ. ಇಸ್ಲಾಮಿನಲ್ಲಿ ಇದನ್ನು ಸುನ್ನತ್ ಅಥವಾ ಪ್ರವಾದಿ ಚರ್ಯೆಯೆಂದು ಕರೆಯಲಾಗಿದೆ.

ಪವಿತ್ರ ಕುರ್ ಆನ್ ಅಂತಿಮ ಗ್ರಂಥವಾಗಿರುವಂತೆ ಪ್ರವಾದಿ ಮುಹಮ್ಮದರು(ಸ) ಅಂತಿಮ ಪ್ರವಾದಿಯಾಗಿದ್ದಾರೆ, ಮತ್ತು ಲೋಕದ ಜನರಿಗೆ ಅಂತ್ಯ ದಿನದ ವರೆಗೂ ದೇವ ಸಂದೇಶವಾಹಕರಾಗಿ ಅವರು ನಿಯೋಜಿಸಲ್ಪಟ್ಟಿರುವರು. ಪ್ರವಾದಿ ಮುಹಮ್ಮದರ(ಸ) ಕುರಿತು ಅಲ್ಲಾಹನು ಪವಿತ್ರ ಕುರ್ ಆನಿನಲ್ಲಿ ಹೇಳುತ್ತಾನೆ. “(ಪೈಗಂಬರರೇ!) ನಾವು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯು ಎಚ್ಚರಿಕೆ ನೀಡುವವರಾಗಿಯೂ ಮಾಡಿ ಕಳುಹಿಸಿರುತ್ತೇವೆ.” (ಪವಿತ್ರ ಕುರ್ ಆನ್: 34: 28) ಅವರಿಗೆ ಅವತೀರ್ಣಗೊಂಡ ಗ್ರಂಥವಾದ ಕುರ್ ಆನ್ ಅದರ ಪ್ರಾಯೋಗಿಕ ವ್ಯಾಖ್ಯಾನವಾಗಿ ಅವರು ಮುಂದಿರಿಸಿದ ಜೀವನ ಚರ್ಯೆಯು ಮರೆಯಾಗದೆ ಮತ್ತು ವಿಕೃತವಾಗದೆ ಲೋಕಾವಸಾನದವರೆಗೆ ಉಳಿದಿರುವುದು. ಅದನ್ನು ತಲೆಮಾರುಗಳವರೆಗೂ ತಲುಪಿಸಿಕೊಡುವ ಹೊಣೆಯನ್ನು ಅವರ ಅನುಯಾಯಿಗಳ ಮೇಲೆ ಹೊರಿಸಲಾಗಿದೆ. ಆದುದರಿಂದ ಅವರ ನಂತರ ಪ್ರವಾದಿಗಳು ಆಗಮಿಸುವುದಿಲ್ಲ. ಇದನ್ನು ಪವಿತ್ರ ಕುರ್ ಆನಿನ 33ನೇ ಅಧ್ಯಾಯದ 40ನೇ ಸೂಕ್ತದಲ್ಲಿ ದೇವನು ಸ್ಪಷ್ಟವಾಗಿ ತಿಳಿಸಿರುತ್ತಾನೆ. “(ಜನರೇ) ಮುಹಮ್ಮದರು ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಲ್ಲ. ವಾಸ್ತವದಲ್ಲಿ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳಲ್ಲಿ ಕೊನೆಯವರಾಗಿರುತ್ತಾರೆ.

”ದೇವಚರರು ಅಲ್ಲಾಹನ ವಿಶಿಷ್ಟ ಸೃಷ್ಟಿ ವರ್ಗಗಳಲ್ಲಿ ಒಂದು ವರ್ಗವಾಗಿದ್ದಾರೆ. ಪ್ರಪಂಚವು ನಿರಾತಂಕವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಮಾಡುವುದು ದೇವಚರರ ದೌತ್ಯವಾಗಿದೆ. ದೇವೇಚ್ಛೆಯಂತೆ ಋತು ಭೇದಗಳು, ಜೀವಜಾಲಗಳು ಮುಂತಾದ ಚರಾಚರ ಸೃಷ್ಟಿಗಳ ಸಂಚಲನೆ ಉಂಟು ಮಾಡುತ್ತಿರುವುದು ದೇವಚರರಾಗಿದ್ದಾರೆ. ಮಾನವರಿಂದ ತನ್ನ ಸಂದೇಶವಾಹಕರಾಗಿ ದೇವನು ಆಯ್ದುಕೊಳ್ಳುವ ಪ್ರವಾದಿಗಳಿಗೆ ದಿವ್ಯಬೋಧನೆಗಳನ್ನು ತಲುಪಿಸುವವರೂ ದೇವಚರರಾಗಿದ್ದಾರೆ. ಜಿಬ್ರೀಲ್ ಗ್ಯಾಬ್ರಿಯಲ್ ಎಂಬ ದೇವಚರವು ಪ್ರವಾದಿ ಮುಹಮ್ಮದರಿಗೆ(ಸ) ದೈವಿಕ ಸಂದೇಶಗಳನ್ನು ತಲುಪಿಸುತ್ತಿತ್ತು. ದೇವಚರರು ಪಾಪಗಳಿಂದ ಮತ್ತು ದೇವಧಿಕ್ಕಾರಗಳಿಂದ ಮುಕ್ತರಾಗಿದ್ದಾರೆ. ಅವರು ದೇವನ ಆಜ್ಞೆಗಳನ್ನು ಅನುಸರಿಸುವವರು. ಅವನನ್ನು ಪ್ರಶಂಸಿಸುತ್ತಿರುವವರು. ಅವರಲ್ಲಿ ಅರಿತೋ ಅರಿಯದೆಯೋ ಪಾಪಗಳು ಸಂಭವಿಸುವುದಿಲ್ಲ. ದೇವಚರರಲ್ಲಿ ವಿಶ್ವಾಸವಿರಿಸಬೇಕೆಂದು ಇಸ್ಲಾಮ್ ಆಜ್ಞಾಪಿಸಿದೆ.

ಇಸ್ಲಾಮಿಗಿಂತ ಮೊದಲು ವಿಗ್ರಹಾರಾಧಕರಾದ ಅರಬರು ದೇವಚರರನ್ನು ದೇವನ ಪುತ್ರಿಯರೆಂದು ಭಾವಿಸುತ್ತಿದ್ದರು. ದೇವಚರರಿಗೆ ಮನುಷ್ಯರ ಪಾತ್ರಗಳನ್ನು ನಿರ್ಣಯಿಸುವ, ಬಯಕೆಗಳನ್ನು ಈಡೇರಿಸಿಕೊಡುವ, ಅಪಾಯಗಳನ್ನು ದೂರೀಕರಿಸುವ ಶಕ್ತಿಯಿದೆಯೆಂದು ನಂಬಿ ದೇವಚರರನ್ನು ಆರಾಧಿಸುತ್ತಿದ್ದರು ಮತ್ತು ಹರಕೆಗಳನ್ನು ಅರ್ಪಿಸುತ್ತಿದ್ದರು. ದೇವಪುತ್ರಿಯರನ್ನು ಮೆಚ್ಚಿಸುವ ಮೂಲಕ ದೇವನೊಡನೆ ಸಂಪರ್ಕವನ್ನು ಸ್ಥಾಪಿಸಬಹುದೆಂದು ಅವರು ನಂಬಿದ್ದರು. ಇಸ್ಲಾಮ್ ಇಂತಹ ನಂಬಿಕೆಗಳನ್ನು ಸಂಪೂರ್ಣವಾಗಿ ನಿರಾಕರಿಸಿತು. ಅಲ್ಲಾಹನ ಸೃಷ್ಟಿಗಳೆಂಬ ನೆಲೆಯಲ್ಲಿ ಇತರ ಸೃಷ್ಟಿಗಳಂತೆ ದೇವಚರರೂ ಅವನ ದಾಸರಾಗಿದ್ದಾರೆ. ಅವರಿಗೆ ದೇವನ ಸಾಮರ್ಥ್ಯ ಹಕ್ಕುಗಳಲ್ಲಿ ಯಾವುದೇ ಭಾಗಿದಾರಿಕೆಗಳಿಲ್ಲ. ದೇವನ ಆಜ್ಞೆಗಳನ್ನು ಅನುಸರಿಸುವುದರಿಂದ ಅಣುಗಾತ್ರವೂ ಪಥಭ್ರಷ್ಟರಾಗಲು ಅವರಿಗೆ ಸಾಧ್ಯವಿಲ್ಲ. ಸ್ವತಂತ್ರವಾಗಿ ತೀರ್ಮಾನ ತಳೆದು ಕಾರ್ಯನಿರ್ವಹಿಸುವ ಪ್ರಕೃತಿಯೇ ದೇವಚರರಿಗಿಲ್ಲ. ದೇವಚರರು ದೇವನ ಪುತ್ರಿಯರು ಮತ್ತು ದಿವ್ಯಶಕ್ತಿಯಿರುವ ಪೂಜನೀಯರೆಂಬ ನಂಬಿಕೆಯನ್ನು ನಿರಾಕರಿಸಿ ಪವಿತ್ರ ಕುರ್ ಆನ್ ಹೇಳುತ್ತದೆ.“ರಹ್ಮಾನನಿಗೆ ಮಕ್ಕಳಿದ್ದಾರೆಂದು ಇವರು ಹೇಳುತ್ತಾರೆ. ಅಲ್ಲಾಹ್ ಪರಮ ಪಾವನನು. ಅವರಂತೂ(ದೇವಚರರು) ಸನ್ಮಾನಿತ ದಾಸರಾಗಿರುತ್ತಾರೆ.” (ಪವಿತ್ರ ಕುರ್ ಆನ್: 21:26) “ಇವರು ರಹ್ಮಾನನ ಆಪ್ತ ದಾಸರಾಗಿರುವ ದೇವಚರರನ್ನು ಸ್ತ್ರೀಯರೆಂದು ಪರಿಗಣಿಸಿಕೊಂಡರು. ಅವರ ಶರೀರ ರಚನೆಯನ್ನು ಇವರು ಕಂಡಿದ್ದಾರೆಯೇ? ಇವರ ಸಾಕ್ಷಿಯನ್ನು ಬರೆದಿರಿಸಿಕೊಳ್ಳಲಾಗುವುದು. ಮತ್ತು ಇವರು ಅದಕ್ಕೆ ಉತ್ತರ ಕೊಡಬೇಕಾಗುವುದು.” (ಪವಿತ್ರ ಕುರ್ ಆನ್: 43:19)

ಪ್ರತಿಯೊಬ್ಬ ಮನುಷ್ಯರೊಂದಿಗೆ ಆತನ ಕರ್ಮಗಳನ್ನು ದಾಖಲಿಸಿಡುವ ದೇವಚರರಿರುತ್ತಾರೆ. ವಿಚಾರಣೆಯ ಕಾಲದಲ್ಲಿ ಆ ದೇವಚರರು ಈ ಕರ್ಮ ದಾಖಲೆಯನ್ನು ದೇವನ ಸಮಕ್ಷಮದಲ್ಲಿ ಹಾಜರುಪಡಿಸುವರು. ಇದನ್ನು ಪವಿತ್ರ ಕುರ್ ಆನಿನ ಮೂಲಕ ದೇವನು ತಿಳಿಸಿದ್ದಾನೆ. “ಅವನ ಬಾಯಿಯಿಂದ ಹೊರಡುವ ಯಾವ ಮಾತೂ ಕೂಡಾ ಸದಾ ಸನ್ನದ್ಧನಿರುವ ಒಬ್ಬ ಕಾವಲುಗಾರನಿಂದ ದಾಖಲಿಸಲ್ಪಡದೆ ಇರುವುದಿಲ್ಲ.” (ಪವಿತ್ರ ಕುರ್ ಆನ್: 50:18) “ನಿಮ್ಮ ಕರ್ಮಗಳನ್ನು ದಾಖಲಿಸಿಡುವ ಗೌರವಾನ್ವಿತ ಬರಹಗಾರರು. ನೀವು ಮಾಡುತ್ತಿರುವುದನ್ನೆಲ್ಲ ಅಲ್ಲಾಹನು ಅರಿಯುತ್ತಾನೆ.” ದೇವಚರರು ಅಗೋಚರ ಸೃಷ್ಟಿಗಳಾಗಿದ್ದಾರೆ. ಆದುದರಿಂದ ಅವರು ಮಾನವರಿಗೆ ಆದೃಶ್ಯರಾಗಿದ್ದಾರೆ. ಅವರ ಅಸ್ತಿತ್ವವೇನು ರೂಪವೇನು ಎಂದು ಗ್ರಂಥಗಳಲ್ಲಿ ತಿಳಿಸಿರುವುದಕ್ಕಿಂತ ಹೆಚ್ಚಿನ ಜ್ಞಾನವು ಮನುಷ್ಯರಿಗಿಲ್ಲ. ಪವಿತ್ರ ಕುರ್ ಆನ್ ಅದನ್ನು ವಿವರಿಸಿಯು ಇಲ್ಲ. ದೇವಚರರು ದೇವನ ಸೃಷ್ಟಿಯಾಗಿದ್ದಾರೆ. ದಾಸರಾಗಿದ್ದಾರೆ. ಗೌರವಾನ್ವಿತ ಆಜ್ಞಾನುವರ್ತಿಗಳಾಗಿದ್ದಾರೆ ಮತ್ತು ಪರಿಶುದ್ಧರಾಗಿದ್ದಾರೆ. ಇವಿಷ್ಟೇ ಗ್ರಂಥಗಳಿಂದ ತಿಳಿದು ಬರುತ್ತದೆ. ಗ್ರಂಥಗಳು ಮಾನವರ ಮಾರ್ಗದರ್ಶನಕ್ಕಾಗಿ ನಿಯುಕ್ತರಾದ ದೇವನ ಸಂದೇಶವಾಹಕರ ಮೂಲಕ ಲಭಿಸಿದ ಸನ್ಮಾರ್ಗದರ್ಶನದ ಪ್ರಮಾಣಗಳಾಗಿವೆ. ದೇವನು ಈ ಪ್ರಮಾಣಗಳನ್ನು ದೇವಚರರ ಮೂಲಕ ಸಂದೇಶವಾಹಕರುಗಳಿಗೆ ಕಲಿಸುತ್ತಾನೆ. ಸಂದೇಶವಾಹಕರು ಜನರಿಗೆ ಕಲಿಸುತ್ತಾರೆ. ಅನೇಕ ಸಂದೇಶವಾಹಕರಿಗೆ ಗ್ರಂಥವು ಲಭಿಸಿರುತ್ತದೆ. “ಸತ್ಯ ಮಾರ್ಗದ ಬಗ್ಗೆ ಸುವಾರ್ತೆ ನೀಡುವವರೂ ಮಿಥ್ಯ ಮಾರ್ಗದ ಬಗ್ಗೆ ಎಚ್ಚರಿಕೆ ನೀಡುವವರೂ ಆದ ಪ್ರವಾದಿಗಳನ್ನು ಅಲ್ಲಾಹನು ರವಾನಿಸಿದನು.” (ಪವಿತ್ರ ಕುರ್ ಆನ್: 2:213)

“ಎಲ್ಲ ಗ್ರಂಥಗಳ ಚರ್ಚಾ ವಿಷಯ ದೇವನು ಮತ್ತು ಮಾನವರು ಆಗಿದ್ದಾರೆ? ಮಾನವನು ಎಲ್ಲಿಂದ ಬರುತ್ತಿದ್ದಾನೆ? ಎಲ್ಲಿಗೆ ಹೋಗುತ್ತಿದ್ದಾನೆ? ಅವನ ಜೀವನದ ಧರ್ಮವೇನು? ಅದನ್ನು ಪೂರ್ತಿ ಮಾಡುವುದು ಹೇಗೆ? ಧರ್ಮ ಪಾಲನೆಯ ಗುಣವೇನು? ಧರ್ಮೋಲ್ಲಂಘನೆಯ ಭವಿಷ್ಯವೇನು? ಸತ್ಯ ಮತ್ತು ನ್ಯಾಯ ಯಾವುದು? ಅವುಗಳ ಸಾಕ್ಷಾತ್ಕಾರ ಹೇಗೆ? ದೇವನು ಯಾರು? ಅವನಿಗೂ ಮಾನವರಿಗೂ ಇರುವ ಸಂಬಂಧವೇನು? ಮುಂತಾದ ಜೀವನದ ಮೂಲಭೂತ ಪ್ರಶ್ನೆಗಳಿಗೆ ಗ್ರಂಥದಲ್ಲಿ ಉತ್ತರವಿದೆ.

ಜೀವನ ಮೌಲ್ಯಗಳ ಮೂಲಾಧಾರ ಗ್ರಂಥವಾಗಿದೆ. ದೇವನಿಂದ ಅವತೀರ್ಣವಾದ ಎಲ್ಲ ಗ್ರಂಥಗಳಲ್ಲಿ ವಿಶ್ವಾಸವಿರಿಸುವುದು ಮುಸ್ಲಿಮರ ಕರ್ತವ್ಯವಾಗಿದೆ. ಇಬ್‍ರಾಹೀಮ್, ಮೂಸಾ, ದಾವೂದ್, ಈಸಾ ಮುಂತಾದವರು ಮುಹಮ್ಮದರಿಗಿಂತ(ಸ) ಮೊದಲು ಗ್ರಂಥ ದೊರಕಿದ ಪ್ರಮುಖರಾಗಿದ್ದಾರೆ. ಪ್ರವಾದಿ ಮೂಸಾರಿಗೆ ಲಭಿಸಿದ ಗ್ರಂಥವನ್ನು ತೌರಾತ್ ಎಂದೂ ಪ್ರವಾದಿ ಈಸಾರಿಗೆ ಲಭಿಸಿದ ಗ್ರಂಥವನ್ನು ಇಂಜೀಲ್ ಎಂದೂ ಪವಿತ್ರ ಕುರ್ ಆನ್ ವಿಶ್ಲೇಷಿಸಿದೆ. ಅರಬರಿಗೆ ಅರಿವಿಲ್ಲದ ಸೆಮಿಟಿಕೇತರ ಧರ್ಮಗಳನ್ನು ಪವಿತ್ರ ಕುರ್ ಆನ್ ಉಲ್ಲೇಖಿಸುವುದಿಲ್ಲ. ಆದರೂ ಭಾರತ, ಚೀನಾ ಮತ್ತು ಇರಾನಿನಲ್ಲಿಯು ಗ್ರಂಥಗಳು(ಕುರ್ ಆನ್) ಅವತೀರ್ಣಗೊಂಡಿದೆ ಎಂಬ ಅಭಿಮತವನ್ನು ಅನುಮೋದಿಸುತ್ತದೆ.

ಪೂರ್ವಗ್ರಂಥಗಳು ಹಲವು ಅಂಶಿಕವಾಗಿ ಮತ್ತು ಸಂಪೂರ್ಣವಾಗಿ ನಷ್ಟವಾಗಿದೆ. ಅವುಗಳಲ್ಲಿ ಈಗಿರುವುದು ಮಾನವರ ಹಸ್ತಕ್ಷೇಪಕ್ಕೆ ಒಳಗಾಗಿದೆ ಎಂದೂ ಅದು ತಿಳಿಸಿದೆ. ಎಲ್ಲ ಸತ್ಯ ಗ್ರಂಥಗಳ ಮೂಲ ಸಂದೇಶವೊಂದೇ ಆಗಿತ್ತೆಂದು (98: 4,5) ಪವಿತ್ರ ಕುರ್ ಆನ್ ತಿಳಿಸುತ್ತಿದೆ. ಅವುಗಳ ನಡುವೆ ಕಾಲ, ದೇಶ ಮತ್ತು ಭಾಷೆಯ ವೈವಿಧ್ಯಗಳು ಮಾತ್ರವೇ ಇತ್ತು ಎಂದು ಕುರ್ ಆನಿನಿಂದ ತಿಳಿದು ಬರುತ್ತದೆ. ಅದನ್ನು ಮೀರಿ ಏನಾದರೂ ವ್ಯತ್ಯಾಸಗಳಾಗಿದ್ದರೆ ಅದಕ್ಕೆ ಆಯಾ ಗ್ರಂಥದ ಅನುಯಾಯಿಗಳು ಕಾರಣ. ತೌರಾತ್ ಮತ್ತು ಇಂಜೀಲ್ (ಬೈಬಲಿನ ಹಳೆಯ ನಿಯಮಗಳ ಮತ್ತು ಹೊಸ ನಿಯಮಗಳ ಭಾಗಗಳನ್ನು) ಪವಿತ್ರ ಕುರ್ ಆನ್ ದೈವಿಕ ಗ್ರಂಥವೆಂದು ಅಂಗೀಕರಿಸುತ್ತದೆ. ಎಲ್ಲ ದೈವಿಕ ಗ್ರಂಥಗಳ ಸನ್ಮಾರ್ಗ ಪ್ರಮಾಣಗಳ ಅಂತಿಮ ಸಮುಚ್ಛಯವೇ ಪವಿತ್ರ ಕುರ್ ಆನ್ ಆಗಿದೆ. ದೈವಿಕ ಗ್ರಂಥಗಳ ಅತಿ ಕೊನೆಯ ಅಧಿಕೃತ ಪ್ರತಿ. ಭಾಷೆಗಳು ಮತ್ತು ದೇಶಗಳು ಪರಸ್ಪರ ಸಂಪರ್ಕ ಪ್ರಾರಂಭವಾದ ಜೀವನ ಸಂಸ್ಕ್ರತಿ ಜಾಗತಿಕವಾಗಿ ವಿನಿಯೋಗ ಆರಂಭವಾದ ಐತಿಹಾಸಿಕ ಸನ್ನಿವೇಶದಲ್ಲಿ ಸಕಲ ಮಾನವರಿಗಿರುವ ಏಕೈಕ ಗ್ರಂಥವು ಪವಿತ್ರ ಕುರ್ ಆನ್ ಆಗಿದೆ. ದೇವನು ಪ್ರವಾದಿಯೊಂದಿಗೆ ಹೇಳುತ್ತಾನೆ. “ಗತ ಸಂದೇಶವಾಹಕರಿಗೂ ನಾವು ಪ್ರತ್ಯಶ್ಯ ಪ್ರಮಾಣಗಳನ್ನೂ ಗ್ರಂಥಗಳನ್ನೂ ಕೊಟ್ಟು ಕಳುಹಿಸಿದ್ದೆವು ಮತ್ತು ಈಗ ಈ ಸ್ಮರಣವನ್ನು ನಿಮಗೆ ಅವತೀರ್ಣಗೊಳಿಸಿ ನೀನು ಜನತೆಯ ಮುಂದೆ ಅವರಿಗಾಗಿ ಅವತೀರ್ಣಗೊಳಿಸಲ್ಪಟ್ಟಿರುವ ಬೋಧನೆಯನ್ನು ವಿವರಿಸುವಂತೆಯು ಸ್ಪಷ್ಟೀಕರಿಸುವಂತೆಯು ಜನರು ಸ್ವಯಂ ವಿವರಿಸುವಂತೆಯು ಮಾಡಿದೆವು.

” ಪವಿತ್ರ ಕುರ್ ಆನ್ ತಿದ್ದುಪಡಿ ರಹಿತವಾಗಿ ಕಳೆದು ಹೋಗುವುದಕ್ಕೆ ಅತೀತವಾಗಿ ಸಂರಕ್ಷಿಸುವ ಹೊಣೆಯನ್ನು ವಹಿಸಿಕೊಂಡಿದ್ದೇನೆಂದು ದೇವನು ಪವಿತ್ರ ಕುರ್ ಆನಿನಲ್ಲಿ ತಿಳಿಸುತ್ತಾನೆ. “ವಾಸ್ತವದಲ್ಲಿ ಈ ಕುರ್ ಆನ್ ಅತ್ಯುನ್ನತ ಮಟ್ಟದ್ದಾಗಿದ್ದು ಸುರಕ್ಷಿತವಾಗಿರುವ ಹಾಳೆಯಲ್ಲಿ ಮುದ್ರಿತವಿದೆ.” (ಪವಿತ್ರ ಕುರ್ ಆನ್: 85:21,22) “ಈ ಉಪದೇಶವನ್ನು ನಿಶ್ಚಯವಾಗಿಯು ನಾವು ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ.” (ಪವಿತ್ರ ಕುರ್ ಆನ್:15:9) ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಸ್ವಲ್ಪವೂ ವ್ಯತ್ಯಾಸಗಳಿಲ್ಲದೆ ಪವಿತ್ರ ಕುರ್ ಆನ್ ತನ್ನ ಮೂಲ ಸ್ವರೂಪದಲ್ಲಿಯೇ ಉಳಿದಿದೆ. ಕಾಲ, ದೇಶ, ಪರಿಸ್ಥಿತಿಗಳಲ್ಲಿ ಎಷ್ಟೇ ಬದಲಾವಣೆಗಳಾದರೂ ಕುರ್ ಆನಿನ ಅಕ್ಷರಗಳಿಗೂ ಆಶಯಗಳಿಗೂ ಯಾವುದೇ ಮಬ್ಬುಂಟಾಗುವುದಿಲ್ಲ. ಆದುದರಿಂದ ಕುರ್ ಆನಿನ ನಂತರ ಮತ್ತೊಂದು ದೈವಿಕ ಗ್ರಂಥದ ಅವಶ್ಯಕತೆ ತಲೆದೋರಿಲ್ಲ. ಪ್ರವಾದಿ ಮುಹಮ್ಮದರ ನಂತರದ ಎಲ್ಲ ಜನರೂ ಸತ್ಯ ಧರ್ಮದ ದೈವಿಕ ಪ್ರಮಾಣವಾಗಿ ಪವಿತ್ರ ಕುರ್ ಆನನ್ನು ಸ್ವೀಕರಿಸಬೇಕಾಗಿದೆ.

ಒಂದೂವರೆ ಸಾವಿರ ವರ್ಷಗಳಿಂದ ಮುಸ್ಲಿಮರು ಅದನ್ನು ತಮ್ಮ ಧರ್ಮಗ್ರಂಥ ಮತ್ತು ನೀತಿ ಶಾಸ್ತ್ರವಾಗಿ ಅಂಗೀಕರಿಸಿ ಅನುಸರಿಸುತ್ತಿದ್ದಾರೆ. ಇಂದು ಅಳಿದುಳಿದಿರುವ ಇತರ ದೈವಿಕ ಗ್ರಂಥಗಳ ಭಾಷೆಗಳು ಮೃತವಾಗಿದೆ. ಆದರೆ ಕುರ್ ಆನಿನ ಭಾಷೆಯು ದೊಡ್ಡ ಜನ ಸಮುಹದಲ್ಲಿ ಇಂದಿಗೂ ಚಾಲ್ತಿಯಲ್ಲಿವೆ. ಆದುದರಿಂದ ಪವಿತ್ರ ಕುರ್ ಆನ್ ಅದರ ಮೂಲ ಭಾಷೆಯಲ್ಲಿಯೇ ಈಗಲೂ ಓದಲ್ಪಡುತ್ತಿದೆ ಮತ್ತು ಕಲಿಸಲ್ಪಡುತ್ತಿದೆ. ಪ್ರವಾದಿಗಳ ಮತ್ತು ಪುರೋಹಿತರ ವಚನಗಳು, ಗ್ರಂಥ ಪಂಡಿತರ ವ್ಯಾಖ್ಯಾನಗಳು ಮಿಶ್ರಗೊಳ್ಳದೆ ಪರಿಶುದ್ಧ ದೈವಿಕ ವಚನ ಸಮಾಹಾರವಾಗಿ ಅದು ಉಳಿದಿದೆ. ಇದು ಪವಿತ್ರ ಕುರ್ ಆನಿನ ವಿಶೇಷತೆಯಾಗಿದೆ. ಪವಿತ್ರ ಕುರ್ ಆನ್ ಸಕಲ ಮಾನವರನ್ನು ಅಭಿಸಂಬೋಧಿಸುತ್ತದೆ. ಯಾವುದಾದರೊಂದು ವಂಶವನ್ನೋ ದೇಶವನ್ನೊ ಅಲ್ಲ. ಇದು ಕೂಡಾ ಅದರ ವಿಶೇಷತೆಯಾಗಿದೆ. ಸಾಮಾನ್ಯ ಬುದ್ಧಿಗೆ ನಿಲುಕದ ಆಶಯಗಳು, ಅಂಧ ವಿಶ್ವಾಸಗಳು, ಅನ್ಯಾಯದ ನೀತಿಗಳು, ಅಸಭ್ಯ ವ್ಯಾಖ್ಯಾನಗಳು ಕುರ್ ಆನಿನಲ್ಲಿಲ್ಲ. ಪವಿತ್ರ ಕುರ್ ಆನಿನಲ್ಲಿರುವ ತತ್ವಗಳು ಸದಾಕಾಲಕ್ಕೆ ಅನ್ವಯವೂ, ಸುಸಂಸ್ಕ್ರತವೂ, ನ್ಯಾಯ ನಿರೂಪಕವೂ, ಸತ್ಯಸಂಧವೂ, ಅನುಕರಣೀಯವೂ ಆಗಿದೆ ಮತ್ತು ಜೀವನದ ಸಕಲ ಕ್ಷೇತ್ರಗಳಿಗೂ ಮಾರ್ಗದರ್ಶನವಾಗಿದೆ.

SHARE THIS POST VIA