ಪ್ರಪಂಚ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳನ್ನು ನಿಯಂತ್ರಿಸಿ ಅವು ಚಲಿಸುವಂತೆ ಮಾಡುವ ನಿಯಮಗಳನ್ನು ದೇವನು ಸೃಷ್ಟಿಸಿರುತ್ತಾನೆ. ಮಾನವನು ದೇವನ ವಿಶೇಷ ಸೃಷ್ಟಿಯಾಗಿದ್ದಾನೆ. ಮಾನವನ ಶರೀರವನ್ನು ಭೂಮಿಯ ಧಾತುಗಳಿಂದ ಕ್ರೋಡೀಕರಿಸಲಾಗಿದೆ. ಅದೇ ವೇಳೆ ಭೌತಿಕ ಮೇರೆಗೆ ನಿಲುಕದ ಆತ್ಮ ಅವನಲ್ಲಿದೆ. ಅವನು ಭೂಮಿಯಲ್ಲಿ ದೇವನ ಪ್ರತಿನಿಧಿ ಎಂಬ ವಿಶೇಷ ಸ್ಥಾನವನ್ನು ಹೊಂದಿದ್ದಾನೆ. ಅಂದರೆ ಅವನು ದೇವನಿಗೆ ಬದಲಿಯಾಗಿದ್ದಾನೆ ಎಂಬುದು ಇದರ ಅರ್ಥವಲ್ಲ, ಬದಲಾಗಿ ಮಾನವನು ದೇವನಿಂದ ಕೊಡಲ್ಪಟ್ಟಿರುವ ಧಾರ್ಮಿಕ ನಿಯಮಗಳು ಮತ್ತು ವಿಧಿ-ನಿಷೇಧಗಳನ್ನು ಪಾಲಿಸಿ ಜೀವನವನ್ನು ಹಿತಕರವಾದ ದಿಕ್ಕಿನಲ್ಲಿ ಸಾಗಿಸುತ್ತಾನೆ ಮತ್ತು ಕಾರ್ಯತತ್ಪರವಾಗುವ ಸಾರ್ಮಥ್ಯ ಮತ್ತು ಆಯ್ಕೆಯ ಸ್ವಾತಂತ್ರ್ಯವಿರುವ ಎಲ್ಲ ಕಾರ್ಯಗಳಲ್ಲಿ ದೇವನನ್ನು ಪರಮ ಮಾನದಂಡವನ್ನಾಗಿಸಿ ದೇವನಿಗಾಗಿಯೇ ಎಲ್ಲವನ್ನು ಮಾಡುತ್ತಾನೆ ಎಂಬುದು ಅದರ ಅರ್ಥವಾಗಿದೆ.
ಈ ವಿಧೇಯತ್ವದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿರುವ ಎಲ್ಲ ಆವಿಷ್ಕಾರಗಳನ್ನು ಇಬಾದತ್ ಎಂದು ಹೇಳಲಾಗುತ್ತದೆ. ಆರಾಧನೆಗಳು, ಕರ್ಮಗಳು, ಸಾಮಾಜಿಕ, ರಾಜಕೀಯ ವ್ಯವಹಾರಗಳು, ಆರ್ಥಿಕ ವಹಿವಾಟುಗಳು, ಸೇವೆ, ಭಾವನೆ, ಚಿಂತನ-ಮಂಥನಗಳು, ವರ್ತನೆಗಳೆಲ್ಲವೂ ಇಬಾದತ್ ಎಂಬುದರಲ್ಲಿ ಸೇರುವುದು.
“ಅವರಿಗೆ ನೀಡಲಾಗಿದ್ದ ಆದೇಶವು-ಅವರು ತಮ್ಮ ಧರ್ಮವನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು ಏಕನಿಷ್ಠೆಯಿಂದ ಅಲ್ಲಾಹನ ದಾಸ್ಯಾರಾಧನೆ ಮಾಡಬೇಕು, ನಮಾಝನ್ನು ಸಂಸ್ಥಾಪಿಸಬೇಕು ಮತ್ತು ಝಕಾತನ್ನು ನೀಡಬೇಕು-ಎಂಬುದರ ಹೊರತು ಬೇರೇನೂ ಆಗಿರಲಿಲ್ಲ. ಇದುವೇ ಅತ್ಯಂತ ಸರಿಯಾದ ಧರ್ಮ (ಪವಿತ್ರ ಕುರ್‍ಆನ್ – 98:5).”
“ನಾನು ಯಕ್ಷಗಳನ್ನೂ ಮನುಷ್ಯರನ್ನೂ ಸೃಷ್ಟಿಸಿರುವುದು ನನ್ನ ದಾಸ್ಯ ಮತ್ತು ಆರಾಧನೆಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ (ಪವಿತ್ರ ಕುರ್‍ಆನ್ – 51:56).”
ಭೂಮಿಯಲ್ಲಿ ದೇವನ ಪ್ರತಿನಿಧಿಯಾಗಿರುವುದಕ್ಕೆ ಅವಶ್ಯಕವಾಗಿರುವ ಶಾರೀರಿಕ, ಮಾನಸಿಕ, ಬುದ್ಧಿಪರ ಯೋಗ್ಯತೆ ಸಾಮಥ್ರ್ಯಗಳನ್ನು ದೇವನು ಮಾನವನಿಗೆ ನೀಡಿರುತ್ತಾನೆ.
ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಮಾನವರ ಈ ವಿಶೇಷ ಗುಣಗಳ ಉದ್ದೇಶವು ಅವನು ಭೂಮಿಯಲ್ಲಿ ದೇವನ ಪ್ರಾತಿನಿಧ್ಯವನ್ನು ಪೂರ್ತೀಕರಿಸುವುದಾಗಿದೆ ಮತ್ತು ಕರುಣೆ, ನ್ಯಾಯ, ಸೃಷ್ಟಿಪರತೆ, ಯುಕ್ತಿ, ಭದ್ರತೆ, ಒಳಿತು ಮುಂತಾದ ಅನೇಕ ವಿಶಿಷ್ಟ್ಟ ದೈವಿಕ ಗುಣಗಳಿಗೆ ಭೂಮಿಯಲ್ಲಿ ಸಾಕ್ಷಿಯಾಗುವುದಾಗಿದೆ.
ಮಾನವರ ಕುರಿತು: “ನಾವು ಮಾನವನನ್ನು ಅತ್ಯುತ್ತಮ ಪ್ರಕೃತಿಯಲ್ಲಿ ಸೃಷ್ಟಿಸಿರುತ್ತೇವೆ (ಪವಿತ್ರ ಕುರ್‍ಆನ್ -95:4).”
“ನಾವು ಅವನಿಗೆ ಎರಡು ಕಣ್ಣುಗಳನ್ನೂ ಒಂದು ನಾಲಗೆಯನ್ನೂ ಎರಡು ತುಟಿಗಳನ್ನೂ ಕೊಟ್ಟಿಲ್ಲವೇ? ಮತ್ತು ಒಳಿತು, ಕೆಡುಕುಗಳ ಎರಡು ಸುಸ್ಪಷ್ಟ ದಾರಿಯನ್ನು ತೋರಿಸಿ ಕೊಡಲಿಲ್ಲವೇ? (ಪವಿತ್ರ ಕುರ್‍ಆನ್- 90:8,9,10).”
“ನಿಮ್ಮನ್ನು ಸೃಷ್ಟಿಸಿದವನು, ನಿಮಗೆ ಶ್ರವಣ ಹಾಗೂ ದೃಷ್ಟಿಯನ್ನು ನೀಡಿದವನು ಮತ್ತು ಚಿಂತಿಸುವ ಮನಸ್ಸುಗಳನ್ನು ನೀಡಿದವನು ಅಲ್ಲಾಹನೇ (ಪವಿತ್ರ ಕುರ್‍ಆನ್- 67:23).”
ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು, ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು (ಪವಿತ್ರ ಕುರ್‍ಆನ್- 96:4,5).” ಎಂದು ದೇವನು ಪವಿತ್ರ ಕುರ್‍ಆನ್ ನಲ್ಲಿ ನೆನಪಿಸುತ್ತಾನೆ. ಆದರೂ ಮಾನವನು ಕೃತಜ್ಞನಾಗುವುದಿಲ್ಲವೆಂದು ಅವನು ಸಾರಿದ್ದಾನೆ.
ಇತರ ಸೃಷ್ಟಿಗಳಿಗಿಂತ ಭಿನ್ನವಾಗಿ ಮಾನವನ ಶರೀರವು ಕಾರ್ಯವೆಸಗುವ ರೀತಿಯಲ್ಲಿ ದೇವನ ನಿಯಮಗಳು ಹೆಚ್ಚು ಪ್ರಕಟಗೊಳ್ಳುತ್ತದೆ. ಆದ್ದರಿಂದ ಮಾನವನ ಐಚ್ಛಿಕ ಅನುಸರಣೆಯನ್ನು ದೇವನು ಬಯಸುತ್ತಾನೆ, ಅದಕ್ಕಾಗಿಯೇ ಮಾನವನಿಗೆ ಇಚ್ಛಾಶಕ್ತಿ, ಸ್ವಾತಂತ್ರ್ಯ ಮತ್ತು ಮಾರ್ಗದರ್ಶನವನ್ನೂ ನೀಡಿರುತ್ತಾನೆ. ದೇವನು ಮನುಷ್ಯನನ್ನು ಸೃಷ್ಟಿಸಿದಾಗ ಮಾನವರು ಈ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸುತ್ತಾರೆ ಎಂಬ ಸಂದೇಹವನ್ನು ದೇವಚರರು ವ್ಯಕ್ತಪಡಿಸಿದ್ದರು ಎಂದು ಪವಿತ್ರ ಕುರ್‍ಆನ್ ವಿವರಿಸಿದೆ.
ದೇವನ ಆಜ್ಞೆಗಳನ್ನು ಬಿಟ್ಟು ಇನ್ನೇನನ್ನೂ ಅನುಸರಿಸದ ದೇವಚರರಿಗಿಂತ ಭಿನ್ನವಾಗಿ, ಮನುಷ್ಯನಿಗೆ ಇಚ್ಛಾ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅದು ಅವನ ಮಹತ್ವದ ಹೊಣೆಗಾರಿಕೆ ಕೂಡಾ ಆಗಿದೆ. ಯಾವುದೇ ವಿಷಯಗಳನ್ನು ವಿವೇಚಿಸಿ ತಿಳಿದು ಸರಿಯಾದುದನ್ನು ಮಾಡುವುದು ಅವನ ಕರ್ತವ್ಯವಾಗಿದೆ.
“ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದ್ದುದೂ ಅವರಿಗೆ ನೆಲ, ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕ್ರಷ್ಟತೆ ಕೊಡ ಮಾಡಿದ್ದುದೂ ನಮ್ಮ ಅನುಗ್ರಹವಾಗಿದೆ (ಪವಿತ್ರ ಕುರ್‍ಆನ್-17:70).”
ಮನುಷ್ಯನ ಐಚ್ಛಿಕವಾದ ಆಯ್ಕೆಗಳೇ ಅವನ ಮೌಲ್ಯವನ್ನು ನಿರ್ಣಯಿಸುತ್ತದೆ. “ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹ್ ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ (ಪವಿತ್ರ ಕುರ್‍ಆನ್-49:13).”
ಬಿಳಿಯನಿಗೆ ಕರಿಯನಿಗಿಂತ, ಅರಬನಿಗೆ ಅರಬೇತರನಿಗಿಂತ ಯಾವುದೇ ಶ್ರೇಷ್ಠತೆ ಇಲ್ಲ ಆದಮರ ಪುತ್ರರೆಂಬ ನೆಲೆಯಲ್ಲಿ ಎಲ್ಲರೂ ಸಮಾನರೆಂದು ಪ್ರವಾದಿ ಮುಹಮ್ಮದರು(ಸ) ಘೋಷಿಸಿದ್ದಾರೆ. ಜೀವನವು ಒಳಿತು ಕೆಡುಕುಗಳ ಮಧ್ಯೆ ನಡೆಸುವ ನಿರಂತರ ಯುದ್ಧವಾಗಿದೆ. ಒಳಿತು ದೈವಿಕವಾಗಿದೆ. ಕೆಡುಕು ಪೈಶಾಚಿಕವಾಗಿದೆ. ಪಿಶಾಚಿ ಮನುಷ್ಯನನ್ನು ಒಳ್ಳೆಯ ದಾರಿಯಿಂದ ವ್ಯತಿಚಲಿಸುವಂತೆ ಪ್ರಯತ್ನ ನಡೆಸುತ್ತಿರುತ್ತದೆ. ಮಾನವರ ಆಶೆ-ಆಗ್ರಹಗಳನ್ನು ಪ್ರಚೋದಿಸಿ ವಶಕ್ಕೊಳಪಡಿಸಿ ಪಿಶಾಚಿ ಅವನನ್ನು ಒಳಿತಿನಿಂದ ದೂರವಿಡುತ್ತಾನೆ. ಧಾರ್ಮಿಕವಾಗಿ ಮಾನವರಿಗೆ ಒಳಿತಿನೊಂದಿಗೆ ಇರುವ ಒಲವನ್ನೇ ಪಿಶಾಚಿ ಬುಡಮೇಲು ಮಾಡುತ್ತದೆ. ಧಾರ್ಮಿಕ ಗುಣಗಳನ್ನು ಪ್ರವಾದಿಗಳು, ಸಂತರು, ದೈವಿಕ ಗ್ರಂಥಗಳು ಉತ್ತೇಜಿಸುವಾಗ, ಪೈಶಾಚಿಕ ಶಕ್ತಿಗಳು ಅಧಾರ್ಮಿಕ ಗುಣಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತವೆ.
“ಮಾನವ ಚಿತ್ತಕ್ಕೆ ದೇವನು ಧರ್ಮ-ಅಧರ್ಮಗಳನ್ನು ಬೋಧಿಸಿರುತ್ತಾನೆ. ಮನಸ್ಸನ್ನು ಸಂಸ್ಕರಿಸಿಕೊಂಡವನು ವಿಜಯಿಯಾದನು. ಅದನ್ನು (ಅದರ ಸದ್ಭಾವನೆಗಳನ್ನು) ತುಳಿದು ಹಾಕಿದವನು ಪರಾಜಯಗೊಂಡನು”(ಪವಿತ್ರ ಕುರ್‍ಆನ್). ಮನುಷ್ಯನಿಗೆ ಭೂಲೋಕದ ಜೀವನವು ಪರೀಕ್ಷೆಯಾಗಿದೆ. ತನ್ನ ಆಶೆ-ಆಕಾಂಕ್ಷೆಗಳಿಗೆ ವಿರುದ್ಧವೇ ಆದರೂ ಧರ್ಮವನ್ನು ಎತ್ತಿ ಹಿಡಿದವರು ಶಾಶ್ವತವಾದ ಸ್ವರ್ಗದ ವಾಗ್ದಾನವನ್ನೂ, ಸ್ವಾರ್ಥಕ್ಕೆ ವಿಧೇಯರಾಗಿ ದೈವೀಕ ಪ್ರಾತಿನಿಧ್ಯವನ್ನು ನಿರಾಕರಿಸಿದವರಿಗೆ ಶಾಶ್ವತ ನರಕದ ಎಚ್ಚರಿಕೆಯನ್ನೂ ನೀಡಲಾಗಿದೆ.
ಎಲ್ಲ ಮನುಷ್ಯರು ಪಾಪಿಗಳಾಗಿ ಜನಿಸುವರು ಎಂಬ ಸಂಕಲ್ಪವನ್ನು ಇಸ್ಲಾಮ್ ನಿರಾಕರಿಸುತ್ತದೆ. ಆದಿಪಿತ ಆದಮ್‍ರು(ಅ) ದೇವನ ಆಜ್ಞೆಯನ್ನು ಮರೆತು ಧಿಕ್ಕಾರವನ್ನು ತೋರಿಸಿದ್ದರು, ಅದಕ್ಕಾಗಿ ಅವರು ಪಶ್ಚಾತ್ತಾಪ ಪಟ್ಟಾಗ ದೇವನು ಅವರನ್ನು ಕ್ಷಮಿಸಿದನು. ಭೂಮಿಯಲ್ಲಿ ಪ್ರತಿಯೊಬ್ಬ ಮನುಷ್ಯನೂ ಶುದ್ಧ ಪ್ರಕೃತಿಯಲ್ಲಿ ಜನಿಸುತ್ತಾನೆ. ಅವನು ಯಾರದೇ ಪಾಪವನ್ನು ಹೊರುವುದಿಲ್ಲ. ಮತ್ತು ಅವನ ಪಾಪವನ್ನು ಬೇರೆ ಯಾರು ಕೂಡಾ ವಹಿಸುವುದಿಲ್ಲ. ಅನ್ಯಾಯ ಅಕ್ರಮಗಳನ್ನು ಧರ್ಮ ನಿಷೇಧಿಸಿದೆ. ಜೀವವು ದೇವನ ದಾನವಾಗಿದೆ. ದೇವನಿಗೆ ಮಾತ್ರ ಅದನ್ನು ಮರಳಿ ಪಡೆಯುವ ಅಧಿಕಾರವಿದೆ. “ಓರ್ವನನ್ನು ಕೊಲೆ ಮಾಡುವುದು ಸಕಲ ಮಾನವರನ್ನು ಕೊಂದಂತೆ.” “ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ.”(ಪವಿತ್ರ ಕುರ್‍ಆನ್)
ಒಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಆತ್ಮದ ಹೊಣೆಗಾರರಾಗಿದ್ದಾರೆ. ಸ್ವಂತ ತೀರ್ಮಾನಗಳು ಮತ್ತು ಕರ್ಮಗಳು ಭೌತಿಕ ಜೀವನದ ಪರೀಕ್ಷೆಯಲ್ಲಿ ಗೆಲ್ಲುವಂತೆ ಮಾಡುವುದು ಮಾನವನ ಪರಮ ಉದ್ದೇಶವಾಗಿದೆಯೆಂದು ಇಸ್ಲಾಮ್ ಹೇಳುತ್ತದೆ. ಮನುಷ್ಯನು ಜೀವನದಲ್ಲಿ ದೇವನೊಂದಿಗೆ ಮಾತ್ರ ಪರಮ ಬಾಧ್ಯತೆಯನ್ನು ಹೊಂದಿರುತ್ತಾನೆ.