Home / ಉಪವಾಸ ವೃತ

ಉಪವಾಸ ವೃತ

ರಮಝಾನ್ ತಿಂಗಳು ಹಿಜರಿ ಶಕೆಯ 9ನೇ ತಿಂಗಳಾಗಿದೆ. ಆ ಇಡೀ ತಿಂಗಳಲ್ಲಿ ಉಪವಾಸ ವ್ರತವನ್ನು ಆಚರಿಸಬೇಕೆಂದು ಇಸ್ಲಾಮ್ ಆದೇಶಿಸಿದೆ. ವ್ರತದ ದಿವಸಗಳಲ್ಲಿ ವಿಶ್ವಾಸಿಗಳು ಪ್ರಭಾತಕ್ಕಿಂತ ಮೊದಲು ಆಹಾರವನ್ನು ಸೇವಿಸಿದರೆ ಅನಂತರ ಕತ್ತಲೆಯವರೆಗೂ ಅನ್ನಪಾನೀಯಗಳನ್ನು ಸೇವಿಸುವುದಿಲ್ಲ, ಸಂಪೂರ್ಣವಾಗಿ ತೊರೆಯುತ್ತಾರೆ. ಒಂದು ತೊಟ್ಟು ನೀರು ಕೂಡಾ ಹೊಟ್ಟೆ ಸೇರದಂತೆ ಅತ್ಯಂತ ಜಾಗ್ರತೆ ವಹಿಸುತ್ತಾರೆ. ದೇವನು ಎಲ್ಲವನ್ನು ಕಾಣುವನು ಮತ್ತು ನೋಡುವನೆಂಬ ನಂಬಿಕೆ ಮತ್ತು ಪ್ರಜ್ಞೆಗಳು ಇದಕ್ಕೆ ಕಾರಣವಾಗಿದೆ. ಇದನ್ನು ಕ್ರಿಯಾ ರೂಪದಲ್ಲಿ ಸಾಧಿಸುವುದೇ ರಮಝಾನ್ ತಿಂಗಳ ಉಪವಾಸದ ಮುಖ್ಯ ಉದ್ದೇಶವಾಗಿದೆ.

ಅಲ್ಲಾಹನು ಹೇಳುತ್ತಾನೆ: “ಓ ಸತ್ಯ ವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ನಿರ್ಬಂಧಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ನಿರ್ಬಂಧಗೊಳಿಸಲಾಗಿದೆ ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷತೆಯುಂಟಾಗುವುದೆಂದು ಆಶಿಸಲಾಗಿದೆ” (ಪವಿತ್ರ ಕುರ್ ಆನ್-2:183).

ತನ್ನ ಭಾವನೆ ವಿಚಾರಗಳನ್ನು ಮತ್ತು ಕರ್ಮಗಳನ್ನು ದೇವನು ನೋಡುತ್ತಾನೆ ಹಾಗೂ ಆಲಿಸುತ್ತಾನೆ ಎಂಬ ಪ್ರಜ್ಞೆಯು ವಿಶ್ವಾಸಿಗಳಲ್ಲಿ ಸದಾ ಸಕ್ರಿಯವಾಗಿರಲು ಉಪವಾಸವು ಒಂದು ಕ್ರಿಯಾರೂಪದ ತರಬೇತಿಯಾಗಿದೆ. ಈ ರೀತಿ ಮಾಡುವವರು ಘೋರ ಪಾಪಗಳಿಂದ ರಕ್ಷಿಸಲ್ಪಡುತ್ತಾರೆ ಮತ್ತು ಪರಿಶುದ್ಧ ಜೀವನ ನಡೆಸುವಂತೆ ಉಪವಾಸವು ಪ್ರೇರೇಪಿಸುತ್ತದೆ. ಉಪವಾಸಿಗನಿಗೆ ತೀವ್ರ ಬಾಯಾರಿಕೆಯಾದರೂ ಕೈಗೆಟಕುವಷ್ಟು ದೂರದಲ್ಲಿರುವ ನೀರನ್ನು ಕುಡಿಯಲಾರ. ಮಾತ್ರವಲ್ಲ ತೀವ್ರ ಹಸಿವಾದರೂ ಆಹಾರದೆಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ಹಗಲಿನಲ್ಲಿ ಉಪವಾಸ ಮತ್ತು ಕೆಲಸಗಳ ತೀವ್ರ ಆಯಾಸವಿದ್ದರೂ ವಿಶ್ವಾಸಿಯು ರಾತ್ರಿಯಲ್ಲಿ ದೀರ್ಘವಾಗಿ ನಿಂತು ನಮಾಝ್ ನಿರ್ವಹಿಸುತ್ತಾನೆ. ಈ ರೀತಿ ದೈಹಿಕ ಆಗ್ರಹಗಳನ್ನು ನಿಯಂತ್ರಿಸಲು, ಮೃಗೀಯ ವಾಸನೆಗಳನ್ನು ನಿಯಂತ್ರಿಸಲು, ಮಾನವೀಯತೆಯನ್ನು ಬೆಳೆಸಲು, ಮತ್ತು ಸುಸಂಸ್ಕ್ರತರಾಗಲು ಉಪವಾಸವು ಪುಷ್ಟಿ ನೀಡುವುದು.

ನಾಲಗೆಯನ್ನು ನಿಯಂತ್ರಿಸಲು ಸಾಧ್ಯವಾದವರು ಮಹಾ ಭಾಗ್ಯವಂತರಾಗಿದ್ದಾರೆ. ಉಪವಾಸ ಅದಕ್ಕೆ ಬೇಕಾದ ತರಬೇತಿ ನೀಡುತ್ತದೆ. ಇತರರಿಂದ ತೀಕ್ಷ್ಣವಾದ ತೆಗಳಿಕೆಯನ್ನೇ ಕೇಳಿದರೂ ಉಪವಾಸಿಗನು ಕೋಪಿಸಿಕೊಳ್ಳಬಾರದು ಹಾಗೂ ನಾನು ಉಪವಾಸದಲ್ಲಿದ್ದೇನೆ ಎಂದು ಮಾತ್ರ ಹೇಳಿ ಅಲ್ಲಿಂದ ಸರಿಯಬೇಕು ಎಂದು ಪ್ರವಾದಿವರ್ಯರು(ಸ) ಆದೇಶಿಸಿರುತ್ತಾರೆ. ನಾಲಗೆಯನ್ನು ನಿಯಂತ್ರಿಸದೆ ವಿವಾದ ಮುಂದುವರಿಸುವುದು ಉಪವಾಸವನ್ನು ನಿಷ್ಫಲಗೊಳಿಸುವುದೆಂದು ಅವರು ಎಚ್ಚರಿಸಿದ್ದಾರೆ. ಇದನ್ನು ಅನುಸರಿಸದವರ ಉಪವಾಸವು ಜೀವವಿಲ್ಲದ ಕೇವಲ ಆಚಾರ ಮಾತ್ರವಾಗಿದೆಯಷ್ಟೆ.

ನಾವೆಲ್ಲರೂ ಯಾವಾಗಲೂ ನಮ್ಮ ಕೈ, ಕಾಲು, ಕಣ್ಣು, ಕಿವಿಯೆಂದು ಹೇಳುತ್ತಿರುತ್ತೇವೆಯಷ್ಟೇ ಆದರೆ ಸೂಕ್ಷ್ಮವಾಗಿ ನೋಡಿದರೆ ಅದಾವುದೂ ನಮ್ಮದಲ್ಲ. ನಮ್ಮದಾಗಿದ್ದರೆ ಅದಕ್ಕೆ ರೋಗವೂ, ನಿಶ್ಶಕ್ತಿಯೋ, ಮರಣವೋ ಬಾಧಿಸುತ್ತಿರಲಿಲ್ಲ. ಆದುದರಿಂದ ನಮ್ಮ ಶರೀರದ ಅವಯವಗಳು, ಪ್ರಾಣ, ಬದಕು ಈ ಎಲ್ಲವೂ ಅಲ್ಲಾಹನದ್ದಾಗಿವೆ. ಆದುದರಿಂದ ಅವುಗಳ ಮತ್ತು ನಮ್ಮ ಮೇಲಿನ ಮಾಲಕತ್ವದ ಹಕ್ಕು ಅಲ್ಲಾಹನದ್ದಾಗಿದೆ. ನಮಗೆ ಅದನ್ನು ಉಪಯೋಗಿಸುವ ಅನುಮತಿ ಮಾತ್ರ ಇರುವುದು. ಅದು ಅಲ್ಲಾಹನು ಸೂಚಿಸಿದ ಮಾರ್ಗದಲ್ಲಿ ಆಗಿರಬೇಕು. ಈ ಪ್ರಜ್ಞೆಯನ್ನು ಬೆಳೆಸುವುದರಲ್ಲಿ ಮತ್ತು ಅದನ್ನು ಉಳಿಸಿಕೊಳ್ಳುವುದರಲ್ಲಿ ಉಪವಾಸವು ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಅಲ್ಲಾಹನು ಉಪವಾಸದ ವೇಳೆ ಹೇಗೆ ಆಹಾರ ಸೇವಿಸಬೇಕೆಂದು ಸೂಚಿಸಿದಂತೆ ಉಪವಾಸಿಗನು ತನ್ನ ನಿತ್ಯ ರೂಢಿಗೆ ವಿರುದ್ಧವಾಗಿ ಪ್ರಭಾತಕ್ಕೆ ಮೊದಲೇ ತಿನ್ನುವುದು ಮತ್ತು ಕುಡಿಯುವುದನ್ನು ಮಾಡುತ್ತಾರೆ. ಅನಂತರ ಸೂರ್ಯ ಅಸ್ತಮಿಸುವವರೆಗೆ ಅನ್ನ ಪಾನೀಯಗಳನ್ನು ಸಂಪೂರ್ಣವಾಗಿ ತೊರೆದು ಹಸಿವು ಬಾಯಾರಿಕೆಗಳನ್ನು ಸಹಿಸುತ್ತಾರೆ. ಈ ರೀತಿ ತನ್ನ ಶರೀರವು ಸ್ವೇಚ್ಛೆಯಂತೆ ಉಪಯೋಗಿಸಲಿಕ್ಕಿರುವುದಲ್ಲ ಎಂದೂ ಅದನ್ನು ನೀಡಿರುವ ದೇವನ ವಿಧಿ ನಿಷಿದ್ಧಗಳಂತೆ ಮಾತ್ರ ಅದನ್ನು ಬಳಸಬೇಕಾಗಿದೆ ಎಂದು ವಿಶ್ವಾಸಿಗೆ ಸ್ವಯಂ ಅರ್ಥವಾಗುತ್ತದೆ.

ರಮಝಾನ್ ತಿಂಗಳು ಪವಿತ್ರ ಕುರ್ ಆನ್ ಅವತೀರ್ಣವಾಗಿರುವ ತಿಂಗಳಾದ್ದರಿಂದ ಆ ತಿಂಗಳಲ್ಲಿ ಉಪವಾಸವನ್ನು ಕಡ್ಡಾಯಗೊಳಿಸಲಾಯಿತು. ಇದು ಉಪವಾಸಿಗರನ್ನು ಪವಿತ್ರ ಕುರ್ ಆನ್ ಹೆಚ್ಚು ನಿಕಟಗೊಳಿಸುತ್ತದೆ. ಆದ್ದರಿಂದಲೇ ಇತರೆಲ್ಲ ದಿನಗಳಿಗಿಂತ ರಮಝಾನ್ ನಲ್ಲಿ ಕುರ್ ಆನ್ ಪಾರಾಯಣ ಮತ್ತು ಅಧ್ಯಯನಕ್ಕೆ ಹೆಚ್ಚಿನ ಆಸಕ್ತಿಯನ್ನು ತೋರಿಸಲಾಗುತ್ತದೆ. ಅದು ವಿಶ್ವಾಸಿಗಳನ್ನು ಪಶ್ಚಾತ್ತಾಪ, ಪ್ರಾರ್ಥನೆ, ಪಾಪ ವಿಮೋಚನೆ, ದೇವನ ಕೀರ್ತನೆಗಳಿಗೆ ಪ್ರೇರೇಪಿಸುತ್ತದೆ.

ನಾವು ಜೀವಿಸುವ ಲೋಕದಲ್ಲಿ ಬಡವರೂ ಶ್ರೀಮಂತರೂ ಇದ್ದಾರೆ. ಸಾಮಾನ್ಯ ಜೀವನದಲ್ಲಿ ಒಮ್ಮೆಯೂ ಅವರು ಹಸಿವು ಬಾಯಾರಿಕೆಯನ್ನು ಅನುಭವಿಸದಿರಬಹುದು. ಆದರೆ ರಮಝಾನಿನಲ್ಲಿ ಅವರು ಇತರರಂತೆ 14,15 ಗಂಟೆಗಳ ಕಾಲ ಹಸಿವು ಬಾಯಾರಿಕೆಗಳನ್ನು ಅನುಭವಿಸಬೇಕಾಗುವುದು. ಸುದೀರ್ಘವಾದ ಒಂದು ತಿಂಗಳ ಕಾಲ ಅವರ ಈ ಸ್ಥಿತಿಯು ಮುಂದುವರಿಯುವುದು. ಲೋಕದಾದ್ಯಂತವಿರುವ ನೂರು ಕೋಟಿ ಮನುಷ್ಯರು 30 ದಿನಗಳ ಕಾಲ ಇದೇ ಸ್ಥಿತಿಯಲ್ಲಿ ಕಾಲ ಕಳೆಯುವುದು ಅತ್ಯದ್ಭುತ ಮತ್ತು ಮಹತ್ತರವಾಗಿದೆ. ಬೇರೆ ಯಾವ ಜನ ವಿಭಾಗದಲ್ಲಿಯೂ ಇದಕ್ಕೆ ಸಮಾನವಾದ ಪದ್ಧತಿಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಶ್ರೀಮಂತರು ಬಡವರಂತೆ ಹಸಿವು ಬಾಯಾರಿಕೆಗಳನ್ನು ಅನುಭವಿಸುವುದರಿಂದ ಅವರು ಅತೀ ಹೆಚ್ಚು ಉದಾರರಾಗಿ ಮಾರ್ಪಡುತ್ತಾರೆ. ಕಷ್ಟ ಅನುಭವಿಸುತ್ತಿರುವವರೊಡನೆ ಅವರು ಹೆಚ್ಚು ಉದಾರತೆಯಿಂದ ನಡೆದುಕೊಳ್ಳುವರು. ಅವರೊಡನೆ ಹೆಚ್ಚು ಕರುಣೆ, ದಯೆ, ಸಹಾನುಭೂತಿಯುಳ್ಳವರಾಗುವರು. ರಮಝಾನ್ ತಿಂಗಳು ದಾನ ಧರ್ಮದ ತಿಂಗಳೆನಿಸುವುದಕ್ಕೆ ಇದುವೇ ಕಾರಣವಾಗಿದೆ.

ರಮಝಾನ್ ಸಮಾವೇಶದ ಕಾಲವಾಗಿದೆ. ಸಾಮಾನ್ಯವಾದ ಆರ್ಥಿಕ ಸಾಮರ್ಥ್ಯವಿರುವವರು ಕೂಡಾ ಮಿತ್ರರನ್ನು, ಕುಟುಂಬದವರನ್ನು ಕರೆಯಿಸಿ ಉಪವಾಸ ಪಾರಣೆ ಮಾಡಿಸುತ್ತಾರೆ. ಸಾಮುಹಿಕ ನಮಾಝ್‍ನ್ನು ನೆರೆವೇರಿಸಲು ಬೇರೆಲ್ಲ ಕಾಲಕ್ಕಿಂತ ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತಾರೆ. ರಾತ್ರಿಯ ನಮಾಝ್‍ಗೆ ಸ್ತ್ರೀಯರು ಮಕ್ಕಳು ಸಹಿತ ಎಲ್ಲರೂ ಮಸೀದಿಗೆ ತಲುಪುತ್ತಾರೆ. ಈ ರೀತಿ ಉಪವಾಸ ಅವರ ಪ್ರೇಮಪೂರ್ವಕ ಸಮಾವೇಶಕ್ಕೆ ದಾರಿ ಒದಗಿಸುತ್ತದೆ. ಸಂಬಂಧ ಸೌಹಾರ್ದಗಳನ್ನು ದೃಢಗೊಳಿಸುವ ಸಾಮುಹಿಕ ಪ್ರಜ್ಞೆಯೊಂದಿಗೆ ಜೀವಿಸಲು ಅದು ಪ್ರೇರೇಪಿಸುತ್ತದೆ. ಈ ರೀತಿ ರಮಝಾನ್ ನ ಉಪವಾಸ ವಿಶ್ವಾಸಿಗಳನ್ನು ಶಕ್ತರನ್ನಾಗಿಯೂ, ಭಕ್ತರನ್ನಾಗಿಯೂ ಪರಿವರ್ತಿಸುತ್ತದೆ. ವಿನಯವಂತರು, ಪರಿಶುದ್ಧರನ್ನಾಗಿಸುವುದು. ಕರುಣೆಯಿರುವವರನ್ನಾಗಿಯು, ಉದಾರರನ್ನಾಗಿಯು ಮಾಡುವುದು. ತ್ಯಾಗಿಗಳನ್ನಾಗಿಸುವುದು. ಸಮರ್ಪಣೆಗೆ ಸಿದ್ಧಗೊಳಿಸುವುದು. ಸಾಮುಹಿಕ ಪ್ರಜ್ಞೆ, ಸಮಾನತೆಯ ಭಾವನೆಯಿರುವವರನ್ನಾಗಿಸುವುದು. ಅದು ಅವರ ನಂತರದ ಜೀವನದುದ್ದಕ್ಕೂ ಮುಂದುವರಿಯಬೇಕಾಗಿದೆ. ಆಗಲೇ ಉಪವಾಸ ಅರ್ಥಪೂರ್ಣವೂ, ಫಲಪ್ರದವೂ ಪರಲೋಕದಲ್ಲಿ ಪ್ರತಿಫಲಕ್ಕೆ ಅರ್ಹವೂ ಆಗುವುದು.

SHARE THIS POST VIA