ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ನಗರದ ಮದೀನ ಮಸ್ಟಿದ್ ಹಾಗೂ ಜಮಾಅತೆ ಇಸ್ಲಾಮಿಕ್ ಹಿಂದ್ ಸಹಯೋಗದಲ್ಲಿ ಮದೀನ ಮಸ್ಜಿದ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
” ಭಗವಂತನ ಜತೆಯಲ್ಲಿ ಅನುಸಂಧಾನ ಹೊಂದುವುದೇ ಧರ್ಮವಾಗಿದೆ. ಭಗವಂತನೇ ಮೂಲ ಎಂಬುದನ್ನು ಮುಸ್ಲಿಂ ಧರ್ಮ ಹೇಳುತ್ತದೆ. ದೇವರ ಕಲ್ಪನೆ ಹೊಂದಿರುವ ಮಸೀದಿ ಕೂಡ ಒಂದು ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ಪ್ರತಿದಿನ ಎಲ್ಲರೂ ಪ್ರವೇಶ ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಿದಾಗ ಇದರ ಮೇಲೆ ಇರುವ ಅಪನಂಬಿಕೆಗಳು ದೂರವಾಗುತ್ತವೆ,” ಎಂದರು.
”ಜನರಲ್ಲಿ ಮಸೀದಿ ಮೇಲಿರುವ ತಪ್ಪು ಕಲ್ಪನೆಗಳು ದೂರವಾಗಬೇಕು ಎಂದರೆ ಶಿಕ್ಷಣ ಅಗತ್ಯವಾಗಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಂಡರೆ, ಎಲ್ಲಾ ಧರ್ಮಗಳ ಬಗ್ಗೆ ತಿಳಿದುಕೊಳ್ಳಲು ಶಿಕ್ಷಣದಿಂದ ಸಾಧ್ಯವಾಗುತ್ತದೆ. ವಂಚಿತರಾದಾಗ ತಪ್ಪು ಸಂದೇಶಗಳು ರವಾನೆಯಾಗುತ್ತದೆ ಎಂದರು.
ವಿಶ್ವದಲ್ಲಿರುವ ಆರಾಧನಾ ಕೇಂದ್ರಗಳು ಮನುಷ್ಯರನ್ನು ಪರಸ್ಪರ ಸೌಹಾರ್ದಯುತವಾಗಿ ಜೋಡಿಸುವ ಹಾಗೂ ಅಂಧಕಾರದಿಂದ ಬೆಳಕಿನೆಡೆಗೆ ಕರೆತರುವ ಕೇಂದ್ರಗಳಾಗಬೇಕಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞಿ ಹೇಳಿದರು.
ಮಸೀದಿಗಳ ಬಗ್ಗೆ ಸಮಾಜದಲ್ಲಿ ಬಹಳ ತಪ್ಪುಕಲ್ಪನೆಗಳಿವೆ. ಅದನ್ನು ಹೋಗಲಾಡಿಸಲು ಅಲ್ಲಿಗೆ ಭೇಟಿ ನೀಡಿ ಅಲ್ಲಿ ಯಾವುದೇ ನಿಗೂಢತೆ ಇರುವುದಿಲ್ಲ ಎಂಬುದನ್ನು ಮನಗಾಣಬಹುದು. ಮಸೀದಿ ಎಂಬುದು ದೇವರನ್ನು ಆರಾಧಿಸುವ, ಆರಾಧಿಸಲು ಇರುವ ಸ್ಥಳವಾಗಿದೆ. ಮಸೀದಿಗೆ ಹಿಂದೂಗಳು ಹೋಗುವ, ಮಂದಿರಗಳಿಗೆ ಮುಸ್ಲಿಮರು ಹೋಗುವ, ಚರ್ಚ್ ಗಳಿಗೆ ಹಿಂದೂ, ಮುಸ್ಲಿಮರು ಹೋಗುವ ಪರಿಸರ ನಿರ್ಮಾಣವಾಗಬೇಕು ಎಂದರು.
ಮನುಷ್ಯರಿಗೆ ಯಾವುದೇ ಒಂದು ಧರ್ಮದ ಅಥವಾ ಸಂಸ್ಕೃತಿಯ ಬಗ್ಗೆ ಅರಿವಿಲ್ಲದಿದ್ದರೆ ಅವುಗಳ ವೈರಿಯಾಗುತ್ತಾರೆ. ಮಸೀದಿಗಳು ನಿಗೂಢತೆಗಳಿಲ್ಲದ ಸ್ಥಳವಾಗಿದೆ. ಮನುಷ್ಯರನ್ನು ಸಮಾನರೆಂದು ತೋರಿಸಿಕೊಡುವ ಸ್ಥಳ. ಎಲ್ಲ ಮನುಷ್ಯರನ್ನು ಜೋಡಿಸುವ ಕೇಂದ್ರ ಸ್ಥಾನವಾಗಿದೆ. ಸಮಾಜದಲ್ಲಿ ಮಸೀದಿ ಬಗ್ಗೆ ತಲೆದೊರಿರುವ ತಪ್ಪುಕಲ್ಪನೆಯನ್ನು ಹೋಗಲಾಡಿಸಲು ಪ್ರತಿಯೊಬ್ಬ ಮನುಷ್ಯನಿಗೂ ತಿಳಿವಳಿಕೆ ಮೂಡಿಸುವ ಹಾಗೂ ಶಾಂತಿಯುತ ಸಮಾಜವನ್ನು ನಿರ್ಮಿಸುವ ಸಲುವಾಗಿ ಮತ್ತು ಅಪಪ್ರಚಾರಗಳಿಂದ ದೂರವಾಗಲು ಪ್ರತಿಯೊಬ್ಬರಲ್ಲೂ ಶಾಂತಿ, ಸಹಬಾಳ್ವೆ ನೆಲೆಸುವಂತೆ ಮಾಡಲು ಮಸ್ಟಿದ್ ದರ್ಶನ ಸಹಕಾರಿಯಾಗಿದೆ ಎಂದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ”ಕೇವಲ ನಾವು ಮಾನವರಾದರೆ ಸಾಲದು, ಒಳ್ಳೆಯ ಮನುಷ್ಯರಾಗಬೇಕು. ಆಗ ಮಾತ್ರ ನಾವು ಮನುಷ್ಯರಾಗಿದ್ದಕ್ಕೂ ಸಾರ್ಥಕವಾಗುತ್ತದೆ. ಮಸೀದಿ ಎಂದರೆ ಇರುವ ಕೆಟ್ಟ ಭಾವನೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು,” ಎಂದರು.
ಸಾರ್ವಜನಿಕ ಮಸ್ಟಿದ್ ದರ್ಶನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ಎಲ್ಲಾ ಸಮುದಾಯದವರು ಮಸೀದಿಗೆ ತೆರಳಿ ವೀಕ್ಷಣೆ ಮಾಡಿದರು. ಮುಸ್ಲಿಂ ಧರ್ಮಗುರುಗಳಿಂದ ಮಸೀದಿಯಲ್ಲಿ ನಡೆಯುವ ನಮಾಝ್ ಸೇರಿದಂತೆ ಇತರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಸೀದಿಯ ಒಳ ಹೋಗುತ್ತಿದ್ದಂತೆ ಆತ್ಮೀಯವಾಗಿ ಬರಮಾಡಿಕೊಂಡು ಮುಸ್ಲಿಮರು ಮಸೀದಿಯ ಒಳಗಿರುವ ವಿಶೇಷತೆಗಳನ್ನು ವಿವರಿಸಿ ಮಾಹಿತಿ ಹಂಚಿಕೊಂಡರು. ಬಳಿಕ ಪ್ರವಾದಿ ಮುಹಮ್ಮದ್ ಸಂಬಂಧ ಪುಸ್ತಕಗಳನ್ನು ನೀಡಿದರು. ಹಿಂದೂ ಧರ್ಮದ ಮಹಿಳೆಯರು, ಸಾರ್ವಜನಿಕರು ಮಸೀದಿಗೆ ಆಗಮಿಸಿ ಮಸೀದಿ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ, ದಾರುಲ್ ಕಝಾ ಖಾಝಿ ಮೌಲಾನಾ ಮುಫ್ತಿ ಜಾಫರ್ ಹುಸೇನ್ ಖಾಸ್ಮಿ, ಸಂತಪಾಲ ಚರ್ಚ್‌ನ ಫಾದರ್ ಅಂಥೋನಪ್ಪ ಚಾಮರಾಜೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ, ಭಾರದ್ವಾಜ್, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ರಾಜಯೋಗಿನಿ ವಾಣಿಶ್ರೀ, ಡಿವೈಎಸ್ಪಿ ಲಕ್ಷ್ಮಯ್ಯ, ಮದೀನ ಮಸೀದಿಯ ಅಧ್ಯಕ್ಷ ನಯೀಮ್ ಉಲ್ ಹಕ್, ಇಮಾಮ್ ಹಾಫಿಝ್ ಮುಕ್ತಾರ್ ಅಹ್ಮದ್, ಕಾಯದರ್ಶಿ ವಸೀಮ್ ಪಾಷ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಪ್ರವಾದಿ ಅವರ ಜೀವನ ಚರಿತ್ರೆ ಕುರಿತು ಪುಸ್ತಕವನ್ನು ಅನಾವರಣಗೊಳಿಸಲಾಯಿತು.