Home / ಗುಮಾನಿಗಳಿಂದ ದೂರವಿರಿ

ಗುಮಾನಿಗಳಿಂದ ದೂರವಿರಿ

ವಿಶ್ವವಿಖ್ಯಾತ ಸಾಹಿತಿಯಾದ ದಸ್ತಯೋವ್‍ಸ್ಕಿಯವರ ಆಪ್ತಮಿತ್ರರ ಪೈಕಿ ತುರ್ಗನೇವ್ ಓರ್ವರಾಗಿದ್ದರು. ಒಮ್ಮೆ ತುರ್ಗನೇವ್‍ರ ಮನೆಯಲ್ಲಿ ಹಲವು ಗೆಳೆಯರು ಇಸ್ಪೀಟ್ ಆಡುತ್ತಿದ್ದರು. ದಸ್ತಯೋಸ್ಕಿಯವರು ಸ್ವಲ್ಪ ತಡವಾಗಿ ಅಲ್ಲಿಗೆ ತಲಪಿದರು. ಆಗ ಆ ಗೆಳೆಯರು ಯಾರೋ ಓರ್ವ ಗೆಳೆಯನ ಆಲಸ್ಯತನದ ಬಗ್ಗೆ ಪ್ರಸ್ತಾಪಿಸಿ ನಗುತ್ತಿದ್ದರು. ಇದನ್ನು ಕಂಡು ದಸ್ತಯೋವ್‍ಸ್ಕಿಯವ ಮನದಲ್ಲಿ ಅವರು ತನ್ನನ್ನು ಗೇಲಿ ಮಾಡುತ್ತಿದ್ದಾರೆ ಎಂಬ ಗುಮಾನಿ ಮೂಡಿತು. ಅವರು ಒಂದಕ್ಷರವನ್ನೂ ಮಾತನಾಡದೆ ಅಲ್ಲಿಂದ ಹೊರಟು ಹೋದರು ತುರ್ಗನೇವ್ ಹಿಂದೆಯೇ ಹೋಗಿ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಅಂದಿನವರೆಗೆ ಆಪ್ತಮಿತ್ರರಾಗಿದ್ದ ಅವರು ಜೀವನಾಂತ್ಯದವರೆಗೆ ಕೋಪ, ಮನಸ್ತಾಪದೊಂದಿಗೇ ಬದುಕಿದರು.

ಗುಮಾನಿಯು ಗಂಭೀರವಾದ ಆಪತ್ತುಗಳಿಗೆ ಕಾರಣವಾಗುತ್ತದೆ. ಅದು ಸ್ನೇಹಿತರನ್ನು ಪರಸ್ಪರ ಬೇರ್ಪಡಿಸುತ್ತದೆ. ಆಪ್ತ ಮಿತ್ರರನ್ನು ಬದ್ಧ ವೈರಿಗಳನ್ನಾಗಿಸುತ್ತದೆ. ಸಮಾಜದಲ್ಲಿ ದ್ವೇಷ, ವೈರತ್ವದ ವಿಷ ಬೀಜಗಳನ್ನು ಬಿತ್ತುತ್ತದೆ.

ಈ ಆಧುನಿಕ ಸಮಾಜದಲ್ಲಿ ನಡೆಯುವ ಹಲವಾರು ಅವಾಂತರಗಳಿಗೆ ಕಾರಣ ಗುಮಾನಿಯಾಗಿದೆ. ಪತಿ-ಪತ್ನಿಯರ ಮಧ್ಯೆ ತಪ್ಪು ತಿಳುವಳಿಕೆಗಳನ್ನು ಮೂಡಿಸುವುದರಲ್ಲಿಯೂ ಅವರನ್ನು ಪರಸ್ಪರ ಬೇರ್ಪಡಿಸುವುದರಲ್ಲಿಯೂ ಅದು ಮಹತ್ತರ ಪಾತ್ರ ವಹಿಸುತ್ತದೆ. ನೆರೆಮನೆಯವರು ಪರಸ್ಪರ ಹಗೆತನ ಸಾಧಿಸಲೂ ಪರಸ್ಪರ ಬಡಿದಾಡಲೂ ಗುಮಾನಿಯು ಕಾರಣವಾಗಿದೆ. ಇಂದು ಸಂಭವಿಸುತ್ತಿರುವ ಹಲವಾರು ಕಲಹಗಳಿಗೂ ಕ್ಷೋಭೆಗಳಿಗೂ ಇದು ದಾರಿ ಮಾಡಿಕೊಟ್ಟಿದೆ. ಜನಾಂಗೀಯ ಕಲಹಗಳಿಗೂ ಕೋಮು ಹಿಂಸೆಗಳಿಗೂ ಹೆಚ್ಚಿನ ವೇಳೆ ಊಹಾಪೋಹಗಳೇ ವೇದಿಕೆ ಒದಗಿಸುತ್ತವೆ. ಆದ್ದರಿಂದ ಇಸ್ಲಾಮ್ ಗುಮಾನಿಯನ್ನು ತೀವ್ರವಾಗಿ ವಿರೋಧಿಸಿದೆ.

ಕುರ್‍ಆನ್ ಹೇಳುತ್ತದೆ,
“ಸತ್ಯವಿಶ್ವಾಸಿಗಳೇ, ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ, ಕೆಲವು ಗುಮಾನಿಗಳು ಪಾಪವಾಗಿದೆ. ದೋಷಾನ್ವೇಷಣೆ ಮಾಡದಿರಿ. ನಿಮ್ಮಲ್ಲಿ ಯಾರೂ ಯಾರ ಬಗ್ಗೆಯೂ ಪರದೂಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಇಷ್ಟಪಡುವನೇ? ನೀವು ಸ್ವತಃ ಇದನ್ನು ಅಸಹ್ಯ ಪಡುತ್ತೀರಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾನಿಧಿಯೂ ಆಗಿರುತ್ತಾನೆ.” (ಅಲ್ ಹುಜುರಾತ್: 12)

“ನಿಮಗೆ ಜ್ಞಾನವಿಲ್ಲದಂತಹ ವಸ್ತುಗಳನ್ನು ಬೆಂಬತ್ತಬೇಡಿರಿ. ನಿಶ್ಚಯವಾಗಿಯೂ ಶ್ರವಣ, ದೃಷ್ಟಿ ಮತ್ತು ಮನಸ್ಸು ಇವೆಲ್ಲವುಗಳ ವಿಚಾರಣೆ ನಡೆಯಲಿದೆ.” (ಇಸ್ರಾಅï: 36)
ಪ್ರವಾದಿ(ಸ) ಹೇಳಿದ್ದಾರೆ, “ನೀವು ಗುಮಾನಿಯ ಬಗ್ಗೆ ಎಚ್ಚರ ವಹಿಸಿರಿ. ಗುಮಾನಿಯು ಅತ್ಯಂತ ಸುಳ್ಳಾದ ಮಾತಾಗಿದೆ.”

ಯಾವುದೇ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವಾಗ ಅದು ಲಭ್ಯ ಪುರಾವೆಗಳ ಹಾಗೂ ಪ್ರತ್ಯಕ್ಷ ವಾಸ್ತವಿಕತೆಗಳ ಆಧಾರದಲ್ಲಾಗಿರಬೇಕು. ರಹಸ್ಯವಾದಂತಹ ವಿಚಾರಗಳಿಗೆ ಸಂಬಂಧಿಸಿ ಗುಮಾನಿ ಹೊಂದಿ ಅದರ ಆಧಾರದಲ್ಲಿ ಒಂದು ತೀರ್ಮಾನಕ್ಕೆ ಬರುವುದು ಸರಿಯಲ್ಲ. ಈ ವಿಚಾರದಲ್ಲಿ ಉಮರುಲ್ ಫಾರೂಕ್(ರ) ಹೀಗೆ ಪ್ರಸ್ತಾಪಿಸಿದ್ದಾರೆ,

“ಪ್ರವಾದಿಯವರ(ಸ) ಕಾಲದಲ್ಲಿ ಜನರು ವಹ್ಯ್ ನ ಆಧಾರದಲ್ಲಿ ಎಲ್ಲವನ್ನೂ ತೀರ್ಮಾನಿಸುತ್ತಿದ್ದರು. ಈಗ ವಹ್ಯ್ ಕೊನೆಗೊಂಡಿದೆ. ಆದ್ದರಿಂದ ನಾವು ನಿಮ್ಮನ್ನು ಅನುಸರಿಸುವುದು ನಿಮ್ಮ ಪ್ರತ್ಯಕ್ಷ ಚಟುವಟಿಕೆಗಳ ಹೆಸರಿನಲ್ಲಾಗಿದೆ. ಆದ್ದರಿಂದ ಯಾರದ್ದಾದರೂ ಒಳಿತು ಪ್ರಕಟಗೊಳ್ಳುವುದಿದ್ದರೆ ನಾವು ಅವರ ಮೇಲೆ ವಿಶ್ವಾಸ ತಾಳುತ್ತೇವೆ ಮತ್ತು ಅವರನ್ನು ಆಪ್ತರನ್ನಾಗಿ ಸ್ವೀಕರಿಸುತ್ತೇವೆ. ಅವರ ರಹಸ್ಯ ಏನೆಂಬುದು ನಮಗೆ ಅನ್ವಯವಾಗುವುದಿಲ್ಲ. ಅವರ ಖಾಸಗಿ ವಿಚಾರಗಳ ಬಗ್ಗೆ ವಿಚಾರಣೆ ನಡೆಸುವುದು ಅಲ್ಲಾಹನಾಗಿದ್ದಾನೆ ಮತ್ತು ಅದಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ. ಇನ್ನು ಯಾರಲ್ಲಾದರೂ ಕೆಡುಕು ಪ್ರಕಟವಾಗುವುದಾದರೆ ನಾವು ಅವರನ್ನು ನಂಬುವುದಿಲ್ಲ ಮತ್ತು ಅವರಿಗೆ ಅಭಯ ನೀಡುವುದಿಲ್ಲ. ಆತ ತನ್ನ ರಹಸ್ಯ ಹಾಗೂ ಖಾಸಗಿತನವು ಉತ್ತಮವೆಂದು ಹೇಳಿಕೊಂಡರೂ ಸರಿಯೇ.”

ಇತರರ ಕುರಿತಾದ ತಪ್ಪು ತಿಳುವಳಿಕೆಗಳು ಹಲವು ಸಂದರ್ಭಗಳಲ್ಲಿ ಕೆಟ್ಟ ಗುಮಾನಿಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಸಮಾಜದ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿದವರು ಇತರರನ್ನು ಅಪೇಕ್ಷಿಸಿ ತಪ್ಪು ತಿಳುವಳಿಕೆಗಳಿಂದಲೂ ಕೆಟ್ಟ ಗುಮಾನಿಗಳಿಂದಲೂ ಮುಕ್ತರಾಗಿರುತ್ತಾರೆ. ಇತರರ ಬಗ್ಗೆ ಮನಸ್ಸಿನಲ್ಲಿ ಸಂಶಯ ಪಡುತ್ತಾ ಬದುಕುವವರು ಕೇಳಿದ್ದೆಲ್ಲವೂ ನಮ್ಮ ವಿರುದ್ಧವಾಗಿದೆ ಎಂದು ಗುಮಾನಿ ಪಟ್ಟುಕೊಳ್ಳುತ್ತಾರೆ. ಎಲ್ಲಾ ಸಂಭಾಷಣೆಗಳು ತನ್ನ ವಿರುದ್ಧ ನಡೆಸುವ ಗೂಢಾಲೋಚನೆ ಎಂದು ತಪ್ಪು ತಿಳಿದುಕೊಳ್ಳುತ್ತಾರೆ. ಎಲ್ಲಾ ನಗುಗಳನ್ನೂ ತನ್ನ ವಿರುದ್ಧದ ಪರಿಹಾಸ್ಯಗಳೆಂದು ಪರಿಗಣಿಸುತ್ತಾರೆ. ಹಾಗೆ ಇತರರ ಹಾವ ಭಾವಗಳು, ಮಾತುಕತೆಗಳು, ವರ್ತನೆಗಳು ತನ್ನ ವಿರುದ್ಧವಾಗಿವೆ ಎಂದು ಗುಮಾನಿ ಹೊಂದುತ್ತಾನೆ. ಇದು ದೊಡ್ಡ ಅನಾಹುತಗಳಿಗೆ ಹೇತುವಾಗುತ್ತದೆ. ಆದ್ದರಿಂದ ಸಮಾಜದ ಬಗ್ಗೆ ಉತ್ತಮ ಅಭಿಪ್ರಾಯ ತಾಳಬೇಕು ಎಂದು ಪ್ರವಾದಿ(ಸ) ಕಲಿಸಿದ್ದಾರೆ.

ಇಸ್ಲಾವಿೂ ಸಮಾಜದಲ್ಲಿ ಬದುಕುವವರು ಶುದ್ಧ ಮನಸ್ಕರೂ ಪರಸ್ಪರ ನಂಬಿಕೆ ಹೊಂದಿದವರೂ ಆಗಿರಬೇಕು. ಅನಗತ್ಯ ಗುಮಾನಿ, ಪರಸ್ಪರ ಅಪನಂಬಿಕೆ, ದುಷ್ಟ ಚಿಂತನೆಗಳು ಮೊದಲಾದ ಕೆಟ್ಟ ಸ್ವಭಾವಗಳನ್ನು ತ್ಯಜಿಸಬೇಕಾಗಿದೆ.

ಆದರೂ ಮನಸ್ಸನ್ನು ಎಲ್ಲಾ ವಿಧದ ಗುಮಾನಿಗಳಿಂದ ಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವಾಗಬೇಕೆಂದೇನಿಲ್ಲ. ಹಲವು ರೀತಿಯ ಸಂಶಯಗಳೂ ಗುಮಾನಿಗಳೂ ಮನಸ್ಸಿಗೆ ಪ್ರವೇಶಿಸುತ್ತಿರಬಹುದು. ಇಂತಹ ಸಾಧ್ಯತೆ ಇರುವುದರಿಂದಲೇ ಇಸ್ಲಾಮ್, ಗುಮಾನಿಗಳಿಗೆ ಒಳಗಾಗಿ ಅದರ ಹಿಂದೆ ಬೀಳಬಾರದೆಂದು ಹೇಳಿದೆ. ಪ್ರವಾದಿ(ಸ) ಹೇಳಿದ್ದಾರೆ, “ನೀನು ಗುಮಾನಿ ಪಟ್ಟುಕೊಳ್ಳುವುದಾದರೆ ಅದನ್ನು ಸತ್ಯವೆಂದು ಭಾವಿಸಬಾರದು.”

ಕೇಳಿದ್ದೆಲ್ಲವನ್ನೂ ನಂಬಿ ಅವುಗಳನ್ನು ಪ್ರಚಾರ ಪಡಿಸಿ ಅವುಗಳ ಆಧಾರದಲ್ಲಿ ತೀರ್ಮಾನ ಕೈಗೊಳ್ಳುವುದು ಗುಮಾನಿಗಳ ಸಾಲಿಗೆ ಸೇರಿದೆ. ಆದ್ದರಿಂದ ಕೇಳಿದ್ದೆಲ್ಲವನ್ನು ಪ್ರಚಾರ ಪಡಿಸುವುದರ ಕುರಿತು ಪ್ರವಾದಿಯವರು(ಸ) ಹೀಗೆಂದಿದ್ದಾರೆ, “ಕೇಳಿದ್ದೆಲ್ಲವನ್ನು ಪ್ರಚಾರಪಡಿಸುವುದು ಸುಳ್ಳಾಗಿ ಮಾರ್ಪಡುತ್ತದೆ.”

ಮನಸ್ಸನ್ನು ಸಂಸ್ಕರಿಸುವುದಕ್ಕಾಗಿ ಗುಮಾನಿಯನ್ನು ಸಾಧ್ಯವಾದಷ್ಟು ತ್ಯಜಿಸಬೇಕಾಗಿದೆ. ಇನ್ನು ಮನಸ್ಸಿಗೆ ಗುಮಾನಿಯು ಪ್ರವೇಶಿಸುವುದಾದರೆ ಅವನ್ನು ಸತ್ಯವಾಗಿಸಬಾರದು ಮತ್ತು ಅದನ್ನು ಆಧಾರವಾಗಿಸಿ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಅದರೊಂದಿಗೆ ತಪ್ಪಾದ ಗುಮಾನಿಗಳನ್ನು ಹೋಗಲಾಡಿಸಲು ಸಮಾಜದ ಬಗ್ಗೆ ಉತ್ತಮ ಭಾವನೆಗಳನ್ನು ಹೊಂದಲು ಸದಾ ಪ್ರಯತ್ನಿಸ ಬೇಕಾಗಿದೆ.

ಕೆಟ್ಟ ಗುಮಾನಿ

ಕೆಟ್ಟ ಗುಮಾನಿ ಎಂದರೆ ಒಬ್ಬರ ಬಗ್ಗೆ ಸುಮ್ಮನೆ ಏನಾದರೂ ಒಂದು ಅಭಿಪ್ರಾಯವನ್ನು ತಾಳುವುದಾಗಿದೆ. ಉದಾಹರಣೆಗೆ: ಯಾವುದಾದರೂ ನಷ್ಟ ಸಂಭವಿಸಿದರೆ, ಅದರ ಬಗ್ಗೆ ಅರಿಯಲು ಹೋಗದೆ, ನನಗೆ ಇಂತಿಂತಹ ವ್ಯಕ್ತಿಯು ನಷ್ಟವನ್ನು ಉಂಟು ಮಾಡಿದ್ದಾನೆ ಎಂದು ಭಾವಿಸುವುದು. ಅಥವಾ ಒಬ್ಬನಲ್ಲಿ ಇಂತಿಂತಹ ಕೊರತೆಗಳು ಇವೆ ಎಂದು ಭಾವಿಸುವುದು… ಇತ್ಯಾದಿ.

ಕೆಟ್ಟ ಗುಮಾನಿಯು ಬಹಳ ದೊಡ್ಡ ಪಾಪವಾಗಿದೆ ಎಂದು ಪವಿತ್ರ ಕುರ್‍ಆನ್ ನಮಗೆ ಕಲಿಸುತ್ತದೆ. ಯಾರಾದರೂ ಈ ರೀತಿಯ ಪಾಪ ಕಾರ್ಯ ಎಸಗಿದರೆ, ಅಲ್ಲಾಹನು ಅವನಿಂದ ಬಹಳ ಕೋಪಗೊಳ್ಳುವನು. ಕಿಯಾಮತ್‍ನ ದಿನ (ಅಂದರೆ ಸಕಲ ಮಾನವರ ಸತ್ಕರ್ಮ ಮತ್ತು ದುಷ್ಕರ್ಮಗಳ ಲೆಕ್ಕಾಚಾರ ಪಡೆಯುವ ದಿನ) ಅಲ್ಲಾಹನು ಅಂತಹವರಿಗೆ ಕಠಿಣ ಶಿಕ್ಷೆಯನ್ನು ನೀಡುವನು. ಅಲ್ಲಾಹ್ ಹೇಳುತ್ತಾನೆ,

“ಸತ್ಯವಿಶ್ವಾಸಿಗಳೇ, ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿಗಳು ಪಾಪವಾಗಿವೆ. ದೊಷಾನ್ವೇಷಣೆ ಮಾಡದಿರಿ.”(ಪವಿತ್ರ ಕುರ್‍ಆನ್: 49: 12)

ಈ ವಚನದಲ್ಲಿ ಕೆಟ್ಟ ಗುಮಾನಿಯ ಜತೆಗೆ ಇತರರ ದೋಷಗಳನ್ನು ಹುಡುಕುತ್ತ ತಿರುಗುವುದರಿಂದಲೂ ತಡೆಯಲಾಗಿದೆ. ಸರಿಯಾದ ಇಸ್ಲಾವಿೂ ನೀತಿ ಏನೆಂದರೆ, ಇತರರ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಹೊಂದಿರಬೇಕು, ನಿಮಗೆ ಗುರುತು-ಪರಿಚಯ ಇಲ್ಲದ ವ್ಯಕ್ತಿ ಎದುರಾದಾಗ ಆತ ಕೆಟ್ಟವನಾಗಿರಬಹುದು ಎಂದು ಭಾವಿಸಬಾರದು. ಬದಲಾಗಿ ಮೊದಲಿಗೆ ಆತ ಒಳ್ಳೆಯ ವ್ಯಕ್ತಿ ಎಂದೇ ಭಾವಿಸಬೇಕು.

ಅಲ್ಲಾಹನ ಸಂದೇಶವಾಹಕರು(ಸ) ಹೀಗೆ ಹೇಳಿರುವರು, “ನಿಮ್ಮ ಸಹೋದರರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇರಿಸಿರಿ.”

ಒಟ್ಟಿನಲ್ಲಿ, ನಮ್ಮ ಪರಿಚಿತರು ಮತ್ತು ಸ್ನೇಹಿತರು ಮಾತ್ರವಲ್ಲ, ನಮಗೆ ಪರಿಚಯ ಇಲ್ಲದವರು ಯಾರೇ ಆದರೂ ಅವರ ಬಗ್ಗೆ ಒಳ್ಳೆಯವರು ಎಂದೇ ಭಾವಿಸಬೇಕು. ಆದರೆ ಯಾರೊಂದಿಗೂ ವ್ಯವಹಾರ ನಡೆಸುವಾಗ, ಅವರೊಂದಿಗೆ ವ್ಯಾಪಾರ ನಡೆಸುವುದು ಲಾಭಕರವೋ ಅಲ್ಲವೋ ಎಂಬುದನ್ನು ಅರಿಯಬೇಕಾದುದು ಅಗತ್ಯ.

ವಸ್ತುತಃ ಜನರ ಬಗ್ಗೆ ಅಭಿಪ್ರಾಯ ಹೊಂದುವ ಎರಡು ಮಗ್ಗುಲುಗಳಿವೆ. ಒಂದನೆಯದಾಗಿ, ಯಾವುದೇ ವಿವೇಚನೆ ನಡೆಸದೆ ಒಬ್ಬನನ್ನು ಕೆಟ್ಟವನೆಂದು ಭಾವಿಸುವುದು. ಎರಡನೆಯದಾಗಿ, ಯಾವುದೇ ಗುರುತು ಪರಿಚಯ ಇಲ್ಲದ ವ್ಯಕ್ತಿಯ ಮೇಲೆ ಕಣ್ಣು ಮುಚ್ಚಿ ನಂಬಿಕೆ ಇರಿಸುವುದು. ಸರಿಯಾದ ವಿಧಾನ ಏನೆಂದರೆ, ಸುಮ್ಮನೆ ಯಾರನ್ನೂ ಕೆಟ್ಟವರೆಂದು ಭಾವಿಸಲೂ ಬಾರದು ಮತ್ತು ಅರಿಯದೆ ಯಾರ ಮೇಲೂ ನಂಬಿಕೆ ಇರಿಸಲೂ ಬಾರದು. ಆದರೆ ವ್ಯವಹಾರ ನಡೆಸುವಾಗ ಸೂಕ್ತ ರೀತಿಯಲ್ಲಿ ಅರಿಯಬೇಕು. ಉದಾಹರಣೆಗೆ, ಮನೆಗೆ ನೌಕರನನ್ನು ಇರಿಸುವಾಗ, ನಿಮಗೆ ಸ್ವಲ್ಪವೂ ಪರಿಚಯ ಇಲ್ಲದ ವ್ಯಕ್ತಿಯ ಬಗ್ಗೆ, ಅವನು ಪರಿಶ್ರಮಿ ಮತ್ತು ನಂಬಿಗಸ್ಥನಾಗಿದ್ದಾನೆ ಎಂದು ಭಾವಿಸಬಾರದು. ಬದಲಾಗಿ, ಅವನ ಬಗ್ಗೆ ಸರಿಯಾದ ಮಾಹಿತಿಗಳನ್ನು ಪಡೆಯಬೇಕು.

ಕೆಟ್ಟ ಗುಮಾನಿಯು ಹೆಚ್ಚಿನ ವೇಳೆ ಯಾವುದಾದರೂ ವಸ್ತು ಕಳೆದು ಹೋದಾಗ ಹುಟ್ಟಿಕೊಳ್ಳುತ್ತದೆ. ಅದನ್ನು ಯಾರಾದರೂ ಕದ್ದಿದ್ದಾರೋ ಅಥವಾ ಎಲ್ಲಾದರೂ ಇಟ್ಟು ಮರೆತು ಹೋಯಿತೋ ಎಂದು ತಿಳಿದಿರುವುದಿಲ್ಲ. ಆಲೋಚನೆಗಳು ಎಲ್ಲೆಲ್ಲಿಯೋ ಹೊರಳುತ್ತವೆ. ಒಮ್ಮೆ ಈತ ತೆಗೆದಿರಬಹುದು ಎಂದು ಗುಮಾನಿಯಾದರೆ, ಇನ್ನೊಮ್ಮೆ ಆತ ಕದ್ದಿರಬಹುದು ಎಂಬ ಆಲೋಚನೆ ಬರಬಹುದು. ಈ ರೀತಿ ಬುದ್ಧಿ ಇರುವ ಜನರೂ ಕಳವಳಗೊಳ್ಳುವರು.

ಇಂತಹ ಸಂದರ್ಭಗಳಲ್ಲಿ ಹೀಗೇ ಸುಮ್ಮನೆ ಯಾರನ್ನೂ ಕಳ್ಳ ಎಂದು ಭಾವಿಸಬಾರದು. ಅಪರಾಧ ಸಾಬೀತು ಆಗುವವರೆಗೆ ಒಬ್ಬರ ಬಗ್ಗೆ ಕೆಟ್ಟ ಗುಮಾನಿಯನ್ನು ಇರಿಸಲೂ ಬಾರದು.
ವಸ್ತುಗಳು ಕಳೆದು ಹೋಗುವ ವಿಷಯವಲ್ಲದೆ, ಪರಸ್ಪರ ಸಂಬಂಧಗಳಲ್ಲಿಯೂ ಕೆಲವೊಮ್ಮೆ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಹುಟ್ಟಕೊಳ್ಳುವ ಸಾಧ್ಯತೆ ಇದೆ. ಕೆಲವೊಮ್ಮೆ ಏನಾಗುತ್ತದೆ ಎಂದರೆ, ನಮ್ಮ ಯಾವುದಾದರೂ ವಿಷಯ ಇತರರಿಗೆ ತಿಳಿಯಬಾರದು ಎಂದು ಭಾವಿಸಿರುತ್ತೇವೆ. ಆದರೆ ಅದು ಹೇಗೋ ಬಹಿರಂಗವಾಗುತ್ತದೆ. ಆಗ ನಮ್ಮ ಗೆಳೆಯರು ಮತ್ತು ಸಂಬಂಧಿಕರ ಬಗ್ಗೆ ಕೆಟ್ಟ ಗುಮಾನಿ ಹುಟ್ಟಿಕೊಳ್ಳುತ್ತದೆ, ಬಹುಶಃ ಅವನೇ ಎಲ್ಲರಿಗೂ ಹೇಳಿರಬಹುದು ಎಂದು.

ಇಂತಹ ಎಲ್ಲ ಸಂದರ್ಭಗಳಲ್ಲಿ ಅಲ್ಲಾಹ್ ಮತ್ತು ಅವನ ಸಂದೇಶ ವಾಹಕರ(ಸ) ಮಾತುಗಳನ್ನು ನೆನಪಿಸಬೇಕು. ಹಾಗೂ ಕೆಟ್ಟ ಗುಮಾನಿಯಿಂದ ದೂರವಿರಬೇಕು.ಈ ಕೆಟ್ಟ ಗುಮಾನಿಯಿಂದಾಗಿ ಕೆಲವೊಮ್ಮೆ ದೊಡ್ಡ ಗಲಾಟೆಯೇ ನಡೆದು ಹೋಗುವುದನ್ನು ನಾವು ಕಂಡಿದ್ದೇವೆ. ಇಂತಹ ಎಲ್ಲ ನಾಶ ನಷ್ಟಗಳಿಂದ ದೂರವಿರುವ ಒಳ್ಳೆಯ ಉಪಾಯವೇನೆಂದರೆ, ಕೆಟ್ಟ ಗುಮಾನಿಯನ್ನು ನಮ್ಮ ಹೃದಯದಲ್ಲಿ ಬೆಳೆಯಲು ಬಿಡಲೇ ಬಾರದು. ಮೊದಲು ಆಲೋಚಿಸಬೇಕು, ಬಳಿಕ ಬಾಯಿ ತೆರೆಯಬೇಕು. ಮೊದಲು ಚೆನ್ನಾಗಿ ತನಿಖೆ ನಡೆಸಬೇಕು, ನಂತರ ಒಬ್ಬರ ಬಗ್ಗೆ ಯಾವುದಾದರೂ ಅಭಿಪ್ರಾಯವನ್ನು ಹೊಂದಬೇಕು. ಹೀಗೆ ಮಾಡುವುದರಿಂದ ಗೆಳೆಯರ ಸಂಖ್ಯೆ ಹೆಚ್ಚುತ್ತದೆ. ಜಗಳಗಳು ಕಡಿಮೆಯಾಗು ವುದು. ಅಷ್ಟೇ ಅಲ್ಲ, ಪ್ರಯೋಜನವೂ ಇದೆ. ನಿಮ್ಮ ಶತ್ರುಗಳಾದವರೂ ನಿಮ್ಮ ಮಿತ್ರರಾಗಬಹುದು.

SHARE THIS POST VIA