ಸೆಥ್‌ವಿಕ್, ಇಂಗ್ಲೆಂಡ್: ಹಿಜಾಬ್ ಧರಿಸುವ ಮಹಿಳೆಯರ ಸಂಭ್ರಮವನ್ನು ಜಾಗತಿಕವಾಗಿ ನೆನಪಿನಲ್ಲುಳಿಯುವಂತೆ ಮಾಡಲು ಸೆಥ್‌ವಿಕ್‌ನ ಬೀದಿಯಲ್ಲಿ ಈ ವರ್ಷದ ಕೊನೆಯಲ್ಲಿ ‘ಹಿಜಾಬ್‌ನ ಶಕ್ತಿ’ ಶೀರ್ಷಿಕೆಯ ವಿಶಿಷ್ಟವಾದ ಶಿಲ್ಪಕಲೆ ಸಿದ್ಧವಾಗಿದೆ. ಈ ಸ್ಮಾರಕ ಕಲಾಕೃತಿಯು ವಿಶ್ವದಲ್ಲೇ ಇದು ಮೊದಲನೆಯದು ಎನ್ನಲಾಗಿದೆ. ಹಿಜಾಬ್ ಧರಿಸುವ ಮಹಿಳೆಯರಿಗೆ ಗೌರವ ಸಲ್ಲಿಸುವುದು ಮಾತ್ರವಲ್ಲದೇ ಅವರ ಉಡುಗೆಯನ್ನು ಪರಿಗಣಿಸದೇ ಪ್ರೀತಿಸುವ ಮತ್ತು ಗೌರವಿಸುವ ಅವರ ಹಕ್ಕನ್ನು ಈ ಪ್ರತಿಮೆ ಸಂಕೇತಿಸುತ್ತದೆ.
‘ಹಿಜಾಬ್‌ನ ಶಕ್ತಿ’ ಪ್ರತಿಮೆ ಐದು ಮೀಟರ್ ಎತ್ತರವನ್ನು ಹೊಂದಿದೆ. ಅಂದಾಜು ಒಂದು ಟನ್ ತೂಕವಿದೆ. ಈ ಪ್ರತಿಮೆಯನ್ನು ಕಲಾವಿದ ಲ್ಯೂಕ್ ಪೆರ್ರಿ ವಿನ್ಯಾಸಗೊಳಿಸಿದ್ದಾರೆ. ‘ಮಹಿಳೆಯರು ತಾನು ಧರಿಸಲು ಆಯ್ಕೆ ಮಾಡುವ ಯಾವುದನ್ನಾದರೂ ಪ್ರೀತಿಸುವುದು ಮತ್ತು ಗೌರವಿಸುವುದು ಅವರ ಹಕ್ಕು’ ಎಂಬ ಶಕ್ತಿಯುತವಾದ ಸಂದೇಶದೊಂದಿಗೆ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಈ ಅಸಾಮಾನ್ಯ ಕಲಾಕೃತಿಯ ಸ್ಥಾಪನೆಯನ್ನು ಅಕ್ಟೋಬರ್ ಅಥವಾ ನವೆಂಬರ್ ಆರಂಭದಲ್ಲಿ ಬ್ರಾಸ್‌ಹೌಸ್ ಲೇನ್ ಬಳಿ ಸ್ಥಾಪಿಸಲಾಗುತ್ತದೆ. ಬರ್ಮಿಂಗ್ಲಾಮ್‌ನಲ್ಲಿ ಯುದ್ಧಾನಂತರದ ವಲಸೆ ಸಮುದಾಯಗಳ ಶ್ರೀಮಂತ ಪರಂಪರೆಯನ್ನು ಆಚರಿಸಲು ಮೀಸಲಾಗಿರುವ ಲೆಗಸಿ ವೆಸ್ಟ್ ಮಿಡ್‌ಲ್ಯಾಂಡ್ಸ್ ಎಂಬ ನೋಂದಾಯಿತ ಚಾರಿಟಿ ಸಂಸ್ಥೆ ಈ ಕೆಲಸಕ್ಕೆ ಮುಂದಾಗಿದೆ.
ಲ್ಯೂಕ್ ಪೆರ್ರಿ ಅವರು ಈ ಅಸಾಧಾರಣ ಸೃಷ್ಟಿಯ ಕುರಿತು BBC ಯೊಂದಿಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಇಸ್ಲಾಮಿನ ನಂಬಿಕೆಯನ್ನು ಪ್ರತಿನಿಧಿಸುವ ಒಂದು ತುಣುಕು ಹಿಜಾಬ್. ಅದೇ ಅದರ ಶಕ್ತಿ, ಹಾಗಾಗಿ ಅದು ಬಹಳ ಪ್ರಮುಖವಾದುದು” ಎಂದು ಒತ್ತಿ ಹೇಳಿದರು.
ಈ ಪ್ರಯತ್ನವು ಪೆರಿ ಅವರು ಕೆನನ್ ಬ್ರೌನ್ ಅವರೊಡನೆ ಸೇರಿ ವಿನ್ಯಾಸಗೊಳಿಸಿದ್ದ ‘ಬ್ಲ್ಯಾಕ್ ಬ್ರಿಟಿಷ್ ಹಿಸ್ಟರಿ ಈಸ್ ಬ್ರಿಟಿಷ್ ಹಿಸ್ಟರಿ’ ಶಿಲ್ಪವನ್ನು ಹೋಲುತ್ತದೆ. ಹಿಂದಿನ ಶಿಲ್ಪವು ಸ್ಥಾಪನೆಯ ಸ್ವಲ್ಪ ಸಮಯದ ನಂತರ ವಿರೂಪವಾಯಿತು. ಅದೇನೇ ಇದ್ದರೂ, ಇಂಗ್ಲೆಂಡಿನ ವೈವಿಧ್ಯಮಯ ಸಮುದಾಯದ ಎಲ್ಲಾ ಅಂಶಗಳನ್ನು ಪ್ರತಿನಿಧಿಸುವ ತನ್ನ ಬದ್ಧತೆಯಲ್ಲಿ ಪೆರ್ರಿ ದೃಢವಾಗಿ ನಿಂತಿದ್ದಾರೆ.
‘ಹಿಜಾಬ್‌ನ ಶಕ್ತಿ’ ವಿವಾದವನ್ನು ಹುಟ್ಟು ಹಾಕಬಹುದು ಎಂದು ಒಪ್ಪಿಕೊಳ್ಳುವಾಗ, ಪೆರ್ರಿ ಏಕತೆ ಮತ್ತು ಪ್ರಾತಿನಿಧ್ಯದ ಪ್ರಾಮುಖ್ಯತೆಯನ್ನು ದೃಢವಾಗಿ ನಂಬುತ್ತಾರೆ. ವಿವಾದಗಳು ಬದಿಗಿರಲಿ, ಶಿಲ್ಪಕ್ಕೆ ಧನಾತ್ಮಕ ಪ್ರತಿಕ್ರಿಯೆಗಳು ಹೆಚ್ಚಾಗಿ ಬರುತ್ತಿದೆ ಎಂದು ಅವರು ಸಂತಸ ಹಂಚಿಕೊಂಡರು.