ಮನುಷ್ಯನಿಗೆ ಶೈತಾನನು ಶತ್ರುವಾಗಿರುವಂತೆಯೇ ಅವನ ದೇಹೇಚ್ಛೆಯೂ ಅವನಿಗೆ ಶತ್ರುವಾಗಿದೆ.
ಕುರಾನ್ ಪ್ರಶ್ನಿಸುತ್ತದೆ,”ತನ್ನ ಸ್ವೇಚ್ಛೆಯನ್ನೇ ದೇವನಾಗಿಸಿಕೊಂಡವನನ್ನು ನೋಡಿದಿರಾ?”
ಮನುಷ್ಯನು ತಪ್ಪೆಸಗಿ ಶೈತಾನನ ಮೆಲೆ ಆರೋಪಿಸುವುದು ವಾಡಿಕೆ. ನಿಜವಾಗಿ, ನಾವು ಅಲ್ಲಾಹನ ಮಾರ್ಗದಲ್ಲಿ ನೆಲೆಗೊಂಡರೆ ಮಾತ್ರ ಶೈತಾನನು ನಮ್ಮ ಮನಸ್ಸಿಗೆ ವಸ್ವಾಸ್ ಉಂಟು ಮಾಡಲು ಶುರು ಮಾಡುತ್ತಾನೆ. ಇಬ್ರಾಹೀಂ(ಅ)ರು ತನ್ನ ಮಗನನ್ನು ಬಲಿಯರ್ಪಿಸಲು ಮುಂದಾದಾಗ ಶೈತಾನನು ಬಂದು ಇಬ್ರಾಹೀಂ(ಅ)ರಿಗೆ ದುರ್ಬೋಧನೆ ಮಾಡುತ್ತಾನೆ.
ಒಬ್ಬನಿಗೆ ಪ್ರಭಾತ ನಮಾಜಿಗೆ ಏಳಲು ಆಗುವುದಿಲ್ಲ; ಕಷ್ಟವಾಗುತ್ತದೆ ಎಂದಾದರೆ ಅದು ಅವನು ದೇಹೇಚ್ಛೆಯನ್ನು ಅನುಸರಿಸುತ್ತಾನೆ ಎಂದರ್ಥ. ಅವನ ದೇಹವು ನಿದ್ದೆಯನ್ನು ಬಿಡಲು ತಯಾರಿಲ್ಲ, ಅವನು ಅದನ್ನು ಅನುಸರಿಸುತ್ತಾನೆ ಕೂಡಾ.
ಒಬ್ಬನು ದೇಹೇಚ್ಛೆಯನ್ನು ಮೆಟ್ಟಿ ನಿಂತು ನಮಾಜಿಗೆ ನಿಲ್ಲಬೇಕಾದರೆ ಶೈತಾನನು ಬಂದು ಅವನ ಏಕಾಗ್ರತೆಗೆ ಅಡ್ಡಿಪಡಿಸುತ್ತಾನೆ.
ಹೀಗೆ ಪ್ರತಿಯೊಂದು ವಿಷಯದಲ್ಲೂ ದೇಹೇಚ್ಛೆ ಮತ್ತು ಶೈತಾನನ ಉಪದ್ರವ ಯಾವುದೆಂಬ ವ್ಯತ್ಯಾಸವನ್ನು ನಾವು ತಿಳಿದಿರಬೇಕು. ಖಂಡಿತವಾಗಿಯೂ ಶೈತಾನನು ನಮ್ಮ ಮನಸ್ಸಿನೊಳಗಿರುದನ್ನು ಅರಿಯಲಾರನು. ಅಂತಹ ಯಾವ ಸಾಮರ್ಥ್ಯವನ್ನೂ ಅಲ್ಲಾಹನು ಅವನಿಗೆ ನೀಡಿಲ್ಲ. ದೇವಚರರಿಗೂ ಅಂತಹ ಶಕ್ತಿ ಕೊಟ್ಟಿಲ್ಲ.
ಅಲ್ಲಾಹನು ಹೇಳುತ್ತಾನೆ:
ನೀವು ನಿಮ್ಮ ಮನದೊಳಗಿನ ಸಂಗತಿಗಳನ್ನು ವ್ಯಕ್ತಪಡಿಸಿದರೂ ಗುಪ್ತವಾಗಿಟ್ಟರೂ, ಅಲ್ಲಾಹನಂತೂ ಆ ಕುರಿತು ನಿಮ್ಮೊಡನೆ ವಿಚಾರಣೆ ನಡೆಸುವನು.”
ಯಾವ ವಿಷಯದಲ್ಲಿ ನಮ್ಮನ್ನು ಬಲೆಗೆ ಹಾಕಬಹುದೆಂದು ಶೈತಾನಾನು ಸದಾ ಹೊಂಚು ಹಾಕುತ್ತಿರುತ್ತಾನೆ. ಆದ್ದರಿಂದಲೇ ಕುರಾನ್ ಹೇಳುತ್ತದೆ: ಶೈತ್ತಾನನ ಕಡೆಯಿಂದ ನಿಮಗೇನಾದರೂ ಪ್ರಚೋದನೆಯುಂಟಾದರೆ, ನೀವು ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ತಾನು ಸ್ವರ್ಗದಿಂದ ಅಟ್ಟಲ್ಪಟ್ಟಿರುವಂತೆಯೇ ಮಾನವರನ್ನೂ ಸ್ವರ್ಗದಿಂದ ದೂರಕ್ಕಟ್ಟುವೆನೆಂದು ಅಲ್ಲಾಹನೊಡನೆ ತರ್ಕಿಸಿರುವನು. ಅದಕ್ಕಾಗಿ ಸಮಯಾವಕಾಶವನ್ನೂ ಅಲ್ಲಾಹನಿಂದ ಪಡೆದಿರುವವನು.
ಆದ್ದರಿಂದ ಶೈತಾನನಿಗೆ ಒಂದು ಗುರಿ ಇದೆ. ಛಲವೂ ಇದೆ. ಟಾರ್ಗೆಟ್ ಕೂಡಾ ಇದೆ. ಆದ್ದರಿಂದ ಅವನು activeಆಗಿದ್ದಾನೆ. ಆದರೆ ಅಲ್ಲಾಹನು ಹೇಳುತ್ತಾನೆ: ದೇವಭಯ ಉಳ್ಳವರು ಖಂಡಿತಾ ನಿನ್ನ ಮೋಸದ ಜಾಲದಲ್ಲಿ ಸಿಲುಕಲಾರರು. ಅವರು ನಿನ್ನನ್ನು ಗುರುತಿಸುವರು.
ಆದ್ದರಿಂದ ಪ್ರತಿಯೊಬ್ಬರೂ ತನ್ನೊಳ ಗಿನ ಶೈತಾನನು ಯಾರು ಎಂದು ಗುರುತಿಸಬೇಕು. ಮನುಷ್ಯ ವರ್ಗದಲ್ಲೂ ಕೆಲವು ಶೈತಾನರಿದ್ದಾರೆಂದು ಕುರ್ ಆನ್ ಪರಿಚಯಿಸುತ್ತದೆ. ಅವರೇ ದುಷ್ಟ ಗೆಳೆಯರು ಮತ್ತು ಕೆಟ್ಟ ನಾಯಕರು. ಅವರು ಸದಾ ಜನರನ್ನು ಕೆಟ್ಟ ದಾರಿಗೆ ಕರೆದೊಯ್ಯುತ್ತಿರುತ್ತಾರೆ.
ಅಲ್ಲಾಹನು ನಮ್ಮನ್ನು ಶೈತಾನನ ಉಪಟಳದಿಂದ ರಕ್ಷಿಸಲಿ. ಆಮೀನ್..
✍ಆರ್ವಿಕೆ. ಸಚೇರಿಪೇಟೆ