✍️ ರಶೀದ್, ಉಪ್ಪಿನಂಗಡಿ
ಸ್ತ್ರೀ ಸ್ವಾತಂತ್ರ‍್ಯದ ವಿಚಾರ ಬಂದಾಗ ಇಸ್ಲಾಮನ್ನು ತಪ್ಪಾಗಿ ಗ್ರಹಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಬರೀ ಬುರ್ಖಾವನ್ನು ನೋಡಿ ಇಸ್ಲಾಂ ಸ್ತ್ರೀಗೆ ಸ್ವಾತಂತ್ರ‍್ಯವನ್ನು ಕೊಟ್ಟಿಲ್ಲ ಎಂದೇ ವಿಲಕ್ಷಣವಾಗಿ ವಿಶ್ಲೇಷಿಸುತ್ತಾರೆ. ಇದರ ಹಿಂದೆ ಅಧ್ಯಯನವನ್ನು ಸರಿಯಾಗಿ ಮಾಡದ ಅತಿದೊಡ್ಡ ಅಜ್ಞಾನವಿದೆ.
ಸ್ತ್ರೀ ಸ್ವಾತಂತ್ರ‍್ಯದ ವಿಚಾರದಲ್ಲಿ ಮುಸ್ಲಿಮರ ವಿರುದ್ಧ ಆರೋಪ ಮಾಡುವವರಿಗೆ ಕನಿಷ್ಠ ಧಾರ್ಮಿಕ ಜ್ಞಾನವೂ ಇರುವುದಿಲ್ಲ. ಈ ಸಮಸ್ಯೆ ಬರೀ ಮುಸ್ಲಿಮೇತರರಿಗೆ ಮಾತ್ರವಲ್ಲ ಸ್ವತಃ ಮುಸ್ಲಿಮರಿಗೂ ಇದೆ. ಟಿವಿ ಚರ್ಚೆಗಳಲ್ಲಿ ಮತ್ತು ಸಾರ್ವಜನಿಕ ಸಂವಾದಗಳಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಮತ್ತು ಸೌಲಭ್ಯಗಳ ಬಗ್ಗೆ ಮಾತನಾಡುವಾಗ ಮುಸ್ಲಿಂ ಪರವಾಗಿ ಮಾತನಾಡುವವರಿಗೆ ಮಹಿಳೆಗೆ ಇಸ್ಲಾಮ್ ಒಂದು ಅನುಗ್ರಹ ಎನ್ನುವ ಪ್ರಜ್ಞೆಯೇ ಇರದೇ ಇರುವುದನ್ನು ಕಾಣುತ್ತೇವೆ..
ಈ ಜಗತ್ತಿನಲ್ಲಿ ಮಹಿಳೆಗೆ ಇಸ್ಲಾಂ ಕೊಟ್ಟಷ್ಟು ಸವಲತ್ತು-ಸೌಲಭ್ಯ, ಹಕ್ಕು- ಅಧಿಕಾರಗಳನ್ನು ಜಗತ್ತಿನ ಬೇರಾವ ಧರ್ಮವೂ ಯಾವ ಕಾಲಘಟ್ಟದಲ್ಲಿಯೂ ನೀಡಿಲ್ಲ ಎನ್ನುವುದು ಮಹಿಳಾ ಸ್ವಾತಂತ್ರ‍್ಯದ ಬಗ್ಗೆ ಮಾತನಾಡುವ ಬಹಳಷ್ಟು ಸ್ತ್ರೀವಾದಿಗಳಿಗೂ ತಿಳಿದಿಲ್ಲ. ಈ ಕುರಿತಾಗಿ ಸಣ್ಣ ತುಲನಾತ್ಮಕವಾದ ಅಧ್ಯಯನ ಮಾಡಿದರೂ ಇಸ್ಲಾಂ ಬೇರೆಲ್ಲ ಧರ್ಮಗಳಿಗಿಂತ ಅದೆಷ್ಟು ಅನುಗ್ರಹಗಳನ್ನು ಮಹಿಳೆಗೆ ದಯಪಾಲಿಸಿದೆ ಎನ್ನುವುದು ಸುಲಭದಲ್ಲಿ ತಿಳಿಯುತ್ತದೆ.
ಜಗತ್ತಿನ ಉಳಿದ ಭಾಗದ ಮಹಿಳೆಯರಿಗಿಂತ ಆಸ್ತಿಯ ಹಕ್ಕು ಮೊಟ್ಟಮೊದಲು ನೀಡಿದ್ದು ಇಸ್ಲಾಮ್ ಧರ್ಮ. ಹೆಣ್ಣಿಗೂ ಸ್ಥಿರಾಸ್ತಿ -ಚರಾಸ್ತಿಗಳ ಮೇಲೆ ನಿರ್ದಿಷ್ಟ ಪ್ರಮಾಣದ ದೇವನು ನಿಗದಿಪಡಿಸಿದ ಹಕ್ಕಿದೆ ಎನ್ನುವ ಅಲ್ಲಾಹನ ವಾಣಿಯನ್ನು 1400 ವರ್ಷಗಳ ಹಿಂದೆಯೇ ಪ್ರವಾದಿಯವರು(ಸ) ಪ್ರಬಲವಾಗಿ ಅನುಷ್ಠಾನಿಸಿದರು.
ಹೀಗಾಗಿ ಇಡೀ ಜಗತ್ತಿನಲ್ಲಿ ಮುಸ್ಲಿಂ ಮಹಿಳೆಯರು ಕಾಲಾತೀತವಾಗಿ ಆಸ್ತಿಯ ಮೇಲೆ ಹಕ್ಕು ಪಡೆದ ಮೊದಲಿಗರು ಎನಿಸಿಕೊಂಡರು. ಪ್ರವಾದಿಯವರು ಈ ದೇವಾದೇಶವನ್ನು ಅನುಷ್ಠಾನಿಸುವವರೆಗೆ ಜಗತ್ತಿನ ಯಾವುದೇ ಸಮುದಾಯದ ಮತ್ತು ಸಾಮ್ರಾಜ್ಯದ ಮಹಿಳೆಗೆ ಆಸ್ತಿಯಲ್ಲಿ ಪಾಲಾಗಲಿ ಹಕ್ಕಾಗಲಿ ಇರಲಿಲ್ಲ.
ಪ್ರವಾದಿಯವರು(ಸ) ಪ್ರವರ್ದಮಾನಕ್ಕೆ ಬರುವವರೆಗೆ ವಿಧವೆಗೆ ಮದುವೆಯಾಗುವ ಹಕ್ಕು ಇರಲಿಲ್ಲ. ಅವರನ್ನು ಅಪಶಕುನ ಎಂದು ಕರೆಯಲಾಗುತ್ತಿತ್ತು. ಪ್ರವಾದಿಯವರು(ಸ) ವಿಧವೆಯ ಮರುಮದುವೆಯ ಹಕ್ಕನ್ನು ಸ್ಥಾಪಿಸಿದರು.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷನೊಬ್ಬ ಎಷ್ಟು ಮದುವೆ ಬೇಕಾದರೂ ಆಗಿ ಹೆಣ್ಣನ್ನು ತ್ಯಜಿಸಬಹುದಿತ್ತು. ಆದರೆ ಪ್ರವಾದಿಯವರು ಮದುವೆಯನ್ನು ಶಾಸನದ ವ್ಯಾಪ್ತಿಗೆ ತಂದಿದ್ದು ಮಾತ್ರವಲ್ಲ, ನಾಲ್ಕು ಜನರಿಗಿಂತ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವಂತಿಲ್ಲ ಎಂದು ನಿರ್ಬಂಧ ಹೇರಿದರು.
ಪಾನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಮೂಲಕ ಅದೆಷ್ಟೋ ಮಹಿಳೆಯರ ಬದುಕನ್ನು ಪುರುಷನ ದಬ್ಬಾಳಿಕೆ ಮತ್ತು ವಿಲಕ್ಷಣತೆಗಳಿಂದ ರಕ್ಷಿಸಿದರು. ಇಂದಿಗೂ ಭಾರತದಲ್ಲಿ ಅತಿ ಹೆಚ್ಚು ಮಹಿಳೆಯರು ಶೋಷಿತರಾಗುವುದು ಕುಡಿತದ ಚಟವಿರುವ ಪತಿಯರಿಂದ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಪ್ರವಾದಿ ಯವರು(ಸ) ಅನುಷ್ಠಾನಿಸಿದ ಕಟ್ಟುನಿಟ್ಟಿನ ಪಾನ ನಿಷೇಧವು ಅದೆಷ್ಟೋ ಮುಸ್ಲಿಂ ಮಹಿಳೆಯರ ಬದುಕನ್ನು ರಕ್ಷಿಸಿದೆ.
ಹಿಜಾಬ್ ಮತ್ತು ಬುರ್ಖಾದ ಕಾರಣದಿಂದಾಗಿ ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರ ಅಂಗಾಂಗ ಪ್ರದರ್ಶನಗಳು ಮತ್ತು ಅಶ್ಲೀಲತೆಗಳ ಪ್ರಮಾಣ ಉಳಿದ ಸಮುದಾಯಗಳಿಗೆ ಹೋಲಿಸಿದರೆ ಕಡಿಮೆ ಇದೆ. ಈ ಕಾರಣದಿಂದಾಗಿ ಜಗತ್ತಿನಲ್ಲಿ ಮುಸ್ಲಿಂ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಕೂಡ ಗಣನೀಯವಾಗಿ ಕಡಿಮೆ ಇದೆ. ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಪಟ್ಟಂತೆ ಜಾಗತಿಕ ಸಂಸ್ಥೆಗಳ ವರದಿಗಳನ್ನು ಗಮನಿಸಿದರೆ ಇದನ್ನು ಸುಲಭವಾಗಿ ತಿಳಿಯಬಹುದು.
ಬುರ್ಖಾ ಒಂದು ಸಮವಸ್ತ್ರ. ಶ್ರೀಮಂತರು ಮತ್ತು ರಾಜ ಮನೆತನದವರು ಸಾರ್ವಜನಿಕವಾಗಿ ಆಭರಣ, ಅಂತಸ್ತು, ಸೌಂದರ್ಯಗಳ ಮೇಲಾಟಗಳನ್ನು ನಡೆಸಬಾರದು ಮತ್ತು ಸಮಾಜದಲ್ಲಿನ ಬಡವರು ಮತ್ತು ಇತರ ವರ್ಗಗಳಲ್ಲಿ ತಮ್ಮ ಲ್ಲಿಲ್ಲದ ವಸ್ತುಗಳ ಕಾರಣದಿಂದ ಕೀಳರಿಮೆ ಮೂಡಬಾರದು ಎನ್ನುವುದು ಬುರ್ಖಾದ ಹಲವಾರು ಉದ್ದೇಶಗಳಲ್ಲಿ ಒಂದು. ಸಾರ್ವಜನಿಕವಾಗಿ ಸರ್ವರೂ ಸಮಾನರು ಎನ್ನುವ ಸಂದೇಶ ಈ ವಸ್ತ್ರ ಸಂಹಿತೆಯಲ್ಲಿದೆ. ಪ್ರವಾದಿ ಯವರು(ಸ) ಈ ಸಂಹಿತೆಯ ಕುರಿತಾದ ನೀತಿ ನಿಯಮಗಳನ್ನು ಸಮರ್ಥವಾಗಿ ಅನುಷ್ಠಾನಿಸುವುದರ ಮೂಲಕ ಅದೆಷ್ಟೋ ಮಹಿಳೆಯರ ಮಾನ ಪ್ರಾಣಗಳನ್ನು ರಕ್ಷಿಸಿದರು.
ಇಂದಿಗೂ ಜಗತ್ತಿನ ಯಾವುದೇ ವೃದ್ಧಾಶ್ರಮಗಳಿಗೆ ಭೇಟಿ ನೀಡಿದರೆ ಅಲ್ಲಿ ಮುಸ್ಲಿಂ ವೃದ್ಧ ಮಹಿಳೆಯರು ಬಹಳವೇ ಕಡಿಮೆ ಇರುತ್ತಾರೆ. ಹೆಚ್ಚು ಕಡಿಮೆ ಇಲ್ಲವೆಂದೇ ಹೇಳಬಹುದು. ಪ್ರವಾದಿಯವರು(ಸ) ಇಸ್ಲಾಮಿನಲ್ಲಿ ತಂದೆ-ತಾಯಿ ಮತ್ತು ಮಹಿಳೆಯ ಸ್ಥಾನಮಾನವನ್ನು ಎತ್ತರಿಸಿ ಪ್ರಸ್ತುತ ಪಡಿಸಿರುವುದು ಮತ್ತು ತಾಯಿಯ ಪಾದದಡಿ ಸ್ವರ್ಗವಿದೆ ಎನ್ನುವ ನೀತಿಯನ್ನು ಪ್ರಬಲವಾಗಿ ಪಸರಿಸಿರುವ ಕಾರಣಕ್ಕೆ ಮುಸ್ಲಿಂ ಸಮುದಾಯದಲ್ಲಿ ವೃದ್ಧ ತಾಯಿಯನ್ನು ವೃದ್ಧಾ ಶ್ರಮಕ್ಕೆ ಕಳುಹಿಸುವ ಪ್ರಕರಣ ಕಂಡು ಬರುವುದಿಲ್ಲ.
ಈ ಮೇಲಿನವುಗಳು ಮಾತ್ರವಲ್ಲದೆ, ಇನ್ನೂ ನೂರಾರು ಹಕ್ಕು ಸ್ವಾತಂತ್ರ‍್ಯಗಳು ಮುಸ್ಲಿಂ ಮಹಿಳೆಯರಿಗಿವೆ. ಈ ಎಲ್ಲ ಹಕ್ಕು ಸ್ವಾತಂತ್ರ‍್ಯಗಳನ್ನು ಪವಿತ್ರ ಕುರ್‌ಆನಿನ ಆಶಯದಡಿಯಲ್ಲಿ ಪ್ರವಾದಿಯವರು(ಸ) ಬಹಳ ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಜನಮಾನಸಕ್ಕೆ ಪರಿಚಯಿಸಿದ್ದು ಮಾತ್ರವಲ್ಲ ಸದೃಢವಾಗಿ ಅನುಷ್ಠಾನಿಸಿದ್ದಾರೆ.