✍️ಏ.ಕೆ.ಕುಕ್ಕಿಲ
ಸ್ವಾತಂತ್ರ‍್ಯ ಅಂದರೆ ಬಿಡುಗಡೆ. ಒಂದರ್ಥದಲ್ಲಿ ವಿಮೋಚನೆ. 1947 ಆಗಸ್ಟ್ 15 ಈ ದೇಶದ ಪಾಲಿಗೆ ಯಾಕೆ ಮುಖ್ಯ ಅಂದರೆ, ಆವತ್ತು ಈ ದೇಶ ಬ್ರಿಟಿಷರಿಂದ ಬಿಡುಗಡೆಗೊಂಡಿತು. ಇತಿಹಾಸದ ಉದ್ದಕ್ಕೂ ಇಂಥ ವಿಮೋಚನೆಗಳು ನಡೆದಿವೆ ಮತ್ತು ಇಂಥ ಇಸವಿಗಳನ್ನು ದಪ್ಪಕ್ಷರಗಳಲ್ಲಿ ಬರೆದಿಡಲಾಗಿದೆ.
ಮುಸ್ಲಿಮರ ಮಟ್ಟಿಗೆ ಈ ‘ಬಿಡುಗಡೆ’ ಎಂಬ ಪದ ಹೊಸತಲ್ಲ. ಮದ್ರಸ ಕಲಿಕೆಯ ಸಂದರ್ಭದಲ್ಲೇ ಅವರು ಈ ಪದವನ್ನು ಮತ್ತು ಅದರ ಭಾವ-ಬೇಡಿಕೆಗಳನ್ನು ಅರಿತಿರುತ್ತಾರೆ. ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮುಸ್ಲಿಮರು ಮಹತ್ವಪೂರ್ಣ ಪಾತ್ರ ನಿಭಾಯಿಸಿರುವುದಕ್ಕೆ ಅವರ ಈ ಮದ್ರಸಾ ಕಲಿಕೆಯ ಪಾತ್ರವೂ ಬಹಳಷ್ಟಿದೆ. ಜೈ ಹಿಂದ್ ಎಂಬ ಘೋಷಣೆಯನ್ನು ಈ ದೇಶಕ್ಕೆ ಅರ್ಪಿಸಿದ ಆಬಿದ್ ಹಸನ್ ಸಫ್ರಾನಿಯಿಂದ ಹಿಡಿದು ದೇಶದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಝಾದ್‌ರ ವರೆಗೆ, ಬೇಗಂ ಹಝ್ರತ್ ಮಹಲ್‌ರಿಂದ ತೊಡಗಿ ಬ್ರಿಟಿಷರಿಂದ ಬಂಧಿತರಾಗಿ ಅಂಡಮಾನ್ ಜೈಲಿನಲ್ಲಿ 25 ವರ್ಷಗಳ ಕರಾಳ ಶಿಕ್ಷೆಯನ್ನು ಪಡೆದು ಸಾವಿಗೀಡಾದ ಮೌಲವಿ ಸೈಯದ್ ಅಲ್ಲಾವುದ್ದೀನ್‌ವರೆಗೆ ಇಂಥವರ ಪಟ್ಟಿ ಬಹಳ ಉದ್ದವೂ ಇದೆ.
ಸೈಯದ್ ಎಂಬುದು ಪ್ರವಾದಿ ಮುಹಮ್ಮದ್(ಸ)ರ ಕುಟುಂಬ ಪರಂಪರೆಯಲ್ಲಿ ಬೆಳೆದು ಬಂದವರ ಗುರುತು. ಆ ಪರಂಪರೆಯಲ್ಲಿ ಗುರುತಿಸಿಕೊಂಡವರಿಗೆ ಮುಸ್ಲಿಮ್ ಸಮುದಾಯದಲ್ಲಿ ವಿಶೇಷ ಗೌರವವಿದೆ. ಅಂಥವರೇ ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದಾರೆ ಮತ್ತು ದೇಶಕ್ಕಾಗಿ ಹುತಾತ್ಮ ರಾಗಿದ್ದಾರೆ ಎಂದರೆ ಅದರ ಹಿಂದೆ ಪ್ರವಾದಿಗಳ ವಿಮೋಚನೆಯ ಹೋರಾಟದ ಪ್ರಭಾವ ಖಂಡಿತ ಇದೆ. ಮೌಲಾನಾ ಸೈಯದ್ ಮುಹಮ್ಮದ್ ಮಿಯಾ ದೇವ್‌ಬಂದಿ ಕೂಡಾ ಇವರಲ್ಲಿ ಒಬ್ಬರು.
ಅದೇವೇಳೆ, ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರ ಹೋರಾಟಕ್ಕಾಗಿ ಸುಭಾಸ್‌ಚಂದ್ರ ಬೋಸ್‌ಗಿಂತ ಮೊದಲೇ 1877ರಲ್ಲಿ ಸಮರತ್ತುತ್ತರ್ಬಿಯಾ ಎಂಬ ಹೆಸರಲ್ಲಿ ಮೌಲಾನಾ ಮುಹಮ್ಮದುಲ್ ಹಸನ್‌ರ ನೇತೃತ್ವದಲ್ಲಿ ಸಂಘಟನೆ ಉದಯವಾಗಿತ್ತು. ಸುಮಾರು 3 ದಶಕಗಳ ಕಾಲ ಬ್ರಿಟಿಷರ ವಿರುದ್ಧ ಈ ಸಂಘಟನೆ ಹೋರಾಡಿತ್ತು. ಬಳಿಕ 1909ರಲ್ಲಿ ಇದೇ ಸಂಘಟನೆಯು ಜಮೀಯತುಲ್ ಅನ್ಸಾರ್ ಎಂಬ ಹೆಸರಲ್ಲಿ ಮರುರೂಪ ಪಡೆಯಿತು ಹಾಗೂ ಮೌಲಾನಾ ಉಬೈದುಲ್ಲಾ ಸಿಂಧಿ ನಾಯಕತ್ವವನ್ನೂ ವಹಿಸಿಕೊಂಡರು. 1913ರಲ್ಲಿ ಬ್ರಿಟಿಷ್ ಸರಕಾರ ಈ ಜಮೀಯತುಲ್ ಅನ್ಸಾರ್ ಮೇಲೆ ನಿಷೇಧ ಹೇರಿತು. ಆದರೆ,
ಈ ಮೌಲಾನಾ ಎದೆಗುಂದಲಿಲ್ಲ. ನಝರತುಲ್ ಮಆರಿಫ್ ಎಂಬ ಹೆಸರಲ್ಲಿ ಮರುಸಂಘಟಿತರಾದರು. ಅದೇವರ್ಷ ಮೌಲಾನಾ ಮಹ್‌ಮೂದುಲ್ ಮದನಿ, ಮೌಲಾನಾ ಉಬೈದುಲ್ಲಾ ಸಿಂಧಿ ಮತ್ತು ಮೌಲಾನಾ ಅಬುಲ್ ಕಲಾಂ ಆಝಾದ್‌ರ ನೇತೃತ್ವದಲ್ಲಿ ರೇಶ್ಮಿ ರುಮಾಲ್ ತಹ್‌ರೀಕ್ ಎಂಬ ಹೆಸರಲ್ಲಿ ಹೊಸ ಸ್ವಾತಂತ್ರ‍್ಯ ಚಳವಳಿ ಹುಟ್ಟಿಕೊಂಡಿತು. ತುರ್ಕಿ, ಜರ್ಮನಿ ಮತ್ತು ಅಫಘಾನಿಸ್ತಾನದ ನೆರವಿನೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡುವುದು ಈ ಚಳವಳಿಯ ಉದ್ದೇಶವಾಗಿತ್ತು. ಇದು ಬ್ರಿಟಿಷರ ವಿರುದ್ಧ ಬರಹ ಚಳವಳಿಯಾಗಿತ್ತು. 1916ರಲ್ಲಿ ಮೌಲಾನಾ ಉಬೈದುಲ್ಲಾ ಸಿಂಧಿ ಅವರ ಬಂಧನದೊಂದಿಗೆ ಈ ಚಳವಳಿಯ ಮೂಲವನ್ನು ಬ್ರಿಟಿಷರು ಪತ್ತೆ ಹಚ್ಚಿದರು ಮತ್ತು ದೇಶದಾದ್ಯಂತದ ಸುಮಾರು 220ಕ್ಕಿಂತಲೂ ಅಧಿಕ ಮೌಲಾನಾಗಳನ್ನು ಬಂಧಿಸಿದರು. ಬ್ರಿಟಿಷರು ಈ ಮೌಲಾನಾಗಳ ವಿರುದ್ಧ ಎಷ್ಟರವರೆಗೆ ಬೆನ್ನು ಬಿದ್ದಿದ್ದರೆಂದರೆ ಮಕ್ಕಾದಲ್ಲಿದ್ದ ಮೌಲಾನಾ ವಹೀದ್ ಅಹ್ಮದ್ ಫೈಝಾಬಾದಿ, ಮೌಲಾನಾ ಮಹಮೂದ್ ಹಸನ್, ಮೌಲಾನಾ ಅಝೀಝ್ ಗುಲ್, ಮೌಲಾನಾ ಹುಸೈನ್ ಅಹ್ಮದ್ ಮದನಿ ಮುಂತಾದವರನ್ನು ಮಕ್ಕಾದಲ್ಲಿ ಬಂಧಿಸಿದರು ಮತ್ತು ಮಾಲ್ಟಾದಲ್ಲಿ ವರ್ಷಗಳ ಕಾಲ ಜೈಲಲ್ಲಿರಿಸಿದರು. ಇದರ ಬಳಿಕ 1919ರಲ್ಲಿ ಜಮೀಯತುಲ್ ಉಲಮಾಯೆ ಹಿಂದ್ ಸ್ಥಾಪನೆಯಾಯಿತಲ್ಲದೇ ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದ ಅತಿದೊಡ್ಡ ಮುಸ್ಲಿಮ್ ಶಕ್ತಿಯಾಗಿ ಪರಿವರ್ತನೆಯಾಯಿತು. ಅಂದಹಾಗೆ,
ಮೌಲಾನಾಗಳೆಂದರೆ, ಧಾರ್ಮಿಕವಾಗಿ ಪಾಂಡಿತ್ಯವನ್ನು ಹೊಂದಿರುವವರು ಮತ್ತು ಮುಸ್ಲಿಮ್ ಸಮುದಾಯಕ್ಕೆ ಧಾರ್ಮಿಕ ನೇತೃತ್ವವನ್ನು ನೀಡುವವರು. ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಈ ಮೌಲಾನಾಗಳು ಕಾಣಿಸಿಕೊಂಡಷ್ಟು ಇನ್ನಾವ ಧರ್ಮದ ಧರ್ಮಗುರುಗಳೂ ಕಾಣಿಸಿಕೊಂಡಿಲ್ಲ. ಆಗಿನ ಕಾಲದಲ್ಲಿ ಮುಸ್ಲಿಮ್ ಸಮುದಾಯದ ಸಂಖ್ಯೆ ಕಡಿಮೆಯಿತ್ತು. ಈ ಕಡಿಮೆ ಸಂಖ್ಯೆಯ ಸಮುದಾಯದಿಂದ ಭಾರೀ ಪ್ರಮಾಣದಲ್ಲಿ ಮೌಲಾನಾಗಳು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾಗಲು ಕಾರಣವೇನು?
ಇವೆಲ್ಲದರ ಹಿಂದೆ ಮದ್ರಸ ಕಲಿಕೆಯ ಬಹಳ ದೊಡ್ಡ ಪಾತ್ರವಿದೆ. ಪ್ರವಾದಿಗಳು ಈ ಭೂಮಿಗೆ ಆಗಮಿಸಿರುವುದೇ ಮನುಷ್ಯರನ್ನು ವಿಮೋಚನೆಗೊಳಿಸುವುದಕ್ಕೆ ಎಂದೇ ಹೇಳಲಾಗಿದೆ. ಪ್ರವಾದಿ ನೂಹ್ ರಿಂದ ಹಿಡಿದು ಪ್ರವಾದಿ ಮುಹಮ್ಮದ್(ಸ)ರವರೆಗೆ ವಿಮೋಚನೆಯ ಸಾಲು ಸಾಲು ದೃಷ್ಟಾಂತಗಳೂ ಮದ್ರಸ ಪಠ್ಯಗಳಲ್ಲಿವೆ. ಈಜಿಪ್ಟ್ ದೊರೆ ಫರೋವನ ಆಡಳಿತದಲ್ಲಿ ತೀವ್ರ ದೌರ್ಜನ್ಯಕ್ಕೆ ಒಳಗಾಗಿದ್ದ ಇಸ್ರಾಈಲ್ ಎಂಬ ಸಮುದಾಯವನ್ನು ವಿಮೋಚಿಸಿ ಪ್ರವಾದಿ ಮೂಸಾರು(ಅ) ಫೆಲೆಸ್ತೀನ್‌ಗೆ ಕರೆತಂದ ಘಟನಾವಳಿಯನ್ನು ಮದ್ರಸ ವಿದ್ಯಾರ್ಥಿಗಳು ಕಲಿಯಲೇಬೇಕಾಗುತ್ತದೆ. ಇಸ್ರಾಈಲ್ ಸಮುದಾಯದಿಂದ ತನ್ನ ರಾಜಪ್ರಭುತ್ವಕ್ಕೆ ಕಂಟಕ ಇದೆ ಎಂದು ಭಯಪಟ್ಟಿದ್ದ ದೊರೆ ಫರೋವ ಆ ಸಮುದಾಯದ ಗಂಡು ಮಕ್ಕಳನ್ನೆಲ್ಲ ವಧಿಸಲು ಆದೇಶಿಸಿದ್ದ. ಇದನ್ನು ವಿರೋಧಿಸಿದ ಪ್ರವಾದಿ ಮೂಸಾ(ಅ) ಇಸ್ರಾಈಲ್ ಸಮುದಾಯದ ವಿಮೋಚನೆಗೆ ನೇತೃತ್ವ ನೀಡಿದರು. ಇದರ ನಡುವೆ ದೇಶಭ್ರಷ್ಟ ಜೀವನ ನಡೆಸಿದರು. ಪ್ರವಾದಿ ಮುಹಮ್ಮದ್(ಸ)ರಂತೂ ತನ್ನ ವಿಮೋಚನಾ ಹೋರಾಟದ ದಾರಿಯಲ್ಲಿ ತೀವ್ರ ವಿರೋಧವನ್ನು ಎದುರಿಸಿದರು. ಕೊನೆಗೆ ಹುಟ್ಟೂರು ಮಕ್ಕಾ ತೊರೆದು ಮದೀನಾಕ್ಕೆ ವಲಸೆ ಹೋದರು. ಆದರೆ, ತನ್ನ ವಿಮೋಚನಾ ಹೋರಾಟದಿಂದ ಪ್ರವಾದಿ(ಸ) ಹಿಂಜರಿಯಲಿಲ್ಲ. ಅವರು ಮರಳಿ ಮಕ್ಕಾಕ್ಕೆ ಬಂದರು ಮತ್ತು ಜನತಾ ವಿಮೋಚನೆಯಲ್ಲಿ ಭಾಗಿಯಾದರು. ಮದ್ರಸಾ ವಿದ್ಯಾರ್ಥಿಗಲೆಲ್ಲ ಈ ಇತಿಹಾಸವನ್ನು ಕಲಿತೇ ಬೆಳೆಯುತ್ತಾರೆ.
ಮನುಷ್ಯರನ್ನು ಗುಲಾಮರಂತೆ ಮತ್ತು ಇನ್ನೊಬ್ಬರ ಅಡಿಯಾಳುಗಳಂತೆ ನಡೆಸಿಕೊಳ್ಳುವ ಯಾವುದೇ ವ್ಯವಸ್ಥೆಯನ್ನು ಒಪ್ಪಿಕೊಳ್ಳದಂತೆ ಹಾಗೂ ಅದರಿಂದ ಜನರನ್ನು ವಿಮೋಚನೆಗೊಳಿಸುವುದಕ್ಕೆ ಹೋರಾಡುವಂತೆ ಇಸ್ಲಾಮೀ ಇತಿಹಾಸ ಕರೆ ಕೊಡುತ್ತದೆ. ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮುಸ್ಲಿಮರು ಮಹತ್ವಪೂರ್ಣ ಪಾತ್ರ ನಿಭಾಯಿಸಿರುವುದಕ್ಕೆ ಈ ಚರಿತ್ರೆಯೇ ಪ್ರೇರಣೆಯಾಗಿದೆ. ಈ ಕಾರಣದಿಂದಲೇ, ಬ್ರಿಟಿಷರು ಈ ದೇಶವನ್ನು ವಿಭಜಿಸುವ ಸಂಚು ನಡೆಸಿರಬಹುದೇ ಎಂಬ ಅನುಮಾನವೂ ಇದೆ.
ಸ್ವಾತಂತ್ರ‍್ಯ ಚಳವಳಿಯಲ್ಲಿ ಮೌಲಾನಾಗಳೂ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿಯಾದುದರಿಂದ ಸಿಟ್ಟಾದ ಬ್ರಿಟಿಷರು ಹಿಂದೂ-ಮುಸ್ಲಿಮರನ್ನು ವಿಭಜಿಸುವುದಕ್ಕೆ ಮುಂದಾಗಿರಲೂಬಹುದು. ಆ ಮೂಲಕ ಮುಸ್ಲಿಮರಲ್ಲಿ ಅಭದ್ರತೆಯನ್ನು ಸಿಲುಕಿಸುವುದು ಮತ್ತು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವುದೇ ಈ ದ್ವಿರಾಷ್ಟ್ರ ಸಿದ್ಧಾಂತದ ಉದ್ದೇಶವಾಗಿರಬಹುದು. ಹೀಗೆ ಸಂದೇಹ ಪಡುವುದಕ್ಕೆ ಇನ್ನೊಂದು ಕಾರಣವೇನೆಂದರೆ, ಈ ಮೌಲಾನಾಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ‍್ಯ ಚಳವಳಿಯನ್ನು ಪ್ರಬಲವಾಗಿ ಬೆಂಬಲಿಸುತ್ತಿದ್ದುದು. ಮಹಾತ್ಮಾ ಗಾಂಧಿಗೆ ಬೆನ್ನೆಲುಬಾಗಿ ನಿಂತಿದ್ದುದು. ಅರಬಿ ಭಾಷೆಯ ಕುರ್‌ಆನನ್ನು ಉರ್ದು ಭಾಷೆಗೆ ಅನುವಾದಿಸಿ ಅದಕ್ಕೆ ವ್ಯಾಖ್ಯಾನ ಬರೆಯುವಷ್ಟು ಅಮೋಘ ಪಾಂಡಿತ್ಯವನ್ನು ಹೊಂದಿದ್ದ ಮೌಲಾನಾ ಅಬುಲ್ ಕಲಾಂ ಆಝಾದ್‌ರೇ ಕಾಂಗ್ರೆಸ್‌ನ ಮುಂಚೂಣಿ ನಾಯಕರೂ ಆಗಿದ್ದರು.
ಭಾರತೀಯ ಹಿಂದೂಗಳೊಂದಿಗೆ ಈ ಮೌಲಾನಾಗಳು ತೋರಿದ ಒಗ್ಗಟ್ಟು ಮತ್ತು ಸಾಮರಸ್ಯ ನೀತಿಯು ಸ್ವಾತಂತ್ರ‍್ಯ ಚಳವಳಿಯ ಯಶಸ್ಸಿಗೆ ಮಹತ್ವಪೂರ್ಣ ಕೊಡುಗೆಯನ್ನೂ ನೀಡಿದೆ. ಒಂದುವೇಳೆ, ಬಹುದೇವಾರಾಧಕರಾದ ಹಿಂದೂಗಳನ್ನು ಏಕದೇವಾರಾಧಕರಾದ ಮುಸ್ಲಿಮರು ಬೆಂಬಲಿಸುವುದಾಗಲಿ, ಅವರ ಜೊತೆ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸುವುದಾಗಲಿ ಧರ್ಮವಿರೋಧಿ ಎಂಬ ಹೇಳಿಕೆಯನ್ನು ಓರ್ವ ಮೌಲಾನಾ ನೀಡಿರುತ್ತಿದ್ದರೆ ಬ್ರಿಟಿಷರು ಅದನ್ನು ಪಾರಿತೋಷಕಗಳೊಂದಿಗೆ ಸ್ವಾಗತಿಸುತ್ತಿದ್ದರು. ಯಾಕೆಂದರೆ, ಭಾರತವನ್ನು ಇನ್ನೊಂದು ಶತಮಾನಗಳ ಕಾಲ ದರೋಡೆ ಮಾಡುವುದಕ್ಕೆ ಈ ವಿಭಜನವಾದಿ ಹೇಳಿಕೆಯು ನೀರು-ಗೊಬ್ಬರ ಒದಗಿಸುತ್ತಿತ್ತು. ಮಾತ್ರವಲ್ಲ, ಮೌಲಾನಗಳಿಂದ ಇಂಥದ್ದೊಂದು ಫತ್ವ ಹೊರಡಿಸುವುದಕ್ಕೆ ಬ್ರಿಟಿಷರು ಲಂಚದ ಆಮಿಷ ಒಡ್ಡಿರಲೂ ಬಹುದು. ಆದರೆ, ಮೌಲಾನಾ ನೇತೃತ್ವದಲ್ಲಿ ಒಗ್ಗಟ್ಟಾಗಿದ್ದ ಮತ್ತು ಬ್ರಿಟಿಷ್ ಭಾಷೆಯನ್ನೇ ತಿರಸ್ಕರಿಸುವಷ್ಟು ಪ್ರಬಲವಾಗಿದ್ದ ಮುಸ್ಲಿಮರನ್ನು ಓಲೈಸಲು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಈ ಮುಖಭಂಗದ ಸೇಡನ್ನು ತೀರಿಸುವುದಕ್ಕಾಗಿಯೇ ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ಮುನ್ನೆಲೆಗೆ ತಂದಿರಬಹುದು ಮತ್ತು ಅವಕಾಶವಾದಿ ಹಿಂದೂ-ಮುಸ್ಲಿಮ್ ನಾಯಕರ ಬಾಯಿಯಿಂದ ಅದನ್ನು ಹೇಳಿಸಿರಬಹುದು. ಇವು ಏನೇ ಇದ್ದರೂ,
77ನೇ ಸ್ವಾತಂತ್ರ‍್ಯೋತ್ಸವದ ಈ ಸಂದರ್ಭದಲ್ಲಿ ನಿಂತು ಅವಲೋಕಿಸುವಾಗ ಹಿಂದೂ ಮುಸ್ಲಿಮರನ್ನು ಒಡೆಯುವ ಬ್ರಿಟಿಷರ ಸಂಚು ಒಂದು ಹಂತದವರೆಗೆ ಯಶಸ್ವಿಯಾಗಿದೆ ಎಂದೇ ಹೇಳಬಹುದು.