✍️ ರೈಹಾನ್ ವಿ.ಕೆ., ಸಚ್ಚೇರಿಪೇಟೆ
ಕುರ್‌ಆನ್ ಆತ್ಮವನ್ನು ರೂಹ್ ಅಥವಾ ನಫ್ಸ್ ಎಂಬ ಪದದಿಂದ ನಮಗೆ ಪರಿಚಯಿಸುತ್ತದೆ. ಕುರ್‌ಆನ್ ನಲ್ಲಿ ಪರಾಮರ್ಶೆ ಮಾಡಲಾದ ಮೂರು ರೀತಿಯ ನಫ್ಸ್ ಹೀಗಿದೆ:
1- ನಫ್ಸುಲ್ಲವ್ವಾಮ
2- ನಫ್ಸ್ ಅಲ್ ಅಮ್ಮಾರ.
3- ನಫ್ಸ್ ಅಲ್ ಮುತ್ಮ ಇನ್ನ.
ಅಲ್ಲಾಹನು ಕೆಟ್ಟ ಕಾರ್ಯಗಳಿಂದ ತಡೆಯುವಂತಹ ಓರ್ವ ಮಿತ್ರನನ್ನು ನಮ್ಮೊಳಗೇ ಇರಿಸಿದ್ದಾನೆ. ಆದ್ದರಿಂದಲೇ ನಾವೇನಾದರೂ ಕೆಟ್ಟ ಕೆಲಸ ಮಾಡ ಬಯಸಿದಾಗ ನಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಅದು ಒಂದು ರೀತಿಯಲ್ಲಿ ಅಪಾಯದ ಕರೆಗಂಟೆಯಾಗಿದೆ. ನಾವು ಗಾಬರಿಗೊಳಗಾಗುತ್ತೇವೆ. ಒಳಗಿನಿಂದಲೇ ಒಂದು ಧ್ವನಿ ಪದೇ ಪದೇ ನಮ್ಮನ್ನು ಎಚ್ಚರಿಸುತ್ತದೆ. ಈ ಕೆಲಸ ಮಾಡಬೇಡ; ಇದು ಪಾಪವಾಗಿರುತ್ತದೆ ಎಂದು ಹೇಳುತ್ತಿರುವಂತೆ ನಮಗೆ ತೋಚುತ್ತದೆ.
ಈ ನಮ್ಮ ಮಿತ್ರನ ಹೆಸರೇ ಆತ್ಮಸಾಕ್ಷಿ. ಇದನ್ನೇ ಪವಿತ್ರ ಕುರ್‌ಆನ್ ನಫ್ಸುಲ್ಲವ್ವಾಮ ಎಂದು ಪರಿಚಯಿಸುತ್ತದೆ.
ಆದರೆ ನಮ್ಮೊಳಗೇ ಇನ್ನೊರ್ವ ಕೆಟ್ಟ ಮಿತ್ರನೂ ಇದ್ದಾನೆ. ಅವನು ನಮ್ಮನ್ನು ಸದಾ ಕೆಟ್ಟ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತಿರುತ್ತಾನೆ. ಇದನ್ನೇ ಪವಿತ್ರ ಕುರ್‌ಆನ್ ನಫ್ಸುಲ್ ಅಮ್ಮಾರ ಎಂದು ಪರಿಚಯಿಸುತ್ತದೆ.
ನಾವು ಏನಾದರು ಕೆಲಸ ಮಾಡಬಯಸುವಾಗ ಆತ್ಮಸಾಕ್ಷಿ ಮತ್ತು ನಫ್ಸುಲ್ ಅಮ್ಮಾರ(ಭ್ರಷ್ಟಚಿತ್ತ) ಇವುಗಳ ನಡುವೆ ಸಂಘರ್ಷ ನಡೆಯುತ್ತದೆ. ಎರಡೂ ತಂತಮ್ಮ ಆಜ್ಞೆಗಳನ್ನು ಪಾಲಿಸಲು ನಿರ್ಬಂಧಿಸುತ್ತವೆ. ಕೊನೆಗೆ ನಾವು ಒಂದರ ಆಜ್ಞೆ ಪಾಲಿಸಿ ಬಿಡುತ್ತೇವೆ. ಯಾವುದರ ಆಜ್ಞೆಯನ್ನು ನಾವು ಹೆಚ್ಚು ಪಾಲಿಸುತ್ತಾ ಹೋಗುತ್ತೇವೆಯೋ ಕ್ರಮೇಣ ಅದು ನಮ್ಮ ಮೇಲಾಧಿಕಾರಿ ಆಗುತ್ತದೆ. ನಾವು ಯಾವಾಗಲೂ ಆತ್ಮಸಾಕ್ಷಿಯ ಮಾತನ್ನೂ ಅನುಸರಿಸುವವರಾಬೇಕು. ಭ್ರಷ್ಟಚಿತ್ತದ ಮಾತು ಎಂದೂ ಕೇಳಬಾರದು.
ಪ್ರಮಾದವಶಾತ್ ಎಂದಾದರೂ ಅದರ ಮಾತನ್ನು ಕೇಳಿದರೆ ಕೂಡಲೇ ಪಶ್ಚಾತ್ತಾಪ ಮಾಡಿ ಮುಂದೆಂದೂ ಅಂತಹ ತಪ್ಪಾಗದಂತೆ ಜಾಗ್ರತೆ ಪಾಲಿಸಬೇಕು. ಇದರಲ್ಲೇ ನಮ್ಮ ಯಶಸ್ಸು ಇದೆ.
ನಫ್ಸ್ ಮುತ್ಮ ಇನ್ನ ಎಂದರೆ ಪ್ರಶಾಂತ ಚಿತ್ತ. ಸೃಷ್ಟಿಕರ್ತನ ಆಜ್ಞೆಯನ್ನು ಮನಸಾ ವಾಚಾ ಕರ್ಮಣಾ ಪಾಲಿಸುತ್ತಾ, ಸತ್ಯ ಮಾರ್ಗದಲ್ಲಿ ಅಗತ್ಯವಿರುವ ಎಲ್ಲಾ ತ್ಯಾಗಗಳನ್ನು ಅರ್ಪಿಸಿ ಆ ಮಾರ್ಗದಲ್ಲಿ ಬರುವ ಎಲ್ಲಾ ಸಂಕಷ್ಟಗಳನ್ನು ಪೂರ್ಣಮನಸ್ಸಿನೊಂದಿಗೆ ಸಹಿಸಿ, ಇತರರ ಅನುಗ್ರಹಗಳ ಬಗ್ಗೆ ಸಂತೋಷ ಪಟ್ಟು ಅವು ತನಗೆ ಸಿಕ್ಕಿಲ್ಲ ಎಂದು ಹಲುಬದ, ಸತ್ಯ ಮಾರ್ಗವನ್ನು ಅನುಸರಿಸುವುದರಿಂದ ಎಲ್ಲಾ ಕೆಡುಕುಗಳಿಂದ ಸುರಕ್ಷಿತನಾಗಿರುವೆನೆಂದು ಸಂತೋಷಿಸುತ್ತಾ, ಯಾವುದೇ ಕಷ್ಟಗಳನ್ನು ಹಸನ್ಮುಖಿಯಾಗಿ ಸ್ವೀಕರಿಸುವ ಶಾಂತ ಮನಸ್ಸು. ಈ ಮನಸ್ಸಿಗೆ ಯಾವುದೇ ಸಂಘರ್ಷಗಳಿಲ್ಲ. ಇಂತಹ ಶಾಂತ ಮನಸ್ಸನ್ನು ಕುರ್‌ಆನ್ ಇತ್ಮಿನಾನ್‌ನಿಂದ ಕೂಡಿದ ನಫ್ ಸೆ ಮುತ್ಮ ಇನ್ನ ಎಂದಿದೆ.
ಓರ್ವ ವಿದ್ವಾಂಸರು ಹೀಗೆ ಹೇಳುತ್ತಾರೆ: ತನ್ನ ಪ್ರಾತಃ ಕಾಲದ ದಿನಚರಿಯನ್ನು ಪೂರ್ತಿಯಾಗಿಸಿದ ನಂತರ ಸ್ವಲ್ಪ ಮಟ್ಟಿಗೆ ನಿರಾಳವಾಗಿ ಚಿತ್ತದೊಡನೆ ಕೆಲವು ಷರತ್ತು ಬದ್ಧ ಮಾತುಗಳನ್ನಾಡಬೇಕು.
ಅದೇನಂದರೆ, ಓ! ನನ್ನ ಚಿತ್ತವೇ, ಇದೊಂದು ಹೊಸ ದಿನ. ಸೃಷ್ಟಿಕರ್ತನಿಂದ ನಿನಗೆ ಲಭಿಸಿದ ಕೊಡುಗೆ. ಇನ್ನೊಂದು ಅವಕಾಶ. ಮರಣವನ್ನು ಮುಂದೂಡಿ ನಿನ್ನ ಮೇಲೆ ಮಹದುಪಕಾರವನ್ನು ಮಾಡಲಾಗಿದೆ. ಒಂದು ವೇಳೆ ಈ ದಿನವನ್ನು ನಿನಗೆ ಕೊಡದಿರುತ್ತಿದ್ದರೆ, ಅಯ್ಯೋ ಒಂದಿಷ್ಟು ಅವಕಾಶವನ್ನು ಕೊಡುತ್ತಿದ್ದರೆ ನಾನು ಒಂದಿಷ್ಟು ಒಳ್ಳೆಯ ಕೆಲಸಗಳಲ್ಲಿ ಮಗ್ನನಾಗುತ್ತಿದ್ದೆ ಎಂದು ನೀನು ಪರಿತಪಿಸುತ್ತಿದ್ದೆ. ಆದ್ದರಿಂದ, ಓ ನಾಶಕ್ಕೊಳಗಾದ ನನ್ನ ಚಿತ್ತವೇ, ನಿನಗೆ ಪುನಃ ಅವಧಿ ನೀಡಿ ಮರಳಿಸಲಾಗಿದೆ ಎಂದು ಭಾವಿಸಿ ಈ ದಿನವನ್ನು ಪೋಲು ಮಾಡಬೇಡ. ನಿನಗೆ ನೀಡಿದ ಈ ಇಪ್ಪತ್ತು ನಾಲ್ಕು ಗಂಟೆಗಳು ಸ್ವರ್ಗದ ಬಾಗಿಲಿನ ಕೀಲಿಕೈ ಎಂದು ಭಾವಿಸಿಕೋ.
ಪ್ರವಾದಿ ವಚನವೊಂದು ಹೀಗಿದೆ, ಯಾರು ತನ್ನ ಚಿತ್ತವನ್ನು ಹತೋಟಿಯಲ್ಲಿಟ್ಟು ಮರಣಾನಂತರದ ಜೀವನಕ್ಕಾಗಿ ಕಾರ್ಯವೆಸಗುತ್ತಾನೋ ಅವನೇ ಬುದ್ಧಿವಂತ.
ಹಾಗಾದರೆ ಮಾನವ ಸೃಷ್ಟಿಯ ಉದ್ದೇಶವೇನು?
ಮಾನವನ ಸೃಷ್ಟಿಯ ಉದ್ದೇಶವು ಇಲ್ಲೇ ಪೂರ್ಣಗೊಂಡು, ಪ್ರಕೃತಿದತ್ತವಾದ ನಿಯಮದಂತೆ ಒಂದು ಅವಧಿಯವರೆಗೆ ತನ್ನ ಪಾಲಿನ ಕೆಲಸ ಮಾಡಿ ಇಲ್ಲೇ ಸತ್ತು ನಾಶವಾಗಲು ಅವನು ಗಿಡ ಮರಗಳು ಮತ್ತು ಪ್ರಾಣಿಗಳಂಥಲ್ಲ. ಅದೇರೀತಿ ಈ ಲೋಕವು ಯೋಗಿಗಳು ಭಾವಿಸುವಂತೆ ಮಾನವನಿಗೆ ಇದು ಯಾತನಾ ಸ್ಥಳವಲ್ಲ. ಪುನರ್ಜನ್ಮವಾದಿಗಳು ಭಾವಿಸುವಂತೆ ಪ್ರತಿಫಲ ಸಿಗುವ ಸ್ಥಳವೂ ಅಲ್ಲ. ಭೌತಿಕವಾದಿಗಳು ಭಾವಿಸುವಂತೆ ಇದು ವಿಹಾರ ಕೇಂದ್ರವೋ ಮೇಯುವ ಸ್ಥಳವೋ ಅಲ್ಲ. ಡಾರ್ವಿನ್ ಮತ್ತು ಮಾರ್ಕ್ಸ್’ನ ಅನುಯಾಯಿಗಳು ಭಾವಿಸಿರುವಂತೆ ಕೇವಲ ಹೋರಾಟದ ರಂಗವೂ ಅಲ್ಲ.
ಬದಲಾಗಿ ಈ ಲೋಕವು ಮಾನವನಿಗೆ ಪರೀಕ್ಷಾ ಕೇಂದ್ರವಾಗಿದೆ. ಅವನ ಆಯುಷ್ಯವೆಂದು ಭಾವಿಸುವ ವಸ್ತು ಅವನಿಗೆ ನೀಡಲಾಗಿರುವ ಪರೀಕ್ಷಾವಧಿಯಾಗಿದೆ. ಈ ಲೋಕದಲ್ಲಿ ಮಾನವನಿಗೆ ನೀಡಲಾಗಿರುವ ಶಕ್ತಿ ಸಾಮರ್ಥ್ಯಗಳು, ಅವನಿಗೆ ಯಾವ ವಸ್ತುಗಳ ಮೇಲೆ ಅಧಿಕಾರ ನಡೆಸುವ ಅವಕಾಶ ನೀಡಲಾಗಿದೆಯೋ, ಯಾವ ನೆಲೆಯಲ್ಲಿ ಅವನು ಇಲ್ಲಿ ಕೆಲಸ ಮಾಡುತ್ತಾನೋ, ಅವನ ಮತ್ತು ಇತರರು ಮಧ್ಯೆ ಇರುವ ಸಂಬಂಧಗಳು ಎಲ್ಲವೂ ವಾಸ್ತವದಲ್ಲಿ ಈ ಪರೀಕ್ಷೆಯ ವಿವಿಧ ರೂಪದಲ್ಲಿರುವ ಪ್ರಶ್ನೆ ಪತ್ರಿಕೆಗಳಾಗಿವೆ. ಜೀವನದ ಕೊನೆಯ ಉಸಿರಿನ ತನಕವೂ ಇದು ಮುಂದುವರಿಯುತ್ತಲೇ ಇರುತ್ತದೆ. ಅದರ ಫಲಿತಾಂಶಗಳೆಲ್ಲವೂ ಇಲ್ಲಿ ಪ್ರಕಟವಾಗುವುದೂ ಇಲ್ಲ. ಪರಲೋಕದಲ್ಲಿ ಅವನ ಎಲ್ಲಾ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಅವನ ಜಯಾಪಜಯಗಳನ್ನು ನಿರ್ಣಯಿಸಲಾಗುತ್ತದೆ.
ಅವನು ನಾನು ಏಕದೇವನ ದಾಸನೆಂದು ಒಪ್ಪಿಕೊಂಡು ದೇವನು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ್ದರೆ ಮತ್ತು ಪರಲೋಕದ ವಿಚಾರಣೆಯನ್ನು ತನ್ನ ದೃಷ್ಟಿಯಲ್ಲಿಟ್ಟುಕೊಂಡಿದ್ದರೆ ಅವನು ಪರೀಕ್ಷೆಯಲ್ಲಿ ಉತ್ತೀರ್ಣನಾಗುವನು. ಹೀಗೆ ಪರೀಕ್ಷಾವಧಿ ಎಂಬಂತೆ ಈ ಲೋಕ ಜೀವನದಲ್ಲಿ ಮಾನವನ ಪಾಲಿಗೆ ಎರಡು ತರದ ಶತ್ರುಗಳಿವೆ.
ಒಂದು ಕುರ್‌ಆನ್ ಸ್ಪಷ್ಟವಾಗಿ ಹೇಳಿರುವಂತಹ ಶೈತಾನನು ಮತ್ತು ಶೈತಾನನ ಸ್ವಭಾವವಿರುವ ಮನುಷ್ಯರು. ಇನ್ನೊಂದು ಅವನ ದೇಹೇಚ್ಛೆ.
ಶತ್ರು
ಮನುಷ್ಯನಿಗೆ ಶೈತಾನನು ಶತ್ರುವಾಗಿರುವಂತೆಯೇ ಅವನ ದೇಹೇಚ್ಛೆಯೂ ಆತನ ಶತ್ರುವಾಗಿರುತ್ತದೆ. ಕುರ್‌ಆನ್ ಪ್ರಶ್ನಿಸುತ್ತದೆ, “ತನ್ನ ಸ್ವೇಚ್ಛೆಯನ್ನೇ ದೇವನಾಗಿಸಿ ಕೊಂಡವನನ್ನು ನೋಡಿದಿರಾ?”
ಮನುಷ್ಯನು ತಪ್ಪೆಸಗಿ ಶೈತಾನನ ಮೇಲೆ ಆರೋಪಿಸುವುದು ವಾಡಿಕೆ. ನಿಜವಾಗಿ, ನಾವು ಸೃಷ್ಟಿಕರ್ತನ ಮಾರ್ಗವನ್ನು ಅನುಸರಿಸುವಾಗ ಮಾತ್ರ ಶೈತಾನನು ನಮ್ಮ ಮನಸ್ಸಿನಲ್ಲಿ ಚಂಚಲತೆ ಉಂಟು ಮಾಡಲು ಪ್ರಾರಂಭಿಸುತ್ತಾನೆ. ಹ. ಇಬ್ರಾಹೀಂ(ಅ) ತನ್ನ ಮಗನನ್ನು ಬಲಿಯರ್ಪಿಸಲು ಮುಂದಾದಾಗ ಶೈತಾನನು ಬಂದು ಇಬ್ರಾಹೀಂ(ಅ)ರಿಗೆ ದುರ್ಬೋಧನೆ ಮಾಡುತ್ತಾನೆ. ಒಬ್ಬನಿಗೆ ಪ್ರಭಾತ ನಮಾಝಿಗೆ ಏಳಲು ಆಗುವುದಿಲ್ಲ ಎಂದಾದರೆ ಅದು ಅವನು ದೇಹೇಚ್ಛೆಯನ್ನು ಅನುಸರಿಸುತ್ತಾನೆ ಎಂದರ್ಥ. ಅವನ ದೇಹವು ನಿದ್ರೆಯಿಂದ ಎದ್ದೇಳಲು ತಯಾರಿಲ್ಲ, ಅವನು ಆಲಸ್ಯವನ್ನು ಇಚ್ಛಿಸುತ್ತಾನೆ.
ಒಬ್ಬನು ದೇಹೇಚ್ಛೆಯನ್ನು ಮೆಟ್ಟಿ ನಿಂತು ನಮಾಝಿಗೆ ನಿಲ್ಲಬೇಕಾದರೆ ಶೈತಾನನು ಬಂದು ಅವನ ಏಕಾಗ್ರತೆಗೆ ಅಡ್ಡಿಪಡಿಸುತ್ತಾನೆ. ಹೀಗೆ ಪ್ರತಿಯೊಂದು ವಿಷಯದಲ್ಲೂ ದೇಹೇಚ್ಛೆ ಮತ್ತು ಶೈತಾನನ ಉಪದ್ರವ ಯಾವುದೆಂಬ ವ್ಯತ್ಯಾಸವನ್ನು ನಾವು ತಿಳಿದಿರಬೇಕು. ಖಂಡಿತವಾಗಿಯೂ ಶೈತಾನನು ನಮ್ಮ ಮನಸ್ಸಿನೊಳಗಿರುವುದನ್ನು ಅರಿಯಲಾರನು. ಅಂತಹ ಯಾವ ಸಾಮರ್ಥ್ಯವನ್ನೂ ಸೃಷ್ಟಿಕರ್ತನು ಅವನಿಗೆ ನೀಡಿಲ್ಲ. ದೇವಚರರಿಗೂ ಅಂತಹ ಶಕ್ತಿ ಕೊಟ್ಟಿಲ್ಲ.
ಕುರ್‌ಆನ್ ಹೇಳುತ್ತದೆ..
“ನೀವು ನಿಮ್ಮ ಮನದೊಳಗಿನ ಸಂಗತಿಗಳನ್ನು ವ್ಯಕ್ತಪಡಿಸಿದರೂ ಗುಪ್ತವಾಗಿಟ್ಟರೂ, ಅಲ್ಲಾಹನಂತೂ ಆ ಕುರಿತು ನಿಮ್ಮೊಡನೆ ವಿಚಾರಣೆ ನಡೆಸುವನು.”
ಶೈತಾನನು
ಯಾವ ವಿಷಯದಲ್ಲಿ ಮನುಷ್ಯನನ್ನು ತನ್ನ ಬಲೆಗೆ ಹಾಕಬಹುದೆಂದು ಶೈತಾನನು ಸದಾ ಹೊಂಚು ಹಾಕುತ್ತಿರುತ್ತಾನೆ. ಆದ್ದರಿಂದಲೇ ಕುರ್‌ಆನ್ ಹೇಳುತ್ತದೆ:
ಶೈತಾನನ ಕಡೆಯಿಂದ ನಿಮಗೇನಾದರೂ ಪ್ರಲೋಭನೆಯುಂಟಾದರೆ, ನೀವು ಸೃಷ್ಟಿಕರ್ತನಲ್ಲಿ ಅಭಯ ಯಾಚಿಸಿರಿ. ತಾನು ಸ್ವರ್ಗದಿಂದ ಅಟ್ಟಲ್ಪಟ್ಟಿರುವಂತೆಯೇ ಮಾನವರನ್ನೂ ಸ್ವರ್ಗದಿಂದ ದೂರಕ್ಕಟ್ಟುವೆನೆಂದು ಶೈತಾನನು ಅಲ್ಲಾಹನೊಡನೆ ಕುತರ್ಕ ನಡೆಸಿರುವನು. ಅದಕ್ಕಾಗಿ ಸಮಯಾವಕಾಶವನ್ನೂ ಅಲ್ಲಾಹನಿಂದ ಪಡೆದಿರುವನು.
ಆದ್ದರಿಂದ ಶೈತಾನನಿಗೆ ಒಂದು ಗುರಿ ಇದೆ. ಛಲವೂ ಇದೆ. ಆದ್ದರಿಂದ ಅವನು Active ಆಗಿದ್ದಾನೆ. ಆದರೆ ಕುರ್‌ಆನ್ ಹೇಳುತ್ತದೆ.. ದೇವಭಯ ಉಳ್ಳವರು ಖಂಡಿತಾ ನಿನ್ನ ಮೋಸದ ಜಾಲದಲ್ಲಿ ಸಿಲುಕಲಾರರು. ಅವರು ನಿನ್ನನ್ನು ಗುರುತಿಸುವರು.
ಆದ್ದರಿಂದ ಪ್ರತಿಯೊಬ್ಬರೂ ತನ್ನೊಳಗಿನ ಶೈತಾನನು ಯಾರು ಎಂದು ಗುರುತಿಸಬೇಕು. ಮನುಷ್ಯ ವರ್ಗದಲ್ಲೂ ಕೆಲವು ಶೈತಾನರಿದ್ದಾರೆಂದು ಕುರ್‌ಆನ್ ಪರಿಚಯಿಸುತ್ತದೆ. ಅವರೇ ದುಷ್ಟ ಗೆಳೆಯರು ಮತ್ತು ಕೆಟ್ಟ ನಾಯಕರು.
ಅವರು ಸದಾ ಜನರನ್ನು ಕೆಟ್ಟ ದಾರಿಗೆ ಕರೆದೊಯ್ಯುತ್ತಿರುತ್ತಾರೆ. ಹಾಗಾಗಿ ಇಹಪರಗಳೆರಡರಲ್ಲೂ ನಾವು ಉನ್ನತ ಮಟ್ಟದ ಜಯ ಸಾಧಿಸಬೇಕಾದರೆ ಧರ್ಮ ಗ್ರಂಥಗಳ ಅಧ್ಯಯನ ಮಾಡಬೇಕಾಗಿದೆ.
ಆತ್ಮಸಂಸ್ಕರಣೆ
ಸನ್ಮಾರ್ಗವನ್ನು ಅಂಗೀಕರಿಸಿ, ಆಚಾರ ವಿಚಾರಗಳಲ್ಲಿ ನಿಷಿದ್ಧಗಳಿಂದ ದೂರವಿದ್ದು, ತನ್ನ ಆತ್ಮವನ್ನು ಸಂಸ್ಕರಿಸಿ ಕೊಂಡವನ ಆತ್ಮವು ಸಹಜವಾಗಿ ಅನೇಕ ಕೆಡುಕುಗಳಿಂದ ಮತ್ತು ದೋಷಗಳಿಂದ ಶುದ್ಧವಾಗುತ್ತಾ ಹೋಗುವುದು. ಈ ಸುಧಾರಣೆಯ ಹೊರತಾಗಿಯೂ ಓರ್ವನ ಜೀವನವು ಉನ್ನತ ಮಟ್ಟಕ್ಕೆ ತಲುಪದಿದ್ದರೆ ಅಥವಾ ಪ್ರಮಾದವಶಾತ್ ಮನುಷ್ಯ ಸಹಜವಾದ ಸಣ್ಣ ಪುಟ್ಟ ತಪ್ಪುಗಳು ಅವನಲ್ಲಿ ಸಂಭವಿಸಿದರೆ ಸೃಷ್ಟಿಕರ್ತನು ತನ್ನ ಅನುಗ್ರಹಗಳಿಂದ ಅವುಗಳನ್ನು ಮನ್ನಿಸಿ ಲೆಕ್ಕದಿಂದ ವಜಾಗೊಳಿಸುವನು. ಯಾಕೆಂದರೆ ಸೃಷ್ಟಿಕರ್ತನು ಸನ್ಮಾರ್ಗದರ್ಶನದ ಬುನಾದಿಯಾಗಿರುವ ಸಂಸ್ಕರಣೆ ಮಾರ್ಗವನ್ನು ಅಂಗೀಕರಿಸಿದವರ ಆಂಶಿಕ ಮತ್ತು ಕ್ಷುಲ್ಲಕ ದೋಷಗಳಿಗಾಗಿ ದಂಡಿಸುವಂತಹ ಕಠೋರ ಹೃದಯಿಯಲ್ಲ ಎನ್ನಬಹುದು.