✍️ ಕೆ.ಎಂ. ಅಶ್ರಫ್
ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಸಕಲ ಮಾನವಕುಲಕ್ಕೆ ಮಾರಕವಾದ ವಿಷಯಗಳಲ್ಲಿ ಅಮಲು ಪದಾರ್ಥಗಳು ಮತ್ತು ಬಡ್ಡಿ ವ್ಯವಹಾರಗಳು ಅತೀ ಪ್ರಮುಖವಾಗಿವೆ. ಇವೆರಡೂ ಜಾಗತಿಕವಾಗಿ ಕೋಟಿಗಟ್ಟಲೆ ವ್ಯವಹಾರ ಹೊಂದಿವೆ.
ಇತಿಹಾಸದುದ್ದಕ್ಕೂ ಶ್ರೀಮಂತ ಮತ್ತು ಬಡವರ ನಡುವೆ ಅಂತರವನ್ನು ಹೆಚ್ಚಿಸುವಲ್ಲಿ ಬಡ್ಡಿ ವ್ಯವಹಾರ ಪ್ರಮುಖ ಪಾತ್ರ ವಹಿಸಿದೆ. ಬಡ ಮತ್ತು ಜನ ಸಾಮಾನ್ಯರನ್ನು ಶೋಷಿಸಿ, ಅವರನ್ನು ಗುಲಾಮರನ್ನಾಗಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಕಾಯ್ದುಕೊಳ್ಳುವಲ್ಲಿ ಬಂಡವಾಳ ಶಾಹಿಗಳ ಅತೀ ಉಪಯುಕ್ತವಾದ ಅಸ್ತ್ರ ಬಡ್ಡಿಯಾಗಿದೆ. ಗ್ರಾಮ ಮಟ್ಟದ ಸೇಠ್, ಬನಿಯಾಗಳಿಂದ ಆರಂಭಿಸಿ ವಿವಿಧ ಸ್ತರಗಳಲ್ಲಿ ಮಹಾಜನ್, ಸಾಹುಕಾರ್, ಪಾನ್ ಬ್ರೋರ‍್ಸ್, ಮೈಕ್ರೋ ಫೈನಾನ್ಸ್, ಚಿಟ್ ಫಂಡ್ ಮತ್ತು ಬ್ಯಾಂಕ್ ಇತ್ಯಾದಿ ವ್ಯಕ್ತಿ ಮತ್ತು ಸಂಸ್ಥೆಗಳು ಈ ಜಾಗತಿಕ ಶೋಷಣಾ ಜಾಲದ ವೈವಿಧ್ಯಮಯ ಪಾತ್ರಧಾರಿಗಳಾಗಿವೆ.
ಸಮಾಜದ ಅತ್ಯಂತ ತಳಮಟ್ಟದ ಕಾರ್ಮಿಕರು, ಮಹಿಳೆಯರಿಗೆ ನೂರಾರು ರೂಪಾಯಿಗಳಿಂದ ಹಿಡಿದು ವ್ಯಾಪಾರ, ಉದ್ದಿಮೆಗಳಿಗೆ ಲಕ್ಷ, ಕೋಟಿಗಳಲ್ಲಿ ಸಾಲ ನೀಡಿ ಹಲವು ಪಟ್ಟು ಬಡ್ಡಿ ವಸೂಲು ಮಾಡುವ ವ್ಯಕ್ತಿ, ಸಂಸ್ಥೆಗಳು, ಬಡ್ಡಿ ಪಾವತಿಸಲು ಸಾಲಗಾರರು ಅಸಮರ್ಥರಾದಾಗ ಅವರ ಮನೆ, ಉದ್ದಿಮೆಗಳನ್ನು ಮುಟ್ಟುಗೋಲು ಹಾಕುವ ಅಥವಾ ಸಾಲಗಾರರನ್ನೇ ಗುಲಾಮರನ್ನಾಗಿಸುವ ಪ್ರಕ್ರಿಯೆ ಇಸ್ಲಾಮಿನ ಉನ್ನತಿಯ ಸುವರ್ಣ ಕಾಲದ (ಕ್ರಿ.ಶ. 630- 750) ಹೊರತು ಇತಿಹಾಸದುದ್ದಕ್ಕೂ ನಡೆದು ಕೊಂಡು ಬಂದಿರುವ ವ್ಯವಸ್ಥಿತ ಶೋಷಣೆ.
ಒಂದು ಕಾಲದಲ್ಲಿ ವ್ಯಾ ಪಾರದ ನೆಪದಲ್ಲಿ ಹೊಸ ಪ್ರದೇಶಗಳಿಗೆ ನುಗ್ಗಿ ಅವುಗಳನ್ನು ತನ್ನ ವಸಾಹತುಗಳನ್ನಾಗಿ ಮಾಡಿದ ವಸಾಹತುಶಾಹಿ ರಾಷ್ಟ್ರಗಳು 19ನೇ ಶತಮಾನದಲ್ಲಿ ಅವುಗಳನ್ನು ಸ್ವತಂತ್ರಗೊಳಿಸಬೇಕಾದ ಅನಿವಾರ್ಯತೆಯುಂಟಾದಾಗ ತಮ್ಮ ಪ್ರಭುತ್ವವನ್ನು ಕಾಯ್ದುಕೊಳ್ಳಲು ಇದೇ ಬಡ್ಡಿ ವ್ಯವಸ್ಥೆ ಯನ್ನು ಸಮರ್ಪಕವಾಗಿ ಉಪಯೋಗಿಸುತ್ತಿವೆ. ಬಡರಾಷ್ಟ್ರಗಳ ಮಾರುಕಟ್ಟೆಯನ್ನು ಬಳಸಿ ತನ್ನದೇ ವ್ಯಾಪಾರ ಹೆಚ್ಚಿಸಲು ಅವುಗಳಿಗೆ ನೀಡುವ ಸಾಲಕ್ಕೆ ಏಡ್, ಅಭಿವೃದ್ಧಿ ಸಹಾಯವೆಂಬ ಸುಂದರ ಹೆಸರನ್ನಿಟ್ಟು ವ್ಯಾಪಾರದ ಲಾಭದೊಂದಿಗೆ ನಿರಂತರ ಬಡ್ಡಿ ವಸೂಲು ಮಾಡಲಾಗುತ್ತದೆ. ಬಡ್ಡಿ, ಸಾಲ ಪಾವತಿಸಲಾಗದಿದ್ದರೆ, ಹಿತಾಕಾಂಕ್ಷಿಗಳೆಂಬಂತೆ ವರ್ತಿಸಿ ಯಾವುದೇ ಸಾಮಾನ್ಯ ಬಡ್ಡಿಕೋರರಿಗಿಂತಲೂ ಮಿಗಿಲಾಗಿ, ಇನ್ನೂ ಹೆಚ್ಚಿನ ಸಾಲ ನೀಡಿ ಮತ್ತಷ್ಟು ಬಡ್ಡಿ ವಸೂಲು ಮಾಡುವುದರೊಂದಿಗೆ ಆ ರಾಷ್ಟ್ರಗಳ ನೀತಿ ಧೋರಣೆಗಳನ್ನು ತನ್ನ ಸ್ವಾರ್ಥಕ್ಕನು ಗುಣವಾಗಿ ನಿಯಂತ್ರಿಸುವಷ್ಟರ ಮಟ್ಟಿಗೆ ಪ್ರಭಾವಕಾರಿಗಳಾಗಿ ಬಡ ರಾಷ್ಟ್ರಗಳನ್ನು ತನ್ನ ಗುಲಾಮರಂತೆ ನಡೆಸಿಕೊಳ್ಳುತ್ತಿವೆ.
ಈ ಕೆಳಗಿನ ಅಂಕಿ ಅಂಶಗಳಿಂದ ಬಡ್ಡಿ ವ್ಯವಹಾರದ ಅಗಾಧತೆಯನ್ನು ಅಂದಾಜಿಸಬಹುದು: 2020ರಲ್ಲಿ ಜಾಗತಿಕ ಬಡ್ಡಿ ಪಾವತಿ 1.4 ಟ್ರಿಲ್ಲಿಯನ್ ಡಾಲರ್ (Bank of International settlements) 2020ರಲ್ಲಿ ಸಾಲ ನಿರ್ವಹಣೆಯ ಭಾರ: 3.5 ಟ್ರಿಲ್ಲಿಯನ್ ಡಾಲರ್ (Institute of International Finance). 2019-20ರಲ್ಲಿ ಭಾರತದ ಸಾಲ ನಿರ್ವಹಣೆಯ ಭಾರ ರೂ. 6.33 ಲಕ್ಷ ಕೋಟಿ, 2020-21ರಲ್ಲಿ ರೂ. 7.12 ಲಕ್ಷ ಕೋಟಿ (ಬಜೆಟ್‌ನಲ್ಲಿ ಒಟ್ಟು ಕಂದಾಯ ಆದಾಯದ 50%)
ಬಡ್ಡಿಯ ಆರ್ಥಿಕ ದುಷ್ಪರಿಣಾಮದಿಂದ ಧನಿಕ ಮತ್ತು ಬಡವರ ಮಧ್ಯೆ ಆರ್ಥಿಕ, ಸಾಮಾಜಿಕ ಅಂತರ ನಿರಂತರ ಹೆಚ್ಚುತ್ತಿದೆ. ಸಾಮಾನ್ಯ ಜನರು, ವ್ಯಾಪಾರಿ, ಉದ್ದಿಮೆದಾರರು ಬಡ್ಡಿ ಮಾರ್ಬಡ್ಡಿಯ ಚಕ್ರದಲ್ಲಿ ಸಿಲುಕಿ ಆರ್ಥಿಕ ಸಂಕಷ್ಟ, ದಿವಾಳಿತನಕ್ಕೊಳಗಾಗುತ್ತಿದ್ದಾರೆ. ಬಡ್ಡಿಯಾಧಾರಿತ ಆರ್ಥಿಕತೆಯ ಪರಿಣಾಮವಾಗಿ ಉಂಟಾಗುವ ಹಣದುಬ್ಬರ, ಬೆಲೆ ಏರಿಕೆ, ಗ್ರಾಹಕರ ಖರೀದಿ ಸಾಮರ್ಥ್ಯದಲ್ಲಿ ಕುಸಿತ ಇತ್ಯಾದಿ ವಿಷಯಗಳು ಈ ಸಾಲದ ಜಾಲದಿಂದ ದೂರವಿರುವ ಜನ ಸಾಮಾನ್ಯರನ್ನೂ ಬಾಧಿಸಿ ಆರ್ಥಿಕ ಸಂಕಷ್ಟ ಮತ್ತು ಆತಂಕಕ್ಕೊಳಪಡಿಸುತ್ತಿದೆ. ಬಡ್ಡಿ ದರದ ಏರಿಳಿಕೆಯ ಕಾರಣ ಮಾರುಕಟ್ಟೆಯ ಏರಿಳಿಕೆ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಬಡ್ಡಿ ಸಾಮಾಜಿಕ ಶೋಷಣೆಗೆ ಕಾರಣವಾಗುವುದರೊಂದಿಗೆ ದುರಾಸೆ, ಭೌತಿಕತೆ, ನೈತಿಕ ಮೌಲ್ಯಗಳ ಕುಸಿತ ಮತ್ತು ಸಾಮಾಜಿಕ ಸಾಮರಸ್ಯವನ್ನು ಕೆಡಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಸಾಲ, ಬಡ್ಡಿಗಳ ಹೊರೆ ಮತ್ತು ಸಂಬಂಧಿತ ಮಾನಸಿಕ ಒತ್ತಡ ಕುಟುಂಬಗಳಲ್ಲಿ ಒಡಕು, ಆತ್ಮಹತ್ಯೆಗಳಿಗೆ ಕಾರಣವಾಗುತ್ತವೆ. ಭಾರತದಲ್ಲಿ 1995ರಿಂದ 2015ರ ವರೆಗೆ ಸುಮಾರು 3 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಅದರಲ್ಲಿ ಬಹುತೇಕ 52%ಕ್ಕಿಂತ ಹೆಚ್ಚು ಸಾಲದ ಹೊರೆ ಕಾರಣವಾಗಿದೆ. ಮನೆಯೊಂದರ ಸರಾಸರಿ ಸಾಲ 1.2 ಲಕ್ಷ ರೂ. ಮತ್ತು ಸರಾಸರಿ ಆದಾಯದ 134% ವೆಂದು ರಿಸರ್ವ್ ಬ್ಯಾಂಕ್ ವರದಿ ಹೇಳುತ್ತದೆ. ಕ್ರೆಡಿಟ್ ಸ್ವಿಸ್ಸೆ(Credit Suisse)ಯ 2020ರ ವರದಿಯ ಪ್ರಕಾರ ಪ್ರತೀ ಐದರಲ್ಲಿ ಓರ್ವ ಭಾರತೀಯ ಸಾಲದ ಚಕ್ರದಲ್ಲಿ ಸಿಲುಕಿದ್ದು ಅದರಲ್ಲಿ 60% ಮಂದಿ ಮರು ಪಾವತಿಗಾಗಿ ಪರದಾಡುತ್ತಿದ್ದಾರೆ.
ಸಾಲ ಮತ್ತು ಬಡ್ಡಿಯ ಹೊರೆಯಿಂದ ಕಂಗಾಲಾದ ವ್ಯಕ್ತಿಗಳು ಕಳ್ಳತನ, ದರೋಡೆ, ವಂಚನೆ ಮತ್ತು ಕೊಲೆಗಳಂತಹ ಘೋರ ಅಪರಾಧಗಳಲ್ಲಿ ಭಾಗಿಯಾಗುವ ಎಷ್ಟೋ ಉದಾಹರಣೆಗಳಿವೆ. ಇದರಿಂದ ಒಟ್ಟಿನಲ್ಲಿ ಸಮಾಜದಲ್ಲಿ ಅಸುರಕ್ಷತೆ, ಅಶಾಂತಿಗಳುಂಟಾಗುತ್ತವೆ. ಬಡ್ಡಿ, ನೈತಿಕವಾಗಿ ಅನುಕಂಪ, ಸಹಾನುಭೂತಿಗಳಂತಹ ಉತ್ತಮ ಗುಣಗಳನ್ನು ಕೊನೆಗೊಳಿಸಿ ಶೋ಼ಷಣೆಯನ್ನು ವ್ಯವಸ್ಥಿತಗೊಳಿಸುತ್ತದೆ. ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುತ್ತದೆ. ಮನುಷ್ಯನ ಮೂಲಭೂತ ಸಮಾನ ಆರ್ಥಿಕ ಅವಕಾಶಗಳ ಹಕ್ಕನ್ನು ಉಲ್ಲಂಘಿಸುತ್ತದೆ. ಧಾರ್ಮಿಕವಾಗಿಯೂ ವಿಶೇಷತಃ ಇಸ್ಲಾಮಿ ಶಿಕ್ಷಣ ಪ್ರತಿಪಾದಿಸುವ ಸಮಾನ ಮತ್ತು ನ್ಯಾಯಯುತ ಆರ್ಥಿಕ ವ್ಯವಹಾರಗಳ ಪರವಾದ ನೀತಿ ನಿಯಮಗಳನ್ನೂ ಬಡ್ಡಿಯ ವ್ಯವಸ್ಥೆ ಉಲ್ಲಂಘಿಸುತ್ತದೆ. ಆದ್ದರಿಂದ ಇಸ್ಲಾಮ್ ಬಡ್ಡಿಯ ಕೊಡು ಕೊಳ್ಳುವಿಕೆಯನ್ನು ಕಟುವಾಗಿ ವಿರೋಧಿಸಿದೆ.
ಮಾನವಕುಲದ ಮಾರ್ಗದರ್ಶನಕ್ಕಾಗಿ ಆದಿಮಾನವ ಆದಮ್(ಅ)ರಿಂದ ಆರಂಭಗೊಂಡು ಕಾಲಕಾಲಕ್ಕೆ ಇತರ ಪ್ರವಾದಿಗಳಿಂದ ನವೀಕರಿಸಲ್ಪಟ್ಟ ಇಸ್ಲಾಮ್ ಧರ್ಮ ಅಂತಿಮವಾಗಿ ಪ್ರವಾದಿ ಮುಹಮ್ಮದ್(ಸ)ರ ಮೂಲಕ ಪರಿಪೂರ್ಣತೆಯನ್ನು ಕಂಡಿತು. ಪ್ರವಾದಿ ಮುಹಮ್ಮದರ(ಸ) ಆಗಮನದ ಉದ್ದೇಶ ಅಜ್ಞಾನಜನ್ಯ ಸಾಮಾಜಿಕ ಕಟ್ಟಳೆಗಳ ಬಂಧನ ಮತ್ತು ಶೋಷಣೆಯ ಪದ್ಧತಿಗಳ ಹೊರೆಯಿಂದ ಜನರ ವಿಮೋಚನೆ ಹಾಗೂ ನ್ಯಾಯಯುತ ಸಮಾಜದ ನಿರ್ಮಾಣವಾಗಿತ್ತು.
ಆದ್ದರಿಂದ ಸಮಾಜದಲ್ಲಿ ಪ್ರಚಲಿತ ಮದ್ಯಪಾನ, ಅಶ್ಲೀಲತೆ, ವ್ಯಭಿಚಾರ, ಹೆಣ್ಣು ಮಕ್ಕಳ ಹತ್ಯೆ, ಪ್ರತೀಕಾರದ ಸರಣಿ ಕೊಲೆಗಳು, ವಂಚನೆ ಇತ್ಯಾದಿ ಕೆಡುಕುಗಳ ನಿರ್ಮೂಲನಕ್ಕಾಗಿ ಶ್ರಮಿಸಿದರು. ದುರ್ಬಲರ ಹಕ್ಕುಗಳಿಗಾಗಿ ಹೋರಾಡುವುದರೊಂದಿಗೆ ಬಡ್ಡಿಯಂತಹ ಆರ್ಥಿಕ ಶೋಷಣೆಯ ವಿರುದ್ಧವೂ ಸಮರ ಸಾರಿದರು. ಸಮಾಜದಲ್ಲಿ ದೀರ್ಘಕಾಲದಿಂದ ಬೇರೂರಿದ್ದ ಮದ್ಯಪಾನ, ಬಡ್ಡಿಯಂತಹ ಕೆಡುಕುಗಳ ನಿರ್ಮೂಲನಕ್ಕಾಗಿ ಪ್ರವಾದಿವರ್ಯರು(ಸ) ಹಂತ ಹಂತವಾಗಿ ಬೋಧನೆ, ಪ್ರೋತ್ಸಾಹ, ಪರಲೋಕದ ಶಿಕ್ಷೆಯ ಭಯ ಮೂಡಿಸುವುದು, ದೇವ ಸಂಪ್ರೀತಿ ಮತ್ತು ಸ್ವರ್ಗದ ವಾಗ್ದಾನ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಕೊನೆಗೆ ಕಾನೂನು ಕ್ರಮಗಳ ಮೂಲಕ ಸಂಪೂರ್ಣವಾಗಿ ನಿಷೇಧಿಸಿದರು.
ಪ್ರಥಮತಃ ಜನರಿಗೆ ಇದ್ದುದರಲ್ಲಿ ಸಂತೃಪ್ತಿ ಹೊಂದುವಂತೆ, ಸಾಲ ಬಿಟ್ಟು ಮರಣ ಹೊಂದುವವರಿಗೆ ಸ್ವರ್ಗ ಲಭಿಸಲಾರದೆಂದು ಬೋಧಿಸಿ, ಆ ರೀತಿ ಮರಣ ಹೊಂದಿದವರ ಸಾಲ ತೀರಿಸುವ ವ್ಯವಸ್ಥೆ ಮೃತನ ಸೊತ್ತಿನಿಂದ ಅಥವಾ ವಾರೀಸುದಾರ ಅಥವಾ ಇತರರಿಂದ ಆಗುವವರೆಗೆ ಜನಾಝ ನಮಾಝನ್ನು ಸ್ವತಃ ನಿರ್ವಹಿಸದೆ, ಸಾಲದಲ್ಲಿ ಸಿಲುಕುವುದನ್ನು ನಿರುತ್ತೇಜಿಸಿದರು. ತನ್ನ ಅಂತಿಮ ಸಂಸ್ಕಾರದ ನಮಾಝಿಗೆ ಪ್ರವಾದಿಯವರ್ಯರ ನಾಯಕತ್ವದಿಂದ ವಂಚಿತನಾಗಲು, ದೇವನಲ್ಲಿ ತನಗಾಗಿ ಅವರ ಕ್ಷಮಾಯಾಚನೆಯ ಅವಕಾಶವನ್ನು ಕಳೆದುಕೊಳ್ಳಲು ಯಾವ ಸತ್ಯ ವಿಶ್ವಾಸಿಯೂ ಸಿದ್ಧರಿರಲಿಲ್ಲ. ಆದ್ದರಿಂದ ಸಾಲದಿಂದ ಸಾಧ್ಯವಾದಷ್ಟು ಮುಕ್ತರಾಗಿರಲು ಪ್ರಯತ್ನಿಸುತ್ತಾ ಬಡ್ಡಿಯನ್ನು ವರ್ಜಿಸಿದರು.
ಉಳಿತಾಯ ಹೊಂದಿರುವ ಸ್ಥಿತಿವಂತರನ್ನು ಪವಿತ್ರ ಕುರ್‌ಆನಿನ ಆದೇಶದಂತೆ ಬಡ್ಡಿ ರಹಿತ ಸಾಲ ನೀಡುವಂತೆ, ಅದು ಅಲ್ಲಾಹನಲ್ಲಿ ದಾನಕ್ಕಿಂತ 18 ಪಟ್ಟು ಹೆಚ್ಚು ಪುಣ್ಯದಾಯಕ ಕಾರ್ಯ, ಸಮಯದೊಳಗೆ ಮರಳಿಸಲು ಸಾಧ್ಯವಾಗದಿದ್ದರೆ ಸುಸ್ಥಿತಿಯುಂಟಾಗುವ ತನಕ ಇನ್ನೂ ಹೆಚ್ಚು ಸಮಯಾವಕಾಶ ನೀಡುವಂತೆ ಅಥವಾ ದಾನವಾಗಿ ಸಾಲವನ್ನು ಕ್ಷಮಿಸಿ ಬಿಟ್ಟರೆ ಪರಲೋಕದ ವಿಚಾರಣಾ ದಿನ ಯಾರ ಸಹಾಯವೂ ಲಭ್ಯವಾಗದ ಆ ಸಮಯದಲ್ಲಿ ಸಹಾಯಕವಾಗುವುದೆಂದು ಆಶ್ವಾಸನೆ ನೀಡಿದರು.
ಪವಿತ್ರ ಕುರ್‌ಆನಿನ ಬೆಳಕಿನಲ್ಲಿ “ಬಡ್ಡಿ ತಿನ್ನುವವರ ಅವಸ್ಥೆಯು ಶೈತಾನನ ಸೋಂಕಿನಿಂದ ಹುಚ್ಚನಾದವನಂತಿದೆ, ಬಡ್ಡಿ ವ್ಯವಹಾರವು ವ್ಯಾಪಾರದಂತೆ ಅಲ್ಲ, ಅಲ್ಲಾಹನು ಧರ್ಮಸಮ್ಮತಗೊಳಿಸಿರುವ ವ್ಯಾಪಾರದಲ್ಲಿ ಸಮೃದ್ಧಿ ನೀಡುತ್ತಾನೆ, ನಿಷಿದ್ಧಗೊಳಿಸಿದ ಬಡ್ಡಿ ವ್ಯವಹಾರವನ್ನು ಅಳಿಸಿ ಬಿಡುತ್ತಾನೆ ಮತ್ತು ದಾನ-ಧರ್ಮಗಳನ್ನು ವೃದ್ಧಿಸುತ್ತಾನೆ, ಅಲ್ಲಾಹನು ಕೃತಘ್ನ ದುಷ್ಕರ್ಮಿಗಳನ್ನು ಮೆಚ್ಚುವುದಿಲ್ಲ, ನೈಜ ವಿಶ್ವಾಸಿಗಳಾದರೆ ಜನರಿಂದ ಬರತಕ್ಕ ಬಡ್ಡಿಯನ್ನು ಬಿಟ್ಟು ಬಿಡಿರಿ, ಸತ್ಕರ್ಮ ಮಾಡುವವರ ಪ್ರತಿಫಲ ಅಲ್ಲಾಹನ ಬಳಿ ಇದೆ, ಅವರಿಗೆ ಯಾವ ಭಯವೂ ವ್ಯಥೆಯೂ ಇರುವುದಿಲ್ಲ”… ಎಂದು ಮುಂತಾಗಿ ಬೋಧಿಸಿದರು ಮತ್ತು ಅಂತಿಮವಾಗಿ “ನೀವು ಹಾಗೆ ಮಾಡದಿದ್ದರೆ ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ವತಿಯಿಂದ ನಿಮ್ಮ ವಿರುದ್ಧ ಯುದ್ಧ ಘೋಷಣೆಯಿದೆ” ಎಂದು ಎಚ್ಚರಿಸಿದರು.
ಪ್ರವಾದಿಯ ಈ ಎಚ್ಚರಿಕೆಯನ್ನು ನಿರ್ಲಕ್ಷಿಸುವ ಎದೆಗಾರಿಕೆ ಯಾವ ಅನುಯಾಯಿಯಲ್ಲಿಯೂ ಇರಲಿಲ್ಲ. ಬಡ್ಡಿಯನ್ನು 73 ಅಸಮಾನ ಅಂಶಗಳಲ್ಲಿ ವಿಂಗಡಿಸಿದರೆ, ಕನಿಷ್ಠತಮ ಅಂಶವು ಸ್ವತಃ ತನ್ನ ತಾಯಿಯೊಂದಿಗೆ ವ್ಯಭಿಚಾರ ಮಾಡುವುದಕ್ಕೆ ಸಮಾನವಾದುದೆಂದು ಹೇಳುವುದರ ಮೂಲಕ ಅನುಯಾಯಿಗಳು ಬಡ್ಡಿಯನ್ನು ದ್ವೇಷಿಸುವಂತೆ ಮಾಡಿದರು.
ಈ ಬೋಧನೆಗಳಿಗೆ ಸ್ವತಃ ಮಾದರಿಯಾಗಿ, ಒಂದು ಸಾವಿರ ದಿರ್‌ಹಮ್ ಸಾಲ ಪಡೆದ ಓರ್ವ ವ್ಯಕ್ತಿ ಮರಳಿಸಲು ಅಸಮರ್ಥನಾದಾಗ ಪ್ರವಾದಿಯವರು ಸಂಪೂರ್ಣ ಸಾಲವನ್ನು ಮನ್ನಾ ಮಾಡಿದ್ದರು (ಸಹೀ ಬುಖಾರಿ). ಇಬ್ಬರು ವ್ಯಕ್ತಿಗಳ ಮಧ್ಯೆ ನಡೆದ ಒಂದು ವ್ಯವಹಾರವನ್ನು “ಇದು ಬಡ್ಡಿಯಾಗಿದೆ, ನೀನು ಪಡೆದುದನ್ನು ಮರಳಿಸು” ಎಂದು ರದ್ದು ಪಡಿಸಿದರು (ಸುನನ್ ಇಬ್ನೆ ಮಾಜ). ಒಮ್ಮೆ ಓರ್ವ ವ್ಯಕ್ತಿ ಸಾಲ ಕೇಳಿದಾಗ ಅವನು ಕೇಳಿದುದಕ್ಕಿಂತ ಇಮ್ಮಡಿ ಕೊಟ್ಟು “ಖರ್ಚು ಮಾಡು, ಮರು ಪಾವತಿ ಬಗ್ಗೆ ಚಿಂತಿಸಬೇಡ” ಎಂದರು (ತಿರ್ಮಿದಿ). ಇನ್ನೋರ್ವ ಸಾಲಗಾರ ಪಾವತಿಸದೆ ಮರಣ ಹೊಂದಿದಾಗ “ಅವನ ಸಾಲ ಕ್ಷಮಿಸಿದ್ದೇನೆ” ಎಂದರು. (ಸಹೀ ಬುಖಾರಿ)
ಸಾಲಗಾರನು ಸಹಾಯ ಯಾಚಿಸಿದರೆ ಪ್ರವಾದಿವರ್ಯರು(ಸ) ಪ್ರಥಮತಃ ಸ್ವತಃ ಸಹಾಯ ಮಾಡುತ್ತಿದ್ದರು ಅಥವಾ ಇತರರಿಗೆ ಸಹಾಯ ಮಾಡುವಂತೆ ವಿನಂತಿಸುತ್ತಿದ್ದರು, ಅದರಿಂದಲೂ ಸಾಲ ಪಾವತಿಯಾಗದೆ ಬಾಕಿಯಾದುದನ್ನು ಕ್ಷಮಿಸುವಂತೆ ಸಾಲ ನೀಡಿದವರಿಗೆ ಆಜ್ಞಾಪಿಸುತ್ತಿದ್ದರು. ಹಜ್ಜತುಲ್ ವಿದಾಯದ ಭಾಷಣದಲ್ಲಿ ಅಂತಿಮವಾಗಿ “ಈ ಪವಿತ್ರ ಸ್ಥಳ, ದಿನ ಮತ್ತು ನಗರಗಳಂತೆ ನಿಮ್ಮ ರಕ್ತ ಮತ್ತು ಸಂಪತ್ತು ಪರಸ್ಪರ ಪವಿತ್ರ ಮತ್ತು ಗೌರವಾರ್ಹವಾಗಿವೆ. ಅಜ್ಞಾನ ಕಾಲದ ಪ್ರತೀಕಾರದ ಕೊಲೆ, ಬಡ್ಡಿ, ಸಕಲ ವಿಷಯಗಳು ನನ್ನ ಕಾಲಡಿ ತುಳಿಯಲ್ಪ ಟ್ಟಿವೆ. ಪ್ರಥಮತಃ ನನ್ನ ಮೇಲಿರುವ ಪ್ರತೀಕಾರದ ಕೊಲೆ, ನನ್ನ ಕುಟುಂಬ, ಗೋತ್ರದ ಬಡ್ಡಿಯನ್ನು ಸಂಪೂರ್ಣ ಕ್ಷಮಿಸುತ್ತಿದ್ದೇನೆ” ಎಂದು ಪ್ರಾಯೋಗಿಕವಾಗಿ ಬೋಧಿಸಿದರು.
ದೇವನಿಷ್ಠೆ, ದೇವಭಯ ಮತ್ತು ಪರಲೋಕದಲ್ಲಿ ಒಂದು ದಿನ ದೇವ ನ್ಯಾಯಾಲಯದಲ್ಲಿ ತಮ್ಮ ಕರ್ಮಗಳ ವಿಚಾರಣೆಯನ್ನು ಎದುರಿಸುವ ಮಹಾ ಜವಾಬ್ದಾರಿಕೆಯ ಪ್ರಜ್ಞೆ ಮೂಡಿಸುವ ಮೂಲಕ ಇವೆಲ್ಲವನ್ನೂ ಸಾಧಿಸುವಲ್ಲಿ ಪ್ರವಾದಿವರ್ಯರು ಯಶಸ್ವಿಯಾದರು. ಈ ರೀತಿ ಸ್ಥಾಪಿಸಿದ ಒಳಿತುಗಳ ರಕ್ಷಣೆ ಮತ್ತು ಕೆಡುಕುಗಳು ಪುನಃ ತಲೆ ಎತ್ತದಂತೆ ಖಾತರಿ ಪಡಿಸುವ ಖಿಲಾಫತ್ ರಾಜಕೀಯ ವ್ಯವಸೆಯಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯವನ್ನೂ ಪೂರ್ತಿಗೊಳಿಸಿದರು. ಈ ಸಂಪೂರ್ಣ ವ್ಯವಸ್ಥೆ ಪ್ರವಾದಿಯ ನಂತರ ಕೇವಲ 30 ವರ್ಷಗಳು ಮಾತ್ರವಿದ್ದರೂ ಬಡ್ಡಿ ರಹಿತ ವ್ಯವಸ್ಥೆ ಇಸ್ಲಾಮೀ ಜಗತ್ತಿನಲ್ಲಿ ಸುಮಾರು ನೂರಾರು ವರ್ಷಗಳವರೆಗೂ ಮುಂದುವರಿಯಿತು. ಇಸ್ಲಾಮೀ ಆಡಳಿತದ ಅವನತಿಯೊಂದಿಗೆ ಈ ವ್ಯವಸ್ಥೆ ಕೊನೆಗೊಂಡರೂ ಜಗತ್ತಿನಾದ್ಯಂತ ಇಂದೂ ಕೋಟಿಗಟ್ಟಲೆ ಮುಸ್ಲಿಮರು ಬಡ್ಡಿಯಿಂದ ದೂರವುಳಿದಿರುವುದು ಮಾತ್ರವಲ್ಲದೆ ಬಡ್ಡಿರಹಿತ ಆರ್ಥಿಕ ವ್ಯವಹಾರಗಳ ನಿರ್ವಹಣೆಗೆ ಹಲವು ಮುಸ್ಲಿಮ್ ಮತ್ತು ಮುಸ್ಲಿಮೇತರ ರಾಷ್ಟ್ರಗಳಲ್ಲಿ ಪ್ರಯತ್ನಗಳು ನಿರಂತರ ನಡೆಯುತ್ತಿರುವುದು ಇಂದೂ ಪ್ರವಾದಿಯ ಸತ್ಕ್ರಾಂತಿಯ ಪ್ರಭಾವಕ್ಕೆ ಸಾಕ್ಷಿಯಾಗಿದ್ದು, ಸರ್ವ ನ್ಯಾಯ ಪ್ರಿಯ ಜನರಿಗೆ ಆಶಾದಾಯಕ ಬೆಳವಣಿಗೆಯಾಗಿದೆ.