Home / ಸ್ತ್ರೀ ವಿಮೋಚನೆ

ಸ್ತ್ರೀ ವಿಮೋಚನೆ

1843 ರಲ್ಲಿ ಪೌರ್ವಾತ್ಯ ತಜ್ಞ ಎಡ್ವರ್ಡ್ ವಿಲಿಯಮ್ ಲೆನ್ (Edward William Lane) ಕುರ್‍ಆನಿನ ಸಂಚಯವನ್ನು ಪ್ರಕಟಿಸಿದ ಪುಸ್ತಕದ ಮುನ್ನುಡಿಯಲ್ಲಿ ಈ ರೀತಿ ಬರೆಯಲಾಗಿತ್ತು.
“ಮಹಿಳೆಯ ಅಪಮಾನ ಇಸ್ಲಾಮಿನ ದುರದೃಷ್ಟದ ವಿಷಯವಾಗಿದೆ. ಈ ಪರಾಮರ್ಶೆಯನ್ನು ಪ್ರಮಾಣೀಕೃತ ಸತ್ಯವೆಂಬಂತೆ ಅಂಗೀಕರಿಸಲಾಯಿತು. ವಾಸ್ತವದಲ್ಲಿ ಪ್ರವಾದಿ ಮುಹಮ್ಮದ್‍ರು(ಸ) ಸ್ತ್ರೀಯರ ವಿಮೋಚನೆಯಲ್ಲದೆ ಮತ್ತೇನನ್ನು ಮಾಡದಿರುತ್ತಿದ್ದರೂ ಲೋಕದ ಶ್ರೇಷ್ಠ ಅನುಗ್ರಹಿಯಾಗಿರುತ್ತಿದ್ದರು.”

ಇಂದು ಮಾನವ ತನ್ನ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದರೂ ಜನಸಂಖ್ಯೆಯ ಅರ್ಧಭಾಗ ಇನ್ನೂ ಅತ್ಯಂತ ಕರಾಳ ಮತ್ತು ಶೋಚನೀಯ ಸ್ಥಿತಿಯಲ್ಲಿದೆ. ಮಹಿಳೆಯರು ಎಲ್ಲೆಡೆ ಅಭದ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಶತಮಾನಗಳಿಂದ ಮಹಿಳೆಯರು ಶೋಷಿಸಲ್ಪಡುತ್ತಿದ್ದು, ಶೋಷಣೆಯ ರೀತಿ – ನೀತಿಗಳು ಮಾತ್ರ ಬದಲಾಗುತ್ತಿವೆ. ಹಿಂದೆ ಶಕ್ತಿಯ ಆಧಾರದಲ್ಲಿ ಮಹಿಳೆಯರನ್ನು ತಮ್ಮ ಅಧೀನದಲ್ಲಿಟ್ಟು ಕೊಳ್ಳುತ್ತಿದ್ದ ಪುರುಷ ಈಗ ಮನವೊಲಿಕೆ ಮತ್ತು ವಂಚನೆಯ ಮೂಲಕ ಆಕೆಯನ್ನು ದಾಸ್ಯಕ್ಕೀಡು ಮಾಡುತ್ತಿದ್ದಾನೆ.

ಪ್ರಾಚೀನ ಕಾಲದಲ್ಲಿ ಬಹುತೇಕ ಜಗತ್ತಿನ ಎಲ್ಲಾ ಭಾಗಗಳಲ್ಲಿ ಮಹಿಳೆಯ ಸ್ಥಾನ- ಮಾನವನ್ನು ಪುರುಷರಿಗಿಂತ ಕೆಳ ದರ್ಜೆಯದ್ದೆಂದು ಪರಿಗಣಿಸಲಾಗುತ್ತಿತ್ತು. “ಅಥೆನ್ಸ್”ನಲ್ಲಿ ಸ್ತ್ರೀಯರ ಸ್ಥಾನಮಾನವು ಗುಲಾಮರ ಸ್ಥಿತಿಗೆ ಅವನತಿ ಹೊಂದಿತ್ತೆಂದು ಎನ್‍ಸೈಕ್ಲೋಪೀಡಿಯಾ ಬ್ರಿಟಾನಿಕಾ (Encyclopaedia Britanica) ತಿಳಿಸುತ್ತದೆ. ಸ್ತ್ರೀಯರನ್ನು ಮನೆಯ ಏಕಾಂತ ಸ್ಥಳಗಳಲ್ಲಿ ಇಡಲಾಗುತ್ತಿತ್ತು. ಶಿಕ್ಷಣ ಹಾಗೂ ಇತರ ಯಾವುದೇ ಹಕ್ಕುಗಳನ್ನು ನೀಡುತ್ತಿರಲಿಲ್ಲ. ಪುರುಷರು ಅವರನ್ನು ತಮ್ಮ ಚರಾಸ್ತಿಯೆಂದು(Movable property) ಪರಿಗಣಿಸುತ್ತಿದ್ದರು.

ಗ್ರೀಸಿನ ತತ್ವಜ್ಞಾನಿ ಸಾಕ್ರೆಟಿಸ್ ಅವರ ಸ್ಥಿತಿಗತಿಯನ್ನು ಈ ರೀತಿ ಸಂಕ್ಷೇಪಿಸಿದ್ದನು. “ಸ್ತ್ರೀ ಜಗತ್ತಿನ ಅತಿದೊಡ್ಡ ಅರಾಜಕತೆ, ಗೊಂದಲಗಳ ಉಗಮ ಸ್ಥಾನವಾಗಿದ್ದಾಳೆ. ಅವಳ ಉದಾಹರಣೆ ದಫಾಲಿ(Dafali) ಮರದಂತಿದೆ. ಅದು ಬಾಹ್ಯ ನೋಟಕ್ಕೆ ಸುಂದರವಾಗಿ ಕಂಡರೂ ಗುಬ್ಬಚ್ಚಿಗಳು ತಿಂದಲ್ಲಿ ಖಂಡಿತವಾಗಿ ಸಾಯುವುವು.” ಪ್ರಾಚೀನ ರೋಮ್‍ನಲ್ಲಿ ಕಾನೂನು ರೀತ್ಯಾ ಮಹಿಳೆಯ ಸ್ಥಾನವು ಸಂಪೂರ್ಣವಾಗಿ ಗೌಣವಾದದ್ದಾಗಿತ್ತು. ಮೊದಲು ತಂದೆ, ಬಳಿಕ ಸಹೋದರ, ನಂತರ ಪತಿಯ ಅಧಿಕಾರದ ಅಡಿಯಲ್ಲಿ ಜೀವಿಸಬೇಕಾಗಿತ್ತು.

ಕಾನೂನು ಮಹಿಳೆಯರನ್ನು ಮಂದ ಬುದ್ಧಿಯವರೆಂದು ಪರಿಗಣಿಸುತ್ತಿತ್ತು. ಚೀನಾದ ಧರ್ಮಗ್ರಂಥಗಳಲ್ಲಿ ಮಹಿಳೆಯರನ್ನು “ಸೌಭಾಗ್ಯವನ್ನು ಕೊಚ್ಚಿಕೊಂಡು ಹೋಗುವ ದುಃಖಗಳ ನೀರು” ಎಂದು ಬಣ್ಣಿಸಲಾಗಿದೆ. ಆಕೆಯನ್ನು ಪುರುಷರಿಗಿಂತ ಕೀಳೆಂದು ಪರಿಗಣಿಸಿ ಸದಾ ಎಲ್ಲ ಹಕ್ಕುಗಳಿಂದ ವಂಚಿಸಲಾಗಿತ್ತು. ಯಾವ ಸಂದರ್ಭದಲ್ಲೂ ಆಕೆಯ ಪತಿ ಆಕೆಯನ್ನು ತೊರೆಯಬಹುದಾಗಿತ್ತು. ಉಪ ಪತ್ನಿಯ ರೂಪದಲ್ಲಿ ಆಕೆಯನ್ನು ಮಾರಬಹುದಿತ್ತು. ವಿಧವೆಗೆ ಪುನರ್ ವಿವಾಹ ಅಸಾಧ್ಯವಾಗಿತ್ತು. ಶಿಶು ಹತ್ಯೆ ಮತ್ತು ಮಹಿಳೆಯರನ್ನು ಗುಲಾಮರನ್ನಾಗಿಸುವ ಪದ್ಧತಿ ವ್ಯಾಪಕವಾಗಿತ್ತು. 1937ರಲ್ಲಿ ಚೀನಾದಲ್ಲಿ ಎರಡು ಮಿಲಿಯ ಬಾಲ ದಾಸಿಯರಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.

ಲೋಕದಲ್ಲಿ ಪಾಪಕ್ಕೆ ಕಾರಣ ಮಹಿಳೆ ಎಂದು ಕ್ರೈಸ್ತ ಧರ್ಮ ತಿಳಿಸುತ್ತದೆ. ಇದಕ್ಕಾಗಿ ದೇವನು ತನ್ನ ಏಕೈಕ ಸಂತಾನವನ್ನು ಧರೆಗೆ ಕಳುಹಿಸಿ ಆತನ ರಕ್ತದ ಮೂಲಕ ಮಾನವರ ಪಾಪಗಳನ್ನು ತೊಳೆಯಬೇಕಾಯಿತು!

ಕ್ರೈಸ್ತ ಸನ್ಯಾಸಿ ಸೈಂಟ್ ಟರ್‍ಟುಲಿಯನ್(St. Tertullian) ಮಹಿಳೆಯರನ್ನು ಉದ್ದೇಶಿಸಿ ಈ ರೀತಿ ಹೇಳಿದ್ದರು: “..ನೀವು ಶೈತಾನನ ದ್ವಾರವಾಗಿದ್ದೀರಿ… ದೈವಿಕ ಕಾನೂನನ್ನು ಉಲ್ಲಂಘಿಸುವವರಲ್ಲಿ ಮೊಟ್ಟ ಮೊದಲಿಗರು; ಶೈತಾನನಿಗೆ ಧೈರ್ಯವಿಲ್ಲದಿರುವಾಗ ಪುರುಷನಿಗೆ ಪಾಪದತ್ತ ಪ್ರೇರೇಪಣೆ ನೀಡಿದವರು; ಮನುಷ್ಯನಲ್ಲಿರುವ ದೈವತ್ವವನ್ನು ಸುಲಭವಾಗಿ ನಾಶಗೊಳಿಸಿದವರು…” (De Coltu Feminarum)

ಮಹಿಳೆಯರಿಗೆ ಆತ್ಮವಿಲ್ಲವೆಂದು ಗ್ರೀಕ್ ಚರ್ಚ್ ನಂಬಿತ್ತು. ಮೇಕನ್ ಸಭೆಯಲ್ಲಿ ಬಿಷಪ್‍ರೊಬ್ಬರು ಮಹಿಳೆಯರು ಮಾನವಕುಲಕ್ಕೆ ಸೇರಿದವರಲ್ಲವೆಂದು ವಾದಿಸಿದ್ದರು. ಮಹಿಳೆಯರು ಅಶುದ್ಧರಾಗಿರುವ ಕಾರಣ ವಿವಾಹ ಮಾಡಿಕೊಳ್ಳಬಾರದೆಂದು ಪುರುಷರಿಗೆ ಹಿತೋಪದೇಶ ನೀಡಲಾಗಿತ್ತು.

ಮಹಿಳೆಯರ ಬಗೆಗಿನ ಈ ರೀತಿಯ ನಿಲುವು ಯಾವ ರೀತಿಯ ಪರಿಣಾಮವನ್ನುಂಟು ಮಾಡೀತು? ಲೇಕಿ(Lecky) ತಮ್ಮ “ದಿ ಹಿಸ್ಟರಿ ಆಫ್ ಯೂರೋಪಿಯನ್ ನೋರಲ್ಸ್” (The History of Europian norals) ಎಂಬ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾರೆ:

ಮಧ್ಯಕಾಲೀನ ಲೇಖಕರು ಕ್ರೈಸ್ತ ಸನ್ಯಾಸಿನಿಯರ ಮಠಗಳು ವೇಶ್ಯಾವಾಟಿಕೆಯ ಕೇಂದ್ರಗಳಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲಿನ ಅಸಂಖ್ಯಾತ ಶಿಶು ಹತ್ಯೆಗಳು ಪಾದ್ರಿಗಳ ಧರ್ಮಬಾಹಿರ ಲೈಂಗಿಕ ಸಂಪರ್ಕಗಳ ಕಾರಣಗಳಿಂದಾಗಿ ಸಂಭವಿಸಿದೆ. ಪಾದ್ರಿಗಳು ತಮ್ಮ ಮಾತೆಯರು ಮತ್ತು ಸಹೋದರಿಯರೊಂದಿಗೆ ಒಟ್ಟಾಗಿ ಜೀವನ ನಡೆಸಬಾರದೆಂಬ ಕಟ್ಟಳೆಗಳನ್ನೂ ದಾಖಲಿಸಿದ್ದಾರೆ.”

ವರ್ತಮಾನ ಭಾರತದ ಮಹಿಳೆಯ ಸ್ಥಿತಿಯೂ ಭಿನ್ನವಾಗಿಲ್ಲ. ಮಹಿಳೆಯರನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸಿ ಸ್ವತಂತ್ರರಾಗಿಸುವುದು, ಆ ಮೂಲಕ ಅವರಿಗೆ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಅವಕಾಶ ಒದಗಿಸುವ ಬಗ್ಗೆ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಆದರೆ ಈವರೆಗೂ ಮಹಿಳೆಯರಿಗೆ ಅವರ ಮೂಲಭೂತ ಹಕ್ಕುಗಳಾದ ಶಿಕ್ಷಣವನ್ನಾಗಲೀ, ಉದ್ಯೋಗದ ಸ್ಥಳಗಳಲ್ಲಿ ಸುರಕ್ಷತೆಯನ್ನಾಗಲೀ ಒದಗಿಸಲು ವಿಫಲರಾಗಿದ್ದೇವೆ. ನಾವು ಅವರಿಗೆ ಬದುಕುವ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿದ್ದೇವೆ. ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಯ ಘಟನೆಗಳು ಇದನ್ನೇ ಸಾರಿ ಹೇಳುತ್ತಿವೆ. ಹೆಣ್ಣು ಮಕ್ಕಳಿಗೆ ಸರಿಯಾದ ಪೌಷ್ಟಿಕತೆಯನ್ನಾಗಲೀ ಆರೋಗ್ಯ ಸೌಕರ್ಯ ವನ್ನಾಗಲೀ ನಾವು ಈ ತನಕ ಒದಗಿಸಲು ಅಸಮರ್ಥರಾಗಿದ್ದೇವೆ. ಆತ್ಮಹತ್ಯೆ, ಕಿರುಕುಳ, ಆಕ್ರಮಣ, ವರದಕ್ಷಿಣೆ ಸಾವುಗಳು, ಬಲಾತ್ಕಾರದ ವೇಶ್ಯಾವಾಟಿಕೆ, ಸ್ತ್ರೀ ಹಿಂಸೆಯ ಘಟನೆಗಳು ತೀರಾ ಸಾಮಾನ್ಯವಾಗಿವೆ. ವಿಧವೆಯರ ದುಃಖ ಮತ್ತು ಯಾತನೆ, ವಿಚ್ಛೇದಿತೆಯರ ಬದುಕಿಗೆ ಅಂಟಿಕೊಳ್ಳುವ ಕಳಂಕ, ಲೈಂಗಿಕ ಕಿರುಕುಳದ ಆಘಾತ ಎಲ್ಲವೂ ಮಹಿಳೆಯರೊಂದಿಗೆ ತೋರಲಾಗುವ ಅಸಹಜ ವರ್ತನೆಯ ಕರಾಳ ಕತೆಯನ್ನು ಹೇಳುತ್ತವೆ. ಈ ನಡುವೆ ದುಷ್ಟ ಸತಿ ಸಹಗಮನ ಪದ್ಧತಿ ಆಗೊಮ್ಮೆ ಈಗೊಮ್ಮೆ ತಲೆ ಎತ್ತುತ್ತಿದೆ. ಹೆಣ್ಣು ಮಕ್ಕಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಜಾಲಗಳು ದೇಶದಾದ್ಯಂತ ಸಕ್ರಿಯವಾಗಿವೆ.
ಆಧುನಿಕ ಮಾನವ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸುವುದರಲ್ಲಿ ಎಡವಿದ್ದಾನೆ. ಸಮಾನತೆಯ ಅರ್ಥವೇನು? ಸಮಾನತೆ ಏನನ್ನು ಸೂಚಿಸುತ್ತದೆ ಎಂಬುದನ್ನು ಆತನು ಯೋಚಿಸಲಿಲ್ಲ. ಆಧುನಿಕ ವಿಚಾರದಂತೆ, ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ಕೊಡುವುದರ ಅರ್ಥ ಅವರನ್ನು ಮನೆಯಿಂದ ಹೊರ ತಂದು, ಪರಿಣಾಮವನ್ನು ಲೆಕ್ಕಿಸದೆ, ಜೀವನದ ಪ್ರತಿಯೊಂದು ರಂಗದಲ್ಲಿ ಪುರುಷನ ಪ್ರತಿಸ್ಪರ್ಧಿಯಾಗಿ ನಿಲ್ಲಿಸುವುದಾಗಿತ್ತು. ಆಧುನಿಕ ಕಾಲದ ಪಾಶ್ಚಾತ್ಯ ಚಿಂತನಶೀಲರು ಎಸಗಿದ ಮತ್ತೊಂದು ತಪ್ಪೆಂದರೆ ಸಾಂಪ್ರದಾಯಿಕವಾಗಿ ಪುರುಷ ಪ್ರಧಾನ ಕಾರ್ಯರಂಗದ ಹೊರಗಡೆಯ ಪ್ರತ್ಯೇಕ ಮತ್ತು ಭಿನ್ನ ಪಾತ್ರವನ್ನು ಕೆಳದರ್ಜೆಯ ಕಾರ್ಯಗಳೆಂದು ಪರಿಗಣಿಸಿರುವುದು. ಈ ಕಾರಣಕ್ಕಾಗಿ ಮಹಿಳೆಯರಿಗೆ ಇಸ್ಲಾಮ್ ನೀಡುವ ಪ್ರತ್ಯೇಕ ಪಾತ್ರವು ಅವರ ಸ್ಥಾನಮಾನವನ್ನು ತುಚ್ಛೀಕರಿಸುತ್ತದೆ ಎಂಬ ಕುರುಡು ತೀರ್ಮಾನಕ್ಕೆ ಬರಲಾಯಿತು.

ಪಾಶ್ಚಾತ್ಯ ಚಿಂತನೆಯ ಪರಿಣಾಮಗಳನ್ನು ಗಮನಿಸೋಣ. ಕೌಟುಂಬಿಕ ಜೀವನದ ಮೇಲೆ ಇದು ಮಾರಕ ಪರಿಣಾಮ ಬೀರಿತು. ನಾಗರಿಕತೆಯ ರಕ್ಷಕ ಮತ್ತು ಸಂಸ್ಕ್ರತಿಯ ಪೋಷಕ ಅಂಗವಾದ ‘ಕುಟುಂಬ ವ್ಯವಸ್ಥೆ’ಯು ತರಗೆಲೆಯಂತೆ ಚದುರಿಹೋಯಿತು. ಸ್ತ್ರೀಯರು ಅದನ್ನು ತ್ಯಜಿಸಿದರು. ಪುರುಷರು ಅದನ್ನು ಹೇಸ ತೊಡಗಿದರು. ಶಾಂತಿಯುತ ವೈವಾಹಿಕ ಜೀವನ ಮರೀಚಿಕೆಯಾಗ ತೊಡಗಿತು. ಜಾರ ಸಂತಾನ ಬೆಳೆಯ ತೊಡಗಿತು. ಅಮೇರಿಕಾದ ಪುರುಷರ ಬಗ್ಗೆ ಕಿನ್‍ಸೆ(Kinsey)ಯ ವರದಿ ಈ ರೀತಿ ಹೇಳುತ್ತದೆ:
“ಶೇಕಡಾ 95ರಷ್ಟು ಪುರುಷರು ನೈತಿಕವಾಗಿ ಭ್ರಷ್ಟರಾಗಿದ್ದಾರೆ. ನಾಲ್ಕು ವರ್ಷ ವಯಸ್ಸಿನಲ್ಲಿಯೇ ಮಕ್ಕಳು ನೀತಿಗೆಟ್ಟ ಲೈಂಗಿಕತೆಯಲ್ಲಿ ತೊಡಗುತ್ತಾರೆ. ಸಲಿಂಗಕಾಮ ಬೆಳೆಯುತ್ತಿದ್ದು, ಮೂವರು ಪುರುಷರಲ್ಲಿ ಒಬ್ಬರಂತೆ ಈ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಣಿಗಳೊಂದಿಗೂ ಅಶ್ಲೀಲ ಸಂಪರ್ಕವನ್ನಿಟ್ಟುಕೊಳ್ಳಲಾಗುತ್ತಿದೆ.”

ಮಹಿಳೆಯರ ಬಗ್ಗೆ ಕಿನ್‍ಸೆಯ(Kinsey) ವರದಿ ಈ ರೀತಿ ತಿಳಿಸುತ್ತದೆ. “5೦% ಅಮೇರಿಕಾದ ಸ್ತ್ರೀಯರು(ಎಲ್ಲಾ ವಯಸ್ಸಿನ) ವಿವಾಹಕ್ಕಿಂತ ಮುಂಚೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. 25% ಸ್ತ್ರೀಯರು ವಿವಾಹೇತರ ಸಂಬಂಧ ಹೊಂದಿದ್ದು, ತಮ್ಮ ಗಂಡಂದಿರಿಗೆ ದ್ರೋಹವೆಸಗುತ್ತಿರುವ ಬಗ್ಗೆ ಅವರಿಗೆ ಯಾವ ವಿಷಾದವೂ ಇಲ್ಲ. 2೦% ಸ್ತ್ರೀಯರು ಸಲಿಂಗ ಕಾಮ ಪ್ರವೃತಿಯುಳ್ಳವರಾಗಿದ್ದಾರೆ. 62% ಮಂದಿ ಹಸ್ತ ಮೈಥುನವೆಸಗುತ್ತಾರೆ.”

ಪಾಶ್ಚಾತ್ಯ ಚಿಂತಕರಿಗೆ ತಮ್ಮ ತಪ್ಪಿನ ಅರಿವಾಗುತ್ತಿದೆ. ಈಗ ಮತ್ತೆ ನೈತಿಕ ಮೌಲ್ಯಗಳ ಮೊರೆ ಹೋಗುತ್ತಿದ್ದಾರೆ. ಮಹಿಳಾ ವಿಮೋಚನಾ ಚಳವಳಿಯ ಮುಂಚೂಣಿಯಲ್ಲಿದ್ದ
ಪ್ರೊ/ ಸಿ.ಇ.ಎಮ್. ಜೋಡ್ (C.E.M. Joad) ಈಚೆಗೆ ಒಂದು ಸಂದರ್ಶನದಲ್ಲಿ ಹೀಗೆ ಹೇಳಿದ್ದರು:
“ತಮ್ಮ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಮಹಿಳೆಯರು ಸಂತೃಪ್ತಿ ಪಟ್ಟುಕೊಂಡಲ್ಲಿ ಈ ಜಗತ್ತು ನೆಮ್ಮದಿಯ ತಾಣವಾಗುವುದರಲ್ಲಿ ಸಂಶಯವಿಲ್ಲ; ಜೀವನ ಮಟ್ಟವನ್ನು(Standard of living) ಈ ಕಾರಣಕ್ಕಾಗಿ ಸ್ವಲ್ಪ ಕಡಿಮೆ ಮಾಡಿ ಕೊಂಡರೂ ಸರಿಯೇ.”

ಪ್ರೊ. ಫಲ್ಟೋನ್ ಜೆ.ಷೀನ್ (Fulton J.Sheen) ಹೇಳುತ್ತಾರೆ:
“…ಕುಟುಂಬವು ದೇಶದ ಸ್ವಾಸ್ಥ್ಯದ ಮಾಪಕವಾಗಿದೆ…. ಕೌಟುಂಬಿಕ ಜೀವನವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ.”

ಆಧುನಿಕ ಸಮಾಜ ಇಪ್ಪತ್ತೊಂದನೆಯ ಶತಮಾನದಲ್ಲೂ ಮಹಿಳೆಗೆ ನೀಡಿದ ಹಕ್ಕುಗಳು, ಸ್ಥಾನಮಾನಗಳು ಮತ್ತು ಘನತೆ ಗೌರವಗಳನ್ನು ಪ್ರವಾದಿ ಮುಹಮ್ಮದ್(ಸ) ಹದಿನಾಲ್ಕು ಶತಮಾನಗಳ ಹಿಂದೆಯೇ ನೀಡಿದ್ದರು.

ಇಸ್ಲಾಮಿನ ದೃಷ್ಟಿಯಲ್ಲಿ ಮಹಿಳೆ ಪುರುಷರಂತೆಯೇ ಆತ್ಮವುಳ್ಳ ಜೀವಿಯಾಗಿದ್ದಾಳೆ. ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಸ್ಥಾನಮಾನವನ್ನು ನೀಡಲಾಗಿದೆ. ಚಾಲ್ರ್ಸ್ ಎಡ್ವರ್ಡ್ ಹ್ಯಾಮಿಲ್ಟನ್‍ರ ಮಾತುಗಳಲ್ಲಿ ಹೇಳಬೇಕಾದರೆ:
“…ಸ್ತ್ರೀ-ಪುರುಷರು ಒಂದೇ ಸಾರದಿಂದ ಜನಿಸಿದವರೆಂದೂ ಒಂದೇ ಆತ್ಮವನ್ನು ಮೈಗೂಡಿಸಿರುವವರೆಂದೂ ಅವರಿಗೆ ವೈಚಾರಿಕ, ಆಧ್ಯಾತ್ಮಿಕ ಮತ್ತು ನೈತಿಕ ರಂಗಗಳಲ್ಲಿ ಒಂದೇ ರೀತಿಯ ಸಾಮರ್ಥ್ಯ ನೀಡಲ್ಪಟ್ಟಿದೆಯೆಂದೂ ಇಸ್ಲಾಮ್ ಹೇಳುತ್ತದೆ…” ಗಂಡು ಹೆಣ್ಣುಗಳು ಪರಸ್ಪರ ಪ್ರತಿಸ್ಪರ್ಧಿಗಳಲ್ಲ. ಬದಲಾಗಿ ಅವರೀರ್ವರೂ ಪರಸ್ಪರ ಪೂರಕ ಅಸ್ತಿತ್ವಗಳಾಗಿದ್ದಾರೆ. ಪತಿ-ಪತ್ನಿಯರು ಪರಸ್ಪರ ಉಡುಪುಗಳೆಂದು ಹೇಳುವ ಮೂಲಕ ಅವರೀರ್ವರೂ ಪರಸ್ಪರ ಆಪ್ತರೆಂದು ತಿಳಿಸಲಾಗಿದೆ.

ಮಾನವಕುಲದ ಆರೋಗ್ಯವು ಕುಟುಂಬದ ಸ್ವಾಸ್ಥ್ಯವನ್ನು ಅವಲಂಬಿಸಿದೆ. ಕುಟುಂಬದ ರಕ್ಷಣೆ ಮತ್ತು ಸಮೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಸ್ತ್ರೀಯರ ದೈಹಿಕ ಪ್ರಕೃತಿ, ಮಾನಸಿಕ ಮತ್ತು ಭಾವನಾತ್ಮಕ ಸಂರಚನೆಗೆ ಅನುಗುಣವಾಗಿ ಗೃಹಸಂಬಂಧಿ ಹೊಣೆಗಾರಿಕೆಗಳನ್ನು ಆಕೆಗೆ ವಹಿಸಿಕೊಡಲಾಗಿದೆ. ಇಸ್ಲಾಮ್ ವಿವಾಹವನ್ನು
ಪ್ರೋತ್ಸಾಹಿಸುತ್ತದೆ. ವಿವಾಹಕ್ಕೆ ವಧುವಿನ ಒಪ್ಪಿಗೆ ಅನಿವಾರ್ಯ ಎಂಬ ಶರತ್ತನ್ನು ವಿಧಿಸಲಾಗಿದೆ. ಮುಸ್ಲಿಮ್ ಮಹಿಳೆಯರಿಗೆ ಯಾವುದೇ ವಿವಾಹ ಪ್ರಸ್ತಾಪವನ್ನು ಅಂಗೀಕರಿಸುವ ಅಥವಾ ನಿರಾಕರಿಸುವ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ. ದಾಂಪತ್ಯ ಬಿರುಕುಗೊಂಡಲ್ಲಿ ಪತಿಯಿಂದ ಬಿಡುಗಡೆ ಹೊಂದಲು ಮಹಿಳೆಗೆ ‘ಖುಲಾ’ ಎಂಬ ಕಾನೂನಿನ ಮೊರೆ ಹೊಗಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಆಕೆ ಮೊಕದ್ದಮೆ ಸಹ ಹೂಡಬಹುದು. ಕ್ರೈಸ್ತ ಚರ್ಚಿನ ಧಾರ್ಮಿಕ ನಿಯಮಗಳ ಪ್ರಕಾರ ಇಂದು ಕೂಡಾ ಮಹಿಳೆಗೆ ಆ ಹಕ್ಕು ಲಭ್ಯವಿಲ್ಲ. ಕುರ್‍ಆನ್ ಹೀಗೆ ಬೋಧಿಸುತ್ತದೆ. “ಅವರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಿರಿ.” (ಪವಿತ್ರ ಕುರ್‍ಆನ್, 4:19)

ಪ್ರವಾದಿ(ಸ) ಹೀಗೆ ಹೇಳಿರುವರು:
“ತನ್ನ ಮನೆಯವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವವನೇ ನಿಮ್ಮಲ್ಲಿ ಅತ್ಯುತ್ತಮನು.” (ತಿರ್ಮಿದಿ) ಪತ್ನಿಯೊಂದಿಗಿನ ವರ್ತನೆಯನ್ನು ಶ್ರೇಷ್ಠತೆಯ ಮಾಪಕವಾಗಿ ಅಂಗೀಕರಿಸಲಾಗಿದೆ. ಅದುವೇ ವಸ್ತುನಿಷ್ಠ ಮಾಪಕ. ಮಾನಸಿಕ ದೌರ್ಬಲ್ಯಗಳಿರುವ ವ್ಯಕ್ತಿಗೆ ಮಾತ್ರ ತನ್ನ ಜೀವನ ಸಖಿಯೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸಲು ಸಾಧ್ಯ. ಆರ್ಥಿಕ ಜವಾಬ್ದಾರಿಯಿಂದಲೂ ಆಕೆಯನ್ನು ಮುಕ್ತಗೊಳಿಸಲಾಗಿದೆ. ಕುಟುಂಬ ನಿರ್ವಹಣೆಗೆ ಆಕೆ ಸಂಪಾದನೆ ಮಾಡಲೇಬೇಕಾದ ಅಗತ್ಯ ಬಿದ್ದಲ್ಲಿ ಮಾತ್ರ ಹಾಗೆ ಮಾಡಲು ಸ್ವತಂತ್ರಳು.

ಇಸ್ಲಾಮ್ ಜ್ಞಾನಾರ್ಜನೆಯನ್ನು ಸ್ತ್ರೀ-ಪುರುಷರಿಬ್ಬರಿಗೂ ಕಡ್ಡಾಯಗೊಳಿಸಿದೆ. ಸ್ತ್ರೀಯರಿಗೂ ಶಿಕ್ಷಣದ ಸಮಾನ ಅವಕಾಶಗಳನ್ನು ಕಲ್ಪಿಸಬೇಕೆಂದು ಪ್ರವಾದಿ ಮುಹಮ್ಮದ್(ಸ) ಬೋಧಿಸಿದ್ದಾರೆ. ಮಹಿಳಾ ಶಿಕ್ಷಣದ ಬಗ್ಗೆ ಸ್ವತಃ ಪ್ರವಾದಿಯವರು ವಿಶೇಷ ಆಸಕ್ತಿ ತೋರಿದ್ದರು. ಅವರ ಕಾಲದಲ್ಲಿ ಮತ್ತು ಅನಂತರದ ಇಸ್ಲಾವಿೂ ಇತಿಹಾಸದಲ್ಲಿ ಬಹಳಷ್ಟು ಮಹಿಳಾ ವಿದ್ವಾಂಸರು, ಕುರ್‍ಆನ್ ವ್ಯಾಖ್ಯಾನಕಾರರು, ಇಸ್ಲಾವಿೂ ಕರ್ಮಶಾಸ್ತ್ರ, ಚರಿತ್ರೆ ಮುಂತಾದ ವಿಷಯಗಳಲ್ಲಿ ಪಾಂಡಿತ್ಯ ಹೊಂದಿದವರು ಆಗಿ ಹೋಗಿದ್ದಾರೆ. ಮಹಿಳೆಯರು ಕಾವ್ಯ ಮತ್ತು ಕಲೆಗಳಲ್ಲಿ ಅಪಾರ ಪ್ರೌಢಿಮೆ ಸಂಪಾದಿಸಿದ್ದರು. ಕೈಗಾರಿಕೆ, ಕೃಷಿ, ವೈದ್ಯಕೀಯ ಮುಂತಾದ ಹಲವಾರು ರಂಗಗಳಲ್ಲಿ ಸಾಧನೆ ಮಾಡಿದ್ದರು. ಇಸ್ಲಾವಿೂ ರಾಷ್ಟ್ರದ ಅಧಿಕಾರ ವ್ಯವಸ್ಥೆಯಲ್ಲೂ ಮಹಿಳೆಯರು ಅತ್ಯಂತ ಮಹತ್ವದ ಹುದ್ದೆಗಳನ್ನು ಹೊಂದಿದ್ದರು.

ನಮ್ಮ ದೇಶದಲ್ಲಿ ವಿಧವೆಯರ ಪರಿಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ದೇಶದ ಉದ್ದಗಲಗಳಲ್ಲಿ ವಿಧವೆಯರು ಜೀವಚ್ಛವಗಳಂತೆ ಬದುಕು ನಡೆಸುತ್ತಿದ್ದಾರೆ. ಇಸ್ಲಾಮ್ ವಿಧವಾ ವಿವಾಹವನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ಘನತೆ ಗೌರವದಿಂದ ಬಾಳುವೆ ನಡೆಸುವ ಅವಕಾಶವನ್ನು ಪುನಃ ನೀಡ ಬಯಸುತ್ತದೆ.

ಸ್ತ್ರೀಗೆ ಸ್ವತಂತ್ರ ಆರ್ಥಿಕ ಅಸ್ತಿತ್ವವನ್ನೂ ಇಸ್ಲಾಮ್ ನೀಡಿತು. ಯಾರ ಮಧ್ಯಸ್ಥಿಕೆ ಅಥವಾ ಹಸ್ತಕ್ಷೇಪವಿಲ್ಲದೆ ಸ್ವಯಂ ಸಂಪಾದಿಸುವ, ವ್ಯವಹರಿಸುವ ಹಾಗೂ ನೇರವಾಗಿ ವಹಿವಾಟು ನಡೆಸುವ ಹಕ್ಕನ್ನೂ ಇಸ್ಲಾಮ್ ಆಕೆಗೆ ನೀಡಿದೆ. ಸ್ತ್ರೀಗೆ ತನ್ನ ಸಂಪತ್ತಿನಿಂದ ತನ್ನ ಸ್ವಂತ ಕೆಲಸಗಳಿಗೆ ವಿನಾ ಇತರ ಕಾರ್ಯಗಳಿಗೆ ಖರ್ಚು ಮಾಡಬೇಕಾಗಿಲ್ಲ. ಆಕೆಗೆ ಎಷ್ಟೇ ಸಂಪತ್ತಿದ್ದರೂ ಆಕೆಯ ಸಮ್ಮತಿಯಿಲ್ಲದೆ ಅದರಲ್ಲಿ ಹಸ್ತಕ್ಷೇಪ ನಡೆಸುವ ಹಕ್ಕು ಪತಿಗೂ ಇಲ್ಲ. ಹಾಗೆಯೇ ಆಕೆಯಲ್ಲಿ ಸ್ವಂತ ಸಂಪತ್ತಿರುವಾಗಲೂ ಆಕೆಗಾಗಿ ಖರ್ಚು ಮಾಡಲು ಆತನು ನಿರ್ಬಂಧಿತನಾಗಿದ್ದಾನೆ. ಆತನು ಈ ರೀತಿ ವರ್ತಿಸಲು ಸಮ್ಮತಿಸದಿದ್ದರೆ ಅಂತಹ ಪತಿಯಿಂದ ವಿಚ್ಛೇದನೆ ಪಡೆಯುವ ಅಧಿಕಾರವನ್ನು ಮಹಿಳೆಗೆ ನೀಡಲಾಗಿದೆ. ಪತಿ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಖರ್ಚು ಮಾಡಿದರೂ ಆಕೆ ದೂರು ಸಲ್ಲಿಸಬಹುದು.

ಮಗನಂತೆ ಮಗಳೂ ಕೂಡಾ ತಂದೆಯ ಆಸ್ತಿಗೆ ಹಕ್ಕುದಾರಳೆಂದು ಪ್ರವಾದಿ(ಸ) ಘೋಷಿಸಿದರು. ಇದು ಅತ್ಯಂತ ಗಮನಾರ್ಹವಾದ ಕ್ರಮ. ಆದರೆ ಅತ್ಯಂತ ಸುಸಂಸ್ಕ್ರತ ವೆನ್ನಲಾಗುವ ಇಂಗ್ಲೆಂಡ್‍ನಲ್ಲಿ 1922ರ ತನಕವೂ ವಿವಾಹಿತ ಮಹಿಳೆಗೆ ಆಸ್ತಿಯ ಒಡೆತನದ ಹಕ್ಕು ಇರಲಿಲ್ಲ. ಇಸ್ಲಾಮಿನಲ್ಲಿ ವಿಧವೆಗೆ ತನ್ನ ಮೃತ ಪತಿಯ ಆಸ್ತಿಯಲ್ಲಿಯೂ ಹಕ್ಕನ್ನು ನೀಡಲಾಗಿದೆ. ಇಂದು ನಾಗರಿಕತೆಯ ಡಂಗುರ ಸಾರುತ್ತಿರುವ ಹಲವು ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಆಸ್ತಿಯ ಹಕ್ಕಾಗಲಿ, ಮತದಾನದ ಹಕ್ಕಾಗಲಿ ಇಲ್ಲ. ಬ್ರಿಟನ್‍ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪ್ರಥಮವಾಗಿ ದೊರೆತದ್ದು 1938ರಲ್ಲಿ. ಭಾರತದಲ್ಲಿ ಮಹಿಳೆಗೆ ಆಸ್ತಿಯ ಹಕ್ಕು ದೊರಕಿದ್ದು 1956ರಲ್ಲಿ.

ಮೇಲಿನ ಚರ್ಚೆಯಿಂದ ಇಸ್ಲಾಮ್ ಮಹಿಳೆಗೆ ನೀಡಿರುವ ಹಕ್ಕುಗಳು ಮತ್ತು ಘನತೆ-ಗೌರವಗಳನ್ನು ಜಗತ್ತಿನ ಇತರ ಯಾವುದೇ ಧರ್ಮ ನೀಡದಿರುವುದು ನಿಚ್ಚಳವಾಗುತ್ತದೆ. ಪಿಯರಿ ಕ್ರಾಬೈಟ್ಸ್(Piyari Crabbites) ತಮ್ಮ “ಥಿಂಗ್ಸ್ ಮುಹಮ್ಮದ್ ಡಿಡ್ ಫಾರ್ ವಿಮೆನ್”(Things Muhammed did for Women) ಎಂಬ ಲೇಖನದಲ್ಲಿ ಈ ರೀತಿ ಬರೆಯುತ್ತಾರೆ.
“ಮುಸ್ಲಿಮ್ ಮಹಿಳೆ ಮುಹಮ್ಮದ್(ಸ) ರೂಪಿಸಿರುವ ಬಲಿಷ್ಠ ಚಾಲನಾ ಶಕ್ತಿಯಾಗಿದ್ದಾಳೆ. 1,4೦೦ ವರ್ಷಗಳ ಹಿಂದೆಯೇ ಮುಹಮ್ಮದ್(ಸ) ಇಸ್ಲಾಮಿನ ಮಾತೆಯರಿಗೆ, ಪತ್ನಿಯರಿಗೆ ಮತ್ತು ಪುತ್ರಿಯರಿಗೆ ಪಾಶ್ಚಾತ್ಯ ದೇಶಗಳು ಮಹಿಳೆಯರಿಗೆ ಈ ವರೆಗೂ ನೀಡಿರದ ಸ್ಥಾನಮಾನ ಮತ್ತು ಘನತೆ ಗೌರವಗಳನ್ನು ನೀಡಿದ್ದಾರೆ.”

SHARE THIS POST VIA