Home / ಏಕದೇವನ ಆರಾಧನೆ

ಏಕದೇವನ ಆರಾಧನೆ

ಜಗತ್ತಿನ ಅಸಂಖ್ಯ ಬೆರಗುಗೊಳಿಸುವ ವಿಷಯಗಳಲ್ಲಿ ಧರ್ಮವು ಅತ್ಯಂತ ಪ್ರಮುಖವಾದುದು. ಮನುಷ್ಯನ ಮನಮಸ್ತಿಷ್ಕಗಳ ಮೇಲೆ ಧರ್ಮವು ಬೀರುವಷ್ಟು ಪ್ರಭಾವ ಇತರ ಯಾವುದೇ ವಿಷಯ ಅಥವಾ ವಸ್ತು ಬೀರುವುದಿಲ್ಲ.

‘ಮನುಷ್ಯನು ಹುಟ್ಟಿನಿಂದಲೇ ಧಾರ್ಮಿಕನಾಗಿರುತ್ತಾನೆ’ ಎಂಬುದು ಲೇಖಕರೊಬ್ಬರ ಮಾತು. ನೈಜ ದೇವನ ಬಗ್ಗೆ ಆತನಿಗೆ ಪರಿಜ್ಞಾನವಿಲ್ಲದಿದ್ದರೆ, ಕೃತಕ ದೇವರುಗಳನ್ನು ಆತನು ಸೃಷ್ಟಿಸಿಕೊಳ್ಳಲು ನಿರ್ಬಂಧಿತನಾಗುತ್ತಾನೆ. ಆಪತ್ತುಗಳು, ತೊಡಕುಗಳು ಮನುಷ್ಯನನ್ನು ಸುತ್ತುವರಿಯುತ್ತವೆ. ನಿಸರ್ಗದ ಶಕ್ತಿಗಳು ಸುತ್ತಲೂ ಕಾರ್ಯವೆಸಗುತ್ತಿರುವುದನ್ನು ಆತನು ನೋಡುತ್ತಿರುತ್ತಾನೆ. ಈ ಶಕ್ತಿಗಳು ಆತನ ನಿಯಂತ್ರಣದಲ್ಲಿರುವುದಿಲ್ಲ. ಈ ಶಕ್ತಿಗಳಲ್ಲಿ ಆತನ ಭರವಸೆ, ಆತಂಕಗಳು ಅಡಗಿರುತ್ತವೆ. ಈ ಕಾರಣಗಳಿಗಾಗಿ ತನಗಿಂತ ಬಲಶಾಲಿ ಯಾಗಿರುವ ಪ್ರಕ್ರಿಯೆಗಳ ಮೇಲೆ ಸಹಾಯವನ್ನು ನೆಚ್ಚಿಕೊಂಡಿರಲು ನಿರ್ಬಂಧಿತನಾಗುತ್ತಾನೆ… ಇವುಗಳಿಗೆ ಕಾಣಿಕೆಗಳನ್ನು ನೀಡುವ ಮತ್ತು ದೈನ್ಯದಿಂದ ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಅವುಗಳ ವಿಶ್ವಾಸವನ್ನು ಗಳಿಸಲು ಅಥವಾ ಅವುಗಳ ಕ್ರೋಧವನ್ನು ನಿವಾರಿಸಲು ಪ್ರಯತ್ನಿಸುತ್ತಾನೆ.

ಮೂರ್ತಿಪೂಜೆ ಅಥವಾ ನೇರವಾಗಿ ಹೇಳಬೇಕೆಂದರೆ ತನಗೆ ಲೌಕಿಕ ಲಾಭವನ್ನುಂಟು ಮಾಡುವ ಸಾಮರ್ಥ್ಯ ಅವುಗಳಿಗಿದೆ ಎಂಬ ಆತ್ಮ ವಿಶ್ವಾಸದಿಂದ ಅವು ಪ್ರತಿನಿಧಿಸುತ್ತಿದ್ದ ವಸ್ತು ಮತ್ತು ವ್ಯಕ್ತಿಗಳನ್ನು ಪೂಜಿಸುತ್ತಿದ್ದರು. ಈ ರೀತಿ ಮಾಡದಿದ್ದರೆ ಅವುಗಳ ಕ್ರೋಧಕ್ಕೆ ಗುರಿಯಾಗಿ ರೋಗರುಜಿನಗಳಿಗೆ ಬಲಿಯಾಗುವ, ಸಂಕಷ್ಟಗಳಿಗೆ ಗುರಿಯಾಗುವ, ದಾರುಣ ಸಾವಿಗೆ ಗುರಿಯಾಗುವ ಭಯವೂ ಇತ್ತು.

ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿ ಮುಹಮ್ಮದ್‍ರು(ಸ) ಏಕದೇವತ್ವದ ಪ್ರಚಾರವನ್ನು ಆರಂಭಿಸಿದಾಗ, ಅಂದು ಜಗತ್ತಿನಲ್ಲಿ ಪ್ರಚಲಿತವಿದ್ದ ವಿವಿಧ ಧಾರ್ಮಿಕ ಆಚಾರಗಳನ್ನು ತಿಳಿಯುವುದು ಅವಶ್ಯವಾಗಿದೆ. ಮೂರ್ತಿ ಪೂಜಕ ಬಹುದೇವ ವಿಶ್ವಾಸಿಗಳು ಮರ, ಕಲ್ಲು, ಚಿನ್ನ, ಬೆಳ್ಳಿ ಇತ್ಯಾದಿ ವಿಭಿನ್ನ ವಸ್ತುಗಳಿಂದ ನಿರ್ಮಾಣಗೊಂಡ ದೇವರುಗಳನ್ನು ಪೂಜಿಸುತ್ತಿದ್ದರು. ಅವುಗಳಿಗೆ ರೂಪ, ಆಕಾರ ಮತ್ತು ಶರೀರಗಳಿದ್ದುವು. ದೇವಿ ದೇವರುಗಳ ವಂಶಪರಂಪರೆಯು ಕ್ರಮ ಪ್ರಕಾರ ಮುಂದುವರಿಯುತ್ತಿತ್ತು. ಪತಿಯಿಲ್ಲದ ಯಾವ ದೇವಿಯೂ ಇರಲಿಲ್ಲ. ಪತ್ನಿಯಿಲ್ಲದ ಒಬ್ಬ ದೇವನೂ ಇರಲಿಲ್ಲ. ಅವರಿಗೆ ಅನ್ನ ಪಾನೀಯಗಳ ಅಗತ್ಯವೂ ಬೀಳುತ್ತಿತ್ತು. ಅವರ ಭಕ್ತರು ಅವರಿಗಾಗಿ ಅದರ ವ್ಯವಸ್ಥೆಯನ್ನು ಮಾಡುತ್ತಿದ್ದರು. ದೇವರು ಮನುಷ್ಯ ಮತ್ತು ಪ್ರಾಣಿಗಳ ರೂಪದಲ್ಲಿ ಅವತಾರ ತಾಳುತ್ತಾನೆಂದು ಬಹುದೇವ ವಿಶ್ವಾಸಿಗಳ ದೊಡ್ಡ ಗುಂಪೊಂದು ವಿಶ್ವಾಸ ತಾಳಿತ್ತು. ಕ್ರೈಸ್ತರು ತಾವು ಏಕದೇವ ವಿಶ್ವಾಸಿಗಳೆಂದು ಹೇಳಿಕೊಂಡರೂ ಅವರ ದೇವರಿಗೆ ಕನಿಷ್ಠ ಒಬ್ಬ ಮಗನಂತೂ ಇದ್ದಾನೆ. ಈ ತಂದೆ-ಮಗನ ಜತೆಗೆ ಪವಿತ್ರಾತ್ಮನೂ ದೇವತ್ವದಲ್ಲಿ ಭಾಗಿಯಾಗಿದ್ದಾನೆ. ಅವರ ದೇವರಿಗೆ ತಾಯಿಯೂ ಅತ್ತೆಯೂ ಇದ್ದಾರೆ. ಯಹೂದಿಗಳು ಕೂಡಾ ಒಬ್ಬ ದೇವನನ್ನು ನಂಬುವವರೆಂದು ವಾದಿಸುತ್ತಿದ್ದರೂ ಅವರ ದೇವನು ಕೂಡಾ ಭೌತಿಕ ಮತ್ತು ಶಾರೀರಿಕ ಅಸ್ತಿತ್ವ ಹಾಗೂ ಇತರ ಮಾನವೀಯ ಗುಣಗಳಿಂದ ಮುಕ್ತನಾಗಿರಲಿಲ್ಲ. ಆತ ಮನುಷ್ಯ ರೂಪದಲ್ಲಿ ಪ್ರತ್ಯಕ್ಷನಾಗುತ್ತಿದ್ದ. ತನ್ನ ಯಾವನಾದರೂ ದಾಸನ ಜೊತೆ ಕುಸ್ತಿಯಾಡುತ್ತಿದ್ದ ಮತ್ತು ಉಝೈರ್ ಎಂಬ ಓರ್ವ ಪುತ್ರನನ್ನೂ ಹೊಂದಿದ್ದ. ಈ ಧಾರ್ಮಿಕ ವಿಭಾಗಗಳಲ್ಲದೇ, ಅಗ್ನಿ ಆರಾಧಕರಾಗಿದ್ದ ಮಜೂಸಿಗಳು ಮತ್ತು ನಕ್ಷತ್ರಾರಾಧಕರಾಗಿದ್ದ ಸಾಬೀಗಳೂ ಇದ್ದರು.

ಇಂತಹ ಸನ್ನಿವೇಶದಲ್ಲಿ ಪ್ರವಾದಿ ಮುಹಮ್ಮದ್‍ರು(ಸ) ನಿಷ್ಕಳಂಕವಾಗಿ ಏಕದೇವನ ಆರಾಧನೆ ಮಾಡುವಂತೆ ಕರೆ ನೀಡಿದರು. ದೇವನ ಬಗೆಗಿನ ಮಿಥ್ಯ ಕಲ್ಪನೆಗಳನ್ನು ನೀಗಿಸಿ, ನೈಜ ದೇವನ ಭಕ್ತಿಯನ್ನು ಜನ ಸಾಮಾನ್ಯರ ಮನ ಮಸ್ತಿಷ್ಕಗಳಲ್ಲಿ ನಾಟುವಂತೆ ಮಾಡಿದುದು ಮುಹಮ್ಮದ್‍ರು(ಸ) ಲೋಕಕ್ಕೆ ನೀಡಿದ ಅತಿ ಶ್ರೇಷ್ಠ ಕೊಡುಗೆಯೆಂದರೆ ಅತಿಶಯೋಕ್ತಿಯಾಗಲಾರದು.

ಮನುಷ್ಯನು ತನಗೆ ನೀಡಲಾಗಿರುವ ಬುದ್ಧಿ, ವಿವೇಕ ಮತ್ತು ವಿವೇಚನಾ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ವಿಚಾರ ಹಾಗೂ ಚಿಂತನೆ ನಡೆಸುತ್ತಿರಬೇಕು ಎಂದು ಕುರ್‍ಆನ್ ಪದೇ ಪದೇ ಆದೇಶಿಸುತ್ತದೆ. ವಿಶ್ವದ ಅನ್ವೇಷಣೆ ನಡೆಸಿ ಸೃಷ್ಟಿಕರ್ತನ ಮಹಾನತೆಯನ್ನು ಅರಿಯಬೇಕೆನ್ನುವ ಕುರ್‍ಆನಿನ ಕರೆ- ಆರಾಧನೆ, ಉಪವಾಸ ವ್ರತ ಮತ್ತು ಹಜ್ಜ್ ಯಾತ್ರೆ ನಡೆಸುವಂತೆ ನಿರ್ದೇಶಿಸಿದ ವಾಕ್ಯಗಳಿಗಿಂತ ಎಷ್ಟೋ ಅಧಿಕವಿದೆ. ನಿಸರ್ಗವೆಂಬ ವಿಶಾಲ ಗ್ರಂಥದ ಅಧ್ಯಯನ ನಡೆಸುವ ಹಾಗೂ ಸ್ವತಃ ತನ್ನೊಳಗಿನ ವೈಶಿಷ್ಟ್ಯಗಳ ಬಗ್ಗೆ ಚಿಂತನೆ ನಡೆಸುವ ಮೂಲಕ ಮನುಷ್ಯನು ಯಾವ ರೀತಿ ದಿವ್ಯ ಸಂಕೇತಗಳನ್ನು ಕಂಡುಕೊಳ್ಳಬಹುದೆಂಬುದನ್ನು ಕುರ್‍ಆನ್ ಕಲಿಸಿಕೊಡುತ್ತದೆ. ಜಗತ್ತಿನಲ್ಲಿ ಉಂಟಾಗುವ ಲಯಬದ್ಧ ಬದಲಾವಣೆಗಳನ್ನು, ಹಗಲಿರುಳುಗಳು ಒಂದರ ನಂತರ ಒಂದರಂತೆ ಕ್ರಮವಾಗಿ ಬರುತ್ತಿರುವುದನ್ನು, ನಿರ್ಜೀವವಾಗಿದ್ದ ಭೂಮಿಯು ಮಳೆ ಸುರಿದೊಡನೆ ಹಠಾತ್ತನೆ ಹಸಿರಾಗಿ ಫಲವತ್ತಾಗುವುದನ್ನು, ಋತುಗಳ ಆಗಮನ ನಿರ್ಗಮನಗಳನ್ನು ನೋಡಿ ಚಿಂತನೆ ನಡೆಸಿ ಸತ್ಯವನ್ನು ಕಂಡು ಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಚಿಂತನೆ ನಡೆಸುವ ಜನರಿಗೆ ಪ್ರಕೃತಿಯ ಚಟುವಟಿಕೆಗಳಲ್ಲಿ ದೇವ ನಿದರ್ಶನಗಳನ್ನು ಕಾಣಬಹುದೆಂದು ಹೇಳುತ್ತದೆ.

“ಈ ಭೂಮಿಯನ್ನು ವಿಸ್ತರಿಸಿದವನೂ ಇದರಲ್ಲಿ ಪರ್ವತಗಳ ಗೂಟಗಳನ್ನು ನಾಟಿದವನೂ ನದಿಗಳನ್ನು ಹರಿಸಿದವನೂ ಅವನೇ. ಅವನೇ ಪ್ರತಿಯೊಂದು ವಿಧದ ಫಲಗಳ ಜೋಡಿಗಳನ್ನು ಸೃಷ್ಟಿಸಿದನು ಮತ್ತು ಅವನೇ ಹಗಲಿನ ಮೇಲೆ ಇರುಳನ್ನು ಆಚ್ಛಾದಿಸುತ್ತಾನೆ. ನಿಶ್ಚಯವಾಗಿಯೂ ಆಲೋಚಿಸುವವರಿಗೆ ಇವುಗಳಲ್ಲೆಲ್ಲ ಅನೇಕ ದೃಷ್ಟಾಂತಗಳಿವೆ. ಭೂಮಿಯಲ್ಲಿ ಒಂದಕ್ಕೊಂದು ತಾಗಿಕೊಂಡಿರುವ ಬೇರೆ ಬೇರೆ ಭೂಭಾಗಗಳಿವೆ. ದ್ರಾಕ್ಷಾ ತೋಟಗಳಿವೆ, ಹೊಲಗಳಿವೆ, ಖರ್ಜೂರದ ಮರಗಳೂ ಇದ್ದು ಅವುಗಳಲ್ಲಿ ಕೆಲವು ಒಂದೇ ಕಾಂಡದಿಂದ ಮೇಲೆದ್ದು ಕವಲೊಡೆಯದವುಗಳೂ ಇನ್ನು ಕೆಲವು ಕವಲೊಡೆದವುಗಳೂ ಇವೆ. ಇವೆಲ್ಲವುಗಳೂ ಒಂದೇ ನೀರಿನಿಂದ ತೋಯಿಸಲ್ಪಡುತ್ತವೆ. ಆದರೆ ನಾವು ರುಚಿಯಲ್ಲಿ ಕೆಲವನ್ನು ಮೇಲ್ತರದ್ದಾಗಿಯೂ ಇನ್ನು ಕೆಲವನ್ನು ಕೀಳ್ತರದ್ದಾಗಿಯೂ ಮಾಡಿ ಬಿಡುತ್ತೇವೆ. ಇವೆಲ್ಲವುಗಳಲ್ಲಿಯೂ ವಿವೇಕಮತಿಗಳಿಗೆ ಅನೇಕ ದೃಷ್ಟಾಂತಗಳಿವೆ.”(ಪವಿತ್ರ ಕುರ್‍ಆನ್, 13:3-4)

ಪ್ರವಾದಿ ಮುಹಮ್ಮದ್‍ರು(ಸ) ದೇವನ ಅಸ್ತಿತ್ವದ ಬಗ್ಗೆ, ಅವನ ಗುಣಗಳ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಜನರಿಗೆ ನೀಡಿದರು. ಇದು ಎಲ್ಲಾ ಬಹುದೇವ ವಿಶ್ವಾಸೀ ಕಲ್ಪನೆಗಳನ್ನು ನುಚ್ಚುನೂರು ಮಾಡುತ್ತವೆ. ಅಲ್ಲಾಹನ ಅಸ್ತಿತ್ವದೊಂದಿಗೆ ಮಾನವ ಗುಣಗಳ ಪೈಕಿ ಯಾವುದೇ ಗುಣವನ್ನು ಕಲಬೆರಕೆ ಮಾಡುವುದಕ್ಕೆ ಯಾವ ಅವಕಾಶವನ್ನೂ ಉಳಿಸುವುದಿಲ್ಲ. ನೈಜ ದೇವನ ಪರಿಚಯ ನೀಡುವುದರ ಜೊತೆಗೆ ಸಕಲ ಸೃಷ್ಟಿಗಳಲ್ಲಿ ಮನುಷ್ಯರಿಗೆ ತಮ್ಮ ಅತ್ಯುನ್ನತ ಸ್ಥಾನಮಾನವನ್ನು ಗುರುತಿಸುವ ಅವಕಾಶವನ್ನೂ ಅವರು ಕಲ್ಪಿಸಿದರು. ಇತರೆಲ್ಲ ಆರಾಧ್ಯರನ್ನು ಬಿಟ್ಟು ಒಬ್ಬ ಹೊಸ ದೇವನನ್ನು ಸೃಷ್ಟಿಸಿ ಆರಾಧಿಸಬೇಕೆಂದು ಅವರು ಹೇಳಲಿಲ್ಲ. ಯಾರನ್ನು ಮನುಷ್ಯರ ಮತ್ತು ಸಂಪೂರ್ಣ ವಿಶ್ವದ ಸೃಷ್ಟಿಕರ್ತ, ಒಡೆಯ, ಅನ್ನದಾತ ಹಾಗೂ ವ್ಯವಸ್ಥಾಪಕನೆಂದು ನಂಬಲಾಗುತ್ತದೋ ಮತ್ತು ಕಷ್ಟದ ಸಮಯ ಬಂದಾಗ ಇತರೆಲ್ಲ ಆರಾಧ್ಯರನ್ನು ಬಿಟ್ಟು ಸಹಾಯಕ್ಕಾಗಿ ಯಾರನ್ನು ಕರೆಯಲಾಗುತ್ತದೆಯೋ ಆ ನೈಜ ದೇವನೇ ಸಕಲ ಸೃಷ್ಟಿಗಳ ಪ್ರಭುವಾಗಿದ್ದು, ಆತನ ದಾಸ್ಯ ಕೈಗೊಳ್ಳಲು ಕರೆ ನೀಡಿದರು.

ಸಕಲ ಸೃಷ್ಟಿಗಳ ಸೃಷ್ಟಿಕರ್ತನೂ ಅದರ ವ್ಯವಸ್ಥೆ ಮತ್ತು ವ್ಯವಹಾರಗಳನ್ನು ನಡೆಸುವವನೂ ಪರಿಪಾಲಕನೂ ಆತನೇ ಆಗಿದ್ದಾನೆ. ಆತನು ಸರ್ವಶಕ್ತ, ಸರ್ವಜ್ಞ ಮತ್ತು ಯುಕ್ತಿವಂತನಾಗಿದ್ದಾನೆ. ಅವನೇ ಏಕೈಕ ಪ್ರಭುವಾಗಿದ್ದಾನೆ. ಆತನ ಪ್ರಭುತ್ವದಲ್ಲಿ ಬೇರಾರಿಗೂ ಪಾಲಿಲ್ಲ. ಅವನೇ ಈ ವಿಶ್ವದ ಏಕೈಕ ಒಡೆಯನಾಗಿದ್ದಾನೆ. ಸೃಷ್ಟಿಕರ್ತ ಮತ್ತು ಪರಿಪಾಲಕನೇ ಆರಾಧನೆಗೆ ಅರ್ಹನಾದುದರಿಂದ ಆರಾಧ್ಯತೆಯಲ್ಲಿಯೂ ಯಾರೂ ಅವನ ಭಾಗೀದಾರರಿಲ್ಲ. ಆ ಒಬ್ಬ ದೇವನೇ ಅನಾದಿಯಿಂದಲೂ ಇದ್ದಾನೆ ಮತ್ತು ಅನಂತವಾಗಿಯೂ ಇರುವನು. ದೇವರುಗಳ ಯಾವುದೇ ವರ್ಗವಿರುವುದಿಲ್ಲ. ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದ ಅಲ್ಲಾಹನು ದೇವರುಗಳ ಯಾವುದೇ ವರ್ಗಕ್ಕೆ ಸೇರಿದವನಲ್ಲ. ಅವನು ಏಕೈಕನು. ಅವನಿಗೆ ಸರಿಸಮಾನರಾರೂ ಇಲ್ಲ. ಅವನದು ಭಾಗಗಳಿಂದ ಕೂಡಿದ ಅಸ್ತಿತ್ವವಲ್ಲ. ಅದು ವಿಭಜಿಸಲ್ಪಡಲು ಅಥವಾ ಹರಿಹಂಚಾಗಲು ಸಾಧ್ಯವಿಲ್ಲ. ಅವನಿಗೆ ರೂಪ ಮತ್ತು ಆಕಾರವಿಲ್ಲ. ಅವನು ಯಾವುದೇ ಸ್ಥಳದಲ್ಲಿ ವಾಸಿಸುವುದಿಲ್ಲ. ಯಾವುದೇ ವಸ್ತು ಅವನಲ್ಲಿ ಲೀನವಾಗಿಲ್ಲ. ಅವನಿಗೆ ಬಣ್ಣವಿಲ್ಲ, ಅಂಗಾಂಗಗಳಿಲ್ಲ. ಅವನಲ್ಲಿ ಯಾವುದೇ ರೀತಿಯ ಪರಿವರ್ತನೆ ಅಥವಾ ಮಾರ್ಪಾಡು ಆಗುವುದಿಲ್ಲ. ಎಲ್ಲ ರೀತಿಯ ಬಹುತ್ವದಿಂದ ಅವನು ಪಾವನನಾಗಿದ್ದಾನೆ. ಅವನಿಗಿಂತ ಉನ್ನತನು ಯಾರೂ ಇಲ್ಲ. ತನ್ನ ಮೇಲ್ಮೆ, ಮಹಿಮೆ, ಮಹಾನತೆ, ತಾಳ್ಮೆ-ಸಂಯಮ ಹಾಗೂ ತನ್ನ ವಿದ್ಯೆ-ಜಾಣ್ಮೆಯಲ್ಲಿ ಪರಿಪೂರ್ಣನಾದವ ಎಲ್ಲಾ ಕುಂದು ಕೊರತೆಗಳಿಂದ ಮುಕ್ತನಾದವನು. ಇನ್ನಾರಲ್ಲಿಯೂ ಇಲ್ಲದಂತಹ ಗುಣಗಳುಳ್ಳವನು. ತನ್ನಿಚ್ಛೆಯಂತೆ ಯಾವ ತೀರ್ಮಾನ ಬೇಕಾದರೂ ಮಾಡಬಲ್ಲವನು, ಯಾವ ಕೆಲಸ ಬೇಕಾದರೂ ಮಾಡಬಲ್ಲವನು. ಅವನ ಆಜ್ಞೆ ಮತ್ತು ತೀರ್ಮಾನವನ್ನು ಪುನರವಲೋಕನ ಮಾಡುವವರು ಯಾರೂ ಇಲ್ಲ.

ಇಡೀ ವಿಶ್ವವು ಅವನನ್ನು ಆಶ್ರಯಿಸಿದೆ. ಆದರೆ ಅವನು ಯಾರನ್ನೂ ಆಶ್ರಯಿಸಿಲ್ಲ. ಲೋಕದ ಪ್ರತಿಯೊಂದು ವಸ್ತು ತನ್ನ ಅಸ್ತಿತ್ವ ಮತ್ತು ಅಗತ್ಯತೆಗಳಿಗಾಗಿ ತಿಳಿದೋ ತಿಳಿಯದೆಯೋ ಅವನನ್ನೇ ಆಶ್ರಯಿಸಿದೆ ಮತ್ತು ಎಲ್ಲರ ಬೇಡಿಕೆಗಳನ್ನು ಈಡೇರಿಸುವವನು ಅವನೇ ಆಗಿದ್ದಾನೆ. ಸಂಪೂರ್ಣ ವಿಶ್ವದ ಮೇಲೆ ಅವನ ಪ್ರಭುತ್ವವಿದೆ. ಆತನು ಯಾರ ಆಶ್ರಯದಲ್ಲಿಯೂ ಇಲ್ಲ ಮತ್ತು ಎಲ್ಲರೂ ಆತನ ಆಶ್ರಿತರಾಗಿದ್ದಾರೆ. ಸಕಲರಿಂದಲೂ ಆತನು ನಿರಪೇಕ್ಷನು. ಮನುಷ್ಯನು ತನ್ನ ಆಶ್ರಯದಾತನನ್ನೇ ತನ್ನ ಆರಾಧ್ಯನನ್ನಾಗಿ ಮಾಡುತ್ತಾನೆ. ಇದರಿಂದ ಅನಿವಾರ್ಯವಾಗುವುದೇನೆಂದರೆ ಅವನ ಹೊರತು ಬೇರಾರೂ ಆರಾಧ್ಯರಿರಬಾರದು. ಏಕೆಂದರೆ ಯಾರಿಗೆ ಬಯಕೆ-ಬೇಡಿಕೆಗಳನ್ನು ಈಡೇರಿಸುವ ಮತ್ತು ಆಶ್ರಯ ನೀಡುವ ಸಾಮರ್ಥ್ಯ ಇಲ್ಲವೋ ಅವನನ್ನು ಯಾವನೇ ಪ್ರಜ್ಞಾವಂತ ಮನುಷ್ಯ ಆರಾಧಿಸಲಾರ.

ಪ್ರವಾದಿ ಮುಹಮ್ಮದ್(ಸ) ಆರಾಧನೆಗೆ ಕರೆ ನೀಡಿದ ಆರಾಧ್ಯನು ತನ್ನ ಗುಣಗಳಲ್ಲಿ ವಿಶಿಷ್ಟನಾಗಿದ್ದಾನೆ ಮತ್ತು ಪರಿಪೂರ್ಣನಾಗಿದ್ದಾನೆ. ಗುಣಗಳಲ್ಲಿ ಆತನು ಯಾವ ಸೃಷ್ಟಿಯನ್ನೂ ಹೋಲುವುದಿಲ್ಲ. ಯಾವ ಸೃಷ್ಟಿಯೂ ಆತನ ಗುಣಗಳನ್ನು ಹೊಂದಿಲ್ಲ. ತನ್ನ ಗುಣಗಳಲ್ಲಿ ಅದ್ವಿತೀಯನಾಗಿದ್ದಾನೆ. ಆತನು ಏಕೈಕನೂ ಸರ್ವಶ್ರೇಷ್ಠನೂ ಆಗಿದ್ದಾನೆ. ಆತನಿಗೆ ಸಹಭಾಗಿಗಳು ಯಾರೂ ಇಲ್ಲ. ಆತನಿಗೆ ಯಾವ ಸಂತಾನವೂ ಇಲ್ಲ. ಆತನು ಯಾರ ಸಂತಾನವೂ ಅಲ್ಲ. ಆತನು ಸರ್ವಶ್ರುತನೂ ಸರ್ವವೀಕ್ಷಕನೂ ಸರ್ವಲೋಕಗಳ ಪರಿಪಾಲಕನೂ ಆಗಿದ್ದಾನೆ. ಆತನೇ ಸಂಪೂರ್ಣ ವಿಶ್ವದ ಒಡೆಯನಾಗಿದ್ದಾನೆ. ಆತನಿಗೆ ನಿದ್ರೆ, ತೂಕಡಿಕೆ ಬಾಧಿಸುವುದಿಲ್ಲ. ಸಕಲ ನ್ಯೂನತೆಗಳಿಂದ, ಬೇಡಿಕೆಗಳಿಂದ ಆತನು ಮುಕ್ತನು. ಆತನು ಮನುಷ್ಯನ ನರನಾಡಿಗಿಂತಲೂ ಸವಿೂಪವಾಗಿದ್ದಾನೆ. ಮನುಷ್ಯನ ಹೃದಯದಲ್ಲಿ ಏಳುವ ಭಾವನೆಗಳನ್ನೂ ಆತನು ಬಲ್ಲನು.

ಆತನು ಯಾವುದೇ ವಸ್ತುವಿನಲ್ಲಿ ಅಡಕವಾಗಿಲ್ಲ. ಯಾವ ವಸ್ತುವೂ ಆತನಿಂದ ಅಡಗಿಲ್ಲ. ಯಾವುದೇ ಪ್ರದೇಶ ಅಥವಾ ಸ್ಥಳಕ್ಕೆ ಆತನು ಸೀಮಿತವಾಗಿಲ್ಲ. ಆತನು ಪರಮ ಪಾವನನು. ಆತನೇ ಏಕೈಕ ಸಾರ್ವಭೌಮನು ಮತ್ತು ಸರ್ವವ್ಯಾಪಿಯಾಗಿದ್ದಾನೆ. ಆತನು ಸರ್ವಜ್ಞನು. ತನ್ನ ಗುಣಗಳಿಂದಾಗಿ ಎಲ್ಲಾ ಸೃಷ್ಟಿಗಳಿಗಿಂತ ಶ್ರೇಷ್ಠನಾಗಿದ್ದಾನೆ. ಬದಲಾವಣೆಗೆ ಮತ್ತು ಸಾವಿಗೆ ಆತನು ಅತೀತನಾಗಿದ್ದಾನೆ. ಎಲ್ಲಾ ಕುಂದು ಕೊರತೆಗಳಿಂದ ಆತನು ಪರಿಶುದ್ಧನು.

ಯಾವುದೇ ಕಾರ್ಯವೆಸಗಲು ಅಥವಾ ಇನ್ನಾವುದೇ ಕಾರಣಕ್ಕಾಗಿ ಅವತಾರ ಹೊಂದುವುದು ಆತನ ಘನತೆಗೆ ತಕ್ಕುದಲ್ಲ. ಸರ್ವಶಕ್ತನೂ ಸರ್ವಸಮರ್ಥನೂ ಆಗಿರುವ ಕಾರಣ ಅವತಾರ ಹೊಂದುವ ಆವಶ್ಯಕತೆ ಉದ್ಭವಿಸುವುದಿಲ್ಲ. ಯಾವುದೇ ಕಾರ್ಯ ಮಾಡಬೇಕಿದ್ದಲ್ಲಿ ‘ಆಗು’ ಎಂದರೆ ಸಾಕು; ಕ್ಷಣ ಮಾತ್ರದಲ್ಲಿ ಅದು ಸಂಭವಿಸಿರುತ್ತದೆ.

ಸೃಷ್ಟಿಗಳ ಆರಾಧನೆಯನ್ನು ತ್ಯಜಿಸಿ ಸೃಷ್ಟಿಕರ್ತನ ಆರಾಧನೆಯನ್ನು ಕೈಗೊಳ್ಳಬೇಕೆಂದು ಪ್ರವಾದಿ ಮುಹಮ್ಮದ್‍ರು(ಸ) ಜನರಿಗೆ ತಿಳಿ ಹೇಳಿದರು. ಪ್ರವಾದಿಯವರ(ಸ) ಬೋಧನೆಗಳು ಸೃಷ್ಟಿಕರ್ತನನ್ನು ಸ್ಪಷ್ಟವಾಗಿ ಅರಿಯುವಂತೆ ಮಾಡುತ್ತವೆ. ಮನುಷ್ಯನು ಪಶು ಪಕ್ಷಿಗಳ, ಗಿಡ ಮರಗಳ, ಕಲ್ಲು ಬಂಡೆಗಳ, ಇತರ ಮನುಜರ ದಾಸ್ಯಾರಾಧನೆಯಿಂದ ಬಿಡುಗಡೆ ಹೊಂದಿ, ಕೇವಲ ತನ್ನ ನೈಜ ಸೃಷ್ಟಿಕರ್ತನ ದಾಸ್ಯಾರಾಧನೆಯನ್ನು ಮಾಡಲಾರಂಭಿಸುತ್ತಾನೆ. ಇದರಿಂದ ಕೇವಲ ದೇವನ ಪಾವನತೆಯನ್ನು ಮಾತ್ರ ಸಮರ್ಥಿಸಿದಂತಾಗುವುದಲ್ಲ. ಎಲ್ಲಾ ಸೃಷ್ಟಿಗಳಿಗಿಂತ ಶ್ರೇಷ್ಠ ಸೃಷ್ಟಿಯಾದ ಮನುಷ್ಯನ ಘನತೆ-ಗೌರವಗಳೂ ಸಹ ಉನ್ನತವಾಗುತ್ತವೆ. ಇದರಿಂದಾಗಿ ಮನುಷ್ಯನು ಸ್ವಾವಲಂಬಿಯಾಗುತ್ತಾನೆ, ಸ್ಥೈರ್ಯ ಉಳ್ಳವ ನಾಗುತ್ತಾನೆ ಮತ್ತು ವಿವೇಕವಂತನಾಗುತ್ತಾನೆ. ಏಕೈಕ ದೇವನ ದಾಸ್ಯಾರಾಧನೆಯನ್ನು ಸ್ವೀಕರಿಸುವ ಮೂಲಕ ಮನುಷ್ಯನಲ್ಲಿ ಸಕಲ ಸೃಷ್ಟಿಗಳಿಗಿಂತ ಮತ್ತು ಸಕಲ ವಸ್ತುಗಳಿಗಿಂತ ತಾನು ಉತ್ಕ್ರಷ್ಟನೆಂಬ ಅರಿವು ಮೂಡುತ್ತದೆ. ವಿಶ್ವದ ವ್ಯವಸ್ಥೆಯಲ್ಲಿ ಸೃಷ್ಟಿಕರ್ತನು ತನಗೆ ನೀಡಿರುವ ಅತ್ಯುನ್ನತ ಪದವಿಯನ್ನು ಗುರುತಿಸುತ್ತಾನೆ.

SHARE THIS POST VIA