ಝಕಾತನ್ನು ಪವಿತ್ರ ಕುರ್ ಆನ್ ನಮಾಝ್‍ನೊಂದಿಗೆ 28 ಸಲ ಉಲ್ಲೇಖಿಸಿದೆ. ಸಂಸ್ಕರಣೆ, ಬೆಳವಣಿಗೆ, ಅಭಿವೃದ್ಧಿ ಎಂಬುದು ಝಕಾತ್ ಎಂಬ ಅರಬಿ ಪದದ ಭಾಷಾರ್ಥವಾಗಿದೆ. ಝಕಾತ್ ಇಸ್ಲಾಮ್ ವಿಶ್ವಾಸಿಗಳ ಮೇಲೆ ಸಾಂಕೇತಿಕವಾಗಿ ಹೊರಿಸುವ ಕಡ್ಡಾಯ ಆರ್ಥಿಕ ಹೊಣೆಗಾರಿಕೆಯಾಗಿದೆ. ಕೃಷ್ಯುತ್ಪನ್ನಗಳು, ಜಾನುವಾರುಗಳು, ಖನಿಜಗಳು, ಹಣ, ವ್ಯಾಪಾರದ ಬಂಡವಾಳ ಮುಂತಾದ ಎಲ್ಲ ರೀತಿಯ ಸಂಪತ್ತಿನ ಮಾಲಕರು ಝಕಾತ್ ನೀಡುವುದು ಕಡ್ಡಾಯವಾಗಿದೆ.
ಕೃಷ್ಯುತ್ಪನ್ನಗಳು ನೀರಾವರಿಯಿಂದ ಬೆಳೆಯುವುದಾದರೆ ಶೇ.5ರಷ್ಟು, ಪ್ರಕೃತಿದತ್ತವಾಗಿ ಬೆಳೆಯುವುದಾದರೆ ಶೇ.10ರಷ್ಟು ಝಕಾತ್ ನ ಮೊತ್ತವಾಗಿದೆ. ಬಂಗಾರ, ಬೆಳ್ಳಿ, ಕರೆನ್ಸಿ ಇವುಗಳ ಝಕಾತ್ ನ ಮೊತ್ತ ಶೇ.2.5ರಷ್ಟು ಆಗಿದೆ. 85ಗ್ರಾಂ ಬಂಗಾರ , 595 ಗ್ರಾಮ ಬೆಳ್ಳಿ ಇರುವವರು ಝಕಾತ್ ನೀಡಬೇಕು. ಅದಕ್ಕಿಂತ ಕಡಿಮೆಯಿದ್ದರೆ ಅದಕ್ಕೆ ಝಕಾತ್ ಇಲ್ಲ. 85 ಗ್ರಾಮ್ ಬಂಗಾರದ ಮೌಲ್ಯದಷ್ಟು ಹಣವಿರುವವರು ಝಕಾತ್ ನೀಡಬೇಕು.
ಝಕಾತನ್ನು ವಾರ್ಷಿಕವಾಗಿ ಲೆಕ್ಕ ಮಾಡಬೇಕು. ವ್ಯಾಪಾರವನ್ನು ಪ್ರಾರಂಭಿಸಿ ವರ್ಷ ಪೂರ್ತಿಯಾದರೆ ಅದರ ಮೂಲ ಬಂಡವಾಳ ಮತ್ತು ಲಾಭ ಸೇರಿ, 85 ಗ್ರಾಂ ಬಂಗಾರದ ಮೌಲ್ಯ ಅದಕ್ಕಿಂತ ಹೆಚ್ಚು ಇದ್ದರೆ ಶೇ. 2.5 ಝಕಾತ್ ನೀಡಬೇಕು. ಸಂಬಳ, ವೈದ್ಯರು, ಇಂಜಿನಿಯರ್, ಕಲಾಕಾರರು ಮತ್ತು ಸಾಹಿತ್ಯಕಾರರ ವರಮಾನವ ಮೇಲೆ ವಿವರಿಸಿದ ಮೊತ್ತಕ್ಕೆ ತಲುಪಿದರೆ ಆಗ ಝಕಾತ್ ನೀಡಬೇಕು. ವರಮಾನವನ್ನು ಮುಂದಿನ ವರ್ಷಕ್ಕೂ ಮುಂದುವರಿಸಿದರೆ ಆ ವರ್ಷಕ್ಕೂ ಅದರ ನಂತರದ ವರ್ಷಕ್ಕೂ ಝಕಾತ್ ನೀಡಬೇಕು. ಸ್ವಂತ ಖರ್ಚು ಮಾಡಿ ಮಿಗತೆಯಾದರೆ ಮಾತ್ರ ಝಕಾತ್ ನೀಡಬೇಕಾಗಿದೆ. ಓರ್ವರ ವರಮಾನವು ಝಕಾತ್ ಗೆ ಅರ್ಹವೆನಿಸುವ ಪರಿಧಿಯಲ್ಲಿದ್ದರೂ ಅದು ಸಂಪೂರ್ಣ ಅವರ ಕುಟುಂಬ ಜೀವನಕ್ಕೆ ಖರ್ಚಾಗಿ ಹೋಗುವುದಿದ್ದರೆ ಅವರು ಝಕಾತ್ ನೀಡಬೇಕಾಗಿಲ್ಲ.
ಸಮಾಜದಲ್ಲಿ ಅತಿ ಹೆಚ್ಚು ಕಷ್ಟಪಡುವವರು ಝಕಾತಿನ 8 ಹಕ್ಕುದಾರರಲ್ಲಿ ಪ್ರಥಮ ವಿಭಾಗವಾಗಿದ್ದಾರೆ. ಒಬ್ಬ ವ್ಯಕ್ತಿಯ ಸೊತ್ತಿನಲ್ಲಿ ಝಕಾತ್ ಕಡ್ಡಾಯವೆನಿಸುವುದರೊಂದಿಗೆ ಅದರಲ್ಲಿ ಝಕಾತ್ ನ ಮೊತ್ತವಾದ ಶೇಕಡ 2.5 ಅವನದಲ್ಲ ಎಂದು ಇಸ್ಲಾಮ್ ಆದೇಶಿಸುತ್ತದೆ. ಅನಂತರ ಅದು ಝಕಾತ್ ಅರ್ಹರೆನಿಸಿದವರ ಸೊತ್ತಾಗಿ ಪರಿವರ್ತನೆಯಾಗುವುದು. ಸೂಕ್ತ ಕಾರಣಗಳಿಲ್ಲದೆ ಅದನ್ನು ಅವರು ಕೈಯಲ್ಲಿರಿಸುವುದು ಕೂಡಾ ತಪ್ಪು. ಝಕಾತ್ ನೀಡಬೇಕಾದವರು ಅದನ್ನು ನೀಡದೇ ಮೃತರಾದರೆ ಅವರು ನೀಡಬೇಕಾಗಿದ್ದ ಝಕಾತ್ ನ ಮೊತ್ತ ಸಾಲವಾಗಿಯೇ ಉಳಿಯುವುದು. ಅವರ ವಾರೀಸುದಾರರು ಆ ಸಾಲವನ್ನು ಪಾವತಿಸಬೇಕಾಗುವುದು. ಮೃತನ ಸೊತ್ತಿನಲ್ಲಿ ಝಕಾತಿನ ಪಾಲನ್ನು ಕಳೆದು ಉಳಿದ ಮೊತ್ತವು ಮಾತ್ರವೇ ಅವನ ವಾರೀಸುದಾರರಿಗೆ ಅವನ ಸೊತ್ತಿನಲ್ಲಿರುವ ಹಕ್ಕಾಗಿದೆ.
ನಮಾಝ್‍ನಂತೆ ಝಕಾತ್ ಕೂಡಾ ವ್ಯಕ್ತಿಗತವಾದ ಬಾಧ್ಯತೆಯಾಗಿದೆ. ಝಕಾತನ್ನು ಶೇಖರಿಸುವ ಇಸ್ಲಾಮೀ ಸರಕಾರಗಳು ಇಲ್ಲದಿರುವ ಸ್ಥಳಗಳಲ್ಲಿ ಸಂಘಟಿತವಾಗಿ ಶೇಖರಿಸಲು ಮತ್ತು ವಿತರಿಸಲು ವ್ಯವಸ್ಥೆಯೊಂದನ್ನು ಸ್ಥಾಪಿಸುವುದು ಮುಸ್ಲಿಮ್ ಸಮುದಾಯದ ಹೊಣೆಗಾರಿಕೆಯಾಗಿದೆ. ಸಮುದಾಯವು ಅಂತಹದ್ದೊಂದು ವ್ಯವಸ್ಥೆ ಉಂಟು ಮಾಡದಿದ್ದರೆ ವ್ಯಕ್ತಿಗಳು ಝಕಾತಿನ ಹೊಣೆಗಾರಿಕೆಗಳಿಂದ ಮುಕ್ತರಾಗುವುದಿಲ್ಲ. ಪ್ರತಿಯೊಬ್ಬ ವಿಶ್ವಾಸಿಯು ತನ್ನ ಝಕಾತ್ ನ ಪಾಲನ್ನು ಅದರ ಅರ್ಹ ವ್ಯಕ್ತಿಯನ್ನು ಕಂಡು ಹುಡುಕಿ ನೀಡುವುದು ಅವರ ಕರ್ತವ್ಯವಾಗಿದೆ.
ನಮಾಝ್ ದೇವನ ಭಕ್ತಿಯೊಂದಿಗೆ ಮಾನವೀಯ ಐಕ್ಯ ಮತ್ತು ಶಿಸ್ತನ್ನೊಳಗೊಂಡ ಆರಾಧನೆಯಾದರೆ ಝಕಾತ್ ಮಾನವೀಯ ಅಗತ್ಯವನ್ನು ಮತ್ತು ತ್ಯಾಗ ಶೀಲತೆಯನ್ನೊಳಗೊಂಡ ಆರಾಧನೆಯಾಗಿದೆ. ನಮಾಝ್‍ನ ಮೂಲಕ ತನ್ನ ಜೀವನ ಮರಣವೆಲ್ಲವೂ ಅಲ್ಲಾಹನಿಗಾಗಿದೆ ಎಂದು ಪ್ರತಿಜ್ಞೆ ಮಾಡುವ ದಾಸನು ಝಕಾತ್ ನ ಮೂಲಕ ಸಂಪತ್ತನ್ನು ಅವನಿಗೆ ಸಮರ್ಪಿಸುತ್ತಾನೆ. ಝಕಾತ್ ಪಾವತಿಸುವ ಭಕ್ತನು ದೇವನ ಸಂಪ್ರೀತಿಗಾಗಿ ತನ್ನ ಸಂಪತ್ತನ್ನು ತ್ಯಜಿಸುತ್ತಾನೆ. ಝಕಾತ್ ಎಂಬುದು ಸಂಪತ್ತು ಶ್ರೀಮಂತರಲ್ಲಿ ಮಾತ್ರ ತಿರುಗಾಡದೆ ಸಮಾಜದಲ್ಲಿಡೀ ವಿತರಣೆಯಾಗಬೇಕೆಂಬ ಇಸ್ಲಾಮೀ ಆಶಯವನ್ನು ಪ್ರಾಯೋಗಿಕವಾಗಿ ಸಾಕ್ಷಾತ್ಕಾರಗೊಳಿಸುವ ತರಬೇತಿಯಾಗಿದೆ.
ಝಕಾತ್ ಇರುವವರ ಸಂಪತ್ತಿನಿಂದ ಇಲ್ಲದವರಿಗೆ ಕೊಡ ಮಾಡಲಾದ ಮತ್ತು ಅದು ನಿರಾಕರಿಸಲು ಸಾಧ್ಯವಿಲ್ಲದಂತಹ ಹಕ್ಕಾಗಿರುತ್ತದೆ. ಆ ಮೂಲಕ ಇರುವವರು ಮತ್ತು ಇಲ್ಲದವರ ಸಂಬಂಧ ಅಸೂಯೆ ವಿದ್ವೇಷದ್ದಾಗುವ ಬದಲು ಪ್ರೀತಿ ಮತ್ತು ಹಿತಾಕಾಂಕ್ಷೆಯದ್ದಾಗಿ ಮಾರ್ಪಡುವುದು.