ಕ್ರಾಂತಿಕಾರಿ ಸಮಾಜ ಸುಧಾರಕರ ಸದ್ದಡಗಿಸುವ ನಿರಂಕುಶಾವ್ಯವಸ್ಥೆಯ ಪ್ರಯತ್ನವು ಅನಾದಿ ಕಾಲದಿಂದಲೇ ನಡೆದು ಬರುತ್ತಿರುವ ಪಿಡುಗಾಗಿದೆ. ಅಂದು ಕೂಡಾ ಅದೇ ನಡೆದಿತ್ತು.
ಪ್ರವಾದಿ ಇಬ್ರಾಹೀಮ್(ಅ)ರ ಕಾಲದಲ್ಲಿ ನಮ್ರೂದ್ ಎಂಬ ಒಬ್ಬ ಕ್ರೂರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದ. ವಿಶೇಷವೇನೆಂದರೆ ಸ್ವತಃ ಇಬ್ರಾಹೀಮರ ತಂದೆಯೇ ಆ ಚಕ್ರಾಧಿಪತಿಯ ಆಸ್ಥಾನದಲ್ಲಿ ಪುರೋಹಿತರಾಗಿ ಸೇವೆ ಮಾಡುತಿದ್ದರು. ಅವರೊಬ್ಬ ಮೂರ್ತಿ ಕೆತ್ತನೆಗಳ ಶಿಲ್ಪಿ; ಮಾತ್ರವಲ್ಲ ಅವುಗಳ ದೈತ್ಯ ವ್ಯಾಪಾರಿಯಾಗಿದ್ದರು.
ಪ್ರವಾದಿ ಇಬ್ರಾಹೀಮರಿಗೆ ಬಾಲ್ಯದಿಂದಲೇ ವ್ಯವಸ್ಥೆಯಲ್ಲಿ ರೂಢಾಮೂಲವಾಗಿರುವ ನಂಬಿಕೆಗಳ ಬಗ್ಗೆ ತಿರಸ್ಕಾರ ಭಾವವಿತ್ತು. “ಆಲಿಸಲಾಗದ, ನೋಡಲಾಗದ ಜಡ ಮೂರ್ತಿಗಳು ಪೂಜಾರ್ಹವಾಗುವುದು ಹೇಗೆ” ? ಎಂಬ ಇಬ್ರಾಹೀಮರ ಸತ್ಯಾನ್ವೇಷಣೆಯ ನಡೆಯು ಮುಂದೆ ಅಲ್ಲಿಯ ವ್ಯವಸ್ಥೆಗೆ ಸವಾಲಾಗಿ ನಿಲ್ಲುತ್ತದೆ.
ಕ್ರಾಂತಿಕಾರಿಯೊಬ್ಬ ತನ್ನ ಜನರ ನಂಬಿಕೆಗಳ ವಿರುದ್ಧವಾಗಿ ಲಗ್ಗೆ ಹಾಕುತ್ತಿದ್ದಾನೆಂದು ಸರ್ವಾಧಿಕಾರಿ ನಮ್ರೂದ್‌ನಿಗೆ ಅರಿವಾಗಿ ಪ್ರವಾದಿ ಇಬ್ರಾಹೀಮ್(ಅ)ರನ್ನು ಸದೆಬಡಿಯುವ ಸಕಲ ಪ್ರಯತ್ನಗಳನ್ನು ಮಾಡುತ್ತಾನೆ . ನಿರಂತರವಾಗಿ ಅವರ ಮೇಲೆ ನಡೆದ ಹಿಂಸಾತ್ಮಕ ದಬ್ಬಾಳಿಕೆಯು ಹತ್ತು-ಹಲವು ರೂಪಗಳಲ್ಲಿ ಮುಂದುವರಿಯುತ್ತದೆ. ಸ್ವತಃ ತಂದೆಯಿಂದ , ಕೊನೆಗೆ ಸಮಾಜದಿಂದಲೇ ಪ್ರವಾದಿ ಇಬ್ರಾಹೀಮ್ ಬಹಿಷ್ಕೃತರಾಗುತ್ತಾರೆ
ಬದುಕಿನುದ್ದಕ್ಕೂ ಬಂದ ಕಷ್ಟಕಾರ್ಪಣ್ಯಗಳ ಮಹಾಪೂರಗಳನ್ನೆಲ್ಲ ಅಪಾರವಾದ ದೇವಭಕ್ತಿ, ತಾಳ್ಮೆ, ಭರವಸೆ, ತ್ಯಾಗ, ಬದ್ಧತೆಯಿಂದ ಎದುರಿಸಿದ ಪ್ರವಾದಿ ಇಬ್ರಾಹೀಮರು ಇತಿಹಾಸದುದ್ದಕ್ಕೂ ಅಜರಾಮರವಾಗಿ ಉಳಿಯುತ್ತಾರೆ. ವೇದಗ್ರಂಥಗಳಾದ ಬೈಬಲ್ , ತೌರಾತ್ (ತೋರಾ) ಮತ್ತು ಪವಿತ್ರ ಕುರ್‌ಆನ್‌ನಲ್ಲಿ ಅವರ ಬದುಕಿನ ಯಶೋಗಾಥೆಯು ಬಹಳ ಗೌರವಾಧಾರಗಳೊಂದಿಗೆ ಉಲ್ಲೇಖಿಸಲ್ಪಟ್ಟಿದೆ. ಜಗತ್ತಿನಲ್ಲಿ ಇಂದಿಗೂ ತಂತಮ್ಮ ಧಾರ್ಮಿಕ ಭಿನ್ನತೆಗಳ ಹೊರತಾಗಿಯೂ ಯಹೂದಿ, ಕ್ರೈಸ್ತ ಮತ್ತು ಮುಸ್ಲಿಮರಿಗೆ ಪ್ರವಾದಿ ಇಬ್ರಾಹೀಮ(ಅಬ್ರಾಹಂ)ರೇ ಪಿತಾಮಹರಾಗಿದ್ದಾರೆ. ಸರ್ವ ಕಾಲದಲ್ಲೂ ಈ ಜನಸಮುದಾಯಗಳಿಗೆ ಅವರೇ ಆದರ್ಶ ನಾಯಕ.
ಓದಿರಿ ……..
• ಪ್ರವಾದಿ ಇಬ್ರಾಹೀಮ್(ಅ)
ತ್ಯಾಗೋಜ್ವಲ ಬದುಕು.
ಮುಖಬೆಲೆ : 54-00
• ಪ್ರವಾದಿ ಇಬ್ರಾಹೀಮ್ (ಅ)
ಜೀವನ ಮತ್ತು ಸಂದೇಶ
ಮುಖಬೆಲೆ: 20 -00
• ಪ್ರತಿಗಳಿಗಾಗಿ ಸಂಪರ್ಕಿಸಿರಿ:
7795837394 | 9449333496