ಪ್ರೊ। ಕೆ.ಎಸ್. ರಾಮಕೃಷ್ಣ ರಾವ್
ಅರೇಬಿಯಾದ ಮರಳುಗಾಡಿನಲ್ಲಿ ಮುಹಮ್ಮದ್‍ರ ಜನನ. ಮುಸ್ಲಿಮ್ ಇತಿಹಾಸಕಾರರ ಅಭಿಪ್ರಾಯದಂತೆ ಕ್ರಿ.ಶ. 571ರ ಎಪ್ರಿಲ್ 2ಂನೇ ತಾರೀಕು. ‘ಅತ್ಯಂತ ಪ್ರಶಂಸಿಸಲ್ಪಡುವವನು’ ಎಂಬುದು ‘ಮುಹಮ್ಮದ್’ ಎಂಬ ಪದದ ಅರ್ಥ. ಅರೇಬಿಯಾದ ಜನರಲ್ಲಿ ಅತೀ ಶ್ರೇಷ್ಠ. ದುರ್ಗಮವಾದ ಆ ಮರುಭೂಮಿಯಲ್ಲಿ ಜೀವಿಸಿದ ಎಲ್ಲ ಸಾಮ್ರಾಟರು ಮತ್ತು ಕವಿವರ್ಯರಿಗಿಂತಲೂ ಎಷ್ಟೋ ಪಾಲು ಶ್ರೇಷ್ಠ.
ಅವರು ಜನಿಸಿದಾಗ ಅದು ಕೇವಲ ಒಂದು ಮರುಭೂಮಿಯಾಗಿತ್ತು. ಕೇವಲ ಶೂನ್ಯ. ಆ ಶೂನ್ಯದಿಂದ ಒಂದು ಹೊಸ ಲೋಕವು ರೂಪು ತಾಳಿತು. ಒಂದು ಹೊಸ ಜೀವನ, ಒಂದು ಹೊಸ ಸಂಸ್ಕ್ರತಿ, ಒಂದು ಹೊಸ ನಾಗರಿಕತೆ, ಒಂದು ಹೊಸ ಸಾಮ್ರಾಜ್ಯ. ಮೊರೊಕ್ಕೋದಿಂದ ಇಂಡೀಸ್‍ವರೆಗೆ ವಿಸ್ತರಿಸಿದ ಒಂದು ಸಾಮ್ರಾಜ್ಯ. ಏಶ್ಯಾ, ಆಫ್ರಿಕಾ ಮತ್ತು ಯುರೋಪ್ ಎಂಬ ಮೂರು ಬೃಹತ್ ಖಂಡಗಳ ಜೀವನ ಮತ್ತು ವಿಚಾರಧಾರೆಗಳಲ್ಲಿ ಪ್ರಭಾವ ಬೀರಿದ ಸಾಮ್ರಾಜ್ಯ. ಮುಹಮ್ಮದರೇ ಅದರ ಶಿಲ್ಪಿ.
ಪರಸ್ಪರ ತಿಳುವಳಿಕೆ
ಪ್ರವಾದಿಯಾದ ಮುಹಮ್ಮದರ ಕುರಿತು ಬರೆಯಲು ಹೊರಟಾಗ ಒಂದು ಸಂದೇಹ. ನಾನು ಬರೆಯುತ್ತಿರುವುದು ನಾನು ಸ್ವೀಕರಿಸಿಲ್ಲದ ಒಂದು ಧರ್ಮದ ಕುರಿತು. ಆ ಧರ್ಮದಲ್ಲಿಯೇ ವಿವಿಧ ವಿಚಾರಧಾರೆಗಳ ವಿಭಿನ್ನ ವರ್ಗಗಳಿರುವ ಹಿನ್ನೆಲೆಯಲ್ಲಿ ಅದು ಇನ್ನೂ ತ್ರಾಸದಾಯಕ. ಧರ್ಮವು ಸಂಪೂರ್ಣವಾಗಿ ವೈಯಕ್ತಿಕವೆಂದು ವಾದಿಸಬಹುದಾದರೂ ಗೋಚರ ಮತ್ತು ಅಗೋಚರವಾದ ಈ ಪ್ರಪಂಚವನ್ನು ಸಂಪೂರ್ಣವಾಗಿ ಮೈಗೂಡಿಸುವ ಶಕ್ತಿಯನ್ನು ಅದು ಹೊಂದಿದೆಯೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಅದು ಕೆಲವೊಮ್ಮೆ ಹೃದಯ ಮತ್ತು ಆತ್ಮದಲ್ಲಿಯೂ ಮನಸ್ಸಿನ ಪ್ರಜ್ಞೆ ಮತ್ತು ಉಪಪ್ರಜ್ಞೆಯ ಸೀಮೆಗಳಲ್ಲಿಯೂ ಸುಪ್ತ ಮನಸ್ಸಿನಲ್ಲಿಯೂ ಪ್ರವೇಶಿಸಿ ತುಂಬಿ ನಿಲ್ಲುತ್ತದೆ. ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯಗಳು ಮೃದು ಹಾಗೂ ಸೂಕ್ಷ್ಮವಾದ ಒಂದ ರೇಶ್ಮೆ ನೂಲಿನಲ್ಲಿ ನೇತಾಡುತ್ತಿದೆಯೆಂಬ ವಿಶ್ವಾಸವು ಇಲ್ಲಿ ಪ್ರಬಲವಾಗಿರುವುದರಿಂದ ಈ ಸಮಸ್ಯೆಯು ಇನ್ನಷ್ಟು ಜಟಿಲವಾಗುತ್ತದೆ. ನಾವು ಹೆಚ್ಚಾಗಿ ಭಾವೋದ್ವೇಗಕ್ಕೊಳಗಾಗುವುದರಿಂದ ಮನಸ್ಸಿನ ಸಂತುಲಿತ ಸ್ಥಿತಿಯು ನಿರಂತರ ಸಂಫರ್ಷಾತ್ಮಕವಾಗುವ ಸಾಧ್ಯತೆಯಿದೆ. ಈ ದೃಷ್ಟಿಕೋನದಿಂದ, ಅನ್ಯಧರ್ಮಗಳ ಕುರಿತು ಕಡಿಮೆ ಹೇಳಿದಷ್ಟು ಉತ್ತಮ. ನಮ್ಮ ಧರ್ಮಗಳು ಶಾಶ್ವತ ಬಿಗಿದ ತುಟಿಗಳ ರಕ್ಷಣೆಯಲ್ಲಿ, ಹೃದಯಾಂತರಾಳದ ಸುಪ್ತ ವರ್ತುಲಗಳಲ್ಲಿ ಸಂಪೂರ್ಣ ಅದೃಶ್ಯವಾಗಿಯೂ ಅತಿ ರಹಸ್ಯವಾಗಿಯೂ ಉಳಿದಿರಲಿ!
ಈ ಸಮಸ್ಯೆಯ ಇನ್ನೊಂದು ಮುಖವಿದೆ. ಮಾನವನು ಸಂಘ ಜೀವಿ. ನಾವು ಇಷ್ಟಪಟ್ಟರೂ ಇಲ್ಲದಿದ್ದರೂ ನಮ್ಮ ಜೀವನವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇತರರೊಂದಿಗೆ ಸಂಬಂಧ ಹೊಂದಿದೆ. ನಮಗೆ ಆಹಾರ ನೀಡುವ ಮಣ್ಣು ಒಂದೇ. ನಾವು ಕುಡಿಯುವ ನೀರಿನ ಒರತೆಯೂ ಒಂದೇ. ಆದ್ದರಿಂದ ನಮ್ಮ ಚಿಂತನೆಗಳನ್ನು ಭದ್ರವಾಗಿ ಹಿಡಿದುಕೊಂಡೇ ನಮ್ಮ ಪರಿಸರಗಳೊಂದಿಗೆ ಸಾಮರಸ್ಯದಿಂದಿರಲು, ನಮ್ಮ ನೆರೆಹೊರೆಯವರ ಮನೋಭಾವನೆ ಮತ್ತು ಅವರ ಕರ್ಮಸ್ಫೂರ್ತಿಯೇನೆಂಬುದನ್ನು ಒಂದು ಮಿತಿಯ ತನಕ ತಿಳಿಯಲೆತ್ನಿಸುವುದರಿಂದ ಪ್ರಯೋಜನವಾಗಬಹುದು. ಈ ದೃಷ್ಟಿಕೋನದಿಂದ ಲೋಕದ ಎಲ್ಲ ಧರ್ಮಗಳನ್ನು ಅರಿತುಕೊಳ್ಳುವ ಸದುದ್ದೇಶ ಪೂರ್ವಕವಾದ ಯತ್ನವು ತೀರಾ ಅಪೇಕ್ಷಣೀಯವಾಗಿದೆ. ಧರ್ಮಗಳಲ್ಲಿ ಪರಸ್ಪರ ತಿಳುವಳಿಕೆ ಮೂಡಿಸಲು, ಸಂಬಂಧವಿರುವ ಅಥವಾ ಅಗಲಿದ ಸಹಜೀವಿಗಳನ್ನು ಸರಿಯಾಗಿ ಗ್ರಹಿಸಲು ಅದು ಸಹಾಯಕವಾಗಬಹುದು.
ಪ್ರತ್ಯಕ್ಷದಲ್ಲಿ ತೋರುವಂತೆ ನಮ್ಮ ಚಿಂತನೆಗಳು ಅಷ್ಟೊಂದು ಶಿಥಿಲವಾಗಿಲ್ಲ. ಭೂತಕಾಲದ ಲಕ್ಷೋಪಲಕ್ಷ ಹೃದಯಗಳಿಗೆ ಕರ್ತವ್ಯ, ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವ ಸಚೇತನ ಮತದರ್ಶನ ಮತ್ತು ವಿಶ್ವಾಸ ಸಿದ್ಧಾಂತಗಳ ಕೇಂದ್ರ ಬಿಂದುವಿನಲ್ಲಿ ಅವು ಏಕೀಕೃತವಾಗಿವೆ. ನಾವು ಜೀವಿಸುವ ಈ ಲೋಕದ ಪ್ರಜೆಯಾಗಬೇಕೆಂಬ ಹಂಬಲ ನಮಗಿದ್ದರೆ ಮಾನವ ಜೀವನದ ಮೇಲೆ ಪ್ರಭಾವ ಬೀರಿದ ತತ್ವ ಸಿದ್ಧಾಂತ ಮತ್ತು ಧರ್ಮದರ್ಶನಗಳನ್ನು ತಿಳಿಯುವ ಚಿಕ್ಕ ಪ್ರಯತ್ನ ಮಾಡಲೇಬೇಕು.
ಪ್ರವಾದಿವರ್ಯರ ಐತಿಹಾಸಿಕ ವ್ಯಕ್ತಿತ್ವ
ನನ್ನ ಈ ಅಭಿಪ್ರಾಯವು ಸೂಕ್ತವೇ ಆಗಿದ್ದರೂ ಈ ಸಮಸ್ಯೆಯ ಇನ್ನೊಂದು ಮುಖವಿದೆ. ಧರ್ಮಗಳ ಈ ರಂಗವು ವಿವೇಕ ಮತ್ತು ಭಾವನೆಗಳ ಪರಸ್ಪರ ಸಂಫರ್ಷದ ನಿಮಿತ್ತ ದೃಢವಾಗಿ ನಿಲ್ಲಲಸಾಧ್ಯವಾದ ಒಂದು ಪರ್ವವನ್ನು ತಲುಪಿದೆ. ಆದ್ದರಿಂದ ಅಲ್ಲಿ ಪ್ರವೇಶಿಸುವವನು ದೇವಚರರು ಹೋಗದಂತಹ ಸ್ಥಳಗಳಿಗೆ ಓಡಿಹೋಗುವ ಮೂರ್ಖರನ್ನು ನೆನಪಿಗೆ ತರುತ್ತಾನೆ. ಆದರೆ, ಇನ್ನೊಂದು ದೃಷ್ಟಿಯಲ್ಲಿ ನನ್ನ ಕೆಲಸವು ಸುಗಮವಾಗಿದೆ. ಏಕೆಂದರೆ ನಾನು ಒಂದು ಐತಿಹಾಸಿಕ ಧರ್ಮದ ಮೂಲ ತತ್ವಗಳನ್ನು ಮತ್ತು ಅದರ ಮಹಾನ್ ಪ್ರವಾದಿಯ ಕುರಿತಾಗಿ ಬರೆಯಲು ಹೊರಟಿದ್ದೇನೆ. ಇಸ್ಲಾಮಿನ ಕಟು ವಿಮರ್ಶಕನಾದ ವಿಲಿಯಮ್ ಮೂರ್ ನಿಗೂ ಕೂಡಾ ಕುರ್‍ಆನಿನ ಕುರಿತು, “ಹನ್ನೆರಡು ಶತಮಾನಗಳಿಂದ ಯಾವುದೇ ಕಲಬೆರಕೆಯಿಲ್ಲದೇ ಉಳಿದ ಬೇರೆ ಗ್ರಂಥ ಲೋಕದಲ್ಲಿಲ್ಲ”ವೆಂದು ಹೇಳಬೇಕಾಯಿತು. ಜೀವನದ ಎಲ್ಲಾ ಫಟನೆಗಳೂ ಕ್ಷುಲ್ಲಕ ವಿವರಣೆಗಳೂ ಭದ್ರ ಮತ್ತು ಕೂಲಂಕಷವಾಗಿ ಉಲ್ಲೇಖಿಸಲ್ಪಟ್ಟ ಇತಿಹಾಸ ಪುರುಷರೇ ಪ್ರವಾದಿ ಮುಹಮ್ಮದ್ ಎಂಬುದನ್ನು ಅದರ ಅನುಬಂಧವಾಗಿ ನಾನು ಸೇರಿಸುತ್ತೇನೆ. ಅವರ ಜೀವನ ಮತ್ತು ಚರಿತ್ರೆಯು ಸುವ್ಯಕ್ತವಾಗಿದೆ. ಸತ್ಯವನ್ನು ತಿಳಿಯಲು ನಾವು ವೃಥಾ ಪೇಚಾಡಬೇಕಾಗಿಲ್ಲ.
ತಪ್ಪು ಕಲ್ಪನೆಗಳು
ನನ್ನ ಈ ಕೆಲಸವನ್ನು ಸುಲಭಗೊಳಿಸುವ ಇನ್ನೊಂದು ವಿಷಯವೂ ಇದೆ. ರಾಜಕೀಯ ಹಾಗೂ ಇನ್ನಿತರ ಕಾರಣಗಳಿಂದ ಇಸ್ಲಾಮನ್ನು ಪ್ರಜ್ಞಾಪೂರ್ವಕ ವಕ್ರಗೊಳಿಸಿ ತೋರಿಸುವ ಟೀಕಾಕಾರರ ಕಾಲವು ಮುಗಿಯುತ್ತಾ ಬಂದಿದೆ. ‘ಕೇಂಬ್ರಿಜ್ ಮಿಡಿವಲ್ ಹಿಸ್ಟರಿ’ ಎಂಬ ಗ್ರಂಥದಲ್ಲಿ ಪ್ರೊ| ಬೀವನ್ ಹೀಗೆ ಹೇಳಿದ್ದಾರೆ: “ಹತ್ತೊಂಬತ್ತನೆಯ ಶತಮಾನದ ಆರಂಭಕ್ಕಿಂತ ಮೊದಲು ಇಸ್ಲಾಮ್ ಮತ್ತು ಮುಹಮ್ಮದ್‍ರ ಕುರಿತು ಯುರೋಪ್‍ನಲ್ಲಿ ಪ್ರಕಾಶನಗೊಂಡ ಗ್ರಂಥಗಳು ಇಂದು ಕೇವಲ ಸಾಹಿತ್ಯ ವೈಚಿತ್ರ್ಯಗಳಾಗಿ ಪರಿಗಣಿಸಲ್ಪಡುತ್ತವೆ.” ಅಂತಹ ಗ್ರಂಥಗಳನ್ನು ನಾವು ಇಂದು ಅವಲಂಬಿಸಬೇಕಾಗಿಲ್ಲ. ಆದ್ದರಿಂದ ಇಸ್ಲಾಮ್‍ನ ಕುರಿತಾದ ತಪ್ಪುಕಲ್ಪನೆಗಳನ್ನು ಪುನರುಚ್ಚರಿಸಿ ಕಾಲಹರಣ ಮಾಡಬೇಕಾಗಿಲ್ಲ.
ಉದಾಹರಣೆಗಾಗಿ ‘ಇಸ್ಲಾಮ್ ಮತ್ತು ಖಡ್ಗ’ ಎಂಬ ಸಿದ್ಧಾಂತವು ಯಾವುದೇ ಪ್ರಸ್ತಾವನೀಯ ಮೂಲಗಳಿಂದ ಕೇಳಿ ಬರುವುದಿಲ್ಲ. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ವೆಂಬ ಇಸ್ಲಾಮಿನ ತತ್ವವು ಈಗ ಸರ್ವವಿದಿತ. ಖ್ಯಾತ ಇತಿಹಾಸಗಾರನಾದ ಗಿಬ್ಬನ್‍ರ ಮಾತುಗಳಲ್ಲಿ ಹೇಳುವುದಾದರೆ, “ಇತರ ಎಲ್ಲಾ ಮತಗಳನ್ನು ಖಡ್ಗದಿಂದ ನಿರ್ಮೂಲನಗೊಳಿಸಲು ಬದ್ಧರಾದವರೆಂಬ ಒಂದು ಆರೋಪವು ಮುಸ್ಲಿಮರ ಮೇಲಿದೆ. ಇದು ಅಜ್ಞಾನ ಮತ್ತು ಮತೀಯ ಪಕ್ಷಪಾತಗಳಿಂದ ಜನ್ಮತಾಳಿದುದಾಗಿದೆ. ಕುರ್‍ಆನ್ ಮತ್ತು ಮುಸ್ಲಿಮ್ ಯೋಧರ ಚರಿತ್ರೆಗಳೂ ಕ್ರೈಸ್ತ ದೇವಾಲಯಗಳೊಂದಿಗೆ ಅವರು ತೋರಿದ ನಿಸ್ವಾರ್ಥ ಹಾಗೂ ಕಾನೂನು ಬದ್ಧವಾದ ಸಹಿಷ್ಣುತೆಯೂ ಈ ಆರೋಪವನ್ನು ಬಲವಾಗಿ ಅಲ್ಲಗಳೆಯುತ್ತದೆ. ನೈತಿಕ ಶಕ್ತಿಯೇ ಮುಹಮ್ಮದ್‍ರ ಯಶಸ್ವೀ ಜೀವನದ ಅಡಿಗಲ್ಲಾಗಿತ್ತೇ ಹೊರತು ಖಡ್ಗ ಪ್ರಯೋಗವಲ್ಲ.
ಯುದ್ಧ ರಂಗದಲ್ಲಿ
ಒಂದು ಗೋತ್ರದ ಓರ್ವ ಅತಿಥಿಯ ಒಂಟೆಯು ಇನ್ನೊಂದು ಗೋತ್ರದ ಹುಲ್ಲುಗಾವಲಿಗೆ ಪ್ರವೇಶಿಸಿತೆಂಬ ಕ್ಷುಲ್ಲಕ ಕಾರಣಕ್ಕಾಗಿ 4ಂ ವರ್ಷ ಯುದ್ಧ ನಡೆಸಿ 7ಂ ಸಾವಿರ ಅಮೂಲ್ಯ ಮಾನವ ಜೀವಗಳನ್ನು ಕಗ್ಗೊಲೆಗೈದು ಎರಡೂ ಗೋತ್ರಗಳ ಅಸ್ತಿತ್ವಕ್ಕೆ ಬೆದರಿಕೆಯೊಡ್ಡುತ್ತಿದ್ದಂತಹ ಉಗ್ರರೂಪಿಗಳಾದ ಆ ಅರಬರಿಗೆ ಶಿಸ್ತು ಮತ್ತು ಆತ್ಮಸಂಯಮವನ್ನು ಕಲಿಸಿ, ಯುದ್ಧರಂಗದಲ್ಲಿ ಕೂಡಾ ಪ್ರಾರ್ಥಿಸುವವರನ್ನಾಗಿ ಇಸ್ಲಾಮಿನ ಪ್ರವಾದಿ ಬದಲಾಯಿಸಿದರು. ಶಾಂತಿ ಯತ್ನಗಳು ನಿರಂತರ ವಿಫಲಗೊಂಡಾಗ ಆತ್ಮರಕ್ಷಣೆಗಾಗಿ, ಪರಿಸ್ಥಿತಿಗಳು ಅವರನ್ನು ಯುದ್ಧ ರಂಗಕ್ಕೆ ಎಳೆದುವು. ಆದರೆ ಇಸ್ಲಾಮಿನ ಪ್ರವಾದಿಯು ಯುದ್ಧ ನೀತಿಗಳಲ್ಲಿ ಕ್ರಾಂತಿಕಾರೀ ಬದಲಾವಣೆಗಳನ್ನು ತಂದರು. ಅರೇಬಿಯಾದ ಪರ್ಯಾಯ ದ್ವೀಪವು ಸಂಪೂರ್ಣವಾಗಿ ಪ್ರವಾದಿಯ ಧ್ವಜದಡಿಗೆ ಬರುವವರೆಗಿನ ಜೀವನ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಮೃತಪಟ್ಟವರ ಸಂಖ್ಯೆ ಕೇವಲ ಸಾವಿರಕ್ಕೂ ಕಡಿಮೆ. ಯುದ್ಧ ರಂಗದಲ್ಲಿ ಕೂಡಾ ಪ್ರಾರ್ಥಿಸಲು ಅವರು ಅರಬರಿಗೆ ಕಲಿಸಿದರು- ಒಂಟಿಯಾಗಿಯಲ್ಲ, ಸಾಮೂಹಿಕವಾಗಿ ದೇವನನ್ನು ಪ್ರಾರ್ಥಿಸಲು! ಯುದ್ಧ ರಂಗದ ಧೂಳು ಮತ್ತು ಕಹಳೆಯ ಮಧ್ಯೆಯೂ ದಿನನಿತ್ಯದ ಐದು ಬಾರಿಯ ಕಡ್ಡಾಯ ಪ್ರಾರ್ಥನೆಯ ಸಮಯವಾದರೆ, ಯುದ್ಧ ರಂಗದಲ್ಲಿರುವ ಕಾರಣದಿಂದ ಅವುಗಳನ್ನು ಮುಂದೂಡುತ್ತಿರಲಿಲ್ಲ. ಒಂದು ತಂಡವು ಶತ್ರುಗಳನ್ನು ಎದುರಿಸುತ್ತಿರುವಾಗ ಇನ್ನೊಂದು ತಂಡವು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಬೇಕು. ಅವರು ಯುದ್ಧ ರಂಗಕ್ಕೆ ಮರಳಿದರೆ ಮೊದಲಿನ ತಂಡವು ಪ್ರಾರ್ಥನೆಗೆ ನಿಲ್ಲಬೇಕು.
ಅನಾಗರಿಕ ಮತ್ತು ಕ್ರೂರವಾದ ಒಂದು ಯುಗದಲ್ಲಿ ಯುದ್ಧ ರಂಗವನ್ನು ಕೂಡಾ ಮಾನವೀಯಗೊಳಿಸಿದರು. ವಂಚಿಸದೆ, ವಾಗ್ದಾನ ಉಲ್ಲಂಘಿಸದೆ, ವಿಕಲಾಂಗಗೊಳಿಸದೆ, ಮಕ್ಕಳನ್ನೂ ಮಹಿಳೆಯರನ್ನೂ ವಯೋವೃದ್ಧರನ್ನೂ ವಧಿಸದೆ, ಫಲವೃಕ್ಷಗಳನ್ನು ಕಡಿಯದೆ, ಆರಾಧನಾ ಮಗ್ನರಾದವರನ್ನು ಉಪದ್ರವಿಸದೆ ಇರಲು ಪ್ರವಾದಿಯವರು ಬಿಗಿ ನಿರ್ದೇಶನಗಳನ್ನು ನೀಡಿದರು. ತಮ್ಮ ಕಡು ವೈರಿಯೊಡನೆಯೂ ಅವರು ವ್ಯವಹರಿಸಿದ ರೀತಿಯು ಅನುಯಾಯಿಗಳಿಗೆ ಉತ್ತಮ ಮಾದರಿಯಾಗಿತ್ತು. ಮಕ್ಕಾ ವಿಜಯದಿಂದ ಪ್ರವಾದಿಯು ತಮ್ಮ ಅಧಿಕಾರ ಬಲದ ಉನ್ನತಿಗೆ ತಲಪಿದ್ದರು. ತಮ್ಮ ಸಂದೇಶದ ವಿರುದ್ಧ ಕಿವಿ ಮುಚ್ಚಿಕೊಂಡಂತಹ ಪಟ್ಟಣ, ತಮಗೂ ತಮ್ಮ ಅನುಯಾಯಿಗಳಿಗೂ ಚಿತ್ರಹಿಂಸೆ ನೀಡಿದಂತಹ ನಗರ, ತಮ್ಮನ್ನೂ ತಮ್ಮ ಅನುಯಾಯಿಗಳನ್ನೂ ದೇಶದಿಂದ ಹೊಡೆದಟ್ಟಿದಂತಹ ಜನರು, ಇನ್ನೂರು ಮೈಲುಗಳಾಚೆ ಅಭಯ ಪಡೆದಾಗಲೂ ತಮ್ಮನ್ನು ದ್ರೋಹಿಸಿದ ಮತ್ತು ಬಹಿಷ್ಕರಿಸಿದಂತಹ ವರ್ಗ. ಆದರೆ ಈಗ ಆ ನಗರ ಮತ್ತು ಜನತೆ ತಮ್ಮ ಕೈಕೆಳಗಿದ್ದಾರೆ! ತಾನು ಮತ್ತು ತನ್ನ ಅನುಯಾಯಿಗಳು ಅನುಭವಿಸಿದ ಯಾತನೆಗಳ ಸೇಡು ತೀರಿಸುವ ಸುವರ್ಣಾವಕಾಶ! ಆದರೆ ಮುಹಮ್ಮದ್‍ರ ಹೃದಯದಲ್ಲಿ ಹರಿಯುತ್ತಿದ್ದುದು ಕರುಣೆಯ ರಸ! ಅವರು ಹೀಗೆ ಘೋಷಿಸಿದರು, “ಈ ದಿನ ನಿಮ್ಮ ಮೇಲೆ ಯಾವ ದಂಡನೆಯನ್ನೂ ವಿಧಿಸಲಾಗುವುದಿಲ್ಲ, ಹೋಗಿ, ನೀವೆಲ್ಲರೂ ಸ್ವತಂತ್ರರಾಗಿರುವಿರಿ!”
ಮಾನವಕುಲವನ್ನು ಒಂದಾಗಿಸಲಿಕ್ಕಾಗಿ ಅವರು ಆತ್ಮರಕ್ಷಣೆಯ ಯುದ್ಧಕ್ಕೆ ಒಪ್ಪಿಗೆ ನೀಡಿದ್ದರು. ಈ ಧ್ಯೇಯವು ಸಾಧಿಸಲ್ಪಟ್ಟಾಗ ಅವರ ಕಡು ವೈರಿಗಳಿಗೂ ಕ್ಷಮೆ ನೀಡಿದರು. ತಮ್ಮ ಪ್ರೀತಿಯ ಚಿಕ್ಕಪ್ಪ ಹಮ್‍ಝಾರನ್ನು ವಧಿಸಿ, ದೇಹವನ್ನು ಸಿಗಿದು, ಕರುಳನ್ನು ಜಗಿದು ಉಗುಳಿದವರಿಗೂ ಕೂಡಾ!
ವಿಶ್ವಬಾಂಧವ್ಯ
ಪ್ರವಾದಿಗಳು ಬೋಧಿಸಿದ ವಿಶ್ವಬಾಂಧವ್ಯ ಮತ್ತು ಮಾನವ ಸಮಾನತೆಯ ಸಂದೇಶವು ಮಾನವ ಕುಲದ ಉದ್ಧಾರಕ್ಕೆ ಮುಹಮ್ಮದ್‍ರು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಲೋಕದ ಪ್ರಮುಖ ಧರ್ಮಗಳೆಲ್ಲವೂ ಈ ಸಂದೇಶವನ್ನು ಪ್ರತಿಪಾದಿಸಿದ್ದರೂ ಇಸ್ಲಾಮಿನ ಪ್ರವಾದಿಯು ಅದನ್ನು ಕಾರ್ಯರೂಪಕ್ಕೆ ತಂದರು. ಲೋಕ ಜನತೆಯ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಮೂಲಕ ವರ್ಗ- ವರ್ಣ ವ್ಯತ್ಯಾಸಗಳು ಅಳಿದು ಮಾನವ ಬಾಂಧವ್ಯ ಸ್ಥಾಪಿತವಾದರೆ ಮಾತ್ರ ವಿಶ್ವಬಾಂಧವ್ಯವೆಂಬ ತತ್ವದ ಯಥಾರ್ಥ ಮೌಲ್ಯಗಳನ್ನು ಲೋಕವು ಮೈಗೂಡಿಸಬಹುದು!
ಈ ವಾಸ್ತವದ ಕುರಿತು ಸರೋಜಿನಿ ನಾಯ್ಡುರವರು ಹೀಗೆ ಹೇಳಿದ್ದಾರೆ, “ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪ್ರಥಮ ಧರ್ಮವೇ ಇಸ್ಲಾಮ್. ಮಸೀದಿಯ ಮಿನಾರಗಳಲ್ಲಿ ಅದಾನ್ ಕರೆ ಮೊಳಗುವಾಗ ಭಕ್ತರು ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ರಾಜನೂ ಪ್ರಜೆಯೂ ಭುಜಕ್ಕೆ ಭುಜ ತಾಗಿಸಿ ‘ಅಲ್ಲಾಹ್ ಅತಿ ಶ್ರೇಷ್ಠನು’ ಎಂದು ಘೋಷಿಸುತ್ತಾ ಸಾಷ್ಟಾಂಗವೆರಗುವಾಗ ಇಸ್ಲಾಮಿನ ಪ್ರಜಾಸತ್ತೆಯು ರೂಪು ತಾಳುತ್ತದೆ.” ಮುಂದುವರಿಯುತ್ತಾ ಭಾರತದ ಆ ಪ್ರಸಿದ್ಧ ಕವಯತ್ರಿ ಹೀಗೆ ಬರೆದಿದ್ದಾರೆ: “ಓರ್ವ ಮನುಷ್ಯನನ್ನು ಜನ್ಮತಃ ಇನ್ನೊಬ್ಬ ಮನುಷ್ಯನ ಸಹೋದರನೆಂದು ಪರಿಗಣಿಸುವ ಇಸ್ಲಾಮ್‍ನ ಈ ಅಭೇದ್ಯವಾದ ಏಕತೆಯು ನನ್ನನ್ನು ಅನೇಕ ಬಾರಿ ಮಂತ್ರಮುಗ್ಧಗೊಳಿಸಿದೆ. ಈಜಿಪ್ಟ್, ಅಲ್ಜೀರಿಯಾ, ಭಾರತ ಮತ್ತು ಟರ್ಕಿಯ ವ್ಯಕ್ತಿಗಳು ಲಂಡನ್‍ನಲ್ಲಿ ಭೇಟಿಯಾದರೆ ಅವರಿಗೆ ಓರ್ವ ಭಾರತೀಯ ಇನ್ನೋರ್ವ ಈಜಿಪ್ಟ್ ನವನೆಂಬುದು ಒಂದು ಸಮಸ್ಯೆಯೇ ಆಗಿರುವುದಿಲ್ಲ.”
ಗಾಂಧೀಜಿಯವರು ತನ್ನ ಅಸಾಮಾನ್ಯ ಶೈಲಿಯಲ್ಲಿ ಹೇಳಿರುವುದನ್ನು ನೋಡಿರಿ: ಸ್ಪೆಯಿನ್‍ಗೆ ನಾಗರಿಕತೆಯನ್ನು ಕೊಡುಗೆಯಿತ್ತ, ಮೊರೊಕ್ಕೋದಲ್ಲಿ ಪ್ರಕಾಶದ ದೀಪ ಬೆಳಗಿದ, ಲೋಕಕ್ಕೆ ಸಹೋದರತೆಯ ಸುಸಂದೇಶವನ್ನು ದಯಪಾಲಿಸಿದ ಇಸ್ಲಾಮ್ ದಕ್ಷಿಣ ಆಫ್ರಿಕಾವನ್ನು ಪ್ರವೇಶಿಸುತ್ತಿರುವುದನ್ನು ಕಂಡು ಐರೋಪ್ಯರು ಭಯಪಡುತ್ತಿದ್ದಾರೆಂದು ಯಾರೋ ಹೇಳಿದರು. ದಕ್ಷಿಣ ಆಫ್ರಿಕನರು ಬಿಳಿಯರೊಂದಿಗೆ ಸಮಾನತೆಯನ್ನು ಕೇಳತೊಡಗುವರೆಂಬುದೇ ಅವರು ಇಸ್ಲಾಮಿನ ಆಗಮನದ ಬಗ್ಗೆ ಭಯಪಡುತ್ತಿರುವುದಕ್ಕೆ ಕಾರಣ. ಸಹೋದರತೆಯು ಒಂದು ಪಾಪವೆಂದಾದರೆ ಅವರು ಭಯಪಡಲೇಬೇಕು. ವರ್ಣಭೇದದ ವರ್ಗಗಳು ಪರಸ್ಪರ ಸಮಾನತೆಯನ್ನು ಘೋಷಿಸೀತೆಂಬುದೇ ಅವರ ಭೀತಿಯಾಗಿದ್ದರೆ ಅವರ ಭೀತಿಯು ನಿರಾಧಾರವಲ್ಲವೆಂಬುದೇ ನಿಜ.
ವರ್ಗ ಮತ್ತು ವರ್ಣ ವ್ಯತ್ಯಾಸಗಳನ್ನು ಉಚ್ಚಾಟಿಸಿದಾಗ ಇಸ್ಲಾಮಿನ ಅಂತಾರಾಷ್ಟ್ರೀಯ ಸಮ್ಮೇಳನದ ಅತ್ಯದ್ಭುತಕರ ನೋಟಕ್ಕೆ ಪ್ರತಿ ವರ್ಷ ಹಜ್ಜ್ ವೇಳೆಯಲ್ಲಿ ಲೋಕವು ಸಾಕ್ಷಿ ನಿಲ್ಲುತ್ತದೆ. ಯುರೋಪಿನ ಮಾತ್ರವಲ್ಲ ಆಫ್ರಿಕಾ, ಅರೇಬಿಯಾ, ಇರಾನ್, ಭಾರತ, ಚೀನಾ ಮೊದಲಾದ ವಿವಿಧ ದೇಶಗಳ ಜನರು ಒಂದು ದಿವ್ಯ ಮನೆತನದ ಸದಸ್ಯರಂತೆ ಒಂದುಗೂಡುತ್ತಾರೆ. ಎಲ್ಲರ ವಸ್ತ್ರಧಾರಣೆಯೂ ಒಂದೇ ರೀತಿ – ಬಿಳಿ ಬಣ್ಣದ ಎರಡು ತುಂಡು ಬಟ್ಟೆ. ಒಂದನ್ನು ಉಟ್ಟು ಇನ್ನೊಂದನ್ನು ಹೆಗಲಲ್ಲಿ ಹಾಕುವುದು. ನಗ್ನಶಿರರಾಗಿ ಅಹಂಕಾರ ಆಡಂಬರಗಳಿಲ್ಲದೆ, “ಅಲ್ಲಾಹನೇ ಅಪ್ಪಣೆ! ನೀನು ಏಕನಾಗಿರುವಿ, ನಾನಿದೋ ನಿನ್ನ ಕರೆಗೆ ಓಗೊಟ್ಟಿದ್ದೇನೆ” ಎಂದು ಪದೇಪದೇ ಉಚ್ಚರಿಸುತ್ತಾ ಆತ ಮುಂದೆ ಸಾಗುತ್ತಾನೆ. ಉಚ್ಚ ಮತ್ತು ನೀಚನೆಂದು ಪ್ರತ್ಯೇಕಿಸಿ ತಿಳಿಯುವ ಯಾವುದೇ ಭಿನ್ನತೆ ಅಲ್ಲಿಲ್ಲ. ಈ ರೀತಿ ಪ್ರತಿಯೊಬ್ಬ ಹಜ್ಜ್ ಯಾತ್ರಿಕನೂ ಇಸ್ಲಾಮಿನ ಸಾರ್ವಲೌಕಿಕ ಸಂದೇಶವನ್ನು ಮೈಗೂಡಿಸಿ ಮನೆಗೆ ಮರಳುತ್ತಾನೆ.
ಪ್ರೊಫೆಸರ್ ಹರ್ ಗ್ರೊಂಜ್(Prof Hurgronje)ರವರ ಅಭಿಪ್ರಾಯದಂತೆ ಇಸ್ಲಾಮಿನ ಪ್ರವಾದಿಯು ಸ್ಥಾಪಿಸಿದ ‘ಸರ್ವರಾಷ್ಟ್ರಗಳ ಐಕ್ಯಮಂಡಳಿ’ (League of Nations)ಯು ಇತರ ರಾಷ್ಟ್ರಗಳಿಗೆ ಮಾರ್ಗದರ್ಶಕವಾಗಬಲ್ಲ ರೀತಿಯಲ್ಲಿ ಜಾಗತಿಕ ಐಕ್ಯ ಮತ್ತು ಮಾನವೀಯ ಭ್ರಾತೃತ್ವದ ತತ್ವವನ್ನು ಅಂತಾರಾಷ್ಟ್ರೀಯ ಬುನಾದಿಯಲ್ಲಿಯೇ ಕಾರ್ಯಗತಗೊಳಿಸಿತು. ‘ಲೀಗ್ ಆಫ್ ನೇಶನ್ಸ್’ನ ಸಾಕ್ಷಾತ್ಕಾರದಲ್ಲಿ ಇಸ್ಲಾಮ್ ನೀಡಿದ ಕೊಡುಗೆಗೆ ಪರ್ಯಾಯವನ್ನು ಸೂಚಿಸಲು ಜಗತ್ತಿನ ಯಾವ ರಾಷ್ಟ್ರಕ್ಕೂ ಖಂಡಿತ ಸಾಧ್ಯವಿಲ್ಲ.
ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವವನ್ನು ಅದರ ಅತಿಶ್ರೇಷ್ಠ ರೂಪದಲ್ಲಿ ಪ್ರವಾದಿಯವರು ಕಾರ್ಯಗತಗೊಳಿಸಿದರು. ಖಲೀಫ ಉಮರ್, ಪ್ರವಾದಿಯ ಅಳಿಯನೂ ಆಗಿದ್ದ ಖಲೀಫ ಅಲೀ, ಖಲೀಫ ಮನ್ಸೂರ್, ಅಬ್ಬಾಸ್ ಬಿನ್ ಮಅïಮೂನ್ ಮೊದಲಾದ ಖಲೀಫರು ಮತ್ತು ರಾಜಂದಿರಿಗೂ ಇಸ್ಲಾವಿೂ ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಸಾಮಾನ್ಯ ಪ್ರಜೆಯಂತೆಯೇ ಹಾಜರಾಗಬೇಕಾಯಿತು. ನಾಗರಿಕ ಪ್ರಗತಿ ಸಾಧಿಸಿದ ಬಿಳಿ ವರ್ಣೀಯರು ನೀಗ್ರೋಗಳೊಂದಿಗೆ ಹೇಗೆ ವ್ಯವಹರಿಸುತ್ತಿದ್ದಾರೆಂದು ನಮಗೆ ತಿಳಿದಿದೆ. ಆದರೆ 14 ಶತಮಾನಗಳ ಹಿಂದೆ ಜೀವಿಸಿದ್ದ ‘ಬಿಲಾಲ್’ ಎಂಬ ನೀಗ್ರೋ ಗುಲಾಮನ ಸ್ಥಿತಿಯ ಬಗ್ಗೆ ಒಮ್ಮೆ ಯೋಚಿಸಿ ನೋಡಿರಿ: ಇಸ್ಲಾಮಿನ ಪ್ರಾರಂಭ ಕಾಲದಲ್ಲಿ ಅದಾನ್ ನೀಡುವ ಕೆಲಸವು ಬಹಳ ಗೌರವದ್ದೆಂದು ಪರಿಗಣಿಸಲಾಗಿತ್ತು. ಆ ಕೆಲಸವನ್ನು ಈ ಕರಿಯ ಗುಲಾಮನಿಗೆ ವಹಿಸಿ ಕೊಡಲಾಗಿತ್ತು. ಇಸ್ಲಾವಿೂ ಲೋಕದ ಅತ್ಯಂತ ಚಾರಿತ್ರಿಕ ಪ್ರಾಮುಖ್ಯತೆಯಿರುವ ಪವಿತ್ರ ಆರಾಧನಾಲಯವಾದ ಕಅಬಾದ ತುತ್ತ ತುದಿಯಲ್ಲಿ ಈ ನೀಗ್ರೋ ಗುಲಾಮನು ನಮಾಝ್‍ನ ಕರೆಗಾಗಿ ಹತ್ತಿ ನಿಂತಾಗ ಸ್ವಾಭಿಮಾನಿಗಳಾದ ಕೆಲವು ಅರಬರು ಹೀಗೆ ಹೇಳುತ್ತಿದ್ದರು, “ಓಹೋ! ಈ ಕರಿಯ ನೀಗ್ರೋ ಗುಲಾಮ ಹಾಳಾಗಿ ಹೋಗಲಿ! ಅವನು ಅದೋ ಆ ಪವಿತ್ರ ಕಅಬಾದ ಮೇಲ್ಭಾಗದಲ್ಲಿ ಹತ್ತಿ ನಿಂತಿದ್ದಾನೆ!”
ದರ್ಪ ಮತ್ತು ಮತ್ಸರದ ಈ ಆರ್ಭಟಕ್ಕೆ ಉತ್ತರವೋ ಎಂಬಂತೆ ಅವುಗಳ ಉಚ್ಚಾಟನೆಗಾಗಿ ನಿಯುಕ್ತರಾದ ಪ್ರವಾದಿಯವರು ಭಾಷಣವೊಂದರಲ್ಲಿ ಹೀಗೆಂದರು, “ಅಜ್ಞಾನ ಕಾಲದ ದರ್ಪ ಮತ್ತು ಅಹಂಕಾರಗಳನ್ನು ನಮ್ಮಿಂದ ತೊಲಗಿಸಿದ್ದಕ್ಕಾಗಿ ನಾವು ಅಲ್ಲಾಹನನ್ನು ಸ್ತುತಿಸಿ ಆತನಿಗೆ ಕೃತಜ್ಞತೆ ಸಲ್ಲಿಸಬೇಕು. ಓ ಜನರೇ! ಎಲ್ಲ ಮನುಷ್ಯರನ್ನು ಕೇವಲ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಅಲ್ಲಾಹನ ಗೌರವಕ್ಕೆ ಪಾತ್ರರಾಗುವ ದೇವಭಕ್ತ ಸಾತ್ವಿಕರು ಮತ್ತು ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟರಾದ ಧರ್ಮಭ್ರಷ್ಟರು ಹಾಗೂ ಕಠಿಣ ಹೃದಯಿಗಳು. ಅನ್ಯಥಾ ಎಲ್ಲರೂ ಆದಮರ ಸಂತತಿಗಳು. ಅಲ್ಲಾಹನು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದ್ದಾನೆ.”
ಈ ಮಾತುಗಳನ್ನು ಕುರ್‍ಆನ್ ಹೀಗೆ ದೃಢೀಕರಿಸಿದೆ:
“ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು.”(ಪವಿತ್ರ ಕುರ್‍ಆನ್, 49:13)
ಈ ಘೋಷಣೆಯು ಸೃಷ್ಟಿಸಿದ ಬದಲಾವಣೆಯಿಂದಾಗಿ ಶುದ್ಧ ಅರಬರು ಕೂಡಾ ತಮ್ಮ ಹೆಣ್ಮಕ್ಕಳನ್ನು ಈ ‘ಕರಿಯಮಣಿ’ಗಳಿಗೆ ವಿವಾಹ ಮಾಡಿಕೊಡುವಂತಹ ವಾತಾವರಣ ನಿರ್ಮಾಣವಾಯಿತು. ‘ಮಹಾನ್ ಉಮರ್’ ಎಂದು ಪ್ರಖ್ಯಾತರಾಗಿರುವ ದ್ವಿತೀಯ ಖಲೀಫ ಉಮರ್ ರವರು ಈ ನೀಗ್ರೋ ಗುಲಾಮನನ್ನು ಕಂಡಾಗ, “ನಮ್ಮ ಯಜಮಾನರು ಬಂದರು, ನಮ್ಮ ನಾಯಕರು ಬಂದರು” ಎಂದು ಹೇಳುತ್ತಾ ಗೌರವದಿಂದ ಸ್ವಾಗತಿಸುವುದು ರೂಢಿಯಾಗಿತ್ತು. ಅಂದು ಲೋಕದಲ್ಲಿ ಜೀವಿಸಿದ ಅತ್ಯಂತ ಅಹಂಕಾರಿಗಳಾದ ಅರಬರಲ್ಲಿ ಕುರ್‍ಆನ್ ಮೈಗೂಡಿಸಿದ ಮಹಾನ್ ಕ್ರಾಂತಿಯಿದು. ಈ ಕಾರಣಗಳಿಂದಲೇ ಕುರ್‍ಆನಿನ ಕುರಿತು ಜರ್ಮನ್ ಮಹಾಕವಿ ಗೋಯೆಥೆ (Goethe) ಈ ಗ್ರಂಥವು ಯುಗಯುಗಾಂತರಗಳಲ್ಲಿ ಪ್ರಬಲ ಪ್ರಭಾವ ಬೀರುವುದೆಂದು ಹೇಳಿದ್ದಾನೆ. “ಮುಂದಿನ ನೂರು ವರ್ಷಗಳೊಳಗೆ ಕೇವಲ ಇಂಗ್ಲೇಂಡನ್ನಲ್ಲ, ಸಂಪೂರ್ಣ ಯುರೋಪನ್ನು ಯಾವುದಾದರೂ ಧರ್ಮಕ್ಕೆ ಆಳುವ ಶಕ್ತಿಯಿದ್ದರೆ ಅದು ಇಸ್ಲಾಮ್‍ಗೆ ಮಾತ್ರ” ಎಂಬುದಾಗಿ ಜಾರ್ಜ್ ಬರ್ನಾಡ್ ಶಾ ಹೇಳಿರುವುದರ ಕಾರಣವೂ ಇದುವೇ ಆಗಿದೆ.
ಸ್ತ್ರೀ ವಿಮೋಚನೆ
ಸ್ತ್ರೀ ಕುಲಕ್ಕೆ ಪುರುಷನ ದಾಸ್ಯದಿಂದ, ಇಸ್ಲಾಮಿನ ಈ ಪ್ರಜಾಧಿಪತ್ಯ ಸ್ಫೂರ್ತಿಯೇ ಮುಕ್ತಿ ನೀಡಿತು. ಚಾಲ್ರ್ಸ್ ಎಡ್ವರ್ಡ್ ಹೆಮಿಲ್ಟನ್‍ನ ಮಾತುಗಳನ್ನು ನೋಡಿರಿ, “ಮಾನವನು ಹುಟ್ಟಿನಿಂದಲೇ ಪಾಪ ಮುಕ್ತನೆಂದು ಇಸ್ಲಾಮ್ ಕಲಿಸುತ್ತದೆ. ಸ್ತ್ರೀ-ಪುರುಷರು ಒಂದೇ ಸಾರದಿಂದ ಜನಿಸಿದವರೆಂದೂ ಅವರು ಒಂದೇ ಆತ್ಮವನ್ನು ಮೈಗೂಡಿಸಿರುವವರೆಂದೂ ಅವರಿಗೆ ವೈಚಾರಿಕ, ಆಧ್ಯಾತ್ಮಿಕ ಮತ್ತು ನೈತಿಕ ರಂಗಗಳಲ್ಲಿ ಒಂದೇ ರೀತಿಯ ಸಾಮರ್ಥ್ಯ ನೀಡಲ್ಪಟ್ಟಿದೆಯೆಂದೂ ಇಸ್ಲಾಮ್ ಹೇಳುತ್ತದೆ.
ಖಡ್ಗ ಮತ್ತು ಬಿಲ್ಲು ಬಾಣಗಳನ್ನು ಪ್ರಯೋಗಿಸುವ ಸಾಮರ್ಥ್ಯವಿರುವವರಿಗೆ ಮಾತ್ರ ವಾರೀಸು ಹಕ್ಕನ್ನು ನೀಡುವುದು ಅರಬರ ಸಂಪ್ರದಾಯವಾಗಿತ್ತು. ಆದರೆ ದುರ್ಬಲ ವರ್ಗಗಳ ಸಂರಕ್ಷಣೆಗಾಗಿ ಇಸ್ಲಾಮ್ ಮುಂದೆ ಬಂದಾಗ ತಮ್ಮ ಮಾತಾಪಿತರ ಸಂಪತ್ತುಗಳಲ್ಲಿ ಸ್ತ್ರೀಯರಿಗೂ ಪಾಲು ದೊರೆಯಿತು. ಸೊತ್ತಿನ ವಾರೀಸುದಾರರಾಗುವ ಹಕ್ಕನ್ನು ಇಸ್ಲಾಮ್ ಸ್ತ್ರೀಯರಿಗೆ ನೀಡಿತು. ಆದರೆ ಪ್ರಜಾಪ್ರಭುತ್ವದ ತೊಟ್ಟಿಲೆಂದು ಪರಿಗಣಿಸಲ್ಪಟ್ಟಿರುವ ಇಂಗ್ಲೇಂಡ್‍ನಲ್ಲಿ ಸ್ತ್ರೀಯರಿಗೆ ಆ ಹಕ್ಕುಗಳು ದೊರೆಯಬೇಕಾದರೆ ಹನ್ನೆರಡು ಶತಮಾನಗಳೇ ಹಿಡಿಯಬೇಕಾಯಿತು. ವಿವಾಹಿತ ಮಹಿಳೆಯರ ಕಾಯಿದೆಯ (The Married Woman’s Act) ಮೂಲಕ ಆ ಹಕ್ಕು ಸ್ತ್ರೀಯರಿಗೆ 1881ರಲ್ಲಿ ದೊರೆಯಿತು. ಆದರೆ, “ಸ್ತ್ರೀಯರು ಮನುಷ್ಯ ಸಮಾಜದ ಅರ್ಧಾಂಗಿನಿಯರು. ಸ್ತ್ರೀಯರ ಹಕ್ಕುಗಳನ್ನು ಸಂರಕ್ಷಿಸಬೇಕು, ಸ್ತ್ರೀಯರಲ್ಲಿ ತಮ್ಮ ಹಕ್ಕುಗಳು ದೊರೆಯುತ್ತಿದೆಯೆಂಬ ಭರವಸೆ ಮೂಡಿಸಬೇಕು” ಎಂದು ಇಸ್ಲಾಮಿನ ಪ್ರವಾದಿಯು ಶತಮಾನಗಳ ಹಿಂದೆಯೇ ಘೋಷಿಸಿದ್ದರು.
ಸ್ವಭಾವ ಸುಧಾರಣೆ
ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳಿಗೆ ಇಸ್ಲಾಮ್‍ನೊಂದಿಗೆ ನೇರವಾದ ಸಂಬಂಧವಿಲ್ಲ. ಆದರೆ ಮಾನವನ ನಡವಳಿಕೆಯ ಮೇಲೆ ಪ್ರಭಾವ ಬೀರುವಂತಹ ವಿಷಯಗಳಲ್ಲಿ ಅದು ಕೆಲವು ಪ್ರಮುಖ ತತ್ವಗಳನ್ನು, ಆ ರಂಗಗಳಲ್ಲೂ ಆವಿಷ್ಕರಿಸಿದೆ. “ಆರ್ಥಿಕ ರಂಗದ ಧ್ರುವೀಕರಣದ ನಡುವೆ ಇಸ್ಲಾಮ್ ಸಮತೋಲನವನ್ನು ಉಳಿಸಿಕೊಳ್ಳುತ್ತದೆ. ನಾಗರಿಕತೆಯ ತಳಪಾಯವಾದ ಸ್ವಭಾವ ಸುಧಾರಣೆಗೆ ಅದು ಪ್ರಾಮುಖ್ಯತೆ ನೀಡುತ್ತದೆ” ಎಂದು ಪ್ರೊ| ಮೆಸ್ಸೀನನ್ (Prof. Messignon) ಅಭಿಪ್ರಾಯ ಪಡುತ್ತಾರೆ. ಆಸ್ತಿ ಹಕ್ಕುಗಳ ನಿಯಮ, ಝಕಾತ್‍ನ ವ್ಯವಸ್ಥೆ ಮೊದಲಾದವುಗಳನ್ನು ಸ್ಥಾಪಿಸಿ ಆರ್ಥಿಕ ರಂಗದ ಏಕಸ್ವಾಮ್ಯ, ಬಡ್ಡಿ, ಪೂರ್ವ ನಿಗದಿತ ಅಥವಾ ಅಕ್ರಮ ಮಾರ್ಗಗಳ ಮೂಲಕ ಗಳಿಸುವ ಆದಾಯ, ಅಕ್ರಮ ದಾಸ್ತಾನು, ಬೆಲೆ ಹೆಚ್ಚಳಕ್ಕಾಗಿ ಕೃತಕ ಅಭಾವ ನಿರ್ಮಿಸುವುದು ಇತ್ಯಾದಿ ಸಮಾಜ ವಿರೋಧಿ ಚಟುವಟಿಕೆಗಳನ್ನು ಕಾನೂನು ಬಾಹಿರವೆಂದು ಘೋಷಿಸಿ, ಪ್ರಸ್ತುತ ಗುರಿಯನ್ನು ಇಸ್ಲಾಮ್ ಸಾಧಿಸುತ್ತದೆ. ಜೂಜಾಟವನ್ನು ಅದು ತೀವ್ರವಾಗಿ ವಿರೋಧಿಸುತ್ತದೆ. ವಿದ್ಯಾಲಯ, ಆರಾಧನಾಲಯ, ಬಾವಿ ತೋಡುವುದು, ನಿರಾಶ್ರಿತರ ಮತ್ತು ಅನಾಥರ ಸಂರಕ್ಷಣೆ ಇತ್ಯಾದಿಗಳಿಗೆ ಸಹಾಯ ನೀಡುವುದನ್ನು ಮಹಾಪುಣ್ಯ ಕಾರ್ಯವೆಂದು ಅದು ಭಾವಿಸುತ್ತದೆ. ಇಸ್ಲಾಮ್‍ನ ಪ್ರವಾದಿಯ ಬೋಧನೆಗಳೇ ಅನಾಥಾಲಯಗಳ ಸ್ಥಾಪನೆಗೆ ಪ್ರೇರಕವೆಂದು ಗ್ರಹಿಸಲಾಗಿದೆ. ಓರ್ವ ಅನಾಥನಾಗಿ ಜನಿಸಿದ ಈ ಪ್ರವಾದಿಗೆ ಲೋಕದ ಎಲ್ಲ ಅನಾಥಾಲಯಗಳೂ ಋಣಿಯಾಗಿವೆ. ಕಾರ್ಲೈಲ್‍ನ ಮಾತುಗಳಲ್ಲಿ ಹೇಳುವುದಾದರೆ, “ಅದು ಪ್ರಕೃತಿಯ ಈ ಏಕಾಂತ ಸಂತಾನದ ಹೃದಯಾಂತರಾಳದಲ್ಲಿ ನೆಲೆಸಿದ್ದ ಜನ್ಮಸಿದ್ಧವಾದ ಮಾನವೀಯತೆ, ಸಹಾನುಭೂತಿ, ಕರುಣೆ ಹಾಗೂ ಸಮತಾಭಾವನೆಗಳ ಪ್ರಕಟನೆಯಾಗಿತ್ತು.”
ಮಾನದಂಡ
ಮಾನವನ ಮಹತ್ವವನ್ನು ಅಳೆಯಲು ಮೂರು ಮಾನದಂಡಗಳಿವೆಯೆಂದು ಓರ್ವ ಇತಿಹಾಸಕಾರನ ಅಭಿಪ್ರಾಯ-
1. ಸಮಕಾಲೀನರು ಆತನನ್ನು ಸದ್ಗುಣ ಸಂಪನ್ನನೆಂದು ಭಾವಿಸಿದ್ದರೇ?
2. ತಾನು ಜೀವಿಸಿದ ಕಾಲಫಟ್ಟದ ಪ್ರಭಾವಗಳಿಂದ ಉನ್ನತನಾಗಲು ಆತನಿಗೆ ಸಾಧ್ಯವಾಗಿತ್ತೇ?
3. ಲೋಕಕ್ಕೆ ಏನಾದರೂ ಶಾಶ್ವತ ಕೊಡುಗೆಯನ್ನು ನೀಡಿದ್ದಾರೆಯೇ? ಈ ಪಟ್ಟಿಯನ್ನು ಇನ್ನೂ ದೀರ್ಫಗೊಳಿಸಬಹುದು. ಆದರೆ, ಈ ಮೂರು ಪರೀಕ್ಷೆಗಳಲ್ಲಿಯೂ ಮುಹಮ್ಮದರು ಪ್ರಚಂಡ ವಿಜಯ ಗಳಿಸಿದ್ದರು. ಕೊನೆಯ ಎರಡು ಮಾನದಂಡಗಳ ಕುರಿತು ಅನೇಕ ಉದಾಹರಣೆಗಳನ್ನು ಈಗಾಗಲೇ ವಿವರಿಸಲಾಗಿದೆ.
ಸದ್ಗುಣ ಸಂಪನ್ನ
ಸಮಕಾಲೀನರು ಅವರನ್ನು ಸದ್ಗುಣ ಸಂಪನ್ನನೆಂದು ಪರಿಗಣಿಸಿದ್ದರೇ ಎಂಬುದು ಪ್ರಥಮ ಪ್ರಶ್ನೆ. ಪ್ರವಾದಿಯ ಉತ್ತಮ ಗುಣನಡತೆ, ನಿಷ್ಕಳಂಕ ಸತ್ಯಸಂಧತೆ, ಶುದ್ಧ ವ್ಯವಹಾರ, ಜೀವನದ ಎಲ್ಲ ರಂಗಗಳಲ್ಲಿಯೂ ಅವರು ತೋರಿದ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆಗಳನ್ನು ಸಮಕಾಲೀನ ಶತ್ರು ಮಿತ್ರಾದಿಗಳೆಲ್ಲರೂ ಒಪ್ಪಿರುವುದನ್ನು ಐತಿಹಾಸಿಕ ಉಲ್ಲೇಖಗಳಲ್ಲಿ ಕಾಣಬಹುದು. ಅವರ ಬೋಧನೆಯನ್ನು ಅಂಗೀಕರಿಸಿದ ಯಹೂದಿಗಳು ಕೂಡಾ ತಮ್ಮ ವೈಯಕ್ತಿಕವಾದ ವಿವಾದಗಳ ಪರಿಹಾರಕ್ಕೆ ಮಧ್ಯಸ್ಥಗಾರನಾಗಿ ಪ್ರವಾದಿಯನ್ನು ಅಂಗೀಕರಿಸುತ್ತಿದ್ದರು. ಇದು ಅವರ ಸರ್ವಸಮ್ಮತ ನಿಷ್ಪಕ್ಷತೆಗೆ ದೊರೆತ ಅಂಗೀಕಾರವಾಗಿತ್ತು. “ಓ ಮುಹಮ್ಮದ್! ನೀನು ಸುಳ್ಳುಗಾರನೆಂದು ನಾವು ಹೇಳುವುದಿಲ್ಲ. ಆದರೆ ನಿನಗೆ ಗ್ರಂಥ ಮತ್ತು ದಿವ್ಯ ಬೋಧನೆಯನ್ನು ನೀಡಿದವನನ್ನು ನಾವು ನಿರಾಕರಿಸುತ್ತೇವೆ” ಎಂದು ಅವಿಶ್ವಾಸಿಗಳು ಹೇಳುತ್ತಿದ್ದರು. ಪ್ರವಾದಿ ಮಾಟಬಾಧಿತರೆಂದು ಅವರು ಭಾವಿಸಿದರು. ಆದರೆ, ಹೊಸ ಪ್ರಕಾಶ ಧಾರೆಯೊಂದು ಮುಹಮ್ಮದರ ಮೂಲಕ ಉದಯಿಸುವುದನ್ನು ಸಜ್ಜನರು ಮನಗಂಡರು. ಅವರು ಆ ಪ್ರಕಾಶವನ್ನು ಸ್ವೀಕರಿಸಿದರು.
ಪ್ರವಾದಿಯ ಹತ್ತಿರದ ಸಂಬಂಧಿಕರು ಅವರಿಗೆ ದೊರೆತಿದ್ದ ದಿವ್ಯ ಬೋಧನೆಯ ವಾಸ್ತವಿಕಾಂಶವನ್ನು ತಿಳಿದಿದ್ದರು. ಆದರೂ ಅವರ ದೌತ್ಯದಲ್ಲಿ ವಿಶ್ವಾಸ ಹೊಂದಿರಲಿಲ್ಲವೆಂಬುದು ಪ್ರವಾದಿ ಚರಿತ್ರೆಯ ಗಮನಾರ್ಹ ಅಂಶವಾಗಿದೆ. ಅವರ ವೈಯಕ್ತಿಕ ಜೀವನವನ್ನು ಹತ್ತಿರದಿಂದ ತಿಳಿದಿದ್ದ ಕುಲೀನ ಹಾಗೂ ವಿವೇಕಶಾಲಿಗಳಾದ ಆ ಬಂಧು ಮಿತ್ರಾದಿಗಳು ಪ್ರವಾದಿಯ ಜೀವನದಲ್ಲಿ ವಂಚನೆ, ಅಸತ್ಯ, ಲೌಕಿಕ ಮೋಹ ಮತ್ತು ಅಪನಂಬಿಕೆಯ ಯಾವ ಕುರುಹನ್ನೂ ಕಂಡಿರಲಿಲ್ಲ. ಹಾಗೇನಾದರೂ ಅವರು ಕಂಡಿರುತ್ತಿದ್ದರೆ ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ಪುನರುತ್ಥಾನದ ಅವರ ನಿರೀಕ್ಷೆಯು ಬಾಡಿ ಮುದುಡಿ, ಆ ತತ್ವ ಸಿದ್ಧಾಂತ ಕ್ಷಣ ಮಾತ್ರದಲ್ಲಿ ನುಚ್ಚು ನೂರಾಗುತ್ತಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಅನುಯಾಯಿಗಳು ತಮ್ಮ ಜೀವನದ ನಿಯಂತ್ರಣವನ್ನು ಪ್ರವಾದಿಯ ಹಸ್ತಗಳಲ್ಲಿ ತಾವೇ ಅರ್ಪಿಸಿದ್ದರು. ಅವರಿಗಾಗಿ ಹಿಂಸೆ ಮತ್ತು ದೌರ್ಜನ್ಯಗಳನ್ನು ಸಹಿಸಿದರು. ಮರಣಕ್ಕೂ ಕಾರಣವಾದ ಬಹಿಷ್ಕಾರದ ಅವರ್ಣನೀಯ ಸಂಕಷ್ಟ ಮತ್ತು ಮನೋವ್ಯಥೆಯ ಸಂದರ್ಭದಲ್ಲಿಯೂ ಅವರು ಪ್ರವಾದಿಯವರನ್ನು ಆದರಿಸಿ ಗೌರವಿಸಿ ಅನುಸರಿಸುತ್ತಿದ್ದರು. ಇದು ಸತ್ಯವೆಂದಾದರೆ, ತಮ್ಮ ನಾಯಕನ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯನ್ನಾದರೂ ಕಂಡಿದ್ದರೆ, ಹೀಗಾಗಲು ಸಾಧ್ಯವಾಗಿತ್ತೇ?
ಅಚಲ ಪ್ರೇಮ
ಪ್ರಾರಂಭ ಕಾಲದ ವಿಶ್ವಾಸಿಗಳ ಚರಿತ್ರೆಯನ್ನು ಓದಿ ನೋಡಿರಿ. ನಿರಪರಾಧಿಗಳಾದ ಸ್ತ್ರೀ-ಪುರುಷರೊಡನೆ ಮೃಗೀಯವಾಗಿ ವರ್ತಿಸಿದ ಕ್ರಮವು ಎಂತಹ ಕಲ್ಲು ಹೃದಯವನ್ನೂ ಕರಗಿಸೀತು! ನಿರ್ದೋಷಿಯಾದ ಸುಮಯ್ಯಾ! ಬಾಣಗಳು ಆ ದೇಹವನ್ನು ಹರಿದೊಗೆಯಿತು! ಯಾಸಿರ್ ರ ಕಾಲುಗಳನ್ನು ಒಂಟೆಯ ಕಾಲುಗಳಿಗೆ ಕಟ್ಟಿ ವಿರುದ್ಧ ದಿಕ್ಕಿನಲ್ಲಿ ಎಳೆಯಲಾಗುತ್ತಿತ್ತು. ಖುಬೈಬ್ ಬಿನ್ ಅರತ್‍ರನ್ನು ಬೆಂಕಿಯ ಕೆಂಡದ ಮೇಲೆ ಮಲಗಿಸಿ ಆ ದುರುಳರು ಹೊಟ್ಟೆಯ ಮೇಲೆ ನಿಂತರು. ಆ ಕೆಂಡದಲ್ಲಿ ದೇಹದ ಮಾಂಸವು ಸುಟ್ಟು ಕರಟಿತು! ಖಬ್ಬಾಬ್ ಬಿನ್ ಅದಿಯ್ಯ್ ರ ಅವಯವಗಳನ್ನು ಒಂದೊಂದಾಗಿ ಕಡಿದು, ಮಾಂಸವನ್ನು ಕತ್ತರಿಸಿ ತೆಗೆಯುತ್ತಾ ಅವರು ಸಂತಸಪಟ್ಟರು! ಆ ಚಿತ್ರಹಿಂಸೆಯ ಸಂದರ್ಭದಲ್ಲಿ ಅವರು ಹೀಗೆ ಪ್ರಶ್ನಿಸುತ್ತಿದ್ದರು, “ಮುಹಮ್ಮದರನ್ನು ನಿನ್ನ ಸ್ಥಾನದಲ್ಲಿ ನಿಲ್ಲಿಸಿ, ನಿನಗೆ ನಿನ್ನ ಮಕ್ಕಳು ಮರಿಗಳೊಂದಿಗೆ ಜೀವಿಸುವ ಅವಕಾಶ ನೀಡುವುದನ್ನು ನೀನು ಇಚ್ಛಿಸುವುದಿಲ್ಲವೇ?”
“ಮುಹಮ್ಮದರಿಗೆ ಒಂದು ಮುಳ್ಳು ತಾಗುವುದನ್ನು ತಡೆಯಲಿಕ್ಕಾಗಿ ನನ್ನನ್ನೂ ನನ್ನ ಹೆಂಡತಿ ಮಕ್ಕಳನ್ನೂ ಬಲಿಕೊಡುವುದೇ ನನಗೆ ಇಷ್ಟ” ಎಂಬುದೇ ಅವರ ಉತ್ತರವಾಗಿತ್ತು.
ಇಂತಹ ನೂರಾರು ಫಟನೆಗಳನ್ನು ಉದಾಹರಿಸಬಹುದು. ಇವೆಲ್ಲವೂ ಏನನ್ನು ಸಾಬೀತು ಪಡಿಸುತ್ತವೆ? ಇಸ್ಲಾಮಿನ ಈ ಸ್ತ್ರೀ-ಪುರುಷರು ಪ್ರವಾದಿಯವರ ಅನುಯಾಯಿಗಳಾದದ್ದು ಮಾತ್ರವಲ್ಲ ಶರೀರ, ಹೃದಯ ಮತ್ತು ಆತ್ಮಗಳನ್ನು ಏತಕ್ಕಾಗಿ ಅರ್ಪಿಸಿದರು? ಇಸ್ಲಾಮಿನ ಪ್ರಾರಂಭ ಕಾಲದ ಈ ಅನುಯಾಯಿಗಳ ವಿಶ್ವಾಸ ಮತ್ತು ದೃಢಚಿತ್ತತೆಯು ಮುಹಮ್ಮದರ ನಿಸ್ವಾರ್ಥತೆ ಮತ್ತು ಆತ್ಮ ಸಮರ್ಪಣೆಗಳ ನಿದರ್ಶನವಲ್ಲದೆ ಮತ್ತೇನು? ಆ ಜನರಾದರೋ ಸಮಾಜದ ಕೆಳ ವರ್ಗದ ಭೀರುಗಳಾಗಿರಲಿಲ್ಲ. ಮಕ್ಕಾದ ಅತಿ ಗಣ್ಯರಾದ ಉನ್ನತ ವ್ಯಕ್ತಿಗಳು ಪ್ರಾರಂಭದಿಂದಲೇ ಮುಹಮ್ಮದ್‍ರೊಂದಿಗೆ ಸೇರಿದ್ದರು. ಮಕ್ಕಾದ ಉನ್ನತ ಸ್ಥಾನಮಾನ ಹೊಂದಿದ್ದ, ಹಣ ಮತ್ತು ಹೆಸರು ಗಳಿಸಿದ್ದ ವ್ಯಕ್ತಿಗಳೇ ಅವರನ್ನು ಅನುಗಮಿಸಿದ್ದರು. ಪ್ರವಾದಿಯ ಕುರಿತು ಸಂಪೂರ್ಣವಾಗಿ ತಿಳಿದಿದ್ದ ಅವರ ಕುಟುಂಬದ ಸದಸ್ಯರು, ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಇಸ್ಲಾಮಿನ ಮೊದಲ ನಾಲ್ಕು ಖಲೀಫರು, ಈ ಪ್ರಾರಂಭ ಕಾಲದ ಮುಸ್ಲಿಮ್ ವ್ಯೂಹದಲ್ಲಿದ್ದರು.
“ಎಲ್ಲಾ ಪ್ರವಾದಿಗಳಲ್ಲಿ ಮತ್ತು ಧರ್ಮ ನೇತಾರರಲ್ಲಿ ಅತ್ಯಧಿಕ ವಿಜಯಶ್ರೀ ಒಲಿದ ಪ್ರವಾದಿಯೇ ಮುಹಮ್ಮದರು” ಎಂದು ಎನ್‍ಸೈಕ್ಲೋಪೀಡಿಯಾ ಬ್ರಿಟಾನಿಕಾ ಹೇಳುತ್ತದೆ. ಈ ವಿಜಯವು ಅನಿರೀಕ್ಷಿತವಾಗಿರಲಿಲ್ಲ. ಆಕಸ್ಮಿಕ ಲಾಭವೂ ಆಗಿರಲಿಲ್ಲ. ಸಮಕಾಲೀನರು ಅವರ ಸದ್ಗುಣ ಸಂಪನ್ನತೆಗೆ ನೀಡಿದ ಒಪ್ಪಿಗೆಯಾಗಿತ್ತು. ಅದು ಉಜ್ವಲ ಮತ್ತು ಆಕರ್ಷಕವಾದ ಆ ವ್ಯಕ್ತಿತ್ವದ ವಿಜಯವಾಗಿತ್ತು.
ಉಜ್ವಲ ಮಾದರಿ
ಮುಹಮ್ಮದ್‍ರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಗ್ರಹಿಸಲು ಕಷ್ಟಸಾಧ್ಯ. ಅದರ ಒಂದು ಸಣ್ಣ ಅಂಶವನ್ನಷ್ಟೇ ಗ್ರಹಿಸಲು ನನಗೆ ಸಾಧ್ಯವಾಗಿದೆ. ಎಂತಹ ಹೃದಯಂಗಮ ಬಹುಮುಖ ಪ್ರತಿಭೆ! ಎಂತಹ ಅನುಪಮ ರಂಗಗಳು! ಮುಹಮ್ಮದ್ ಎಂಬ ಪ್ರವಾದಿ, ಮುಹಮ್ಮದ್ ಎಂಬ ಆಡಳಿತಗಾರ, ಮುಹಮ್ಮದ್ ಎಂಬ ವ್ಯಾಪಾರಿ, ಮುಹಮ್ಮದ್ ಎಂಬ ಉಪದೇಶಕ, ಮುಹಮ್ಮದ್ ಎಂಬ ತತ್ವಜ್ಞಾನಿ, ಮುಹಮ್ಮದ್ ಎಂಬ ರಾಜಕಾರಣಿ, ಮುಹಮ್ಮದ್ ಎಂಬ ವಾಗ್ಮಿ, ಮುಹಮ್ಮದ್ ಎಂಬ ಸುಧಾರಕ, ಮುಹಮ್ಮದ್ ಎಂಬ ಅನಾಥ ಸಂರಕ್ಷಕ, ಮುಹಮ್ಮದ್ ಎಂಬ ಗುಲಾಮ ವಿಮೋಚಕ, ಮುಹಮ್ಮದ್ ಎಂಬ ಸ್ತ್ರೀ ವಿಮೋಚಕ, ಮುಹಮ್ಮದ್ ಎಂಬ ಕಾನೂನು ತಜ್ಞ, ಮುಹಮ್ಮದ್ ಎಂಬ ನ್ಯಾಯಾಧೀಶ, ಮುಹಮ್ಮದ್ ಎಂಬ ಪುಣ್ಯಾತ್ಮ, ಉಜ್ವಲವಾದ ಈ ಎಲ್ಲ ರೂಪಗಳಲ್ಲಿ ಮಾನವ ಜೀವನದ ಈ ಎಲ್ಲ ರಂಗಗಳಲ್ಲಿ ಅವರೋರ್ವ ಹೀರೋ ಆಗಿದ್ದರು.
ಅನಾಥ ಸ್ಥಿತಿಯು ಅಸಹಾಯಕತೆಯ ಪರಾಕಾಷ್ಠೆಯಾಗಿದೆ. ಅವರು ಜೀವನವನ್ನು ಅದರಿಂದಲೇ ಪ್ರಾರಂಭಿಸಿದರು. ರಾಜತನವು ಲೌಕಿಕತೆಯ ಶಿಖರ. ಆ ಜೀವನವು ಅಲ್ಲಿಯೇ ಕೊನೆಗೊಂಡಿತು. ಅನಾಥನಾಗಿ ಜೀವನವನ್ನು ಪ್ರಾರಂಭಿಸಿ, ಮರ್ದಿತ ನಿರಾಶ್ರಿತನಾಗಿದ್ದ ಮುಹಮ್ಮದ್‍ರು ಒಂದು ಜನತೆಯ ಲೋಕ ನಾಯಕ, ನೈತಿಕ ಗುರು ಮತ್ತು ಮಾರ್ಗದರ್ಶಕರಾಗಿ ಮಾರ್ಪಟ್ಟರು. ಆ ಜನತೆಯ ಸಂದಿಗ್ಧ ಫಟ್ಟಗಳಲ್ಲಿ, ಪಥಭ್ರಷ್ಟತೆಯಲ್ಲಿ, ಕತ್ತಲೆ ಬೆಳಕುಗಳಲ್ಲಿ, ಉನ್ನತಿ ಅವನತಿಗಳಲ್ಲಿ, ಭಯ ಮತ್ತು ನೆಮ್ಮದಿಗಳಲ್ಲಿ, ಅಗ್ನಿ ಪರೀಕ್ಷೆಗಳ ಮೂಲಕ ಜೀವಿಸಿದ ಆ ಪ್ರವಾದಿಯು ಜೀವನದ ಎಲ್ಲ ರಂಗಗಳಲ್ಲಿಯೂ ಉಜ್ವಲ ಮಾದರಿಯನ್ನು ತೋರಿಸಿದರು. ಅವರ ಸಾಧನೆ ಜೀವನದ ಯಾವುದೇ ಪ್ರತ್ಯೇಕ ರಂಗಕ್ಕೆ ಸೀಮಿತವಾಗಿಲ್ಲ. ಮಾನವ ಜೀವನದ ಎಲ್ಲ ಸ್ಥಿತ್ಯಂತರಗಳನ್ನೂ ಅದು ಹಾದು ಬಂದಿದೆ.
ಅತ್ಯಂತ ಶ್ರೇಷ್ಠ
ಅಜ್ಞಾನ ಮತ್ತು ಅನೈತಿಕತೆಯ ಅಗಾಧ ತಳದಲ್ಲಿ ಸಿಲುಕಿದ್ದ ಒಂದು ಜನತೆಯ ಸುಧಾರಣೆಯೇ ಶ್ರೇಷ್ಠತೆಯೆಂದಾದರೆ, ಅರಬರಂತಹ ಒಂದು ಜನತೆಯನ್ನು ಬದಲಾಯಿಸಿ, ಸುಧಾರಿಸಿ, ನಾಗರಿಕತೆ ಮತ್ತು ಜ್ಞಾನವಾಹಕ ಸಮುದಾಯವನ್ನಾಗಿ ಮಾರ್ಪಡಿಸಿದ ಮುಹಮ್ಮದರಿಗೆ ಆ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಹಕ್ಕಿದೆ. ಪರಸ್ಪರ ಕಾದಾಡಿ ಸಾಯುವಂತಹ ಒಂದು ಜನಸಮೂಹವನ್ನು ಸೌಹಾರ್ದ ಮತ್ತು ಸಹೋದರತೆಗಳ ಎಳೆಯಿಂದ ಜೋಡಿಸುವುದೇ ಶ್ರೇಷ್ಠತೆಯೆಂದಾದರೆ, ಮರುಭೂಮಿಯ ಆ ಪ್ರವಾದಿಗೆ ಆ ಅರ್ಹತೆಯಿದೆ. ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ಮುಳುಗಿದ್ದ ಒಂದು ಜನತೆಯನ್ನು ಸಂಸ್ಕರಿಸುವುದೇ ಶ್ರೇಷ್ಠತೆಯೆಂದಾದರೆ, ಲಕ್ಷಗಟ್ಟಲೆ ಜನರ ಹೃದಯಗಳಿಂದ ಅನಗತ್ಯ ಭೀತಿ ಮತ್ತು ಮೂಢನಂಬಿಕೆಗಳನ್ನು ಉಚ್ಚಾಟಿಸಿದ ಇಸ್ಲಾಮಿನ ಪ್ರವಾದಿಯು ಅದನ್ನು ಸಾಧಿಸಿದ್ದಾರೆ. ಉತ್ಕ್ರಷ್ಟ ನೈತಿಕ ಗುಣಗಳನ್ನು ಹೊಂದಿರುವುದೇ ಶ್ರೇಷ್ಠತೆಯೆಂದಾದರೆ, ಶತ್ರುಗಳೂ ಮಿತ್ರರೂ ಏಕಪ್ರಕಾರವಾಗಿ ಮುಹಮ್ಮದ್‍ರನ್ನು ‘ಅವಿೂನ್'(ಪ್ರಾಮಾಣಿಕ) ಮತ್ತು ‘ಸಾದಿಕ್’ (ಸತ್ಯಸಂಧ) ಎಂದು ಒಪ್ಪಿದ್ದರು. ಓರ್ವ ದಿಗ್ವಿಜಯಿಯೇ ಶ್ರೇಷ್ಠನೆಂದಾದರೆ, ಓರ್ವ ಅನಾಥ ಬಾಲಕನು ನಿರ್ಗತಿಯಲ್ಲಿ ಬೆಳೆದು ಅರೇಬಿಯಾದ ಆಡಳಿತಗಾರನಾಗಿ ಮೇಲೇರಿ, ಹದಿನಾಲ್ಕು ಶತಮಾನಗಳ ವರೆಗೂ ಉಳಿದು ಬಂದಿರುವ ಒಂದು ಸಾಮ್ರಾಜ್ಯ ವನ್ನು ಸ್ಥಾಪಿಸಿದ ಓರ್ವ ಮಾನವ ಪುರುಷನನ್ನು ಇಲ್ಲಿ ಕಾಣಬಹುದು. ಓರ್ವ ನಾಯಕನಿಗೆ ದೊರೆಯುವ ಗೌರವಾದರಗಳೇ ಶ್ರೇಷ್ಠತೆಯ ಮಾನದಂಡ ವೆಂದಾದರೆ, ಪ್ರವಾದಿಯ ನಾಮವು ಲೋಕದಾದ್ಯಂತ ವ್ಯಾಪಿಸಿರುವ ಜನಕೋಟಿಗಳ ಹೃದಯಗಳಲ್ಲಿ ಮಾಂತ್ರಿಕ ವರ್ಚಸ್ಸನ್ನು ಬೀರುತ್ತಿದೆ.!
ಅನಕ್ಷರಸ್ಥ
ಅವರು ಎಥೆನ್ಸ್, ರೋಮ್, ಪರ್ಶಿಯಾ, ಭಾರತ ಅಥವಾ ಚೀನಾದ ವಿದ್ಯಾಲಯಗಳಲ್ಲಿ ತತ್ವಶಾಸ್ತ್ರವನ್ನು ಕಲಿತಿರಲಿಲ್ಲ. ಆದರೂ ಸನಾತನ ಮೌಲ್ಯಗಳನ್ನೂ ಉದಾತ್ತ ಸತ್ಯಗಳನ್ನೂ ಮಾನವಕುಲಕ್ಕೆ ಬೋಧಿಸಲು ಅವರು ಶಕ್ತರಾಗಿದ್ದರು. ಅಕ್ಷರ ಜ್ಞಾನವಿಲ್ಲದಿದ್ದರೂ ನಿರರ್ಗಳವಾಗಿ ಭಾಷಣ ಮಾಡಿ, ನಯನಗಳು ತುಂಬುವಂತೆ ಭಾವಪರವಶಗೊಳಿಸಲೂ ಅವರಿಗೆ ಸಾಧ್ಯವಾಗಿತ್ತು. ಪ್ರೀತಿಯೇ ನೆಂದರಿಯದೆ ಅನಾಥವಾಗಿ ಬೆಳೆದಿದ್ದೂ ಎಲ್ಲರ ಸ್ನೇಹವನ್ನು ಸಂಪಾದಿಸಿದ್ದರು. ಯಾವುದೇ ಮಿಲಿಟರಿ ಅಕಾಡೆಮಿಯಲ್ಲಿ ಅವರು ತರಬೇತಿ ಹೊಂದಿರಲಿಲ್ಲ. ಆದರೆ ಅಸಂಖ್ಯಾತ ಶತ್ರು ಸೇನೆಯ ವಿರುದ್ಧ ಪಂಕ್ತಿಗಳನ್ನು ಭದ್ರಗೊಳಿಸಲು ಅವರಿಗೆ ಸಾಧ್ಯವಾಯಿತು. ನೈತಿಕ ಶಕ್ತಿಯ ಬೆಂಬಲದಿಂದ ಅವರು ವಿಜಯ ಗಳಿಸಿದರು.
ಅದ್ಭುತ ವಿಸ್ಮಯ
ಆಧ್ಯಾತ್ಮಿಕ ಬೋಧನೆಯ ಸಾಮರ್ಥ್ಯ ಅನುಗ್ರಹಿಸಲ್ಪಟ್ಟವರು ಅತೀ ವಿರಳ. ಓರ್ವ ನಿಷ್ಕಳಂಕ ಉದ್ಬೋಧಕನು ದೆಸ್‍ಕಾರ್ತೆಯ(Des Cartes) ಅಭಿಪ್ರಾಯದಂತೆ ಲೋಕದ ಅತ್ಯದ್ಭುತ ಜೀವಿ. ಇದೇ ಅಭಿಪ್ರಾಯವನ್ನು ಹಿಟ್ಲರ್ ಕೂಡಾ ತಳೆದಿದ್ದನು. “ಓರ್ವ ಉನ್ನತ ತತ್ವಜ್ಞಾನಿಯು ಅತ್ಯಪೂರ್ವವಾಗಿಯೇ ಶ್ರೇಷ್ಠ ನಾಯಕನಾಗಬಹುದು. ಓರ್ವ ಚಳವಳಿಗಾರನಲ್ಲಿ ಈ ಗುಣವು ಸಾಮಾನ್ಯವಾಗಿ ಅಧಿಕವಿರುವ ಸಾಧ್ಯತೆಯಿದೆ. ಏಕೆಂದರೆ ನಾಯಕತ್ವವೆಂದರೆ ಜನಸ್ತೋಮವನ್ನು ಸೆಳೆಯುವ ಕಲೆಯೆಂದರ್ಥ. ತತ್ವಗಳನ್ನು ರಚಿಸುವ ಪ್ರತಿಭೆ ಮತ್ತು ನಾಯಕತ್ವದ ಸಾಮರ್ಥ್ಯಕ್ಕೆ ಪರಸ್ಪರ ವಿಶೇಷ ಸಂಬಂಧವಿಲ್ಲ.” ಆದರೆ ಮುಂದುವರಿಯುತ್ತಾ ಹಿಟ್ಲರ್ ಹೇಳುತ್ತಾನೆ, “ತತ್ವಜ್ಞಾನಿ, ನಾಯಕ ಮತ್ತು ಸಂಚಾಲಕ ಎಂಬೀ ವಿಶೇಷ ಗುಣಗಳು ಒಬ್ಬನೇ ವ್ಯಕ್ತಿಯಲ್ಲಿ ಸಮ್ಮಿಳಿತವಾಗುವುದೆಂಬುದು ಈ ಭೂಮಿಯ ಅಪೂರ್ವ ಸೋಜಿಗಗಳಲ್ಲೊಂದು.” ಅದರಲ್ಲಿಯೇ ಶ್ರೇಷ್ಠತೆ ಅಡಗಿದೆ. ಭೂಮಿಯ ಈ ಅದ್ಭುತ ವಿಸ್ಮಯವು ಎರಡು ಕಾಲಿನಲ್ಲಿ ನಡೆಯುವುದನ್ನು ಲೋಕವು ಪ್ರವಾದಿಯಲ್ಲಿ ಕಂಡಿತು.
ರೆವರೆಂಡ್ ಬೋಸ್‍ವರ್ತ್ ಸ್ಮಿತ್‍ರ ಪ್ರತಿಕ್ರಿಯೆಯು ಇನ್ನಷ್ಟು ಗಮನಾರ್ಹವಾಗಿದೆ, “ರಾಷ್ಟ್ರನಾಯಕ ಮತ್ತು ಮಸೀದಿಯ ಇಮಾಮರಾಗಿದ್ದ ಪ್ರವಾದಿಯು ಏಕಕಾಲದಲ್ಲಿ ಪೋಪ್ ಮತ್ತು ಸೀಝರ್ ಆಗಿದ್ದರು. ಆದರೆ ಅವರು ಪೋಪ್‍ರಂತೆ ತೋರ್ಪಡಿಸದ ಪೋಪ್ ಆಗಿದ್ದರು. ಕಾಲಾಳು ಪಡೆ, ಅಂಗರಕ್ಷಕರು ಮತ್ತು ಅರಮನೆ ಹಾಗೂ ನಿರ್ದಿಷ್ಟ ಆದಾಯವಿಲ್ಲದ ಸೀಝರ್ ರಾಗಿದ್ದರು. ಯಥಾರ್ಥದಲ್ಲಿ ದಿವ್ಯಶಕ್ತಿಯಿಂದ ಆಡಳಿತ ನಡೆಸಿದೆನೆಂದು ಮನುಷ್ಯರಲ್ಲಿ ಯಾರಾದರೂ ವಾದಿಸಬಹುದಾದರೆ ಅದು ಕೇವಲ ಮುಹಮ್ಮದರಿಗೆ ಮಾತ್ರ ಸಾಧ್ಯ. ಏಕೆಂದರೆ ಅಧಿಕಾರ ಬಲದ ಸೌಲಭ್ಯ ಮತ್ತು ಅವುಗಳ ಬೆಂಬಲವಿಲ್ಲದೆಯೇ ಅವರು ಹೆಚ್ಚು ಪ್ರಾಬಲ್ಯ ಹೊಂದಿದ್ದರು. ಅಧಿಕಾರದ ಮೇರೆಯನ್ನು ಅವರು ಗಮನಿಸಲಿಲ್ಲ. ವೈಯಕ್ತಿಕ ಜೀವನದ ಸರಳತೆಯನ್ನು ಅವರು ಸಾರ್ವಜನಿಕ ಜೀವನದಲ್ಲಿಯೂ ಶಾಶ್ವತಗೊಳಿಸಿದರು.”
ಸರಳತೆ
ಮಕ್ಕಾ ವಿಜಯದ ಬಳಿಕ 1ಂ ಲಕ್ಷ ಚ. ಮೈಲು ವಿಸ್ತಾರವಾದ ಒಂದು ಭೂಭಾಗವು ಅವರ ಆಳ್ವಿಕೆಗೊಳಪಟ್ಟಿತು. ಆದರೆ ಅರೇಬಿಯಾದ ಆ ಅಧಿಪತಿ ತಮ್ಮ ಕೈಗಳಿಂದಲೇ ತಮ್ಮ ಚಪ್ಪಲಿ ಸರಿಪಡಿಸುತ್ತಿದ್ದರು, ಚರ್ಮದ ಅಂಗಿಯನ್ನು ಹೊಲಿಯುತ್ತಿದ್ದರು, ಹಾಲು ಕರೆಯುತ್ತಿದ್ದರು, ಒಲೆಯನ್ನು ಗುಡಿಸಿ ಶುಚಿಗೊಳಿಸುತ್ತಿದ್ದರು, ಬೆಂಕಿ ಉರಿಸುತ್ತಿದ್ದರು, ಅಡುಗೆ ಕೆಲಸದಲ್ಲಿ ಮನೆಯವರಿಗೆ ಸಹಾಯ ಮಾಡುತ್ತಿದ್ದರು. ಮದೀನಾ ಜೀವನದ ಅಂತಿಮ ಫಟ್ಟದಲ್ಲಿ ಆ ಪಟ್ಟಣವು ಸಮೃದ್ಧಿಯ ನೆಲೆವೀಡಾಗಿತ್ತು. ಬೆಳ್ಳಿ ಬಂಗಾರಗಳ ಹೊಳೆ ಹರಿಯಿತು. ಆದರೆ ಆ ಶ್ರೀಮಂತಿಕೆಯ ದಿನಗಳಲ್ಲಿಯೂ ‘ಅರೇಬಿಯಾದ ರಾಜನ’ ಒಲೆಯಲ್ಲಿ ಹೊಗೆಯಾಡದ ಅದೆಷ್ಟೋ ವಾರಗಳು ಸಂದು ಹೋಗಿವೆ. ಖರ್ಜೂರ ಮತ್ತು ನೀರು ಮಾತ್ರ ಅವರ ಆಹಾರವಾಗಿತ್ತು. ರಾತ್ರಿಯೂಟ ಮಾಡದೆ ಹಸಿವಿನಿಂದ ಆ ಕುಟುಂಬವು ನಿದ್ರಿಸಿದೆ. ಮಲಗಲು ಚಾಪೆಯನ್ನಲ್ಲದೆ ಹಾಸಿಗೆಯನ್ನು ಅವರು ಉಪಯೋಗಿಸಲಿಲ್ಲ. ಬಿಡುವಿಲ್ಲದ ಹಗಲುಗಳ ಬಳಿಕ ಬರುವ ರಾತ್ರಿಗಳನ್ನು ಪ್ರಾರ್ಥನೆಯಲ್ಲಿ ತಲ್ಲೀನರಾಗಿ ಕಳೆದರು. ತಮ್ಮ ಜವಾಬ್ದಾರಿಕೆಗಳನ್ನು ಸಮರ್ಥವಾಗಿ ನಿರ್ವಹಿಸಲು ಸ್ಥೈರ್ಯ ನೀಡಬೇಕೆಂದು ಸರ್ವಶಕ್ತನೊಡನೆ ಪ್ರಾರ್ಥಿಸುತ್ತಿದ್ದರು. ಬಿಕ್ಕಳಿಕೆಯ ನಿಮಿತ್ತ ಕಂಠ ಗದ್ಗದಿತವಾಗುತ್ತಿತ್ತು. ಸ್ವರವು ಕುದಿಯುವ ನೀರಿಗೆ ಸಮಾನವಾಗಿತ್ತು. ನಿಧನಗೊಂಡಾಗ ಕೆಲವು ಬಿಡಿ ನಾಣ್ಯಗಳೇ ಅವರ ಸಂಪತ್ತಾಗಿ ಉಳಿದಿತ್ತು. ಅದರಲ್ಲಿ ಒಂದಂಶವು ಸಾಲ ತೀರಿಸಲಿಕ್ಕಾಗಿರಿಸಿದ್ದಾಗಿತ್ತು. ಉಳಿದುದನ್ನು ದಾನ ಕೇಳಿದ ಓರ್ವ ನಿರ್ಗತಿಕನಿಗೆ ನೀಡಲಾಯಿತು! ಮರಣ ವೇಳೆಯಲ್ಲಿ ಅವರು ಧರಿಸಿದ ಉಡುಪು ಅನೇಕ ತೇಪೆಗಳಿಂದ ಕೂಡಿತ್ತು. ಲೋಕಕ್ಕೆ ಪ್ರಕಾಶ ಬೀರಿದ ಆ ಮನೆಯಲ್ಲಿ ಗಾಢಾಂಧಕಾರ ತುಂಬಿತ್ತು. ಏಕೆಂದರೆ ದೀಪ ಉರಿಸಲು ಎಣ್ಣೆಯಿರಲಿಲ್ಲ.
ಪರಿಸರ ಬದಲಾಯಿತು. ಆದರೆ ದೇವನ ಪ್ರವಾದಿ ಮಾತ್ರ ಬದಲಾಗಲಿಲ್ಲ. ಜಯಾಪಜಯಗಳಲ್ಲಿಯೂ ಅಧಿಕಾರದಲ್ಲಿದ್ದಾಗಲೂ ಅಧಿಕಾರವಿಲ್ಲದಾಗಲೂ ಕ್ಷಾಮದಲ್ಲಿಯೂ ಸಮೃದ್ಧಿಯಲ್ಲಿಯೂ ಅವರು ಒಂದೇ ತೆರನಾಗಿದ್ದರು. ಅವರ ಸ್ವಭಾವ ಒಂದೇ ತೆರನಾಗಿತ್ತು. ದೇವನ ಕಾನೂನುಗಳಂತೆ ದೇವನ ಪ್ರವಾದಿಗಳಲ್ಲಿಯೂ ಬದಲಾವಣೆಯಿರಬಾರದು.
ಮಹಾ ಪ್ರಾಮಾಣಿಕ
ಪ್ರಾಮಾಣಿಕನಾದ ಓರ್ವ ಮಾನವನು ದೇವನ ಅತ್ಯುತ್ಕ್ರಷ್ಟ ಸೃಷ್ಟಿ. ಮುಹಮ್ಮದ್ ಕೇವಲ ಪ್ರಾಮಾಣಿಕರಾಗಿರಲಿಲ್ಲ, ಅವರು ಅಡಿಯಿಂದ ಮುಡಿತನಕ ಮಾನವೀಯ ಅನುಕಂಪ ಉಳ್ಳವರಾಗಿದ್ದರು. ಸಹಜೀವಿಗಳ ಪ್ರೀತಿ ಮತ್ತು ಸಹಾನುಭೂತಿಗಳು ಅವರ ಹೃದಯದ ಸಂಗೀತವಾಗಿತ್ತು. ಮಾನವರ ಸೇವೆಗೈಯುವುದು, ಅವರನ್ನು ಉನ್ನತಗೊಳಿಸುವುದು, ಸಂಸ್ಕರಿಸುವುದು, ಅವರಿಗೆ ಜ್ಞಾನ ನೀಡುವುದು – ಒಂದೇ ಮಾತಿನಲ್ಲಿ ಹೇಳುವುದಾದರೆ, ಮನುಷ್ಯರನ್ನು ಮನುಷ್ಯರನ್ನಾಗಿ ಮಾಡುವುದು – ಇದು ಅವರ ಕಾರ್ಯಭಾರವಾಗಿತ್ತು. ಜೀವನದ ಸರ್ವಸ್ವವಾಗಿತ್ತು. ವಿಚಾರ, ಮಾತು ಮತ್ತು ಕೃತಿಗಳಲ್ಲಿ ಮಾನವಕುಲದ ಒಳಿತೇ ಅವರ ಏಕೈಕ ಗುರಿ! ಏಕೈಕ ಮಾರ್ಗದರ್ಶನ!
ನಿಸ್ವಾರ್ಥ
ಅವರು ಸಂಪೂರ್ಣ ನಿಸ್ವಾರ್ಥಿಗಳಾಗಿದ್ದರು. ಬಿರುದು ಹೆಗ್ಗಳಿಕೆಗಳನ್ನು ಅವರು ಇಚ್ಛಿಸಲಿಲ್ಲ. ಅವರು ಪ್ರತಿಪಾದಿಸಿದ ಬಿರುದು ಮತ್ತು ಸ್ಥಾನ ಯಾವುದು? ಕೇವಲ ದೇವನ ದಾಸ ಮತ್ತು ದೇವನ ಸಂದೇಶವಾಹಕನೆಂಬುದು. ಮೊದಲು ದೇವನ ದಾಸ, ಅನಂತರ ದೇವನ ಸಂದೇಶವಾಹಕ. ಲೋಕದ ವಿವಿಧೆಡೆಗಳಲ್ಲಿ ಆಗತರಾದ, ನಮಗೆ ಪರಿಚಿತ ಹಾಗೂ ಅಪರಿಚಿತರಾದ ದೇವ ಸಂದೇಶವಾಹಕರಂತೆ, ಪ್ರವಾದಿಗಳಂತೆ ಓರ್ವ ಪ್ರವಾದಿ. ಅವರ ಪೈಕಿ ಯಾರನ್ನಾದರೂ ಅಂಗೀಕರಿಸದಿದ್ದರೆ ಓರ್ವನು ಮುಸ್ಲಿಮನಾಗಿ ಉಳಿಯುವುದಿಲ್ಲ. ಅದು ಮುಸ್ಲಿಮರ ವಿಶ್ವಾಸದ ಒಂದಂಗ. ಓರ್ವ ಪಾಶ್ಚಾತ್ಯ ವಿದ್ವಾಂಸರು ಹೀಗೆ ಹೇಳಿದ್ದಾರೆ, “ಆ ಕಾಲದ ವಿಶೇಷ ಹಿನ್ನೆಲೆ ಹಾಗೂ ತಮ್ಮ ಅನುಯಾಯಿಗಳ ಅಪಾರ ಗೌರವಾದರಗಳಿಗೆ ಪಾತ್ರರಾಗಿದ್ದಾಗಲೂ ತಮಗೆ ಪವಾಡ ತೋರುವ ಸಾಮರ್ಥ್ಯವಿದೆಯೆಂದು ವಾದಿಸಲಿಲ್ಲವೆಂಬುದು ಮುಹಮ್ಮದರ ಮಟ್ಟಿಗೆ ಅಚ್ಚರಿದಾಯಕ ವಿಷಯವಾಗಿದೆ.” ಪವಾಡಗಳನ್ನು ತೋರಿಸಿದ್ದರೂ ಅದು ಪ್ರಚಾರಾರ್ಥವಾಗಿರಲಿಲ್ಲ. ಅದು ಸಂಪೂರ್ಣವಾಗಿ ದೇವಶಕ್ತಿಗೆ ಅಧೀನವೆಂದೂ ಮನುಷ್ಯ ಬುದ್ಧಿಗೆ ನಿಲುಕದ ವಿಷಯವೆಂದೂ ಅವರು ಹೇಳಿದ್ದರು. ತಾನು ಇತರರಂತೆ ಸಾಮಾನ್ಯ ಮನುಷ್ಯನೆಂದು ಹೇಳಲು ಅವರು ನಾಚಲಿಲ್ಲ. ಆಕಾಶ ಭೂಮಿಗಳಲ್ಲಿ ಅದೃಶ್ಯವಾಗಿರುವ ನಿಧಿಕುಂಭಗಳು ಅವರಿಗಿರಲಿಲ್ಲ. ಭವಿಷ್ಯದ ಸಂಗತಿಗಳು ಮತ್ತು ಗುಪ್ತ-ರಹಸ್ಯಗಳು ತಮಗೆ ತಿಳಿಯುತ್ತದೆಂದು ಅವರು ಪ್ರತಿಪಾದಿಸಲಿಲ್ಲ. ಪ್ರಕೃತಿಯ ಅಸಹಜ ಸೋಜಿಗಗಳನ್ನು ನಂಬುವ, ಓರ್ವ ಸಾಮಾನ್ಯ ಸಜ್ಜನನ ಜೀವನ ವ್ಯವಹಾರ ಮತ್ತು ದಿನನಿತ್ಯದ ಫಟನೆಗಳಲ್ಲಿ ಕೂಡಾ ಪವಾಡವಿದೆಯೆಂಬ ಭಾವನೆ ಅರೇಬಿಯಾ ಮತ್ತು ಪರಿಸರಗಳಲ್ಲಿ ಪ್ರಬಲವಾಗಿದ್ದ ಒಂದು ಕಾಲವಾಗಿತ್ತೆಂಬುದನ್ನು ನಾವು ಇಲ್ಲಿ ಜ್ಞಾಪಿಸಬಹುದಾಗಿದೆ.
ವೈಜ್ಞಾನಿಕ ಪ್ರೇರಣೆ
ಪ್ರಪಂಚ ಮತ್ತು ಪ್ರಾಪಂಚಿಕ ನಿಯಮಗಳ ಕುರಿತು ಕಲಿತು ತನ್ಮೂಲಕ ದೇವನ ಮಹಾತ್ಮೆಯನ್ನು ಗ್ರಹಿಸಲು ಅವರು ಅನುಯಾಯಿಗಳಿಗೆ ಬೋಧಿಸಿದರು. ಕುರ್‍ಆನ್ ಹೀಗೆ ಹೇಳುತ್ತದೆ, “ಆಕಾಶ ಭೂಮಿಗಳನ್ನೂ ಅವುಗಳ ಮಧ್ಯದಲ್ಲಿರುವುದನ್ನೂ ನಾವು ವೃಥಾ ಸೃಷ್ಟಿಸಲಿಲ್ಲ. ನಾವು ಅವುಗಳನ್ನು ಸತ್ಯಪೂರ್ಣವಾಗಿಯೇ ಸೃಷ್ಟಿಸಿದೆವು. ಆದರೆ ಹೆಚ್ಚಿನ ಜನರು ತಿಳಿಯುವುದಿಲ್ಲ.” ಪ್ರಪಂಚ ಮಿಥ್ಯೆ ಅಥವಾ ಮಾಯೆಯಲ್ಲ. ಉದ್ದೇಶರಹಿತವೂ ಅಲ್ಲ. ಅವು ಸತ್ಯಪೂರ್ಣವಾಗಿಯೇ ಸೃಷ್ಟಿಸಲ್ಪಟ್ಟಿವೆ. ಕುರ್‍ಆನಿನಲ್ಲಿ ಪ್ರಪಂಚವನ್ನು ಸಂಶೋಧಿಸಿ ಅರ್ಥ ಮಾಡಬೇಕೆಂಬ ಆಹ್ವಾನವಿರುವ ವಾಕ್ಯಗಳು, ಆರಾಧನೆ, ಉಪವಾಸ ವ್ರತ ಮತ್ತು ಹಜ್ಜ್ ಯಾತ್ರೆ ನಡೆಸುವಂತೆ ನಿರ್ದೇಶಿಸಿದ ಒಟ್ಟು ವಾಕ್ಯಗಳಿಗಿಂತ ಎಷ್ಟೋ ಅಧಿಕವಿದೆ. ಮುಸ್ಲಿಮರು ಪ್ರಪಂಚವನ್ನು ಸಂಶೋಧಿಸಿ ತಿಳಿದುಕೊಂಡರು. ಅದರಿಂದಾಗಿ ಗ್ರೀಕರಿಗೆ ಅಜ್ಞಾತವಾಗಿದ್ದ ವೈಜ್ಞಾನಿಕ ಪ್ರಯೋಗಗಳು ಮತ್ತು ಸಂಶೋಧನೆಗಳು ಜನ್ಮ ತಾಳಿದುವು. ಲೋಕದ ವಿವಿಧ ಭಾಗಗಳಿಂದ ಸಸ್ಯಗಳನ್ನು ಸಂಗ್ರಹಿಸಿ ಇಬ್ನು ಬೈತಾರ್ ಒಂದು ಸಸ್ಯಶಾಸ್ತ್ರ ಗ್ರಂಥವನ್ನು ಬರೆದರು. ಲೋಹ ಮಾದರಿಗಳನ್ನು ಸಂಗ್ರಹಿಸಲು ಅಲ್ ಬೈರೂನಿ 4ಂ ವರ್ಷ ನಿರಂತರ ಸಂಚರಿಸಿದರು. ಹನ್ನೆರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಮುಸ್ಲಿಮ್ ಖಗೋಳ ಶಾಸ್ತ್ರಜ್ಞರು ಆಕಾಶ ಸಂಶೋಧನೆ ನಡೆಸಿದರು. ಯಾವುದೇ ಸಂಶೋಧನೆಯನ್ನು ನಡೆಸದೆಯೇ ಅರಿಸ್ಟಾಟಲ್ ಭೌತಶಾಸ್ತ್ರದ ಕುರಿತು ಬರೆದನು. ಸಂಶೋಧಿಸಿ ದೃಢಪಡಿಸದೆ ಮಾನವನಿಗೆ ಪ್ರಾಣಿಗಳಿಗಿಂತಲೂ ಹೆಚ್ಚು ಹಲ್ಲುಗಳಿವೆಯೆಂಬ ಬೇಜವಾಬ್ದಾರಿ ಹೇಳಿಕೆಯನ್ನು ಅವನು ನೀಡಿದನು.
ವಿಜ್ಞಾನದ ಋಣ
ದೇಹಶಾಸ್ತ್ರದ ಜನಕನೆಂದು ಪರಿಗಣಿಸಲ್ಪಟ್ಟ ಗ್ಯಾಲನ್ ಕೆಳದವಡೆಗೆ ಎರಡು ಅಸ್ಥಿಗಳಿವೆಯೆಂದು ಹೇಳಿದನು. ಅಬ್ದುಲ್ಲತೀಫ್ ಎಂಬಾತ ಒಂದು ಮಾನವ ಅಸ್ಥಿಪಂಜರವನ್ನು ಸಂಶೋಧಿಸುವ ಸಾಹಸ ನಡೆಸುವ ತನಕ ಆ ಅಭಿಪ್ರಾಯ ಹಾಗೆಯೇ ಉಳಿಯಿತು. ಇಂತಹ ಅಸಂಖ್ಯಾತ ಉದಾಹರಣೆಗಳನ್ನು ತೋರಿಸಿಕೊಟ್ಟ ರಾಬರ್ಟ್ ಬ್ರಿಫಾಲ್ ತನ್ನ ‘ಮೇಕಿಂಗ್ ಆಫ್ ಹ್ಯೂಮೇನಿಟಿ’ (Making of Humanity) ಎಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ, “ನಮ್ಮ ವಿಜ್ಞಾನಕ್ಕೆ ಅರಬರೊಂದಿಗಿರುವ ಋಣವು ಅವರು ನಡೆಸಿದ ಅದ್ಭುತಕರ ಸಂಶೋಧನೆ ಅಥವಾ ಕ್ರಾಂತಿಕಾರೀ ತತ್ವಗಳೊಂದಿಗಲ್ಲ. ಅದಕ್ಕೆ ಬದಲಾಗಿ ಬಹುತೇಕ ಅರಬ್ ಸಂಸ್ಕ್ರತಿಯೊಂದಿಗಿದೆ. ವಿಜ್ಞಾನದ ಅಸ್ತಿತ್ವವೇ ಅದಕ್ಕೆ ಋಣಿಯಾಗಿದೆ.” ಅವರು ಮುಂದೆ ಹೀಗೆ ಹೇಳಿದ್ದಾರೆ, “ಗ್ರೀಕರು ತತ್ವಗಳನ್ನು ರೂಪಿಸಿ ಸಾಮಾನ್ಯ ನಿರ್ಧಾರಕ್ಕೆ ಬಂದು ಪದ್ಧತಿಗಳನ್ನು ರಚಿಸಿದರು. ಸಂಶೋಧನೆಯ ಸಂಯಮ ನೀತಿ, ರಚನಾತ್ಮಕ ಜ್ಞಾನ ಸಂಪಾದನೆ, ವೈಜ್ಞಾನಿಕವಾದ ಕೂಲಂಕಷ ಅಧ್ಯಯನ, ಸುದೀರ್ಫ ಹಾಗೂ ಗಹನವಾದ ಪರಿವೀಕ್ಷಣೆ, ಪ್ರಾಯೋಗಿಕ ಸಂಶೋಧನೆಯೇ ಮೊದಲಾದವುಗಳು ಗ್ರೀಕರಿಗೆ ಅಜ್ಞಾತವಾಗಿದ್ದುವು. ಗ್ರೀಕರಿಗೆ ಅಜ್ಞಾತವಾಗಿದ್ದ ಸಂಶೋಧನೆ, ನಿರೀಕ್ಷಣೆ, ಪ್ರಯೋಗ ಹಾಗೂ ಗಣಿತಶಾಸ್ತ್ರದ ಪ್ರಗತಿಯ ಪರಿಣಾಮವನ್ನು ನಾವಿಂದು ಯುರೋಪ್‍ನಲ್ಲಿ ವಿಜ್ಞಾನವೆಂದು ಕರೆಯುತ್ತಿದ್ದೇವೆ. ಆ ಸಂಶೋಧನಾ ಸ್ಫೂರ್ತಿ ಮತ್ತು ಪರೀಕ್ಷಾ ರೀತಿಗಳು ಐರೋಪ್ಯರಿಗೆ ಅರಬರಿಂದ ಪರಿಚಿತವಾದುವು.”
ಸಮಗ್ರ ಜೀವನ ಪದ್ಧತಿ
ಪ್ರವಾದಿಯ ಶಿಕ್ಷಣಗಳ ಈ ಪ್ರಾಯೋಗಿಕ ಸ್ವರೂಪವೇ ವೈಜ್ಞಾನಿಕ ಸ್ಫೂರ್ತಿಗೆ ಜನ್ಮ ನೀಡಿದೆ. ನಿತ್ಯ ಜೀವನದ ವ್ಯವಹಾರಗಳನ್ನೂ ಲೌಕಿಕ ಕಾರ್ಯಗಳೆಂದು ಕರೆಯಲ್ಪಡುವ ಕರ್ಮಗಳನ್ನೂ ಅದು ಪವಿತ್ರಗೊಳಿಸಿತು. ಆರಾಧನೆಯೇ ಮಾನವ ಜೀವನದ ಉದ್ದೇಶವೆಂದು ಕುರ್‍ಆನ್ ಹೇಳುತ್ತದೆ. ಆದರೆ ಆರಾಧನೆಯು ಕೇವಲ ಪ್ರಾರ್ಥನೆಗೇ ಸೀಮಿತವಲ್ಲ. ದೇವನ ಪ್ರೀತಿ ಮತ್ತು ಮಾನವ ಕ್ಷೇಮವನ್ನು ಗುರಿಯಾಗಿಟ್ಟು ಮಾಡುವ ಎಲ್ಲ ಕಾರ್ಯಗಳನ್ನೂ ಅದು ಒಳಗೊಂಡಿದೆ. ಪ್ರಾಮಾಣಿಕ, ನ್ಯಾಯೋಚಿತ ಹಾಗೂ ಸದುದ್ದೇಶದಿಂದ ಕೂಡಿದ ಎಲ್ಲ ಚಟುವಟಿಕೆಗಳನ್ನೂ ಇಸ್ಲಾಮ್ ಪವಿತ್ರವೆಂದು ಪರಿಗಣಿಸುತ್ತದೆ. ಧರ್ಮ ಮತ್ತು ಧರ್ಮೇತರವೆಂಬ ಪುರಾತನ ವ್ಯತ್ಯಾಸವನ್ನು ಇಸ್ಲಾಮ್ ಉಚ್ಚಾಟಿಸಿತು. ಶುದ್ಧ ಆಹಾರವನ್ನು ತಿಂದು ಅದಕ್ಕೆ ದೇವನಿಗೆ ಕೃತಜ್ಞತೆ ಸಲ್ಲಿಸಿದರೆ ಅದು ಕೂಡಾ ಒಂದು ಆರಾಧನೆಯೆಂದು ಕುರ್‍ಆನ್ ಕಲಿಸುತ್ತದೆ. ತನ್ನ ಮಡದಿಯ ಬಾಯಿಗೆ ಒಂದು ತುತ್ತು ಆಹಾರ ಹಾಕುವುದೂ ಪ್ರತಿಫಲಾರ್ಹವಾದ ಒಂದು ಪುಣ್ಯ ಕಾರ್ಯವೆಂದು ಪ್ರವಾದಿವರ್ಯರು ಹೇಳಿದ್ದಾರೆ, “ಓರ್ವನು ತನ್ನ ವಿಷಯಾಸಕ್ತಿಗಳನ್ನು ಈಡೇರಿಸುವುದು ದೇವನ ಅನುಗ್ರಹಕ್ಕೆ ಪಾತ್ರವಾಗುವ ವಿಷಯವಾಗಿದೆ. ಆದರೆ ಆತನು ಸ್ವೀಕರಿಸಿದ ಮಾರ್ಗವು ಧರ್ಮಸಮ್ಮತವಾಗಿರಬೇಕು” ಎಂದು ಪ್ರವಾದಿ ವಚನವೊಂದರಲ್ಲಿ ಹೇಳಿರುವುದನ್ನು ನೋಡಬಹುದು. ಆಗ ಓರ್ವ ಶ್ರೋತೃ ಅಚ್ಚರಿಯಿಂದ ಹೀಗೆ ಪ್ರಶ್ನಿಸಿದ, “ಸಂದೇಶವಾಹಕರೇ! ಆತನು ವಿಷಯಾಸಕ್ತಿಗಳನ್ನು ನೀಗಿಸುವುದೂ ಪುಣ್ಯಕಾರ್ಯವೇ?” ಅದಕ್ಕೆ, “ಆತನು ವಾಮ ಮಾರ್ಗವನ್ನು ಸ್ವೀಕರಿಸಿದ್ದರೆ ಆತನು ಶಿಕ್ಷಿಸಲ್ಪಡುವನು. ಆದ್ದರಿಂದ ಸರಿಯಾದ ಮಾರ್ಗವನ್ನು ಅವಲಂಬಿಸುವವರಿಗೆ ಪ್ರತಿಫಲ ದೊರೆಯಲೇ ಬೇಕಲ್ಲವೇ?” ಎಂದು ಪ್ರವಾದಿವರ್ಯರು ಪ್ರತ್ಯುತ್ತರ ನೀಡಿದರು.
ಈ ಹೊಸ ಮತದರ್ಶನವು ಧಾರ್ಮಿಕ ಮೌಲ್ಯಗಳಿಗೆ, ಪಾರಲೌಕಿಕ ವಿಷಯಗಳಿಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ಇಹಲೋಕ ಜೀವನದ ಸುಖಕ್ಕೂ ಗಮನ ಹರಿಸಬೇಕೆಂಬ ಹೊಸ ಆಯಾಮವನ್ನು ನೀಡಿತು. ಮಾನವ ಜೀವನದ ವ್ಯವಹಾರಗಳ ಪರಸ್ಪರ ಸಂಬಂಧಗಳಲ್ಲಿ ಅದು ಬೀರಿದ ಶಾಶ್ವತ ಪ್ರಭಾವ, ಜನಸಾಮಾನ್ಯರಲ್ಲಿ ಅದು ಬೆಳೆಸಿದ ಆತ್ಮವಿಶ್ವಾಸ, ತಮ್ಮ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆಗಳಲ್ಲಿ ಅದು ಮೂಡಿಸಿದ ಶಿಸ್ತು. ನಿರಕ್ಷರ ಕುಕ್ಷಿಯಾದ, ಅನಾಗರಿಕ ಅಥವಾ ವಿವೇಕಶಾಲಿಯಾದ ತತ್ವಜ್ಞಾನಿಯೆಂಬ ಭೇದವಿಲ್ಲದೇ ಎಲ್ಲರ ಜೀವನದಲ್ಲಿ ಅದರ ಅಗತ್ಯ ಮತ್ತು ಅರ್ಹತೆಗಳು ಪ್ರವಾದಿಯ ಬೋಧನೆಗಳ ವೈಶಿಷ್ಟ್ಯವಾಗಿದೆ.
ಸತ್ಯವಿಶ್ವಾಸ ಮತ್ತು ಸತ್ಕರ್ಮ
ಆದರೆ ಇಲ್ಲಿ ವಿಶ್ವಾಸವನ್ನು ಬಲಿ ನೀಡಿ ಸತ್ಕರ್ಮಗಳಿಗೆ ಪ್ರಾಮುಖ್ಯತೆ ನೀಡಿರುವುದಲ್ಲವೆಂಬುದು ಗಮನಾರ್ಹ. ಕ್ರಿಯಾತ್ಮಕ ಜೀವನವನ್ನು ಕಡೆಗಣಿಸಿ ವಿಶ್ವಾಸಕ್ಕೆ ಪ್ರಾಮುಖ್ಯತೆ ನೀಡುವ, ವಿಶ್ವಾಸಕ್ಕೆ ಪ್ರಾಮುಖ್ಯತೆ ನೀಡಿ ಕರ್ಮಗಳಿಗೆ ಪ್ರಾಮುಖ್ಯತೆ ನೀಡದ ಅನೇಕ ವಿಚಾರಧಾರೆಗಳಿವೆ. ಆದರೆ ಇಸ್ಲಾಮ್ ಧರ್ಮವು ದೃಢವಿಶ್ವಾಸ ಮತ್ತು ಸತ್ಕರ್ಮಗಳಲ್ಲಿ ಅಧಿಷ್ಠಿತವಾಗಿದೆ. ಗುರಿ ಮತ್ತು ಮಾರ್ಗಗಳಿಗೆ ಅದು ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ. ಅವು ಪರಸ್ಪರ ಸಂಬಂಧವಿರುವ ಅವಳಿಗಳಾಗಿವೆ. ಅವು ಒಂದಾಗಿ ಜೀವಿಸಿ ಒಂದಾಗಿ ಬೆಳೆಯುತ್ತವೆ. ಅವೆರಡನ್ನೂ ಬೇರ್ಪಡಿಸಿದರೆ ಅವು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಇಸ್ಲಾಮ್‍ನಲ್ಲಿ ವಿಶ್ವಾಸ ಮತ್ತು ಕರ್ಮಗಳನ್ನು ಬೇರ್ಪಡಿಸಲಸಾಧ್ಯ. ಸರಿಯಾದ ತಿಳುವಳಿಕೆಯು ಸತ್ಫಲವನ್ನು ಬೆಳೆಸುವ ಸತ್ಕರ್ಮಗಳಾಗಿ ಮಾರ್ಪಡಬೇಕು. ವಿಶ್ವಾಸ ಹೊಂದಿ ಸತ್ಕರ್ಮಗಳನ್ನು ಮಾಡುವವನಿಗೆ ಮಾತ್ರ ಸ್ವರ್ಗ ಲಭ್ಯವೆಂದು ಕುರ್‍ಆನ್ ಎಷ್ಟೋ ಬಾರಿ ಹೇಳಿಲ್ಲವೇ? ಸುಮಾರು 5ಂ ಕಡೆಗಳಲ್ಲಿ ಅದನ್ನು ಪುನರಾವರ್ತಿಸಲಾಗಿದೆ. ಧ್ಯಾನವನ್ನು ಪ್ರೋತ್ಸಾಹಿಸಲಾಗಿದೆ. ಆದರೆ ಕೇವಲ ಧ್ಯಾನವೇ ಧ್ಯೇಯವಲ್ಲ. ಕರ್ಮರಹಿತನಾದ ವಿಶ್ವಾಸಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ದುಷ್ಕರ್ಮಿಯಾದ ಓರ್ವ ವಿಶ್ವಾಸಿಯ ಕುರಿತು ಊಹಿಸಲಿಕ್ಕೂ ಸಾಧ್ಯವಿಲ್ಲ. ದೈವಿಕ ವ್ಯವಸ್ಥೆಯು ಒಂದು ಕರ್ಮ ಪದ್ಧತಿಯಾಗಿದೆಯೇ ಹೊರತು ಕೇವಲ ತತ್ವ ಸಂಹಿತೆಯಲ್ಲ. ಜ್ಞಾನದಿಂದ ಕರ್ಮದೆಡೆಗೆ, ಕರ್ಮದಿಂದ ಸಂತೃಪ್ತಿಯೆಡೆಗೆ ಸಾಗುವ ಉದಯೋನ್ಮುಖವಾದ ಒಂದು ಹಾದಿಯನ್ನು ಮಾನವನಿಗೆ ಅದು ತೋರಿಸಿಕೊಡುತ್ತದೆ.
ಸಂತೃಪ್ತಿಯ ಮೂಲ
ಆದರೆ ಸಂಪೂರ್ಣವಾದ ಆತ್ಮಸಂತೃಪ್ತಿಯೆಡೆಗೆ ಸ್ವಚ್ಛಂದವಾಗಿ ಸಾಗಿಸುವ ಕರ್ಮಗಳ ಸಾರ ಯಾವುದು? ಏಕದೇವವಾದವೇ ಆ ಸಾರ. ಕೇಂದ್ರ ಬಿಂದು. “ಅಲ್ಲಾಹನಲ್ಲದೆ ಬೇರೆ ಇಲಾಹ್(ಆರಾಧ್ಯ) ಇಲ್ಲ.” ಇಸ್ಲಾವಿೂ ಶಿಕ್ಷಣ ಮತ್ತು ಕರ್ಮವು ಈ ಅಕ್ಷದ ಸುತ್ತ ತಿರುಗುತ್ತಿದೆ. ಅಸ್ತಿತ್ವದಲ್ಲಿ ಮಾತ್ರವಲ್ಲ ಗುಣಗಳಲ್ಲಿಯೂ ಆತ ಅತುಲ್ಯನಾಗಿರುವನು. ದೇವನ ವಿಶಿಷ್ಟ ಗುಣಗಳ ವಿಷಯದಲ್ಲಿಯೂ ಇತರ ವಿಷಯಗಳಂತೆಯೇ ಇಸ್ಲಾಮ್ ಒಂದು ಮಧ್ಯಮ ಮಾರ್ಗವನ್ನು ಸ್ವೀಕರಿಸಿದೆ. ಒಂದೆಡೆ ದೇವನನ್ನು ನಿರ್ಗುಣನೆನ್ನುವುದನ್ನು ಅದು ನಿರಾಕರಿಸಿದರೆ, ಇನ್ನೊಂದೆಡೆ ಅವನಿಗೆ ಲೌಕಿಕ ವಸ್ತುವಿನೊಡನೆ ಹೋಲಿಕೆಯಿದೆಯೆಂಬ ವಾದವನ್ನೂ ಅದು ನಿರಾಕರಿಸುತ್ತದೆ. ಒಂದೆಡೆಯಲ್ಲಿ ದೇವನಿಗೆ ಸಮಾನವಾದುದು ಯಾವುದೂ ಇಲ್ಲವೆಂದು ಹೇಳುವಾಗ, ಇನ್ನೊಂದು ಅರ್ಥದಲ್ಲಿ ದೇವನು ನೋಡುವವನು, ಕೇಳುವವನು ಮತ್ತು ತಿಳಿಯುವವನೆಂದು ವಿವರಿಸುತ್ತದೆ. ಆತನು ಕುಂದು ಕೊರತೆಗಳು ಸೋಂಕದ ರಾಜ. ಆತನ ಅಧಿಕಾರ ನೌಕೆಯು, ನ್ಯಾಯ ಮತ್ತು ಸಮಾನತೆಗಳ ಸಾಗರದಲ್ಲಿ ಸಂಚರಿಸುತ್ತದೆ. ಆತನು ಪರಮ ದಯಾಮಯ ಮತ್ತು ಕರುಣಾಳುವಾಗಿರುವನು. ಅವನೇ ಎಲ್ಲರ ಸಂರಕ್ಷಕನು. ಇಷ್ಟು ಮಾತ್ರ ಹೇಳಿ ಇಸ್ಲಾಮ್ ಸುಮ್ಮನಿರುವುದಿಲ್ಲ. ಬದಲಾಗಿ ಅದು ಈ ಸಮಸ್ಯೆಯ ನಕಾರಾತ್ಮಕ ಅಂಶವನ್ನು ಮುಂದಿಡುತ್ತದೆ, ಇದುವೇ ಅದರ ವೈಶಿಷ್ಟ್ಯ. ಸಕಲ ವಸ್ತುಗಳ ಸಂರಕ್ಷಕನಾಗಿ ಇನ್ನಾರೂ ಇಲ್ಲ. ಎಲ್ಲ ದೌರ್ಬಲ್ಯಗಳನ್ನೂ ಆತ ಪರಿಹರಿಸುತ್ತಾನೆ, ಇತರ ಯಾರಿಗೂ ಅದು ಸಾಧ್ಯವಿಲ್ಲ. ಎಲ್ಲ ನಾಶಗಳಿಗೂ ಆತ ಪರಿಹಾರವನ್ನು ಕಾಣುತ್ತಾನೆ, ಇತರ ಯಾವ ಶಕ್ತಿಗೂ ಆ ಸಾಮರ್ಥ್ಯವಿಲ್ಲ. ದೇಹಗಳನ್ನು ರಚಿಸುವ, ಆತ್ಮಗಳನ್ನು ಸೃಷ್ಟಿಸುವ, ನಿರ್ಣಾಯಕ ದಿನದ ಅಧಿಪತಿಯಾದ, ಆ ದೇವನಲ್ಲದೆ ಇತರ ದೇವರಿಲ್ಲ. ಕುರ್‍ಆನಿನ ಭಾಷೆಯಲ್ಲಿ ಹೇಳುವುದಿದ್ದರೆ ಅತ್ಯುತ್ಕ್ರಷ್ಟ ಗುಣಗಳೆಲ್ಲವೂ ಅವನಿಗೆ ಮಾತ್ರ ವಿೂಸಲು.
ಜೀವನದ ತತ್ವಶಾಸ್ತ್ರ
ಪ್ರಪಂಚ ಮತ್ತು ಮನುಷ್ಯರ ಪರಸ್ಪರ ಸಂಬಂಧವೇನೆಂದು ಕುರ್‍ಆನ್ ವಿವರಿಸಿದೆ. ಆಕಾಶ-ಭೂಮಿಗಳಲ್ಲಿರುವ ಸಕಲವನ್ನೂ ದೇವನು ಮನುಷ್ಯನ ಉಪಯೋಗಕ್ಕಾಗಿ ಸಜ್ಜುಗೊಳಿಸಿದ್ದಾನೆ. ಅವುಗಳನ್ನು ಆಳುವುದೇ ಮಾನವನ ಕೆಲಸ. ಸುಂದರವಾದ ವಸ್ತುಗಳನ್ನು ದೇವನು ಮಾನವನಿಗೆ ನೀಡಿದ್ದಾನೆ. ಮನುಷ್ಯನನ್ನು ಪರೀಕ್ಷೆಗೆ ಗುರಿಪಡಿಸಲಿಕ್ಕಾಗಿ ಅವನು ಜೀವನ-ಮರಣಗಳನ್ನು ಸೃಷ್ಟಿಸಿದ್ದಾನೆ. ಯಾರು ಆ ವಸ್ತುಗಳನ್ನು ಉಪಯೋಗಿಸಿ ಸತ್ಕರ್ಮಗಳನ್ನು ಮಾಡುತ್ತಾರೆ, ಯಾರು ದುರ್ಮಾರ್ಗಿಗಳಾಗುತ್ತಾರೆ, ಎಂಬುದೇ ಆ ಪರೀಕ್ಷೆ.
ಕೆಲವು ಮೇರೆಗಳ ವರೆಗೆ ಮನುಷ್ಯನು ಸ್ವತಂತ್ರನಿದ್ದಾನೆ. ಆದರೆ ಕೆಲವು ನಿಯಂತ್ರಣಾತೀತವಾದ ಹಿನ್ನೆಲೆಯಲ್ಲಿ ಆತನ ಜನನ ಮತ್ತು ಜೀವನವಿದೆ. ಪ್ರತಿಯೊಬ್ಬ ಮನುಷ್ಯನನ್ನೂ ಅವನಿಗೆ ಉತ್ತಮವೆಂದು ದೇವನಿಗೆ ತೋರಿದ ಹಿನ್ನೆಲೆಯಲ್ಲಿ ಹುಟ್ಟಿಸುತ್ತಾನೆ. ಪ್ರಪಂಚ ಸೃಷ್ಟಿಯ ರಹಸ್ಯಗಳನ್ನು ನಶ್ವರ ಜೀವಿಗಳಿಗೆ ಸಂಪೂರ್ಣವಾಗಿ ಮೈಗೂಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಮನುಷ್ಯನನ್ನು ದೇವನು ಐಶ್ವರ್ಯ ಮತ್ತು ಬಡತನಗಳಲ್ಲಿ, ಆರೋಗ್ಯ ಮತ್ತು ಕಾಯಿಲೆಗಳಲ್ಲಿ, ಉನ್ನತಿ – ಅವನತಿಗಳಲ್ಲಿ ಪರೀಕ್ಷೆಗೆ ಗುರಿಪಡಿಸುತ್ತಾನೆ. ಅನೇಕರನ್ನು ಅನೇಕ ವಿಧಗಳಲ್ಲಿ ಪರೀಕ್ಷಿಸುತ್ತಾನೆ. ಅದು ವಿವಿಧ ಸಂದರ್ಭಗಳಲ್ಲಿ ವಿಭಿನ್ನ ರೀತಿಯಲ್ಲಿರುತ್ತದೆ. ಆದ್ದರಿಂದ ಸಂಕಷ್ಟಗಳ ಸಂದರ್ಭದಲ್ಲಿ ವಾಮ ಮಾರ್ಗಗಳನ್ನು ಅನುಸರಿಸಬಾರದು. ಅದು ಕೇವಲ ತಾತ್ಕಾಲಿಕವಾಗಿರಬಹುದು. ಸಂತುಷ್ಟಿಯ ಸಂದರ್ಭದಲ್ಲಿ ದೇವನನ್ನು ಮರೆಯಬಾರದು. ದೇವನ ಅನುಗ್ರಹಗಳು ವಿಶ್ವಸ್ಥನಿಧಿ(Trust) ಆಗಿವೆ. ಇಲ್ಲಿ ಜೀವನ ಮತ್ತು ಮರಣಗಳು ನಿಮಗೆ ವಿಧಿಸಲ್ಪಟ್ಟಿವೆ. ಜೀವನವು ದೇವನ ನಿಯಮಗಳಿಗೆ ಅನುಸಾರವಾಗಿರಲಿ, ಮರಣವೂ ದೇವನ ಮಾರ್ಗದಲ್ಲಿಯೇ ಆಗಿರಲಿ. ಇದನ್ನು ನೀವು ಬಹುಶಃ ವಿಧಿಯೆಂದು ಕರೆಯಬಹುದು. ಆದರೆ ಈ ರೀತಿಯ ವಿಧಿಯು ನೀವು ಪ್ರತಿಕ್ಷಣ ಜಾಗೃತವಿರಲಿಕ್ಕಾಗಿ ನಿಮ್ಮನ್ನು ಪ್ರೇರೇಪಿಸುವ ನಿರಂತರ ಮತ್ತು ಉಜ್ವಲ ಪ್ರಯತ್ನಗಳ ಒಂದು ಬೇಡಿಕೆಯಾಗಿದೆ.
ಈ ಲೌಕಿಕ ಜೀವನವು ಮಾನವನ ಅಸ್ತಿತ್ವದ ಅಂತ್ಯವೆಂದು ಭಾವಿಸಬಾರದು. ಶಾಶ್ವತವಾದ ಒಂದು ಜೀವನವು ಮರಣಾನಂತರ ಬರಲಿದೆ. ಮರಣವು ಅದೃಶ್ಯ ಜೀವನದ ವಾಸ್ತವಿಕಾಂಶಗಳ ದ್ವಾರವಾಗಿದೆ. ಜೀವನದ ಅತಿ ಕ್ಷುಲ್ಲಕ ಕರ್ಮಗಳಿಗೂ ಒಂದು ಶಾಶ್ವತ ಪರಿಣಾಮವಿದೆ. ಒಂದು ವಿಶಿಷ್ಟ ರೀತಿಯಲ್ಲಿ ಅದು ದಾಖಲಾಗುತ್ತದೆ. ದೇವನ ಕಾರ್ಯವಿಧಾನಗಳಲ್ಲಿ ಕೆಲವನ್ನು ಮಾತ್ರ ನಿಮಗೆ ತಿಳಿಯಲು ಸಾಧ್ಯ. ಆದರೆ ಅವುಗಳಲ್ಲಿ ಹೆಚ್ಚಿನವು ನಿಮಗೆ ಅಜ್ಞಾತವಾಗಿವೆ. ನಮ್ಮಲ್ಲಿ ಸುಪ್ತವಾಗಿರುವ ಹಾಗೂ ಈ ಲೋಕದಲ್ಲಿ ನಿಮಗೆ ಅಜ್ಞಾತವಾಗಿರುವ ಎಲ್ಲ ವಿಷಯಗಳೂ ಆ ಲೋಕದಲ್ಲಿ ನಿಮಗೆ ಗೋಚರಿಸುವುವು. ಸತ್ಕರ್ಮಿಗಳು ದೇವನ ಅನುಗ್ರಹಗಳನ್ನು ಅನುಭವಿಸುವರು. ಯಾವ ಕಣ್ಣೂ ಕಂಡಿರದ, ಯಾವ ಕಿವಿಯೂ ಕೇಳಿರದ, ಯಾವ ಊಹೆಗೂ ನಿಲುಕದ ಭೋಗ ವಸ್ತುಗಳು! ಅವರು ಉನ್ನತೋನ್ನತ ಪದವಿಗಳಿಗೆ ಏರುತ್ತಾ ಹೋಗುವರು. ಈ ಲೋಕದಲ್ಲಿ ಅವಕಾಶ ಕಳೆದುಕೊಂಡವನು ನಿಯಮದ ಅನಿವಾರ್ಯತೆಗೆ ಬಲಿಯಾಗುತ್ತಾನೆ. ತನ್ನ ಚಟುವಟಿಕೆಗಳ ಸವಿಯನ್ನು ಅದು ಅವನಿಗೆ ಉಣಿಸುತ್ತದೆ. ತನ್ನ ಕೈಗಳಿಂದಲೇ ಮಾಡಿದ ನೈತಿಕ ರೋಗಗಳ ಒಂದು ಚಿಕಿತ್ಸಾ ವಿಧಾನಕ್ಕೆ ಆತನು ಗುರಿಯಾಗುತ್ತಾನೆ. ಶಾರೀರಿಕ ಹಿಂಸೆಗಳು ಕೆಲವೊಮ್ಮೆ ಸಹ್ಯವಾಗಿರಬಹುದು. ನೈತಿಕ ಹಿಂಸೆಯು ನರಕ ಸಮಾನವಾಗಿದೆ. ಅದು ಅಸಹ್ಯವಾಗಿದೆ.
ಸಾರ್ಥಕತೆ ಮತ್ತು ಶಾಂತಿ
ಆದ್ದರಿಂದ, ಅಧರ್ಮದೆಡೆಗೊಯ್ಯುವ ದುಷ್ಟ ಪ್ರಚೋದನೆಗಳನ್ನು ಮೆಟ್ಟಿ ಸೋಲಿಸಬೇಕು. ಆ ಪ್ರತಿಭಟನೆಯ ಇನ್ನೊಂದು ಹೆಜ್ಜೆಯಾಗಿ ಅಪರಾಧ ಪ್ರಜ್ಞೆಯಿರುವ ಆತ್ಮಸಾಕ್ಷಿಯು, ನೈತಿಕ ಪ್ರಜ್ಞೆಯ ಉತ್ತುಂಗ ಸೋಪಾನಕ್ಕೇರಲು ಜಿಜ್ಞಾಸೆಯಿಂದ ಎಚ್ಚೆತ್ತು ಅಧರ್ಮದ ವಿರುದ್ಧ ಹೋರಾಟಕ್ಕೆ ಸಜ್ಜಾಗುವುದೂ ಖಚಿತ. ಅದು ಆತ್ಮೋನ್ನತಿಯ ಪರಾಕಾಷ್ಠೆಯಾದ ನೆಮ್ಮದಿಗೆ ಕೇವಲ ಜೀವನ ಸಂತೃಪ್ತಿ ಮತ್ತು ಸಂತೋಷವನ್ನು ಗಳಿಸುವ ಆತ್ಮಸಂತೃಪ್ತಿಯೆಡೆಗೆ ತಲಪಿಸುವುದು. ಅಲ್ಲಿಗೆ ಸಂಫರ್ಷದ ಘಟ್ಟವು ಕೊನೆಗೊಳ್ಳುವುದು. ಅನಂತರ ಆತ್ಮಕ್ಕೆ ಪತನವಿಲ್ಲ. ಸತ್ಯವು ಜಯ ಹೊಂದುವುದು. ಮಿಥ್ಯ ನಾಶವಾಗುವುದು. ಎಲ್ಲಾ ಕ್ಲಿಷ್ಟತೆಗಳೂ ಅದರೊಂದಿಗೆ ಪರಿಹಾರವಾಗುವುವು. ದೇವಹಿತಕ್ಕೆ ಸಂಪೂರ್ಣವಾಗಿ ಶರಣಾಗುವುದೆಂಬ ಕೇಂದ್ರ ಬಿಂದುವಿನಲ್ಲಿ ನಿಮ್ಮ ವ್ಯಕ್ತಿತ್ವದ ವಿಭಿನ್ನ ಭಾವನೆಗಳು ಒಂದುಗೂಡುತ್ತವೆ. ಅದುವೇ ಆತ್ಮವು ಶಾಂತಿಯನ್ನು ಪಡೆಯುವ ಸಂದರ್ಭ! ಆಗ ದೇವನು ನಿಮ್ಮನ್ನು ಅಭಿಸಂಬೋಧಿಸುತ್ತಾನೆ, “ಶಾಂತಿಯ ಆತ್ಮವೇ! ದೇವನು ನಿನ್ನನ್ನೂ ನೀನು ದೇವನನ್ನೂ ಮೆಚ್ಚಿದ ಸ್ಥಿತಿಯಲ್ಲಿ ನಿನ್ನ ಪ್ರಭುವಿನೆಡೆಗೆ ಮರಳು! ನನ್ನ ದಾಸರೊಂದಿಗೆ ನೀನು ಪ್ರವೇಶಿಸು. ನನ್ನ ಸ್ವರ್ಗ ಬೃಂದಾವನದಲ್ಲಿ ನೀನು ಪ್ರವೇಶಿಸು!” ಇದುವೇ ಮನುಷ್ಯನ ಅಂತಿಮ ಗುರಿ. ಒಂದೆಡೆ ಪ್ರಪಂಚದ ಕಾರ್ಯ ನಿರ್ವಾಹಕನಾಗಿರುತ್ತಾ ಇನ್ನೊಂದೆಡೆ ದೇವನು ಅವನನ್ನೂ ಅವನು ದೇವನನ್ನೂ ಮೆಚ್ಚಿದ ಹಿನ್ನೆಲೆಯಲ್ಲಿ ಅವನ ಆತ್ಮವು ದೇವನಲ್ಲಿ ನೆಮ್ಮದಿಯನ್ನು ಪಡೆಯುವುದೆಂಬುದೇ ಮಾನವ ಜೀವನದ ಪರಮ ಗುರಿ ಮತ್ತು ಸಾರ್ಥಕತೆ. ಸಂಪೂರ್ಣ ಸಾರ್ಥಕತೆ, ಸಂತೃಪ್ತಿ, ಶಾಂತಿ. ಸಂಪೂರ್ಣ ಶಾಂತಿ! ಈ ಸಂದರ್ಭದಲ್ಲಿ ದೇವನ ಪ್ರೀತಿಯೇ ಆತನ ಆಹಾರ, ಜೀವನದ ಜಲಧಾರೆಯೇ ಆತನ ಪಾನೀಯ! ದುಃಖ ಮತ್ತು ನಷ್ಟ ಪ್ರಜ್ಞೆಯು ಆತನನ್ನು ಸ್ಪರ್ಶಿಸಲಾರದು. ವಿಜಯವು ಆತನನ್ನು ಅಹಂಕಾರಿ ಅಥವಾ ಉನ್ಮತ್ತನನ್ನಾಗಿ ಮಾಡಲಾರದು.
ಈ ಜೀವನದ ತತ್ವಶಾಸ್ತ್ರದಿಂದ ಪ್ರಭಾವಿತರಾಗಿ ಥೋಮಸ್ ಕಾರ್ಲೈಲ್ ಹೀಗೆ ಬರೆದಿದ್ದಾರೆ, “ನಾವು ದೇವನಿಗೆ ಶರಣಾಗುವುದೆಂಬುದೇ ಇಸ್ಲಾಮ್. ಅಂದರೆ ದೇವನಿಗೆ ಶರಣಾಗುವುದರಲ್ಲಿಯೇ ನಮ್ಮ ಜೀವನದ ಸಂಪೂರ್ಣ ಶಕ್ತಿಯು ಅಡಗಿದೆ. ದೇವನು ನಮಗೆ ನೀಡುವುದೆಲ್ಲವೂ ಮಾಡುವುದೆಲ್ಲವೂ ಅದು ಮರಣವೇ ಆಗಿರಲಿ ಅಥವಾ ಅದಕ್ಕಿಂತ ಕೆಳಮಟ್ಟದ್ದಾಗಿರಲಿ ಅದುವೇ ಉತ್ತಮ ಮತ್ತು ಉತ್ಕ್ರಷ್ಟವಾದುದಾಗಿದೆ. ನಾವು ಸ್ವಯಂ ದೇವನಿಗೆ ಅರ್ಪಿತವಾಗಬೇಕು.” ಇದುವೇ ಇಸ್ಲಾಮ್ ಎಂದಾದರೆ ನಾವೆಲ್ಲರೂ ಇಸ್ಲಾಮ್‍ನಲ್ಲಿ ಜೀವಿಸುತ್ತಿರುವೆವಲ್ಲವೇ ಎಂದು ಗೊಯಥೆ ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಕಾರ್ಲೈಲ್ ಹೀಗೆ ಉತ್ತರಿಸಿದ್ದಾರೆ, “ಹೌದು, ನೈತಿಕ ಜೀವನ ಸಾಗಿಸುವ ಎಲ್ಲರಿಗೂ – ನಮಗೆಲ್ಲರಿಗೂ, ಇದುವೇ ಬಾಹ್ಯಲೋಕದಿಂದ ಭೂಮಿಗೆ ಅವತೀರ್ಣಗೊಂಡಿರುವುದರಲ್ಲಿ ಅತ್ಯುತ್ಕ್ರಷ್ಟವಾದ ಜ್ಞಾನವಾಗಿದೆ.”