Home / ಅಂತಿಮ ಪ್ರವಾದಿಯ(ಸ) ವಿದಾಯ ಭಾಷಣ

ಅಂತಿಮ ಪ್ರವಾದಿಯ(ಸ) ವಿದಾಯ ಭಾಷಣ

ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಆದ್ದರಿಂದ ನಾವು ಅವನನ್ನೇ ಸ್ತುತಿಸುತ್ತೇವೆ. ಅವನಲ್ಲೇ ಸಹಾಯ ಯಾಚಿಸುತ್ತೇವೆ. ಅವನಲ್ಲಿ ಪಶ್ಚಾತ್ತಾಪ ಪಡುತ್ತೇವೆ ಅವನತ್ತ ಮರಳುತ್ತೇವೆ. ನಾವು ನಮ್ಮ ಚಿತ್ತಗಳ ದುಷ್ಪ್ರೇರಣೆ ಹಾಗೂ ನಮ್ಮ ಕರ್ಮಗಳ ದುಷ್ಪರಿಣಾಮಗಳಿಂದ ಅಲ್ಲಾಹನ ಅಭಯ ಯಾಚಿಸುತ್ತೇವೆ. ಯಾರಿಗೆ ಅಲ್ಲಾಹನು ಸನ್ಮಾರ್ಗದರ್ಶನ ಮಾಡಿದನೋ ಅವನನ್ನು ಯಾರೂ ಪಥಭ್ರಷ್ಟಗೊಳಿಸಲಾರ. ಅಲ್ಲಾಹನು ಪಥಭ್ರಷ್ಟಗೊಳಿಸಿದವನಿಗೆ ಯಾರೂ ಸನ್ಮಾರ್ಗದರ್ಶನ ಮಾಡಲಾರ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲವೆಂದೂ ಅವನು ಏಕೈಕನೆಂದೂ ಅವನಿಗಾರೂ ಭಾಗೀದಾರರಿಲ್ಲವೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಮುಹಮ್ಮದ್(ಸ) ಅವನ ದಾಸನೆಂದೂ ಪ್ರವಾದಿಯೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಅಲ್ಲಾಹನದೇ ಪರಮಾಧಿಕಾರ. ಸ್ತುತಿಸ್ತೋತ್ರಗಳೆಲ್ಲವೂ ಅವನಿಗೇ ಮೀಸಲು. ಅವನೇ ಜೀವದಾನ ಮಾಡುತ್ತಾನೆ. ಅವನೇ ಸಾಯಿಸುತ್ತಾನೆ. ಅವನು ಸಕಲ ವಸ್ತುಗಳ ಮೇಲೆ ಸರ್ವಶಕ್ತಿಯುಳ್ಳವನಾಗಿದ್ದಾನೆ. ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ. ಅವನು ಏಕೈಕನು. ಅವನು ತನ್ನ ವಗ್ದಾನವನ್ನು ಪೂರೈಸಿದನು. ತನ್ನ ದಾಸನಿಗೆ ವಿಜಯ ದಯಪಾಲಿಸಿದನು. ಅವನೊಬ್ಬನೆ ಶತ್ರು ಸೈನ್ಯಗಳನ್ನು ಪರಾಜಿತಗೊಳಿಸಿದನು. ಅಲ್ಲಾಹನ ದಾಸರೇ, ಅವನ ದಾಸ್ಯ ಆರಾಧನೆ ಮಾಡಬೇಕೆಂದು ನಾನು ನಿಮಗೆ ಉಪದೇಶಿಸುತ್ತೇನೆ ಮತ್ತು ಅದಕ್ಕೆ ಪ್ರೇರೇಪಿಸುತ್ತೇನೆ.

ಜನರೇ, ನನ್ನ ಮಾತುಗಳನ್ನು ಚೆನ್ನಾಗಿ ಆಲಿಸಿರಿ. ಈ ವರ್ಷದ ಬಳಿಕ ನಾವು ಪರಸ್ಪರ ಇಲ್ಲಿ ಬೇಟಿಯಾಗುತ್ತೇವೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಮುಂದಿನ ವರ್ಷದ ಹಜ್ಜ್ ನಿರ್ವಹಿಸಲು ನಾನಿರುತ್ತೇನೋ ಇಲ್ಲವೋ ಎಂದೂ ನನಗೆ ತಿಳಿಯದು. ಜನರೇ, ಖಂಡಿತವಾಗಿಯೂ ಅಲ್ಲಾಹನು ಈ ರೀತಿ ಹೇಳಿರುವನು: ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲ ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಪಡುವಂತಾಗಲಿಕ್ಕಾಗಿದೆ. ಖಂಡಿತವಾಗಿಯು ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಧಿಕ ಭಯಭಕ್ತಿಯುಳ್ಳವನೇ ಅತ್ಯಂತ ಗೌರವಾರ್ಹನಾಗಿರುವನು. ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯ ಮೇಲೆ ಯಾವುದೇ ಮೇಲ್ಮೆ ಇಲ್ಲ. ಧರ್ಮನಿಷ್ಠೆ ಮತ್ತು ಧೇವಭಕ್ತಿಯ ಹೊರತು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು.

ತಿಳಿಯಿರಿ! ರಕ್ತ ಅಥವಾ ಸಂಪತ್ತಿನ ಆಧಾರದಲ್ಲಿರುವ ಎಲ್ಲ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು. ಕಅಬಾ ಭವನದ ಮೇಲ್ನೋಟ ಮತ್ತು ಹಜ್ಜ್ ಯಾತ್ರಿಕರಿಗೆ ಜಲಪಾನ ಮಾಡಿಸುವ ಕಾರ್ಯವು ಇದಕ್ಕೆ ಹೊರತಾಗಿದೆ. ಕುರೈಷ್ ಗೋತ್ರದವರೇ, (ನಿರ್ಣಾಯಕ ದಿನದಂದು ನಿಮ್ಮ ಪ್ರಭುವಿನ ಮುಂದೆ) ನಿಮ್ಮ ಕೊರಳ ಮೇಲೆ ಈ ಲೋಕದ ಭಾರವನ್ನು ಹೊತ್ತು ಹಾಜರಾಗದಿರಿ. ಇತರ ಜನರಾದರೋ ಅಂದು ಪರಲೋಕದ ಪುಣ್ಯಗಳನ್ನು ಹೊತ್ತು ಹಾಜರಾಗುವರು. ಅಂತಹ ಪರಿಸ್ಥಿತಿಯಲ್ಲಿ ಖಂಡಿತ ನಾನು ಅಲ್ಲಾಹನ ಮುಂದೆ ನಿಮಗೆ ನೆರವಾಗಲಾರೆ.

ತಿಳಿಯಿರಿ! ಅಜ್ಞಾನ ಕಾಲದ ಎಲ್ಲ ಸಂಪ್ರದಾಯಗಳು ನನ್ನ ಪಾದಗಳಡಿಯಲ್ಲಿವೆ. ಅಜ್ಞಾನ ಕಾಲದ ಎಲ್ಲ ಕೊಲೆಯ ಪ್ರತೀಕಾರಗಳನ್ನು ಅನೂರ್ಜಿತ ಗೊಳಿಸಲಾಗಿದೆ. ಆ ಪೈಕಿ ಮೊದಲ ಕೊಲೆಯ ಪ್ರತೀಕಾರವನ್ನು ಅನೂರ್ಜಿತಗೊಳಿಸಿರುವುದಾಗಿ ನಾನು ಘೋಷಿಸುತ್ತೇನೆ. ಅದು ‘ಸಅದ್’ ಗೋತ್ರಕ್ಕೆ ಸೇರಿದ ರಬೀಅ ಬಿನ್ ಹಾರಿಸ್‍ರ ಕೊಲೆಯ ಪ್ರತೀಕಾರವಾಗಿದೆ. ಅವರನ್ನು ಹುಝೈಲರು ಕೊಂದಿದ್ದರು. ಅಜ್ಞಾನ ಕಾಲದ ಎಲ್ಲ ಬಡ್ಡಿಗಳನ್ನು ಮನ್ನಾ ಮಾಡಲಾಗಿದೆ. ಆ ಪೈಕಿ ಮೊದಲನೆಯದಾಗಿ ನಾನು (ನನ್ನ ಪಿತೃ ಸಹೋದರ) ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ ಅವರಿಗೆ ಸಲ್ಲಬೇಕಾದ ಎಲ್ಲ ಬಡ್ಡಿಯನ್ನು ಮನ್ನಾ ಮಾಡಿರುವುದಾಗಿ ಘೋಷಿಸುತ್ತೇನೆ. ಖಂಡಿತವಾಗಿಯು ಅದು ಸಂಪೂರ್ಣ ಮನ್ನಾ ಆಯಿತು.

ಜನರೇ, ಖಂಡಿತವಾಗಿಯು ನಿಮ್ಮ ರಕ್ತ, ನಿಮ್ಮ ಸೊತ್ತು ಮತ್ತು ನಿಮ್ಮ ಮಾನವು ನೀವು ನಿಮ್ಮ ಪ್ರಭುವಿನ ಮುಂದೆ ಹಾಜರಾಗುವ ತನಕ ಪವಿತ್ರವೂ ಅನುಲ್ಲಂಘನೀಯವೂ ಆಗಿದೆ. ನಿಮ್ಮ ಈ ದಿನ, ನಿಮ್ಮ ಈ ತಿಂಗಳು ಮತ್ತು ನಿಮ್ಮ ಈ ನಗರವು ಪವಿತ್ರವೂ ನಿಷಿದ್ಧವೂ ಆಗಿರುವಂತೆ. ಖಂಡಿತವಾಗಿಯು ನೀವು ಸದ್ಯವೇ ನಿಮ್ಮ ಪ್ರಭುವನ್ನು ಭೇಟಿಯಾಗಲಿರುವಿರಿ. ಹೌದು! ನೀವು ನಿಮ್ಮ ಕರ್ಮಗಳಿಗಾಗಿ ಅಲ್ಲಿ ವಿಚಾರಣೆಗೊಳಗಾಗಲಿರುವಿರಿ.

ಮನುಷ್ಯರೇ, ನಿಮಗೆ ನಿಮ್ಮ ಪತ್ನಿಯರ ಮೇಲೆ ಕೆಲವು ಹಕ್ಕುಗಳಿವೆ ಮತ್ತು ನಿಮ್ಮ ಪತ್ನಿಯರಿಗೆ ನಿಮ್ಮ ಮೇಲೂ ಕೆಲವು ಹಕ್ಕುಗಳಿವೆ. ನಿಮ್ಮ ದಾಂಪತ್ಯ ಸಂಬಂಧದ ಪಾವಿತ್ರ್ಯವನ್ನು ಕಾಪಾಡಬೇಕಾದುದು ಮತ್ತು ನಿಮ್ಮ ಹೊರತು ಯಾರನ್ನೂ ನಿಮ್ಮ ಹಾಸಿಗೆಗೆ ಬರಗೊಡದಿರುವುದು ಅವರ ಮೇಲೆ ನಿಮ್ಮ ಹಕ್ಕಾಗಿದೆ. ಅದರಲ್ಲಿ ಅವರು ಚ್ಯುತಿ ಮಾಡಿದರೆ ಅವರನ್ನು ನಿಮ್ಮ ಹಾಸಿಗೆಯಿಂದ ಬೇರ್ಪಡಿಸಬಹುದು. ಗಾಯ ಅಥವಾ ಕಲೆ ಆಗದಂತಹ ರೀತಿಯಲ್ಲಿ ಅವರನ್ನು ಹೊಡೆಯಬಹುದು ಮತ್ತು ಅದರಿಂದ ಅವರು ತಮ್ಮನ್ನು ತಿದ್ದಿಕೊಂಡು ನಿಮಗೆ ವಿಧೇಯರಾದರೆ ಅವರಿಗೆ ನಿಮ್ಮ ಸಾಮರ್ಥ್ಯಾನುಸಾರ ಉಣಿಸಿರಿ ಹಾಗೂ ತೊಡಿಸಿರಿ.

ತಿಳಿಯಿರಿ! ಪತಿಯ ಸಂಪತ್ತಿನಿಂದ ಆತನ ಅನುಮತಿಯಿಲ್ಲದೆ ಏನನ್ನೂ ದಾನ ಮಾಡುವುದು ಪತ್ನಿಗೆ ಧರ್ಮಸಮ್ಮತವಲ್ಲ. ನಿಮ್ಮ ಮಹಿಳೆಯರೊಂದಿಗೆ ಕರುಣೆಯಿಂದ ವರ್ತಿಸಿರಿ. ಅವರು ನಿಮ್ಮ ಸಹಾಯಕಿಯರಾಗಿದ್ದಾರೆ, ಅವರು ತಮ್ಮ ವ್ಯವಹಾರಗಳನ್ನು ತಾವೇ ನೋಡಿಕೊಳ್ಳಲು ಶಕ್ತರಲ್ಲ. ನಿಮ್ಮ ಪತ್ನಿಯರ ಬಗ್ಗೆ ಅಲ್ಲಾಹನನ್ನು ಭಯಪಡಿರಿ. ನೀವು ಅಲ್ಲಾಹನ ಜಾಮೀನಿನೊಂದಿಗೆ ಅವರನ್ನು ವರಿಸಿರುವಿರಿ. ಅಲ್ಲಾಹನ ವಚನದಂತೆ ಅವರನ್ನು ನಿಮಗೆ ಧರ್ಮಸಮ್ಮತವಾಗಿ ಮಾಡಿಕೊಂಡಿರುವಿರಿ.

ಮನುಷ್ಯರೇ, ಸರ್ವಶಕ್ತನೂ ಮಹಾನನೂ ಆದ ಅಲ್ಲಾಹನು ಪ್ರತಿಯೊಬ್ಬನಿಗೂ (ವಾರೀಸು ಸೊತ್ತಿನಲ್ಲಿ) ಅವನ ಪಾಲನ್ನು ನಿಶ್ಚಯಿಸಿರುವನು. ಆದ್ದರಿಂದ ಒಬ್ಬ ವಾರೀಸುದಾರನಿಗೆ (ಶರೀಅತ್ ನಿಯಮಗಳನ್ನು ಮೀರಿ) ವಿಶೇಷ ಉಯಿಲು ಮಾಡುವ ಹಕ್ಕಿಲ್ಲ.

ಮಗುವು ದಂಪತಿಗಳಿಗೆ ಸೇರಿದ್ದು. ದಾಂಪತ್ಯದ ಪಾವಿತ್ರ್ಯವನ್ನು ಮುರಿಯುವ ವ್ಯಕ್ತಿಯನ್ನು ಕಲ್ಲು ಹೊಡೆದು ಸಾಯಿಸಲಾಗುವುದು. ಅವರ ವಿಚಾರಣೆಯು ಅಲ್ಲಾಹನ ಹೊಣೆಯಾಗಿದೆ. ತನ್ನ ವಂಶ ಪರಂಪರೆಯನ್ನು ತನ್ನ ತಂದೆಯ ಹೊರತು ಇತರರೊಂದಿಗೆ ಜೋಡಿಸುವವನ ಅಥವಾ ತನ್ನ ಯಜಮಾನನ ಹೊರತು ಇತರರನ್ನು ತನ್ನ ಒಡೆಯನೆಂದು ಸಾರುವವನ ಮೇಲೆ ಅಲ್ಲಾಹನ ಶಾಪವಿದೆ.

ಎಲ್ಲ ಸಾಲಗಳನ್ನು ಮರು ಪಾವತಿಸಬೇಕು, ಸಾಲ ರೂಪದಲ್ಲಿ ಪಡೆದ ಎಲ್ಲ ಸೊತ್ತುಗಳನ್ನು ಹಿಂದಿರುಗಿಸಬೇಕು. ಉಡುಗೊರೆಗಳಿಗೆ ಪ್ರತಿ ಉಡುಗೊರೆ ನೀಡಬೇಕು. ಜಾಮೀನುಗಾರನು ಜಾಮೀನು ನೀಡಿದಾತನಿಗೆ ಆದ ನಷ್ಟವನ್ನು ಭರಿಸಬೇಕು.

ಎಚ್ಚರಿಕೆ! ಅಪರಾಧಕ್ಕೆ ಅಪರಾದವೆಸಗಿದವನ ಹೊರತು ಬೇರೆ ಯಾರು ಹೊಣೆಯಲ್ಲ. ಮಗು ತನ್ನ ತಂದೆಯ ಅಪರಾಧಕ್ಕೆ ಹೊಣೆಯಲ್ಲ. ತಂದೆಯು ತನ್ನ ಮಗನ ಅಪರಾಧಕ್ಕೂ ಹೊಣೆಯಲ್ಲ.

ತನ್ನ ಸೋದರನು ಸ್ವ ಇಚ್ಛೆಯಿಂದ ನೀಡಿದ ಹೊರತು ಒಬ್ಬ ಮುಸ್ಲಿಮನಿಗೆ ಆತನ ಸಂಪತ್ತಿನಲ್ಲಿ ಯಾವುದೂ ಧರ್ಮ ಸಮ್ಮತವಲ್ಲ. ಆದ್ದರಿಂದ ನಿಮ್ಮ ಮೇಲೆ ನೀವೇ ಅಕ್ರಮವೆಸಗಿಕೊಳ್ಳಬೇಡಿರಿ.

ಮನುಷ್ಯರೇ, ಪ್ರತಿಯೊಬ್ಬ ಮುಸ್ಲಿಮನು ಮುಸ್ಲಿಮನ ಸೋದರನಾಗಿರುವನು. ಎಲ್ಲ ಮುಸ್ಲಿಮರೂ ಒಂದು ಸಾಹೋದರ್ಯ ಬಂಧನದಲ್ಲಿರುವವರಾಗಿದ್ದಾರೆ. ಇನ್ನು ನಿಮ್ಮ ಜೀತದಾಳುಗಳ ವಿಷಯ! ನೀವು ಉಣ್ಣುವುದನ್ನೇ ಅವರಿಗೂ ಉಣಿಸಿರಿ. ನೀವು ಉಡುವುದನ್ನೇ ಅವರಿಗೂ ಉಡಿಸಿರಿ.

ನನ್ನ ಕಾಲಾನಂತರ ಪಥಭ್ರಷ್ಟರಾಗಿ ಹೋಗದಂತೆ ಹಾಗೂ ಒಬ್ಬರು ಇನ್ನೊಬ್ಬರ ಕತ್ತು ಕೊಯ್ಯುವವರಾಗಿ ಹೋಗದಂತೆ ಜಾಗರೂಕತೆ ವಹಿಸಿರಿ. ನಮ್ಮ ಪೈಕಿ ಯಾರ ಬಳಿಯಾದರೂ ಒಂದು ಅಮಾನತ್(ವಿಶ್ವಸ್ಥ ನಿಧಿ) ಇದ್ದರೆ ಅವನು ಅದನ್ನು ಅದರ ಮಾಲಿಕನಿಗೆ ಹಿಂದಿರುಗಿಸಬೇಕು.

ಜನರೇ, ಇತಿಯೋಪಿಯಾದ ಒಬ್ಬ ಕರಿಯ ಗುಲಾಮನನ್ನು ನಿಮ್ಮ ನಾಯಕನಾಗಿ ನೇಮಿಸಿದರೂ ಆತನು ನಿಮ್ಮ ಮಧ್ಯೆ ಅಲ್ಲಾಹನ ಗ್ರಂಥಕ್ಕೆ ಅನುಗುಣವಾಗಿ ಆಜ್ಞಾಪಿಸುವ ತನಕ ಅವನನ್ನು ಆಲಿಸಿರಿ ಮತ್ತು ಅನುಸರಿಸಿರಿ.

ಜನರೇ, ನನ್ನ ನಂತರ ಯಾವ ಪ್ರವಾದಿಯು ನಿಯುಕ್ತನಾಗಲಿಕ್ಕಿಲ್ಲ. ನಿಮ್ಮ ನಂತರ ಯಾವ ಸಮುದಾಯವೂ ರಚಿಸಲ್ಪಡಲಿಕ್ಕಿಲ್ಲ.

ಖಂಡಿತ ನಾನು ನಿಮ್ಮ ಬಳಿ ನಿಮ್ಮನ್ನೆಂದೂ ದಾರಿ ತಪ್ಪಿಸದಂತಹ ವಸ್ತುವನ್ನು ಬಿಟ್ಟಗಲುತ್ತೇನೆ. ಅಲ್ಲಾಹನ ಗ್ರಂಥ ಮತ್ತು ಆತನ ಪ್ರವಾದಿಯ ಸುನ್ನತ್ (ಜೀವನ ವಿಧಾನ), ಅವುಗಳನ್ನು ನೀವು ಬಿಗಿ ಹಿಡಿದರೆ ನೀವೆಂದು ದಾರಿ ತಪ್ಪಲಾರಿರಿ.

ಜಾಗ್ರತೆ! ಧರ್ಮದ ವಿಷಯದಲ್ಲಿ ಅತಿರೇಕ ಎಸಗಬೇಡಿರಿ, ಧಾರ್ಮಿಕ ವಿಷಯದಲ್ಲಿ ಅತಿರೇಕವೆಸಗಿಯೇ ನಿಮ್ಮ ಪೂರ್ವಜರಲ್ಲಿ ಅನೇಕರು ನಾಶ ಹೊಂದಿದರು.

ಖಂಡಿತವಾಗಿಯು ನಿಮ್ಮ ಈ ಭೂಮಿಯಲ್ಲಿ ಶೈತಾನನು ತನ್ನನ್ನು ಜನರು ಆರಾಧಿಸುವ ಬಗ್ಗೆ ಶಾಶ್ವತವಾಗಿ ನಿರಾಶನಾಗಿರುವನು, ಆದರೆ ಆತನನ್ನು ನೀವು ಅನುಸರಿಸುವಿರೆಂಬ ಭಯವಿದ್ದರೆ ಅದು ನೀವು ಕ್ಷುಲ್ಲಕವೆಂದು ಪರಿಗಣಿಸು ವಿಷಯಗಳಲ್ಲಿ ಮಾತ್ರ. ಆದ್ದರಿಂದ ನಿಮ್ಮ ಧರ್ಮದ ಬಗ್ಗೆ ಆತನಿಂದ ಜಾಗರೂಕರಾಗಿರಿ.

ಜನರೇ (ನಿಷಿದ್ಧ) ಮಾಸಗಳನ್ನು ಅದಲು ಬದಲು ಮಾಡುವುದು ಸತ್ಯನಿಷೇಧದ ಕಾರ್ಯವಾಗಿದೆ. ತನ್ಮೂಲಕ ಸತ್ಯನಿಷೇಧಿಗಳು ಇನ್ನಷ್ಟು ಪಥಭ್ರಷ್ಟತೆಯಲ್ಲಿ ಬೀಳುತ್ತಾರೆ. ಒಂದು ವರ್ಷ ಯಾವುದಾದರೂ ತಿಂಗಳನ್ನು ಹಲಾಲ್ ( ಧರ್ಮಬದ್ಧ)ಗೊಳಿಸುತ್ತಾರೆ. ಇನ್ನೊಂದು ವರ್ಷ ಅದನ್ನು ಹರಾಮ್(ನಿಷಿದ್ಧ)ಗೊಳಿಸುತ್ತಾರೆ. ಈ ರೀತಿ(ಹಿಂದೆ-ಮುಂದೆ ಮಾಡಿ) ಅಲ್ಲಾಹನು ನಿಷಿದ್ಧಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಪೂರ್ತಿಗೊಳಿಸುತ್ತಾರೆ.

ನಿಶ್ಚಯವಾಗಿಯೂ ಕಾಲ ಚಕ್ರವು ಉರುಳುತ್ತಾ ಇಂದು ಮತ್ತೆ ಅಲ್ಲಾಹನು ಭೂಮಿಯನ್ನು ಸೃಷ್ಟಿಸಿದಂದು ಇದ್ದ ಅದೇ ಸ್ಥಿತಿಗೆ ತಲುಪಿದೆ. ಅರ್ಥಾತ್ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡಾಗಿದೆ. ಅಲ್ಲಾಹನು ಆಕಾಶ-ಭೂಮಿಗಳನ್ನು ಸೃಷ್ಟಿಸಿದಂದೇ ಈ ಸಂಖ್ಯೆಯು(ವಿಧಿ ಲಿಖಿತದಲ್ಲಿ) ಉಲ್ಲೇಖಿಸಲ್ಪಟ್ಟಿದೆ. ಅವುಗಳ ಪೈಕಿ ನಾಲ್ಕು ತಿಂಗಳು ನಿಷಿದ್ಧವಾಗಿದೆ. ಮೂರು ನಿರಂತರ ಬರುವ ತಿಂಗಳುಗಳು. ಅರ್ಥಾತ್-ದುಲ್ ಕಅದ್, ದುಲ್ ಹಜ್ಜ್ ಮತ್ತು ಮುಹರ್ರಮ್. ಒಂದು ಒಂಟಿ ತಿಂಗಳು. ಅರ್ಥಾತ್-ಜುಮಾದಿಲ್ ಆಖಿರ್ ಮತ್ತು ಶಅಬಾನ್‍ಗಳ ಮಧ್ಯೆ ಬರುವ ರಜಬ್ ತಿಂಗಳು.

ಕೇಳಿರಿ! ನಿಮ್ಮ ಪ್ರಭುವನ್ನು ಆರಾಧಿಸಿರಿ. ದಿನಕ್ಕೆ ಐದು ಬಾರಿ ನಮಾಝ್ ನಿರ್ವಹಿಸಿರಿ. ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸಿರಿ. ನಿಮ್ಮ ಸಂಪತ್ತಿನ ಮೇಲಿನ ಝಕಾತನ್ನು ಸಂತೋಷದಿಂದ ಪಾವತಿ ಮಾಡಿರಿ. ಅಲ್ಲಾಹನ ಭವನದ ಹಜ್ಜ್ ಯಾತ್ರೆ ಕೈಗೊಳ್ಳಿರಿ. ನಿಮ್ಮ ಆಜ್ಞಾಧಿಕಾರಿಗಳನ್ನು ಅನುಸರಿಸಿರಿ. ನೀವು ನಿಮ್ಮ ಪ್ರಭುವಿನ ಸ್ವರ್ಗದಲ್ಲಿ ಪ್ರವೇಶಿಸಲ್ಪಡುವಿರಿ.

ಕೇಳಿರಿ! ಇಲ್ಲಿ ಹಾಜರಿರುವವರು ಹಾಜರಿಲ್ಲದವರಿಗೆ ಇದನ್ನು ತಲುಪಿಸಬೇಕು. ನೀವು ಸಂದೇಶ ತಲುಪಿಸುವವರ ಪೈಕಿ ಅನೇಕ ಜನರು ಅದರ ಬಗ್ಗೆ ನಿಮಗಿಂತ ಹೆಚ್ಚು ಕಾಳಜಿಯುಳ್ಳವರಾಗಿರಬಹುದು. ನನ್ನ ಬಗ್ಗೆ ನಿಮ್ಮನ್ನು ವಿಚಾರಿಸಿದಾಗ ನೀವು ಏನೆಂದು ಹೇಳುವಿರಿ. ಜನರು ಹೇಳಿದರು: ನೀವು ಧರ್ಮದ ಅಮಾನತನ್ನು ತಲಿಪಿಸಿರುವಿರೆಂದೂ ನಿಮ್ಮ ಪ್ರವಾದಿತ್ವ ರಾಯಭಾರವನ್ನು ಸಂಪೂರ್ಣ ನಿರ್ವಹಿಸಿರುವಿರೆಂದೂ ನಮ್ಮ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿರುವಿರೆಂದೂ ನಾವು ಸಾಕ್ಷ್ಯವಹಿಸುತ್ತೇವೆ.

ಆಗ ಅಲ್ಲಾಹನ ಸಂದೇಶವಾಹಕರು ತಮ್ಮ ತೋರ್ಬೆರಳನ್ನು ಆಕಾಶದತ್ತ ತೋರಿಸುತ್ತಾ ಜನರೆಡೆಗೆ ಸೂಚಿಸಿ ಹೀಗೆ ಹೇಳಿದರು:
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
*****

SHARE THIS POST VIA