Home / ಮೂಲಭೂತ ಹಕ್ಕುಗಳು

ಮೂಲಭೂತ ಹಕ್ಕುಗಳು

ಈ ಜಗತ್ತಿನ ಸಕಲ ಮನುಷ್ಯರು ಒಂದೇ ದೇವನ ಸೃಷ್ಟಿಗಳಾಗಿದ್ದಾರೆ. ಮೂಲತಃ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರಾಗಿದ್ದಾರೆ. ಒಂದೇ ಮಾತಾಪಿತರ ಮಕ್ಕಳು. ಆದ್ದರಿಂದಲೇ ಮಾನವರೆಲ್ಲರೂ ಸಮಾನರಾಗಿದ್ದಾರೆ. ಅವರಲ್ಲಿ ಮೇಲು ಕೀಳೆಂಬ ಭೇದ ಭಾವ ಇಲ್ಲ. ಇಸ್ಲಾಮಿನ ದೃಷ್ಟಿಯಲ್ಲಿ ಮನುಷ್ಯನು ಗೌರವಾನ್ವಿತನಾಗಿದ್ದಾನೆ. ಅವನನ್ನು ಇಸ್ಲಾಮ್ ಬಹಳ ಗೌರವದಿಂದ ಕಾಣುತ್ತದೆ. ದೇವನ ಸೃಷ್ಟಿಗಳಲ್ಲಿ ಮನುಷ್ಯ ಶ್ರೇಷ್ಠನಾಗಿದ್ದಾನೆ. ಈ ಭೂಮಿಯಲ್ಲಿರುವುದೆಲ್ಲವನ್ನೂ ಆತನ ಉಪಯೋಗಕ್ಕಾಗಿ ಸೃಷ್ಟಿಸಲಾಗಿದೆ. ಮಾನವ ಜೀವಕ್ಕೆ ಇಸ್ಲಾಮಿನಲ್ಲಿ ಮಹತ್ತರವಾದ ಸ್ಥಾನ ಕಲ್ಪಿಸಲಾಗಿದೆ.

“ಓರ್ವ ಮನುಷ್ಯನನ್ನು ಕೊಂದರೆ ಮಾನವಕುಲವನ್ನು ಕೊಂದಂತೆ” ಎಂದು ಕುರ್ ಆನ್ ಪ್ರತಿಪಾದಿಸುತ್ತದೆ. (ಪವಿತ್ರ ಕುರ್ ಆನ್- 5: 32). ಹೀಗೆ ಮನುಷ್ಯನು ಜೀವಿಸುವ ಹಕ್ಕನ್ನು ಇಸ್ಲಾಮ್ ಸ್ಪಷ್ಟಪಡಿಸಿದೆ.

ತನ್ನ ಪ್ರಾಣದಂತೆ ತನ್ನ ಮಾನದ ರಕ್ಷಣೆಯನ್ನೂ ಮಾನವನು ಬಯಸುತ್ತಾನೆ. ಅವನು ತನ್ನ ಮಾನಹಾನಿಯನ್ನು ಮರಣಕ್ಕಿಂತಲೂ ಹೆಚ್ಚು ಭಯಪಡುತ್ತಾನೆ. ಆದ್ದರಿಂದ ಇಸ್ಲಾಮ್ ಓರ್ವನ ಮಾನದ ರಕ್ಷಣೆಗೆ ಮಹತ್ವ ನೀಡಿದೆ. ಓರ್ವನ ಮಾನಕ್ಕೆ ಭಂಗ ಉಂಟು ಮಾಡಿದರೆ ಅದು ಕೊಲೆ ಆರೋಪಕ್ಕೆ ಸಮಾನವಾಗಿದೆ.

ನಂಬಿಕೆ, ಸ್ವಾತಂತ್ರ್ಯ ಮನುಷ್ಯನ ಮೂಲಭೂತ ಹಕ್ಕಾಗಿದೆ. ಇಸ್ಲಾಮ್ ಅದನ್ನು ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ಬಹಿರಂಗ ಪಡಿಸುತ್ತದೆ. ಯಾವುದೇ ವ್ಯಕ್ತಿಗೆ ತನಗಿಷ್ಟವಿರುವ ಧರ್ಮ ಮತ್ತು ಸಿದ್ಧಾಂತವನ್ನು ಅನುಸರಿಸುವ, ಸ್ವೀಕರಿಸುವ ಅವಕಾಶವಿದೆ ಎಂದು ಇಸ್ಲಾಮ್ ಕಲ್ಪಿಸುತ್ತದೆ. ಆರಾಧನಾ ಸ್ವಾತಂತ್ರ್ಯವನ್ನು ಯಾರಿಗೂ ನಿಷೇಧಿಸಲ್ಪಟ್ಟಿಲ್ಲವೆಂದು ಇಸ್ಲಾಮ್ ಹೇಳುತ್ತದೆ.

ಸಾಮಾನ್ಯವಾಗಿ ಧಾರ್ಮಿಕ ಭಿನ್ನಾಭಿಪ್ರಾಯಗಳು ಮನುಷ್ಯ ಸಹಜವೆಂದೂ, ಅನ್ಯಮತೀಯರೊಡನೆ ಗೌರವದಿಂದಲೇ ವರ್ತಿಸಬೇಕೆಂದೂ ಇಸ್ಲಾಮ್ ಕಲಿಸುತ್ತದೆ. ಧರ್ಮದಲ್ಲಿ ವೈವಿಧ್ಯತೆ ದೇವ ನಿರ್ಮಿತವಾದ ಈ ಪ್ರಕೃತಿಯಲ್ಲಿ ಸ್ವಾಭಾವಿಕ. ಧಾರ್ಮಿಕ ಸ್ವಾತಂತ್ರ್ಯ, ಧರ್ಮ ಪ್ರಚಾರದ ಹಕ್ಕು, ಧರ್ಮಾಚರಣೆಯ ಹಕ್ಕುಗಳು ಸಂವಿಧಾನದ ಪ್ರಕಾರ ಅದು ಪ್ರತಿಯೊಬ್ಬರ ಮೂಲಭೂತ ಹಕ್ಕುಗಳಲ್ಲಿ ಸೇರಿದೆ.

ಸಾಮಾಜಿಕ ನೀತಿ ನಿಯಮಗಳನ್ನೂ ಇಸ್ಲಾಮ್ ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ಸೇರಿಸಿದೆ. ಈ ಕಾರಣದಿಂದ ಆಹಾರ, ವಸ್ತ್ರ, ಮನೆ, ಶಿಕ್ಷಣ, ನೀರು, ಬೆಳಕು, ಚಿಕಿತ್ಸೆ ಮುಂತಾದ ಮೂಲಭೂತ ಹಕ್ಕುಗಳನ್ನು ಪೂರೈಸುವುದು ಮನುಷ್ಯನ ಮೂಲಭೂತ ಕರ್ತವ್ಯಗಳಾಗಿದೆ. ಜಾತಿ ಮತ, ವರ್ಗ, ವರ್ಣ, ದೇಶ, ಭಾಷೆ, ಕುಲ, ಗೋತ್ರಕ್ಕೆ ಅತೀತವಾಗಿ ಎಲ್ಲ ಮನುಷ್ಯರೂ ನ್ಯಾಯದ ಮುಂದೆ ಸಮಾನರಾಗಿದ್ದಾರೆ. ಸರ್ವರಿಗೂ ಸಮಾನ ನ್ಯಾಯ ದೊರೆಯಬೇಕೆಂಬುದು ಇಸ್ಲಾಮಿನ ಮೂಲಭೂತ ಶಿಕ್ಷಣಗಳಲ್ಲೊಂದಾಗಿದೆ.

 

SHARE THIS POST VIA