Home / ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆ

ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆ

ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆಯ ಸ್ವರೂಪವೇನು ಮತ್ತು ಒಟ್ಟು ಜೀವನ ವ್ಯವಸ್ಥೆಯೊಂದಿಗೆ ಅದರ ಸಂಬಂಧ ಎಂತಹದು? ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಬೇಕಿದ್ದರೆ ನಾವು ಪ್ರಥಮವಾಗಿ ಆಧ್ಯಾತ್ಮಿಕತೆಯ ವಿಷಯದಲ್ಲಿ ಬೇರೆ ಮತ ಧರ್ಮಗಳ ಹಾಗೂ ಸೈದ್ಧಾಂತಿಕ ವ್ಯವಸ್ಥೆಗಳ ಕಲ್ಪನೆಗಳಿಗೂ ಇಸ್ಲಾಮಿನ ಕಲ್ಪನೆಗೂ ಇರುವ ಮೂಲಭೂತ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಾದುದು ಅಗತ್ಯ. ಏಕೆಂದರೆ ಸಾಮಾನ್ಯವಾಗಿ ಈ ವ್ಯತ್ಯಾಸವನ್ನು ಸೂಕ್ತವಾಗಿ ತಿಳಿದುಕೊಂಡಿರದ ಸ್ಥಿತಿಯಲ್ಲಿ, ಜನರು, ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆಯ ಬಗ್ಗೆ ಯೋಚಿಸುವಾಗಲೆಲ್ಲಾ ಅವರ ಮನಸ್ಸು `ಆಧ್ಯಾತ್ಮಿಕತೆ’ ಎಂಬ ಶಬ್ದದೊಂದಿಗೇ ಅಂಟಿಕೊಂಡಿರುವ ಹಲವು ಇತರ ಕಲ್ಪನೆಗಳೆಡೆಗೆ ಹರಿದು ಬಿಡುತ್ತದೆ. ಇದರಿಂದಾಗಿ ಜನರು `ಆತ್ಮ’ದ ಪರಿಚಿತ ಪರಿಧಿಯನ್ನು ಮೀರಿ ಭೌತಿಕ ಮತ್ತು ಶಾರೀರಿಕ ವೃತ್ತದೊಳಗೆ ಪ್ರವೇಶಿಸುವ ಮಾತ್ರವಲ್ಲ ಅದನ್ನು ಆಳಲು ಆರಂಭಿಸುವ ಈ ವ್ಯವಸ್ಥೆ ಅದೆಂಥ ಆಧ್ಯಾತ್ಮಿಕ ವ್ಯವಸ್ಥೆಯೋ ಎಂಬ ಏನೋ ಅರ್ಥವಾಗದ ಗೊಂದಲದ ಸ್ಥಿತಿಗೆ ಸಿಲುಕುತ್ತಾರೆ.

ಸಾಮಾನ್ಯವಾಗಿ ಧರ್ಮ ಮತ್ತು ಸಿದ್ಧಾಂತಗಳ ಲೋಕದಲ್ಲಿ ಆತ್ಮ ಮತ್ತು ಶರೀರ ಇವೆರಡೂ ಪರಸ್ಪರ ತದ್ವಿರುದ್ಧ ವಿಷಯಗಳೆಂಬ ಕಲ್ಪನೆ ಆಳವಾಗಿ ಬೇರೂರಿದೆ. ಆತ್ಮ ಮತ್ತು ಶರೀರ ಇವೆರಡರ ಬೇಡಿಕೆಗಳು ವಿಭಿನ್ನವಾಗಿರುವುದು ಮಾತ್ರವಲ್ಲದೆ ಅವು ಪರಸ್ಪರ ವಿರುದ್ಧವಾಗಿವೆಯೆಂದೂ ಇವೆರಡೂ ಏಕಕಾಲದಲ್ಲಿ ವಿಕಾಸ ಹೊಂದುವುದು ಅಸಂಭವವೆಂದೂ ಭಾವಿಸಲಾಗುತ್ತದೆ. ಹಾಗೆಯೇ ಶರೀರ ಮತ್ತು ಪದಾರ್ಥ ಲೋಕವು ಆತ್ಮದ ಪಾಲಿನ ಬಂದೀಖಾನೆಯೆಂದೂ ಲೌಕಿಕ ಜೀವನದ ನಂಟುಗಳು ಮತ್ತು ಆಸಕ್ತಿಗಳೆಲ್ಲಾ ಆತ್ಮವನ್ನು ಬಂಧನದಲ್ಲಿಡುವ ಸರಪಣಿಗಳೆಂದೂ ನಂಬಲಾಗುತ್ತದೆ. ಲೌಕಿಕ ವ್ಯವಹಾರ ಚಟುವಟಿಕೆಗಳೆಲ್ಲಾ ಆತ್ಮ ವಿಕಾಸವನ್ನು ಸಂಪೂರ್ಣ ಕುಂಠಿತಗೊಳಿಸುವಂತಹ ತಡೆಗೋಡೆಗಳು ಎಂಬ ನಂಬಿಕೆಯೂ ಇದೆ.

ಈ ಕಲ್ಪನೆಗಳ ನೇರ ಹಾಗೂ ಸಹಜ ಪರಿಣಾಮವಾಗಿ ಲೌಕಿಕ ಮತ್ತು ಆಧ್ಯಾತ್ಮಿಕತೆಗಳು ಪರಸ್ಪರ ಸಂಪೂರ್ಣ ಬೇರ್ಪಟ್ಟುವು. ಲೌಕಿಕತೆಯನ್ನು ನೆಚ್ಚಿಕೊಂಡವರು, ಮೊದಲ ಹೆಜ್ಜೆಯಲ್ಲೇ ಲೌಕಿಕತೆಯ ಜೊತೆ ಆಧ್ಯಾತ್ಮಿಕತೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂಬ ನಿರಾಶಾದಾಯಕ ತೀರ್ಮಾನಕ್ಕೆ ಬಂದರು. ಈ ತೀರ್ಮಾನವು ಅವರನ್ನು ಭೌತಿಕತೆಯಲ್ಲಿ ಮುಳುಗಿ ಹೋಗುವಂತೆ ಮಾಡಿತು. ಪರಿಣಾಮವಾಗಿ ಸಾಮಾಜಿಕ, ನಾಗರಿಕ, ಆರ್ಥಿಕ, ರಾಜಕೀಯ ಮುಂತಾದ ಜೀವನದ ಎಲ್ಲ ಲೌಕಿಕ ಕ್ಷೇತ್ರಗಳು ಆಧ್ಯಾತ್ಮಿಕತೆಗಾಗಿ ತಹತಹಿಸುವಂತಾಯಿತು. ಜನರು ತಮ್ಮ ಆತ್ಮದ ಶ್ರೇಯಸ್ಸಿಗಾಗಿ, ಲೌಕಿಕತೆಯೊಂದಿಗೆ ಯಾವುದೇ ಬಗೆಯ ಸಂಬಂಧವಿಲ್ಲದಂತಹ ಮಾರ್ಗಗಳನ್ನು ಅರಸಲಾರಂಭಿಸಿದರು. ಯಾಕೆಂದರೆ ಅವರ ದೃಷ್ಟಿಯಲ್ಲಿ ಆಧ್ಯಾತ್ಮಿಕ ಪ್ರಗತಿಗೆ, ಲೌಕಿಕತೆಯನ್ನು ಒಳಗೊಂಡ ಯಾವುದೇ ಮಾರ್ಗೋಪಾಯವು ಅಸ್ತಿತ್ವದಲ್ಲಿರುವುದೇ ಅಸಂಭವವಾಗಿತ್ತು. ಅವರ ದೃಷ್ಟಿಯಲ್ಲಿ ಆತ್ಮವು ಪ್ರಗತಿ ಸಾಧಿಸಬೇಕಾದರೆ ಅದಕ್ಕಾಗಿ ಶರೀರವನ್ನು ದಮನಿಸುವುದು ಅನಿವಾರ್ಯವಾಗಿತ್ತು.

ಆದ್ದರಿಂದ ಅಂತಹ ಜನರು ಆಧ್ಯಾತ್ಮಿಕ ಶ್ರೇಯಸ್ಸನ್ನು ಗಳಿಸುವ ಮಾರ್ಗ ಎಂಬ ಹೆಸರಲ್ಲಿ ತಮ್ಮ ಶರೀರವನ್ನೇ ಹಿಂಸಿಸಿ, ಪೀಡಿಸಿ, ಮರ್ದಿಸಿ ನಾಶ ಪಡಿಸುವ ಚಿತ್ರವಿಚಿತ್ರ ಭಕ್ತಿ ಮಾರ್ಗಗಳನ್ನು ಕಂಡುಕೊಂಡರು. ತಮ್ಮ ಧ್ಯಾನ, ಜಪ-ತಪಗಳಿಗೆಲ್ಲಾ ಯಾವುದೇ ಬಗೆಯ ನಾಗರಿಕ ಚಟುವಟಿಕೆಗಳು ಮತ್ತು ಸದ್ದುಗದ್ದಲಗಳಿಂದ ಭಂಗ ಬರದಂತಹ, ಏಕಾಂತ ಕೊಡುವ ನಿರ್ಜನ ಗುಡ್ಡ ಗಾಡುಗಳು ಮತ್ತು ಘೋರಾರಣ್ಯಗಳೇ ಆಧ್ಯಾತ್ಮಿಕ ಸಂಸ್ಕಾರಕ್ಕೆ ಅತ್ಯಂತ ಸುಯೋಗ ಸ್ಥಳಗಳೆಂದು ಅವರು ನಂಬಿದರು.

ಭೌತಿಕ ಜಗತ್ತಿನ ಜೊತೆ ವ್ಯಕ್ತಿಯನ್ನು ಬಂಧಿಸಿಡುವಂತಹ ಎಲ್ಲ ಬಗೆಯ ಸಂಪರ್ಕ-ಸಂಬಂಧಗಳು ಮತ್ತು ಲೌಕಿಕವಾದ ಎಲ್ಲ ವ್ಯವಹಾರ-ವಹಿವಾಟುಗಳನ್ನು ಸಂಪೂರ್ಣ ಪರಿತ್ಯಜಿಸುವುದರ ಹೊರತು ಆಧ್ಯಾತ್ಮಿಕ ವಿಕಾಸಕ್ಕೆ ಬೇರೆ ಮಾರ್ಗವೇ ಇಲ್ಲ ಎಂದು ಅವರಿಗೆ ತೋರಿತು.

ಆತ್ಮ ಮತ್ತು ಶರೀರಗಳ ವೈರುಧ್ಯದ ಈ ಕಲ್ಪನೆಯು ಜೀವನ ಸಾರ್ಥಕತೆ ಅಥವಾ ಪರಿಪೂರ್ಣತೆಯ ಎರಡು ವಿಭಿನ್ನ ವ್ಯಾಖ್ಯೆಗಳನ್ನು, ಎರಡು ವಿಭಿನ್ನ ಗುರಿಗಳನ್ನು ಮನುಷ್ಯರ ಮುಂದಿಟ್ಟಿತು. ಒಂದೆಡೆ, ಲೌಕಿಕ ಜೀವನದಲ್ಲಿನ ಸಾರ್ಥಕತೆ ಎಂದರೆ ಮನುಷ್ಯನು ಕೇವಲ ಭೌತಿಕವಾಗಿ ಶ್ರೀಮಂತನಾಗಿ ಬಿಡುವುದು ಎಂದೂ ಮನುಷ್ಯನು ಒಬ್ಬ ಉತ್ತಮ ಪಕ್ಷಿಯಾಗಿ, ಒಳ್ಲೆಯ ಮೊಸಳೆಯಾಗಿ, ಚೆನ್ನಾದ ಕುದುರೆಯಾಗಿ, ಯಶಸ್ವೀ ತೋವಾಗಿ ಮಾರ್ಪಡುವುದೇ ಈ ಲೌಕಿಕ ಸಾರ್ಥಕತೆಯ ಉಚ್ಛ್ರಾಯ ಸ್ಥಿತಿಯೆಂದೂ ಕಲ್ಪಿಸಲಾಯಿತು. ಇನ್ನೊಂದೆಡೆ ಆಧ್ಯಾತ್ಮಿಕ ಜೀವನದ ಸಾರ್ಥಕತೆಯೆಂದರೆ ಮನುಷ್ಯನು ಕೇವಲ ಕೆಲವು ಅತಿಮಾನುಷ ಸಾಮಥ್ರ್ಯಗಳನ್ನು ಪಡೆಯುವುದೆಂದೂ ಅವನೊಬ್ಬ ಒಳ್ಳೆಯ ರೇಡಿಯೋದಂತೆ, ಶಕ್ತಿಶಾಲೀ ದೂರದರ್ಶಕದಂತೆ, ಅತ್ಯಂತ ಸಮರ್ಥ ಸೂಕ್ಷ್ಮದರ್ಶಕದಂತೆ ಹಾಗೂ ಅವನ ವಾಕ್‍ದೃಶ್ಯಗಳೆಲ್ಲಾ ಒಂದು ಔಷಧಾಲಯದಂತೆ ಪಾತ್ರ ನಿರ್ವಹಿಸುವುದೇ ಆಧ್ಯಾತ್ಮಿಕ ಸಾರ್ಥಕತೆಯ ಮಾನದಂಡಗಳೆಂದೂ ಊಹಿಸಲಾಯಿತು.

ಈ ವಿಷಯದಲ್ಲಿ ಇಸ್ಲಾಮಿನ ದೃಷ್ಟಿಕೋನವು ಲೋಕದ ಬೇರೆಲ್ಲಾ ಧಾರ್ಮಿಕ ಹಾಗು ಸೈದ್ಧಾಂತಿಕ ವ್ಯವಸ್ಥೆಗಳ ದೃಷ್ಟಿಕೋನಗಳಿಗಿಂತ ಸಂಪೂರ್ಣ ಭಿನ್ನವಾಗಿದೆ.

ಮನುಷ್ಯಾತ್ಮವು ಭೂಮಿಯ ಮೇಲೆ ದೇವನ ಪ್ರತಿನಿಧಿಯಾಗಿದೆ. ಅದರ ಮೇಲೆ ಕೆಲವು ಬಾಧ್ಯತೆಗಳು ಮತ್ತು ಹೊಣೆಗಾರಿಕೆಗಳಿವೆ. ಈ ಹೊಣೆಗಾರಿಕೆಗಳ ಈಡೇರಿಕೆಗಾಗಿ ಈ ಆತ್ಮಕ್ಕೆ ಅತ್ಯಂತ ಸೂಕ್ತ ಹಾಗೂ ಪೂರಕವಾದ ಒಂದು ಶರೀರವನ್ನು ಕೊಡಲಾಗಿದೆ. ಈ ಕೊಡುಗೆಯ ಉದ್ದೇಶ, ಆತ್ಮವು ತನ್ನ ಅಧಿಕಾರಗಳ ಬಳಕೆ ಮತ್ತು ಹೊಣೆಗಾರಿಕೆಗಳ ಈಡೇರಿಕೆಗಾಗಿ ಶರೀರವನ್ನು ಬಳಸಬೇಕೆಂಬುದೇ ಆಗಿದೆ. ಆದ್ದರಿಂದಲೇ ಶರೀರವು ಆತ್ಮದ ಬಂದೀಖಾನೆಯಲ್ಲ; ಬದಲಾಗಿ ಅದರ ಕಾರ್ಖಾನೆಯಾಗಿದೆ. ಈ ಕಾರ್ಖಾನೆಯ ಯಂತ್ರ ಮತ್ತು ಅಂಗಗಳನ್ನು ಬಳಸಿಕೊಂಡು ತನ್ನ ಸಾಮಥ್ರ್ಯವನ್ನು ಪ್ರದರ್ಶಿಸುವುದೊಂದೇ ಆತ್ಮದ ಪ್ರಗತಿ ಮತ್ತು ಉತ್ಥಾನಕ್ಕೆ ಇರುವ ಮಾರ್ಗ.

ಅಲ್ಲದೆ ಈ ಲೋಕವೇನೂ ಮನುಷ್ಯನ ಆತ್ಮವನ್ನು ಬಂಧನದಲ್ಲಿಡುವ ಯಾತನೆಗಳ ಲೋಕವಲ್ಲ. ಬದಲಾಗಿ ಲೋಕವು ಆತ್ಮದ ಕಾರ್ಯಕ್ಷೇತ್ರವಾಗಿದೆ. ತನ್ನ ಹೊಣೆಗಾರಿಕೆಗಳ ಈಡೇರಿಕೆಗಾಗಿ ಆತ್ಮವನ್ನು ದೇವನು ಲೋಕಕ್ಕೆ ಕಳಿಸಿದ್ದಾನೆ. ಲೋಕದಲ್ಲಿನ ಅಪಾರ ವಸ್ತುಗಳನ್ನು ಅದರ ಬಳಕೆಗಾಗಿ ಕೊಡಲಾಗಿದೆ. ಅಲ್ಲದೆ ಅದೇ ಪ್ರಾತಿನಿಧ್ಯ ಅಥವಾ ರಾಯಭಾರದ ಹೊಣೆಗಾರಿಕೆಯನ್ನು ಈಡೇರಿಸಲಿಕ್ಕಾಗಿ ಇನ್ನೂ ಅಸಂಖ್ಯ ಮನುಷ್ಯರನ್ನು ಲೋಕಕ್ಕೆ ಕಳಿಸಲಾಗಿದೆ. ಇಲ್ಲಿ ಪ್ರಕೃತಿಯ ಬೇಡಿಕೆಯಂತೆ ಮನುಷ್ಯ ಜೀವನದಲ್ಲಿ ನಾಗರಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತಿತರ ಹಲವು ಕ್ಷೇತ್ರಗಳು ಹುಟ್ಟಿಕೊಂಡಿವೆ. ಆದ್ದರಿಂದ ಲೋಕದಲ್ಲಿ ಆಧ್ಯಾತ್ಮಿಕ ಪ್ರಗತಿ ಸಾಧಿಸಬೇಕಾದರೆ ಅದಕ್ಕಾಗಿ ಈ ಇಡೀ ಕಾರ್ಯಕ್ಷೇತ್ರದಿಂದ ವಿರಕ್ತರಾಗಿ ಮೂಲೆ ಗುಂಪಾಗುವುದು ಸೂಕ್ತವಾದ ಮಾರ್ಗವಲ್ಲ. ಆ ಕ್ಷೇತ್ರದೊಳಗೆ ಇದ್ದುಕೊಂಡೇ ಮನುಷ್ಯನು ತನ್ನ ಸಾಮಥ್ರ್ಯವನ್ನು ಪ್ರದರ್ಶಿಸಬೇಕು. ಏಕೆಂದರೆ ಲೋಕವೇ ಮನುಷ್ಯನ ಪರೀಕ್ಷಾಲಯ.

ಜೀವನದ ಪ್ರತಿಯೊಂದು ಕ್ಷೇತ್ರವು ಅವನ ಮಟ್ಟಿಗೆ ಒಂದು ಪ್ರಶ್ನಾ ಪತ್ರಿಕೆಯಾಗಿದೆ. ಮನೆ, ಪೇಟೆ, ಮಾರುಕಟ್ಟೆ, ಕಛೇರಿ, ಕಾರ್ಖಾನೆ, ಶಾಲೆ, ಠಾಣೆ, ನ್ಯಾಯಾಲಯ, ಸಂಸತ್ತು, ಶಾಂತಿ ಸಮ್ಮೇಳನ, ಯುದ್ಧ ರಂಗ ಹೀಗೆ ಎಲ್ಲವೂ ಅವನ ಪಾಲಿಗೆ ವಿಭಿನ್ನ ವಿಷಯಗಳ ಪ್ರಶ್ನಾ ಪತ್ರಿಕೆಗಳಾಗಿದ್ದು, ಅವನು ಅವುಗಳನ್ನು ಎದುರಿಸಬೇಕಾಗಿದೆ. ಅವನು ಈ ಪೈಕಿ ಯಾವುದೇ ಸವಾಲನ್ನು ಎದುರಿಸದೆ, ಪ್ರಶ್ನಾ ಪತ್ರಿಕೆಯನ್ನು ಹಾಗೆಯೇ ಮರಳಿಸಿದರೆ, ಕೊನೆಗೆ ಫಲಿತಾಂಶ ಬರುವಾಗ ಅವನಿಗೆ ಸೊನ್ನೆಯ ಹೊರತು ಬೇರೇನೂ ಸಿಗುವುದಿಲ್ಲ. ಯಶಸ್ಸು ಮತ್ತು ಪ್ರಗತಿಗೆ ಇರುವ ಏಕಮಾತ್ರ ಮಾರ್ಗವೇನೆಂದರೆ ಮನುಷ್ಯನು ತನ್ನೆಲ್ಲಾ ಸಮಯ, ಸಾಮಥ್ರ್ಯ, ಏಕಾಗ್ರತೆಗಳನ್ನು ಪ್ರಸ್ತುತ ಪ್ರಶ್ನಾ ಪತ್ರಿಕೆಗಳ ಮೇಲೆ ಕೇಂದ್ರೀಕರಿಸಿ ತನ್ನಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಅವುಗಳನ್ನು ಎದುರಿಸಬೇಕು.

ಇಸ್ಲಾಮ್, ವೈರಾಗ್ಯ ಜೀವನದ ಕಲ್ಪನೆಯನ್ನು ತಿರಸ್ಕರಿಸುತ್ತದೆ. ಅದು ಮನುಷ್ಯನಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಲೋಕದಿಂದ ಪಲಾಯನ ಮಾಡಲು ಕಲಿಸುವ ಬದಲು ಲೌಕಿಕತೆಯ ಒಳಗಿದ್ದು ಅದನ್ನು ಸಾಧಿಸಲು ಕಲಿಸುತ್ತದೆ. ಇಸ್ಲಾಮಿನ ದೃಷ್ಟಿಯಲ್ಲಿ ಆತ್ಮದ ಉತ್ಥಾನ, ವಿಕಾಸ, ಪ್ರಗತಿ ಮತ್ತು ಬೆಳವಣಿಗೆಗೆ ಸಾಕ್ಷಾತ್ ಲೌಕಿಕ ಜೀವನ ಕ್ಷೇತ್ರವೇ ಸೂಕ್ತ ಸ್ಥಳವಾಗಿದೆ.

ಈಗ ನಾವು, ನಮ್ಮ ಆತ್ಮ ಪ್ರಗತಿ ಮತ್ತು ಅವನತಿಯ ಬಗ್ಗೆ ಇಸ್ಲಾಮ್ ಯಾವ ಮಾನದಂಡಗಳನ್ನು ನಿಶ್ಚಯಿಸುತ್ತದೆ ಎಂಬುದನ್ನು ನೋಡೋಣ.

ನಿಜವಾಗಿ ಈ ಪ್ರಶ್ನೆಯ ಉತ್ತರವು ಮೇಲೆ ಹೇಳಿದಂತಹ ಪ್ರಾತಿನಿಧ್ಯ ಅಥವಾ ರಾಯಭಾರದ ಕಲ್ಪನೆಯಲ್ಲೇ ಅಡಗಿದೆ. ಮನುಷ್ಯನು ಭುಮಿಯಲ್ಲಿ ದೇವನ ಖಲೀಫ ಅರ್ಥಾತ್ ಪ್ರತಿನಿಧಿ ಎಂಬ ನೆಲೆಯಲ್ಲಿ ಜೀವನದಾದ್ಯಂತ ತಾನು ಮಾಡುವ ಎಲ್ಲ ಕರ್ಮಗಳಿಗೆ ದೇವನ ಮುಂದೆ ವಿಚಾರಣಾರ್ಹನಾಗಿದ್ದಾನೆ. ಭೂಮಿಯಲ್ಲಿ ತನಗೆ ಕೊಡಲಾಗಿರುವ ಅಧಿಕಾರ ಮತ್ತು ಸಂಪನ್ಮೂಲಗಳನ್ನು ದೇವೇಚ್ಛೆಯ ಪ್ರಕಾರವೇ ಬಳಸಬೇಕಾದುದು ಅವನ ಕರ್ತವ್ಯವಾಗಿದೆ. ವಿಭಿನ್ನ ಸಂಬಂಧಗಳ ರೂಪದಲ್ಲಿ ಯಾವ ಬೇರೆ ಸಹಜೀವಿ ಮನುಷ್ಯರೊಂದಿಗೆ ಅವನನ್ನು ಬೆಸೆಯಲಾಗಿದೆಯೋ ಅವರೆಲ್ಲರ ವಿಷಯದಲ್ಲಿ ದೇವನು ಮೆಚ್ಚುವಂತಹ ರೀತಿಯಲ್ಲಿ ವರ್ತಿಸುವುದ ಅವನ ಕರ್ತವ್ಯವಾಗಿದೆ. ಹಾಗೆಯೇ ಭೂಮಿ ಮತ್ತು ಇಲ್ಲಿನ ವ್ಯವಸ್ಥೆಯನ್ನು ದೇವನು ಯಾವ ಸುಸ್ಥಿತಿಯಲ್ಲಿ ಕಾಣ ಬಯಸುತ್ತಾನೋ ಅಂತಹ ಸ್ಥಿತಿಯಲ್ಲಿ ಇಡುವುದಕ್ಕಾಗಿ ತನ್ನೆಲ್ಲಾ ಶ್ರಮ ಸಾಮಥ್ರ್ಯಗಳನ್ನು ವಿನಿಯೋಗಿಸಬೇಕಾದ ಹೊಣೆಗಾರಿಕೆ ಅವನ ಮೇಲಿದೆ. ಈ ಕರ್ತವ್ಯವನ್ನು ಮನುಷ್ಯನು ಎಷ್ಟು ದಕ್ಷವಾಗಿ, ವಿಧೇಯವಾಗಿ, ನಿಷ್ಠೆಯೊಂದಿಗೆ, ಪ್ರಾಮಾಣಿಕವಾಗಿ ನಿರ್ವಹಿಸುತ್ತಾನೋ ಅವನು ದೇವನಿಗೆ ಅಷ್ಟೇ ಹೆಚ್ಚು ನಿಕಟನಾಗುತ್ತಾನೆ.

ಇಸ್ಲಾಮಿನ ದೃಷ್ಟಿಯಲ್ಲಿ ಈ ರೀತಿ ದೇವನ ಸಾಮೀಪ್ಯ ಪ್ರಾಪ್ತಿ ಮಾಡುವುದೇ ನಿಜವಾದ ಆಧ್ಯಾತ್ಮಿಕ ಪ್ರಗತಿಯಾಗಿದೆ. ಅದಕ್ಕೆ ತದ್ವಿರುದ್ಧವಾಗಿ ಮನುಷ್ಯನು ತನ್ನ ಕರ್ತವ್ಯಗಳ ಪಾಲನೆಯಲ್ಲಿ ಎಷ್ಟು ಅಸಮರ್ಥ, ಅಪ್ರಾಮಾಣಿಕ ಮತ್ತು ಸೋಮಾರಿಯಾಗಿರುತ್ತಾನೋ ಹಾಗೂ ಈ ವಿಷಯದಲ್ಲಿ ಎಷ್ಟು ಅಹಂಕಾರ, ಬಂಡಾಯ ಮತ್ತು ಆಜ್ಞಾಭಂಗಗಳನ್ನು ಮಾಡುತ್ತಾನೋ ಅವನು ದೇವನಿಂದ ಅಷ್ಟೇ ದೂರವಾಗುತ್ತಾನೆ. ಈ ರೀತಿ ದೇವನಿಂದ ದೂರವಾಗುವುದೇ ಇಸ್ಲಾಮಿನ ದೃಷ್ಟಿಯಲ್ಲಿ ಆಧ್ಯಾತ್ಮಿಕ ಅಧಃ ಪತನವಾಗಿದೆ.

ಈಗಾಗಲೇ ಹೇಳಿರುವಂತೆ ಇಸ್ಲಾಮೀ ದೃಷ್ಟಿಕೋನದಂತೆ ಲೋಕದಲ್ಲಿ ಲೌಕಿಕ ಮನುಷ್ಯ ಮತ್ತು ಆಧ್ಯಾತ್ಮಿಕ ಧಾರ್ಮಿಕ ಮನುಷ್ಯ ಎಂಬ ಎರಡು ವರ್ಗೀಕರಣಗಳಿಲ್ಲ. ಇಬ್ಬರೂ ಒಂದೇ ಕಾರ್ಯಕ್ಷೇತ್ರದಲ್ಲಿದ್ದು ಕರ್ಮನಿರತರಾಗಬೇಕು. ಮಾತ್ರವಲ್ಲ ಧಾರ್ಮಿಕರೆನಿಸಿಕೊಂಡ ವ್ಯಕ್ತಿಯಂತೂ ಲೌಕಿಕ ಕ್ಷೇತ್ರದಲ್ಲಿ ಇನ್ನೂ ಹೆಚಿನ ಎಚ್ಚರ ಮತ್ತು ಏಕಾಗ್ರತೆಯಿಂದ ಕಾರ್ಯನಿರತನಾಗಬೇಕು. ಮನೆಯೊಳಗಿನ ವ್ಯವಹಾರಗಳಿಂದ ಆರಂಭಿಸಿ ಅಂತಾರಾಷ್ಟ್ರೀಯ ವ್ಯವಹಾರಗಳ ವರೆಗಿನ ಜೀವನದ ಎಲ್ಲ ಕ್ಷೇತ್ರಗಳಲ್ಲಿ `ಧಾರ್ಮಿಕ’ನಾದ ವ್ಯಕ್ತಿ ಇತರರಿಗಿಂತ ಹೆಚ್ಚು ಸಕ್ರಿಯವಾಗಿ ತನ್ನ ಕರ್ತವ್ಯಗಳನ್ನು ನೆರವೇರಿಸುತ್ತಾನೆ. ಆದರೆ ಈ ಎಲ್ಲ ವಿಷಯಗಳಲ್ಲಿ ಒಬ್ಬ ಧಾರ್ಮಿಕ ಮತ್ತು ಒಬ್ಬ ಲೌಕಿಕ ವ್ಯಕ್ತಿಯ ಮಧ್ಯೆ ಇರುವ ವ್ಯತ್ಯಾಸವು ದೇವನೊಂದಿಗಿನ ಅವರ ಸಂಬಂಧದ ಸ್ವರೂಪದಲ್ಲಿ ಮಾತ್ರ ಇರುವುದು. ಧಾರ್ಮಿಕನಾಗಿರುವ ವ್ಯಕ್ತಿ ಯಾವುದನ್ನು ಮಾಡುವುದಿದ್ದರೂ ತಾನು ತನ್ನೆಲ್ಲಾ ಕರ್ಮಗಳ ಬಗ್ಗೆ ದೇವನ ಮುಂದೆ ವಿಚಾರಣಾರ್ಹನೆಂಬ ಪ್ರಜ್ಞೆಯೊಂದಿಗೆ ಮಾಡುವನು. ಅವನು ತನ್ನೆಲ್ಲಾ ಕ್ರಿಯೆಗಳಲ್ಲಿ ದೇವ ಸಂಪ್ರಿತಿಯನ್ನು ಗಳಿಸುವ ಧ್ಯೇಯದೊಂದಿಗೆ ದೇವ ನಿಶ್ಚಿತ ಕಾನೂನು ಮತ್ತು ಮಿತಿ ಮೇರೆಗಳನ್ನು ಪಾಲಿಸುವನು. ಅತ್ತ, ಲೌಕಿಕನಾದ ವ್ಯಕ್ತಿ ಎಲ್ಲವನ್ನೂ ಬೇಜವಾಬ್ದಾರಿಯುತ ರೀತಿಯಲ್ಲಿ ಮಾಡುವನು. ದೇವನ ಬಗ್ಗೆ ನಿಶ್ಚಿಂತನಾಗಿ ಎಲ್ಲವನ್ನೂ ತನ್ನಿಚ್ಛೆಯಂತೆ ಮಾಡುವನು.

ಇದೇ ವ್ಯತ್ಯಾಸವು ಒಬ್ಬ ಧಾರ್ಮಿಕ ವ್ಯಕ್ತಿಯ ಎಲ್ಲ ಲೌಕಿಕ ಹಾಗೂ ಭೌತಿಕ ಚಟುವಟಿಕೆಗಳಿಗೂ ಆಧ್ಯಾತ್ಮಿಕ ಸ್ವರೂಪವನ್ನು ಕೊಟ್ಟು ಬಿಡುತ್ತದೆ. ಹಾಗೆಯೇ ಇದು ಒಬ್ಬ ಲೌಕಿಕ ವ್ಯಕ್ತಿಯ ಜೀವನವನ್ನು ಆಧ್ಯಾತ್ಮಿಕತೆಯ ಬೆಳಕಿನಿಂದ ದೂರವಿಡುತ್ತದೆ.

ಈಗ ನಾವು ಸಂಕ್ಷಿಪ್ತವಾಗಿ, ಲೌಕಿಕ ಜೀವನದ ಈ ಚಕ್ರವ್ಯೂಹದೊಳಗಿಂದ ಮನುಷ್ಯನ ಆಧ್ಯಾತ್ಮಿಕ ಪ್ರಗತಿಗೆ ಇಸ್ಲಾಮ್ ಯಾವ ರೀತಿ ದಾರಿ ಮಾಡಿಕೊಡುತ್ತದೆ ಎಂಬುದನ್ನು ನೋಡೋಣ.

ಈಮಾನ್ ಅಥವಾ ಸತ್ಯವಿಶ್ವಾಸವೇ ಈ ಆಧ್ಯಾತ್ಮಿಕ ಪ್ರಗತಿಯ ಮೊದಲ ಹೆಜ್ಜೆಯಾಗಿದೆ. ಒಬ್ಬ ದೇವನೇ ನನ್ನ ಒಡೆಯ, ಪಾಲಕ, ಸೃಷ್ಟಿಕರ್ತ, ಅವನ ಸಂಪ್ರೀತಿಯನ್ನು ಗಳಿಸವುದೇ ನನ್ನೆಲ್ಲಾ ಶ್ರಮಗಳ ಪರಮ ಧ್ಯೇಯ, ಅವನ ಆದೇಶಗಳೇ ನನ್ನ ಜೀವನದ ನಿಯಮಗಳು ಅಥವಾ ಕಾನೂನು ಎಂಬ ವಿಶ್ವಾಸವು ಮನುಷ್ಯನ ಮನ-ಮಸ್ತಿಷ್ಕಗಳಲ್ಲಿ ಅತ್ಯಂತ ಆಳವಾಗಿ ಬೇರೂರಬೇಕು.

ಈ ವಿಶ್ವಾಸವು ಎಷ್ಟು ದೃಢವಾಗಿ ಪಕ್ವವಾಗುವುದೋ ಮನುಷ್ಯನ ಇಸ್ಲಾಮೀ ಮನೋವೃತ್ತಿಯೂ ಅಷ್ಟೇ ಸಂಪೂರ್ಣಗೊಳ್ಳುವುದು ಮತ್ತು ಅಷ್ಟೇ ಹೆಚ್ಚಿನ ಸ್ಥಿರಚಿತ್ತತೆಯೊಂದಿಗೆ ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿ ಪ್ರಯಾಣಿಸಲು ಅವನಿಗೆ ಸಾಧ್ಯವಾಗುವುದು.

ಅನುಸರಣೆ- ಇದು ಆಧ್ಯಾತ್ಮಿಕ ಪ್ರಗತಿಯ ಮಾರ್ಗದ ಎರಡನೇ ಹೆಜ್ಜೆ. ಅಂದರೆ ಮನುಷ್ಯನು ತನ್ನ ಸ್ವೇಚ್ಛಾಚಾರಕ್ಕೆಲ್ಲಾ ವಿದಾಯ ಹೇಳಿ, ತಾನು ಯಾವ ದೇವನನ್ನು ತನ್ನ ಒಡೆಯನೆಂದು ಅಂಗೀಕರಿಸಿರುವನೋ ಅವನ ಆಜ್ಞೆಗಳನ್ನು ಜೀವನದಾದ್ಯಂತ, ಕಾರ್ಯತಃ ಪಾಲಿಸುವುದು. ಈ ಬಗೆಯ ಆಜ್ಞಾಪಾಲನೆ ಅಥವಾ ಅನುಸರಣೆಯನ್ನೇ ಕುರ್‍ಆನ್, `ಇಸ್ಲಾಮ್’ ಎಂದು ಕರೆದಿದೆ.

ತಕ್ವಾ ಅರ್ಥಾತ್ ಭಕ್ತಿ ಮತ್ತು ಶ್ರದ್ಧೆಯ ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿನ ಮೂರನೆಯ ಮಜಲಾಗಿದೆ. ಮನುಷ್ಯನು ತನ್ನ ಜೀವನದ ಸರ್ವ ರಂಗಗಳಲ್ಲೂ ತಾನು ತನ್ನ ಆಚಾರ-ವಿಚಾರಗಳಿಗೆಲ್ಲಾ ದೇವನ ಮುಂದೆ ಜವಾಬ್ದಾರನೆಂಬ ಜಾಗೃತ ಪ್ರಜ್ಞೆಯೊಂದಿಗೆ ಕರ್ಮನಿರತನಾಗಬೇಕು. ದೇವನು ಆದೇಶಿಸಿರುವ ಎಲ್ಲ ಕರ್ಮಗಳನ್ನು ಕಿಂಚಿತ್ತೂ ವಿಳಂಬವಿಲ್ಲದೆ ದಕ್ಷ ರೀತಿಯಲ್ಲಿ ಮಾಡಲು ಸದಾ ಸನ್ನದ್ಧನಾಗಿರಬೇಕು. ಹಾಗೆಯೇ ಅವನು ಯಾವುದನ್ನೆಲ್ಲಾ ಮಾಡಬಾರದೆಂದಿದ್ದಾನೋ ಅಂತಹ ಎಲ್ಲ ಕರ್ಮಗಳಿಂದ ದೂರವಿರಬೇಕು. ಯಾವುದು ಅಕ್ರಮ, ಯಾವುದು ಕಾನೂನುಬದ್ಧ, ಯಾವುದು ಧರ್ಮಬದ್ಧ, ಯಾವುದು ನಿಷಿದ್ಧ, ಯಾವುದು ಸರಿ, ಯಾವುದು ತಪ್ಪು ಎಂಬ ವಿಷಯದಲ್ಲಿ ಅತ್ಯಂತ ಎಚ್ಚರದಿಂದಿರಬೇಕು. ಇದನ್ನೇ ತಕ್ವಾ ಎನ್ನಲಾಗುತ್ತದೆ.

ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿ ಅತ್ಯಂತ ಪ್ರಧಾನ ಹಾಗೂ ಉನ್ನತ ಘಟ್ಟ `ಇಹ್ಸಾನ್’ನದು. `ಇಹ್ಸಾನ್’ ಎಂದರೆ ಮನುಷ್ಯನ ಇಚ್ಛೆಗಳೆಲ್ಲವೂ ಸಂಪೂರ್ಣವಾಗಿ ದೇವೇಚ್ಛೆಯೊಂದಿಗೆ ವಿಲೀನಗೊಳಿಸಬೇಕು. ದೇವನ ಇಚ್ಛೆಯೇ ಅವನ ಇಚ್ಛೆಯಾಗಬೇಕು. ದೇವನು ಯಾವುದನ್ನು ಮೆಚ್ಚುವುದಿಲ್ಲವೋ ಅದನ್ನು ಅವನೂ ಮೆಚ್ಚುವುದಿಲ್ಲ. ಯಾವೆಲ್ಲ ಕೆಡುಕುಗಳನ್ನು ದೇವನು ಈ ಲೋಕದಲ್ಲಿ ಬಯಸುವುದಿಲ್ಲವೊ ಆ ಕೆಡುಕುಗಳನ್ನು ಅವನು ಕೇವಲ ತನ್ನ ವ್ಯಕ್ತಿತ್ವದಿಂದ ಮಾತ್ರ ದೂರ ಮಾಡಿ ತೃಪ್ತನಾಗುವ ಬದಲು ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿ ಆ ಕೆಡುಕುಗಳನ್ನು ಲೋಕದಿಂದ ಅಳಿಸಿ ಹಾಕಲು ಶ್ರಮಿಸುತ್ತಾನೆ. ಹಾಗೆಯೇ ದೇವನು ಈ ಲೋಕದಲ್ಲಿ ಯಾವೆಲ್ಲಾ ಒಳಿತುಗಳು ಸ್ಥಾಪಿತವಾಗುವುದನ್ನು ಕಾಣಬಯಸುತ್ತಾನೋ ಆ ಎಲ್ಲ ಒಳಿತುಗಳನ್ನು ಅವನು ತನ್ನ ಸ್ವಂತ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತಾನೆ. ಮಾತ್ರವಲ್ಲ ಇಡೀ ಲೋಕದಲ್ಲಿ ಆ ಒಳಿತುಗಳನ್ನು ಸ್ಥಾಪಿಸಲಿಕ್ಕಾಗಿ ಅವನು ತನ್ನೆಲ್ಲಾ ಶಕ್ತಿ ಸಾಮಥ್ರ್ಯಗಳನ್ನು ಕೇಂದ್ರೀಕರಿಸಿ ಹೋರಾಡುತ್ತಾನೆ. ಈ ಔನ್ನತ್ಯಕ್ಕೆ ಒಬ್ಬ ವ್ಯಕ್ತಿ ತಲುಪಿದಾಗ ಅವನು ತನ್ನ ದೇವನಿಗೆ ಬಹಳ ನಿಕಟವಾಗಿ ಬಿಡುತ್ತಾನೆ. ಇದುವೇ ಮನುಷ್ಯನ ಆಧ್ಯಾತ್ಮಿಕ ಪ್ರಗತಿಯ ಉಚ್ಛ್ರಾಯ ಬಿಂದುವಾಗಿದೆ.

ಆಧ್ಯಾತ್ಮಿಕ ಔನ್ನತ್ಯವನ್ನು ಸಾದಿಸುವ ಈ ಮಾರ್ಗವು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ, ಜನಾಂಗ, ಸಮಾಜ ಮತ್ತು ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿಯಂತೆ ಒಂದು ಸಮಾಜ ಕೂಡಾ ವಿಶ್ವಾಸ, ಅನುಸರನೆ ಮತ್ತು ಶ್ರದ್ಧೆಯ ಮಜಲುಗಳನ್ನು ದಾಟಿ `ಇಹ್ಸಾನ್’ನ ಅತ್ಯುನ್ನತ ಮಟ್ಟವನ್ನು ತಲುಪಲು ಸಾಧ್ಯವಿದೆ. ಹಾಗೆಯೇ ಒಂದು ಇಡೀ ರಾಷ್ಟ್ರವು ಕೂಡಾ ತನ್ನ ಸಂಪೂರ್ಣ ವ್ಯವಸ್ಥೆಯೊಂದಿಗೇ ಮೂಮಿನ್, ಮುಸ್ಲಿಮ್, ಮುತ್ತಕೀ ಮತ್ತು ಮುಹ್ಸಿನ್ ಆಗಲು ಸಾಧ್ಯವಿದೆ.*

(* ಇಲ್ಲಿ `ಮೂಮಿನ್’ ಎಂದರೆ ಸತ್ಯಧರ್ಮ ಮತ್ತು ದಿವ್ಯ ಜೀವನ ವ್ಯವಸ್ಥೆಯ ಮೇಲೆ ದೃಢವಾದ ವಿಶ್ವಾಸ ಉಳ್ಳದ್ದು. `ಮುಸ್ಲಿಮ್’ ಎಂದರೆ ದೇವಾದೇಶಗಳಿಗೆ ಸಂಪೂರ್ಣ ಅಧೀನವಾದುದು, `ಮುತ್ತಕೀ’ ಎಂದರೆ ದೇವಾದೇಶಗಳ ಪಾಲನೆಯಲ್ಲಿ ಅತ್ಯಂತ ಶ್ರದ್ಧಾಪೂರ್ವಕ ಎಚ್ಚರದಿಂದ ವ್ಯವಹರಿಸುವಂತಹದು ಮತ್ತು `ಮುಹ್ಸಿನ್’ ಎಂದರೆ ದೇವೇಚ್ಛೆಯೊಂದಿಗೆ ಸಂಪೂರ್ಣ ತಾದಾತ್ಮ ಹೊಂದಿರುವಂತಹದ್ದು ಎಂದು ಅರ್ಥ.)

ಇಷ್ಟು ಮಾತ್ರವಲ್ಲ, ನಿಜವಾಗಿ ಸಂಪೂರ್ಣ ಮಾನವಕುಲವು ಆಧ್ಯಾತ್ಮಿಕ ಉತ್ಥಾನದ ಈ ಶ್ರೇಯಸ್ಕರ ಮಾರ್ಗದಲ್ಲಿ ನಡೆಯಲಾರಂಭಿಸಿ ಲೋಕದಲ್ಲೊಂದು ಪರಿಪೂರ್ಣ ಸದ್‍ವ್ಯವಸ್ಥೆ ಸ್ಥಾಪಿತವಾದಾಗ ಮಾತ್ರವೇ ಇಸ್ಲಾಮಿನ ಇಂಗಿತವು ಪೂರ್ತಿಗೊಳ್ಳುತ್ತದೆ.

ಈಗ ಕೊನೆಯಲ್ಲಿ ನಾವು, ವ್ಯಕ್ತಿ ಮತ್ತು ಸಮಾಜಗಳ ಆಧ್ಯಾತ್ಮಿಕ ತರಬೇತಿಗಾಗಿ ಇಸ್ಲಾಮ್ ನೆಚ್ಚಿಕೊಂಡಿರುವಂತಹ ವ್ಯವಸ್ಥೆ ಎಂತಹದೆಂಬುದನ್ನು ನೋಡೋಣ. ಮುಖ್ಯವಾಗಿ ಈ ವ್ಯವಸ್ಥೆಯಲ್ಲಿ ನಾಲ್ಕು ಅಂಗಗಳಿವೆ.

ಈ ಪೈಕಿ ಮೊದಲನೆಯ ಅಂಗ ನಮಾಝ್, ಇದು ದಿನನಿತ್ಯ ಐದು ಹೊತ್ತು ಮನುಷ್ಯನ ಮನಸ್ಸಿನಲ್ಲಿ ದೇವಸ್ಮರನೆಯನ್ನು ಬೆಳಗಿಸುತ್ತಾ ಅದನ್ನು ಜೀವಂತವಾಗಿಡುತ್ತದೆ. ಮನುಷ್ಯನ ಮನಸ್ಸಿನಲ್ಲಿ ದೇವಭಕ್ತಿಯನ್ನೂ ದೇವ ಪ್ರೇಮವನ್ನೂ ಬೆಳೆಸುತ್ತದೆ. ಆಗಾಗ ದೇವಾಜ್ಞೆಗಳನ್ನು ಅವನಿಗೆ ನೆನಪಿಸಿ ಅವುಗಳ ಪಾಲನೆಯ ಅಭ್ಯಾಸ ಮಾಡಿಸುತ್ತದೆ. ಈ ಕಡ್ಡಾಯ ನಮಾಝ್ ಕೇವಲ ವ್ಯಕ್ತಿಗತವಲ್ಲ. ಈ ಪಂಚ ನಮಾಝ್‌ಗಳನ್ನು ಸಾಮೂಹಿಕವಾಗಿ ಸಲ್ಲಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ. ಇಡೀ ಸಮಾಜವು ಸಾಮೂಹಿಕವಾಗಿ ಆಧ್ಯಾತ್ಮಿಕ ಶ್ರೇಯಸ್ಸಿನ ಮಾರ್ಗ ಹಿಡಿಯಬೇಕೆಂಬುದೇ ಇದರ ಉದ್ದೇಶ.

ಎರಡನೆಯದು ಉಪವಾಸ, ಪ್ರತಿವರ್ಷ ಒಂದು ತಿಂಗಳ ವರೆಗೆ ಕಡ್ಡಾಯವಾಗಿರುವ ನಿತ್ಯ ಉಪವಾಸವ್ರತವು ಮುಸಲ್ಮಾನರಾದ ವ್ಯಕ್ತಿಗಳನ್ನು ಮಾತ್ರವಲ್ಲದೆ ಒಟ್ಟು ಮುಸ್ಲಿಮ್ ಸಮಾಜವನ್ನೇ ದೇವಭಕ್ತಿ ಮತ್ತು ಶ್ರದ್ಧೆಯ ತರಬೇತಿಗೆ ಒಳಪಡಿಸುತ್ತದೆ.

ಮೂರನೆಯದು ಝಕಾತ್. ಇದು ಮುಸಲ್ಮಾನರಲ್ಲಿ ಆರ್ಥಿಕ ವಿಷಯಗಳಲ್ಲಿ ಔದಾರ್ಯ ತೋರುವ ಮತ್ತು ಪರಸ್ಪರ ಅನುಕಂಪ ಮತ್ತು ಸಹಾನುಭೂತಿಯ ಮನೋಭಾವವನ್ನು ಬೆಳೆಸುತ್ತದೆ. ಕೆಲವರು ಝಕಾತ್ ಎಂದರೆ ಕೇವಲ ಸರಕಾರೀ ತೆರಿಗೆ ಎಂದು ತಪ್ಪಾಗಿ ತಿಳಿದಿದ್ದಾರೆ. ನಿಜವಾಗಿ ಝಕಾತ್‍ನ ಹಿಂದಿನ ಪ್ರೇರಣೆಯು ನಿರ್ಜೀವ ತೆರಿಗೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಝಕಾತ್ ಅಂದರೆ ಬೆಳವಣಿಗೆಗೆ ಅಥವಾ ಶುದ್ಧೀಕರಣ ಎಂದರ್ಥ. ಈ ಶಬ್ದದ ಮೂಲಕ ಇಸ್ಲಾಮ್ ಜನರಿಗೆ ನೀವು ದೇವನ ಮೇಲಿನ ಭಕ್ತಿಯಿಂದ ನಿಮ್ಮ ಸಹೋದರರಿಗೆ ಕೊಡುವಂತಹ ಆರ್ಥಿಕ ಸಹಾಯವೆಲ್ಲಾ ನಿಮ್ಮ ಆತ್ಮಕ್ಕೆ ಔನ್ನತ್ಯವನ್ನು ಮತ್ತು ನಿಮ್ಮ ಚಾರಿತ್ರೃಕ್ಕೆ ಪವಿತ್ರೃವನ್ನು ಕೊಡುತ್ತದೆಂದು ಮನವರಿಕೆ ಮಾಡಿಸಬಯಸುತ್ತದೆ.

ನಾಲ್ಕನೆಯ ಅಂಗ ಹಜ್ಜ್. ಇದು ದೇವಭಕ್ತಿಯ ಬುನಾದಿಯಲ್ಲಿ ಸತ್ಯವಿಶ್ವಾಸಿಗಳ ಜಾಗತಿಕ ಭ್ರಾತೃತ್ವವನ್ನು ಸ್ಥಾಪಿಸುತ್ತದೆ. ಮಾತ್ರವಲ್ಲದೆ ಲೋಕದಲ್ಲಿ ಹಲವು ಶತಮಾನಗಳಿಮದ ಸತ್ಯದ ಕೆರೆಗೆ ಓಗೊಡುತ್ತಿರುವಮತಹ ಒಂದು ಸಕ್ರಿಯ ಅಂತಾರಾಷ್ಟ್ರೀಯ ಆಂದೋಲನವಾಗಿದೆ. ದೇವನಿಚ್ಛಿಸಿದರೆ ಈ ಆಂದೋಲನವು ಅಂತ್ಯದಿನದವರೆಗೂ ಜೀವಂತವಾಗಿ ಮುಂದುವರಿಯುವುದು.

SHARE THIS POST VIA