Home / ಇಸ್ಲಾಮಿನ ರಾಜಕೀಯ ವ್ಯವಸ್ಥೆ

ಇಸ್ಲಾಮಿನ ರಾಜಕೀಯ ವ್ಯವಸ್ಥೆ

ಇಸ್ಲಾಮೀ ರಾಜಕೀಯ ವ್ಯವಸ್ಥೆಯ ತಳಹದಿಯು ಮೂಲತಃ ಮೂರು ತತ್ವಗಳನ್ನು ಹೊಂದಿದೆ. ತೌಹೀದ್(ಏಕದೇವತ್ವ), ರಿಸಾಲತ್(ಪ್ರವಾದಿತ್ವ) ಮತ್ತು ಖಿಲಾಫತ್(ಪ್ರಾತಿನಿಧ್ಯ). ಈ ತತ್ವಗಳನ್ನು ಕೂಲಂಕುಷವಾಗಿ ತಿಳಿದುಕೊಳ್ಳದೆ, ಇಸ್ಲಾಮೀ ರಾಜಕೀಯ ವ್ಯವಸ್ಥೆಯನ್ನು ಸರಿಯಾಗಿ ಗ್ರಹಿಸಿಕೊಳ್ಳುವುದು ಕಷ್ಟ ಸಾಧ್ಯ. ಆದ್ದರಿಂದಲೇ ಮೊದಲು ಈ ಮೂರು ತತ್ವಗಳನ್ನೇ ಸಂಕ್ಷಿಪ್ತವಾಗಿ ವಿಶ್ಲೇಷಿಸೋಣ.

`ತೌಹೀದ್’ ಅಂದರೆ ಒಬ್ಬ ದೇವರು ಮಾತ್ರ ಈ ವಿಶ್ವ ಮತ್ತು ಇಲ್ಲಿರುವ ಎಲ್ಲರ ಸೃಷ್ಟಿಕರ್ತ. ಅವನೇ ಒಡೆಯ, ಅವನೇ ಪಾಲಕ, ಆಡಳಿತ ಅಧಿಕಾರವೆಲ್ಲವೂ ಅವನಿಗೆ ಸೇರಿದ್ದು. ಆಜ್ಞಾಪಿಸುವ ಮತ್ತು ನಿಷೇಧಿಸುವ ಹಕ್ಕುಳ್ಳವನು ಅವನು ಮಾತ್ರ. ಆರಾಧನೆ ಮತ್ತು ಅನುಸರಣೆಗೆ ಅರ್ಹತೆಯುಳ್ಳವನು ಸರ್ವ ಸಂಪೂರ್ಣವಾಗಿ ಅವನೊಬ್ಬನೇ. ನಮ್ಮ ಜೀವ, ಅಸ್ತಿತ್ವ, ನಮ್ಮ ಅಂಗಾಂಗಗಳು, ನಾವು ಬಳಸುವ ನಮ್ಮ ಸಾಮಥ್ರ್ಯಗಳು, ಲೋಕದ ಬೇರೆ ಬೇರೆ ವಸ್ತುಗಳ ಮೇಲೆ ನಮಗಿರುವ ಸ್ವಾಧೀನತೆ, ನಮ್ಮ ಸ್ವಾಧೀನದಲ್ಲಿರುವ ಈ ವಸ್ತುಗಳು- ಈ ಎಲ್ಲವನ್ನೂ ನಮಗೆ ಕೊಟ್ಟವನು ಅವನೊಬ್ಬನೇ. ಈ ಕೊಡುಗೆಗಳನ್ನು ನಮಗೆ ಕೊಡುವ ವಿಷಯದಲ್ಲಿ ಅವನ ಜೊತೆ ಬೇರೆ ಯಾರೂ ಪಾಲುದಾರನಿಲ್ಲ. ಆದ್ದರಿಂದ ನಮ್ಮ ಅಸ್ತಿತ್ವದ ಉದ್ಧೇಶ, ನಮ್ಮ ಶಕ್ತಿ-ಸಾಮಥ್ರ್ಯಗಳ ಉಪಯೋಗ ಮತ್ತು ನಮ್ಮ ಹಕ್ಕು ಅಧಿಕಾರಗಳ ಇತಿಮಿತಿಗಳನ್ನು ನಿರ್ಧರಿಸಬೇಕಾದವರು ನಾವಲ್ಲ. ಬೇರೆ ಯಾರಿಗೂ ಈ ವಿಷಯದಲ್ಲಿ ನಮಗೆ ದಯಪಾಲಿಸಿದ ಹಾಗೂ ಲೋಕದ ಇನ್ನೂ ಅಸಂಖ್ಯ ವಸ್ತುಗಳನ್ನು ನಮಗೆ ಬಳಸಲು ಕೊಟ್ಟ ಆ ಒಬ್ಬ ದೇವನಿಗೆ ಮಾತ್ರ ಸೇರಿದ್ದು.

ತೌಹೀದ್ ಅರ್ಥಾತ್ ಏಕದೇವಾಧಿಪತ್ಯದ ಈ ತತ್ವವು ಮನುಷ್ಯ ಪ್ರಭುತ್ವಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಒಬ್ಬ ಮನುಷ್ಯನಾಗಲೀ ಒಂದು ಕುಟುಂಬವಾಗಲೀ ಒಂದು ಜಾತಿ ಅಥವಾ ಪಂಗಡವಾಗಲೀ ಅಥವಾ ಒಂದು ಜನಾಂಗ ಅಥವಾ ರಾಷ್ಟ್ರವೇ ಆಗಿರಲಿ ಅಥವಾ ಒಟ್ಟು ಜಗತ್ತಿನ ಎಲ್ಲ ಮನುಷ್ಯರೇ ಆಗಲಿ ಅವರಿಗೆ ಅಧಿಪತ್ಯ ಅಥವಾ ಪ್ರಭುತ್ವವು ಸಲ್ಲುವುದಿಲ್ಲ. ಅದು ಸಲ್ಲುವುದು ಕೇವಲ ಒಬ್ಬ ದೇವನಿಗೆ ಮಾತ್ರ. ಅವನ ನಿರ್ಣಯಗಳು ದೇವನ ಕಾನೂನು ಯಾವ ಮಾಧ್ಯಮದ ಮೂಲಕ ದೇವನ ದಾಸರಿಗೆ ತಲುಪುತ್ತದೋ ಆ ಮಾಧ್ಯಮವೇ `ರಿಸಾಲತ್’ ಅರ್ಥಾತ್ ಪ್ರವಾದಿತ್ವವಾಗಿದೆ. ಈ ಮಾಧ್ಯಮದ ಮೂಲಕ ನಮಗೆ (ಮಾನವಕುಲಕ್ಕೆ) ಎರಡು ವಸ್ತುಗಳು ದಕ್ಕುತ್ತವೆ. ಮೊದಲನೆಯದು, ಸಾಕ್ಷಾತ್ ದೇವನೇ ತನ್ನ ಕಾನೂನನ್ನು ವಿಷದೀಕರಿಸಿರುವ `ಗ್ರಂಥ’. ಎರಡನೆಯದು ಪ್ರವಾದಿಗಳು ದೇವನ ಪ್ರತಿನಿಧಿಗಳೆಂಬ ನೆಲೆಯಲ್ಲಿ ತಮ್ಮ ಮಾತು ಕೃತಿಗಳ ಮೂಲಕ ಈ ಗ್ರಂಥಕ್ಕೆ ಕೊಟ್ಟ ಅಧಿಕೃತ, ಜೀವಂತ ವ್ಯಾಖ್ಯಾನ. ದೇವಗ್ರಂಥವು, ಮನುಷ್ಯನ ಜೀವನ ವ್ಯವಸ್ಥೆಯು ಯಾವ ಸಿದ್ಧಾಂತಗಳ ಬುನಾದಿಯಲ್ಲಿ ಸ್ಥಾಪಿತವಾಗಬೇಕೆಂಬುದನ್ನು ತಿಳಿಸುತ್ತದೆ. ಅತ್ತ ಪ್ರವಾದಿ(ಸ)ಯು ಪ್ರಸ್ತುತ ಬೇಡಿಕೆಯ ಪ್ರಕಾರ ಕಾರ್ಯತಃ ಒಂದು ಜೀವನ ವ್ಯವಸ್ಥೆಯನ್ನು ರೂಪಿಸಿ, ಅನುಷ್ಠಾನಿಸಿ ಮತ್ತು ಅದಕ್ಕೆ ಸಂಬಂಧಿಸಿದ ಅವಶ್ಯಕ ವಿವರಗಳೆಲ್ಲಾ ತಿಳಿಸಿ ನಮಗೊಂದು ಮಾದರಿಯನ್ನು ಒದಗಿಸಿದ್ದಾರೆ. ಈ ಎರಡು ವಸ್ತುಗಳ ಸಮನ್ವಯವನ್ನೇ ಇಸ್ಲಾಮೀ ಭಾಷೆಯಲ್ಲಿ `ಶರೀಅತ್’ ಎನ್ನಲಾಗುತ್ತದೆ. ಇದುವೇ ಮೂಲತಃ ಇಸ್ಲಾಮೀ ಸಂವಿಧಾನವೂ ಆಗಿದ್ದು ಇದರ ಆಧಾರದಲ್ಲೇ ಇಸ್ಲಾಮೀ ರಾಷ್ಟ್ರವು ರೂಪಗೊಳ್ಳುತ್ತದೆ.

ಈಗ `ಖಿಲಾಫತ್’ಅನ್ನು ನೋಡೋಣ. ಅರಬೀ ಭಾಷೆಯಲ್ಲಿ ಖಿಲಾಫತ್ ಅಂದರೆ ಪ್ರಾತಿನಿಧ್ಯ. ಇಸ್ಲಾಮೀ ದೃಷ್ಟಿಕೋನದಂತೆ ಮನುಷ್ಯನು ಭೂಮಿಯಲ್ಲಿ ದೇವನ ಪ್ರತಿನಿಧಿಯಾಗಿದ್ದಾನೆ. ಅಂದರೆ ಅವನು ದೇವ ನಿರ್ಮಿತ ಲೋಕದಲ್ಲಿ ದೇವದತ್ತ ಅಧಿಕಾರಗಳನ್ನು ಬಳಸುವವನಾಗಿದ್ದಾನೆ. ನೀವು ಒಬ್ಬ ವ್ಯಕ್ತಿಗೆ ನಿಮ್ಮ ಸೊತ್ತುಗಳ ಮೇಲ್ವಿಚಾರಣೆಯನ್ನು ವಹಿಸಿಕೊಡುವಾಗ ಮುಖ್ಯವಾಗಿ ನಾಲ್ಕು ವಿಷಯಗಳು ನಿಮ್ಮ ಗಮನದಲ್ಲಿರುತ್ತವೆ. ಮೊದಲನೆಯದಾಗಿ ಆ ಸೊತ್ತಿನ ನಿಜವಾದ ಒಡೆಯರು ನೀವೇ ಆಗಿದ್ದೀರಿ ಹೊರತು ಆ ವ್ಯಕ್ತಿಯಲ್ಲ. ಎರಡನೆಯದಾಗಿ ನಿಮ್ಮ ಸೊತ್ತುಗಳ ವಿಷಯದಲ್ಲಿ ಅವನು ನಿಮ್ಮ ನಿರ್ದೇಶನಗಳ ಪ್ರಕಾರ ವ್ಯವಹರಿಸಬೇಕು. ಮೂರನೆಯದಾಗಿ ಅವನು ಆ ಸೊತ್ತುಗಳ ವಿಷಯದಲ್ಲಿ ತನ್ನ ಅಧಿಕಾರಗಳನ್ನು ನೀವು ನಿಗದಿಗೊಳಿಸಿದ ಮಿತಿಗಳಿಗೆ ಬದ್ಧನಾಗಿ ಬಳಸಬೇಕು. ನಾಲ್ಕನೆಯದಾಗಿ ನಿಮ್ಮ ಸೊತ್ತುಗಳಿಂದ ಅವನು ನಿಮ್ಮ ಇಂಗಿತಗಳನ್ನು ಈಡೇರಿಸಬೇಕೇ ವಿನಾ ತನ್ನ ಇಂಗಿತಗಳ ಈಡೇರಿಕೆಗಾಗಿ ನಿಮ್ಮ ಸೊತ್ತುಗಳನ್ನು ಬಳಸಬಾರದು. ಈ ನಾಲ್ಕು ನಿಬಂಧನೆಗಳು ಪ್ರಾತಿನಿಧ್ಯದ ಅವಿಭಾಜ್ಯ ಅಂಗಗಳಾಗಿದ್ದು ಪ್ರಾತಿನಿಧ್ಯ ಎಂದೊಡನೆ ಸಹಜವಾಗಿಯೇ ಅದರ ಇದೇ ಸ್ವರೂಪವು ನಮಗೆ ಗೋಚರಿಸುತ್ತದೆ. ಯಾರಾದರೂ ಪ್ರತಿನಿಧಿಯು ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ನೀವು ಅವನನ್ನು ಪ್ರತಿನಿಧ್ಯದ ಮಿತಿಗಳನ್ನು ಮೀರಿದವನೆಂದೂ ಪ್ರಾತಿನಿಧ್ಯದಲ್ಲಿ ಸ್ವಾಭಾವಿಕವಾಗಿ ಒಳಗೊಂಡಿರುವ ಕರಾರನ್ನು ಮುರಿದವನೆಂದೂ ಪರಿಗಣಿಸುತ್ತೀರಿ.

ಇಸ್ಲಾಮ್, ಮನುಷ್ಯನನ್ನು ದೇವನ ಪ್ರತಿನಿಧಿ ಎನ್ನುವುದು ಇದೇ ಅರ್ಥದಲ್ಲಿ. ಅದರ ಕಲ್ಪನೆಯು `ಖಿಲಾಫತ್’ ಈ ನಾಲ್ಕು ನಿಬಂಧನೆಗಳನ್ನು ಒಳಗೊಂಡಿದೆ. ಇಸ್ಲಾಮಿನ ಈ ರಾಜಕೀಯ ಸಿದ್ಧಾಂತದ ಪ್ರಕಾರ ರೂಪುಗೊಳ್ಳುವ ಯಾವುದೇ ರಾಷ್ಟ್ರದಲ್ಲಿ ಸ್ಥಾಪಿತವಾಗುವ ಖಿಲಾಫತ್ ಅಥವಾ ಆಡಳಿತೆಯು ನಿಜವಾಗಿ ದೇವಾಧಿಪತ್ಯಕ್ಕೆ ಅಧೀನವಾಗಿರುವ ಮನುಷ್ಯ ಆಡಳಿತೆಯಾಗಿರುವುದು. ದೇವನ ಈ ಭೂಮಿಯಲ್ಲಿ ಅವನಿತ್ತ ಮಾರ್ಗದರ್ಶನಗಳ ಪ್ರಕಾರ, ಅವನು ನಿರ್ಣಯಿಸಿದ ಮಿತಿ-ಮೇರೆಗಳ ಒಳಗಿದ್ದುಕೊಂಡು ಅವನ ಅಭೀಷ್ಟವನ್ನು ಪೂರ್ತಿಗೊಳಿಸುವುದೇ ಈ ಆಡಳಿತೆಯ ಕರ್ತವ್ಯವಾಗಿರುವುದು.

ಖಿಲಾಫತ್ ಅರ್ಥಾತ್ ದೇವಾಧಿಪತ್ಯಕ್ಕೆ ಬದ್ಧವಾದ ಮನುಷ್ಯನ ಪ್ರಾತಿನಿಧಿಕ ಆಡಳಿತದ ಬಗ್ಗೆ ಇನ್ನೊಂದು ಮಹತ್ವದ ವಿಷಯವನ್ನೂ ತಿಳಿದಿರಬೇಕು. ಅದೇನೆಂದರೆ, ಇಸ್ಲಾಮೀ ರಾಜಕೀಯ ಸಿದ್ಧಾಂತವು ಖಿಲಾಫತ್‍ನ ಹೊಣೆಗಾರಿಕೆಯನ್ನು ಕೇವಲ ಒಬ್ಬ ವ್ಯಕ್ತಿ ಒಂದು ಕುಟುಂಬ ಅಥವಾ ಒಂದು ಜನಾಂಗಕ್ಕೆ ಮಾತ್ರ ವಹಿಸಿಕೊಡುವುದಿಲ್ಲ. ಅದು ಏಕದೇವಾಧಿಪತ್ಯ ಮತ್ತು ಪ್ರವಾದಿತ್ವದ ಮೂಲ ತತ್ವಗಳನ್ನು ಅಂಗೀಕರಿಸಿ, ಪ್ರಾತಿನಿಧ್ಯದ ಮತ್ತುಳಿದ ಬೇಡಿಕೆಗಳನ್ನೆಲ್ಲಾ ಈಡೇರಿಸಬಲ್ಲ ಒಟ್ಟು ಸಮಾಜಕ್ಕೆ `ಖಿಲಾಫತ್’ನ ಹೊಣೆಯನ್ನು ಕೊಡುತ್ತದೆ. ಇಂತಹ ಸಮಾಜವು ಸಾಮೂಹಿಕವಾಗಿ ಪ್ರಾತಿನಿಧ್ಯದ ಹೊಣೆ ಹೊಂದಿದ್ದು, ಅದರ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿನಿಧಿಯ ಸ್ಥಾನದಲ್ಲಿರುತ್ತಾನೆ. ಇಸ್ಲಾಮಿನಲ್ಲಿ `ಪ್ರಜಾಸತ್ತೆ’ ಆರಂಭಗೊಳ್ಳುವುದೂ ಇಲ್ಲಿಂದಲೇ.

ಇಸ್ಲಾಮೀ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪ್ರಾತಿನಿಧ್ಯದ ಹಕ್ಕು- ಅಧಿಕಾರಗಳನ್ನು ಹೊಂದಿರುತ್ತಾನೆ. ಈ ಹಕ್ಕು ಮತ್ತು ಹೊಣೆಗಾರಿಗಳ ವಿಷಯದಲ್ಲಿ ಎಲ್ಲ ವ್ಯಕ್ತಿಗಳೂ ಸಮಾನ ಪಾಲುದಾರರಾಗಿರುವರು. ಯಾರಿಗೂ ವಿಶೇಷ ಆದ್ಯತೆಗಳಿರುವುದಿಲ್ಲ. ಹಾಗೆಯೇ ಯಾರನ್ನೂ ಈ ಹಕ್ಕುಗಳಿಂದ ವಂಚಿತರಾಗಿಡುವಂತಿಲ್ಲ. ರಾಷ್ಟ್ರದ ಆಡಳಿತವನ್ನು ಯಾರು ನಡೆಸಬೇಕೆಂಬುದನ್ನು ಜನರೇ ತಮ್ಮ ಇಚ್ಛೆಗನುಸಾರ ತೀರ್ಮಾನಿಸುವರು. ಜನರೇ ತಮ್ಮ ಪ್ರಾತಿನಿಧ್ಯದ ಹಕ್ಕಿನ ಒಂದಂಶವನ್ನು ಈ ಮೂಲಕ ಆಡಳಿತಗಾರರಿಗೆ ವಹಿಸಿಕೊಡುವರು. ಆಡಳಿತಗಾರರ ಆಯ್ಕೆಯು ಜನಾಭಿಪ್ರಾಯದಂತೆ ನಡೆಯುವುದು. ಹಾಗೆಯೇ ಆಡಳಿತ ನಿರ್ವಹಣೆ ಕೂಡಾ ಜನತೆಯೊಂದಿಗೆ ಸಮಾಲೋಚಿಸಿ ನಡೆಯಬೇಕು. ಜನತೆಯ ವಿಶ್ವಾಸ ಗಳಿಸಿದವರು ಮಾತ್ರ ಅವರ ಪರವಾಗಿ ಖಿಲಾಫತ್ ಅರ್ಥಾತ್ ಪ್ರಾತಿನಿಧ್ಯದ ಹೊಣೆಯನ್ನು ನಿರ್ವಹಿಸಬಹುದು. ಜನತೆಯ ವಿಶ್ವಾಸ ಕಳಕೊಂಡವರು ಆ ಹುದ್ದೆಯನ್ನು ಬಿಟ್ಟು ಕೊಡಬೇಕಾಗುವುದು.

ಈ ರೀತಿ ಇಸ್ಲಾಮೀ ಪ್ರಜಾಸತ್ತೆಯು ಬೇರೆ ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಷ್ಟೇ ಸಂಪೂರ್ಣ ಪ್ರಜಾಸತ್ತೆಯಾಗಿರುತ್ತದೆ. ಆದರೆ ಇಲ್ಲಿ ಇಸ್ಲಾಮೀ ಪ್ರಜಾಸತ್ತೆಗೂ ಪಾಶ್ಚಿಮಾತ್ಯ ಪ್ರಜಾಸತ್ತೆಗು ಒಂದು ಮುಖ್ಯ ವ್ಯತ್ಯಾಸವಿದೆ. ಅದೇನೆಂದರೆ ಪಾಶ್ಚಿಮಾತ್ಯ ರಾಜಕೀಯ ವ್ಯವಸ್ಥೆಯು `ಪ್ರಜಾಸತ್ತಾತ್ಮಕ ಸರ್ವಾಧಿಪತ್ಯ’ವನ್ನು ಪ್ರತಿಪಾದಿಸುತ್ತದಾದರೆ ಇಸ್ಲಾಮ್ `ಪ್ರಜಾಸತ್ತಾತ್ಮಕ ಖಿಲಾಫತ್'(ಪ್ರಾತಿನಿಧ್ಯ)ವನ್ನು ಪ್ರತಿಪಾದಿಸುತ್ತದೆ. ಅಲ್ಲಿ ಪ್ರಜೆಗಳೇ ಅಧಿಪತಿಗಳಾಗಿರುತ್ತಾರೆ. ಆದರೆ ಇಲ್ಲಿ ಅಧಿಪತ್ಯ ದೇವನಿಗೆ ಮಾತ್ರ ಸಲ್ಲುತ್ತದೆ. ಜನತೆ ಕೇವಲ ಪ್ರತಿನಿಧಿಗಳಾಗಿರುತ್ತಾರೆ. ಅಲ್ಲಿ ಜನತೆಯೇ ತಮ್ಮ ಸಂವಿಧಾನವನ್ನು ರೂಪಿಸುತ್ತಾರೆ. ಇಲ್ಲಿ ದೇವನು ತನ್ನ ಪ್ರವಾದಿಯ ಮೂಲಕ ಗಳಿಸಿದ ಸಂವಿಧಾನಕ್ಕೆ ಜನತೆ ಬದ್ಧರಾಗಿರುತ್ತಾರೆ. ಅಲ್ಲಿ ಜನತೆಯ ಇಚ್ಛೆಗಳ ಈಡೇರಿಕೆಯೇ ಸರಕಾರದ ಕರ್ತವ್ಯವಾಗಿರುತ್ತದೆ. ಇಲ್ಲಿ ದೇವನ ಇಚ್ಛೆಗಳ ಈಡೇರಿಕೆಯೇ ಸರಕಾರ ಮತ್ತು ಅದನ್ನು ನಡೆಸುವವರ ಕರ್ತವ್ಯವಾಗಿರುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಪಾಶ್ಚಿಮಾತ್ಯ ವ್ಯವಸ್ಥೆಯಲ್ಲಿ ಜನರೇ ಸರ್ವಾಧಿಪತಿಗಳಾಗಿದ್ದು ತಮ್ಮ ಅಧಿಕಾರಗಳನ್ನೆಲ್ಲಾ ಸ್ವೇಚ್ಛಾನುಸಾರ ಬಳಸಲು ಅವರಿಗೆ ಹಕ್ಕಿರುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಸ್ಲಾಮೀ ಪ್ರಜಾಸತ್ತಾತ್ಮಕ ವ್ಯವಸ್ಥೆಯು ದೈವಿಕ ಸಂವಿಧಾನದ ಪಾಲನೆಗೆ ಬದ್ಧವಾಗಿದ್ದು, ಅಲ್ಲಿ ಜನತೆ ತಮ್ಮ ಅಧಿಕಾರಗಳನ್ನೆಲ್ಲಾ ದೇವ ಮಾರ್ಗದರ್ಶನದ ಪ್ರಕಾರ ಹಾಗೂ ದೇವನಿಶ್ಚಿತ ಮಿತಿಮೇರೆಗಳೊಳಗಿದ್ದು ಬಳಸುತ್ತಾರೆ.

ಈಗ ನಾವು ತೌಹೀದ್, ರಿಸಾಲತ್ ಮತ್ತು ಖಿಲಾಫತ್‍ನ ಆಧಾರದಲ್ಲಿ ರೂಪುಗೊಳ್ಳುವ ಈ ಇಸ್ಲಾಮೀ ರಾಷ್ಟ್ರದ ಸಂಕ್ಷಿಪ್ತ ಹಾಗೂ ಅಷ್ಟೇ ಸ್ಪಷ್ಟ ರೇಖೆಗಳನ್ನು ಅಭ್ಯಸಿಸೋಣ.

ಪವಿತ್ರ ಕುರ್‍ಆನಿನಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿರುವಂತೆ, ದೇವನು ನಮ್ಮ ಜೀವನದಲ್ಲಿ ಯಾವೆಲ್ಲಾ ಒಳಿತುಗಳನ್ನು ಕಾಣ ಬಯಸುತ್ತಾನೋ ಅವುಗಳನ್ನು ಸ್ಥಾಪಿಸುವುದು, ಪೋಷಿಸುವುದು ಮತ್ತು ಬೆಳೆಸುವುದೇ ಒಂದು ಇಸ್ಲಾಮೀ ರಾಷ್ಟ್ರದ ಕರ್ತವ್ಯವಾಗಿದೆ. ಹಾಗೆಯೇ ದೇವನು ಮನುಷ್ಯ ಜೀವನದಲ್ಲಿ ನೋಡಲು ಇಷ್ಟಪಡದಂತಹ ಕೆಡುಕುಗಳನ್ನು ತಡೆಯುವುದು, ನಿರುತ್ತೇಜಿಸುವುದು ಮತ್ತು ಅವುಗಳನ್ನು ಮೂಲೋತ್ಪಾಟಿಸುವುದು ಕೂಡಾ ಇಸ್ಲಾಮೀ ರಾಷ್ಟ್ರದ ಕರ್ತವ್ಯವಾಗಿದೆ. ಕೇವಲ ರಾಷ್ಟ್ರದ ಆಡಳಿತವನ್ನು ನೋಡಿಕೊಳ್ಳುವುದು ಅಥವಾ ಕೇವಲ ಯಾವುದರೊಂದು ಪ್ರತ್ಯೇಕ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದು ಮಾತ್ರ ಇಸ್ಲಾಮೀ ರಾಷ್ಟ್ರದ ಉದ್ಧೇಶವಲ್ಲ. ಇಸ್ಲಾಮ್ ತನ್ನ ಆಡಳಿತ ವ್ಯವಸ್ಥೆಯ ಮುಂದೆ ಒಂದು ಅತ್ಯುನ್ನತ ಗುರಿಯನ್ನು ಇರಿಸಿದೆ. ಆ ಗುರಿಯನ್ನು ತಲುಪಲು ಆಡಳಿತೆಯು ತನ್ನೆಲ್ಲಾ ಲಭ್ಯ ಮಾಧ್ಯಮಗಳನ್ನು ಶಕ್ತಿ, ಸಾಮಥ್ರ್ಯ, ಸೌಲಭ್ಯಗಳನ್ನು ಬಳಸಬೇಕು. ದೇವನು ತನ್ನ ಭೂಮಿಯ ಮೇಲಿನ ಮನುಷ್ಯರ ಬದುಕಿನಲ್ಲಿ ಎಂತಹ ಪಾವಿತ್ರೃ, ಶಿಸ್ತು, ಸುಧಾರಣೆ ಮತ್ತು ಪ್ರಗತಿಯನ್ನು ಕಾಣ ಬಯಸುತ್ತಾನೋ ಅವುಗಳನ್ನು ಸ್ಥಾಪಿಸುವುದು ಮತ್ತು ದೇವನ ಈ ಲೋಕ ಮತ್ತು ಮಾನವ ಕುಲಕ್ಕೆ ವಿನಾಶಕಾರಿಯೆಂದು ಪರಿಗಣಿಸಿರುವ ಎಲ್ಲ ಬಗೆಯ ಕೆಡುಕುಗಳನ್ನು ನಿರ್ನಾಮ ಮಾಡುವುದೇ ಆ ಉನ್ನತ ಗುರಿ. ಈ ಗುರಿಯನ್ನು ಮುಂದಿಡುವುದರ ಜೊತೆಗೇ ಇಸ್ಲಾಮ್, ಒಳಿತು-ಕೆಡುಕುಗಳೆರಡನ್ನೂ ನಮ್ಮ ಮುಂದೆ ಸ್ಪಷ್ಟಪಡಿಸಿ ಬಿಡುತ್ತದೆ. ಅಪೇಕ್ಷಿತ ಒಳಿತುಗಳು ಮತ್ತು ಅನಪೇಕ್ಷಿತ ಕೆಡುಕುಗಳ ಸುಸ್ಪಷ್ಟ ಚಿತ್ರಣವನ್ನು ಅದು ನಮಗೆ ಕೊಡುತ್ತದೆ. ಅದನ್ನೇ ಮುಂದಿಟ್ಟು, ಯಾವುದೇ ಕಾಲದ, ಯಾವುದೇ ಪರಿಸರದ ಇಸ್ಲಾಮೀ ರಾಷ್ಟ್ರವು ತನ್ನ ಸುಧಾರಣಾ ಕಾರ್ಯಕ್ರಮವನ್ನು ರೂಪಿಸುತ್ತದೆ.

ಜೀವನದ ಎಲ್ಲ ಕ್ಷೇತ್ರಗಳಲ್ಲಿ ನೈತಿಕ ನಿಯಮಗಳನ್ನು ಪಾಲಿಸಬೇಕೆಂಬುದು ಇಸ್ಲಾಮಿನ ಶಾಶ್ವತ ಬೇಡಿಕೆಯಾಗಿದೆ. ಆದ್ದರಿಂದ ಅದು ತನ್ನ ರಾಷ್ಟ್ರ ವ್ಯವಸ್ಥೆಯಲ್ಲೂ ತನ್ನ ರಾಜಕೀಯವು ನ್ಯಾಯ, ನಿಷ್ಠುರ, ನಿಸ್ವಾರ್ಥ ಹಾಗೂ ಸತ್ಯ ಮತ್ತು ಸಂಪೂರ್ಣ ಪ್ರಾಮಾಣಿಕತೆಯಲ್ಲಿ ಅಧಿಷ್ಠಿತವಾಗಿರಬೇಕೆಂಬ ನಿಶ್ಚಿತ ಧೋರಣೆಯನ್ನು ಹೊಂದಿದೆ. ಅದು ಯಾವುದೇ ರಾಷ್ಟ್ರೀಯ, ಆಡಳಿತಾತ್ಮಕ ಅಥವಾ ಜನಾಂಗೀಯ ಹಿತಾಸಕ್ತಿಗಾಗಿ ಸುಳ್ಳು, ವಂಚನೆ ಅಥವಾ ಅನ್ಯಾಯವನ್ನು ಯಾವ ಸ್ಥಿತಿಯಲ್ಲೂ ಸಹಿಸುವುದಿಲ್ಲ. ದೇಶದ ಒಳಗಣ ಸರಕಾರ ಮತ್ತು ಜನತೆಯ ಸಂಬಂಧದ ವಿಷಯವಿರಲಿ, ಇತರ ರಾಷ್ಟ್ರಗಳೊಂದಿಗಿನ ಸಂಬಂಧದ ವಿಷಯವಿರಲಿ- ಯಾವುದರಲ್ಲೂ ಅದು ಸತ್ಯ, ಪ್ರಾಮಾಣಿಕತೆ ಮತ್ತು ನ್ಯಾಯಕ್ಕೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆ ಕೊಡುತ್ತದೆ. ಇಸ್ಲಾಮ್, ಮುಸ್ಲಿಮ್ ವ್ಯಕ್ತಿಗಳಂತೆ ಮುಸ್ಲಿಮ್ ರಾಷ್ಟ್ರಗಳನ್ನು ಕೂಡಾ ಕೊಟ್ಟ ಮಾತಿಗೆ ತಪ್ಪದಂತೆ, ಕೊಡು-ಕೊಳ್ಳುವ ವಿಷಯದಲ್ಲಿ ಸಮಾನ ಮಾನದಂಡಗಳನ್ನು ಅನುಸರಿಸುವಂತೆ, ನುಡಿದ ಪ್ರಕಾರ ನಡೆಯುವಂತೆ, ಹಕ್ಕುಗಳ ಜೊತೆ ಕರ್ತವ್ಯಗಳನ್ನೂ ನೆನಪಿಟ್ಟುಕೊಳ್ಳುವಂತೆ ಮತ್ತು ಬೇರೊಬ್ಬನ ಕರ್ತವ್ಯಗಳ ಜೊತೆ ಅವನ ಹಕ್ಕುಗಳನ್ನೂ ಗಮನದಲ್ಲಿಟ್ಟುಕೊಳ್ಳುವಂತೆ ನಿರ್ಬಂಧಿಸುತ್ತದೆ. ಹಾಗೆಯೇ, ಶಕ್ತಿಯನ್ನು ಅನ್ಯಾಯಕ್ಕೆ ಬದಲು ನ್ಯಾಯ ಸ್ಥಾಪನೆಗಾಗಿ ಬಳಸುವಂತೆ, ಹಕ್ಕುಗಳನ್ನು ಅರಿತು ಗೌರವಿಸುವಂತೆ ಮತ್ತು ಅಧಿಕಾರವನ್ನು ದೇವದತ್ತ ಹೊಣೆಗಾರಿಕೆಯೆಂದು ತಿಳಿಯುತ್ತಾ, ಈ ಹೊಣೆಗಾರಿಕೆಯ ಬಗ್ಗೆ ತಮ್ಮ ಒಡೆಯನಾದ ದೇವನಿಗೆ ಕೂಲಂಕುಷ ಲೆಕ್ಕ ಸಮರ್ಪಿಸಲಿಕ್ಕಿದೆ ಎಂಬ ಪ್ರಜ್ಞೆಯೊಂದಿಗೆ ಬಳಸಬೇಕೆಂದು ಅದು ಆದೇಶಿಸುತ್ತದೆ.

ಇಸ್ಲಾಮೀ ರಾಷ್ಟ್ರವು ಭೂಮಿಯ ಯಾವುದಾದರೊಂದು ಭಾಗದಲ್ಲಿ ಮಾತ್ರವೇ ಸ್ಥಾಪಿತವಾಗಿದ್ದರೆ, ಆಗಲೂ ಅದು ಮಾನವೀಯ ಹಾಗೂ ನಾಗರಿಕ ಹಕ್ಕುಗಳನ್ನು ಕೇವಲ ತನ್ನ ಭೌಗೋಳಿಕ ಗಡಿಗಳಿಗೆ ಸೀಮಿತವಾಗಿಡುವುದಿಲ್ಲ. ಇಸ್ಲಾಮ್, ಮಾನವಕುಲದ ಸದಸ್ಯನಾಗಿರುವ ಪ್ರತಿಯೊಬ್ಬ ಮನುಷ್ಯನಿಗೂ ಕೆಲವು ಮೂಲಭೂತ ಹಕ್ಕುಗಳನ್ನು ಕೊಟ್ಟಿದ್ದು, ಯಾವುದೇ ಸ್ಥಿತಿಯಲ್ಲಿ ಆ ಹಕ್ಕುಗಳನ್ನು ಗೌರವಿಸಿ ಕಾಪಾಡಲು ಅದು ಆದೇಶಿಸುತ್ತದೆ. ಒಬ್ಬ ಮನುಷ್ಯನು ಇಸ್ಲಾಮಿ ರಾಷ್ಟ್ರದ ಒಳಗಿರಲಿ, ಹೊರಗಿರಲಿ, ಮಿತ್ರನಾಗಿರಲಿ, ಶತ್ರುವಾಗಿರಲಿ, ಇಸ್ಲಾಮೀ ರಾಷ್ಟ್ರದ ಜೊತೆ ಶಾಂತಿಯುತ ಸಂಬಂಧವುಳ್ಳವನಾಗಿರಲಿ ಅಥವಾ ಅದರ ವಿರುದ್ಧ ಯುದ್ಧ ನಿರತನಾಗಿರಲಿ ಯಾವುದೇ ಸ್ಥಿತಿಯಲ್ಲಿ ಅವನ ಪ್ರಾಣವು ಗೌರವಾರ್ಹವಾಗಿದ್ದು ಅನ್ಯಾಯವಾಗಿ ಅದನ್ನು ನಾಶ ಮಾಡುವಂತಿಲ್ಲ. ಯಾವ ಸ್ಥಿತಿಯಲ್ಲೂ ಮಹಿಳೆಯರು, ಮಕ್ಕಳು, ವೃದ್ಧರು, ರೋಗಿಗಳು ಮತ್ತು ಗಾಯಾಳುಗಳ ಮೇಲೆ ಕೈ ಮಾಡುವಂತಿಲ್ಲ. ಹೆಣ್ಣಿನ ಮಾನವು ಗೌರವಾರ್ಹವಾಗಿದ್ದು ಎಂಥ ಸ್ಥಿತಿಯಲ್ಲೂ ಅದಕ್ಕೆ ಚ್ಯುತಿ ತರುವಂತಿಲ್ಲ. ಒಬ್ಬ ವ್ಯಕ್ತಿ ಶತ್ರು ರಾಷ್ಟ್ರದವನೇ ಆಗಿದ್ದರೂ ಅವನು ಹಸಿದಿದ್ದರೆ ಅನ್ನ ಪಡೆಯುವುದು, ಅವನ ಬಳಿ ಉಡಲಿಕ್ಕೆ ಇಲ್ಲದಿದ್ದರೆ ವಸ್ತ್ರ ಪಡೆಯುವುದು, ಅವನು ಗಾಯಾಳುವಾಗಿದ್ದರೆ ಚಿಕಿತ್ಸೆ ಮತ್ತು ಆರೈಕೆ ಪಡೆಯುವುದು ಅವನ ಹಕ್ಕಾಗಿರುತ್ತದೆ. ಈ ಹಕ್ಕನ್ನು ಗೌರವಿಸಲಾಗುವುದು.

ಮಾನವಕುಲದ ಸದಸ್ಯರೆಂಬ ನೆಲೆಯಲ್ಲಿ ಇಸ್ಲಾಮ್, ಮನುಷ್ಯರಿಗೆ ಇಂತಹ ಇನ್ನೂ ಹಲವಾರು ವ್ಯಾಪಕ ಹಕ್ಕುಗಳನ್ನು ಕೊಟ್ಟಿದೆ. ಇಸ್ಲಾಮೀ ಸಂವಿಧಾನದಲ್ಲಿ ಆ ಹಕ್ಕುಗಳಿಗೆ ಮೂಲಭೂತ ಹಕ್ಕುಗಳ ಸ್ಥಾನವಿರುತ್ತದೆ. ಇನ್ನು ಪೌರತ್ವದ ಪ್ರಶ್ನೆ. ಇಸ್ಲಾಮ್ ಪೌರತ್ವವನ್ನು ಕೇವಲ ಇಸ್ಲಾಮೀ ರಾಷ್ಟ್ರದ ಗಡಿಗಳೊಳಗೆ ಜನಿಸಿದವರಿಗೆ ಮಾತ್ರ ಕೊಡುವುದಿಲ್ಲ. ಲೋಕದ ಯಾವುದೇ ಮೂಲೆಯಲ್ಲಿರುವ ಒಬ್ಬ ಮುಸಲ್ಮಾನನು ಒಂದು ಇಸ್ಲಾಮೀ ರಾಷ್ಟ್ರದ ಗಡಿಯೊಳಗೆ ಪ್ರವೇಶಿಸಿದೊಡನೆ ಅವನು ತನ್ನಿಂತಾನೇ ಆ ರಾಷ್ಟ್ರದ ಪೌರನೆನಿಸುತ್ತಾನೆ. ಮಾತ್ರವಲ್ಲ, ಆ ದೇಶದಲ್ಲೇ ಹುಟ್ಟಿ ಬೆಳೆದ ಪೌರರಷ್ಟೇ ಹಕ್ಕು ಅಧಿಕಾರಗಳು ಅವನಿಗೂ ಪ್ರಾಪ್ತವಾಗುತ್ತವೆ. ಲೋಕದಲ್ಲಿ ಇರುವ ಎಲ್ಲ ಇಸ್ಲಾಮೀ ರಾಷ್ಟ್ರಗಳ ಮಧ್ಯೆ ಪೌರತ್ವವು ಸಮಾನವಾಗಿರುವುದು. ಒಬ್ಬ ಮುಸಲ್ಮಾನನಿಗೆ ಯಾವುದಾದರೂ ಇಸ್ಲಾಮೀ ರಾಷ್ಟ್ರದೊಳಗೆ ಪ್ರವೇಶಿಸಲು ಪ್ರತ್ಯೇಕ ರಹದಾರಿ(Passport)ಯ ಅಗತ್ಯವಿರುವುದಿಲ್ಲ. ಒಬ್ಬ ಮುಸಲ್ಮಾನನು ಯಾವುದೇ ಜನಾಂಗೀಯ, ರಾಷ್ಟ್ರೀಯ ಅಥವಾ ವರ್ಗೀಯ ಪಕ್ಷಪಾತವಿಲ್ಲದೆ ಪ್ರತಿಯೊಂದು ಇಸ್ಲಾಮೀ ರಾಷ್ಟ್ರದ ಅತ್ಯುನ್ನತ ಹುದ್ದೆಗಳಿಗೆ ಅರ್ಹನಾಗಬಹುದು.

ಯಾವುದೇ ಇಸ್ಲಾಮೀ ರಾಷ್ಟ್ರದ ಭೌಗೋಳಿಕ ಗಡಿಯೊಳಗೆ ಜೀವಿಸುತ್ತಿರುವ ಮುಸ್ಲಿಮೇತರರಿಗೂ ಇಸ್ಲಾಮ್ ಹಲವು ಹಕ್ಕುಗಳನ್ನು ನಿರ್ಣಯಿಸಿದೆ. ಈ ಎಲ್ಲ ಹಕ್ಕುಗಳೂ ಯಾವುದೇ ಇಸ್ಲಾಮೀ ರಾಷ್ಟ್ರದ ಸಂವಿಧಾನದ ಅವಿಭಾಜ್ಯ ಅಂಗವಾಗಿರುತ್ತವೆ. ಇಂತಹ ಮುಸ್ಲಿಮೇತರ ವ್ಯಕ್ತಿಗಳನ್ನು ಇಸ್ಲಾಮೀ ಭಾಷೆಯಲ್ಲಿ `ಝಿಮ್ಮೀ’ಗಳೆಂದು ಕರೆಯಲಾಗುತ್ತದೆ. ಅಂದರೆ ಅವರ ರಕ್ಷಣೆಯ ಹೊಣೆ ಇಸ್ಲಾಮೀ ರಾಷ್ಟ್ರದ ಮೇಲಿದೆ ಎಂದರ್ಥ. ಒಬ್ಬ `ಝಿಮ್ಮೀ’ಯ ಪ್ರಾಣ, ಮಾನ ಮತ್ತು ಸೊತ್ತು ಕೂಡಾ ಒಬ್ಬ ಮುಸಲ್ಮಾನನ ಪ್ರಾಣ, ಮಾನ ಮತ್ತು ಸೊತ್ತಿನಷ್ಟೇ ಗೌರವಾರ್ಹವಾಗಿರುತ್ತದೆ. ಪೌರ ಮತ್ತು ದಂಡ ಸಂಹಿತೆಗಳಲ್ಲಿ ಮುಸ್ಲಿಮ್ ಮತ್ತು ಮುಸ್ಲಿಮೇತರರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಅಲ್ಲದೆ ಮುಸ್ಲಿಮೇತರ ವ್ಯಕ್ತಿ ನಿಯಮ(Personal law)ದಲ್ಲೂ ಇಸ್ಲಾಮೀ ರಾಷ್ಟ್ರವು ಯಾವುದೇ ಬಗೆಯ ಹಸ್ತಕ್ಷೇಪ ನಡೆಸುವುದಿಲ್ಲ. `ಝಿಮ್ಮೀ’ಗಳಿಗೆ ತಮ್ಮ ವಿಚಾರ, ನಂಬಿಕೆಗಳು, ಧಾರ್ಮಿಕ ಆಚರಣೆಗಳು ಮತ್ತು ಆರಾಧನೆಗಳ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರೃವಿರುವುದು. `ಝಿಮ್ಮೀ’ಗಳು ಇಸ್ಲಾಮೀ ರಾಷ್ಟ್ರದ ಒಳಗೆ ತಮ್ಮ ಧರ್ಮಗಳನ್ನು ಪ್ರಚಾರ ಮಾಡಬಹುದು ಮಾತ್ರವಲ್ಲ, ಕಾನೂನಿನ ಮಿತಿಗಳೊಳಗಿದ್ದು, ಇಸ್ಲಾಮನ್ನು ವಿಮರ್ಶಿಸಲೂಬಹುದು.

ಈ ಬಗೆಯ ಇನ್ನೂ ಹಲವಾರು ಹಕ್ಕುಗಳನ್ನು ಇಸ್ಲಾಮೀ ರಾಷ್ಟ್ರದ ಮುಸ್ಲಿಮೇತರ ಪೌರರಿಗೆ ಕೊಡಲಾಗುತ್ತದೆ. ಇಸ್ಲಾಮೀ ರಾಷ್ಟ್ರವು ಅವರ ರಕ್ಷಣೆಯ ಹೊಣೆಯಿಂದ ಮುಕ್ತವಾಗುವವರೆಗೂ ಈ ಹಕ್ಕುಗಳನ್ನು ಅವರಿಂದ ಕಿತ್ತುಕೊಳ್ಳುವಂತಿಲ್ಲ. ಒಂದು ಮುಸ್ಲಿಮೇತರ ರಾಷ್ಟ್ರವು ತನ್ನ ಮುಸ್ಲಿಮ್ ಪ್ರಜೆಗಳ ಮೇಲೆ ಎಷ್ಟು ಅನ್ಯಾಯ ದೌರ್ಜನ್ಯಗಳನ್ನೆಸಗಿದರು ಅದಕ್ಕುತ್ತರವಾಗಿ ತನ್ನ ಮುಸ್ಲಿಮೇತರ ಪೌರರ ವಿರುದ್ಧ ಕಿಂಚಿತ್ ಅನ್ಯಾಯ ಮಾಡುವ ಹಕ್ಕು ಕೂಡಾ ಇಸ್ಲಾಮೀ ರಾಷ್ಟ್ರಕ್ಕೆ ಇರುವುದಿಲ್ಲ. ಎಷ್ಟೆಂದರೆ, ಇಸ್ಲಾಮಿ ಗಡಿಯ ಹೊರಗಿನ ಎಲ್ಲ ಮುಸಲ್ಮಾನರನ್ನು ಕೊಲ್ಲಲಾದರೂ ಕೂಡಾ ತನ್ನ ಗಡಿಯೊಳಗಿನ ಒಬ್ಬನೇ ಒಬ್ಬ ಮುಸ್ಲಿಮೇತರನ ಪ್ರಾಣವನ್ನು ಅನ್ಯಾಯವಾಗಿ ಹರನ ಮಾಡುವ ಅಧಿಕಾರ ಇಸ್ಲಾಮಿ ರಾಷ್ಟ್ರಕ್ಕೆ ಇರುವುದಿಲ್ಲ.

ಇಸ್ಲಾಮೀ ರಾಷ್ಟ್ರದ ಅಧಿಕಾರ ಸೂತ್ರವು ಒಬ್ಬ ಚುನಾಯಿತ ನಾಯಕನ ಕೈಯಲ್ಲಿದ್ದು ಅವನಿಗೆ ಒಂದು ಪ್ರಜಾಸತ್ತಾತ್ಮಕ ರಾಷ್ಟ್ರದ ಮುಖ್ಯಸ್ಥನ ಸ್ಥಾನಮಾನವಿರುವುದು. ಈ `ಅಮೀರ್’ ಅರ್ಥಾತ್ ನಾಯಕನ ಚುನಾವನೆಯಲ್ಲಿ ಪಾಲ್ಗೊಳ್ಳಲು, ಸಂವಿಧಾನದ ತತ್ವಗಳನ್ನು ಅಂಗೀಕರಿಸುವ ಪ್ರತಿಯೊಬ್ಬ ಪ್ರಬುದ್ಧ ಸ್ತ್ರೀ-ಪುರುಷನಿಗೆ ಹಕ್ಕಿರುವುದು. ಯಥಾರ್ಥ ಇಸ್ಲಾಮಿನ ಜ್ಞಾನ, ಇಸ್ಲಾಮಿನ ಚಾರಿತ್ರೃ, ದೇವಭಕ್ತಿ ಮತ್ತು ಮುತ್ಸದ್ಧಿತನಗಳೇ ಚುನಾವಣೆಯಲ್ಲಿ ಆಯ್ಕೆಯ ಮಾನದಂಡಗಳಾಗಿದ್ದು ಸಮಾಜದಲ್ಲಿ ಈ ಗುಣಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವ ವ್ಯಕ್ತಿಯನ್ನೇ ಅಧಿಕಾರ ಸ್ಥಾನಕ್ಕೆ ಆರಿಸಲಾಗುವುದು, ದೇಶದ ಆಡಳಿತದ ವಿಷಯದಲ್ಲಿ ಬಲ್ಲವರೊಡನೆ ಸಮಾಲೋಚಿಸಿ ಆಳಬೇಕಾದುದು ಅಮೀರ್‍ನ ಕರ್ತವ್ಯವಾಗಿರುವುದು, ತನಗೆ ಜನತೆಯ ವಿಶ್ವಾಸ ಪ್ರಾಪ್ತವಾಗಿರುವವರೆಗೆ ಮಾತ್ರ ಒಬ್ಬನು ಅಮೀರ್ ಆಗಿ ಮುಂದುವರಿಯಲು ಸಾಧ್ಯವಿದೆ. ತಾನು ಜನತೆಯ ವಿಶ್ವಾಸ ಕಳೆದುಕೊಂಡಿದ್ದರೆ ಅಧಿಕಾರವನ್ನು ಬಿಟ್ಟುಕೊಡಬೇಕಾದುದು ಅವನ ಕರ್ತವ್ಯವಾಗಿರುತ್ತದೆ. ಆತನ ಮೇಲೆ ಜನತೆಗೆ ವಿಶ್ವಾಸವುಳ್ಲ ತನಕ ಸರಕಾರದ ಅಧಿಕಾರವು ಅವನ ಕೈಯಲ್ಲಿರುವುದು. ಸಲಹಾ ಮಂಡಳಿಯೊಂದಿಗೆ ಸಮಾಲೋಚಿಸಿ ಆಳಬೇಕಾದ ಆಡಳಿತಗಾರನು ಅನಿವಾರ್ಯ ಸಂದರ್ಭಗಳಲ್ಲಿ ಸಲಹಾ ಮಂಡಳಿಯ ಬಹುಮತದ ವಿರುದ್ಧ ತನ್ನ `ವೀಟೋ’ ಅಧಿಕಾರವನ್ನು ಬಳಸಬಹುದು. `ಅಮಿರ್’ ಮತ್ತು ಅವನ ಸರಕಾರವನ್ನು ಟೀಕಿಸುವ ಸಂಪೂರ್ಣ ಹಕ್ಕು ಜನತೆಗೆ ಇರುವುದು.

ಇಸ್ಲಾಮೀ ರಾಷ್ಟ್ರದಲ್ಲಿ ಶಾಸನ ರಚನೆಯು `ಶರೀಅತ್’ನ ನಿಶ್ಚಿತ ಮಿತಿಗಳೊಳಗೆ ನಡೆಯುವುದು. ಅಲ್ಲಾಹ್ ಮತ್ತು ಅವನ ಪ್ರವಾದಿ(ಸ)ಯ ಆದೇಶಗಳ ಪಾಲನೆ ಕಡ್ಡಾಯವಾಗಿದ್ದು ಯಾವುದೇ ಶಾಸಕಾಂಗವು ಅವುಗಳಲ್ಲಿ ಕಿಂಚಿತ್ತೂ ಬದಲಾವನೆ ಮಾಡುವಂತಿಲ್ಲ. ಇನ್ನು ಯಾವುದಾದರೂ ಒಂದು ವಿಷಯಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರತ್ಯೇಕ ವ್ಯಾಖ್ಯಾನಗಳಿದ್ದರೆ, ಆಗ ಶರೀಅತ್‍ನ ನೈಜ ಇಂಗಿತ ಏನೆಂಬುದನ್ನು ಶರೀಅತ್‍ನ ತಜ್ಞರು ತೀರ್ಮಾನಿಸುವರು. ಇಂತಹ ವಿಷಯಗಳನ್ನು ಬಗೆಹರಿಸಲು ಅದನ್ನು ಉನ್ನತ ಮಟ್ಟದ ವಿದ್ವಾಂಸರನ್ನೊಳಗೊಂಡ ಸಲಹಾ ಮಂಡಳಿಯ ಉಪ ಸಮಿತಿಯೊಂದಕ್ಕೆ ವಹಿಸಿಕೊಡಲಾಗುವುದು. ಇಷ್ಟಲ್ಲದೆ `ಶರೀಅತ್’ ವಿಶೇಷವಾಗಿ ಯಾವುದೇ ಆದೇಶವನ್ನು ಕೊಟ್ಟಿಲ್ಲದಂತಹ ಹಲವು ವಿಶಾಲ ಕ್ಷೇತ್ರಗಳಿವೆ. ಈ ಎಲ್ಲ ಕ್ಷೇತ್ರಗಳ ಬಗ್ಗೆ ಧರ್ಮದ ಮಿತಿಗಳಿಗೆ ಬದ್ಧರಾಗಿದ್ದು ಕಾನೂನುಗಳನ್ನು ನಿರ್ಮಿಸಲು ಸಲಹಾ ಮಂಡಳಿಯು ಸ್ವತಂತ್ರವಾಗಿರುವುದು.

ಇಸ್ಲಾಮಿನಲ್ಲಿ ನ್ಯಾಯಾಂಗವು ಆಡಳಿತಾರೂಢ ಸರಕಾರಕ್ಕೆ ಬದ್ಧವಾಗಿ ನಡೆಯುವ ಬದಲು ನೇರವಾಗಿ ದೇವನ ಪ್ರತಿನಿಧಿಯಾಗಿರುವುದು ಹಾಗೂ ಅವನ ಮುಂದೆ ಪ್ರಶ್ನಾರ್ಹವಾಗಿರುವುದು, ನ್ಯಾಯಾಧೀಶರನ್ನು ಸರಕಾರವೇ ನೇಮಿಸುವುದು. ಆದರೆ ಒಬ್ಬನು ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತ ನಂತರ ಅವನು ದೈವಿಕ ಕಾನೂನಿನ ಪ್ರಕಾರ ಜನರ ಮಧ್ಯೆ ಸತ್ಯನಿಷ್ಠವಾಗಿ ನ್ಯಾಯ ಮಾಡುವನು. ನ್ಯಾಯದ ಕೈಯಿಂದ ಸರಕಾರ ಕೂಡಾ ತಪ್ಪಿಸಿಕೊಳ್ಳುವಂತಿಲ್ಲ. ಎಷ್ಟೆಂದರೆ ಸರಕಾರೀ ಆಡಳಿತದ ಅತ್ಯುನ್ನತ ಸ್ಥಾನದಲ್ಲಿರುವವನು ಕೂಡಾ ಅಗತ್ಯ ಬಿದ್ದರೆ ಒಬ್ಬ ಜನಸಾಮಾನ್ಯನಂತೆಯೇ ಆರೋಪಿ ಅಥವಾ ದಾವೆದಾರನಾಗಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಗುವುದು.

SHARE THIS POST VIA