Home / ಇಸ್ಲಾಮ್ ಮತ್ತು ನಾಗರಿಕತೆ

ಇಸ್ಲಾಮ್ ಮತ್ತು ನಾಗರಿಕತೆ

ಪಂಡಿತ್ ನೆಹರೂರವರು ತನ್ನ ಪ್ರಸಿದ್ಧ ಗ್ರಂಥವಾದ ಗ್ಲಿಂಪ್ಸೆಸ್ ಆಫ್ ವರ್ಲ್ಡ್ ಹಿಸ್ಟ್ರೀ ಎಂಬ ಗ್ರಂಥದಲ್ಲಿ ಈ ರೀತಿ ಬರೆದಿದ್ದರು “ಪ್ರಾಚೀನರಲ್ಲಿ ಈಜಿಪ್ಟ್, ಚೀನಾ ಅಥವಾ ಭಾರತದಲ್ಲಿ ಸರಿಯಾದ ವೈಜ್ಞಾನಿಕತೆ ಕಂಡು ಬರುವುದಿಲ್ಲ. ಅದರ ಸ್ವಲ್ಪಾಂಶ ಗ್ರೀಸ್‌ನಲ್ಲಿ ಕಂಡು ಬರುತ್ತದೆ. ರೋಮ್‌ನಲ್ಲಿಯೂ ಕಾಣಸಿಗುವುದಿಲ್ಲ. ಆದರೆ ಅರಬರಲ್ಲಿ ವೈಜ್ಞಾನಿಕವಾದ ಸಂಶೋಧನಾ ಬುದ್ಧಿಮತ್ತೆ ಪ್ರಕಟವಾಗುತ್ತಿತ್ತು. ಆ ಕಾರಣದಿಂದ ಆಧುನಿಕ ವಿಜ್ಞಾನದ ಪಿತಾಮಹರೆಂದು ಮುಸ್ಲಿಮರನ್ನು ಕರೆಯಬಹುದಾಗಿದೆ.”

ಪವಿತ್ರ ಗ್ರಂಥ ಕುರ್‌ಆನ್ ಶಿಕ್ಷಣಕ್ಕೆ ಭಾರೀ ಪ್ರಾಮುಖ್ಯತೆ ನೀಡಿದೆ. ಆದಿ ಮಾನವ ಆದಮ್(ಅ)ರನ್ನು ಸೃಷ್ಟಿಸಿದ ಕೂಡಲೇ ಅವರಿಗೆ ಜ್ಞಾನ ಕರುಣಿಸಲಾಯಿತು ಎಂದು ಕುರ್‌ಆನ್‌ನಲ್ಲಿ ಹೇಳಿದೆ. ಅಂತ್ಯ ಪ್ರವಾದಿ ಮುಹಮ್ಮದ್(ಸ)ರಿಗೆ ಪ್ರಥಮವಾಗಿ ದಿವ್ಯವಾಣಿ ಅವತೀರ್ಣಗೊಂಡಾಗಲೂ “ಓದಿರಿ, ಅವನು ನಿಮಗೆ ಲೇಖನಿಯ ಮೂಲಕ ವಿದ್ಯೆ ಕಲಿಸಿದನು. ನಿಮ್ಮ ಪ್ರಭುವಿನ ನಾಮದಿಂದ ಓದಿರಿ” ಎನ್ನಲಾಗಿತ್ತು. ಇತಿಹಾಸವನ್ನು ಅರಿಯಲು ಪ್ರಪಂಚದಲ್ಲಿ ಜ್ಞಾನವನ್ನು ಆರ್ಜಿಸಿರಿ ಎಂದು ಕುರ್‌ಆನ್ ಪುನರಾವರ್ತಿಸಿ ಹೇಳಿದೆ.

“ಜ್ಞಾನಾರ್ಜನೆಯು ಸತ್ಯವಿಶ್ವಾಸಿಗಳಾದ ಸ್ತ್ರೀ-ಪುರುಷರ ಕಡ್ಡಾಯ ಕರ್ತವ್ಯವಾಗಿದೆ” ಎಂದು ಹೇಳಿದ ಪ್ರವಾದಿವರ್ಯರು(ಸ) ಶಿಕ್ಷಣಕ್ಕೆ ಭಾರೀ ಮಹತ್ವ ನೀಡಿದ್ದಾರೆ. ಪ್ರವಾದಿವರ್ಯರು(ಸ) ನೀಡಿದ ಉತ್ತೇಜನದಿಂದ ಮುಸ್ಲಿಮರು ಜಗತ್ತಿನ ಸಂಸ್ಕೃತಿಯ ನೇತಾರರಾದರು. ಮುಸ್ಲಿಮ್ ನಾಗರಿಕತೆಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಚರ್ಚಿಸಿದ ರೋಮ್‌ನ ಲಾಂಡೋ ತಂಡೆ ಎಂಬವರಯ ತನ್ನ ಗ್ರಂಥದಲ್ಲಿ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರೇರಕ ಶಕ್ತಿಯು ದೇವನೇ ಸೃಷ್ಟಿಸಿದಂತೆ ಮುಸ್ಲಿಮರಲ್ಲಿ ನೆಲೆನಿಂತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಜಗತ್ತಿನ ಕುರಿತು ಅಗಾಧವಾದ ಜ್ಞಾನಗಳಿಸಲು ಅತೀವ ಆಸಕ್ತಿ ಅವರಲ್ಲಿತ್ತು ಎಂದು ವಿಶ್ಲೇಷಿಸಬಹುದು.

ಯುರೋಪಿನಲ್ಲಿ ಸಂಭವಿಸಿದಂತೆ ಇಸ್ಲಾಮಿನಲ್ಲಿ ಧರ್ಮ ಮತ್ತು ವಿಜ್ಞಾನಗಳ ಮಧ್ಯೆ ಭಿನ್ನತೆಯಿಲ್ಲ. ಧಾರ್ಮಿಕತೆಯು ವೈಜ್ಞಾನಿಕತೆಯ ಪ್ರೇರಕ ಶಕ್ತಿಯಾಗಿದೆ. ಇನ್ನು ವಿಜ್ಞಾನ ಕೂಡಾ ಧರ್ಮ ವಿಶ್ವಾಸಕ್ಕೆ ಹಾದಿ ಮಾಡಿ ಕೊಡುತ್ತದೆ. ಅನಾಥಾಲಯಗಳು, ಗ್ರಂಥಾಲಯಗಳು, ಜ್ಞಾನ ಕೇಂದ್ರಗಳು, ವಿಶ್ವವಿದ್ಯಾನಿಲಯಗಳು ಮುಂತಾದ ವಿಷಯಗಳಲ್ಲಿ ಅರಬರ ಸಂಶೋಧನೆಯು ಜಗತ್ತಿನ ಕಣ್ತೆರೆಸಿತು. ಪ್ರಸಿದ್ಧ ಇತಿಹಾಸಗಾರರಾದ ಗಿಬ್ಬನ್ ಮುಸ್ಲಿಮರ ಅವಸ್ಥೆಯ ಕುರಿತು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯೂರೋಪ್‌ನ ಸೂರ್ಯ ಅಸ್ತಮಿಸುವಾಗ ಕೋರ್ಡೊವಾದ ಬೀದಿಗಳಲ್ಲಿ ಸಾವಿರಗಟ್ಟಲೆ ದೀಪಗಳಿಂದ ಪ್ರಕಾಶಭರಿತವಾಗಿದೆ. ಯುರೋಪ್‌ನ ಪ್ರಭುಗಳಿಗೆ ಸರಿಯಾಗಿ ರುಜು ಹಾಕಲು ಅರಿಯದಿರುವಾಗ ಸ್ಪೆಯಿನ್ ನಿವಾಸಿಗಳು ವೈಜ್ಞಾನಿಕವಾಗಿ ಬಹಳ ಪ್ರಬುದ್ಧರಾಗಿದ್ದರು. ಅರಬರ ಸಹಿತ ಅನೇಕ ಮುಸ್ಲಿಮ್ ವಿದ್ವಾಂಸರು, ವಿಜ್ಞಾನಿಗಳು ಕಳೆದ ಸಾವಿರದ ನಾಲ್ಕುನೂರು ವರ್ಷಗಳಿಂದೀಚೆಗೆ ವಿಶ್ವದ ಅಭಿವೃದ್ಧಿಗೆ ಅಮೋಘ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅಲ್‌ಜಿಬ್ರಾ ಎಂಬ ಪದದ ಉದ್ಭವ ಅರಬಿ ಭಾಷೆಯಿಂದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂಕಗಣಿತಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ (1,2,3) ಅರಬಿಕ್ ನೂಮರಲ್ಸ್ ಎಂದೇ ಪ್ರಸಿದ್ಧವಾಗಿದೆ.

ಹಾರೂನ್ ರಶೀದ್‌ರು ಇಸ್ಲಾಮೀ ಇತಿಹಾಸದಲ್ಲಿ ಪ್ರಸಿದ್ಧ ಖಲೀಫರಾಗಿದ್ದರು. ಅವರ ಆಳ್ವಿಕೆಯ 23 ವರ್ಷಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ರಾಜಧಾನಿ ಬಗ್ದಾದ್ ಆಗ ಅಭಿವೃದ್ಧಿಯ ಉತ್ತುಂಗತೆಯಲ್ಲಿತ್ತು. ಜನರು ಆಗ ಬಹಳ ಸಂತೃಪ್ತರಾಗಿ ಸುಸ್ಥಿತಿಯಿಂದ ಜೀವಿಸುತ್ತಿದ್ದರು. ಪ್ರತಿಯೊಂದು ಮನೆಯಲ್ಲಿಯೂ ಕಲೆ ಮತ್ತು ವಿಜ್ಞಾನದ ಕುರಿತು ಚರ್ಚೆ ನಡೆಯುತ್ತಿತ್ತು. ಅಬ್ಬಾಸಿ ಆಡಳಿತದ ಸಂದರ್ಭದಲ್ಲಿ (750-1258 ಕ್ರಿ.ಶ.) ಬೈತುಲ್ ಹಿಕ್ಮಃ ಎಂಬ ಪ್ರಸಿದ್ಧ ಗ್ರಂಥಾಲಯವಿತ್ತು. ಅದರಲ್ಲಿ ಸಹಸ್ರಾರು ಗ್ರಂಥಗಳಿದ್ದವು. ಮುಸ್ಲಿಮ್ ಹಾಗೂ ಕ್ರೈಸ್ತ ವಿದ್ವಾಂಸರುಗಳು ಅಲ್ಲಿ ಕೆಲಸ ಮಾಡುತ್ತಿದ್ದರು.

ವೈದ್ಯಕೀಯ ಶಾಸ್ತ್ರದಲ್ಲಿ ಪ್ರಸಿದ್ಧರಾದ ಅಲ್‌ರಾಸಿಯವರು ಮೊತ್ತಮೊದಲ ಬಾರಿಗೆ ಕನ್ನಡಿಯ ಕುರಿತು ಸೂಕ್ಷ್ಮ ವಿಚಾರಗಳನ್ನು ಕಂಡು ಹಿಡಿದರು. ಹತ್ತನೇ ಶತಮಾನದ ಪ್ರಸಿದ್ಧ ವೈಧ್ಯರಾಗಿದ್ದ ಅವರು ಶಸ್ತ್ರಕ್ರಿಯೆಗೆ ಬೇಕಾದ ಕೆಲ ಸಂಕೀರ್ಣ ಉಪಕರಣಗಳನ್ನು ಅವಿಷ್ಕರಿಸಿದರು. ಮೊದಲ ಬಾರಿಗೆ ತುಂಡಾದ ಎಲುಬುಗಳ ಜೋಡಣೆಗೆ ಬಳಸುವ ಪ್ರಾಸ್ಟರ್ ಉಪಯೋಗಿಸಿದವರೂ ಅವರಾಗಿದ್ದಾರೆ.

ಹನ್ನೊಂದನೇಯ ಶತಮಾನದಲ್ಲಿ ಇಬ್ನು ಅಲ್ ಹೈತಮ್ ಬೆಳಕು ರೇಖೆಯಲ್ಲಿ ಹರಿಯುತ್ತಿದೆ ಎಂಬುದನ್ನು ಸಮರ್ಥಿಸಿದರು. ಅವರು ಕ್ಯಾಮರಾ ನಿರ್ಮಾಣಕ್ಕೆ ಬೇಕಾದ ಪರೀಕ್ಷೆಗಳನ್ನೂ ಆರಂಭಿಸಿದರು. ವೈದ್ಯಕೀಯ ರಂಗದಲ್ಲಿ ಇಬ್ನು ಸೀನ್ ಕೂಡಾ ಪ್ರಸಿದ್ಧರಾಗಿದ್ದಾರೆ. ಅವರು ಬರೆದ ಒಂದು ಗ್ರಂಥವು 12ನೇ ಶತಮಾನದಲ್ಲಿ ಶಾಲಾ ಪಠ್ಯ ಪುಸ್ತಕವಾಗಿತ್ತು. ಭೂಮಿ ಗೋಳಾಕಾರವಾಗಿದೆ ಎಂದು ಹನ್ನೊಂದನೇ ಶತಮಾನದಲ್ಲಿ ಗೆಲಿಲಿಯೂ ಕಂಡು ಹಿಡಿದರೆ ಅದಕ್ಕಿಂತ ಆರುನೂರು ವರ್ಷ ಮೊದಲೇ ಭೂಮಿಯು ತನ್ನ ಅಕ್ಷದಲ್ಲಿ ತಿರುಗುತ್ತಿದೆ ಮತ್ತು ಸೂರ್ಯನಿಗೆ ಸುತ್ತುತ್ತಿದೆ ಎಂಬುದನ್ನು ಕಂಡುಹಿಡಿಯಲಾಗಿತ್ತು. ಕಟ್ಟಡ ನಿರ್ಮಾಣಗಳಲ್ಲಿಯೂ ಮುಸ್ಲಿಮರು ಪ್ರಾವೀಣ್ಯತೆ ಪಡೆದಿದ್ದರು. ಸ್ಪೈನ್‌ನ ಅಲ್‌ಹಮ್‌ರ ಪ್ಯಾಲೇಸ್, ತಾಜ್‌ಮಹಲ್ ಮುಂತಾದುವು ಅದರಲ್ಲಿ ಸ್ಮರಣೀಯ.

ಸಂಸ್ಕೃತಿಗೆ, ನಾಗರಿಕತೆಗೆ ಮಹತ್ವ ನೀಡುವ ಶಿಕ್ಷಣ ರಂಗದ ಬಗ್ಗೆಯೂ ಮುಸ್ಲಿಮರು ಭಾರೀ ಪರಿಗಣನೆ ನೀಡಿದ್ದರು. ಮಸೀದಿಗಳಲ್ಲದೆ ಮದ್ರಸ, ಮಕ್ತೂಬ್‌ಗಳಂತಹ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವುದು ಬಾಗ್ದಾದಿನ ನಿಝಾಮರಾಗಿದ್ದರು. ಅವರು ಸ್ಥಾಪಿಸಿದ ನಿಝಾಮಿಯಾ ವಿದ್ಯಾಕೇಂದ್ರವು ಹಿಜರಿ 59ನೇ ವರ್ಷದ ಪ್ರಕಾಶ ಗೋಪುರ ಎಂದು ಇತಿಹಾಸ ಪ್ರಸಿದ್ಧವಾಗಿದೆ. ಜಗತ್ತಿನ ನಾನಾ ಕಡೆಗಳಿಂದ ಬಂದ ಸಾವಿರಾರು ವಿದ್ಯಾರ್ಥಿಗಳು ಅಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು. ಅಲ್ಲಿ ಉಚಿತ ವಿದ್ಯಾಭ್ಯಾಸ ಮಾತ್ರವಲ್ಲ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನೂ ಒದಗಿಸಲಾಗುತ್ತಿತ್ತು. ಇದೆಲ್ಲವನ್ನು ಅರಿತಾಗ ಮುಸ್ಲಿಮರು ದಾಪುಗಾಲು ಹಾಕದ ರಂಗಗಳಿಲ್ಲ ಎಂಬುದು ಮನದಟ್ಟಾಗುತ್ತದೆ.

SHARE THIS POST VIA