Home / ಪ್ರವಾದಿತ್ವ ವಾಸ್ತವಿಕತೆ

ಪ್ರವಾದಿತ್ವ ವಾಸ್ತವಿಕತೆ

ಪ್ರವಾದಿತ್ವವು ಇಸ್ಲಾವಿೂ ವಿಶ್ವಾಸದಲ್ಲಿ ಅತ್ಯಂತ ಮಹತ್ವ ಪೂರ್ಣವಾಗಿದೆ. ಇಸ್ಲಾಮಿನ ಐದು ಮೂಲಭೂತ ವಿಶ್ವಾಸಗಳ ಪೈಕಿ ಆರಂಭದ ಸಾಕ್ಷ್ಯ ವಚನಗಳ ಇಂಗಿತವು ಏಕದೇವ ವಿಶ್ವಾಸ ಮತ್ತು ಪ್ರವಾದಿತ್ವ(ತೌಹೀದ್ ಮತ್ತು ರಿಸಾಲತ್)ಗಳಾಗಿವೆ.

ದೇವನು ಈ ಲೋಕದಲ್ಲಿ ಮಾನವನ ಎಲ್ಲ ಆವಶ್ಯಕತೆಗಳನ್ನೂ ಪೂರೈಸಿದ್ದಾನೆ. ಹುಟ್ಟುವ ಪ್ರತಿಯೊಂದು ಮಗುವಿಗೂ ನೋಡಲು ಎರಡು ಕಣ್ಣುಗಳಿರುತ್ತವೆ. ಆಲಿಸಲು ಎರಡು ಕಿವಿಗಳಿರುತ್ತವೆ. ಮೂಸಲು ಮತ್ತು ಉಸಿರಾಡಲು ಒಂದು ಮೂಗಿರುತ್ತದೆ. ಸ್ಪರ್ಶಿಸಲು ಕೈ ಮತ್ತು ನಡೆದಾಡಲು ಕಾಲುಗಳಿರುತ್ತವೆ. ಆಲೋಚಿಸಲು ಮೆದುಳಿರುತ್ತದೆ. ಹೀಗೆ ಮಗುವಿಗೆ ಅಗತ್ಯವಿರುವ ಅಥವಾ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅಗತ್ಯವಿರುವ ಎಲ್ಲ ಶಕ್ತಿ ಸಾಮರ್ಥ್ಯಗಳನ್ನೂ ಉಪಾಧಿಗಳನ್ನೂ ಅದರ ಪುಟ್ಟ ದೇಹದಲ್ಲಿ ಒದಗಿಸಲಾಗಿರುತ್ತದೆ.

ಮಾನವನು ವಾಸವಾಗಿರುವ ಈ ಜಗತ್ತಿನ ಸ್ಥಿತಿಯೂ ಅಷ್ಟೆ. ಮಾನವನ ಬದುಕಿಗೆ ಅಗತ್ಯವಿರುವ ಎಲ್ಲ ಸಾಧನಾನುಕೂಲತೆಗಳನ್ನೂ ಇಲ್ಲಿ ವ್ಯಾಪಕವಾಗಿ ಒದಗಿಸಲಾಗಿದೆ. ಉದಾ: ಗಾಳಿ, ನೀರು, ಬೆಳಕು ಮತ್ತು ಶಾಖ ಇತ್ಯಾದಿ. ಮಾನವನಿಗೆ ಈ ಎಲ್ಲ ಸೌಲಭ್ಯಗಳಿಗಿಂತ ಮಿಗಿಲಾಗಿ ಸೃಷ್ಟಿಯ ಉದ್ದೇಶ, ಜೀವನದ ವಾಸ್ತವಿಕತೆ ಮತ್ತು ತನ್ನ ಕರ್ತವ್ಯಗಳ ಪರಿಜ್ಞಾನ ಅತ್ಯವಶ್ಯಕವಾಗಿದೆ. ಅತಿ ಪ್ರಾಚೀನ ಕಾಲದಿಂದಲೇ ಮಾನವನು ಆ ಜ್ಞಾನದ ಶೋಧ ನಡೆಸಿದ್ದಾನೆ. ಆದರೆ ಅದನ್ನು ಸ್ವಯಂ ಕಂಡು ಹಿಡಿಯಲು ಅಸಾಧ್ಯವೆಂದು ಅವನಿಗೆ ಮನವರಿಕೆಯಾಗಿದೆ. ಈ ವಿಶ್ವದ ವಾಸ್ತವಿಕತೆ ಏನು? ನಮ್ಮ ಜೀವನ ಹೇಗೆ ಆರಂಭಗೊಂಡಿತು? ಅದರ ಅಂತ್ಯ ಹೇಗೆ? ಇತ್ಯಾದಿ ಜಿಜ್ಞಾಸೆಗಳು ಆತನನ್ನು ಕಾಡುತ್ತವೆ. ಆತನು ಒಳಿತು-ಕೆಡುಕುಗಳ ನೈಜ ಪರಿಣಾಮ ಮತ್ತು ಮಾನವ ಜೀವನದ ನಿಯಂತ್ರಣೋಪಾಧಿಗಳ ಬಗ್ಗೆ ಆಲೋಚಿಸುತ್ತಾನೆ. ಈ ಸ್ವಾಭಾವಿಕ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ನಿಟ್ಟಿನಲ್ಲಿ ಮಾನವನು ಸಂಪೂರ್ಣ ವಿಫಲವಾಗಿದ್ದಾನೆ.

ಈ ಅನಂತ ಭೌತಿಕ ಜಗತ್ತಿನ ಬಗ್ಗೆ ತಿಳಿಯಲು ನಮಗೆ ನೀಡಲಾಗಿರುವ ಆಯುಷ್ಯದ ಅವಧಿಯು ತೀರಾ ಅಲ್ಪವಾಗಿದೆ. ಈ ರಂಗದಲ್ಲಿ ದೊಡ್ಡದೊಡ್ಡ ವಿಜ್ಞಾನಿಗಳು ಸುದೀರ್ಘ ಕಾಲ ನಡೆಸಿದ ಪ್ರಯತ್ನಗಳಿಂದ ಸೃಷ್ಟಿ ವೈಶಿಷ್ಟ್ಯದ ಮೂಲಭೂತ ವಿಷಯಗಳನ್ನೂ ಗುರುತಿಸಲಾಗಿಲ್ಲ. ಆದ್ದರಿಂದ ಅದರ ಬಗ್ಗೆ ತಿಳಿಯಲು ದಿವ್ಯ ಮಾರ್ಗದರ್ಶನದ ಅಗತ್ಯವಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆಯ ಅಗತ್ಯವಿಲ್ಲ. ದಿವ್ಯ ಮಾರ್ಗದರ್ಶನವಿಲ್ಲದೆ ನಮ್ಮ ಬದುಕಿನ ಮೂಲಭೂತ ತತ್ವಗಳನ್ನು ತಿಳಿಯಲು ನಮ್ಮಿಂದ ಸಾಧ್ಯವಿಲ್ಲ.

ಜೀವನದ ವಾಸ್ತವಿಕ ಜ್ಞಾನದ ಅನಿವಾರ್ಯತೆ ಮತ್ತು ಆ ಜ್ಞಾನದ ನಿಗೂಢತೆಯು, ಅದರ ಸಂಪಾದನೆಗೆ ಬಾಹ್ಯ ಶಕ್ತಿಯ ಅಗತ್ಯವಿದೆಯೆಂದು ನಿಚ್ಚಳಗೊಳಿಸುತ್ತವೆ. ಸೂರ್ಯ ಕಿರಣಗಳಿಂದ ನಿಸರ್ಗವು ನಮಗೆ ಶಾಖ ಮತ್ತು ಬೆಳಕು ಒದಗಿಸುವಂತೆ ಮಾನವ ಜೀವನಕ್ಕೆ ಅಗತ್ಯವಿರುವ ಸಕಲ ವಸ್ತುಗಳನ್ನು ಒದಗಿಸಿರುವ ಮಹಾ ಕರುಣಾಳುವಾದ ದೇವನು ಮೇಲಿನ ಅಗತ್ಯಗಳನ್ನು ಅಂದರೆ ಸತ್ಯದ ಜ್ಞಾನವನ್ನು ಒದಗಿಸಿದ್ದಾನೆ. ಆ ಜ್ಞಾನವನ್ನು ಆತನು ತನ್ನ ಪ್ರವಾದಿಗಳ ಮೂಲಕ ಪ್ರಚಾರಗೊಳಿಸಿದ್ದಾನೆ.

ಈ ಭೂಮಿಯ ಪ್ರಥಮ ಮಾನವ ಆದಮ್(ಅ) ದೇವನ ಪ್ರಥಮ ಪ್ರವಾದಿಯಾಗಿದ್ದರು. ದೇವನು ಅವರಿಗೆ ಮಾರ್ಗದರ್ಶನ ನೀಡಿ ಅದನ್ನು ತನ್ನ ಸಂತಾನಗಳಿಗೆ ಬೋಧಿಸುವಂತೆ ಆದೇಶಿಸಿದನು. ಅವರ ಸಜ್ಜನ ಅನುಯಾಯಿಗಳು ಅವರು ತೋರಿದ ನೇರ ಹಾದಿಯಲ್ಲಿ ಸಾಗಿದರು. ದುರ್ಜನರು ಪ್ರವಾದಿಗಳ ಬೋಧನೆಯನ್ನು ನಿರ್ಲಕ್ಷಿಸಿದರು. ಆದಮ್‍ರ(ಅ) ತಲೆಮಾರುಗಳು ಜಗತ್ತಿನ ವಿವಿಧ ಕಡೆಗಳಲ್ಲಿ ವ್ಯಾಪಿಸಿ ಅನೇಕ ವಂಶ ಮತ್ತು ಕುಲಗೋತ್ರಗಳಾಗಿ ಮಾರ್ಪಟ್ಟರು. ಈ ವಿಭಿನ್ನ ಜನ ವಿಭಾಗಗಳು ವಿವಿಧ ಆಚಾರ-ವಿಚಾರಗಳನ್ನು ಹಮ್ಮಿಕೊಂಡುವು. ಅವರು ಪ್ರವಾದಿಗಳು ಬೋಧಿಸಿದ್ದ ಜೀವನವನ್ನು ಮರೆತು ಸ್ವೇಚ್ಛೆಯ ಗುಲಾಮರಾದರು. ಇದರಿಂದ ಎಲ್ಲ ರೀತಿಯ ದುರಾಚಾರಗಳೂ ಹುಟ್ಟಿಕೊಂಡುವು. ಅಂಥ ಪರಿಸ್ಥಿತಿಗಳಲ್ಲಿ ಧಾರ್ಮಿಕ ಮೌಲ್ಯಗಳ ಪುನರುತ್ಥಾನಕ್ಕಾಗಿ ವಿವಿಧ ಕಾಲ ಮತ್ತು ದೇಶಗಳಲ್ಲಿ ಪ್ರವಾದಿಗಳನ್ನು ನೇಮಿಸಲಾಯಿತು. ಪವಿತ್ರ ಕುರ್‍ಆನಿನಲ್ಲಿ ಹೀಗೆ ಹೇಳಲಾಗಿದೆ:
“ಓರ್ವ ಎಚ್ಚರಿಕೆ ನೀಡುವವನಿಲ್ಲದೆ ಯಾವ ಸಮುದಾಯವೂ ಗತಿಸಿ ಹೋಗಿಲ್ಲ.” (ಪವಿತ್ರ ಕುರ್‍ಆನ್, 35:24)

ಪ್ರತಿಯೊಬ್ಬ ಪ್ರವಾದಿಯೂ ದೇವನ ಇಚ್ಛೆಗೆ ಸಂಪೂರ್ಣ ವಿಧೇಯರಾಗಿ ಬಾಳಬೇಕೆಂಬ ಕರೆಯನ್ನು ನೀಡುತ್ತಿದ್ದರು. ಒಂದು ಲಕ್ಷಕ್ಕೂ ಅಧಿಕ ಅಂತಹ ಪ್ರವಾದಿಗಳು ಈ ಜಗತ್ತಿಗೆ ಬಂದಿದ್ದರು. ಪ್ರವಾದಿ ಮುಹಮ್ಮದ್(ಸ) ಅವರಲ್ಲಿ ಕೊನೆಯವರಾಗಿದ್ದಾರೆ. ಅವರ ಜೀವನ ಚರಿತ್ರೆಯು ತೆರೆದ ಪುಸ್ತಕವಾಗಿ ಇಂದಿಗೂ ಉಳಿದುಕೊಂಡಿದೆ. ಅವರ ಪ್ರವಾದಿತ್ವದ ನಿಜಸ್ಥಿತಿಯನ್ನು ಯಾರು ಬೇಕಿದ್ದರೂ ಪರಿಶೀಲಿಸಬಹುದು. ಅವರು ನೈತಿಕ ಗುಣ ಮೌಲ್ಯಗಳ ಉನ್ನತ ಮಾದರಿಯಾಗಿದ್ದರು. ಪ್ರವಾದಿತ್ವಕ್ಕಿಂತ ಮೊದಲೇ ಅವರು ‘ಸತ್ಯಸಂಧ’ ಮತ್ತು ‘ಪ್ರಾಮಾಣಿಕ’ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಸಂಪೂರ್ಣ ಅರಬ್ ದೇಶದಲ್ಲಿ ಹಾಗೂ ಅವರು ವ್ಯವಹರಿಸಿದ ಎಲ್ಲ ಕಡೆಗಳಲ್ಲಿ ಪ್ರಾಮಾಣಿಕ, ಸತ್ಯನಿಷ್ಠ, ನಂಬಿಗಸ್ಥರೆಂದು ಪರಿಗಣಿಸಲ್ಪಟ್ಟಿದ್ದರು. ಬದುಕಿನ ಎಲ್ಲ ರಂಗಗಳಲ್ಲಿಯೂ ಅವರೋರ್ವ ಪರಿಪೂರ್ಣ ವ್ಯಕ್ತಿಯಾಗಿದ್ದರು. ಅವರ ಪಾವನ ವ್ಯಕ್ತಿತ್ವವು ಮಾನವೀಯತೆಯ ಅತ್ಯುನ್ನತ ಮಾದರಿಯಾಗಿದೆ. ಈ ಅನುಪಮ ವೈಶಿಷ್ಟ್ಯವೇ ಅವರು ದೇವ ಪ್ರವಾದಿ ಮತ್ತು ವಿನ್ಯಾಸ ಪಾತ್ರ ಮಾರ್ಗದರ್ಶಿಯೆಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ವಿಶ್ವಾಸಾರ್ಹ ಚಾರಿತ್ರ್ಯ ಹೊಂದಿದ ವ್ಯಕ್ತಿಯನ್ನು ಮಾತ್ರ ಜನರು ಮನಃಪೂರ್ವಕ ಅನುಸರಿಸಲು ಸಾಧ್ಯ. ಪ್ರವಾದಿ ಮುಹಮ್ಮದ್(ಸ) ಜೀವನದ ಪ್ರತಿಯೊಂದು ಅಂಶವೂ ಮಾನವನಿಗೆ ಮಾರ್ಗದರ್ಶಿ ಮತ್ತು ಅನುಕರಣೀಯವಾಗಿದೆ. ಅದು ಅವ್ಯವಹಾರಿಕ ಅಥವಾ ಅಪ್ರಸ್ತುತವೆನಿಸುವುದಿಲ್ಲ. ಅವರ ಬದುಕಿನ ಪ್ರತಿಯೊಂದು ಸೂಕ್ಷ್ಮವಿವರವೂ ಭಾವೀ ಪೀಳಿಗೆಗೆ ಅನುಕರಣೀಯವಾಗುವಂತೆ ದಾಖಲಿಸಲ್ಪಟ್ಟಿದೆ. ಮಾನವೇತಿಹಾಸದ ಯಾವೊಬ್ಬ ವ್ಯಕ್ತಿಯ ಚರಿತ್ರೆಯೂ ಇಷ್ಟೊಂದು ನಿಖರ ಮತ್ತು ಸವಿಸ್ತಾರವಾಗಿ ದಾಖಲಿಸಲ್ಪಟ್ಟಿಲ್ಲ. ಅಖಿಲ ಲೋಕಕ್ಕೆ ಅನುಗ್ರಹವಾಗಿ ಕಳುಹಿಸಲ್ಪಟ್ಟ ಪ್ರವಾದಿಯ ಪ್ರವಾದಿತ್ವವು ಸತ್ಯವೆಂದು ಇದು ದೃಢೀಕರಿಸುತ್ತದೆ. ಅವರ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಇತ್ಯಾದಿ ಜೀವನದ ಪ್ರತಿಯೊಂದು ಮಾತು ಕ್ರಿಯೆಗಳನ್ನು ಹದೀಸ್ ಗ್ರಂಥಗಳಲ್ಲಿ ದಾಖಲಿಸಿಡಲಾಗಿದೆ.

ಪ್ರವಾದಿ ಮುಹಮ್ಮದರಿಗೆ(ಸ) ಅವತೀರ್ಣಗೊಂಡ ಸಂದೇಶವು ಎಲ್ಲ ರೀತಿಯ ಭ್ರಷ್ಟತೆ ಮತ್ತು ಕಳಂಕಗಳಿಂದ ಮುಕ್ತವಾಗಿದೆ “ನಿಸ್ಸಂದೇಹವಾಗಿಯೂ ಈ ಜ್ಞಾಪಕ ಗ್ರಂಥವನ್ನು (ಕುರ್‍ಆನ್) ನಾವೇ ಅವತೀರ್ಣಗೊಳಿಸಿರುತ್ತೇವೆ. ನಿಶ್ಚಯವಾಗಿಯೂ ನಾವೇ ಅದನ್ನು (ಎಲ್ಲ ರೀತಿಯ ಭ್ರಷ್ಟತೆಗಳಿಂದ) ರಕ್ಷಿಸುತ್ತೇವೆ.” (ಪವಿತ್ರ ಕುರ್‍ಆನ್, 15:9)

ಅದೇ ಪ್ರಕಾರ ಪವಿತ್ರ ಕುರ್‍ಆನ್ ಇಂದು ಜಗತ್ತಿನಲ್ಲಿ ಮಾನವ ಹಸ್ತಕ್ಷೇಪ ಅಥವಾ ತಿದ್ದುಪಡಿಗೆ ಗುರಿಯಾಗದೆ ಮೂಲ ರೂಪದಲ್ಲಿ ಉಳಿದಿರುವ ಏಕೈಕ ದಿವ್ಯ ಗ್ರಂಥವಾಗಿದೆ.
ಪೂರ್ವ ಪ್ರವಾದಿಗಳಿಗಿಂತ ಭಿನ್ನವಾಗಿ ಅಂತಿಮ ಪ್ರವಾದಿಯವರನ್ನು ನಿರ್ದಿಷ್ಟ ರಾಷ್ಟ್ರ ಅಥವಾ ಜನಾಂಗದ ಬದಲಾಗಿ ಸಂಪೂರ್ಣ ಮಾನವಕುಲಕ್ಕೆ ನೇಮಿಸಲಾಗಿದೆ.
“ಓ ಪ್ರವಾದಿಗಳೇ, ನಿಮ್ಮನ್ನು ನಾವು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿ ಮತ್ತು ಎಚ್ಚರಿಕೆ ಕೊಡುವವರಾಗಿ ಕಳುಹಿಸಿದ್ದೇವೆ.” (ಪವಿತ್ರ ಕುರ್‍ಆನ್, 34:28)

ಇತಿಹಾಸವನ್ನು ನಿರ್ಮಿಸಿದ ನೂರು ಮಹಾನ್ ವ್ಯಕ್ತಿಗಳ ಶ್ರೇಣಿಯಲ್ಲಿ ಪ್ರವಾದಿ ಮುಹಮ್ಮದ್‍ರಿಗೆ(ಸ) ಪ್ರಥಮ ಸ್ಥಾನ ನೀಡಿರುವ ಕಾರಣವನ್ನು ಮೈಕಲ್ ಹಾರ್ಟ್ ಹೀಗೆ ವಿವರಿಸಿದ್ದಾರೆ: “ಅವರು ಧಾರ್ಮಿಕ ಮತ್ತು ಲೌಕಿಕ ರಂಗಗಳಲ್ಲಿ ಏಕ ಪ್ರಕಾರವಾಗಿ ಜಯಗಳಿಸಿದ ಇತಿಹಾಸದ ಏಕೈಕ ವ್ಯಕ್ತಿಯಾಗಿದ್ದಾರೆ. ಅವರು ಸಮರ್ಥ ರಾಷ್ಟ್ರ ನಾಯಕರಾಗಿದ್ದರು. ಅವರ ಮರಣದ 13 ಶತಮಾನಗಳ ಬಳಿಕ ಇಂದಿಗೂ ಅವರ ಪ್ರಭಾವವು ಸುಶಕ್ತವಾಗಿದೆ.”

ಈ ಹಿನ್ನೆಲೆಯಲ್ಲಿ ದೇವನ ಅಂತಿಮ ಪ್ರವಾದಿ ಮುಹಮ್ಮದ್‍ರ(ಸ) ಮೂಲಕ ಅವತೀರ್ಣಗೊಂಡ ದಿವ್ಯ ಮಾರ್ಗದರ್ಶನವನ್ನು ಅರಿಯಬೇಕಾದುದು ಪ್ರತಿಯೊಬ್ಬ ಮಾನವನ ಧಾರ್ಮಿಕ ಕರ್ತವ್ಯವಾಗಿದೆ. ಈ ಜಗತ್ತಿನಲ್ಲಿ ಶಾಂತಿ-ನೆಮ್ಮದಿಯ ಬದುಕು ಮತ್ತು ಮರಣೋತ್ತರ ಜೀವನದಲ್ಲಿ ಯಶಸ್ಸು ಮತ್ತು ಮೋಕ್ಷ ಸಾಧನೆಗೆ ಅವರ ಜ್ಞಾನದ ಜೊತೆಗೆ ಅನುಸರಣೆಯೂ ಅವಶ್ಯವಾಗಿದೆ.

SHARE THIS POST VIA