Home / ಸಮಾನತೆ

ಸಮಾನತೆ

ಇಸ್ಲಾಮ್ ಸಮಾನತೆ ಹಾಗೂ ಭ್ರಾತೃತ್ವದ ಸಂದೇಶವನ್ನು ನೀಡುತ್ತದೆ. ವರ್ಗ, ವರ್ಣ, ಭಾಷೆ, ಜನಾಂಗೀಯ, ರಾಷ್ಟ್ರೀಯ ಮೊದಲಾದ ಕೃತಕ ಉಚ್ಚ-ನೀಚತೆಯ ಭೇದಭಾವಗಳನ್ನು ತೊಡೆದು ಹಾಕುತ್ತದೆ. ಮಾನವ ಕುಲವನ್ನು ಏಕ ಕುಟುಂಬದ ಸದಸ್ಯರು ಎಂದು ಪರಿಗಣಿಸಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಮೂಲಕ ಸಹೋದರತೆಯ ದಾರದಲ್ಲಿ ಎಲ್ಲರನ್ನೂ ಪೋಣಿಸುತ್ತದೆ.

“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು.”(ಪವಿತ್ರ ಕುರ್‍ಆನ್, 4:1)

ಇಡಿಯ ಮಾನವಕುಲಕ್ಕೆ ಶ್ರೇಷ್ಠತೆಯನ್ನು ದಯಪಾಲಿಸಲಾಗಿದೆ ಎಂದು ಕುರ್‍ಆನ್ ಸಾರುತ್ತದೆ. “ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದ್ದುದೂ ಅವರಿಗೆ ನೆಲ ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕ್ರಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ.” (ಪವಿತ್ರ ಕುರ್‍ಆನ್, 17:7೦)

ಅಷ್ಟೇ ಅಲ್ಲ, ‘ಮಾನವನನ್ನು ಅತ್ತ್ಯುತ್ತಮ ಪ್ರಕೃತಿಯಲ್ಲಿ ಸೃಷ್ಟಿಸಿರುತ್ತೇವೆ’ ಎಂದೂ ಕುರ್‍ಆನ್ ಹೇಳುತ್ತದೆ. ‘ಮನುಷ್ಯನು ಹುಟ್ಟುವಾಗ ಪಾಪದಿಂದ ವಿಮುಕ್ತನಾಗಿದ್ದು ಪರಿಶುದ್ಧ ನಾಗಿರುತ್ತಾನೆ’ ಎಂದು ಪ್ರವಾದಿ(ಸ) ಹೇಳಿರುವರು- ಆತನ ಪೂರ್ವಿಕರು ಮಾಡಿರಬಹುದಾದ ಯಾವುದೇ ಪಾಪ ಕಾರ್ಯಗಳಿಗೆ ಆತನನ್ನು ಹೊಣೆಗಾರನನ್ನಾಗಿ ಮಾಡುವಂತಿಲ್ಲ. “ಯಾವ ಹೊರೆ ಹೊರುವಾತನೂ ಇನ್ನೊಬ್ಬನ ಹೊರೆಯನ್ನು ಹೊರುವುದಿಲ್ಲ.” (ಪವಿತ್ರ ಕುರ್‍ಆನ್, 6:164)

ಒಂದು ವಚನದಲ್ಲಿ ಪ್ರವಾದಿ(ಸ) ಎಲ್ಲಾ ಮನುಷ್ಯರು ಸಹೋದರರು ಎಂದು ಘೋಷಿಸಿದ್ದಾರೆ. “ಎಲ್ಲಾ ಮನುಷ್ಯರು ಪರಸ್ಪರ ಸಹೋದರರು ಎಂಬುದಕ್ಕೆ ನಾನು ಸಾಕ್ಷ್ಯ ವಹಿಸುತ್ತೇನೆ. ” ಮನುಷ್ಯನು ಭೂಮಿಯ ಮೇಲೆ ಅಲ್ಲಾಹನ ಪ್ರತಿನಿಧಿಯಾಗಿದ್ದಾನೆ. ಜಗತ್ತಿನ ಸಕಲ ಸೃಷ್ಟಿಗಳು ಆತನ ಅಧೀನಗೊಳಿಸಲ್ಪಟ್ಟಿವೆ ಎಂದು ಮುಹಮ್ಮದ್(ಸ) ಹೇಳಿರುವರು. ಇದು ಕೇವಲ ಮಾನವರಿಗೆ ನೀಡಲ್ಪಟ್ಟಿರುವ ವಿಶಿಷ್ಟ ಕೊಡುಗೆ. ದೇವಚರರಿಗೂ ಈ ಘನತೆಯನ್ನು ನೀಡಲಾಗಿಲ್ಲ.

ಮನುಷ್ಯರಲ್ಲಿ ಕಂಡು ಬರುವ ವರ್ಣ, ಜನಾಂಗ, ಅನುವಂಶೀಯತೆ, ಭಾಷೆ, ವೈವಿಧ್ಯತೆಯ ಜೀವನ ಶೈಲಿ, ರಾಷ್ಟ್ರೀಯ ಭಿನ್ನತೆಗಳು ಅಲ್ಲಾಹನ ಅನೇಕ ದೃಷ್ಟಾಂತಗಳ ಪೈಕಿ ಕೆಲವು ದೃಷ್ಟಾಂತಗಳು ಎಂದು ಇಸ್ಲಾಮ್ ಪರಿಗಣಿಸುತ್ತದೆ. ಈ ವೈವಿಧ್ಯತೆಯನ್ನು ಅಲ್ಲಾಹನ ಸಾಮರ್ಥ್ಯದ ಒಂದು ಸಂಕೇತವೆಂದು ಮನುಷ್ಯನು ಕಂಡುಕೊಳ್ಳದಿರುವುದು ದುರದೃಷ್ಟಕರವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಈ ಭಿನ್ನತೆಗಳನ್ನು ಉಚ್ಚ ನೀಚತೆಯ ಆಚರಣೆಗೆ ಬುನಾದಿಯನ್ನಾಗಿ ಪರಿಗಣಿಸಲಾಗುತ್ತಿದೆ.

ಪ್ರವಾದಿ(ಸ) ಘೋಷಿಸಿದರು, “ಜನರೇ, ಖಂಡಿತವಾಗಿಯೂ ಅಲ್ಲಾಹನು ಈ ರೀತಿ ಹೇಳಿರುವನು: ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಪಡುವಂತಾಗಲಿಕ್ಕಾಗಿದೆ. ಖಂಡಿತವಾಗಿಯೂ ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಧಿಕ ಭಯ ಭಕ್ತಿಯುಳ್ಳವನೇ ಅತ್ಯಂತ ಗೌರವಾರ್ಹನಾಗಿರುವನು. ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ- ಧರ್ಮ ನಿಷ್ಠೆ ಮತ್ತು ದೇವ ಭಕ್ತಿಯ ಹೊರತು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು. ತಿಳಿಯಿರಿ ರಕ್ತ ಅಥವಾ ಸಂಪತ್ತಿನ ಆಧಾರದಲ್ಲಿರುವ ಎಲ್ಲ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು.

” ಪ್ರವಾದಿವರ್ಯರು(ಸ) ಹೇಳಿರುವರು: “ಅಲ್ಲಾಹ್ ನಿಮ್ಮ ರೂಪ ಮತ್ತು ನಿಮ್ಮ ಸಂಪತ್ತನ್ನು ನೋಡುವುದಿಲ್ಲ. ಅಲ್ಲಾಹ್ ನಿಮ್ಮ ಅಂತರಂಗವನ್ನೂ ಕರ್ಮವನ್ನೂ ನೋಡುತ್ತಾನೆ.” ಜನರ ದೇವ ಭಕ್ತಿಯಲ್ಲದೆ ಮತ್ತೇನೂ ಪ್ರವಾದಿಯವರನ್ನು(ಸ) ಪ್ರಭಾವಿತಗೊಳಿಸುತ್ತಿರಲಿಲ್ಲ ಎಂದು ಹ.ಆಯಿಶಾ(ರ) ಹೇಳಿದ್ದಾರೆ.

ಈ ರೀತಿ ಎಲ್ಲಾ ಮನುಷ್ಯರು ಒಂದೇ ಕುಟುಂಬದ ಸದಸ್ಯರು. ಎಲ್ಲರೂ ಅಲ್ಲಾಹನ ದಾಸರು. ಎಲ್ಲರನ್ನೂ ಒಂದೇ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂಬುದು ಇಸ್ಲಾಮಿನ ತತ್ವವಾಗಿದೆ. ಅಲ್ಲಾಹನ ದೃಷ್ಟಿಯಲ್ಲಿ ಯಾರೂ ಮೇಲು, ಕೀಳಲ್ಲ; ಎಲ್ಲರೂ ಸಮಾನರು. ಕೋಮು ಆಧಾರದ ಮೇಲೆ ಶ್ರೇಷ್ಠತೆಯ ಕರೆ ನೀಡುವವನು ಸತ್ಯವಿಶ್ವಾಸಿಯಲ್ಲವೆಂದು ಪ್ರವಾದಿ(ಸ) ಘೋಷಿಸಿದರು.

“ಕೋಮುವಾದದ ಕಡೆಗೆ ಕರೆ ನೀಡುವವನು ಸತ್ಯವಿಶ್ವಾಸಿಯಲ್ಲ, ಕೋಮುವಾದಕ್ಕಾಗಿ ಹೋರಾಡುವವನು ಸತ್ಯವಿಶ್ವಾಸಿಯಲ್ಲ ಮತ್ತು ಕೋಮುವಾದಕ್ಕಾಗಿ ಪ್ರಾಣತ್ಯಾಗ ಮಾಡುವವನು ಸತ್ಯವಿಶ್ವಾಸಿಯಲ್ಲ.”

ಈ ಪ್ರಕಾರ ಇಸ್ಲಾಮ್ ಮಾನವಕುಲಕ್ಕೆ ಸಮಾನತೆಯ ಸಂದೇಶವನ್ನು ಸಾರಿತು. ವರ್ಗ, ವರ್ಣ, ಭಾಷೆ, ಜಾತಿ, ಜನಾಂಗೀಯ, ಆರ್ಥಿಕ ಅಸಮಾನತೆ, ರಾಷ್ಟ್ರೀಯತೆ ಮೊದಲಾದ ಸಂಕುಚಿತ ಭೇದಭಾವಗಳ ಬುನಾದಿಗೇ ಕೊಡಲಿಯೇಟು ಹಾಕಿತು. ಕಾನೂನಿನನ್ವಯವೂ ಎಲ್ಲಾ ಜನರಿಗೆ ಸಂಪೂರ್ಣ ಮತ್ತು ಸಮಾನ ಹಕ್ಕುಗಳನ್ನು ಇಸ್ಲಾಮ್ ನೀಡುತ್ತದೆ.

ಪ್ರವಾದಿ ಮುಹಮ್ಮದ್(ಸ) ಸಮಾನತೆಯ ಈ ಉದಾತ್ತ ಸಿದ್ಧಾಂತಗಳನ್ನು ಕೇವಲ ಬೋಧನೆಗೆ ಸೀಮಿತಗೊಳಿಸಲಿಲ್ಲ. ತಮ್ಮ ಜೀವಿತಾವಧಿಯಲ್ಲಿಯೇ ಈ ತತ್ವಗಳ ಆಧಾರದಲ್ಲಿ ಒಂದು ಆದರ್ಶನಿಷ್ಠ ಸಮಾಜವನ್ನು ನಿರ್ಮಿಸಿ ಅದನ್ನು ಪ್ರಳಯ ಕಾಲದವರೆಗೆ ಮಾದರಿಯನ್ನಾಗಿಸಲು ಒದಗಿಸಿದ್ದಾರೆ.

ಇಸ್ಲಾಮ್ ಕೇವಲ ಕಾನೂನನ್ನು ನೆಚ್ಚಿ ಕೊಳ್ಳುವುದಿಲ್ಲ. ಕಾನೂನನ್ನು ರೂಪಿಸುತ್ತದೆ. ಮೊಟ್ಟ ಮೊದಲು ಅದು ಜನರನ್ನು ಸಭ್ಯರನ್ನಾಗಿಸಲು ತರಬೇತಿ ನೀಡುತ್ತದೆ. ಕಾನೂನುಗಳು ರೂಪುಗೊಂಡಾಗ ಜನರು ಸ್ವಇಚ್ಛೆಯಿಂದ ಕಾನೂನನ್ನು ಪಾಲಿಸಲು ಮುಂದಾಗುತ್ತಾರೆ. ಇದನ್ನು ಮಾನವಕುಲದ ಅತಿ ಶ್ರೇಷ್ಠ ಸಾಧನೆ ಎನ್ನಬಹುದು.

ಖ್ಯಾತ ಸೇನಾ ನಾಯಕ ಮತ್ತು ಈಜಿಪ್ಟ್ ನ ಗವರ್ನರ್ ಅಮ್ರ್ ಬಿನ್ ಆಸ್‍ರ ಪುತ್ರ ಒಬ್ಬ ವ್ಯಕ್ತಿಯನ್ನು ವಿನಾ ಕಾರಣ ಹೊಡೆದಿದ್ದ. ಆ ವ್ಯಕ್ತಿ ಖಲೀಫ ಉಮರ್‍ ರಿಗೆ(ರ) ದೂರು ಸಲ್ಲಿಸಿದ. ಖಲೀಫ ಉಮರ್ ತಂದೆ, ಮಗ ಇಬ್ಬರನ್ನೂ ಮದೀನಾಕ್ಕೆ ಕರೆಸಿಕೊಂಡರು. ವಿಚಾರಣೆಯ ನಂತರ ವ್ಯಕ್ತಿಗೆ ವಿನಾ ಕಾರಣ ಹೊಡೆಯಲಾಯಿತೆಂದು ದೃಢ ಪಟ್ಟಿತು. ಹ.ಉಮರ್ ಗವರ್ನರ್‍ ರ ಪುತ್ರನನ್ನು ಥಳಿಸುವಂತೆ ವ್ಯಕ್ತಿಗೆ ಆದೇಶಿಸಿದರು. ಸ್ವತಃ ಗವರ್ನರ್ ಕೊರಡೆಯೇಟನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಈ ಘಟನೆಯ ಸಂದರ್ಭದಲ್ಲಿ ಹ.ಉಮರ್‍ ರು(ರ) ಹೇಳಿದ ಮಾತುಗಳು ಸ್ವರ್ಣಾಕ್ಷರಗಳಲ್ಲಿ ಬರೆದಿಡಲು ಯೋಗ್ಯವಾದುದು, “ಅಮ್ರ್ ಬಿನ್ ಆಸ್, ನೀವು ಎಂದಿನಿಂದ ಜನರನ್ನು ಗುಲಾಮರನ್ನಾಗಿಸ ತೊಡಗಿದಿರಿ. ವಸ್ತುತಃ ಅವರ ತಾಯಂದಿರು ಅವರನ್ನು ಸ್ವತಂತ್ರರಾಗಿರುವ ಸ್ಥಿತಿಯಲ್ಲಿ ಹಡೆದಿದ್ದರು.”

ಒಮ್ಮೆ ಕುರೈಶ್ ಗೋತ್ರಕ್ಕೆ ಸೇರಿದ ಫಾತಿಮಾ ಎಂಬ ಮಹಿಳೆ ಕಳ್ಳತನದ ಪ್ರಸಂಗದಲ್ಲಿ ಸಿಕ್ಕಿ ಬಿದ್ದಳು. ಆಕೆ ಕುಲೀನ ವರ್ಗಕ್ಕೆ ಸೇರಿದವಳಾದ್ದರಿಂದ ಆಕೆಗೆ ಕೈ ಕಡಿಯುವ ಶಿಕ್ಷೆ ನೀಡಬಾರದೆಂದು ಪ್ರವಾದಿವರ್ಯರಿಗೆ(ಸ) ಶಿಫಾರಸ್ಸು ಮಾಡಲಾಯಿತು. ಶಿಫಾರಸ್ಸು ಕೇಳಿ ಪ್ರವಾದಿ(ಸ) ಕೋಪೋದ್ರಿಕ್ತರಾಗಿ ಹೀಗೆಂದರು, “ಈ ಮೊದಲು ಅನೇಕ ಜನಾಂಗಗಳು ಇಂತಹ ವಿನಾಶಕಾರಿ ತಪ್ಪಿನ ಕಾರಣಕ್ಕಾಗಿ ಅವನತಿ ಹೊಂದಿ ನಾಶವಾದುವು. ಕುಲೀನ ವ್ಯಕ್ತಿ ಅಪರಾಧವನ್ನು ಎಸಗಿದಾಗ ಆತನನ್ನು ಶಿಕ್ಷಿಸದೆ ಬಿಟ್ಟು ಬಿಡಲಾಗುತ್ತಿತ್ತು. ಸಾಮಾನ್ಯ ಜನರು ಅಪರಾಧವನ್ನೆಸಗಿದಾಗ ಅವರನ್ನು ಶಿಕ್ಷಿಸಲಾಗುತ್ತಿತ್ತು. ನನ್ನ ಪುತ್ರಿ ಫಾತಿಮಾ ಕಳ್ಳತನ ಮಾಡಿದ್ದರೆ ಆಕೆಯ ಕೈಯನ್ನೂ ಕಡಿಯಲು ಆದೇಶಿಸುತ್ತಿದ್ದೆ.”

ಒಮ್ಮೆ ಹಿಮ್ಸ್ ನ(Hims) ಗವರ್ನರ್ ಆಗಿದ್ದ ಉಮೈರ್ ಬಿನ್ ಸಅದ್‍ರಿಗೆ ದೇವಭಯದಲ್ಲಿ ತಮಗೆ ಸರಿಸಾಟಿಯಾದವರು ಯಾರೂ ಇಲ್ಲ ಎಂಬ ಭಾವನೆ ಬಂತು. ಅವರು ಒಬ್ಬ ದಿಮ್ಮಿಯನ್ನು ಉದ್ದೇಶಿಸಿ, “ಅಲ್ಲಾಹನು ನಿನ್ನನ್ನು ಅಪಮಾನಿಸಲಿ” ಎಂದರು. ಈ ಪದಗಳನ್ನು ಉಚ್ಚರಿಸಿದ ಸ್ವಲ್ಪ ಸಮಯದಲ್ಲೇ ಅವರಿಗೆ ತಮ್ಮ ಕೃತ್ಯದ ಬಗ್ಗೆ ನಾಚಿಕೆಯುಂಟಾಯಿತು. ನೇರವಾಗಿ ಖಲೀಫ ಹ.ಉಮರ್‍ ರ(ರ) ಬಳಿ ತೆರಳಿ “ನನ್ನ ಈ ಉನ್ನತ ಅಧಿಕಾರದಿಂದಾಗಿಯೇ ಈ ತರಹದ ಮಾತುಗಳನ್ನಾಡಲು ನನಗೆ ಪ್ರೇರಣೆ ದೊರೆತಿರುವುದು” ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ಹಜ್ಜ್ ಸಂದರ್ಭದಲ್ಲಿ ಎಲ್ಲ ಉನ್ನತ ಅಧಿಕಾರಿಗಳನ್ನು ಒಂದೆಡೆ ಕರೆಸಿ ನೆರೆದಿದ್ದ ಸಾರ್ವಜನಿಕರಿಗೆ ಅಧಿಕಾರಿಗಳ ವಿರುದ್ಧವೇನಾದರೂ ದೂರು ಇದ್ದರೆ ಮುಂದೆ ಬಂದು ಹೇಳಲು ತಿಳಿಸಿದರು. ಒಬ್ಬ ವ್ಯಕ್ತಿ, ಮುಂದೆ ಬಂದು ನಿರ್ದಿಷ್ಟ ಅಧಿಕಾರಿ ವಿನಾ ಕಾರಣ ತನಗೆ ನೂರು ಛಡಿ ಏಟು ನೀಡಿರುವುದಾಗಿ ಹೇಳಿದ. ಹ.ಉಮರ್(ರ) ವ್ಯಕ್ತಿಯನ್ನು ಉದ್ದೇಶಿಸಿ, ಅಧಿಕಾರಿಗೆ ನೂರು ಛಡಿ ಏಟು ನೀಡಲು ತಿಳಿಸಿದರು.

ಜನಾಂಗೀಯ ಆಧಾರದಲ್ಲಿ ಏಳುವ ದರ್ಪ ಹಾಗೂ ಅಹಂಕಾರದ ಭಾವನೆಗಳ ಬಗ್ಗೆ ಎಚ್ಚರಿಸುತ್ತಾ ಪ್ರವಾದಿ ಮುಹಮ್ಮದ್(ಸ) ಹೀಗೆ ಹೇಳಿರುವರು: “ಓ ಕುರೈಶರೇ, ಅಲ್ಲಾಹನು ಅಜ್ಞಾನ ಕಾಲದ ಜನಾಂಗೀಯ ಶ್ರೇಷ್ಠತೆ, ದರ್ಪದ ಭಾವನೆಗಳನ್ನು ನಿಷೇಧಿಸಿದ್ದಾನೆ. ಎಲ್ಲ ಮನುಷ್ಯರು ಆದಮರ ಸಂತತಿಯಾಗಿದ್ದು, ಆದಮರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ.”

ಖಲೀಫ ಉಮರ್, ಪ್ರವಾದಿಯ ಅಳಿಯನೂ ಆಗಿದ್ದ ಖಲೀಫ ಅಲಿ, ಖಲೀಫ ಮನ್ಸೂರ್, ಅಬ್ಬಾಸ್ ಬಿನ್ ಮಅಮೂನ್ ಮೊದಲಾದ ಖಲೀಫರು ಮತ್ತು ರಾಜಂದಿರಿಗೂ ಇಸ್ಲಾವಿೂ ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಸಾಮಾನ್ಯ ಪ್ರಜೆಯಂತೆಯೇ ಹಾಜರಾಗಬೇಕಾಯಿತು.

ಸಿಫ್ಫೀನ್ ಯುದ್ಧದ ಸಂದರ್ಭದಲ್ಲಿ ಹ.ಅಲೀಯವರ(ರ) ಯುದ್ಧ ಕವಚ ಕಳೆದು ಹೋಯಿತು. ಕೆಲವು ದಿನಗಳ ಬಳಿಕ ಕ್ರೈಸ್ತನೊಬ್ಬನು ಅದನ್ನು ಧರಿಸಿಕೊಂಡಿರುವುದನ್ನು ಹ.ಅಲೀ(ರ) ಗಮನಿಸಿದರು. ಖಲೀಫ ಹ.ಅಲೀ(ರ) ಕಾಝಿ ಶುರೈಹ್‍ರ ಕೋರ್ಟಿನಲ್ಲಿ ವ್ಯಾಜ್ಯ ಹೂಡಿದರು. ತಮ್ಮ ಯುದ್ಧ ಕವಚವನ್ನು ಕ್ರೈಸ್ತನಿಗೆ ಕಾಣಿಕೆ ರೂಪದಲ್ಲಾಗಲಿ ಅಥವಾ ಮಾರಾಟದ ರೂಪದಲ್ಲಾಗಲಿ ನೀಡಿಲ್ಲ ಎಂದು ಕಾಝಿಗೆ ತಿಳಿಸಿದರು. ಕ್ರೈಸ್ತನು ಯುದ್ಧ ಕವಚ ತನ್ನದೆಂದೂ ಅದು ತನ್ನ ಬಳಿ ಇರುವುದೇ ಅದಕ್ಕೆ ಸಾಕ್ಷಿ ಎಂದೂ ವಾದಿಸಿದನು. ಹ.ಅಲೀಯವರ(ರ) ಬಳಿ ಯುದ್ಧ ಕವಚ ತಮ್ಮದೆಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ. ನ್ಯಾಯಾಧೀಶರು ತೀರ್ಪು ನೀಡಲು ಸ್ವಲ್ಪ ಸಂಕೋಚ ವ್ಯಕ್ತಪಡಿಸಿದರು. ಖಲೀಫರು, ತಮ್ಮ ಉನ್ನತ ಸ್ಥಾನವನ್ನು ಪರಿಗಣಿಸದೇ ನಿಸ್ಸಂಕೋಚದಿಂದ ತೀರ್ಪು ನೀಡಲು ಕಾಝಿಗೆ ತಿಳಿಸಿದರು. ತೀರ್ಪು ಹ.ಅಲೀಯವರ(ರ) ವಿರುದ್ಧ ನೀಡಲ್ಪಟ್ಟು ಅವರು ಉತ್ಸಾಹದಿಂದ ಅದನ್ನು ಸ್ವೀಕರಿಸಿದರು.

ಖಲೀಫ ಹ.ಉಮರ್(ರ) ಮತ್ತು ಹ.ಉಬೈ ಬಿನ್ ಕಅಬ್‍ರವರ(ರ) ನಡುವೆ ಒಮ್ಮೆ ವಿವಾದ ಉಂಟಾಯಿತು. ಝೈದ್ ಬಿನ್ ಸಾಬಿತ್‍ರ ಕೋರ್ಟಿನಲ್ಲಿ ಹ.ಉಬೈ(ರ) ದಾವೆ ಹೂಡಿದರು. ಝೈದ್ ಹ.ಉಮರ್‍ ರಿಗೆ(ರ) ಖಲೀಫರಾಗಿರುವ ಕಾರಣಕ್ಕಾಗಿ ಹೆಚ್ಚಿನ ಗೌರವವನ್ನು ತೋರ್ಪಡಿಸಿದಾಗ, “ಇದು ನ್ಯಾಯದ ಉಲ್ಲಂಘನೆ” ಎಂದು ತಮ್ಮ ಅಸಂತೋಷವನ್ನು ಹ.ಉಮರ್(ರ) ವ್ಯಕ್ತಪಡಿಸಿದರು. ಪ್ರಚಲಿತ ಸಂಪ್ರದಾಯಕ್ಕೆ ಅನುಸಾರವಾಗಿ ಹ.ಉಮರ್(ರ) ಸಹ ಪ್ರಮಾಣ ಮಾಡಬೇಕೆಂದು ಹ.ಉಬೈ ಬಯಸಿದಾಗ, ಖಲೀಫ ಉಮರ್‍ ರನ್ನು(ರ) ಪ್ರಮಾಣ ಮಾಡುವಂತಹ ಪೇಚಿನಿಂದ ಉಳಿಸಬೇಕೆಂದು ಝೈದ್, ಹ.ಉಬೈರಿಗೆ(ರ) ಮನವಿ ಮಾಡಿದರು. ಈ ಮಾತು ಕೇಳಿ ತೀವ್ರ ಅಸಂತುಷ್ಟರಾದ ಹ.ಉಮರ್(ರ) ಝೈದ್‍ರನ್ನು ಉದ್ದೇಶಿಸಿ ಹೇಳಿದರು: ‘ಒಬ್ಬ ಸಾಮಾನ್ಯ ಮನುಷ್ಯ ಮತ್ತು ಉಮರ್ ನಿಮ್ಮ ದೃಷ್ಟಿಯಲ್ಲಿ ಸಮಾನರಾಗಿರಲು ಸಾಧ್ಯವಿಲ್ಲದಿದ್ದರೆ ನೀವು ನ್ಯಾಯಾಧೀಶನ ಸ್ಥಾನವನ್ನು ಅಲಂಕರಿಸಲು ಯೋಗ್ಯರಲ್ಲ’ ಎಂದರು.

ಕೂಫಾದ ಗವರ್ನರ್ ಹ.ಅಬೂ ಮೂಸಾ ಅಶ್‍ಅರಿಯನ್ನು(ರ) ಉದ್ದೇಶಿಸಿ ಈ ರೀತಿ ಪತ್ರ ಬರೆದರು: ‘ಅಲ್ಲಾಹನ ಆರಾಧನೆಯ ನಂತರ ನ್ಯಾಯದ ಪರಿಪಾಲನೆ ಅತ್ಯಂತ ದೊಡ್ಡ ಹೊಣೆಗಾರಿಕೆಯಾಗಿದೆ. ನಿಮ್ಮ ಸಭೆ ಮತ್ತು ನ್ಯಾಯಾಲಯಗಳಲ್ಲಿ ನ್ಯಾಯ ಪಾಲಿಸಿರಿ. ದುರ್ಬಲರು ನ್ಯಾಯದಿಂದ ಜಿಗುಪ್ಸೆ ಹೊಂದಬಾರದು ಮತ್ತು ಸಮಾಜದ ಕುಲೀನ ವರ್ಗ ತಮ್ಮೊಂದಿಗೆ ಪಕ್ಷಪಾತದ ವರ್ತನೆಯನ್ನು ನಿರೀಕ್ಷಿಸಬಾರದು. ಇಸ್ಲಾಮಿನ ಅತ್ಯಂತ ಪವಿತ್ರ ಭವನವಾದ ಕಅಬಾದ ಛಾವಣಿಯ ಮೇಲೇರಿ ನಮಾಝ್‍ನ ಕರೆ ನೀಡಲು ನೀಗ್ರೋದ ಕರಿಯ ಗುಲಾಮ ಹ.ಬಿಲಾಲ್‍ರಿಗೆ(ರ) ಹೇಳಲಾಗಿತ್ತು.

ವಿಶ್ವ ಬಾಂಧವ್ಯ ಮತ್ತು ಮಾನವ ಸಮಾನತೆಯ ಸಂದೇಶವು ಮಾನವಕುಲದ ಉನ್ನತಿಗೆ ಮುಹಮ್ಮದ್(ಸ) ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಈ ವಾಸ್ತವದ ಕುರಿತು ಸರೋಜಿನಿ ನಾಯ್ಡು ಹೀಗೆ ಹೇಳಿದ್ದಾರೆ, “ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪ್ರಥಮ ಧರ್ಮವೇ ಇಸ್ಲಾಮ್. ಮಸೀದಿಯ ಮಿನಾರಗಳಲ್ಲಿ ಅದಾನ್ ಮೊಳಗುವಾಗ ಭಕ್ತರು ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ರಾಜನೂ ಪ್ರಜೆಯೂ ಭುಜಕ್ಕೆ ಭುಜ ತಾಗಿಸಿ ‘ಅಲ್ಲಾಹನೇ ಮಹಾನನು’ ಎಂದು ಘೋಷಿಸುತ್ತಾ ಸಾಷ್ಟಾಂಗ ವೆರಗುವಾಗ ಇಸ್ಲಾಮಿನ ಪ್ರಜಾಸತ್ತೆಯು ರೂಪು ತಾಳುತ್ತದೆ. “ಓರ್ವ ಮನುಷ್ಯನನ್ನು ಜನ್ಮತಃ ಇನ್ನೊಬ್ಬ ಮನುಷ್ಯನ ಸಹೋದರನೆಂದು ಪರಿಗಣಿಸುವ ಇಸ್ಲಾಮಿನ ಈ ಅಭೇದ್ಯವಾದ ಏಕತೆಯು ನನ್ನನ್ನು ಅನೇಕ ಬಾರಿ ಮಂತ್ರ ಮುಗ್ಧಗೊಳಿಸಿದೆ.”

ಪ್ರವಾದಿ(ಸ) ಎಂದೂ ತಮಗಾಗಿ ವಿಶೇಷ ಸ್ಥಾನಮಾನವನ್ನಾಗಲೀ ವಿಶೇಷ ಸೌಲಭ್ಯವನ್ನಾಗಲೀ ಬಯಸಲಿಲ್ಲ. ದೇವನು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಅಧಿಕಾರವನ್ನು ಜನರೊಡನೆ ತೋರಲಿಲ್ಲ. ತಮಗೆ ಸಲಹೆ ನೀಡಲು, ಟೀಕಿಸಲು, ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಲು ಜನರಿಗೆ ಮುಕ್ತ ಅವಕಾಶ ನೀಡುತ್ತಿದ್ದರು. ತಮ್ಮ ವೈಯಕ್ತಿಕ ಸಲಹೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹಕ್ಕನ್ನು ಜನರಿಗೆ ನೀಡಿದ್ದರು. ಯಾರಿಗಾದರೂ ಅವರು ವಿನಾಯಿತಿ ತೋರಬಯಸಿದಲ್ಲಿ, ತಮ್ಮ ಅನುಯಾಯಿಗಳಿಂದ ಪೂರ್ವಾನುಮತಿಯನ್ನು ಪಡೆಯುತ್ತಿದ್ದರು. ಸಾರ್ವಜನಿಕ ಸಭೆಗಳಲ್ಲಿ ವಿಶಿಷ್ಟ ಸ್ಥಳವನ್ನು ಅವರು ಮೆಚ್ಚುತ್ತಿರಲಿಲ್ಲ. ತಾವು ಆಗಮಿಸಿದಾಗ ಜನರು ಎದ್ದು ನಿಲ್ಲುವುದನ್ನೂ ಅವರು ವಿರೋಧಿಸುತ್ತಿದ್ದರು. ರಣರಂಗದಲ್ಲಿ, ಪ್ರಯಾಣದ ಸಮಯದಲ್ಲಿ, ಕಂದಕವನ್ನು ತೋಡುವಾಗ, ಮಸೀದಿ ನಿರ್ಮಾಣದ ಕೆಲಸದಲ್ಲಿ ಕಟ್ಟಡ ಸಾಮಗ್ರಿಗಳನ್ನು ಸಾಗಿಸುತ್ತಿರುವಾಗ, ಕಲ್ಲು ಒಡೆಯುತ್ತಿರುವಾಗ, ಕಾಡಿನಲ್ಲಿ ಸೌದೆ ಸಂಗ್ರಹಿಸುತ್ತಿರುವಾಗ ತಮ್ಮ ಸಹಚರರ ಜೊತೆಗೂಡುತ್ತಿದ್ದರು.

ಅಲ್ಲಾಹನ ವಿಶೇಷ ಪ್ರೀತಿಗೆ ಪಾತ್ರವಾದ ರಾಷ್ಟ್ರ ಅಥವಾ ಜನಾಂಗದ ಕಲ್ಪನೆ ಇಸ್ಲಾಮಿನಲ್ಲಿಲ್ಲ. ಮುಕ್ತಿ ಮತ್ತು ಅಲ್ಲಾಹನ ಅನುಗ್ರಹ ನಿರ್ದಿಷ್ಟ ಜನಾಂಗಕ್ಕೆ ಸೀಮಿತವಾಗಿಲ್ಲ. ಅಲ್ಲಾಹನು ಹೇಳುತ್ತಾನೆ: “ನೀವು ನನ್ನನ್ನು ಕರೆಯಿರಿ; ನಾನು ನಿಮ್ಮ ಕರೆಗೆ ಓಗೊಡುವೆನು.” “ನನ್ನ ಕರುಣೆಯು ಎಲ್ಲಾ ಸೃಷ್ಟಿಗಳನ್ನು ಆವರಿಸಿದೆ.” ಯಾವ ಜೀವಿಗೂ ಅನ್ಯಾಯವಾಗಬಾರದೆಂಬ ಕಾರಣದಿಂದ ನಿರ್ಣಾಯಕ ದಿನದಂದು ನಾವು ತಕ್ಕಡಿಯನ್ನು ಸ್ಥಾಪಿಸುತ್ತೇವೆ.”

ಗುಲಾಮ ಪದ್ಧತಿ ಪ್ರಾಕೃತಿಕವಾಗಿದ್ದು ಕೆಲವು ಜನಾಂಗಗಳು ದಾಸರಾಗಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟಿವೆಯೆಂಬುದು ಅರಿಸ್ಟಾಟಲ್‍ನ ಸಿದ್ಧಾಂತವಾಗಿತ್ತು. ಆದರೆ ಇಸ್ಲಾಮ್ ಮಾನವ ಕುಲವನ್ನು ಇತಿಹಾಸದಲ್ಲಿ ಜಗತ್ತೆಂದೂ ಕಂಡರಿಯದ ಅತ್ಯಂತ ಶ್ರೇಷ್ಠ ಮಟ್ಟದ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಟ್ಟು ಗುಲಾಮತನದಿಂದ ಮೇಲೆತ್ತಿತು! ಮನುಷ್ಯರನ್ನು ಮಹೋನ್ನತ ಸ್ಥಾನಮಾನಗಳಿಗೆ ಏರಿಸಿ ಪವಾಡ ಸದೃಶ ಕಾರ್ಯಗಳನ್ನು ಮಾಡುವ ಪ್ರೇರಣೆ ನೀಡಿತು.

ಒಮ್ಮೆ ಪ್ರವಾದಿವರ್ಯರೊಂದಿಗೆ(ಸ), ಸ್ವರ್ಗಕ್ಕೆ ಹತ್ತಿರ ಮತ್ತು ನರಕದಿಂದ ದೂರ ಮಾಡುವ ಕಾರ್ಯ ಯಾವುದು ಎಂದು ಕೇಳಲಾಯಿತು. ಪ್ರವಾದಿವರ್ಯರು(ಸ) ಹೇಳಿದರು: “ಗುಲಾಮನನ್ನು ವಿಮೋಚನೆಗೊಳಿಸಿರಿ ಅಥವಾ ಕೈದಿಯನ್ನು ಬಿಡುಗಡೆಗೊಳಿಸಿರಿ. ಆದರೆ ಅಲ್ಲಾಹನ ದೃಷ್ಟಿಯಲ್ಲಿ ಗುಲಾಮನನ್ನು ಬಿಡುಗಡೆಗೊಳಿಸುವುದು ಅತ್ಯಂತ ಪ್ರಿಯವಾದ ಕಾರ್ಯವಾಗಿದೆ” ಎಂದರು. ಪ್ರವಾದಿ(ಸ) ಹೇಳಿದರು, “ನಿಮ್ಮ ಗುಲಾಮರು ನಿಮ್ಮ ಸಹೋದರರಾಗಿದ್ದಾರೆ. ಸಹೋದರನನ್ನು ಹೊಂದಿರುವ ವ್ಯಕ್ತಿ ತಾನು ಆಹಾರ ಸೇವಿಸುವಂತೆ ಹಾಗೂ ಉಡುಪು ಧರಿಸುವಂತೆ ಅವನಿಗೂ ಆಹಾರ ಮತ್ತು ಉಡುಪನ್ನು ನೀಡಬೇಕು. ಅವರ ಸಾಮರ್ಥ್ಯಕ್ಕೆ ವಿೂರಿದ ಕೆಲಸವನ್ನು ಅವರಿಗೆ ಹೇಳಬೇಡಿ. ಒಂದು ವೇಳೆ ಹೇಳಿದರೆ ನೀವೂ ಅವರಿಗೆ ನೆರವಾಗಿ.”

ಇಸ್ಲಾವಿೂ ಇತಿಹಾಸದಲ್ಲಿ ಗುಲಾಮರು ಸೇನಾ ನಾಯಕನ ಸ್ಥಾನವನ್ನು ಅಲಂಕರಿಸುವ ಉನ್ನತ ಮಟ್ಟಕ್ಕೆ ತಲುಪಿದರು. ಒಮ್ಮೆ ಪ್ರವಾದಿಯವರು(ಸ) ಪ್ರಖ್ಯಾತ ಸಹಾಬಿಗಳು ಇದ್ದಂತಹ ಸೇನೆಯ ಮುಖ್ಯಸ್ಥನಾಗಿ ಹ.ಝೈದ್ ಬಿನ್ ಹಾರಿಸ್‍ರನ್ನು(ರ) ನೇಮಿಸಿದರು. ಝೈದ್‍ರ ನಿಧನಾ ನಂತರ ಹ.ಅಬೂಬಕರ್ ಸಿದ್ದೀಕ್ ಮತ್ತು ಹ.ಉಮರ್‍ ರಂತಹ ಶ್ರೇಷ್ಠ ಸಹಾಬಿಗಳು ಇರುವಂತಹ ಸೇನಾ ತುಕಡಿಯ ನಾಯಕರಾಗಿ ಝೈದ್‍ರ ಪುತ್ರ ಹ.ಉಸಾಮರನ್ನೂ(ರ) ನೇಮಿಸಿದರು. ಈ ರೀತಿ ಗುಲಾಮರಿಗೆ ಇತರ ಜನರಂತೆ ಸಮಾನ ಸ್ಥಾನಮಾನಗಳು ಮಾತ್ರವಲ್ಲ, ಸ್ವತಂತ್ರ ಜನರನ್ನು ಒಳಗೊಂಡ ಸೇನೆಯ ನಾಯಕ ಪಟ್ಟವನ್ನೂ ನೀಡಲಾಯಿತು.

ಹಾಗೆಯೇ ಇಸ್ಲಾಮ್ ಗುಲಾಮರಿಗೆ ರಾಜಕೀಯ ನೇತೃತ್ವವನ್ನೂ ನೀಡಿತು. ಪ್ರವಾದಿಯವರು(ಸ) ಹೇಳಿದರು: “ನಿಮ್ಮನ್ನು ಆಳಲು ನೀಗ್ರೋ ಗುಲಾಮನನ್ನು ನೇಮಿಸಲಾಗಿದ್ದರೂ, ಆತನ ಆಜ್ಞಾಪಾಲನೆ ಮಾಡಿ.” ಪ್ರವಾದಿ(ಸ) ತಮ್ಮ ಅನುಪಸ್ಥಿತಿಯಲ್ಲಿ ಈ ಮೊದಲು ಗುಲಾಮರಾಗಿದ್ದ ಹ.ಝೈದ್ ಬಿನ್ ಹಾರಿಸ್‍ರನ್ನು(ರ) ಮದೀನಾದ ಗವರ್ನರ್ ಆಗಿ ನೇಮಿಸಿದ್ದರು.

ಗುಲಾಮರು ಸ್ವತಂತ್ರಗೊಂಡ ನಂತರ ಗುಲಾಮತನದ ಯಾವ ಛಾಯೆಯೂ ಅವರಲ್ಲಿ ಉಳಿಯುತ್ತಿರಲಿಲ್ಲ. ಎಲ್ಲಾ ಹಕ್ಕುಗಳು ಮತ್ತು ಸವಲತ್ತುಗಳಿಗೆ ಅವರು ಅರ್ಹರಾಗುತ್ತಿದ್ದರು. ಜನರನ್ನು ವೈಚಾರಿಕವಾಗಿ ತಿದ್ದಲಿಕ್ಕಾಗಿ ಪ್ರವಾದಿ(ಸ) ತಮ್ಮ ಅತ್ತೆಯ ಮಗಳನ್ನು ಗುಲಾಮರಾಗಿದ್ದ ಅವರ ಸಾಕು ಮಗ ಹ.ಝೈದ್‍ರಿಗೆ(ರ) ವಿವಾಹ ಮಾಡಿಕೊಟ್ಟರು. ಸ್ವತಃ ಪ್ರವಾದಿಯವರು(ಸ) ಅಬಿಸೀನಿಯಾದ ನೀಗ್ರೋರನ್ನು ವಿವಾಹವಾದರು.

ಸಾಮಾನ್ಯ ಪ್ರಜೆಯಾಗಿದ್ದ ಹ.ಅಬೂದರ್ರ್ ಗಿಫಾರಿ(ರ) ದೀನ ದಲಿತರ ಉದ್ಧಾರಕ್ಕಾಗಿ ಕ್ರಾಂತಿಕಾರಿ ಮನೋಭಾವ ಹೊಂದಿದ್ದರು. ಮಕ್ಕಾದ ಕುಲೀನ ವರ್ಗಕ್ಕೆ ಸೇರಿದ್ದ ಹ.ಅಬೂಬಕರ್ ಸಿದ್ದೀಕ್(ರ), ಹ.ಉಮರ್(ರ), ಹ.ಉಸ್ಮಾನ್(ರ), ಹ.ಅಲಿ(ರ), ಹ.ಅಬ್ದುರ್ರಹ್ಮಾನ್ ಬಿನ್ ಔಫ್ (ರ) ಮೊದಲಾದ ಸಹಾಬಿಗಳು ತಮ್ಮ ಸಂಪತ್ತು, ಅಧಿಕಾರ, ಪ್ರಭಾವವನ್ನು ಗುಲಾಮರ ವಿಮೋಚನೆಗಾಗಿ ಮತ್ತು ಬಡತನದ ನಿವಾರಣೆಗಾಗಿ ಉಪಯೋಗಿಸಿದರು. ಇದು ಪ್ರವಾದಿ ಮುಹಮ್ಮದ್(ಸ) ಮಾಡಿದ ಮಾನಸಿಕ ಪರಿವರ್ತನೆಯ ಕಾರಣದಿಂದಾಗಿತ್ತು. ಖಲೀಫರಾಗಿದ್ದಾಗ ಹ.ಉಮರ್(ರ) ಪ್ರಯಾಣ ಮಾಡುವಾಗ ಒಂಟೆಯ ಮೇಲೆ ಸವಾರಿ ಮಾಡುವ ಸರದಿ ತಮ್ಮ ಗುಲಾಮನಿಗೆ ಬಂದಾಗ, ಹೆಮ್ಮೆಯಿಂದ ಗುಲಾಮನನ್ನು ಒಂಟೆಯ ಮೇಲೆ ಕುಳ್ಳಿರಿಸಿ ಒಂಟೆಯ ಮೂಗುದಾರ ಹಿಡಿದು ಉರಿಯುವ ಮರಳು ಗಾಡಿನಲ್ಲಿ ನಡೆಯುತ್ತಿದ್ದರು. ಪ್ರವಾದಿಯವರ(ಸ) ಮಗಳು ಹ.ಫಾತಿಮಾ(ರ) ಗೋಧಿ ಹಿಟ್ಟು ಮಾಡುತ್ತಿದ್ದ ದಾಸಿಯೊಡನೆ ತಾವೂ ಕುಳಿತು ಅವರಿಗೆ ಸಹಕರಿಸುತ್ತಿದ್ದರು.

ಬಹುತೇಕ ಇಸ್ಲಾವಿೂ ಇತಿಹಾಸಕಾರರು ವರ್ಗ, ವರ್ಣ, ಜನಾಂಗೀಯ ಆಧಾರಿತ ಮಾನವರ ವಿಭಜನೆಯನ್ನು ನಿರ್ಮೂಲಗೊಳಿಸಿದುದು ಇಸ್ಲಾಮಿನ ಶ್ರೇಷ್ಠ ಸಾಧನೆಗಳಲ್ಲೊಂದಾಗಿದೆ ಎಂಬುದನ್ನು ಒಪ್ಪುತ್ತಾರೆ. ಈ ಕಾರಣದಿಂದಾಗಿಯೇ ಸಮಾಜದ ದುರ್ಬಲ ವರ್ಗ ಇಸ್ಲಾಮಿನೆಡೆಗೆ ವಿಶೇಷವಾಗಿ ಆಕರ್ಷಿತವಾಯಿತು. ಉನ್ನತ ಸ್ಥಾನ ಮಾನವನ್ನು ಗಳಿಸುವಲ್ಲಿಯೂ ಸಫಲವಾಯಿತು.

SHARE THIS POST VIA