ಮನುಷ್ಯನು ಸಂಘ ಜೀವಿಯಾಗಿದ್ದಾನೆ. ಸಂಘಟಿತ ಜೀವನದಲ್ಲಿ ಕುಟುಂಬವು ಅತ್ಯಂತ ಚಿಕ್ಕ ಘಟಕವಾಗಿದೆ. ಸುಭದ್ರ ಕುಟುಂಬವು ವ್ಯಕ್ತಿಯ ಸುರಕ್ಷಿತತೆಯನ್ನು ಕಾಪಾಡುತ್ತದೆ. ತಂದೆ-ತಾಯಿ ಕುಟುಂಬದ ಕೇಂದ್ರ ಬಿಂದುವಾಗಿದ್ದಾರೆ. ಅವರ ಪ್ರೀತಿ ವಾತ್ಸಲ್ಯ, ಸಾನ್ನಿಧ್ಯಗಳು ಮಕ್ಕಳಿಗೆ ಎಲ್ಲ ಸಂದರ್ಭಗಳಲ್ಲೂ ಮನ ಸಂತೃಪ್ತಿ, ಸಮಾಧಾನ ನೀಡುತ್ತದೆ. ಮನುಷ್ಯರನ್ನು ಹೊರತು ಪಡಿಸಿ ಇತರ ಜೀವಿಗಳಿಗೆ ದೈಹಿಕ ಅವಶ್ಯಕತೆಗಳಿರುತ್ತವೆ. ಅದನ್ನು ಪೂರ್ಣಗೊಳಿಸಲು ಬೇಕಾಗುವಷ್ಟು ಮಾತ್ರ ಸುರಕ್ಷಿತತೆ ಅದಕ್ಕಿರುವುದು. ಆದರೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯು ಒಂದು ಹಂತದ ವರೆಗೆ ಅಂದರೆ ಸ್ವತಃ ಏನಾದರೂ ನಿರ್ಧಾರ ಕೈಗೊಳ್ಳುವ ವರೆಗೆ ತಂದೆ-ತಾಯಿಗಳ ಸಂರಕ್ಷಣೆಯ ಅಗತ್ಯ ಮಕ್ಕಳಿಗೆ ಖಂಡಿತಾ ಇದೆ.
ಶಿಕ್ಷಣ ಪೂರೈಸಿದ ಬಳಿಕ ಉದ್ಯೋಗ, ವಿವಾಹ ಇತ್ಯಾದಿಗಳು ತಂದೆ-ತಾಯಿಯ ಸುಪರ್ದಿಯಲ್ಲಿಯೇ ನಡೆಯುತ್ತದೆ. ಇಂತಹ ಸಂರಕ್ಷಣೆಯಿಂದ ಯಾರಾದರೂ ವಂಚಿತರಾದರೆ ಅವರಿಗೆ ಏಕಾಂತತೆ ಮತ್ತು ಅರಕ್ಷಿತ ಭಾವನೆ ಉಂಟಾಗುತ್ತದೆ. ಆ ಕಾರಣದಿಂದ ಮಾತಾಪಿತರನ್ನೋ ಅಥವಾ ಅವರೀರ್ವರಲ್ಲಿ ಒಬ್ಬರನ್ನೋ ಕಳಕೊಂಡವರಿದ್ದರೆ ಅಂತಹವರನ್ನು ನಾವು ಅನಾಥರೆಂದು ಕರೆಯುತ್ತೇವೆ. ಅಂತಹವರು ಸುರಕ್ಷಿತತೆ, ಆತ್ಮೀಯತೆಯ ನಿರೀಕ್ಷೆಯಲ್ಲಿರುತ್ತಾರೆ. ಈ ಕಾರಣದಿಂದಲೇ ಇಸ್ಲಾಮ್ ಅನಾಥರ ಸಂರಕ್ಷಣೆಗೆ ಭಾರೀ ಮಹತ್ವ ನೀಡಿದೆ.
ಇಸ್ಲಾಮೀ ದೃಷ್ಟಿಕೋನದಲ್ಲಿ ಅನಾಥರ ಪೋಷಣೆ ಕೇವಲ ಓರ್ವನ ಔದಾರ್ಯಾವಲ್ಲ. ಅದು ಆತನ ಕಡ್ಡಾಯ ಕರ್ತವ್ಯವಾಗಿದೆ. ಈ ಕುರಿತು ಕುರ್ ಆನ್ ಹೇಳುತ್ತದೆ, ಅನಾಥರನ್ನು ಹೊರದಬ್ಬುವವನು ಮತ್ತು ದರಿದ್ರನಿಗೆ ಊಟ ಕೊಡಲು ಪ್ರೇರೇಪಿಸದವನು ಧರ್ಮಧಿಕ್ಕಾರಿಯಾಗಿದ್ದಾನೆ. (ಪವಿತ್ರ ಕುರ್ ಆನ್-107: 1-3)
ಅನಾಥರೊಂದಿಗೆ ಗೌರವ ಪೂರ್ಣವಾಗಿ ವರ್ತಿಸಿರಿ. ಅವರ ಹಕ್ಕುಗಳನ್ನು ನೀಡಿರಿ ಎಂದು ಇಸ್ಲಾಮ್ ಆದೇಶಿಸುತ್ತದೆ. ಅನಾಥ ಮಕ್ಕಳ ಮನಸ್ಸಿಗೆ ನೋವಾಗದಂತೆ ನಾವು ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಅದು ಅಗತ್ಯ. ಅನಿವಾರ್ಯವೂ ಹೌದು.
ನೋಡಿರಿ, ಪ್ರವಾದಿವರ್ಯರು(ಸ) ಈ ಕಾರಣದಿಂದಲೇ ಅನಾಥರ ಉಪಸ್ಥಿತಿಯಲ್ಲಿ ತಮ್ಮ ಮಕ್ಕಳನ್ನು ಮುದ್ದಿಸುವುದನ್ನು ಇಷ್ಟ ಪಟ್ಟಿರಲಿಲ್ಲ. ಅನಾಥ ಮಕ್ಕಳ ತಲೆನೇವರಿಸಿ ಸ್ನೇಹ ವಾತ್ಸಲ್ಯದಿಂದ ವರ್ತಿಸುವುದು ಪುಣ್ಯ ಕರ್ಮವಾಗಿದೆಯೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಮಾತ್ರವಲ್ಲ ಅದನ್ನು ಮಾಡಿಯು ತೋರಿಸಿದ್ದಾರೆ. ಅನಾಥರ ಪೋಷಣೆ ಮಾಡಿದವನಿಗೆ ಮರಣಾನಂತರ ಪರಲೋಕದಲ್ಲಿ ಮಹತ್ತರವಾದ ಪ್ರತಿಫಲವಿದೆಯೆಂದು ಪ್ರವಾದಿವರ್ಯರು(ಸ) ಸಾರಿದ್ದಾರೆ.
ಪ್ರವಾದಿವರ್ಯರು(ಸ) ಹೇಳಿದರು, “ಅನಾಥರ ಮತ್ತು ಇತರ ನಿರ್ಗತಿಕರ ಪೋಷಕ ಹಾಗೂ ನಾನು ಸ್ವರ್ಗದಲ್ಲಿ ಈ ರೀತಿ ಪರಸ್ಪರ ನಿಕಟವಾಗಿರುವೆವು.”
ಹೀಗೆ ಹೇಳಿ ಪ್ರವಾದಿವರ್ಯರು(ಸ) ತಮ್ಮ ತೋರು ಬೆರಳು ಮತ್ತು ನಡು ಬೆರಳುಗಳನ್ನೆತ್ತಿ ತೋರಿಸಿದರು. ಅವರೆಡರ ನಡುವೆ ಸ್ವಲ್ಪ ಮಾತ್ರ ಅಂತರವಿತ್ತು.
ಅನಾಥರ ಸಂರಕ್ಷಕರಿಗೆ ಸ್ವರ್ಗ ಪ್ರವೇಶದ ಸೌಭಾಗ್ಯ, ಅದರಲ್ಲೂ ಪ್ರವಾದಿವರ್ಯರು(ಸ) ಸಾಮೀಪ್ಯದ ಭಾಗ್ಯ! ಇದಕ್ಕಿಂತ ದೊಡ್ಡ ಸೌಭಾಗ್ಯವನ್ನು ಊಹಿಸಲಾದೀತೆ?