ಇಸ್ಲಾಮಿನ ಮೂಲವಚನ
‘ಲಾ ಇಲಾಹ ಇಲ್ಲಲ್ಲಾಹು, ಮುಹಮ್ಮದರ್ರಸೂಲುಲ್ಲಾಹ್’ ಅರ್ಥಾತ್ “ಅಲ್ಲಾಹನ ಹೊರತು ದಾಸ್ಯ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ. ಮುಹಮ್ಮದರು(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬುದು ಇಸ್ಲಾಮಿನ ಮೂಲ ವಚನ.
ಈ ಪವಿತ್ರ ವಚನವೇ ಪವಿತ್ರ ಕುರ್‍ಆನಿನ ಶಿಕ್ಷಣಗಳ ತಿರುಳು. ಮನುಷ್ಯನ ಎಲ್ಲ ರೀತಿಯ ಆರಾಧನೆ, ದಾಸ್ಯ ಮತ್ತು ಅನುಸರಣೆಗೆ ಅರ್ಹನಾದವನು ಅಲ್ಲಾಹನು ಮಾತ್ರ. ಆತನ ದೇವತ್ವದಲ್ಲಿ ಯಾರೂ ಭಾಗೀದಾರರಿಲ್ಲ. ಅವನು ಏಕೈಕನು, ಚಿರಂತನನು, ನಿರಾಕಾರನು, ಸ್ವಯಂ ಜೀವಂತನು, ಅನಾದಿ, ಅನಂತನು, ಎಲ್ಲ ಅತ್ಯುತ್ತಮ ಗುಣಗಳೂ ಅತ್ಯುನ್ನತ ಮಟ್ಟದಲ್ಲಿ ಆತನಲ್ಲಿ ಸಮ್ಮಿಳಿತವಾಗಿವೆ. ಆತನು ಸರ್ವ ಸದ್ಗುಣ ಸಂಪನ್ನನು. ಎಲ್ಲ ನ್ಯೂನತೆ-ಕೊರತೆಗಳಿಂದ ಮತ್ತು ಮನುಷ್ಯನಿಗೆ ಊಹಿಸಲು ಸಾಧ್ಯವಾಗುವ ಯಾವುದೇ ರೀತಿಯ ದೌರ್ಬಲ್ಯಗಳಿಂದ ಅವನು ಸಂಪೂರ್ಣ ಮುಕ್ತನಾಗಿರುವನು.
ಪವಿತ್ರ ಕುರ್‍ಆನಿನ ಪ್ರತಿಯೊಂದು ಪುಟದಲ್ಲೂ ಮೇಲೆ ಪ್ರಸ್ತಾಪಿಸಿದ ಏಕದೇವ ಕಲ್ಪನೆಯ ವಿವರಣೆಗಳು ಬೇರೆ ಬೇರೆ ರೀತಿಯಲ್ಲಿ ಬಂದಿವೆ. ಆ ಪೈಕಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿದ್ದೇವೆ:
“ಹೇಳಿರಿ- ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (1-4)
ಈ ಅಧ್ಯಾಯದಲ್ಲಿ ದೇವನಿಗೆ ಸಹಭಾಗಿಗಳಿರುವರು, ಪುತ್ರ- ಪುತ್ರಿಯರಿರುವರು ಹಾಗೂ ಅವನಿಗೆ ಮಡದಿ ಮಕ್ಕಳಿರುವರು ಎಂಬ ಕಲ್ಪನೆಗಳನ್ನು ಸ್ಪಷ್ಟವಾಗಿ ಖಂಡಿಸಲಾಗಿದೆ.
ಇನ್ನೊಂದು ಕಡೆ ಪವಿತ್ರ ಕುರ್‍ಆನಿನಲ್ಲಿ ಏಕದೇವ ಕಲ್ಪನೆಯನ್ನು ಈ ರೀತಿ ಸ್ಪಷ್ಟಪಡಿಸಲಾಗಿದೆ:
“ಅಲ್ಲಾಹನು ಚಿರಂತನು, ಸ್ವಯಂ ಜೀವಂತನು. ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ? ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ.” (2.255)