Home / ಧಾರ್ಮಿಕ ಸಹಿಷ್ಣುತೆ

ಧಾರ್ಮಿಕ ಸಹಿಷ್ಣುತೆ

“ಇಸ್ಲಾಮ್ ಆ್ಯಸ್ ಎ ಪೊಲಿಟಿಕಲ್ ಸಿಸ್ಟಮ್”(Islam as a Political System) ಎಂಬ ಕೃತಿಯ ಲೇಖಕರು ಹೀಗೆ ಬರೆದಿದ್ದಾರೆ:
“ಏಕ ಕಾಲದಲ್ಲಿ ರಾಜನೂ, ಯೋಧರೂ ಆಗಿದ್ದ ಧರ್ಮ ಸಂಸ್ಥಾಪಕರು ಜಗತ್ತಿನಲ್ಲಿ ಮುಹಮ್ಮದ್(ಸ) ಮಾತ್ರವಾಗಿದ್ದಾರೆ. ಹಿಂಸೆ ಮತ್ತು ಅತಿಯಾಸೆಯನ್ನು ನಿಯಂತ್ರಿಸಲು ಅವರು ಅಧಿಕಾರವನ್ನು ಬಳಸಿದ್ದರು. ತಮ್ಮ ಮಾತನ್ನು ವೇದ ವಾಕ್ಯವೆಂಬಂತೆ ಪರಿಗಣಿಸುತ್ತಿದ್ದ ಅನುಯಾಯಿಗಳನ್ನು ಹೊಂದಿದ್ದ, ಅವರು ಧರ್ಮವನ್ನು ಲೌಕಿಕ ಸಂಪತ್ತು ಮತ್ತು ಅಧಿಕಾರ ಗಳಿಸಲು ಬಳಸಬಹುದಾಗಿತ್ತು. ಅವರ ನಡವಳಿಕೆ ಮನುಷ್ಯನ ಹೃದಯದಲ್ಲಿ ಸಾಮಾನ್ಯವಾಗಿ ಅಡಗಿರುವ ಆಕಾಂಕ್ಷೆಗಳಿಗೂ ತದ್ವಿರುದ್ಧವಾಗಿತ್ತು. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ, ಅಧಿಕಾರದ ಪ್ರಯೋಗದಲ್ಲಿ ಮುಹಮ್ಮದ್(ಸ) ಸೌಮ್ಯ ಧೋರಣೆಯನ್ನು ಅನುಸರಿಸುತ್ತಿದ್ದರು. ವಿಜಯದ ಸಂದರ್ಭದಲ್ಲಿ ಕ್ಷಮೆ, ಧಾರ್ಮಿಕ ವಿಷಯಗಳಲ್ಲಿ ಸಹಿಷ್ಣುತೆಯ ಧೋರಣೆಯನ್ನು ಅನುಸರಿಸುತ್ತಿದ್ದರು…” ಮುಂದುವರಿದು “ಇತರ ಧರ್ಮಗಳ ಧಾರ್ಮಿಕ ವಿಷಯಗಳಲ್ಲಿ ಇಸ್ಲಾಮ್ ಎಂದೂ ಹಸ್ತಕ್ಷೇಪ ಮಾಡಿಲ್ಲ. ಜನರಿಗೆ ಕಿರುಕುಳ ನೀಡುವ ಮತಾಂತರಕ್ಕೆ ಒತ್ತಾಸೆ ನೀಡುವ ಕಾರ್ಯವನ್ನೂ ಮಾಡಿಲ್ಲ. ತನ್ನ ಸಿದ್ಧಾಂತವನ್ನು ಪ್ರಚುರ ಪಡಿಸಿದರೂ, ಅದನ್ನು ಇತರರ ಮೇಲೆ ಬಲಾತ್ಕಾರದಿಂದ ಹೇರುವ ಕಾರ್ಯ ಮಾಡಲಿಲ್ಲ. ಈ ಧರ್ಮವನ್ನು ಸ್ವೀಕರಿಸಿದವರಿಗೆ ಸಮಾನ ಹಕ್ಕುಗಳು ದೊರೆಯುತ್ತಿದ್ದುವು. ಪರಾಭವಗೊಂಡ ರಾಜ್ಯಗಳಿಗೆ ವಿಮೋಚನೆ ದೊರೆಯುತ್ತಿತ್ತು.”

ಇಸ್ಲಾಮ್ ಧರ್ಮದ ಪ್ರಚಾರವನ್ನು ಕೈಗೊಂಡು ಭೂಮಿಯ ಮೇಲೆ ಅಲ್ಲಾಹನ ಕಾನೂನನ್ನು ಜಾರಿಗೊಳಿಸಲು ಪ್ರಯತ್ನಿಸಬೇಕಾಗಿರುವುದು ಮುಸ್ಲಿಮರ ಕರ್ತವ್ಯವಾಗಿದೆ. ಆದರೆ ಈ ಕಾರ್ಯಕ್ಕಾಗಿ ಯಾರನ್ನೂ ಬಲಾತ್ಕಾರದಿಂದ ಮತಾಂತರಗೊಳಿಸುವುದಾಗಲೀ ಒತ್ತಡ ಹೇರುವುದಾಗಲೀ ಮಾಡಬಾರದೆಂದು ಇಸ್ಲಾಮ್ ಆದೇಶಿಸುತ್ತದೆ.
“ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಬೇರ್ಪಡಿಸಲ್ಪಟ್ಟಿದೆ.” (ಪವಿತ್ರ ಕುರ್‍ಆನ್, 2:256)

ಇಸ್ಲಾಮ್ ತನ್ನ ಅನುಯಾಯಿಗಳಿಗೆ ಧರ್ಮದ ತತ್ವಗಳನ್ನು ಉತ್ತಮ, ನ್ಯಾಯೋಚಿತ ಮತ್ತು ಸಭ್ಯ ರೀತಿಯಲ್ಲಿ ಪ್ರಚಾರಪಡಿಸಲು ಆದೇಶಿಸುತ್ತದೆ. ‘ಗುರಿ, ಸಾಧನೆಯು ಯಾವುದೇ ವಿಧಾನವನ್ನು ಸಮರ್ಥಿಸುತ್ತದೆ’ ಎಂಬ ತತ್ವವನ್ನು ಇಸ್ಲಾಮ್ ಒಪ್ಪುವುದಿಲ್ಲ.
“ಓ ಪೈಗಂಬರರೇ, ಯುಕ್ತಿ ಹಾಗೂ ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಅತ್ಯುತ್ತಮ ರೀತಿಯಿಂದ ವಾದಿಸಿರಿ.”(ಪವಿತ್ರ ಕುರ್‍ಆನ್, 16:125)

1) ತಾಯಿಫ್ ನ ಜನತೆ ತಮ್ಮ ಸಂದೇಶಕ್ಕೆ ಉತ್ತರವಾಗಿ ಕಲ್ಲು ಮಳೆಗೆರೆದಾಗ ಪ್ರವಾದಿ(ಸ) ಹೇಳಿದರು “ನೀವು ಸತ್ಯವನ್ನು ಸ್ವೀಕರಿಸುವಂತೆ ಮನವೊಲಿಸಲು ನಾನು ಪ್ರಯತ್ನಿಸಬಹುದಷ್ಟೆ. ನೀವು ಕೇಳಲು ಸಿದ್ಧರಿರದಿದ್ದರೆ ಬಿಟ್ಟುಬಿಡಿ.”
2) ಅತೀಕ್ ಹ. ಉಮರ್‍ ರ ಕ್ರೈಸ್ತ ಗುಲಾಮರಾಗಿದ್ದರು. ಅವರನ್ನು ಇಸ್ಲಾಮಿನೆಡೆಗೆ ಹ.ಉಮರ್(ರ) ನಿರಂತರ ಆಹ್ವಾನಿಸುತ್ತಿದ್ದರು. ಅವರು ನಿರಾಕರಿಸಿದಾಗ “ಧರ್ಮದಲ್ಲಿ ಒತ್ತಾಯವಿಲ್ಲ” ಎಂದಷ್ಟೇ ಉತ್ತರಿಸುತ್ತಿದ್ದರು. ಹ. ಉಮರ್(ರ) ನಿಧನ ಹೊಂದುವ ಮೊದಲೇ ಆತನನ್ನು ಬಿಡುಗಡೆ ಗೊಳಿಸಿದರು.

ಮುಸ್ಲಿಮರಿಗೆ ಕಿರುಕುಳವನ್ನು ನೀಡುವ, ಅವರ ಧಾರ್ಮಿಕ ಆಚಾರಗಳಿಗೆ ಅಡಚಣೆಯನ್ನುಂಟು ಮಾಡುವ ಮತ್ತು ಜನರಿಗೆ ಇಷ್ಟವಿರುವ ಧರ್ಮವನ್ನು ಸ್ವೀಕರಿಸುವ ಹಕ್ಕನ್ನು ನಿರಾಕರಿಸುವ ನಿರಂಕುಶ ಪ್ರಭುಗಳ ವಿರುದ್ಧ ಮಾತ್ರ ಯುದ್ಧವನ್ನು ಸಾರುವ ಅನುಮತಿಯನ್ನು ಮುಸ್ಲಿಮರಿಗೆ ನೀಡಲಾಗಿದ್ದು, ಇತರ ಯುದ್ಧಗಳನ್ನು ನಿಷೇಧಿಸಲಾಗಿದೆ.

ಈ ರೀತಿ ಇಸ್ಲಾಮಿನ ಸಂದೇಶ ಶಾಂತಿಯ ಸಂದೇಶವಾಗುತ್ತದೆ. ಪ್ರವಾದಿ ಮುಹಮ್ಮದ್‍ರು(ಸ) ಹೇಳುತ್ತಾರೆ, “ಅಲ್ಲಾಹನ ನಾಮದಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ಯುದ್ಧದ ವೇಳೆ ದೇವನನ್ನು ನಿರಾಕರಿಸುವವನ ಹತ್ಯೆಗೈಯಿರಿ. ಆದರೆ ವಿಶ್ವಾಸ ದ್ರೋಹವೆಸಗದಿರಿ ಮತ್ತು ಮಕ್ಕಳನ್ನು ಕೊಲ್ಲದಿರಿ.” ಮುಸ್ಲಿಮ್ ಸೇನೆಯ ವಿರುದ್ಧ ಶಸ್ತ್ರಾಸ್ತ್ರ ಬಳಸಿದವರ ವಿರುದ್ಧ ಮಾತ್ರ ಹೋರಾಡುವ ಅನುಮತಿ ನೀಡಲಾಗಿದೆ. ಸೊತ್ತು ವಿತ್ತಗಳನ್ನು, ತೋಟಗಳನ್ನು ನಾಶಪಡಿಸುವುದು, ಯಾರದೇ ಘನತೆಗೆ ಕುಂದುಂಟು ಮಾಡುವುದು ಮುಂತಾದ ಕಾರ್ಯಗಳನ್ನು ನಿಷೇಧಿಸಲಾಗಿದೆ.

ರಾಬರ್ಟ್ ಬ್ರಿಪ್ಪಾಲ್ಟ್ ಹೇಳುತ್ತಾರೆ- “…ಧೀರ ಯೋಧನಾಗಿದ್ದರೂ ಸೌಜನ್ಯ ಮೂರ್ತಿಯಾಗಿದ್ದ ಅಲ್ ಮನ್ಸೂನ್ ಹೇಳಿದ, ‘ತಾನು ಯುದ್ಧ ರಂಗದಲ್ಲಿ ಅನೇಕರನ್ನು ಕೊಂದಿರುವೆನಾದರೂ ಎಂದೂ ಯಾರಿಗೂ ಅಪಮಾನ ಮಾಡಿಲ್ಲ’ ಎಂಬ ಮಾತಿನ ಹಿಂದಿರುವ ಘನತೆ 2೦ನೇ ಶತಮಾನದ ಇಂಗ್ಲೆಂಡ್ ಕೂಡಾ ಅನುಕರಣೀಯವೆಂದು ಒಪ್ಪುವಂತಿದೆ. ಹಿಂಸೆಗೆ ಮಾತ್ರ ಒಗ್ಗಿ ಹೋಗಿದ್ದ ಶಿಲುಬೆ ಯೋಧರು ಸಲಾಹುದ್ದೀನ್ ಅಯ್ಯೂಬಿಯ ಉನ್ನತ ಚಾರಿತ್ರ್ಯ ಮತ್ತು ಔದಾರ್ಯದೆದುರು ನಾಚಿ ನೀರಾದರು…” ಯಾವುದೇ ತರಹದ ದುರುದ್ದೇಶಪೂರಿತ ಕಾರ್ಯವನ್ನು ಮಾಡುವುದರಿಂದ ತಡೆಯಲಾಗಿದೆ. ಏಕೆಂದರೆ ಖಂಡಿತವಾಗಿ ಅಲ್ಲಾಹನು ಕೇಡು ಮಾಡುವವರನ್ನು ಮೆಚ್ಚುವುದಿಲ್ಲ.

ತಮ್ಮ ಶತ್ರುಗಳ ವಿರುದ್ಧ ಹೋರಾಡುವಾಗ ಮುಸ್ಲಿಮರು ಈ ಉದಾತ್ತ ಪರಂಪರೆಯನ್ನು ಪಾಲಿಸುತ್ತಿದ್ದರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಸೆರೆಯಾಳುಗಳನ್ನು ಪೀಡಿಸುವುದಾಗಲೀ ಅವರಿಗೆ ಕಿರುಕುಳ ನೀಡುವುದಾಗಲೀ ಮಾಡುತ್ತಿರಲಿಲ್ಲ.

ಮದೀನಾಕ್ಕೆ ವಲಸೆ ಹೋದ ನಂತರ ಪ್ರವಾದಿ(ಸ) ಅಲ್ಲಿಯ ಯಹೂದಿ ನಾಯಕರನ್ನು ಭೇಟಿ ಮಾಡಿ ಅವರೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿದ್ದರು. ಮುಹಮ್ಮದ್‍ರ(ಸ) ನಡವಳಿಕೆ, ವಿನಯಶೀಲತೆ, ಅನುಕಂಪ, ವಿಶ್ವಾಸಾರ್ಹತೆ ಮತ್ತು ದೀನ ದಲಿತರ ಪರವಾಗಿದ್ದ ಅವರ ಹೃದಯ ವೈಶಾಲ್ಯತೆ ಮದೀನಾದ ಹೆಚ್ಚಿನ ಜನರ ಮನಸ್ಸನ್ನು ಗೆಲ್ಲಲು ಸಹಕಾರಿಯಾಯಿತು. ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ವಿವಿಧ ಜನರೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲೂ ಸುಲಭವಾಯಿತು. ಪ್ರವಾದಿ ಮುಹಮ್ಮದ್(ಸ) ಮಾಡಿಕೊಂಡ ಈ ಒಡಂಬಡಿಕೆಗಳು ರಾಜಕೀಯ ದೃಷ್ಟಿಯಿಂದ ಅತಿ ಶ್ರೇಷ್ಠ ಮಟ್ಟದ ದಾಖಲೆಗಳಾಗಿದ್ದು, ಈ ಮುಂಚೆ ಯಾವ ಪ್ರವಾದಿಗೂ ಇದು ಸಾಧಿಸಲು ಸಾಧ್ಯವಾಗಿರಲಿಲ್ಲ. ಪ್ರವಾದಿ(ಸ) ಹೇಳುತ್ತಾರೆ “ಎಚ್ಚರಿಕೆ! ಇಸ್ಲಾವಿೂ ಸಾಮ್ರಾಜ್ಯದಲ್ಲಿ ಯಾವನೇ ಮುಸ್ಲಿಮೇತರನನ್ನು ಶೋಷಿಸಿದರೆ ಅಥವಾ ಆತನ ಪ್ರಾಣ, ಸೊತ್ತುವಿತ್ತ ಮತ್ತು ಘನತೆಯ ಹಕ್ಕುಗಳನ್ನು ಉಲ್ಲಂಘಿಸಿದರೆ ಅಥವಾ ಆತನಿಗೆ ಸಹಿಸಲಾಗದ ಹೊರೆಯನ್ನು ಆತನ ಮೇಲೆ ಹಾಕಿದರೆ ಅಥವಾ ಆತನ ಅನುಮತಿ ಇಲ್ಲದೆ ಆತನ ಯಾವುದೇ ವಸ್ತುವನ್ನು ಬಳಸಿದರೆ, ಅಲ್ಲಾಹನ ನ್ಯಾಯಾಲಯದಲ್ಲಿ ಆತನ ಪರವಾಗಿ ನಾನು ವಾದಿಸುತ್ತೇನೆ.”

ಸರ್. ಬಿ. ಎನ್. ಆರ್‍ನಾಲ್ಡ್(Sir.B.N.Arnold) ತನ್ನ “ದ ಪ್ರೀಚಿಂಗ್ ಆಫ್ ಇಸ್ಲಾಮ್”(The Preaching of Islam) ಎಂಬ ಪುಸ್ತಕದಲ್ಲಿ ಬರೆಯುತ್ತಾರೆ- “ಕ್ರೈಸ್ತರ ಮತ್ತು ಮುಸ್ಲಿಮ್ ಅರಬರ ನಡುವಿನ ಸೌಹಾರ್ದಯುತ ಬಾಂಧವ್ಯದಿಂದ ಮತಾಂತರಗಳಿಗೆ ‘ಒತ್ತಾಸೆ’ ನಿರ್ಣಾಯಕ ಪಾತ್ರ ವಹಿಸಬಹುದೆಂಬುದು ನಿಚ್ಚಳವಾಗುತ್ತದೆ. ಪ್ರವಾದಿ ಮುಹಮ್ಮದ್(ಸ) ಸ್ವತಃ ಅನೇಕ ಕ್ರೈಸ್ತ ಬುಡಕಟ್ಟುಗಳೊಂದಿಗೆ ಅವರ ಧಾರ್ಮಿಕ ಆಚರಣೆಗಳನ್ನು ರಕ್ಷಿಸುವ ಮತ್ತು ಅವರ ಧರ್ಮಾಧಿಕಾರಿಗಳಿಗೆ ಸಂಪ್ರದಾಯ ಬದ್ಧ ಹಕ್ಕುಗಳನ್ನು ಹಾಗೂ ಅಧಿಕಾರವನ್ನು ಮುಂದುವರಿಸುವ ವಾಗ್ದಾನ ನೀಡುತ್ತಾ ಒಪ್ಪಂದವನ್ನು ಮಾಡಿದ್ದರು.”
ಮುಂದುವರಿದು, “ಹಿಜ್ರತ್‍ನ ಮೊದಲನೆಯ ಶತಮಾನದಲ್ಲಿ ಕ್ರೈಸ್ತ ಅರಬರೊಂದಿಗೆ ವಿಜಯಿ ಮುಸ್ಲಿಮ್ ಸೇನೆ ಮತ್ತು ನಂತರದ ಮುಸ್ಲಿಮ್ ಉತ್ತರಾಧಿಕಾರಿಗಳು ತೋರಿದ ಔದಾರ್ಯ ಹಾಗೂ ಧಾರ್ಮಿಕ ಸಹಿಷ್ಣುತೆಯ ಉದಾಹರಣೆಗಳನ್ನು ಗಮನಿಸಿದರೆ, ಕ್ರೈಸ್ತ ಬುಡಕಟ್ಟುಗಳು ಸ್ವ ಪ್ರೇರಣೆಯಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ” ಎಂದಿದ್ದಾರೆ.
ಮುಸ್ಲಿಮ್ ಸೇನೆ ಜೋರ್ಡಾನಿನ ಕಣಿವೆಯನ್ನು ತಲುಪಿ, ಅಬೂ ಉಬೈದಃ, ‘ಫಿಲ್’ ಎಂಬ ಸ್ಥಳದಲ್ಲಿ ಬಿಡಾರ ಹೂಡಿದಾಗ ಅಲ್ಲಿಯ ಕ್ರೈಸ್ತ ನಿವಾಸಿಗಳು ಅರಬರಿಗೆ ಈ ರೀತಿ ಪತ್ರ ಬರೆದರು:
“ಓ ಮುಸ್ಲಿಮರೇ, ಬೈಝಂಟೀನಿಯರು ಸಹಧರ್ಮಿಯರೇ ಆಗಿದ್ದರೂ ನಾವು ನಿಮ್ಮನ್ನು ಯೋಗ್ಯರೆಂದು ಪರಿಗಣಿಸುತ್ತೇವೆ. ಏಕೆಂದರೆ ನೀವು ನಮ್ಮೊಂದಿಗೆ ಸದ್ವರ್ತನೆ ತೋರುತ್ತೀರಿ, ಹೆಚ್ಚಿನ ಕರುಣೆಯನ್ನು ತೋರುತ್ತೀರಿ ಮತ್ತು ನಮ್ಮೊಂದಿಗೆ ಅನ್ಯಾಯವೆಸಗುವುದಿಲ್ಲ. ನಮ್ಮ ಮೇಲೆ ನಿಮ್ಮ ಆಡಳಿತ ಬೈಝಂಟೀನಿಯರಿಗಿಂತ ಉತ್ತಮವಾದುದು; ಏಕೆಂದರೆ ಅವರು ನಮ್ಮ ಮನೆ ಮಾರುಗಳನ್ನು, ವಸ್ತುಗಳನ್ನು ನಮ್ಮಿಂದ ಕಸಿದು ಕೊಂಡಿದ್ದಾರೆ.”

“ಕ್ರಿ.ಶ. 637 ರಲ್ಲಿ ಡೆಮಾಸ್ಕಸ್ ಅರಬರೊಂದಿಗೆ ಸಂಧಿ ಮಾಡಿಕೊಂಡು ಕೊಳ್ಳೆ, ದರೋಡೆ ಮತ್ತು ಇತರ ಆಕ್ರಮಣಗಳಿಂದ ರಕ್ಷಣೆ ಪಡೆದಾಗ ಸಿರಿಯಾದ ಇತರ ಪಟ್ಟಣಗಳೂ ಇಂತಹ ಕ್ರಮವನ್ನು ಅನುಸರಿಸಲು ಹಿಂದೆ ಉಳಿಯಲಿಲ್ಲ. ಎಮೆಸ್ಸ(Emessa), ಅರಿಥುಸ (Arethussa), ಹಿರೋಪೊಲಿಸ್(Hieropolis) ಮತ್ತಿತರ ಪಟ್ಟಣಗಳು ಅರಬರೊಂದಿಗೆ ಸಂಧಿ ಮಾಡಿಕೊಂಡರು ಮತ್ತು ಅವರ ಜರೂಸಲೇಮ್‍ನ ಅಧಿಪತಿ ಸಹ ಇದೇ ತರಹದ ಕರಾರಿನನ್ವಯ ನಗರವನ್ನು ಮುಸ್ಲಿಮರ ವಶಕ್ಕೊಪ್ಪಿಸಿದರು. ಅವರಿಗೆ ಮುಸ್ಲಿಮರ ಧಾರ್ಮಿಕ ಸಹಿಷ್ಣುತೆಯ ಭರವಸೆಯು ರೋಮನ್ ಸಾಮ್ರಾಜ್ಯ ಮತ್ತು ಕ್ರೈಸ್ತ ಸರಕಾರಗಳೊಂದಿಗಿನ ಸಂಬಂಧಕ್ಕಿಂತ ಹೆಚ್ಚು ಆಕರ್ಷಣೀಯವಾಗಿ ಕಂಡು ಬಂತು…” ಇದು ಒಬ್ಬ ಕ್ರೈಸ್ತ ವಿದ್ವಾಂಸ ಮುಸ್ಲಿಮರ ಧಾರ್ಮಿಕ ಸಹಿಷ್ಣುತೆಗೆ ನೀಡಿರುವ ಸಾಕ್ಷಿಯಾಗಿದೆ.

‘ಹಿಸ್ಟರಿ ಆಫ್ ಶಾರಿಕಿನ್'(History of Sharikin) ಎಂಬ ತಮ್ಮ ಗ್ರಂಥದಲ್ಲಿ ರಾಬರ್ಟ್‍ಸನ್ ಹೇಳುತ್ತಾರೆ: ‘ತಮ್ಮ ಧರ್ಮದ ಘನತೆಯ ಬಗ್ಗೆ ಅತೀವ ಅಭಿಮಾನ ಹೊಂದಿರುವ ಮುಸ್ಲಿಮರು, ಇತರ ಧರ್ಮಿಯರೊಂದಿಗೆ ಸಹಿಷ್ಣುತೆ ತೋರುವ ಏಕೈಕ ಜನಾಂಗವಾಗಿದ್ದಾರೆ. ತಮ್ಮ ಧರ್ಮದ ಪ್ರಚಾರದ ವಿಷಯದಲ್ಲಿ ಅವರು ತೀವ್ರ ಆಸಕ್ತಿ ಹೊಂದಿದ್ದರೂ, ಇಸ್ಲಾಮಿನ ಕುರಿತು ಒಲವು ವ್ಯಕ್ತ ಪಡಿಸದವರನ್ನು ತಮ್ಮದೇ ಧರ್ಮದ ಅನುಸರಣೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದರು.’

ಸುಪ್ರಸಿದ್ಧ ಇತಿಹಾಸಕಾರ ಗಿಬ್ಬನ್ ಹೇಳುತ್ತಾರೆ: “ಮುಹಮ್ಮದೀಯರ ಯುದ್ಧಗಳನ್ನು ಪ್ರವಾದಿ(ಸ) ಮಾನ್ಯ ಮಾಡಿದ್ದರು. ಆದರೆ ಖಲೀಫರು ಇತರ ಧರ್ಮಿಯರ ವಿರೋಧವನ್ನು ಶಮನಗೊಳಿಸುವಂತಹ ಧಾರ್ಮಿಕ ಸಹಿಷ್ಣುತೆಯ ಕ್ರಮಗಳಿಗೇ ಹೆಚ್ಚಿನ ಆದ್ಯತೆಯನ್ನು ನೀಡಿದರು…”

“ವಿಲಿಯಮ್ ಮೂರ್”(William Moor) ‘ದ ಕ್ಯಾಲಿಫೇಟ್: ಇಟ್ಸ್ ರೈಸ್, ಡಿಕ್ಲೈನ್ ಆ್ಯಂಡ್ ಫಾಲ್’ (The Caliphate: Its rise decline and fall) ಎಂಬ ಗ್ರಂಥದಲ್ಲಿ ಹೇಳುತ್ತಾರೆ: “ಮುಸ್ಲಿಮ್ ಸೇನೆ ಜಯಿಸಿದ ಪ್ರದೇಶಗಳಲ್ಲಿ ತೋರಿಸಲಾದ ಇಸ್ಲಾವಿೂ ಸಹನಶೀಲತೆ ಮತ್ತು ಮುಸ್ಲಿಮರ ನ್ಯಾಯೋಚಿತ ವ್ಯವಹಾರ ಹಾಗೂ ಪ್ರಾಮಾಣಿಕತೆ ರೋಮನರ ದಬ್ಬಾಳಿಕೆ ಮತ್ತು ಅಸಹಿಷ್ಣುತೆಗೆ ಸಂಪೂರ್ಣ ತದ್ವಿರುದ್ಧವಾಗಿತ್ತು… ಸಿರಿಯಾದ ಕ್ರೈಸ್ತರು ಹಕ್ರ್ಯುಲೆಸ್‍ನ ಆಡಳಿತ ಕಾಲದಲ್ಲಿ ಅನುಭವಿಸಿದ್ದಕ್ಕಿಂತ ಹೆಚ್ಚಿನ ಪೌರ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಅರಬ್ ಆಕ್ರಮಣಕಾರರ ಆಡಳಿತಾಧಿಕಾರದ ಅವಧಿಯಲ್ಲಿ ಅನುಭವಿಸಿದರು. ತಮ್ಮ ಹಿಂದಿನ ಸಾಮ್ರಾಜ್ಯಧಿಕಾರಕ್ಕೆ ಹಿಂತಿರುಗಲು ಅವರು ಸಿದ್ಧರಿರಲಿಲ್ಲ. ಅರಬ್ ಆಳ್ವಿಕೆಯ ಮೊದಲನೆಯ ಶತಮಾನದಲ್ಲಿ ವಿವಿಧ ಕ್ರೈಸ್ತ ಚರ್ಚುಗಳು ಅನುಭವಿಸಿದ ಸಹಿಷ್ಣುತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಶತಮಾನಗಳ ಬೈಝಂಟೈನ್ ಆಡಳಿತದಲ್ಲಿ ಎಂದೂ ಅನುಭವಿಸಿರಲಿಲ್ಲ.”

ಪ್ರವಾದಿ ಮುಹಮ್ಮದ್‍ರ(ಸ) ನಂತರ ಪ್ರಥಮ ಖಲೀಫಾ ಹ.ಅಬೂಬಕರ್ ಸಿದ್ದೀಕ್(ರ) ಸಿರಿಯಾ ದಂಡಯಾತ್ರೆಯ ಸಮಯದಲ್ಲಿ ಸೇನಾ ನಾಯಕನಿಗೆ ನೀಡಿದ ಹಿತವಚನ ಇಸ್ಲಾವಿೂ ಸ್ಫೂರ್ತಿಗೆ ಹಿಡಿದ ಕನ್ನಡಿಯಾಗಿದೆ.

“ನೀವು ಯಾವಾಗಲೂ ಅಲ್ಲಾಹನ ಸಾನ್ನಿಧ್ಯದಲ್ಲಿರುವಿರೆಂದೂ ಮರಣಶಯ್ಯಾವಸ್ಥೆಯಲ್ಲಿರುವಿರೆಂದೂ ಅಲ್ಲಾಹನ ವಿಚಾರಣೆಯನ್ನು ಎದುರಿಸುತ್ತಾ ಸ್ವರ್ಗದ ನಿರೀಕ್ಷೆಯಲ್ಲಿರುವಿರೆಂದೂ ಭಾವಿಸಿರಿ. ಅನ್ಯಾಯ ಮತ್ತು ಶೋಷಣೆಯನ್ನು ತ್ಯಜಿಸಿರಿ… ನಿಮ್ಮ ಸೇನೆಯ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಿ. ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಿರುವಾಗ ಬೆನ್ನು ತೋರಿಸದೆ ಶೌರ್ಯದಿಂದ ಹೋರಾಡಿರಿ. ಆದರೆ ನಿಮ್ಮ ವಿಜಯ ಮಹಿಳೆಯರ ಮತ್ತು ಮಕ್ಕಳ ರಕ್ತದಿಂದ ಕಳಂಕಿತವಾಗದಿರಲಿ. ಖರ್ಜೂರದ ತೋಟಗಳನ್ನು, ಹೊಲಗದ್ದೆಗಳನ್ನು ಧ್ವಂಸಗೊಳಿಸದಿರಿ. ಜಾನುವಾರುಗಳನ್ನು ಕೊಲ್ಲದಿರಿ. ಒಪ್ಪಂದ ಮಾಡಿಕೊಂಡರೆ, ಒಪ್ಪಂದಕ್ಕೆ ಬದ್ಧವಾಗಿರಿ. ದಂಡಯಾತ್ರೆಯಲ್ಲಿ ಮುಂದುವರಿಯುವಾಗ ಆಶ್ರಮಗಳಲ್ಲಿ, ಮಠಗಳಲ್ಲಿ ವಾಸಿಸುತ್ತಿರುವ ಸನ್ಯಾಸಿಗಳನ್ನು ನೀವು ಕಾಣುವಿರಿ. ಅವರು ಸೃಷ್ಟಿಕರ್ತನನ್ನು ತಮ್ಮದೇ ರೀತಿಯಲ್ಲಿ ಆರಾಧಿಸ ಬಯಸುತ್ತಾರೆ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ; ಅವರ ಆಶ್ರಮಗಳನ್ನು ಹಾನಿಗೊಳಿಸದಿರಿ.”

ಖಲೀಫ ಉಮರ್‍ರ(ರ) ಕಾಲದಲ್ಲಿ ಬಕರ್ ಬಿನ್ ವಾಯಿಲ್ ಬುಡಕಟ್ಟಿನ ವ್ಯಕ್ತಿಯೊಬ್ಬ ಹಿರಾದ ಮುಸ್ಲಿಮೇತರನನ್ನು ಹತ್ಯೆಗೈದ. ಹ.ಉಮರ್‍ ರು(ರ) ಕೊಲೆ ಮಾಡಿದವನನ್ನು ಹತ್ಯೆಯಾದ ವ್ಯಕ್ತಿಯ ಕುಟುಂಬದವರ ವಶಕ್ಕೊಪ್ಪಿಸಲು ಆದೇಶಿಸಿದರು. ಅದರಂತೆ ವಶಕೊಪ್ಪಿಸಲಾದಾಗ, ಹತ್ಯೆಯಾದ ವ್ಯಕ್ತಿಯ ಕುಟುಂಬದವರು ಆ ವ್ಯಕ್ತಿಯನ್ನು ಕೊಂದು ಹಾಕಿದರು.
ಇಸ್ಲಾಮಿನ ಈ ಧಾರ್ಮಿಕ ಸಹಿಷ್ಣುತೆಯನ್ನು ಮುಸ್ಲಿಮರು ಕೇವಲ ಪ್ರವಾದಿಯವರ ಮತ್ತು ಖಲೀಫರುಗಳ ಕಾಲದಲ್ಲಿ ಮಾತ್ರ ಅನುಸರಿಸಿದ್ದಲ್ಲ. ಅನೇಕ ಶತಮಾನಗಳ ನಂತರವೂ ಇಸ್ಲಾಮಿನ ಬೋಧನೆಗಳಿಗೆ ಬದ್ಧರಾಗಿ ಕಾರ್ಯವೆಸಗುತ್ತಿದ್ದರು.

ಉಮವೀ ಖಲೀಫ ವಲೀದ್ ಬಿನ್ ಅಬ್ದುಲ್ ಮಲಿಕ್ ಕ್ರೈಸ್ತರಿಂದ ಸೈಂಟ್ ಜಾನ್ಸ್ ಚರ್ಚನ್ನು ವಶಪಡಿಸಿ ಅದನ್ನು ಮಸೀದಿಯ ಭಾಗವಾಗಿ ಮಾರ್ಪಡಿಸಿದರು. ಕೆಲವು ಕಾಲದ ನಂತರ ಉಮರ್ ಬಿನ್ ಅಬ್ದುಲ್ ಅಝೀಝ್ ಖಲೀಫರಾಗಿ ಚುನಾಯಿತರಾದಾಗ ಕ್ರೈಸ್ತರು ಹಿಂದಿನ ಘಟನೆಯನ್ನು ಅವರ ಗಮನಕ್ಕೆ ತಂದರು. ಖಲೀಫ ಕೂಡಲೇ ಗವರ್ನರ್‍ ಗೆ ಪತ್ರ ಬರೆದು ಚರ್ಚನ್ನು ಕ್ರೈಸ್ತರಿಗೆ ಹಿಂತಿರುಗಿಸಲು ತಿಳಿಸಿದರು.

ಕಾನ್ಸ್ಟಾಂಟಿನೋಪಲ್‍ನಲ್ಲಿ ಫ್ರಾನ್ಸಿನ ರಾಯಭಾರಿಯಾಗಿದ್ದ ಎಡ್ಮಂಡ್ ಇಂಗ್ಲೆ ಹಾರ್ಟ್(Edmound Ingle hart) ಉಸ್ಮಾನಿ ಖಿಲಾಫತ್‍ನ ಬಗ್ಗೆ ಈ ರೀತಿ ಬರೆಯುತ್ತಾರೆ:
“… 1856ರಲ್ಲಿ ಪ್ಯಾರಿಸ್‍ನ ಒಪ್ಪಂದಕ್ಕೆ ಅಂತಿಮ ರೂಪುರೇಷೆ ನೀಡಲು ತೆರಳಿದ್ದ ಆಯೋಗ, ಚರ್ಚೆಯ ಸಮಯದಲ್ಲಿ ತುರ್ಕಿಯ ಜನತೆ ಅನುಭವಿಸುತ್ತಿದ್ದ ಹಕ್ಕುಗಳು ಎಷ್ಟು ವಿಶೇಷವಾಗಿದ್ದವೆಂದರೆ ಇತರ ಯಾವುದೇ ಸ್ವತಂತ್ರ ರಾಷ್ಟ್ರ ಅದನ್ನು ಸಹಿಸುತ್ತಿರಲಿಲ್ಲ ಎಂಬುದನ್ನು ಅಂಗೀಕರಿಸಿತು. ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಹದಿನೈದನೆಯ ಶತಮಾನದಲ್ಲಿ ಸ್ಪೈನ್ ಮತ್ತು ಪೋರ್ಚುಗಲ್‍ನಿಂದ ಹೊರದೂಡಲ್ಪಟ್ಟ ಸಹಸ್ರಾರು ಯಹೂದ್ಯರು ತುರ್ಕಿಯಲ್ಲಿ ಆಶ್ರಯ ಪಡೆದು ಇಂದಿಗೂ ಅಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಈ ಸ್ಥಿತಿಗೆ ತದ್ವಿರುದ್ಧವಾಗಿ ಅಥೆನ್ಸ್ ನಲ್ಲಿ ಇಂದಿಗೂ ಯಹೂದಿಯರು ಮನೆಯ ಹೊರಗಡೆ ಇಣುಕಿ ನೋಡುವಂತಿಲ್ಲ.”

ಧರ್ಮ ಸಹಿಷ್ಣುತೆ

ಇತಿಹಾಸದ ಕೆಲ ಘಟನೆಗಳ ಕಾರಣದಿಂದಲೋ ಅಥವಾ ಇಸ್ಲಾಮಿನ ವಿರೋಧಿಗಳ ವ್ಯವಸ್ಥಿತ ಕುಪ್ರಚಾರಗಳ ಕಾರಣದಿಂದಲೋ ಇಸ್ಲಾಮ್ ಹಾಗೂ ಮುಸ್ಲಿಮರು ತಪ್ಪುಕಲ್ಪನೆಗಳಿಗೆ ಗ್ರಾಸವಾಗಿದ್ದಾರೆ. ಇದರಲ್ಲಿ ಮುಸ್ಲಿಮರಿಗೆ ಅನ್ಯ ಧರ್ಮಿಯರೊಂದಿಗೆ ಸೇರಿ ಜೀವಿಸಲು ಸಾಧ್ಯವಿಲ್ಲ ಎಂಬ ಬಾವನೆ ಮೂಡಿಸಲು ಪ್ರಯತ್ನಿಸಲಾಗಿದೆ. ಅದಕ್ಕೆ ಪೂರಕವಾಗಿ ಧರ್ಮ ಮತ್ತು ಆರಾಧನೆಯ ಯತಾರ್ಥತೆ ಅರಿಯದ ಕೆಲ ನಾಮದಾರಿ ಮುಸ್ಲಿಮರಿಂದ ಇಸ್ಲಾಮ್‍ಗೆ ದಕ್ಕೆಯಾಗುತ್ತಿದೆ.

ದೇವನ ಕುರಿತು ಮತ್ತು ಅನ್ಯಧರ್ಮಗಳ ಕುರಿತು ತಾಳಬೇಕಾದ ಇಸ್ಲಾಮಿನ ಧೋರಣೆಯು ಓರ್ವ ಮುಸ್ಲಿಮನನ್ನು ಧಾರ್ಮಿಕ ಅಸಹಿಷ್ಣುತೆಯಿಂದ ಸಂಪೂರ್ಣ ತಡೆಯುತ್ತ ದೆ. ಹಿಂದೂ, ಮುಸ್ಲಿಮ್, ಕ್ರೈಸ್ತ ಎಲ್ಲರ ಸೃಷ್ಟಿಕರ್ತ ಒಬ್ಬನೇ ಆಗಿದ್ದಾನೆ. ಅವನು ಏಕನಾಗಿದ್ದಾನೆ. ಸರ್ವಲೋಕಗಳ ಪರಿಪಾಲಕ, ಅಖಿಲ ಚರಾಚರ ಸೃಷ್ಟಿಗಳ ಒಡೆಯ ಅವನಾಗಿದ್ದಾನೆಂಬುದೇ ಇಸ್ಲಾಮಿನ ನಿಯಮ. ಇತರ ಮತಗಳಿಗಿಂತ ಇಸ್ಲಾಮ್ ಬಿನ್ನವಾಗಿರುವುದು ಏಕದೇವತ್ವದ ಬಲವಾದ ಪ್ರತಿಪಾದನೆಯ ಕಾರಣದಿಂದಾಗಿದೆ.

ಏಕದೇವತ್ವದ ಕುರಿತು ಇಸ್ಲಾಮ್ ಯಾವುದೇ ರಾಜಿಗೂ ಸಿದ್ದವಿಲ್ಲ. ಆದ್ದರಿಂದ ಬಹುದೇವ ವಿಶ್ವಾಸಿಗಳೊಡನೆ, ನಾಸ್ತಿಕರೊಡನೆ, ಕಪಟ ವಿಶ್ವಾಸಿಗಳೊಂದಿಗೂ ಅದು ಸಹಿಷ್ಣುತೆಯಿಂದ ವರ್ತಿಸಲು ಆದೇಶಿಸುತ್ತದೆ. ಯಾಕೆಂದರೆ ಜಗತ್ತಿನ ಸರ್ವ ಮಾನವರೂ ಒಂದೇ ದೇವನ ಸೃಷ್ಟಿಗಳಾಗಿದ್ದು ಅವನು ನೀಡಿದ ಗಾಳಿಯಲ್ಲಿ ಉಸಿರಾಡಿ ನೀರನ್ನು ಸೇವಿಸುವವರಾಗಿದ್ದಾರೆ. ಭೂಮಿಯಲ್ಲಿ ಅವನು ನೀಡಿದ ಎಲ್ಲ ಸೌಲಭ್ಯಗಳನ್ನು ಅವರು ಬಳಸುತ್ತಿರುತ್ತಾರೆ.

ಭೂಮಿಯಲ್ಲಿರುವ ಸರ್ವರನ್ನೂ ಒಂದೇ ಆತ್ಮದಿಂದ ಸೃಷ್ಟಿಸಲಾಗಿದೆ ಎಂದು ಕುರ್‍ಆನ್ ಹೇಳುತ್ತದೆ. ಜನರೇ ಅಲ್ಲಾಹನನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಜೋಡಿಯನ್ನು ಉಂಟು ಮಾಡಿದನು ಅವೆರಡರಿಂದ ಅನೇಕಾನೇಕ ಸ್ತ್ರೀ ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು (ಪವಿತ್ರ ಕುರ್‍ಆನ್- 4:1)

ಎಲ್ಲರ ಆದಿಪಿತ ಆದಮರಾಗಿದ್ದಾರೆ. ಸರ್ವರೂ ಅವರ ಸಂತಾನ ಪರಂಪರೆಯಿಂದ ಬಂದವರಾಗಿದ್ದಾರೆ. “ಜನರೇ ನಾವು ನಿಮ್ಮನ್ನು ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯಪಟ್ಟುಕೊಳ್ಳಲಿಕ್ಕಾಗಿ ನಿಮ್ಮನ್ನು ವಿವಿಧ ಜನಾಂಗಗಳನ್ನಾಗಿ ಗೋತ್ರಗಳನ್ನಾಗಿ ಮಾಡಿದೆವು.” (ಪವಿತ್ರ ಕುರ್‍ಆನ್ 49:13).

ಪ್ರವಾದಿವರ್ಯರು(ಸ) ಒಮ್ಮೆ ಈ ರೀತಿ ಹೇಳಿದರು. “ನಿಶ್ಚಯವಾಗಿಯೂ ನಿಮಗೆ ಒಬ್ಬ ಒಡೆಯನಿದ್ದಾನೆ. ನಿಮಗೆಲ್ಲರಿಗೂ ಒಬ್ಬ ತಂದೆಯಿದ್ದಾರೆ. ಎಲ್ಲರೂ ಆದಿಪಿತ ಆದಮ್‍ರ ಪುತ್ರರಾಗಿದ್ದಾರೆ. ಆದಮ್‍ರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ. ಆದ್ದರಿಂದ ಅರಬನಿಗೆ ಅರಬೇತರನ ಮೇಲೋ, ಬಿಳಿಯನಿಗೆ ಕರಿಯನ ಮೇಲೋ ಯಾವುದೇ ಮೇಲ್ಮೆ ಇಲ್ಲ, ದೇವಭಕ್ತಿಯ ಹೊರತು.”ಮಾನವ ಕುಲಕ್ಕೆ ದೇವನು ಜೀವನ ಪದ್ದತಿಯನ್ನು ತೋರಿಸಿದ್ದಾನೆ, ಅದಾಗಿದೆ ಧರ್ಮ. ಆದ್ದರಿಂದ ಧರ್ಮವು ದೇವ ನಿರ್ಣಯಿತವಾದದ್ದಾಗಿದೆ.

ಕುರ್‍ಆನ್ ಹೇಳುತ್ತದೆ. “ನಾವು ನಿಮ್ಮ ಪೈಕಿ (ಮಾನವರ) ಪ್ರತಿಯೊಬ್ಬನಿಗೆ ಒಂದು ಧರ್ಮ ನಿಯಮ ಮತ್ತು ಕರ್ಮ ಮಾರ್ಗವನ್ನು ನಿಶ್ಚಯಿಸಿದ್ದೇವೆ. (ಪವಿತ್ರ ಕುರ್‍ಆನ್- 5:48)

ಎಲ್ಲ ಧರ್ಮದ ಮೂಲ ಸಿದ್ಧಾಂತ ಒಂದೇ ಆಗಿದೆ. ಬಿನ್ನತೆಗಳು ಆ ಬಳಿಕ ಉಂಟಾದುದಾಗಿದೆ. ಪುರೋಹಿತರ ಮಧ್ಯ ಪ್ರವೇಶವೇ ಅದಕ್ಕೆ ಕಾರಣವಾಗಿದೆ. ಎಲ್ಲ ಪ್ರವಾದಿಗಳು ಸಾರಿದ ಧರ್ಮದ ಸಂದೇಶ ಕೂಡಾ ಒಂದೇ ಆಗಿತ್ತು ಎಂದು ಕುರ್‍ಆನ್ ಸ್ಪಷ್ಟಪಡಿಸುತ್ತದೆ.

“ಅವನು ನೂಹರಿಗೆ ಆಜ್ಞಾಪಿಸಿದ್ದ ಧರ್ಮ ವಿಧಾನವನ್ನೇ ನಿಮಗಾಗಿಯೂ ನಿಶ್ಚಿಯಿಸಿ ಕೊಟ್ಟಿದ್ದಾನೆ ಮತ್ತು (ಮಹಮ್ಮದರೇ) ಈಗ ನಾವು ಅದನ್ನೇ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿರುತ್ತೇವೆ. ಇದನ್ನೇ ನಾವು ಇಬ್ರಾಹೀಮರಿಗೂ, ಮೂಸಾ ಮತ್ತು ಈಸಾರಿಗೂ ಬೋದಿಸಿದ್ದೆವು. ಈ ಧರ್ಮವನ್ನು ಸಂಸ್ಥಾಪಿಸಿರಿ. (ಪವಿತ್ರ ಕುರ್‍ಆನ್- 42:13)

ಧರ್ಮಗಳ ಅವತರಣದ ಸಂಧರ್ಭದಲ್ಲಿ ಅವುಗಳೆಲ್ಲದರ ಮೂಲ ಶಿಕ್ಷಣ ಒಂದೇ ಆಗಿತ್ತು. ಅದರ ಆಚಾರ ವಿಚಾರಗಳಲ್ಲಿ ಆ ಬಳಿಕ ವ್ಯತ್ಯಾಸವುಂಟಾದುದಾಗಿದೆ. ಧರ್ಮಗಳ ಮಧ್ಯೆ ಮೌಲ್ಯಗಳ ಅಂತರ ಬಂದಿರುವುದು ಕೂಡಾ ಜನರ ಮದ್ಯಪ್ರವೇಶದ ಕಾರಣದಿಂದಾಗಿದೆ. ಸಂದೇಶವಾಹಕರು ದೇವನ ಧರ್ಮದ ಸಂದೇಶಗಳನ್ನು ಮಾನವ ಕುಲಕ್ಕೆ ತಲುಪಿಸಿದ್ದರು. ಜಗತ್ತಿನ ಎಲ್ಲ ಜನಾಂಗಗಳಿಗೂ ಅಲ್ಲಾಹನಿಂದ ಸಂದೇಶವಾಹಕರನ್ನು ಕಳುಹಿಸಲಾಗಿದೆಯೆಂದು ಕುರ್‍ಆನ್ ಸ್ಪಷ್ಟಪಡಿಸುತ್ತದೆ. ದೇವನ ಧರ್ಮಕ್ಕೆ ಅತೀತವಾಗಿ ಜೀವಿಸುವವರಿಗೆ ಶುಭವಾರ್ತೆಯನ್ನು ಅದು ನಿರಾಕರಿಸುವವರಿಗೆ ಎಚ್ಚರಿಕೆ ನೀಡುವ ಸಂದೇಶವಾಹಕರ ಸರಣಿಯಲ್ಲಿ ಪ್ರವಾದಿ ಮುಹಮ್ಮದರು(ಸ) ಕೊನೆಯವರಾಗಿದ್ದಾರೆ.

ಕುರ್‍ಆನ್ ಹೇಳುತ್ತದೆ. “ನೀವು ಕೇವಲ ಓರ್ವ ಎಚ್ಚರಿಕೆ ಕೊಡುವವರಾಗಿರುತ್ತೀರಿ. ನಾವು ನಿಮ್ಮನ್ನು ಸುವಾರ್ತೆ ಮತ್ತು ಎಚ್ಚರಿಕೆ ಕೊಡುವವರಾಗಿ ಸತ್ಯ ಸಹಿತ ಕಳುಹಿಸಿರುತ್ತೇವೆ. ಎಚ್ಚರಿಕೆ ಕೊಡುವವರಾರೂ ಬಂದಿರದಂತಹ ಸಮುದಾಯವೊಂದು ಗತಿಸಿಲ್ಲ (ಪವಿತ್ರ ಕುರ್‍ಆನ್- 35:23,24) ಆದ್ದರಿಂದ ಪ್ರವಾದಿಗಳೆಲ್ಲರೂ ಸಹೋದರರಾಗಿದ್ದಾರೆ. ಸಂದೇಶವಾಹಕರು ಎಂಬ ದೃಷ್ಟಿಯಲ್ಲಿ ಇವರೆಲ್ಲರೂ ಸಮಾನರಾಗಿದ್ದಾರೆ. ಜಗತ್ತಿಗೆ ಬಂದ ಸಕಲ ಪ್ರವಾದಿಗಳ ಮೇಲೆಯು ವಿಶ್ವಾಸವಿರಿಸಬೇಕಾದದ್ದು ಮುಸ್ಲಿಮರ ಕರ್ತವ್ಯವಾಗಿದೆ. ಮುಸ್ಲಿಮರು ಅವರನ್ನು ಅಂಗೀಕರಿಸಿ ಗೌರವಿಸುತ್ತಾರೆ ಕುರ್‍ಆನ್ ನಲ್ಲಿ ಅಲ್ಲಾಹನು ಈ ರೀತಿ ಆದೇಶಿಸುತ್ತಾನೆ. ಹೇಳಿರಿ. ದೇವನಿಂದ ನಮಗೆ ಅವತೀರ್ಣವಾಗಿ ದೊರೆತುದರಲ್ಲಿ ಇಬ್ರಾಹೀಮರಿಗೂ, ಇಸ್ಮಾಈಲರಿಗೂ, ಇಸ್ಹಾಕರಿಗೂ, ಯಾಕೂಬರಿಗೂ, ಯಾಕೂಬರ ಸಂತತಿಗಳಿಗೂ ಅವತೀರ್ಣಗೊಂಡುದರಲ್ಲಿಯು, ಮೂಸಾ, ಈಸಾ ಮುಂತಾದ ಎಲ್ಲ ಪ್ರವಾದಿಗಳಿಗೆ ತಮ್ಮ ಪ್ರಭುವಿನಿಂದ ನೀಡಲ್ಪಟ್ಟುದರ ಮೇಲೆ ನಾವು ವಿಶ್ವಾಸವಿಟ್ಟಿರುತ್ತೇವೆ. ಅವರಲ್ಲಿ ಯಾರ ಮಧ್ಯೆಯೂ ನಾವು ತಾರತಮ್ಯ ಮಾಡುವುದಿಲ್ಲ. ನಾವು ಸರ್ವೋನ್ನತನಾದ ದೇವನ ದಾಸರಾಗಿದ್ದೇವೆ. (ಪವಿತ್ರ ಕುರ್‍ಆನ್- 2:136)

ಮತ್ತೊಂದೆಡೆ ಕುರ್‍ಆನ್ ಈ ರೀತಿ ಹೇಳುತ್ತದೆ. “ಆರಂಭದಲ್ಲಿ ಜನರೆಲ್ಲರೂ ಒಂದೇ ಸಂಪ್ರದಾಯದವರಾಗಿದ್ದರು. (ಈ ಸ್ಥಿತಿ ಬಹಳ ಕಾಲ ಉಳಿಯಲಿಲ್ಲ. ಅವರೊಳಗೆ ಬಿನ್ನಾಭಿಪ್ರಾಯಗಳುಂಟಾದವು) ಆಗ ಅಲ್ಲಾಹನು ಸತ್ಯಮಾರ್ಗದ ಬಗ್ಗೆ ಸುವಾರ್ತೆ ನೀಡುವವರನ್ನೂ, ಮಿಥ್ಯ ಮಾರ್ಗದ ಬಗ್ಗೆ ಎಚ್ಚರಿಕೆ ಕೊಡುವವರೂ ಆದ ಪ್ರವಾದಿಗಳನ್ನು ರವಾನಿಸಿದನು ಮತ್ತು ಅವರೊಂದಿಗೆ ಸತ್ಯದ ವಿಷಯದಲ್ಲಿ ಜನರಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳ ಬಗ್ಗೆ ತೀರ್ಪು ನೀಡಲಿಕ್ಕಾಗಿ ಪರಮ ಸತ್ಯ ಗ್ರಂಥವನ್ನೂ ಇಳಿಸಿದನು. ಸತ್ಯದ ಶಿಕ್ಷಣದ ಕೊಡಲ್ಪಟ್ಟವರೇ ಈ ಅಭಿಪ್ರಾಯ ಬಿನ್ನತೆಗಳನ್ನುಂಟು ಮಾಡಿದರು. ಅವರು ಕೇವಲ ಪರಸ್ಪರ ಅತಿರೇಕ ನಡೆಸಲು ಇಷ್ಟಪಡುತ್ತಿದ್ದರಿಂದಲೇ ಸುವ್ಯಕ್ತ ದೃಷ್ಟಾಂತಗಳನ್ನು ಪಡೆದ ಬಳಿಕ ಸತ್ಯವನ್ನು ತ್ಯಜಿಸಿ ವಿವಿಧ ಹಾದಿಗಳನ್ನು ಸೃಷ್ಟಿಸಿಕೊಂಡರು. (ಪವಿತ್ರ ಕುರ್‍ಆನ್- 2:213)

ವಿವಿಧ ಆಚಾರ ವಿಚಾರಗಳಲ್ಲಿ ಜನರು ಬೇರೆಬೇರೆಯಾಗಿ ಪ್ರತಿಯೊಂದು ವಿಭಾಗವೂ ನಾವು ಅನುಸರಿಸುವುದರಲ್ಲಿ ತೃಪ್ತಿ ಹೊಂದಿದರು. ಮಾತ್ರವಲ್ಲ ಅದುವೇ ಸರಿಯಾದದ್ದು ಎಂದು ವಾದಿಸತೊಡಗಿದರು. “ಆದರೆ ಬಳಿಕ ಜನರು ತಮ್ಮ ಧರ್ಮವನ್ನು ಪರಸ್ಪರ ತುಂಡು ತುಂಡು ಮಾಡಿಬಿಟ್ಟರು. ಪ್ರತಿಯೊಂದು ವರ್ಗವೂ ತನ್ನ ಬಳಿಯಲ್ಲಿ ಇರುವುದರಲ್ಲಿ ಮಗ್ನವಾಗಿದೆ.” (ಪವಿತ್ರ ಕುರ್‍ಆನ್- 23:53)

ಧರ್ಮದಲ್ಲಿನ ವಿವಿಧತೆಯನ್ನು ವಾಸ್ತವಿಕತೆಯಾಗಿ ಅಂಗೀಕರಿಸುತ್ತದೆ. ಮನುಷ್ಯನಿಗೆ ನೀಡಲ್ಪಟ್ಟ ಚಿಂತಾ ಸ್ವಾತಂತ್ರ್ಯವನ್ನೂ ಅದು ಅನಿವಾರ್ಯತೆಯಾಗಿ ಪರಿಗಣಿಸಲ್ಪಡುತ್ತಿದೆ. “ನಿಶ್ಚಯವಾಗಿಯೂ ನಿಮ್ಮ ಪ್ರಭು ಇಚ್ಚಿಸುತ್ತಿದ್ದರೆ. ಸಕಲ ಮಾನವರನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವರಿನ್ನೂ ಭಿನ್ನಮತೀಯರಾಗಿಯೇ ಮುಂದುವರಿಯುವರು” (ಪವಿತ್ರ ಕುರ್‍ಆನ್- 11:118)

ಇಸ್ಲಾಮಿನ ದೃಷ್ಟಿಯಲ್ಲಿ ಮನುಷ್ಯನು ಸೃಷ್ಟಿಯಲ್ಲಿ ಶ್ರೇಷ್ಟನಾಗಿದ್ದಾನೆ. ಅವನ ಕುಟುಂಬ, ಜಾತಿ, ವರ್ಣ, ವರ್ಗ, ದೇಶ, ಭಾಷೆ ಯಾವುದಾದರೂ ಸರಿ ಜನ್ಮತಾ ಅವನು ಆದರಣೀಯನಾಗಿದ್ದಾನೆ. ಅಲ್ಲಾಹನು ಹೇಳುತ್ತಾನೆ “ನಾನು ಆದಮರ ಸಂತತಿಗೆ ಶ್ರೇಷ್ಟತೆಗಳನ್ನು ಪ್ರದಾನ ಮಾಡಿದ್ದುದೂ ಅವರಿಗೆ ನೆಲ ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕೃಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ. (ಪವಿತ್ರ ಕುರ್‍ಆನ್- 17:70)

ಆದ್ದರಿಂದ ಮಾನವರು ಉಳಿದ ಸೃಷ್ಟಿಗಳಿಗಿಂತ ಶ್ರೇಷ್ಟರೂ ವಿಶಿಷ್ಟರೂ ಆಗಿದ್ದಾರೆ. ಕುರ್‍ಆನ್ ಹೇಳುತ್ತದೆ. “ನಾವು ಮಾನವನನ್ನು ಅತ್ಯುತ್ತಮ ಪ್ರಕೃತಿಯಲ್ಲಿ ಸೃಷ್ಠಿಸಿರುತ್ತೇವೆ.” (ಪವಿತ್ರ ಕುರ್‍ಆನ್- 95:4)

ಒಂದೇ ದೇವನ ಸೃಷ್ಟಿಗಳು, ಒಂದೇ ಮಾತಾಪಿತರ ಮಕ್ಕಳೂ ಆದ ಎಲ್ಲ ಮನುಷ್ಯರು ಜನ್ಮತಾ ನಿಷ್ಕಳಂಕರೂ ಗೌರವಾನ್ವಿತರೂ ಆಗಿದ್ದಾರೆ. ನಂತರ ಅವರು ಎಸಗಿದ ದುಷ್ಕ್ರತ್ಯಗಳಿಂದಾಗಿ ಅವರು ಅಪರಾಧಿಗಳೂ ಅವಮಾನಿತರೂ ಆಗಿ ಬಿಡುತ್ತಾರೆ. ಅವನ ನಾಶಕ್ಕೆ ಅವನೇ ಕಾರಣನಾಗುತ್ತಾನೆ. ಧಾರ್ಮಿಕ ತತ್ವಗಳಿಗನುಗುಣವಾಗಿ ಜೀವಿಸಬೇಕೆಂದು ಮನುಷ್ಯನಿಗೆ ಇಸ್ಲಾಮ್ ಆಜ್ಞಾಪಿಸುತ್ತದೆ. ಒಮ್ಮೆ ಒಂದು ಮೃತ ಶರೀರವೊಂದನ್ನು ಕೊಂಡು ಹೋಗುತ್ತಿರುವುದನ್ನು ಕಂಡ ಪ್ರವಾದಿಯವರು ಎದ್ದು ನಿಂತು ಗೌರವ ಸೂಚಿಸಿದರು. ಆಗ ಅಲ್ಲಿದ್ದ ಸಂಗಾತಿಗಳು ಪ್ರವಾದಿವರ್ಯರನ್ನುದ್ದೇಶಿಸಿ ಅದೊಂದು ಯಹೂದಿಯ ಮಯ್ಯತ್ ಅಲ್ಲವೇ ಎಂದು ಕೇಳಿದಾಗ ‘ಆತ ಕೂಡಾ ಮನುಷ್ಯನಲ್ಲವೇ?’ ಎಂದು ಉತ್ತರಿಸಿದರು. ಆದ್ದರಿಂದ ಧಾರ್ಮಿಕವಾಗಿ ಅಭಿಪ್ರಾಯ ಬಿನ್ನತೆಗಳಿದ್ದರೂ ಅದು ಸಂಬಂಧ ಕೆಡಿಸಲು ಕಾರಣವಾಗಬಾರದು. ಒಳಿತನ್ನು ಸಂಸ್ಥಾಪಿಸಿ ಕೆಡುಕನ್ನು ವಿರೋಧಿಸುವುದನ್ನು ವಿಶ್ವಾಸದಾಢ್ರ್ಯತೆಯಿಂದ ಪರಸ್ಪರ ಸ್ನೇಹ ಸಹಕಾರ ಮನೋಭಾವದಿಂದ ನಿರ್ವಹಿಸಬೇಕು. ಅಲ್ಲಾಹನು ಹೇಳುತ್ತಾನೆ. “ಪುಣ್ಯ ಹಾಗೂ ದೇವಭಯದ ಕಾರ್ಯಗಳಲ್ಲಿ ಎಲ್ಲರ ಜೊತೆ ಸಹಕರಿಸಿರಿ ಮತ್ತು ಪಾಪ ಹಾಗೂ ಅತಿರೇಕ ಕಾರ್ಯಗಳಲ್ಲಿ ಯಾರೊಂದಿಗೂ ಸಹಕರಿಸಬೇಡಿರಿ (ಪವಿತ್ರ ಕುರ್‍ಆನ್- 5:2)

ಜಾತಿ, ವರ್ಗ, ಸಮುದಾಯಕ್ಕೆ ಅತೀತವಾಗಿ ಭೂಮಿಯಲ್ಲಿರುವ ಸಕಲ ಮನುಷ್ಯರೂ ಗೌರವಾನ್ವಿತರಾದಂತೆಯೇ ಅವರೆಲ್ಲರ ಜೀವ, ಸಂಪತ್ತು ಅಭಿಮಾನವೂ ಅಮುಲ್ಯವಾಗಿದೆ. ಅವರ ಮೇಲೆ ಅಕ್ರಮ, ಅತಿರೇಕವೆಸಗುವುದು ಅಕ್ಷಮ್ಯ ಅಪರಾಧವಾಗಿದೆ. ಪ್ರವಾದಿವರ್ಯರು ತನ್ನ ವಿದಾಯ ಭಾಷಣದಲ್ಲಿ ಮನುಷ್ಯರ ಪ್ರಾಣ, ಸಂಪತ್ತು, ಅಭಿಮಾನದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕೆಂದು ಒತ್ತು ಕೊಟ್ಟು ಹೇಳಿದ್ದರು. ಯಾವ ಕಾರಣಕ್ಕೂ ಅತಿರೇಕದಿಂದ ವರ್ತಿಸಿ ಅವರ ಮೇಲೆ ಎರಗುವುದರ ವಿರುದ್ಧ ವಿಶೇಷವಾಗಿ ಎಚ್ಚರಿಸಿದ್ದರು. ಜೊತೆಗೆ ಸಹ ದರ್ಮಿಯರೊಂದಿಗೆ ಉತ್ತಮವಾಗಿ ವ್ಯವಹರಿಸಲು ಆದೇಶಿಸಿದ್ದಾರೆ. ಅವರೊಂದಿಗೆ ನ್ಯಾಯ ಪೂರ್ಣತೆಯಿಂದ ವರ್ತಿಸಬೇಕೆಂದೂ ಆದೇಶಿಸಿದ್ದರು. ಒಟ್ಟಿನಲ್ಲಿ ಇಸ್ಲಾಮ್ ಧರ್ಮಾನುಯಾಯಿಯಾಗಿದ್ದುಕೊಂಡು ಓರ್ವ ಸತ್ಯವಿಶ್ವಾಸಿಗೆ ಇತರ ಧರ್ಮಿಯರ ಜೊತೆ ಅಸಹಿಷ್ಣುತೆಯಿಂದ ವರ್ತಿಸಲು ಕಂಡಿತ ಸಾಧ್ಯವಿಲ್ಲ.

SHARE THIS POST VIA