Home / ಆರಾಧನೆಗಳು

ಆರಾಧನೆಗಳು

ಇಬಾದತ್ (ಆರಾಧನೆ) ಯ ಅರ್ಥ ವಾಸ್ತವದಲ್ಲಿ ದಾಸ್ಯ ಎಂದಾಗಿದೆ. ನಾವು ದಾಸರಾಗಿದ್ದು ಅಲ್ಲಾಹನು ನಮ್ಮ ಆರಾಧ್ಯನಾಗಿದ್ದಾನೆ. ದಾಸನು ತನ್ನ ಆರಾಧ್ಯನ ಅನುಸರಣೆಯಲ್ಲಿ ಮಾಡುವುದೆಲ್ಲವೂ ಇಬಾದತ್ (ಆರಾಧನೆ) ಆಗಿದೆ. ಉದಾಹರಣೆಗೆ ನೀವು ಜನರೊಂದಿಗೆ ಮಾತನಾಡುತ್ತೀರಿ. ಈ ಮಾತುಕತೆಯ ಮಧ್ಯೆ ಸುಳ್ಳು, ಪರನಿಂದೆ ಮತ್ತು ಅಶ್ಲೀಲ ಮಾತುಗಳಿಂದ- ಅವುಗಳನ್ನು ಅಲ್ಲಾಹನು ನಿಷೇಧಿಸಿರುವನು ಎಂಬ ಕಾರಣಕ್ಕೆ – ದೂರವಿದ್ದರೆ ಮತ್ತು ಸದಾ ಸತ್ಯ, ನ್ಯಾಯ, ಪುಣ್ಯ ಮತ್ತು ಪರಿಶುದ್ಧ ಮಾತುಗಳನ್ನು – ಅವುಗಳನ್ನು ಅಲ್ಲಾಹನು ಮೆಚ್ಹುತ್ತಾನೆಂಬ ಕಾರಣಕ್ಕಾಗಿ – ಆಡಿದರೆ, ನಿಮ್ಮ ಈ ಎಲ್ಲ ಮಾತುಕತೆ ಆರಾಧನೆ ಎನಿಸುವುದು. ಅದೆಲ್ಲವೂ ಲೌಕಿಕ ವ್ಯವಹಾರದ ಮಾತುಕತೆಯಾಗಿದ್ದರೂ ಸರಿಯೇ.

ನೀವು ಜನರೊಂದಿಗೆ ವ್ಯವಹಾರ ಮಾಡುತ್ತೀರಿ. ಪೇಟೆಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತೀರಿ. ಮನೆಯಲ್ಲಿ ನಿಮ್ಮ ತಂದೆ, ತಾಯಿ ಮತ್ತು ಸೋದರ ಸೋದರಿಯರೊಂದಿಗೆ ಸಹಜೀವನ ನಡೆಸುತ್ತೀರಿ. ನಿಮ್ಮ ಸ್ನೇಹಿತರ ಮತ್ತು ನೆಂಟರಿಷ್ಟರ ಜತೆ ಬೆರೆಯುತ್ತೀರಿ- ಒಂದು ವೇಳೆ ಜೀವನದ ಈ ಎಲ್ಲ ವ್ಯವಹಾರಗಳಲ್ಲಿ ಅಲ್ಲಾಹನ ಆಜ್ಞೆಗಳನ್ನು ಮತ್ತು ಅವನ ಕಾನೂನನ್ನು ಪರಿಗಣಿಸುತ್ತಿದ್ದರೆ, ಪ್ರತಿಯೊಬ್ಬರ ಹಕ್ಕುಗಳನ್ನು ಅಲ್ಲಾಹನು ಅದನ್ನು ಆಜ್ಞಾಪಿಸಿದ್ದಾನೆ ಎಂದು ಭಾವಿಸಿ ಸಂದಾಯ ಮಾಡಿದರೆ ಮತ್ತು ಅಲ್ಲಾಹನು ತಡೆದಿದ್ದಾನೆಂದು ತಿಳಿದು ಯಾರ ಹಕ್ಕುಚ್ಯುತಿಯನ್ನೂ ಮಾಡದಿದ್ದರೆ ನಿಮ್ಮ ಈ ಸಂಪೂರ್ಣ ಜೀವನವು ಅಲ್ಲಾಹನ ಆರಾಧನೆಯಲ್ಲಿ ಸಾಗಿತೆಂದರ್ಥ.

ನೀವು ಬಡವನಿಗೆ ನೆರವಾದರೆ, ಹಸಿದವನಿಗೆ ಉಣಿಸಿದರೆ, ರೋಗಿಯ ಸೇವೆ ಮಾಡಿದರೆ ಹಾಗೂ ಈ ಎಲ್ಲ ಕಾರ್ಯಗಳನ್ನು ನಿಮ್ಮ ಯಾವುದೇ ವ್ಯಕ್ತಿಗತ ಲಾಭಕ್ಕಾಗಿ ಅಥವಾ ಗೌರವ ಮತ್ತು ಕೀರ್ತಿಗಾಗಿ ಮಾಡದೆ ಕೇವಲ ಅಲ್ಲಾಹನ ಮೆಚ್ಚುಗೆಯನ್ನು ಗಳಿಸುವುದಕ್ಕಾಗಿ ಮಾಡಿದರೆ ಇವೆಲ್ಲವೂ ಅಲ್ಲಾಹನ ಆರಾಧನೆ ಎನಿಸುವುದು.

ನೀವು ವ್ಯಾಪಾರ, ಉದ್ದಿಮೆ ಅಥವಾ ನೌಕರಿಯನ್ನು ಅಲ್ಲಾಹನನ್ನು ಭಯಪಡುತ್ತಾ ಪೂರ್ಣ ಸತ್ಯ ಮತ್ತು ಪ್ರಾಮಾಣಿಕತೆಯೊಂದಿಗೆ ಮಾಡಿದರೆ, ಧರ್ಮಬದ್ಧವಾಗಿ ಸಂಪಾದಿಸಿ ನಿಷಿದ್ಧ ಸಂಪಾದನೆಯಿಂದ ದೂರವಿದ್ದರೆ ನಿಮ್ಮ ಈ ಸಂಪಾದನೆಯು ಆರಾಧನೆ ಎಂದು ಪರಿಗಣಿಸಲ್ಪಡುವುದು. ವಸ್ತುತ ನೀವು ಉಪಜೀವನಕ್ಕಾಗಿಯೇ ಈ ಎಲ್ಲಾ ಕೆಲಸಗಳನ್ನು ಮಾಡುತ್ತೀರಿ. ಒಟ್ಟಿನಲ್ಲಿ, ಲೌಕಿಕ ಜೀವನದಲ್ಲಿ ಸದಾ ಎಲ್ಲ ವಿಷಯಗಳಲ್ಲೂ ಅಲ್ಲಾಹನನ್ನು ಭಯ ಪಡುವುದು, ಅವನ ಮೆಚ್ಚುಗೆಯನ್ನೇ ದ್ರಷ್ಟಿಯಲ್ಲಿರಿಸುವುದು, ಅವನ ಕಾನೂನನ್ನು ಅನುಸರಿಸುವುದು, ಅವನ ಅವಿಧೇಯತೆಯಿಂದ ಸಿಗಬಹುದಾದ ಎಲ್ಲಾ ಲಾಭಗಳನ್ನು ತೊರೆಯುವುದು ಮತ್ತು ಅವನ ವಿಧೇಯತೆಯಲ್ಲಿ ಬರಬಹುದಾದಂತಹ ಎಲ್ಲ ನಷ್ಟಗಳನ್ನು ಸಹಿಸುವುದು ಅಲ್ಲಾಹನ ಆರಾಧನೆ ಆಗಿದೆ. ಈ ರೀತಿಯ ಜೀವನವು ಸಾದ್ಯಂತ ಆರಾಧನೆಯಾಗಿದೆ. ಒಟ್ಟಿನಲ್ಲಿ ಇಂತಹ ಜೀವನದಲ್ಲಿ ತಿನ್ನುವುದು, ಕುಡಿಯುವುದು, ಮಲಗುವುದು, ಏಳುವುದು, ನಡೆದಾಡುವುದು, ಮಾತುಕತೆ ನಡೆಸುವುದು ಎಲ್ಲವೂ ಆರಾಧನೆಯಲ್ಲಿ ಸೇರಿದೆ.

ಇದು ಇಬಾದತ್ ನ(ಆರಾಧನೆಯ) ನೈಜ ತಾತ್ಪರ್ಯ. ಒಬ್ಬ ಮುಸ್ಲಿಮನನ್ನು ಇಂತಹ ಆರಾಧನೆ ಮಾಡುವವನಾಗಿ ಮಾರ್ಪಡಿಸುವುದೇ ಇಸ್ಲಾಮಿನ ನೈಜ ಧ್ಯೇಯ. ಈ ಉದ್ದೇಶಕ್ಕಾಗಿ ಇಸ್ಲಾಮಿನಲ್ಲಿ ಕೆಲವು ಆರಾಧನೆಗಳನ್ನು ಕಡ್ಡಾಯಗೊಳಿಸಲಾಗಿದೆ. ಅವು ಮನುಷ್ಯನನ್ನು ಈ ದೊಡ್ಡ ಆರಾಧನೆಗೆ ಸಿದ್ಧಗೊಳಿಸುತ್ತದೆ. ಈ ವಿಶಿಷ್ಟ ಆರಾಧನೆಗಳು ಆ ದೊಡ್ಡ ಆರಾಧನೆಗಳಿಗೆ ತರಬೇತಿ ಕಾರ್ಯಕ್ರಮದಂತಿದೆ. ಈ ತರಬೇತಿಯನ್ನು ಸರಿಯಾಗಿ ಗಳಿಸಿದವನು ಆ ನೈಜ ಆರಾಧನೆಯನ್ನು ಅಷ್ಟೇ ಉತ್ತಮವಾಗಿ ನಿರ್ವಹಿಸಬಲ್ಲನು.

ಆದ್ದರಿಂದ ಈ ವಿಶಿಷ್ಟ ಆರಾಧನೆಗಳನ್ನು ಕಡ್ಡಾಯ ವಿಧಿಗಳು ಎಂದು ಕರೆಯಲಾಗಿದೆ ಮತ್ತು ಅವುಗಳನ್ನು ಇಸ್ಲಾಮಿನ ಸ್ತಂಭಗಳು ಎಂದೂ ಕರೆಯಲಾಗಿದೆ. ನಮಾಝ್, ಉಪವಾಸ ವೃತ, ಝಕಾತ್, ಹಜ್ಜ್ ಇವು ಇಸ್ಲಾಮಿನ ಸ್ತಂಭಗಳಾಗಿದೆ. ಯಾವ ರೀತಿ ಒಂದು ಕಟ್ಟಡವು ಕೆಲವು ಸ್ತಂಭಗಳ ಮೇಲೆ ನಿಂತಿರುತ್ತದೋ ಅದೇ ರೀತಿ ಇಸ್ಲಾಮೀ ಜೀವನದ ಕಟ್ಟಡವು ಈ ಸ್ತಂಭಗಳ ಮೇಲೆ ನಿಂತಿರುತ್ತದೆ. ಅವುಗಳನ್ನು ಒಡೆದರೆ ಇಸ್ಲಾಮಿನ ಕಟ್ಟಡವನ್ನೇ ಬೀಳಿಸಿದಂತಾಗುವುದು.

SHARE THIS POST VIA