Home / ಪ್ರವಾದಿ ಮುಹಮ್ಮದ್ (ಸ)

ಪ್ರವಾದಿ ಮುಹಮ್ಮದ್ (ಸ)

ಪ್ರವಾದಿ ಮುಹಮ್ಮದ್ (ಸ) ದೇವನ ಪ್ರವಾದಿಗಳ ಪೈಕಿ ಅಂತಿಮ ಸಂದೇಶವಾಹಕರಾಗಿದ್ದಾರೆ. ಇತಿಹಾಸದ ತಿಳಿಯಾದ ಬೆಳಕಿನಲ್ಲಿ ಅವರು ಬಾಳಿ ಬದುಕಿದರು. ಅವರ ಜೀವನವು ಒಂದು ತೆರೆದ ಗ್ರಂಥವಾಗಿದೆ. ಅರ್ಥವಾಗದ ಅಥವಾ ಅಸ್ಪಷ್ಟವಾದ ಯಾವುದೂ ಅದರಲ್ಲಿಲ್ಲ. ಪ್ರವಾದಿ(ಸ) ಅವರ ಜೀವನ ಚರಿತ್ರೆಯನ್ನು ದಾಖಲಿಸಿರುವಂತೆ ಜಗತ್ತಿನಲ್ಲಿ ಈ ವರೆಗೂ ಬೇರೆ ಯಾರ ಚರಿತ್ರೆಯನ್ನೂ ಸ್ಪಷ್ಟವಾಗಿ ದಾಖಲಿಸಲಾಗಿಲ್ಲ. ಆ ಮಹಾನ್ ವ್ಯಕ್ತಿಯ ಜೀವನದ ಚಿಕ್ಕ, ದೊಡ್ಡ ಹಾಗೂ ಪ್ರಮುಖ ಮತ್ತು ಅತಿಪ್ರಮುಖವಲ್ಲದ ಯಾವ ಘಟನೆಯೂ ದಾಖಲಿಸದೆ ಬಿಟ್ಟುಹೋಗಿಲ್ಲ. ಸಹಧರ್ಮಿಣಿಯರೊಂದಿಗೆ ಒಡನಾಟದ ವಿವರಗಳೂ ಸೇರಿದಂತೆ ಅವರ ಸಂಪೂರ್ಣ ಜೀವನವನ್ನು ಎಲ್ಲರೂ ಓದಿ ತಿಳಿಯಬಹುದಾಗಿದೆ.

ಪ್ರವಾದಿ ಮುಹಮ್ಮದ್(ಸ) ಹೆಸರಿನಲ್ಲಿ ಲೋಕದಲ್ಲಿ ಸ್ಮಾರಕಗಳು, ಸ್ತೂಪಗಳು ಇಲ್ಲ. ಚಿತ್ರಗಳು, ಪ್ರತಿಮೆಗಳು ಎಲ್ಲಿಯೂ ಕಾಣುವುದಿಲ್ಲ. ಆದರೂ ಅವರಷ್ಟು ಸ್ಮರಿಸಲ್ಪಡುವ ಬೇರೆ ಯಾವ ವ್ಯಕ್ತಿಯೂ ಈ ಜಗತ್ತಿನಲ್ಲಿಲ್ಲ. ಅನುಕರಿಸಲ್ಪಡುವ ಬೇರೆ ಯಾವ ನಾಯಕನೂ ಇಲ್ಲ. ಜನ ಕೋಟಿಗಳ ಹೃದಯದಲ್ಲಿ ಅವರು ಜೀವಂತವಾಗಿದ್ದಾರೆ.

ಮರುಭೂಮಿಯ ಮಹಾ ಅದ್ಭುತ:-
ಪ್ರವಾದಿ ಮುಹಮ್ಮದ್(ಸ) ಮಕ್ಕಾ ಮರುಭೂಮಿಯಲ್ಲಿ ಜನಿಸಿದರು. ಅವರ ಜನನಕ್ಕಿಂತ ಮೊದಲೇ ಅವರ ತಂದೆ ಅಬ್ದುಲ್ಲಾ ನಿಧನರಾಗಿದ್ದರು. 6 ವರ್ಷ ಪ್ರಾಯವಾದಾಗ ಅವರ ತಾಯಿ ಆಮಿನಾ ತೀರಿಹೋದರು. ತಂದೆಯಿಲ್ಲದ ಅನಾಥ ಬಾಲಕ ಮುಹಮ್ಮದರ ಪೋಷಣೆಯ ಹೊಣೆಯನ್ನು ಅವರ ತಾತ ಅಬ್ದುಲ್ ಮುತ್ತಲಿಬ್ ವಹಿಸಿಕೊಂಡರು. ಪ್ರವಾದಿ ಮುಹಮ್ಮದ್‍ರಿಗೆ(ಸ) 8 ವರ್ಷವಾದಾಗ ಅವರೂ ನಿಧನರಾದರು. ಆನಂತರ ಅವರ ಪೋಷಣೆಯ ಹೊಣೆಯು ಚಿಕ್ಕಪ್ಪ ಅಬೂ ತಾಲಿಬ್‍ರ ಮೇಲೆ ಬಂತು. ಚಿಕ್ಕಪ್ಪ ಅಬೂತಾಲಿಬ್ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ಕಾರಣ ಬಡತನವು ಪ್ರವಾದಿ ಮುಹಮ್ಮದ್‍ರ(ಸ) ಸಂಗಾತಿಯಾಯಿತು. ಸಣ್ಣ ಪ್ರಾಯದಲ್ಲೇ ಕುರಿ ಕಾಯುವ ಕೆಲಸ ಮಾಡತೊಡಗಿದ ಪ್ರವಾದಿ ಮುಹಮ್ಮದ್‍ರಿಗೆ(ಸ) ಅಕ್ಷರ ಕಲಿಯುವ ಅವಕಾಶ ಲಭಿಸಲಿಲ್ಲ. ಆದರೂ ಆ ನಾಡಿನ ಕೆಟ್ಟ ಆಚರಣೆಗಳು ಅವರನ್ನು ಸ್ವಲ್ಪವೂ ಸ್ಪರ್ಶಿಸಲಿಲ್ಲ. ಅಂಧವಿಶ್ವಾಸ, ಅನಾಚಾರ, ಅಧರ್ಮ, ಅಶ್ಲೀಲತೆ, ಅಕ್ರಮ, ಅನ್ಯಾಯ, ಮದ್ಯಪಾನ, ವ್ಯಭಿಚಾರ, ಕಳ್ಳತನ, ವಂಚನೆ ಇತ್ಯಾದಿ ಕೆಡುಕುಗಳಿಂದ ಸಂಪೂರ್ಣ ಸುರಕ್ಷಿತರಾಗಿ ಅವರು ಬದುಕಿದರು. ಜೀವನದಲ್ಲೆಂದೂ ಸುಳ್ಳಾಡದ ಅವರು ವಿಶ್ವಸ್ತ(ನಂಬಿಗಸ್ತ) ಎಂಬ ಅರ್ಥವಿರುವ ಅಲ್ ಅಮೀನ್ ಎಂದು ಪರಿಚಿತರಾದರು.

ಮಕ್ಕಾ ಕವಿಗಳು, ಸಾಹಿತಿಗಳು, ಭಾಷಣಕಾರರ ನಾಡಾಗಿದ್ದರೂ ಪ್ರವಾದಿ ಮುಹಮ್ಮದ್‍ರು(ಸ) ಶಾಲೆಗೆ ಹೋಗಲಿಲ್ಲ, ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸಲಿಲ್ಲ. ಸಾಹಿತ್ಯ ಸಭೆ ಕವಿಗೋಷ್ಠಿಗಳಿಗೂ ಅವರು ಹೋಗುತ್ತಿರಲಿಲ್ಲ. ತನ್ನ ನಲ್ವತ್ತು ವರ್ಷ ಪ್ರಾಯದವರೆಗೂ ಅವರು ತನ್ನದೆಂಬ ಒಂದು ಗೆರೆಯ ಗದ್ಯವಾಗಲಿ ಪದ್ಯವಾಗಲಿ ರಚಿಸಿರಲಿಲ್ಲ. ಅಂದು ಅವರಲ್ಲಿ ಸೃಜನಾತ್ಮಕ ಲಕ್ಷಣಗಳು ಕೂಡಾ ವ್ಯಕ್ತವಾಗಿರಲಿಲ್ಲ.

ಪ್ರವಾದಿ ಮುಹಮ್ಮದರು(ಸ) ನಲ್ವತ್ತನೇ ವಯಸ್ಸಿಗೆ ಪ್ರವೇಶಿಸುವುದರೊಂದಿಗೆ ಧ್ಯಾನ ಪ್ರಾರ್ಥನೆಯಲ್ಲಿ ತಲ್ಲೀನರಾದರು. ಕೊಳಕು ಪರಿಸರದಿಂದ ದೂರ ಹೋಗಿ ಏಕಾಂತ ವಾಸ ನಡೆಸುವುದು ಉತ್ತಮವೆಂದು ಅವರಿಗೆ ಅನಿಸಿತು. ಹೀಗೆ ಮಕ್ಕಾದಿಂದ ಮೂರು ಕಿ.ಮೀ. ಉತ್ತರ ಭಾಗದಲ್ಲಿರುವ ಹಿರಾ ಎಂಬ ಒಂದು ಬೆಟ್ಟದ ಗುಹೆಯಲ್ಲಿ ಏಕಾಂತವಾಗಿರ ತೊಡಗಿದರು. ಹಿರಾ ಗುಹೆಯಲ್ಲಿದ್ದಾಗ ಒಂದು ದಿನ ಒಂದು ಲಿಖಿತದೊಂದಿಗೆ ದೇವಚರ ಜಿಬ್ರೀಲ್ ಪ್ರತ್ಯಕ್ಷರಾಗಿ ‘ಓದಿರಿ’ ಎಂದು ಹೇಳಿದರು. ಆದರೆ ಇದನ್ನು ಆಲಿಸಿದ ಪ್ರವಾದಿ(ಸ) ನನಗೆ ಓದಲು ಬರುವುದಿಲ್ಲ ಎಂದು ಉತ್ತರಿಸಿದರು. ದೇವಚರ ಪುನಃ ಓದಿರಿ ಎಂದು ಹೇಳಿದಾಗ ಪ್ರವಾದಿ(ಸ) ಅದೇ ಉತ್ತರವನ್ನು ಪುನರುಚ್ಚರಿಸಿದರು. ಮೂರನೇ ಬಾರಿಯೂ ದೇವಚರ ‘ಓದಿರಿ’ ಎಂದಾಗ ಪ್ರವಾದಿ(ಸ) ದೇವಚರರೊಡನೆ ಏನನ್ನು ಓದಬೇಕೆಂದು ಪ್ರಶ್ನಿಸಿದರು. ಆಗ ದೇವಚರ ಜಿಬ್ರೀಲ್ ಹೇಳಿದರು; ‘ನಿನ್ನನ್ನು ಸೃಷ್ಟಿಸಿದ ನಿನ್ನ ಪ್ರಭುವಿನ ನಾಮದಿಂದ ಓದಿರಿ. ಅವನು ಮಾನವನನ್ನು ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಸೃಷ್ಟಿಸಿದನು. ಓದಿರಿ, ಮತ್ತು ನಿಮ್ಮ ಪ್ರಭು ಮಹಾ ಉದಾರಿ. ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು.’

ಈ ರೀತಿ ದೇವನು ಮುಹಮ್ಮದರನ್ನು(ಸ) ತನ್ನ ಸಂದೇಶವಾಹಕರಾಗಿ ಆಯ್ಕೆ ಮಾಡಿದ್ದಾನೆ. ಹೀಗೆ ಆಕಾಶ ಲೋಕವು ಮಗದೊಮ್ಮೆ ಭೂಮಿಯೊಂದಿಗೆ ಸಂಗಮಗೊಂಡಿತು. ಮಾನವನ ಮನಸ್ಸಿಗೆ ದಿವ್ಯ ಸಂದೇಶಗಳು ಹರಿದು ಬಂದವು. ಅದು ದೇವನು ಮಾನವಕುಲಕ್ಕೆ ನೀಡಿದ ಅಂತಿಮ ಸಂದೇಶ. ಅಲ್ಲಿಯವರೆಗೆ ವ್ಯಾಪಾರಿಯೂ, ಪತಿಯೂ, ಕುಟುಂಬದ ಯಜಮಾನನೂ ಆಗಿದ್ದ ಮುಹಮ್ಮದ್(ಸ) ದೇವನ ಸಂದೇಶವಾಹಕರಾಗಿ ಮಾರ್ಪಟ್ಟರು. ಹಿರಾ ಗುಹೆಯಲ್ಲಿ ಲಭಿಸಿದ ಗ್ರಂಥದ ಪ್ರಕಾಶ ಮುಹಮ್ಮದರ(ಸ) ತುಟಿಯಲ್ಲಿ ದಿವ್ಯ ವಚನವಾಗಿ ಮಾರ್ಪಟ್ಟಿತು. ಅದರೊಂದಿಗೆ ಅವರು ತಮ್ಮ ಮನೆಗೆ ಮರಳಿ ಬಂದರು. ಆ ಮೇಲೆ ನಿರಂತರ 23 ವರ್ಷಗಳ ಕಾಲ ಪ್ರವಾದಿವರ್ಯರಿಗೆ(ಸ) ಈ ದಿವ್ಯ ಸಂದೇಶ ಲಭಿಸುತ್ತಿತ್ತು. ಪವಿತ್ರ ಕುರ್‍ಆನ್ ಈ ರೀತಿ ಅವತೀರ್ಣಗೊಂಡಿರುವ ದೈವಿಕ ಗ್ರಂಥವಾಗಿದೆ.

ಸಮಗ್ರ ಕ್ರಾಂತಿ:-
ಇತಿಹಾಸವು ಹಲವಾರು ಮಹಾನ್ ವ್ಯಕ್ತಿಗಳನ್ನು ಕಂಡಿದೆ. ರಾಜಕೀಯ ನಾಯಕರು, ಚಕ್ರವರ್ತಿಗಳು, ವಿದ್ವಾಂಸರು, ಪ್ರತಿಭಾವಂತರು, ಕಲಾಕಾರರು, ಸಾಹಿತಿಗಳು, ಧಾರ್ಮಿಕ ನಾಯಕರು, ತತ್ವ ಜ್ಞಾನಿಗಳು, ವಿಜ್ಞಾನಿಗಳು, ತಂತ್ರಜ್ಞರು ಹೀಗೆ ಮಹಾನ್ ವ್ಯಕ್ತಿಗಳ ಪಟ್ಟಿಯು ಇನ್ನಷ್ಟು ಉದ್ದವಿದೆ. ಅವರಲ್ಲಿ ಕೆಲವರು ಇತಿಹಾಸದಲ್ಲಿ ನಿರ್ಣಾಯಕ ಪ್ರಭಾವವನ್ನು ಬೀರಿದ್ದಾರೆ. ಆದರೆ ಪ್ರವಾದಿ ಮುಹಮ್ಮದರು ಇವರೆಲ್ಲರಿಂದಲೂ ಭಿನ್ನವಾಗಿ ನಿಲ್ಲುತ್ತಾರೆ. ಅವರಿಗೆ ಸಮಾನರಾಗಿ ಯಾರೂ ಇಲ್ಲ. ಅವರನ್ನು ಹೋಲುವ ಬೇರೆ ಉದಾಹರಣೆಗಳೂ ಇಲ್ಲ. ಎಷ್ಟೇ ಮಹಾನ್ ವ್ಯಕ್ತಿಗಳಾದರೂ ಅವರಿಗೆ ಮಾನವ ಜೀವನದ ಕೆಲವು ಭಾಗಗಳಲ್ಲಿ ಮಾತ್ರ ಬದಲಾವಣೆ ತರಲು ಸಾಧ್ಯವಾಗಿದೆ. ಆದರೆ ಪ್ರವಾದಿ ಮುಹಮ್ಮದ್(ಸ) ಇತಿಹಾಸದಲ್ಲಿ ಮಾನವ ಜೀವನದ ಸಕಲ ಕ್ಷೇತ್ರಗಳಲ್ಲಿ ಸಮಗ್ರ ಕ್ರಾಂತಿಯನ್ನುಂಟು ಮಾಡಿದ ಏಕೈಕ ವ್ಯಕ್ತಿಯಾಗಿದ್ದಾರೆ. ಪ್ರತಿಯೋರ್ವನ ಅಭ್ಯಾಸವಾದ ಜೀವನ ಶೈಲಿ, ಪರಂಪರೆ ಆಚರಿಸುತ್ತಿರುವ ವರ್ತನೆಗಳೇ, ಮಾನವನ ಬಹುದೊಡ್ಡ ದೌರ್ಬಲ್ಯಗಳಾಗಿರುತ್ತವೆ. ಅದರಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಈ ರಂಗದಲ್ಲಿ ಪ್ರವಾದಿ ಮುಹಮ್ಮದರ(ಸ) ಯಶಸ್ಸು ಅಚ್ಚರಿದಾಯಕವಾಗಿದೆ. 6ನೇ ಶತಮಾನದಲ್ಲಿ ಅರೇಬಿಯಾದ ಸಮಾಜದಲ್ಲಿ ಆವೃತವಾಗಿದ್ದ ಅಂಧವಿಶ್ವಾಸ ಅನಾಚಾರಗಳನ್ನು ಕೊನೆಗೊಳಿಸಿದರು. ಕಲ್ಲು, ಮರ, ವಿಗ್ರಹಗಳ ಮುಂದೆ ತಲೆಬಾಗುವ ಅವರನ್ನು ಏಕ ದೇವನ ಸನ್ನಿಧಿಯಲ್ಲಿ ಮಾತ್ರ ಶಿರಬಾಗುವವರನ್ನಾಗಿ ಮಾಡಿದರು. ಜೀವನವೆಂದರೆ ತಿಂದುಂಡು ಭೋಗಿಸಿ ಸುಖಾರಾಮದಿಂದ ಮೈಮರೆಯುವುದು ಮತ್ತು ಈ ರೀತಿ ಆಯುಷ್ಯವನ್ನು ಮುಗಿಸಲಿಕ್ಕಿರುವುದೆಂದು ನಂಬಿದ್ದ ಒಂದು ಜನ ಸಮೂಹಕ್ಕೆ ಮರಣಾನಂತರ ಒಂದು ಜೀವನವಿದೆ ಅಲ್ಲಿನ ಯಶಸ್ಸೇ ನಿಜವಾದ ವಿಜಯವೆಂದು ಅವರು ಕಲಿಸಿದರು. ಅರಾಜಕತೆಯ ಜೀವನಕ್ಕೆ ಪೂರ್ಣ ವಿರಾಮ ಹಾಕಿಸಿ ಕ್ರಮಬದ್ಧವಾದ ವ್ಯವಸ್ಥೆಯ ಮಿತಿ ಮೇರೆಗಳೊಳಗೆ ಜೀವಿಸುವವರಾಗಿ ಅವರನ್ನು ಬದಲಾಯಿಸಿದರು. ಮದ್ಯವನ್ನು ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂದು ನಂಬಿದ್ದ ಅದೇ ಅರೇಬಿಯನ್ ಜನರನ್ನು ಅವರು ಮದ್ಯ ಹಾಕಿದ ಪಾತ್ರೆಯನ್ನು ಬಳಸದವರಾಗಿ, ಮದ್ಯಪಾನದ ಸಭೆಗಳನ್ನು ಬಹಿಷ್ಕರಿಸುವವರನ್ನಾಗಿ ಬದಲಾಯಿಸಿದರು. ಅಶ್ಲೀಲತೆ, ನಿರ್ಲಜ್ಜೆ, ಲೈಂಗಿಕ ಅರಾಜಕತೆಯ ದಾಸರಾಗಿ ನೀಚರಾಗಿ ಬದುಕುತ್ತಿದ್ದ ಸಮಕಾಲೀನ ಸಮಾಜವನ್ನು ಅವರು ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸಿ ಜೀವಿಸುವವರನ್ನಾಗಿ ಮಾಡಿದರು. ದುರ್ಬಲ ಕ್ಷಣದಲ್ಲಿ ಆಗಿ ಹೋದ ತಪ್ಪುಗಳನ್ನು ಸ್ವಯಂ ಬಹಿರಂಗಪಡಿಸಿ ಶಿಕ್ಷೆಯನ್ನು ಕೇಳಿ ಪಡೆಯಲು ಉತ್ಸುಕತೆ ತೋರುವಂತಹ ಆತ್ಮ ಸಂಸ್ಕರಣೆ ಮತ್ತು ಶಿಕ್ಷಣವನ್ನು ಗಳಿಸಿದವರನ್ನಾಗಿ ಮಾಡಿದರು. ಕುಟುಂಬ ಕಲಹ, ಗೋತ್ರ ಪೈಪೋಟಿಯಲ್ಲಿ ಸಂಕುಚಿತಗೊಂಡ ಲೋಕದಿಂದ ಅವರನ್ನು ಬಿಡುಗಡೆಗೊಳಿಸಿ ಒಂದೇ ವಿಶ್ವ ಎಂಬ ದೃಷ್ಟಿಕೋನದ ವಕ್ತಾರರನ್ನಾಗಿಸಿದರು. ಹಗೆತನ, ಕಠೋರಸ್ವಭಾವ-ಚಿಂತನೆಗಳ ಬದಲಾಗಿ ಅವರಲ್ಲಿ ಪ್ರೀತಿ ಕರುಣೆಯ ಭಾವನೆಗಳನ್ನು ಬೆಳೆಸಿದರು. ಸ್ವಾರ್ಥ ಮನೋಭಾವಗಳಿಗೆ ಕೊನೆಹಾಡಿ ಸಹೋದರತೆಯ ಪ್ರಜ್ಞೆಯನ್ನು ಪ್ರೋತ್ಸಾಹಿಸಿದರು. ಅಕ್ರಮ, ಅನ್ಯಾಯ, ಅಂಧಕಾರಗಳ ಜಗತ್ತಿನಿಂದ ಶಾಂತಿ-ನ್ಯಾಯದ ಬೆಳಕಿನೆಡೆಗೆ ಮುನ್ನಡೆಸಿದರು. ಗುಲಾಮರು, ಒಡೆಯರು, ಮೇಲ್ವರ್ಗದವರು, ಕೆಳಮಟ್ಟದವರೆಂದು ನಿರ್ಮಾಣಗೊಂಡಿದ್ದ ಸಾಮಾಜಿಕ ಅಸಮಾನತೆ, ಉಚ್ಛ ನೀಚತೆಗಳ ಕೊನೆಯ ಗುರುತು ಕೂಡಾ ಉಳಿಯದಂತೆ ಸಮೂಲ ನಾಶ ಮಾಡಿದರು. ಹೀಗೆ ಇತಿಯೋಪಿಯಾದ ಬಿಲಾಲ್, ರೋಮ್‍ನ ಸುಹೈಬ್, ಪರ್ಶಿಯಾದ ಸಲ್ಮಾನ್, ಮಕ್ಕಾದ ಅಬೂಬಕರ್, ಮದೀನಾದ ಸಅದ್ ಒಂದೇ ಸಮಾಜದ ಸಮಾನ ಸದಸ್ಯರಾಗಿ ಮತ್ತು ಸಮಾನ ಪ್ರಜೆಗಳಾಗಿ ಪರಿವರ್ತನೆಯಾದರು. ಒಂದು ಕಾಲದಲ್ಲಿ ಇತಿಯೋಪಿಯಾದ ನೀಗ್ರೋ ಗುಲಾಮನಾಗಿದ್ದ ಬಿಲಾಲ್ ಉನ್ನತ ಕುಲದ ಕುರೈಶರನ್ನು ಮೀರಿಸುವ ಮಟ್ಟಕ್ಕೆ ಬೆಳೆದು ನಿಲ್ಲುವಂಥ ಮಹಾನ್ ಪದವಿಗೆ ತಲುಪಿದರು. ಪ್ರವಾದಿವರ್ಯರ(ಸ) ನಾಯಕತ್ವದಲ್ಲಿ ಸಿಕ್ಕಿದ ಕ್ರಾಂತಿಯ ವಿಜಯ ಘೋಷಣೆಯನ್ನು ಮಾಡಲು ಅವರೇ ಆಯ್ಕೆಯಾಗಿದ್ದರು. ಅವರು ಕಅಬಾದ ತುತ್ತತುದಿಯಲ್ಲಿ ನಿಂತು ಅದಾನ್ ಮೊಳಗಿಸಿದರು. 23 ವರ್ಷಗಳ ನಿರಂತರ ಪರಿಶ್ರಮಗಳಿಂದ ಸಂಪೂರ್ಣ ಜೀವನದಲ್ಲಿ ಅಮೂಲಾಗ್ರ ಬದಲಾವಣೆಗೊಂಡ ಒಂದು ಸಮಾಜವನ್ನು ಪ್ರವಾದಿ ಮುಹಮ್ಮದ್(ಸ) ಕಟ್ಟಿ ಬೆಳೆಸಿದರು. ಒಂಟೆಯ ಕಡಿವಾಣವನ್ನು ಹಿಡಿದು ನಡೆದಾಡುತ್ತಿದ್ದ ಅರಬರನ್ನು ಲೋಕದ ಕಡಿವಾಣ ಹಿಡಿಯುವವರಾಗಿ ಬದಲಾಯಿಸಿದರು. ಅಂಧ ವಿಶ್ವಾಸಿಗಳನ್ನು ಸತ್ಯವಿಶ್ವಾಸಿಗಳನ್ನಾಗಿ, ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ, ಒರಟರನ್ನು ಮೃದು ಸ್ವಭಾವಿಗಳನ್ನಾಗಿ, ಕಿರಾತಕರನ್ನು ನಾಗರಿಕರನ್ನಾಗಿ, ಕ್ರೂರಿಗಳನ್ನು ಕರುಣಾಳುಗಳಾಗಿ, ಪರಾಕ್ರಮಿಗಳನ್ನು ಪರೋಪಕಾರಿಗಳಾಗಿ ಹಾಗೂ ಹೇಡಿಗಳನ್ನು ಧೀರರನ್ನಾಗಿ ರೂಪಿಸಿದರು. ಅಂಧವಿಶ್ವಾಸ ಅನಾಚಾರ ಹಾಗೂ ಅಕ್ರಮ ಅನ್ಯಾಯಗಳನ್ನು ನಿರ್ಮೂಲನ ಮಾಡಿದರು. ಗುಲಾಮರು ಮತ್ತು ದಮನಿಸಲ್ಪಟ್ಟವರ ಜೀವನವನ್ನು ಉತ್ತಮ ಪಡಿಸಿದರು. ನಿರ್ಗತಿಕರು, ಅನಾಥರು, ಅಸಹಾಯಕರು ಹಾಗೂ ನಿರಾಶ್ರಿತರಲ್ಲಿ ಭರವಸೆ ತುಂಬಿದರು. ಬಡವರಿಗೆ ಸುರಕ್ಷೆಯೊದಗಿಸಿದರು. ವೈಯಕ್ತಿಕ ಬದುಕನ್ನು ಪರಿಶುದ್ಧವಾಗಿ, ಕುಟುಂಬ ಜೀವನವನ್ನು ಸುಭದ್ರವಾಗಿ, ಸಮಾಜವನ್ನು ಸುಸಂಸ್ಕ್ರತವಾಗಿ ಹಾಗೂ ರಾಷ್ಟ್ರವನ್ನು ಕಲ್ಯಾಣಕಾರಿಯನ್ನಾಗಿ ಮಾಡಿದರು. ಅತ್ತ್ಯುತ್ತಮವಾದ ಸಂಸ್ಕ್ರತಿ ಮತ್ತು ನಾಗರಿಕತೆಯನ್ನು ರೂಪಿಸಿದರು. ಅಂದು ಪ್ರವಾದಿ(ಸ) ಬೆಳೆಸಿದ ಸಮಾಜಕ್ಕಿಂತ ಆದರ್ಶಪ್ರಾಯವಾದ ಒಂದು ಸಮಾಜ ಅದಕ್ಕಿಂತ ಮುಂಚೆ ಅಥವಾ ಅನಂತರವಾಗಲಿ ಲೋಕದಲ್ಲಿ ತಲೆಯೆತ್ತಲಿಲ್ಲ. ಇಂದು ಜಗತ್ತಿನಾದ್ಯಂತ ಕಾಣಿಸುತ್ತಿರುವ ಇಸ್ಲಾಮೀ ಸಮಾಜವು ಆ ಸಮಾಜದ ಮುಂದುವರಿದ ಭಾಗವಾಗಿದೆ. ಆದರೆ ಪ್ರವಾದಿವರ್ಯರು(ಸ) ಬೆಳೆಸಿದ ಸಮಾಜವು ಇಂದು ಬಲಹೀನವಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರವಾದಿ ಮುಹಮ್ಮದರನ್ನು(ಸ) ಅನುಸರಿಸುವಲ್ಲಿ ಉಂಟಾಗಿರುವ ತಪ್ಪುಗಳೇ ಇದಕ್ಕೆ ಮುಖ್ಯ ಕಾರಣವಾಗಿದೆ.

ಪ್ರವಾದಿ ಮುಹಮ್ಮದ್(ಸ) ಜನರೊಂದಿಗೆ ಸದಾ ಪ್ರೀತಿ ವಾತ್ಸಲ್ಯದಿಂದ ಬೆರೆಯುತ್ತಿದ್ದರು. ಜನರು ಯಾವುದಾದರೂ ಅಪಾಯದಲ್ಲಿ ಸಿಲುಕುವುದು ಪ್ರವಾದಿವರ್ಯರನ್ನು(ಸ) ಅತ್ಯಧಿಕ ಸಂಕಟಕ್ಕೆ ಗುರಿಪಡಿಸುತ್ತಿತ್ತು. ಜನರು ಸನ್ಮಾರ್ಗವನ್ನು ಸ್ವೀಕರಿಸದೆ ಪಾಪದ ಪ್ರಪಾತಕ್ಕೆ ಬಿದ್ದು ನಾಶವಾಗುವುದು ಅವರಿಗೆ ಸಹಿಸಲು ಸಾಧ್ಯವಾಗಿರಲಿಲ್ಲ. ಈ ಕೊರಗಿನಿಂದ ಅವರು ಸೊರಗಿದರು. ಈ ಕುರಿತು ಅಲ್ಲಾಹನು ಹೇಳುತ್ತಾನೆ ‘ಸಂದೇಶವಾಹಕರೇ, ಇವರು ಸತ್ಯವಿಶ್ವಾಸವನ್ನು ಸ್ವೀಕರಿಸುವುದಿಲ್ಲವೆಂಬ ವ್ಯಥೆಯಿಂದ ಪ್ರಾಯಶಃ ನೀವು ನಿಮ್ಮ ಜೀವವನ್ನೇ ಸೊರಗಿಸಿಕೊಳ್ಳುವಿರಿ'(ಪವಿತ್ರ ಕುರ್‍ಆನ್ 26:3).

ತನ್ನನ್ನು ತೀವ್ರವಾಗಿ ವಿರೋಧಿಸಿದವರೂ ಕೂಡಾ ದುರ್ಮಾರ್ಗದಿಂದ ಸಂಕಷ್ಟಪಡಬಹುದೆಂದು ಅವರು ಪ್ರಾಮಾಣಿಕವಾಗಿ ಚಿಂತಿಸಿದರು. ಮಕ್ಕಾದಲ್ಲಿ ಬದುಕುವುದು ಕಷ್ಟಕರವಾದಾಗ ಆಶ್ರಯ ಹುಡುಕುತ್ತಾ ಅವರು ತಾಯಿಫ್‍ಗೆ ಹೋದರು. ಅಲ್ಲಿನವರು ಆಶ್ರಯ ನೀಡಲು ನಿರಾಕರಿಸಿದರು, ಅಷ್ಟೇ ಅಲ್ಲ ಅವರನ್ನು ಕಠಿಣವಾಗಿ ಹಿಂಸಿಸಿ ಅಟ್ಟಿದರು. ಆದರೆ ಅವರನ್ನು ಶಿಕ್ಷಿಸಲು ಕೂಡಾ ಪ್ರವಾದಿ(ಸ) ಸಮ್ಮತಿಸಲಿಲ್ಲ, ಮಾತ್ರವಲ್ಲ ಅವರ ಒಳಿತಿಗಾಗಿ ಪ್ರಾರ್ಥಿಸಿದರು.

ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳನ್ನು ಕಠಿಣವಾಗಿ ಪೀಡಿಸಿ ನಾಡಿನಿಂದ ಓಡಿಸಿದ, ಬಾಣ ಪ್ರಯೋಗಿಸಿ ಹಲ್ಲನ್ನು ಕಿತ್ತ, ತನ್ನ ಕರುಳ ಸಂಬಂಧಿಗಳನ್ನು ಕೊಂದ ಕ್ರೂರ ಶತ್ರುಗಳೇ ಹಸಿವಿನಿಂದ ಕಷ್ಟಪಡುತ್ತಿರುವುದು ಅವರನ್ನು ದುಃಖಕ್ಕೀಡು ಮಾಡಿತು. ಹಿಜರಿ ಶಕೆ 5ನೇ ವರ್ಷದಲ್ಲಿ ಮಕ್ಕಾದಲ್ಲಿ ಬರಗಾಲ ಬಾಧಿಸಿತು. ಶ್ರೀಮಂತರಿಗೂ ಕೂಡಾ ಈ ಸಂಕಟ ತಟ್ಟಿತು. ಅಂದು ಅಲ್ಲಿದ್ದವರೆಲ್ಲರೂ ಪ್ರವಾದಿಯವರ(ಸ) ಬದ್ಧ ವೈರಿಗಳಾಗಿದ್ದರು ಆದರೂ ಪ್ರವಾದಿ(ಸ) ಮದೀನಾದಿಂದ ಧಾರಾಳ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅದನ್ನು ಅಮ್ರಿಬ್ನು ಉಮಯ್ಯರ ಮುಖಾಂತರ ಕಳುಹಿಸಿದರು. ಪ್ರವಾದಿ(ಸ) ಕರುಣೆ ತುಂಬಿದ ಕೊಡವಾಗಿದ್ದುದು ಮಾತ್ರವಲ್ಲ, ತಮ್ಮ ಅನುಯಾಯಿಗಳನ್ನು ಕೂಡಾ ಅದೇ ರೀತಿಯಿಂದ ಬೆಳೆಸಲು ಪ್ರಯತ್ನಿಸಿದರು.

ಒಮ್ಮೆ ಯಮನ್‍ನ ಯಮಾಮ ಗೋತ್ರದ ಸುಮಾಮ ಈ ರೀತಿ ಹೇಳಿದರು; ಮಕ್ಕಾದವರು ಪ್ರವಾದಿಯವ(ಸ)ರೊಂದಿಗೆ ಶತ್ರುತ್ವವನ್ನು ತೊರೆಯುವವರೆಗೆ ಯಮನ್‍ನಿಂದ ಒಂದು ಹಿಡಿ ಧಾನ್ಯವನ್ನು ಮಕ್ಕಾಗೆ ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ. ಈ ವಿಷಯವನ್ನು ತಿಳಿದ ಪ್ರವಾದಿವರ್ಯರು(ಸ) ‘ಬೇಡ ಸುಮಾಮ, ತನ್ನನ್ನು ಆಕ್ಷೇಪಿಸುವವರ ಮೇಲೆ ಕೂಡಾ ದೇವನು ಔದಾರ್ಯವನ್ನು ತೋರಿಸುತ್ತಾನೆ. ನಾವು ಕೂಡಾ ಅವನ ಗುಣವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಆದುದರಿಂದ ಶತ್ರುಗಳೊಂದಿಗೆ ಕರುಣೆ ತೋರಿರಿ ಎಂದು ಸೂಚಿಸಿದರು. ಯಶಸ್ಸಿಗೆ ಕ್ಷಮೆಯೇ ದಾರಿ, ಪ್ರತೀಕಾರವಲ್ಲವೆಂದು ಪ್ರವಾದಿವರ್ಯರು(ಸ) ಕಲಿಸಿಕೊಟ್ಟರು. ತಮ್ಮನ್ನು ವಧಿಸಲು ಖಡ್ಗವೆತ್ತಿದವನ ಕಥೆ ಮುಗಿಸುವ ಅವಕಾಶ ಸಿಕ್ಕಿಯೂ ಕ್ಷಮಿಸಿ ಅವನನ್ನು ಸುಮ್ಮನೆ ಬಿಟ್ಟರು. ಅವರ ಮೇಲೆ ಕಸ ಎಸೆಯುತ್ತಿದ್ದ ಯಹೂದಿ ಮಹಿಳೆಯನ್ನು ಕ್ಷಮಿಸಿದರು ಮತ್ತು ಆಕೆ ಅನಾರೋಗ್ಯ ಪೀಡಿತಳಾಗಿ ಮನೆಯಲ್ಲಿ ಉಳಿದಾಗ ತಮ್ಮ ಅನುಯಾಯಿಗಳೊಂದಿಗೆ ಸಂದರ್ಶಿಸಿ ಆಕೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ವಿಷ ಸವರಿದ ಖಡ್ಗದೊಂದಿಗೆ ಕೊಲ್ಲಲು ಬಂದ ಉಮೈರಿಬ್ನು ವಹಬ್‍ರನ್ನೂ ಹಾಗೆಯೇ ಅವರನ್ನು ಕಳುಹಿಸಿದ ಸಫ್‍ವಾನಿಬ್ನು ಉಮಯ್ಯರನ್ನೂ ಕ್ಷಮಿಸಿ ಬಿಟ್ಟರು.

ಮಕ್ಕಾ ವಿಜಯದ ವೇಳೆ ತಮ್ಮ ಮುಂದೆ ಹಾಜರುಪಡಿಸಿದ ಸೆರೆಯಾಳುಗಳೊಡನೆ ಪ್ರವಾದಿವರ್ಯರು(ಸ) ಹೀಗೆ ಹೇಳಿದರು “ಇಂದು ನಿಮ್ಮ ಮೇಲೆ ಯಾವುದೇ ಪ್ರತೀಕಾರವಿಲ್ಲ. ನೀವು ಹೋಗಿರಿ! ನೀವೆಲ್ಲರೂ ಸ್ವತಂತ್ರರಾಗಿರುವಿರಿ.” ಇದನ್ನು ಬಿಟ್ಟರೆ ಬೇರೊಂದು ನಿಲುವು ತಾಳಲು ಪ್ರವಾದಿವರ್ಯರಿಗೆ(ಸ) ಸಾಧ್ಯವೂ ಇರಲಿಲ್ಲ. ಏಕೆಂದರೆ ಅವರ ಸ್ವಭಾವವೇ ಅದಾಗಿತ್ತು. ಅವರು ಅತೀ ಹೆಚ್ಚು ಕರುಣಾಮಯಿಯಾಗಿದ್ದರು. ಪ್ರವಾದಿತ್ವ ಲಭಿಸುವ ಸಂದರ್ಭದಲ್ಲಿ ಅಸ್ವಸ್ಥರಾದ ಪ್ರವಾದಿವರ್ಯರನ್ನು(ಸ) ಸಂತೈಸಿ ಪ್ರಿಯ ಪತ್ನಿ ಖತೀಜಾರು ಹೇಳಿದ ಮಾತುಗಳು ಇದನ್ನು ಸ್ಪಷ್ಟಪಡಿಸುತ್ತಿದೆ. “ಅಲ್ಲಾಹನು ಎಂದೂ ತಮ್ಮನ್ನು ಅಪಮಾನಿಸಲಾರ. ನೀವು ಕುಟುಂಬ ಸಂಬಂಧವನ್ನು ಜೋಡಿಸುತ್ತೀರಿ. ಅಸಹಾಯಕರಿಗೂ ನಿರ್ಗತಿಕರಿಗೂ ನೆರವಾಗುತ್ತೀರಿ. ಅತಿಥಿಗಳನ್ನು ಸತ್ಕರಿಸುತ್ತೀರಿ. ಅನಾಥರನ್ನು ಸಂರಕ್ಷಿಸುತ್ತೀರಿ.”

ಪ್ರವಾದಿ ಮುಹಮ್ಮದರು(ಸ) ಸದಾ ಮರ್ದಿತರ ಮತ್ತು ಪೀಡಿತರ ಜೀವಸೆಲೆಯಾಗಿದ್ದರು. ತೀರಾ ಪ್ರತಿಕೂಲವಾದ ಪರಿಸ್ಥಿತಿಯಲ್ಲಿಯೂ ಸಮರ್ಥನಾದ ಎದುರಾಳಿ ಅಬೂಜಹಲ್‍ನಿಂದ ಇರಮ್ ಗೋತ್ರದ ಇಬ್ನುಲ್ ಗೌಸ್‍ರಿಗೆ ಅವರ ಹಕ್ಕನ್ನು ತೆಗೆದು ಕೊಡಲು ಪ್ರವಾದಿವರ್ಯರಿಗೆ(ಸ) ಅವರ ವಿಶಾಲ ಮನೋಸ್ಥಿತಿ ಮತ್ತು ಅಪಾರ ದಯೆಯೇ ಪ್ರೇರಣೆಯಾಗಿತ್ತು. ಓರ್ವ ಗ್ರಾಮೀಣನು ಸ್ವಂತ ಮಗಳನ್ನು ಜೀವಂತ ಹೂತುಬಿಟ್ಟ ಕಥೆಯನ್ನು ವಿವರಿಸಿದಾಗ ಕಣ್ಣೀರಿಳಿಸಿದ ಪ್ರವಾದಿ(ಸ) ಸದಾ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಯುದ್ಧದಲ್ಲಿ ಶತ್ರುಗಳ ಮಕ್ಕಳು ಕೊಲ್ಲಲ್ಪಟ್ಟಿರುವ ಸುದ್ದಿ ಕೇಳಿದಾಗ ಪ್ರವಾದಿ(ಸ) ಹೇಳಿದರು ಸ್ರೀಯರು, ಮಕ್ಕಳು, ವೃದ್ದರು, ನಿರಾಯುಧರು ಮತ್ತು ಆರಾಧನೆಯಲ್ಲಿ ತಲ್ಲೀನರಾದವರಿಗೆ ಉಪಟಳ ನೀಡಬಾರದು, ಅವರನ್ನು ವಧಿಸಬಾರದು” ಎಂದು ತಾಕೀತು ಮಾಡಿದರು.

ಹುಟ್ಟೂರು ಮಕ್ಕಾವನ್ನು ತೊರೆದು ಮದೀನಾಕ್ಕೆ ವಲಸೆ(ಹಿಜಿರಾ) ಹೋಗುವಾಗ ಮಕ್ಕಾದ ಮರ್ದಕರಾದ ಅವರ ಶತ್ರುಗಳು ಪ್ರವಾದಿಯವರ(ಸ) ಬಳಿ ಇರಿಸಿದ್ದ ತಮ್ಮ ಬೆಳೆಬಾಳುವ ವಸ್ತುಗಳನ್ನು ಮರಳಿಸಲು ತಮ್ಮ ತಂದೆಯ ಸಹೋದರ ಪುತ್ರ ಅಲಿಯವರಿಗೆ ವಹಿಸಿಕೊಟ್ಟು ಅವರನ್ನು ಮಕ್ಕಾದಲ್ಲಿಯೇ ನಿಲ್ಲಿಸಿದರು. ಈ ಕಾರಣದಿಂದಲೇ ಬದ್ಧ ಶತ್ರುಗಳು ಕೂಡಾ ಅವರನ್ನು ಅತೀ ಹೆಚ್ಚು ಆದರಿಸಿದರು ಮತ್ತು ವೈಯಕ್ತಿಕವಾಗಿ ಅವರನ್ನು ಆಕ್ಷೇಪಿಸುತ್ತಿರಲಿಲ್ಲ. ರೋಮನ್ ಆಡಳಿತಗಾರ ಹಕ್ರ್ಯುಲಸ್ ಪ್ರವಾದಿ ಮುಹಮ್ಮದ್‍ರ(ಸ) ಕುರಿತು ಕೇಳಿದಾಗ ವಿರೋಧಿ ನಾಯಕ ಅಬೂ ಸುಫ್‍ಯಾನ್‍ರಿಗೆ ಒಂದೇ ಒಂದು ಅಪರಾಧವನ್ನು ಬೊಟ್ಟು ಮಾಡಿ ಹೇಳಲು ಸಾಧ್ಯವಾಗಲಿಲ್ಲ.

ಪ್ರವಾದಿಯವರ(ಸ) ಕರುಣೆ, ಪ್ರೀತಿಯ ಹೊನಲು ಭೂಮಿಯ ಜೀವಜಾಲಗಳೆಡೆಗೂ ಹರಿದಿತ್ತು. ತಮ್ಮ ಅನುಯಾಯಿಗಳು ಹಕ್ಕಿಯ ಮರಿಯನ್ನು ತಂದಾಗ ಮರಿಗಾಗಿ ಅತ್ತಿತ್ತ ಹಾರಾಡುತ್ತಿದ್ದ ತಾಯಿ ಹಕ್ಕಿಗೆ ಅದನ್ನು ಮರಳಿ ನೀಡುವಂತೆ ಆದೇಶಿಸಿದರು. ಅನುಯಾಯಿಗಳು ಚಳಿಯನ್ನು ಓಡಿಸಲು ಬೆಂಕಿ ಹಾಕಿದಾಗ ಅದು ಹರಡಿ ಇರುವೆಗಳು ಸಾಯುತ್ತದೆ ಎಂದು ಬೆಂಕಿ ನಂದಿಸಲು ಸೂಚಿಸಿದರು. ಬಾಯಾರಿ ಬಳಲಿದ ನಾಯಿಗೆ ನೀರು ಕೊಡುವುದು ಪಾಪ ವಿಮೋಚನೆಗೆ ಕಾರಣವಾಗುವುದೆಂದೂ, ಬೆಕ್ಕನ್ನು ಕಟ್ಟಿ ಹಾಕಿ ಹಸಿಯುವಂತೆ ಮಾಡುವುದು ಬಹುದೊಡ್ಡ ಪಾಪವೆಂದೂ ಕಲಿಸಿದ ಪ್ರವಾದಿ(ಸ) ಅಳುತ್ತಿರುವ ಒಂಟೆಯ ಕಣ್ಣೀರನ್ನು ಒರೆಸುತ್ತಾ ಅದರ ಯಜಮಾನನೊಂದಿಗೆ ಹೇಳಿದರು “ಈ ಒಂಟೆಯ ವಿಚಾರದಲ್ಲಿ ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? ಸರಿಯಾಗಿ ಸಾಕುವುದಕ್ಕಾಗಿ ಅಲ್ಲಾಹನು ಅದನ್ನು ನಿಮಗೆ ನೀಡಿರುವನು. ಒಂಟೆಯನ್ನು ಚೆನ್ನಾಗಿ ಸಾಕುವವರಿಗೆ ಮಾತ್ರ ಅದನ್ನು ಉಪಯೋಗಿಸುವ ಹಕ್ಕಿದೆ.”

ಅನಾವಶ್ಯಕವಾಗಿ ಮರಕ್ಕೆ ಕಲ್ಲೆಸೆಯಬಾರದೆಂದೂ ಅದಕ್ಕೆ ನೋವಾಗುವುದೆಂದೂ ನೆನಪಿಸಿದ ಪ್ರವಾದಿ(ಸ) ಮಕ್ಕಾ ನಗರದ ಉಹುದ್ ಬೆಟ್ಟದೊಂದಿಗೆ ತಮ್ಮ ನಿಸ್ಪ್ರಹ ಪ್ರೀತಿಯನ್ನು ಪ್ರಕಟಿಸಲು ಕೂಡಾ ಜಿಪುಣತೆಯನ್ನು ತೋರಲಿಲ್ಲ.

ದೇವನ ಅಂತಿಮ ಸಂದೇಶವಾಹಕರೂ, ಸಮಾಜದ ನಾಯಕರೂ, ರಾಷ್ಟ್ರದ ಆಡಳಿತಾಧಿಕಾರಿಯೂ ಆಗಿದ್ದ ಪ್ರವಾದಿ ಮುಹಮ್ಮದ್(ಸ) ಜನರ ಮಧ್ಯೆ ಅವರಲ್ಲೊಬ್ಬರಾಗಿ ಬದುಕಿದರು. ಅವರಿಗೆ ಪ್ರತ್ಯೇಕವಾದ ಸ್ಥಾನ, ಉಡುಪು, ಪೀಠಗಳಾವುದೂ ಇರಲಿಲ್ಲ. ಅಪರಿಚಿತರು ಬಂದರೆ ಗುರುತಿಸಲು ಸಾದ್ಯವಾಗದಿರುವಷ್ಟು ಅವರು ಅನುಯಾಯಿಗಳ ಜೊತೆ ಬೆರೆಯುತ್ತಿದ್ದರು. ಎಂದೂ ತಾವು ಬರುವಾಗ ಎದ್ದು ನಿಲ್ಲಬಾರದೆಂದು ಅನುಯಾಯಿಗಳಿಗೆ ಆಜ್ಞಾಪಿಸಿದರು. ಅನುಯಾಯಿಗಳ ಜೊತೆ ಪ್ರಯಾಣಿಸುವ, ಕಂದಕ ತೋಡುವ, ಆಹಾರ ಬೇಯಿಸುವ ಕೆಲಸಗಳನ್ನು ಕೂಡಾ ಅವರು ಮಾಡಿದರು.

ಪ್ರವಾದಿ(ಸ) ಸಾಮಾಜಿಕ ಪರಿವರ್ತನೆಗಾಗಿ ಸೌಮ್ಯದಾರಿಯನ್ನು ಸ್ವೀಕರಿಸಿದರು. ಅಲ್ಲಾಹನು ಈ ಕುರಿತು ಹೀಗೆ ತಿಳಿಸಿದ್ದಾನೆ “(ಓ ಪೈಗಂಬರರೇ) ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತ ಮುತ್ತಲಿನಿಂದ ಚದುರಿ ಹೋಗುತ್ತಿದ್ದರು. ಇವರ ಪ್ರಮಾದಗಳನ್ನು ಕ್ಷಮಿಸಿರಿ. ಇವರ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿರಿ ಮತ್ತು ಧರ್ಮದ ಕೆಲಸಗಳಲ್ಲಿ ಇವರೊಡನೆ ಸಮಾಲೋಚಿಸಿರಿ. ಆ ಬಳಿಕ ಯಾವುದಾದರೊಂದು ಅಭಿಪ್ರಾಯದಲ್ಲಿ ನೀವು ದೃಢ ನಿರ್ಧಾರ ತಾಳಿದರೆ ಅಲ್ಲಾಹನ ಮೇಲೆ ಭರವಸೆಯಿಡಿರಿ. ಅಲ್ಲಾಹನ ಮೇಲೆಯೇ ಭರವಸೆಯಿಟ್ಟು ಕಾರ್ಯವೆಸಗುವವರನ್ನು ಅವನು ಪ್ರೀತಿಸುತ್ತಾನೆ. (ಪವಿತ್ರ ಕುರ್‍ಆನ್ 3:159)

ಈ ರೀತಿ ಎಲ್ಲ ಕಾಲದ ಯಾವುದೇ ಜನ ವಿಭಾಗಕ್ಕೂ ಅನುಕರಣೀಯವಾದ ಮಹಾ ಮಾದರಿಯನ್ನು ತಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರದರ್ಶಿಸಲು ಪ್ರವಾದಿ ಮುಹಮ್ಮದರಿಗೆ(ಸ) ಸಾಧ್ಯವಾಯಿತು. ಮಾನವ ಇತಿಹಾಸದ ತುಲನಾತೀತ ಮಾದರಿಯಾಗಿ ಅವರು ಮಾರ್ಪಡಲು ಅದುವೇ ಕಾರಣವಾಗಿದೆ.

ನಿತ್ಯ ಸಾನಿಧ್ಯ:-
ಮೊದಲ ಬಾರಿ ಪವಿತ್ರ ಕುರ್‍ಆನನ್ನು ಆಂಗ್ಲ ಭಾಷೆಗೆ ಅನುವಾದಿಸಿದವರು ಮುಹಮ್ಮದ್ ಮರ್ಮಡ್ಯೂಕ್ ಪಿಕ್ತಾಲ್. ಇವರು ಬ್ರಿಟಿಷ್ ಸರಕಾರದ ಅಧಿಕಾರಿಯಾಗಿ ಮಧ್ಯ ಪ್ರಾಚ್ಯ ದೇಶಗಳಲ್ಲಿ ವಾಸಿಸುತ್ತಿದ್ದರು. ಒಂದು ದಿನ ಅಲ್ಲಿ ವಿಚಿತ್ರವಾದ ಘಟನೆ ನಡೆಯಿತು. ಪಿಕ್ತಾಲ್ ವಾಸಿಸುತ್ತಿರುವ ಫ್ಲಾಟಿನ ಎದುರು ಭಾಗದ ಮನೆಯಿಂದ ಒಂದು ಗಲಾಟೆ ಕೇಳಿ ಬಂತು. ಅತ್ತ ನೋಡಿದಾಗ ಮನೆಯೊಡೆಯನು ಆರೋಗ್ಯವಂತನಾದ ಓರ್ವ ಎಳೆಯ ಯುವಕನನ್ನು ಅವಾಚ್ಯವಾದ ಭಾಷೆಯಲ್ಲಿ ಬೈಯುವುದನ್ನು ಮತ್ತು ಕ್ರೂರವಾಗಿ ಹೊಡೆಯುವುದು ಕಂಡಿತು. ಆದರೆ ಆ ಯುವಕ ಮಾತನಾಡಲೂ ಇಲ್ಲ, ಪ್ರತಿಯಾಗಿ ಹೊಡೆಯಲೂ ಇಲ್ಲ. ಇದನ್ನು ಕಂಡು ಪಿಕ್ತಾಲ್‍ರಿಗೆ ಅದ್ಭುತವೆನಿಸಿತು. ಅವರು ಆ ಯುವಕನನ್ನು ಹತ್ತಿರ ಕರೆದು ವಿಷಯವೇನೆಂದು ಕೇಳಿದರು. “ನಾನು ಅವರೊಡನೆ ಸ್ವಲ್ಪ ಸಾಲ ಪಡೆದಿದ್ದೆ. ನಿಶ್ಚಿತ ಸಮಯಕ್ಕೆ ಅದನ್ನು ಮರು ಪಾವತಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ನನ್ನನ್ನು ಬೈದದ್ದು ಮತ್ತು ಹೊಡೆದದ್ದು” ಎಂದು ಆ ಯುವಕ ಹೇಳಿದ. “ನೀನು ಅವರಿಗಿಂತ ಆರೋಗ್ಯವಂತನಾಗಿರುವೆ. ಆದರೂ ಯಾಕೆ ನೀನು ಕೈ ಎತ್ತದೆ ಪೆಟ್ಟು ತಿನ್ನುತ್ತಾ ನಿಂತೆ!? ಎಂದು ಪ್ರಶ್ನಿಸಿದರು. “ಸಾಲ ಪಡೆದರೆ ನಿಶ್ಚಿತ ಅವಧಿಯಲ್ಲಿ ಮರು ಪಾವತಿಸಬೇಕೆಂದು ಪ್ರವಾದಿ ಮುಹಮ್ಮದರು(ಸ) ಆದೇಶಿಸಿರುತ್ತಾರೆ. ವಾಗ್ದಾನ ಪಾಲಿಸಬೇಕೆಂದು ಆಜ್ಞಾಪಿಸಿದ್ದಾರೆ. ನಾನು ವಾಗ್ದಾನ ಉಲ್ಲಂಘಿಸಿ ಅಪರಾಧವೆಸಗಿದ್ದೇನೆ. ಇನ್ನು ನನಗಿಂತ ಹಿರಿಯ ವ್ಯಕ್ತಿಯನ್ನು ಹೊಡೆದು ಇನ್ನೊಂದು ಅಪರಾಧವೆಸಗುವುದೇ? ಇವೆಲ್ಲವೂ ಪ್ರವಾದಿ(ಸ) ನಿಷಿದ್ಧಗೊಳಿಸಿರುವ ಕಾರ್ಯಗಳಾಗಿವೆ.”

ಯುವಕನ ಮಾತುಗಳು ಪಿಕ್ತಾಲ್‍ರನ್ನು ಆಶ್ಚರ್ಯಚಕಿತಗೊಳಿಸಿತು. ನೂರಾರು ವರ್ಷಗಳು ಕಳೆದರೂ ಮುಹಮ್ಮದ್(ಸ) ಸಾಮಾನ್ಯನಾದ ಓರ್ವ ಯುವಕನ ಮೇಲೆ ಇಷ್ಟು ದೊಡ್ಡ ಪ್ರಭಾವ ಬೀರಿದ್ದಾರೆಯೇ? ಈ ಚಿಂತೆಯು ಪಿಕ್ತಾಲ್‍ರನ್ನು ಪ್ರವಾದಿವರ್ಯರ(ಸ) ಬಗ್ಗೆ ಅರಿಯಲು ಅವರನ್ನು ಪ್ರೇರೇಪಿಸಿತು. ಹೀಗೆ ಇಸ್ಲಾಮಿನ ಕುರಿತು ಅಗಾಧವಾಗಿ ಕಲಿತು ಅವರು ಇಸ್ಲಾಮ್ ಸ್ವೀಕರಿಸಿದರು.

ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಮುಸ್ಲಿಮರ ನಿತ್ಯ ಜೀವನದಲ್ಲಿ ಪ್ರವಾದಿವರ್ಯರ(ಸ) ಪ್ರಭಾವವು ಯಾರನ್ನೂ ಆಶ್ಚರ್ಯಚಕಿತಗೊಳಿಸುವಷ್ಟು ಅಗಾಧ ಮತ್ತು ವ್ಯಾಪಕವಾಗಿದೆ. ಜಗತ್ತು ಹಲವಾರು ನಾಯಕರು, ಕ್ರಾಂತಿಕಾರಿಗಳು, ವಿದ್ವಾಂಸರು ಹಾಗೂ ಪ್ರತಿಭಾವಂತರನ್ನು ಕಂಡಿದೆ. ಗಾಂಧೀಜಿ, ನೆಹರೂ, ಕಾರ್ಲ್‍ಮಾಕ್ರ್ಸ್, ಏಂಗೆಲ್ಸ್, ಲೆನಿನ್, ರಸೆಲ್, ಐನ್‍ಸ್ಟೀನ್ ಮುಂತಾದವರು ಅವರಲ್ಲಿ ಕೆಲವರಾಗಿದ್ದಾರೆ. ಇವರನ್ನೂ ಇವರಂತಹ ನೂರಾರು ನಾಯಕರ ಜೀವನ ಸಮಗ್ರವಾಗಿ ಪರಿಚಯಿಸುವ ಗ್ರಂಥಗಳು ಲೋಕದ ವಿವಿಧ ಭಾಷೆಗಳಲ್ಲಿವೆ. ಆದರೂ ಗಾಂಧೀಜಿ ಯಾವ ಭಾಗಕ್ಕೆ ಹೊರಳಿ ಮಲಗುತ್ತಾರೆ? ನೆಹರೂ ಮೂತ್ರ ಶಂಕೆಗೆ ಹೋಗುವಾಗ ಯಾವ ಕಾಲನ್ನು ಮೊದಲು ಎತ್ತಿ ಇಡುತ್ತಾರೆ? ಕಾರ್ಲ್ ಮಾಕ್ರ್ಸ್ ಕೂದಲು ಹೇಗೆ ಬಾಚುತ್ತಿದ್ದರು? ಬರ್ಟಂಡ್ ರಸ್ಸೆಲ್ ಯಾವ ರೀತಿ ವಸ್ತ್ರ ಧರಿಸುತ್ತಿದ್ದರು? ಐನ್‍ಸ್ಟೀನ್ ಯಾವುದರಿಂದ ಹಲ್ಲುಜ್ಜುತ್ತಿದ್ದರು? ಎಂದು ಯಾರಿಗೂ ತಿಳಿದಿಲ್ಲ. ಆದರೆ ಪ್ರವಾದಿ ಮುಹಮ್ಮದರ(ಸ) ಪ್ರವಾದಿತ್ವದ ನಂತರದ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳೂ ಸವಿವರವಾಗಿ ಲಭ್ಯವಿದೆ. ಸಾವಿರಾರು ಹದೀಸ್‍ಗಳಲ್ಲಿ ಅವೆಲ್ಲವನ್ನೂ ಸುರಕ್ಷಿತವಾಗಿ ಸತ್ಯಸಂಧವಾಗಿ ಖಚಿತವಾಗಿ ದಾಖಲಿಸಿಡಲಾಗಿದೆ. ನಮ್ಮ ನಾಡಿನಲ್ಲಿ ಗಾಂಧೀಜಿಯ ಲಕ್ಷಾಂತರ ಶಿಷ್ಯರು ಭಕ್ತರೂ ಇದ್ದಾರೆ. ಆದರೆ ಗಾಂಧೀಜಿ ನಡೆದಂತೆ ನಡೆಯಲು, ಮಲಗಿದಂತೆ ಮಲಗಲು, ಕೂತಂತೆ ಕೂರಲು, ಮಾತಾಡಿದಂತೆ ಮಾತಾಡಲು, ಜೀವಿಸಿದಂತೆ ಜೀವಿಸಲು ನಿರ್ಧರಿಸುವವರನ್ನು ನಾವು ಕಾಣುವುದಿಲ್ಲ. ಲೋಕದ ವಿವಿಧ ಭಾಗಗಳಲ್ಲಿ ಕೋಟ್ಯಾಂತರ ಕಮ್ಯುನಿಸ್ಟರು ಇದ್ದಾರೆ ಆದರೆ ಕಾರ್ಲ್ ಮಾಕ್ರ್ಸ್ ನಂತೆ ಬದುಕಲು ಉತ್ಸುಕತೆ ತೋರುವವರು ಯಾರೂ ಇಲ್ಲ. ಇನ್ನಿತರರ ಅನುಯಾಯಿಗಳ ಸ್ಥಿತಿಯೂ ಇದೇ ಆಗಿದೆ. ಆದರೆ ಜಗತ್ತಿನಾದ್ಯಂತ ಇರುವ ಮುಸ್ಲಿಮರು ಪ್ರವಾದಿ ಮುಹಮ್ಮದರೊಂದಿಗೆ(ಸ) ಹೊಂದಿರುವ ಸಂಬಂಧ ಸಂಪೂರ್ಣ ವ್ಯತ್ಯಸ್ತವಾಗಿದೆ. ಅದಕ್ಕೆ ಸಾಟಿಯಿಲ್ಲ. ಕಳೆದ 14 ಶತಮಾನಗಳಿಂದ ಕೋಟ್ಯಾಂತರ ವಿಶ್ವಾಸಿಗಳು ಜೀವನಾದ್ಯಂತ ತುಂಬ ಕಟ್ಟುನಿಟ್ಟಾಗಿ ಮತ್ತು ಸೂಕ್ಷ್ಮವಾಗಿ ಆ ಮಹಾನ್ ವ್ಯಕ್ತಿಯ ಜೀವನವನ್ನು ಅನುಸರಿಸುತ್ತಿದ್ದಾರೆ. ನಡೆದಾಡುವುದನ್ನು, ಮಲಗುವುದನ್ನು, ನಿದ್ರಿಸುವುದನ್ನು, ಎಚ್ಚರದಲ್ಲಿರುವುದನ್ನು, ಸ್ವಭಾವ, ವರ್ತನೆ, ನಿಲುಮೆ, ಸಂಪ್ರದಾಯ, ಮಾತುಕತೆ, ಯೋಚನೆ, ಶ್ರವಣ, ನೋಟ, ಆರಾಧನೆ, ಆಚರಣೆ, ಪ್ರಾರ್ಥನೆ, ಕೀರ್ತನೆಗಳೆಲ್ಲದರಲ್ಲಿಯೂ ಪ್ರವಾದಿವರ್ಯರನ್ನು(ಸ) ಅನುಸರಿಸಲು ಉತ್ಸುಕತೆ ತೋರಿಸುತ್ತಿದ್ದಾರೆ. ಭಾವನೆ-ವಿಚಾರಗಳಲ್ಲಿಯೂ, ಮುಖಭಾವಗಳಲ್ಲಿಯೂ, ತಿನ್ನುವುದು, ಹಲ್ಲುಜ್ಜುವುದು, ಮಲಮೂತ್ರ ವಿಸರ್ಜನೆಯವರೆಗೂ ಪ್ರವಾದಿವರ್ಯರ(ಸ) ವಿಧಾನವನ್ನು ಅನುಸರಿಸಲು ಎಚ್ಚರ ವಹಿಸುತ್ತಾರೆ. ವೈಯಕ್ತಿಕ ಜೀವನ, ವಿವಾಹ, ವಿವಾಹ ವಿಚ್ಛೇದನ, ಕುಟುಂಬ ಜೀವನ, ಸಾಮೂಹಿಕ ಜೀವನ, ಆರ್ಥಿಕ ವಹಿವಾಟು, ಸಾಂಸ್ಕ್ರತಿಕ ಹಾಗೂ ರಾಜಕೀಯ ಕ್ರಮ, ಆಡಳಿತ ವ್ಯವಸ್ಥೆಗಳೆಲ್ಲವನ್ನೂ ಪ್ರವಾದಿಯವರ(ಸ) ನಿರ್ದೇಶನಕ್ಕೆ ತಕ್ಕಂತೆ ನಿರ್ವಹಿಸುತ್ತಾರೆ. ಪತ್ನಿಯೊಂದಿಗಿನ ಮಾತುಕತೆ ವರ್ತನೆ ಕೂಡಾ ಪ್ರವಾದಿ(ಸ)ಯವರಂತಾಗಿರಲು ವಿಶ್ವಾಸಿಗಳು ಅತಿಯಾಗಿ ಬಯಸುತ್ತಾರೆ. ಪ್ರವಾದಿಯವರು(ಸ) ಜಗತ್ತಿನ ಕೋಟ್ಯಾಂತರ ವಿಶ್ವಾಸಿಗಳಿಗೆ ಈ ರೀತಿ ನೇತೃತ್ವ ನೀಡಿ ನಿಯಂತ್ರಿಸುತ್ತಿದ್ದಾರೆ. ಅಂದರೆ ಅವರ ಅದೃಶ್ಯ ಸಾನಿಧ್ಯವು ಈ ಕೆಲಸವನ್ನು ಮಾಡುತ್ತಿದೆಯೆಂದರ್ಥ. ಆದುದರಿಂದ ಅವರಂತೆ ಅನುಕರಿಸಲ್ಪಡುವ, ಅನುಸರಿಸಲ್ಪಡುವ ಬೇರೊಬ್ಬ ನಾಯಕನನ್ನು ಎಲ್ಲಿಯೂ ಯಾರಿಗೂ ಕಾಣಲು ಸಾಧ್ಯವಿಲ್ಲ.

ಅವರ ಕುರಿತು ಹೆಚ್ಚು ತಿಳಿಯಲು ಬಯಸುವುದಾದರೆ..
ಸಂಪರ್ಕಿಸಿರಿ…

ಇಸ್ಮಿಕಾ, ಪಿ.ಬಿ.ನಂ.229, ಮಂಗಳೂರು-575001, e-mail: [email protected]
ನಿಮ್ಮ ಸಂಪೂರ್ಣ ವಿಳಾಸವನ್ನು S.M.S ಅಥವಾ whatsapp ಮೂಲಕ ಕಳುಹಿಸಬೇಕಾದ ಸಂಖ್ಯೆ : 9060341799

SHARE THIS POST VIA